ಕೊಂಕಣಿ ಖಾರ್ವಿ ಸಮುದಾಯದ ಹೋಳಿ ಆಚರಣೆಯಲ್ಲಿ ಗಢೆ ಬೀಳುವುದು ಒಂದು ಅತ್ಯಂತ
ಪ್ರಮುಖ ಸಾಂಪ್ರದಾಯಿಕ ಘಟ್ಟ. ಈ ಸಂಪ್ರದಾಯ ನಮ್ಮನ್ನು ಖಂಡಿತವಾಗಿಯೂ ಪ್ರಾಚೀನ
ಬುಡಕಟ್ಟಿನ ಆಚರಣೆಗಳತ್ತ ಎಳೆದೊಯ್ಯುತ್ತದೆ. ಭೈರವ ಶಿವನ ಗಣ. ಈ ಶಿವನ ಗಣ ಭೈರವ
ಆಜ್ಞಾಧಾರಕ ಗಣವಾಗಿ ಈ ಹಾಡಿನಲ್ಲಿ ಪ್ರಸ್ತಾಪಿಸಲ್ಪಡುತ್ತಾನೆ. ಇಲ್ಲಿ ಪ್ರಸ್ತಾಪಿಸಲ್ಪಟ್ಟ ಗುರು ಮತ್ತಾರೂ
ಅಲ್ಲದೆ ಶಿವನೇ ಆಗಿರುತ್ತಾನೆ. ಪ್ರಾಚೀನ ಸಂಪ್ರದಾಯದ ಈ ಪ್ರಸ್ತಾಪವೂ ಕೂಡ ಅಧ್ಯಯನ
ಯೋಗ್ಯವಾಗಿರುವಂತದು. ಸಮೂಹದಲ್ಲಿರುವ ಹುರಿಯಾಳುಗಳು ಗುಮ್ಮಟೆ ಹಿಡಿದು
ವರ್ತುಲಾಕಾರವಾಗಿ ನಿಂತು ಹಾಡುತ್ತಿರುವ ಸಮೂಹದ ಸುತ್ತು ಬರುವಂತೆ ಲಯಬದ್ಧವಾಗಿ ಹೆಜ್ಜೆ
ಹಾಕುತ್ತಾ ಕುಣಿಯುವುದನ್ನು ನಿಲ್ಲಿಸದೆ ಮಾಡುತ್ತಾರೆ; ಹಾಡುವ ಹಿರಿಯ ಕೈಯಲ್ಲಿ ಜಾಗಟೆ ಹಿಡಿದು
ಬಾರಿಸುತ್ತಾರೆ ಮತ್ತು ಜೊತೆಗೆ ಅದಕ್ಕೆ ತಕ್ಕ ಹಾಗೆ ಹಾಡುತ್ತಾರೆ. ಈ ಒಟ್ಟಾರೆ ದೃಶ್ಯ ನೋಡುಗರ
ಮನಸ್ಸನ್ನು ಸೂರೆಗೊಳ್ಳುತ್ತದೆ. ಗುಮ್ಮಟೆ, ಜಾಗಟೆ, ಹಾಡುಗಳ ಲಯಬದ್ಧ ತಾಳಮೇಳಗಳಿಂದ
ಗಢೆಗಳು ಹಿಪ್ನೋಟೈಸ್ ಆದವರ ಹಾಗೆ ಮುಮ್ಮೊಗವಾಗಿ ಕುಸಿದು ಬಿದ್ದು ಮರಳಿನಲ್ಲಿ ಎಡಕ್ಕೂ
ಬಲಕ್ಕೂ ಸ್ವಲ್ಪ ಸಮಯದ ವರೆಗೂ ಹೊರಳಾಡಿ, ರಪ್ಪನೆ ಒಮ್ಮೆಲೆ ಎದ್ದು, ನುಗ್ಗುತ್ತ ಗುಂಪನ್ನು
ಸೀಳುವಂತೆ ಹೊರಗೆ ಬಂದು, ವರ್ತುಲಾಕಾರವಾಗಿ ನಿಂತ ಸಮೂಹದ ಒಳಾವರಣದಲ್ಲಿ ಸುತ್ತಲೂ
ತಿರುಗುತ್ತಿರುತ್ತಾನೆ. ಗಢೆಗಳ ಸಂಖ್ಯೆ ಕೆಲವೊಮ್ಮೆ ಒಬ್ಬರಿಗಿಂತ ಜಾಸ್ತಿಯೂ ಇರುತ್ತದೆ. ಒಂದೆಡೆ
ಗಂಭೀರವಾಗಿ ಗುಮ್ಮಟೆ, ಜಾಗಟೆಗಳ ನಾದಗಳೊಂದಿಗೆ ವಿವಿಧ ವರಸೆಗಳು ಅಥವಾ ಪಟ್ಟುಗಳ
ಕುಣಿತ, ಇನ್ನೊಂದೆಡೆ ಇಡೀ ಸಮೂಹವೆ ಲಯಕ್ಕೆ ತಕ್ಕ ಹಾಗೆ ಹಾಡುವುದು ನಡೆಯುತ್ತಿರುತ್ತದೆ,
ಮಗುದೊಂದೆಡೆ ತುಂಟಾಟಿಕೆ ಮಾಡುವ ಪಡ್ಡೆ ಹುಡುಗರು ಗಢೆಗಳನ್ನು ಕಿಚಾಯಿಸುತ್ತಿರುತ್ತಾರೆ. ಬೀಡಿ
ಸೇದುವವರನ್ನು ನೋಡಿದರಂತೂ ಗಢೆಗಳು ಅಂಥವರನ್ನು ಹಿಡಿದೆಳೆದು ತಂದು ಅವರ ಅಂಗಿಯನ್ನು
ಬಿಚ್ಚಿ ಅವರನ್ನು ಮರಳಿನಲ್ಲಿ ಹೊರಳಾಡಿಸುತ್ತಾರೆ. ಅವರು ಡಮ್ಮಿ ಗಢೆಗಳಾಗಿ ಅವರ ಜೊತೆ ಉಳಿದು
ಅವರಂತೆ ಸುತ್ತಾಡುತ್ತ ಇದ್ದರೆ ಅವರ ಕೋಪ ಶಮನಗೊಳ್ಳುತ್ತದೆ. ಹಿರಿಯ ಹಾಡುಗಾರನ
ನಿಯಂತ್ರಣದಲ್ಲಿ ಇರುವ ಗಢೆಗಳು ಹಾಡುಗಾರ ದೇವರಿಗೆ ವಂದಿಸಿ ಹಾಡು ಕೊನೆಗೊಳಿಸಿದ ನಂತರ
ಸಹಜ ಸ್ಥಿತಿಗೆ ಬರುತ್ತಾರೆ. ಮೂರು ದಿನ ಹೋಳಿ ಸುಡುವ ಪೂರ್ವದಲ್ಲಿ ನಡೆಯುವ ಈ ಗಢೆ ಬೀಳುವ
ಕಾರ್ಯಕ್ರಮ ಇನ್ನು ಹೋಳಿ ಸುಡುವ ದಿನಕ್ಕಾಗಿ ಕಾಯಬೇಕು.
ಇತ್ತ ಕೇರಿಯಲ್ಲಿ ಹೆಂಗಸರು, ಗಂಡಸರು ಗಢೆ ಬೀಳುವ ಕಾರ್ಯಕ್ರಮ ಮುಗಿಸಿ ವಾಪಾಸು
ಮರಳುವಾಗ ಗುಮ್ಮಟೆ ಮತ್ತು ಜಾಗಟೆ ಸದ್ದುಗಳನ್ನು ಕೇಳಿಸಿಕೊಳ್ಳುತ್ತಾರೆ. ಅವರು ಅದನ್ನು
ಮಾಂಡ್ ನ ಸದ್ದು ಕೇಳಿಸುತ್ತಿದೆ ಎಂದು ಎಲ್ಲಾ ಹೆಂಗಸರನ್ನು ಎಚ್ಚರಿಸಿ, ಮರೂಲಿ ಕರೆಯುವ
ಕಾರ್ಯಕ್ರಮಕ್ಕೆ ಸಜ್ಜಾಗುತ್ತಾರೆ. ಅವರು ಒಟ್ಟು ಕಲೆತು ವರ್ತುಲಾಕಾರವಾಗಿ ನಿಂತು
ಮರೂಲಿಯನ್ನು ಕರೆಯುವ ಹಾಡು ಆರಂಭಿಸುತ್ತಾರೆ. ಮರೂಲಿ ಬರುವ ಹೆಂಗಸು ಮನೆಯಲ್ಲಿದ್ದರೂ
ಅವರ ಮೈಮೇಲೆ ಮರೂಲಿ ಬಂದು ಮನೆಯಿಂದ ಓಡೋಡಿ ಬಂದು ಗುಂಪಿನ ಒಳಗೆ ನುಗ್ಗಿ ತಲೆಯ
ಸಂಪೂರ್ಣ ಕೂದಲು ಬಿಡಿಸಿಕೊಂಡು ವಿಚಿತ್ರ ರೀತಿಯಲ್ಲಿ ತಿರುಗುತ್ತಾ ಇರುತ್ತಾಳೆ. ಹೆಂಗಸರು
ಎಲ್ಲರೂ ಹಾಡುತ್ತಾರೆ:
ನಾಚ್ ಗೇ ಮರೂಲೆ ರಂಗಾ ಮದ್ದಿ
ನಾಚ್ ಗೇ ಮರೂಲೆ ರಂಗಾ ಮದ್ದಿ
ಚಂಪೇಚೆ ಫೂಲ್ ದಿತ್ತಾ ರಂಗಾ ಮದ್ದಿ
ನಾಚ್ ಗೇ ಮರೂಲೆ ರಂಗಾ ಮದ್ದಿ
ಮುಗ್ರೇಚೆ ಫೂಲ್ ದಿತ್ತಾ ರಂಗಾ ಮದ್ದಿ
ನಾಚ್ ಗೇ ಮರೂಲೆ ರಂಗಾ ಮದ್ದಿ
ಜುತ್ರೇಚೆ ಫೂಲ್ ದಿತ್ತಾ ರಂಗಾ ಮದ್ದಿ
ನಾಚ್ ಗೇ ಮರೂಲೆ ರಂಗಾ ಮದ್ದಿ
( ಕುಣಿಯೋ ಮರೂಲಿ ರಂಗದ ಮಧ್ಯೆ
ಕುಣಿಯೋ ಮರೂಲಿ ರಂಗದ ಮಧ್ಯೆ
ಸಂಪಿಗೆ ಹೂವ ಕೊಡುವೆ ರಂಗದ ಮಧ್ಯೆ
ಕುಣಿಯೋ ಮರೂಲಿ ರಂಗದ ಮಧ್ಯೆ
ಮಲ್ಲಿಗೆ ಹೂವ ಕೊಡುವೆ ರಂಗದ ಮಧ್ಯೆ
ಕುಣಿಯೋ ಮರೂಲಿ ರಂಗದ ಮಧ್ಯೆ
ಮರೂಲಿ ಅಂದರೆ ಹೆಣ್ಣು ಮೂಕದೈವ ಇಲ್ಲಿಯೂ ಹೆಣ್ಣೊಬ್ಬಳು ಹಿಪ್ನೋಟೈಸ್ಡ್ ಆಗಿ ಮರೂಲಿಯಾಗಿ
ವರ್ತಿಸುತ್ತಾಳೆ. ಆವೇಶಭರಿತಳಾಗಿ ರಂಗಾಕಾರವಾಗಿ ನಿಂತಿರುವ ಹೆಂಗಸರ ಮಧ್ಯೆ ಸುತ್ತುತ್ತಾ
ಇರುತ್ತಾಳೆ. ಹೆಣ್ಣು ಆಸೆ ಪಡುವ ಹೂವ ಕೊಡುತ್ತೇವೆ ಎಂದು ಮೂಗ ದೇವಿ ಮರೂಲಿಯನ್ನು ಒಲಿಸಿ
ಹಾಡುವ ಪರಿ ನಮ್ಮನ್ನು ಆದಿಮ ಜಾನಪದ ಸಂಸ್ಕೃತಿಯ ಕಾಲಕ್ಕೆ ಒಯ್ಯುತ್ತದೆ. ಇಲ್ಲಿ ಈ
ಕಾರ್ಯಕ್ರಮದ ಅಂತಿಮ ಕ್ಷಣ ಕೊನೆಗಳ್ಳುವುದು ಹೀಗೆ. ಕುಣಿಯುತ್ತಾ ಸುತ್ತುತ್ತಿದ್ದ ಮರೂಲಿ
ಆಯಾಸಗೊಂಡು ಸ್ಮೃತಿ ತಪ್ಪಿ ಬೀಳುತ್ತಾಳೆ. ಈಗ ಆಕೆಯ ಸ್ಮೃತಿಯನ್ನು ಮರುಕಳಿಸುವ ಹಾಡು
ಹೇಳಲಾಗುತ್ತದೆ.
ಅಂತಾಕು ಲಾಗಿಲಾ ಪಿಂತಾಕು ಲಾಗಿಲಾ
ನಿವಾರ್ಣು ಕsರ್ಗೆ ಮರೂಲೇಗೆ ನಿವಾರ್ಣು ಕsರ್ಗೆ|
( ಕಾಳಿಜಕ್ಕೆ ತಗುಲಿದೆ ಪಿತ್ತಕ್ಕೆ ತಗುಲಿದೆ
ನಿವಾರಣೆ ಮಾಡೆ ಮರೂಲಿ ತಾಯೆ
ನಿವಾರಣೆ ಮಾಡೆ)
ಮರೂಲಿಯಾಗಿ ವರ್ತಿಸುವ ಹೆಂಗಸು ಮರಳಿ ಸಹಜ ಸ್ಥಿತಿಗೆ ಬಂದ ನಂತರ ಸರಿ ಸುಮಾರು ಅಂದಿನ
ಚಟುವಟಿಕೆ ಮುಗಿಯಿತು ಅನ್ನಬಹುದು.
ಇನ್ನು ಮುಖ್ಯವಾಗಿ ಗಮನಿಸಬೇಕಾದ ಕಾರ್ಯಕ್ರಮ ಹೋಳಿ ಸುಡುವುದಕ್ಕಿಂತ ಮೊದಲು
ನಡೆಸಲ್ಪಡುವ ಸಾಂಸ್ಕೃತಿಕ ಚಟುವಟಿಕೆ. ಗಢೆ ಬೀಳುವ ಸಂಪ್ರದಾಯವನ್ನು ಇಂದು
ಆಚರಿಸಲಾಗುತ್ತದೆ. ಕಟ್ಟಿಗೆ, ಸಣ್ಣ ಸಣ್ಣ ಒಣಗಿದ ಮರಮಟ್ಟುಗಳನ್ನು ಅಂದು ರಾಶಿ ಹಾಕಿ ಹೋಳಿಯ
ಪ್ರತೀಕವಾಗಿ ಸುಡಲು ತಯಾರಿ ನಡೆಯುತ್ತಿರುತ್ತದೆ. ಎಂದೆಂದಿಗಿಂತಲೂ ಹೆಚ್ಚಿನ ಜನರ ಬೀಡು
ಇಂದು ನೆರೆದಿರುತ್ತದೆ. ಮತ್ತೆ ಅದೇ ಗುಮ್ಮಟೆ, ಜಾಗಟೆ, ಹಾಡುಗಳು, ಕುಣಿತ ಇನ್ನಷ್ಟು ಉತ್ಸಾಹದಿಂದ
ಸಾಗುತ್ತಿರುತ್ತದೆ. ಹೋಳಿ ಸುಡುವ ಹೊಲದಲ್ಲಿ ಈ ಪ್ರಕ್ರಿಯೆಗಳೆಲ್ಲ ನಡೆಯುತ್ತಿರುತ್ತದೆ. ಇತ್ತ ಗಢೆ
ಬೀಳುವಾಗಿನ ಹಾಡನ್ನು ಅದೇ ಹಿರಿಯರೊಬ್ಬರು ಹಾಡುತ್ತಿರುತ್ತಾರೆ; ಕುಣಿತ, ಹಾಡು, ಗುಮ್ಮಟೆ
ಜೊತೆಯಲ್ಲಿ ಗಢೆ ವರ್ತುಲಾಕಾರವಾಗಿ ನಿಂತ ಜನರ ಹೊರಗೆ ಒಳಗೆ ಸುತ್ತುತ್ತಿರುತ್ತಾನೆ.
ಕೊನೆಗೊಮ್ಮೆ ಗಢೆಗಳನ್ನು ನಿಯಂತ್ರಿಸುತ್ತಿದ್ದ ಹಾಡುಗಾರ ಕೊನೇ ಗಳಿಗೆಯಲ್ಲಿ ಗಢೆಗಳಿಗೆ ಆದೇಶ
ನೀಡುವ ಹಾಡು ಹೇಳುತ್ತಿರುತ್ತಾರೆ:
ಆಜು ತರು ಭೈರಮು ದೇವಾ
ಆಜು ತರು ಭೈರಮು ದೇವಾ ಕೋಣು ನಮನು ಗೆಲೇಗಾ|
ಕೋಣು ನಮನು ಗೆಲೇ ತರು ಗುರು ನಮನು ಗೆಲೇಗಾ|
ಜೀವನಾಚೆ ಬಂಗಾರು ನಮ್ಮನುಗಾ ಗೆಲೇಮು||
ಆಜ್ಞಾಪನೆ ಪಡೆದಂತೆ ಗಢೆಗಳು ಹತ್ತಿರದ ಸ್ಮಶಾನದ ಕಡೆಗೆ ರಭಸದಿಂದ ಓಡುವರು. ಅವರ ಬೆನ್ನ
ಹಿಂದೆಯೇ ಜನರು ಕೇಕೇ ಹಾಕುತ್ತಾ ಓಡುವರು. ಈ ಗಢೆಗಳು ಎಷ್ಟು ವೇಗವಾಗಿ ಓಡುತ್ತಾರೆಂದರೆ
ಕೆಲವೇ ಹುರಿಯಾಳುಗಳು ಅವರನ್ನು ಹತ್ತಿರದಿಂದ ಹಿಂಬಾಲಿಸಿ ಓಡಲು ಸಾಧ್ಯವಾಗುವಷ್ಟು
ರೀತಿಯಲ್ಲಿ. ಸ್ಮಶಾನದಲ್ಲಿ ಗಢೆಗಳು ‘ಜೀವನದ ಬಂಗಾರ’ ಹುಡುಕಾಡುವ ಚಟುವಟಿಕೆಯಲ್ಲಿ
ತೊಡಗುತ್ತಾರೆ. ಸತ್ತವನನ್ನು ಸ್ಮಶಾನದಲ್ಲಿ ಸುಟ್ಟ ಮೇಲೆ ಉಳಿಯುವುದು ಮಾನವನ ಮೂಳೆ
ಮಾತ್ರ; ಅದೇ ಜೀವನದ ಬಂಗಾರ ಎಂಬ ನಂಬಿಕೆ ಈ ಜನರಲ್ಲಿ ತಲತಲಾಂತರದಿಂದ ಬಂದು
ಬಿಟ್ಟಿದೆ. ಈ ಜನರಿಗೆ ಗಢೆಗಳು ಆತ್ಮ ವಿಶ್ವಾಸದ ಮೂರ್ತಿಗಳು. ಗಢೆಗಳ ಬಗ್ಗೆ ಒಂದು ಪ್ರತೀತಿ ಇದೆ.
ಸ್ಮಶಾನದಲ್ಲಿ ಸಂಗ್ರಹಿಸಲಾದ ಒಟ್ಟು ಎಲುಬುಗಳನ್ನು ಗಢೆಗಳಿಗೆ ಸಮಾನವಾಗಿ ಹಂಚಲಾಗುತ್ತದೆ.
ಇಲ್ಲಿ ಹಂಚಲಾದ ಎಲುಬುಗಳನ್ನು ತಮ್ಮ ಮುಷ್ಟಿಯಲ್ಲಿ ಬಿಗಿಯಾಗಿ ಹಿಡಿದುಕೊಂಡು ಬಂದ ಗಢೆಗಳು
ಹೋಳಿ ಸಿದ್ದ ಪಡಿಸಿದ ಹೊಲಕ್ಕೆ ಬಂದು ಎಲುಬುಗಳನ್ನು ಎಣಿಸಬೇಕು. ಎಣಿಕೆಯಲ್ಲಿ ಅವರಿಗೆ
ಸ್ಮಶಾನದಲ್ಲಿ ಲೆಕ್ಕ ಮಾಡಿ ಕೊಟ್ಟಷ್ಟು ಎಲುಬುಗಳು ತಾಳೆ ಹೊಂದಬೇಕು. ಇಲ್ಲದೆ ಹೋದಲ್ಲಿ ಕಡಿಮೆ
ಬೀಳುವ ಸಂಖ್ಯೆಯಷ್ಟು ಸರಿದೂಗಿಸಲು ಅವರ ಕೈಯ ಬೆರಳುಗಳನ್ನೇ ಕತ್ತರಿಸಿಕೊಡಬೇಕು ಎನ್ನುವ
ನಿಯಮ ಅನಾದಿ ಕಾಲದಿಂದಲೂ ಇದೆ. ಆ ರೀತಿ ಇತಿಹಾಸದಲ್ಲಿ ಎಂದೂ ಗಢೆಗಳು ತಮ್ಮ ಕೈಯ
ಬೆರಳನ್ನು ಕತ್ತರಿಸಿಕೊಟ್ಟ ಉದಾಹರಣೆಗಳು ಇಲ್ಲ. ಗಢೆಗಳ ಬಗೆಗಿನ ಈ ಪ್ರತೀತಿಗಳನ್ನು ಈ ಜನರು
ಗಾಢವಾಗಿ ನಂಬುತ್ತಾರೆ. ಸ್ಮಶಾನದಿಂದ ತಂದ ಆ ಎಲುಬುಗಳನ್ನು ಗಢೆಗಳು ಹೊಲದ ನೆಲವನ್ನು
ಅಗೆದು ಅದರಲ್ಲಿ ಹೂತು ಹಾಕುತ್ತಾರೆ. ಆ ಮೇಲೆ ಹೋಳಿ ಸುಡುವುದರೊಂದಿಗೆ ಕಾರ್ಯಕ್ರಮ
ಅಂತ್ಯಗೊಳ್ಳುತ್ತದೆ. ವಾಪಾಸು ಗುಮ್ಮಟೆ, ಜಾಗಟೆಯೊಂದಿಗೆ ಮಾಂಡು ಕೇರಿಗೆ ಮರಳುತ್ತದೆ.
ಮಾಂಡ್ ನ ಸದ್ದು ಕೇಳಿದೊಡನೆ ಹೆಂಗಸರ ಮರೂಲಿ ಕಾರ್ಯಕ್ರಮ ಪ್ರಾಂಭವಾಗುತ್ತದೆ. ಇದು
ಕೊನೆಯ ಮರೂಲಿ ಕಾರ್ಯಕ್ರಮವೂ ಆಗಿರುತ್ತದೆ. ಇಲ್ಲೆಲ್ಲ ನಾವು ಗಮನಿಸುವಂತದ್ದು ಈ ಎಲ್ಲ
ಸಂಪ್ರದಾಯಗಳು ಪರಂಪರಾಗತವಾಗಿ ಅನೂಚ್ಛಾನವಾಗಿ ನಡೆದುಕೊಂಡು
ಬಂದಿರುವಂತದ್ದಾಗಿರುತ್ತದೆ.
ನಿಜವಾದ ಹೋಳಿ ಸುಡುವಿಕೆಯ ಧಾರ್ಮಿಕ ಸಂಪ್ರದಾಯ ಮಾರನೆಯ ದಿನ ಮುಂಜಾವಿನಲ್ಲಿ
ಶಿವ ದೇವಾಲಯದಲ್ಲಿ ಆಚರಿಸಲ್ಪಡುತ್ತದೆ. ಹೊಸಬಟ್ಟೆ ಧರಿಸಿಕೊಂಡು ಎಲ್ಲರೂ ಸಂಭ್ರಮದಿಂದ
ಬಂದು ದೇವಾಲಯದಲ್ಲಿ ಬಂದು ಸೇರುತ್ತಾರೆ. ಎಳೆಯ ಅಡಿಕೆ ಮರಕ್ಕೆ ಮುತ್ತೈದೆಗೆ ತೊಡಿಸುವ ಎಲ್ಲ
ಸಿಂಗಾರದ ಹೂರಣವನ್ನು ಮಾಡಿ ಅದನ್ನು ವಿಧಿಪೂರ್ವಕವಾಗಿ ಸುಡಲಾಗುತ್ತದೆ. ಇದರ
ಹಿನ್ನೆಲೆಯನ್ನು ಸರಿಯಾಗಿ ತಿಳಿದುಕೊಳ್ಳದೆ ಮನಸ್ಸಿಗೆ ಬಂದ ಹಾಗೆ ಹೋಳಿ ಸುಡುವುದರ ಅರ್ಥವನ್ನು
ಹೇಳುವಂತದ್ದು ಮೇಲಿನಿಂದ ಹೇರುವುದು ಆಗಿರುತ್ತದೆ. ಇದನ್ನು ಸ್ಪಷ್ಟವಾಗಿ ಅಧ್ಯಯನ
ಮಾಡಬೇಕಿದೆ. ನಂತರ ಎಲ್ಲರೂ ಸಾಲಾಗಿ ನಿಂತು ಕೋಲಾಟವಾಡುತ್ತಾ, ಕುಣಿಯುತ್ತಾ ಹಾಡುತ್ತಾ
ಕೇರಿಗೆ ಮರಳುತ್ತಾರೆ. ಈ ಸಂದರ್ಭದಲ್ಲಿ ಹಾಡುವ ಹಾಡು ಹೀಗಿರುತ್ತದೆ:
ಹೋಳಿ ರೆ ಬಾಬಾ ಹೋಳಿ ರೆ|
ಅವ್ವಾ ಹೋಳಿ ಕಿಲೇಕು ಜಾ
ಗುಲಾಬಿ ಚೊಣ್ವಾ ಮುಲ್ಕೇ ಜಾ|
ಹೋಳಿ ರೆ ಬಾಬಾ ಹೋಳಿ ರೆ|
ಹೋಳಿ ಸಾಂಸ್ಕೃತಿಕ ಆಚರಣೆಯ ವಿಧಿವತ್ತಾದ ಸಂಪ್ರದಾಯದ ಸಂದರ್ಭದಲ್ಲಿ ಹಾಡಲಾಗುವ
ಹಾಡುಗಳು ಗುಜರಾತಿ ಮತ್ತು ಮರಾಠಿ ಭಾಷೆಗಳಿಂದ ಪ್ರಭಾವಿತಗೊಂಡಿರುವುದು ಜನರ
ಸಾಂಸ್ಕೃತಿಕ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಹ ಅಂಶವಾಗಿರುತ್ತದೆ. ಈ ಹಾಡಿನ ಸರಿಯಾದ
ಅರ್ಥ ಗೊತ್ತಾಗದೆ ಈ ಲೇಖನ ಸಂಪೂರ್ಣವಾಗದೆಂದು ನಾನಂದುಕೊಂಡಿದ್ದೇನೆ. ನನಗೆ ಯಾರೂ
ಗುಜರಾತಿಯ ಮಿತ್ರರು ದೊರೆತಿಲ್ಲ. ಅವರು ಅರ್ಥ ತಿಳಿಸಿದ ನಂತರ ಅಧ್ಯಯನ ಪೂರ್ತಿಗೊಳ್ಳುವುದು.
ಹಬ್ಬದ ದಿನ ಹೋಳಿ ವಹಿಸಿಕೊಂಡ ಮನೆಯಲ್ಲಿ ಎಲ್ಲರೂ ಸಂಭ್ರಮದಿಂದ ಹಾಡುತ್ತಾ
ಹೋಗುತ್ತಾರೆ. ಅವರು ಮನೆಯಲ್ಲಿ ಪಾನಕ ಮತ್ತು ಇಡ್ಲಿ ಮತ್ತು ಮಾಂಸವನ್ನು ಬಂದವರಿಗೆ
ನೀಡುತ್ತಾರೆ. ಇವರಲ್ಲಿಯೇ ಕೆಲವು ಹುರಿಯಾಳುಗಳು ಮನೆಯ ಯಜಮಾನಿತಿಯನ್ನು ಉದ್ದೇಶಿಸಿ
ಕರೆಯುವುದು ಹೀಗೆ: “ ಹಾಡ್ ಗೆ ಅವ್ವಾಯಿ ಹಾಡ್ , ಪೋಳಿ ಸಗಟ್ ಹಾಡ್ “ ( ತಾಯಿಯೇ ತಾ ಇಡ್ಲಿ
ಮಾಂಸ ತಾ). ಒಟ್ಟಾರೆಯಾಗಿ ಹೋಳಿ ಹಬ್ಬ ಸಂಭ್ರಮ ಸಡಗರದ ಹಬ್ಬವನ್ನಾಗಿ ಕೊಂಕಣಿ ಖಾರ್ವಿ
ಸಮುದಾಯದವರು ಆಚರಣೆ ಮಾಡುತ್ತಾರೆ.
ಕೊನೆಯ ದಿನ ಓಕುಳಿ ಆಚರಣೆ ಇದೆ. ರಸ್ತೆಯ ಬದಿಯಲ್ಲಿ ಪಾತಿ ದೋಣಿಯಲ್ಲಿ
ಅರಿಸಿನಯುಕ್ತ ನೀರನ್ನು ತುಂಬಿಡಲಾಗುವುದು. ಎಲ್ಲರೂ ಈ ಓಕುಳಿ ನೀರನ್ನು ಮೈಮೇಲೆ
ಎರಚಿಕೊಳ್ಳುತ್ತಾರೆ. ಪರಸ್ಪರ ಬಣ್ಣ ಹಚ್ಚಿಕೊಂಡು ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆಯಲ್ಲಿ
ಸಾಗುತ್ತಾರೆ. ಇಲ್ಲಿಗೆ ಹೋಳಿ ಆಚರಣೆ ಮುಕ್ತಾಯ ಕಾಣುತ್ತದೆ.
ಲೇಖಕರು: ಶ್ರೀಶಂಖಾ
shrishankha@gmail.com
ಉತ್ತಮವಾದ ಬರಹ. ಜನಪದವಾಗಿ ಬಂದಂತ ಇಂತಹ ಸಾಂಪ್ರದಾಯಿಕ ಕಲೆಯ ಬಗೆಗಿನ ಮಾಹಿತಿ ಜನಮಾನಸದಲ್ಲಿ ಉಳಿಯಬೇಕಾದರೆ ಇಂತಹ ಬರಹ ಬೇಕಾಗಿದೆ. ಬರಹಗಾರರಿಗೆ ಧನ್ಯವಾದಗಳು …