ಗಿನ್ನೆಸ್ ದಾಖಲೆ ಸಂಗೀತ ಮೇಳವೂ… ನನ್ನ ತಂದೆಯ ಗೀತೆಗಳೂ…

ಮುoಗಾರು ಕಳೆದ ಬೆನ್ನಲ್ಲಿ ಕೆಲವು ದಿನಗಳಿಂದ ಅರಬ್ಬಿ ಸಮುದ್ರದ ಅಲೆಗಳ ಜುಳುಜುಳು ನಾದದ ಜತೆಯಲ್ಲಿ ಕೊಂಕಣಿ ಹಾಡುಗಳ ಕಲರವ ಮಾರ್ದನಿಸುತ್ತಿದೆ. ಹೌದು ಮಂಗಳೂರು ಪುರಭವನದಲ್ಲಿ ಏರ್ಪಾಡಾಗಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಮೇಳದಲ್ಲಿ ಕುಂದಾಪುರದಿoದ ಕಾಸರಗೋಡುವರೆಗಿನ, ಮಂಗಳೂರಿನಿoದ ಮಾರ್ಗೋವಾವರೆಗಿನ ವಿವಿಧ ಧರ್ಮ-ಜಾತಿಗಳ ಕೊಂಕಣಿ ಮಾತೃ ಭಾಷಿಕರ ಕಂಠಸಿರಿಯಿoದ ವೈವಿಧ್ಯಮಯ ಕೊಂಕಣಿ ಹಾಡುಗಳು ಒಂದಿನಿತೂ ವಿರಾಮವಿಲ್ಲದೆ ಝೇಂಕರಿಸುತ್ತಿವೆ. ಮoಗಳೂರಿನ ಮಾಂಡ್ ಸೊಭಾಣ್ ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಮೇಳದಲ್ಲಿ ಗಿನ್ನೆಸ್ ವಿಶ್ವ ದಾಖಲೆ ಸ್ಥಾಪನೆಗೆ 12 ದಿನ 12 ಗಂಟೆ 12 ನಿಮಿಷ ಕಾಲ ನಿರಂತರವಾಗಿ ಕೊಂಕಣಿ ಹಾಡುಗಳನ್ನು ಹಾಡುವ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 2026 ನವೆಂಬರ್ 3ರಂದು ಆರಂಭವಾಗಿರುವ ಈ ಸಂಗೀತ ಸಂಭ್ರಮ, ನವೆಂಬರ್ 15ರಂದು ಕೊನೆಗೊಂಡು ವಿಶ್ವ ಸಂಗೀತ ಭೂಪಟದಲ್ಲಿ ಒಂದು ವಿಶಿಷ್ಟ ದಾಖಲೆಯಾಗಿ ಅಚ್ಚೊತ್ತಲಿದೆ.

* ಕೆ.ವಿ. ನಾಯ್ಕ್ ರಚನೆಗಳು

ನನ್ನ ತಂದೆ ಕೆ. ವಾಸುದೇವ ನಾಯ್ಕ್ ರಚಿಸಿರುವ ಹಲವು ಹಾಡುಗಳೂ ಗಿನ್ನೆಸ್ ವಿಶ್ವ ದಾಖಲೆ ನಿರ್ಮಾಣದ ಈ ಸಾಂಸ್ಕೃತಿಕ ಅಭಿಯಾನದ ಭಾಗವಾಗಿರುವುದು ನನಗೆ ಹೆಮ್ಮೆಯೆನಿಸುತ್ತದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಮೀನುಗಾರ ಸಮುದಾಯವಾದ ಕೊಂಕಣಿ ಖಾರ್ವಿ ಜನಾಂಗದಲ್ಲಿ ಶಿಕ್ಷಣದ ಬೆಳಕನ್ನು ಪಸರಿಸಲು 1969ರಲ್ಲಿ ಸ್ಥಾಪನೆಯಾದ ಕುಂದಾಪುರದ ವಿದ್ಯಾರಂಗ ಮಿತ್ರ ಮಂಡಳಿಯ ಸಂಸ್ಥಾಪಕರಲ್ಲಿ ನನ್ನ ತಂದೆಯವರೂ ಒಬ್ಬ ಪ್ರಮುಖರು. ಶ್ರಮಜೀವಿಗಳ ಸುಖ ದುಃಖಗಳನ್ನು ಬಿಂಬಿಸುವ, ಕುಲಕಸಬನ್ನು ಆರಾಧಿಸುತ್ತಾ ಪ್ರಕೃತಿ, ನದಿ-ಸಮುದ್ರಕ್ಕೆ ಕೃತಜ್ಞತಾಭಾವ ತೋರುವ ಜಾನಪದ ಹಾಡು, ಕೋಲಾಟ, ಗುಮ್ಟಿ ಮೊದಲಾದವುಗಳನ್ನು ಸಂರಕ್ಷಿಸುವ ಕಾರ್ಯದಲ್ಲೂ ವಿದ್ಯಾರಂಗ ನಿರತವಾಗಿದೆ.

ಅದರ ಜಾನಪದ ಕಲಾ ತಂಡದ 25 ಸದಸ್ಯರು ಮಹಾಮೇಳದ 7ನೇ ದಿನವಾದ ನವೆಂಬರ್ 8ರ ಭಾನುವಾರ ಮಧ್ಯರಾತ್ರಿ 12 ಗಂಟೆಯಿoದ ಸತತ ಒಂದು ಗಂಟೆ ಕಾಲ 15 ವಿವಿಧ ಹಾಡುಗಳ ಸುರಿಮಳೆಗೈದು ಶ್ರಮಜೀವಿಗಳ ಸಾಂಸ್ಕೃತಿಕ ಸಿರಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿದರು. ಈ 15 ಹಾಡುಗಳಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಲೋಕವೇದ್ ಪ್ರಶಸ್ತಿ ಪುರಸ್ಕೃತರಾದ ನನ್ನ ತಂದೆ ಕೆ.ವಿ. ನಾಯ್ಕ್ ವಿರಚಿತ ಆರು ಗೀತೆಗಳಿದ್ದುದು ವಿಶೇಷವಾಗಿತ್ತು.

ಕೊಂಕಣಿ ಭಾಷೆಯ ಸೌಂದರ್ಯವನ್ನು ವರ್ಣಿಸುತ್ತಾ ಸರ್ವ ಭಾಷೆ ಮತ್ತು ಸರ್ವ ಧರ್ಮ ಸಮನ್ವಯವನ್ನು ಸಾರುವ ಅವರ ಪ್ರಖ್ಯಾತ ಗೀತೆ `ಕೊಂಕ್ಣಿ ಸ್ಮರಣ್’ನೊಂದಿಗೆ ತಮ್ಮ ಹಾಡುಗಾರಿಕೆ ಆರಂಭಿಸಿದ ವಿದ್ಯಾರಂಗ ತಂಡದವರು ವರ್ಷಾಕು ಏಕು ಶಿಗ್ಮೋರೆ (ಶಿಗ್ಮಾ ನಾಚ್), ಅತಳ ನಮನ ವಿತಳ ನಮನ ಸುತಳ ನಮನ ಕೆಲೇಗಾ (ಗುಮ್ಟಿ ಮಾಂಡ್), ಕನಿಯಾನು ಕನಿಯಾನು ಆಮ್ಮಿ ಕಸ್ಸಿ ಕಸ್ಸಿ ನಾಚುಂಯಾ (ಹೋಳಿ ಸಂಭ್ರಮ್), ಗುಡ್ಸಿ ಭಾಂದ್‌ಗೋ ದರಿಯಾಕ್ ಹೊರೂಕು (ದರಿಯಾ ಶಿಕಾರಿ) ಮತ್ತು ದಾಲ್ಲೋರ್ (ಧರ್ಮಗೀದ್) ಗೀತೆಗಳಲ್ಲದೆ ಇನ್ನೂ ಇತರ ಒಂಬತ್ತು ಹಾಡುಗಳನ್ನೂ ಹಾಡಿದರು.

ಅರುಣ್ ಖಾರ್ವಿ ಸಂಯೋಜನೆಯಲ್ಲಿ ಕಂಚಿನ ಕಂಠದ ಗಾಯಕ ಮುಕುಂದ ಖಾರ್ವಿ ಸಾರಥ್ಯದ ತಂಡದಲ್ಲಿ ಸಂಜಯ್‌ಕುಮಾರ್ ಕೆ.ವಿ., ನಾಮದೇವ್, ದಾಸ ಹೆಗ್ಡೆ, ಭಾಸ್ಕರ್ ಖಾರ್ವಿ, ವೀಣಾ ಕೆ.ವಿ., ಶೋಭಾ, ರೂಪ, ನಾಗರತ್ನ, ಶಶಿಕಲಾ ಮೊದಲಾದವರು ಇದ್ದರು. ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕು ಮಾವಿನಕುರ್ವೆಯ ಕೊಂಕಣಿ ಖಾರ್ವಿ ಕಲಾ ಮಾಂಡ್ ತಂಡದವರೂ ನವೆಂಬರ್ 10ರಂದು ಈ ಅಭಿಯಾನದಲ್ಲಿ ಹಾಡುಗಳನ್ನು ಪ್ರಸ್ತುಪಡಿಸಿದರು.

ಸಮುದಾಯದ ನಡುವೆ `ವಾಸ್ ಬಾಬ್ಬಾ’ ಎಂದೇ ಪರಿಚಿತರಾಗಿದ್ದ ನನ್ನ ತಂದೆಯವರು ಈಗ ಭೌತಿಕವಾಗಿ ನಮ್ಮೊಡನೆ ಇಲ್ಲವಾದರೂ ಅವರು ಯಾವ ಸಮುದಾಯದ ಏಳಿಗೆಗಾಗಿ ಜೀವಮಾನವಿಡೀ ಶ್ರಮಿಸಿದ್ದರೋ ಆ ಜನಾಂಗದ ಒಂದು ಸಂಸ್ಥೆ ಅವರ ಗೀತೆಗಳ ಮೂಲಕ ಅವರನ್ನು ಅಮರರಾಗಿಸುವ ಕಾರ್ಯ ನಡೆಸುತ್ತಿರುವುದು ಸ್ತುತ್ಯರ್ಹ.

* ವಿದೇಶಿ ಕಲಾವಿದರು ಕರ್ನಾಟಕ, ಗೋವಾ, ಕೇರಳ ಮುಂತಾದ ರಾಜ್ಯಗಳಲ್ಲದೆ ಕುವೈತ್, ಮಸ್ಕತ್, ಕತಾರ್ ಮತ್ತು ಆಸ್ಟ್ರೇಲಿಯಾಗಳಲ್ಲಿರುವ ಕೊಂಕಣಿ ಮಾತೃಭಾಷಿಕರೂ ಈ ಗಿನ್ನೆಸ್ ದಾಖಲೆಯ ಸಂಗೀತ ಮೇಳದ ಭಾಗವಾಗುತ್ತಿದ್ದಾರೆ. ಒಂದೇ ವೇದಿಕೆಯಲ್ಲಿ 6,789ಕ್ಕೂ ಅಧಿಕ ಗಾಯಕ-ಗಾಯಕಿಯರು, 250ಕ್ಕೂ ಹೆಚ್ಚು ಸಂಗೀತ ಸಂಯೋಜಕರು, 4,500ಕ್ಕೂ ಹೆಚ್ಚು ಕೊಂಕಣಿ ಹಾಡುಗಳ ಸಮಾಗಮ ಇದಾಗಿದೆ.

* ವಿಶ್ವ ಕುಂದಾಪುರ

Leave a Reply

Your email address will not be published. Required fields are marked *