ಗೋವಾದಲ್ಲಿ ಹೊನ್ನಾವರದ ಶೀಲಾ ಮೇಸ್ತರ ಅಭೂತಪೂರ್ವ ಸಾಧನೆ

ಅಭಿಮಾನ ಎಂದರೆ ನಮ್ಮ ಮಾನಸಿಕ ಲೋಕದ ಮತ್ತು ಹೃದಯದಲ್ಲಿ ಚಿರಸ್ಥಾಯಿಯಾಗಿರುವ ಭಾವನಾತ್ಮಕ ನಿಲುವು ವಸ್ತು, ವ್ಯಕ್ತಿ ಮತ್ತು ವಿಷಯವೊಂದನ್ನು ಮೆಚ್ಚಿಕೊಂಡು ಅದರ ಬಗ್ಗೆ ತೋರುವ ಗೌರವಾದರಗಳ ಮನೋಭಾವನೆ ಅದು ನನ್ನದು ಎಂಬ ಗಾಢವಾದ ಪ್ರೀತಿ ವಾತ್ಸಲ್ಯ ಎಲ್ಲೇ ಇದ್ದರೂ ಕನ್ನಡತನವನ್ನು ಮೈಗೂಡಿಸಿಕೊಂಡವರು ಮಾತ್ರ ಕನ್ನಡದ ಮೇಲೆ ಅಭಿಮಾನ ತಳೆಯಬಲ್ಲರು ಮಂಜೇಶ್ವರ ಗೋವಿಂದ ಪೈಗಳು ಹಾಡಿದಂತೆ ನೀನೆ ಕಣಾ ನಮ್ಮ ಬಾಳ್ವೆ, ನಿನ್ನ ಮರೆಯಲಮ್ಮೆವು ಎಂದು ಕನ್ನಡ ನುಡಿಯ ಕಂಪನ್ನು ಗೋವಾದ ನೆಲದಲ್ಲಿ ಪಸರಿಸುತ್ತಿರುವ ಹೊನ್ನಾವರದ ಶೀಲಾ ಮೇಸ್ತಾರ ಸಾಧನೆ, ಸಮರ್ಪಣೆ ಅನನ್ಯ ಮತ್ತು ಅಪೂರ್ವ

ಇಂದು ಗೋವಾ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆವ ಹತ್ತು ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರೂಪಿಸಿ ಸರ್ವರಿಂದಲೂ ಮೆಚ್ಚುಗೆಗೆ ಪಾತ್ರವಾಗಿರುವ ಕೊಂಕಣಿ ಖಾರ್ವಿ ಸಮಾಜದ ಶೀಲಾ ಪಿ.ಮೇಸ್ತ ಏಕೈಕ ಮಹಿಳಾ ನಿರೂಪಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೊನ್ನಾವರ ಕಾಸರಕೋಡು ಜನತಾ ವಿದ್ಯಾಲಯದಲ್ಲಿ ಶೀಲಾ ಮೇಸ್ತರವರ 1 ರಿಂದ 9 ನೇ ತರಗತಿಯ ತನಕದ ವ್ಯಾಸಂಗ ನಡೆಯಿರಿ ತದ ನಂತರ ಅಂಕೋಲಾ ಪಿ.ಎಂ.ಪ್ರೌಢಶಾಲೆಯಲ್ಲಿ PUC ಶಿಕ್ಷಣವನ್ನು, ಬೆಳಗಾವಿಯಲ್ಲಿ D ED ತರಬೇತಿಯನ್ನು ಪಡೆದಿದ್ದಾರೆ ಕುಮಟಾದ ಪ್ರಗತಿ ವಿದ್ಯಾಲಯ ಮೂರೂರಿನಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಯುಕೆ ಟಿವಿ ಚಾನಲ್ ಗಳಲ್ಲಿ ನಿರೂಪಕಿ, ಸ್ಕ್ರಿಪ್ಟ್ ರೈಟರ್, ಕಾರ್ಯಕ್ರಮ ನಿರೂಪಕಿಯಾಗಿ ಕಾರ್ಯನಿರ್ವಹಿಸಿ ಸುದ್ದಿ ಮಾಧ್ಯಮ ಲೋಕದಲ್ಲಿ ಸೈ ಎನಿಸಿಕೊಂಡಿದ್ದರು. ಇದೇ ಸಮಯದಲ್ಲಿ ಕರಾವಳಿ ಮುಂಜಾವು ಪತ್ರಿಕೆಯಲ್ಲಿ ಕೆಲಕಾಲ ವರದಿಗಾರಿಕೆ ಹಾಗೂ ಕಛೇರಿ ಕೆಲಸದಲ್ಲಿ ನಿಯುಕ್ತಿಗೊಂಡಿದ್ದರು. ನಾಗರಾಜ ನಾಯಕರವರ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನಲ್ಲಿಯೂ ಕೆಲಸ ಮಾಡಿದ ಅನುಭವ ಇವರಿಗಿದೆ.

ಗೋವಾದ ಪ್ರದೀಪ್ ಎಂಬುವರ ಜೊತೆಗೆ ಮದುವೆಯಾದ ಬಳಿಕ ಗೋವಾ ನಿವಾಸಿಯಾದರೂ ಶೀಲಾ ಮೇಸ್ತ ಕನ್ನಡತನವನ್ನು ಬಿಟ್ಟುಕೊಡಲಿಲ್ಲ ಕೊಂಕಣಿ ಆಡಳಿತ ಭಾಷೆಯಾಗಿರುವ ಗೋವಾದಲ್ಲಿ ಕನ್ನಡ ಕಾರ್ಯಕ್ರಮಗಳು ನಡೆಯುವುದು ಅಪರೂಪವಾಗಿತ್ತು.ಈ ಕಾರ್ಯಕ್ರಮಗಳನ್ನು ನಿರೂಪಿಸುವ ಅವಕಾಶಗಳು ದುರ್ಲಭವಾಗಿತ್ತು ಆದರೂ ಎಲ್ಲಾ ಸವಾಲುಗಳನ್ನು ಎದುರಿಸಿ ಶೀಲಾ ಮೇಸ್ತ ತನ್ನ ಪ್ರತಿಭೆ, ಅವಿರತ ಪ್ರಯತ್ನಗಳಿಂದ ಗೋವಾದಲ್ಲಿ ಕನ್ನಡ ಕಾರ್ಯಕ್ರಮಗಳನ್ನು ನಿರೂಪಿಸುವ ಅವಕಾಶಗಳನ್ನು ಪಡೆದುಕೊಂಡರು ಅದ್ದೂರಿ ಮತ್ತು ಅತ್ಯಂತ ಮಹತ್ವದ ಕಾರ್ಯಕ್ರಮಗಳನ್ನು ನಿರೂಪಿಸುವ ನಿರಂತರ ಅವಕಾಶಗಳು ಶೀಲಾ ಮೇಸ್ತರಿಗೆ ಒದಗಿ ಬಂದವು. ಅದರೊಂದಿಗೆ ಕೊಂಕಣಿ ಮತ್ತು ಹಿಂದಿ ಕಾರ್ಯಕ್ರಮಗಳನ್ನು ನಿರೂಪಿಸುವ ಅವಕಾಶಗಳು ಪ್ರಾಪ್ತಿಯಾದವು.

ಪ್ರಾರಂಭಿಕ ಹಂತದ ಕಠಿಣವಾದ ಹಾದಿಯನ್ನು ದಾಟಿ, ನಿರೂಪಣಾ ಕ್ಷೇತ್ರದಲ್ಲಿನ ಅಗಾಧ ಅನುಭವ, ನಿರೂಪಣಾ ತಂತ್ರಗಾರಿಕೆಯಿಂದ ಅತ್ಯಂತ ಸುಲಲಿತವಾಗಿ ಮತ್ತು ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ಶೀಲಾರವರು ನಡೆಸಿಕೊಡುತ್ತಿರುವುದರಿಂದ ಗೋವಾದ ಅನುಶ್ರೀ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಗೋವಾದಲ್ಲಿ ಇಂದು ಯಾವುದೇ ಕಾರ್ಯಕ್ರಮ ನಡೆದರೂ ಅಲ್ಲಿ ಶೀಲಾ ಮೇಸ್ತರವರ ನಿರೂಪಣೆಯ ಉಪಸ್ಥಿತಿ ಇರುತ್ತದೆ. ಅಷ್ಟರ ಮಟ್ಟಿಗೆ ಶೀಲಾ ಮೇಸ್ತರವರ ನಿರೂಪಣಾ ಪ್ರತಿಭೆ ಜನಪ್ರಿಯವಾಗಿದೆ ನಾಡೋಜ ಮಹೇಶ್ ಜೋಷಿ, ಗೋವಾದ ರಾಜಕೀಯ ವ್ಯಕ್ತಿಗಳು ಸೇರಿದಂತೆ ಅನೇಕ ಗಣ್ಯಮಾನ್ಯರು ಶೀಲಾರವರ ನಿರೂಪಣಾ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಗೋವಾದ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಅವರು ತವರಾದ ಉತ್ತರ ಕನ್ನಡ ಜಿಲ್ಲೆಯಲ್ಲೂ ಕಾರ್ಯಕ್ರಮಗಳ ನಿರೂಪಣೆಗೆ ಆಗಮಿಸುತ್ತಾರೆ.

ತನ್ನ ತವರು ನೆಲ ಕಾಸರಕೋಡು ಟೊಂಕದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಯನ್ನು ವಿರೋಧಿಸಿ ಶೀಲಾರವರು ತನ್ನ ಯೂಟ್ಯೂಬ್ ಚಾನಲ್ ನಲ್ಲಿ ಮೀನುಗಾರರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಎಳೆ ಎಳೆಯಾಗಿ ವಾಸ್ತವತೆಯನ್ನು ಬಿತ್ತರಿಸಿ ತನ್ನ ಸಾಮಾಜಿಕ ಬದ್ಧತೆಯನ್ನು ಮೆರೆದಿದ್ದರು. ಕತ್ತಲೆಯಲ್ಲಿ ಹೂತಿಟ್ಟ ಧಿಕ್ಕಾರದ ದ್ವನಿಗಳಿಗೆ ಜೀವ ತುಂಬಿದ ಶೀಲಾರವರು ಮೀನುಗಾರರ ಹೋರಾಟಕ್ಕೆ ಬೆನ್ನುಲುಬಾಗಿ ನಿಂತಿದ್ದರು. ಅವರ ಮಧುರ ಸಿರಿಕಂಠ ಸವಿ ಸೊಬಗಿನ ರಸಾಯನವಾಗಿದ್ದು, ವಿಷಯವನ್ನು ಪ್ರಸ್ತುತಪಡಿಸುವ ಶೈಲಿ, ಪದಗಳ ಸ್ಪಷ್ಟತೆ, ನಿರರ್ಗಳ ಮಾತುಗಾರಿಕೆ, ಸಾಂದರ್ಭಿಕ ಸನ್ನಿವೇಶಗಳಿಗೆ ತಕ್ಕಂತೆ ಚಿಂತಕರ, ಶ್ರೇಷ್ಠ ಮಹನೀಯರ ನುಡಿಮುತ್ತುಗಳನ್ನು ಪೋಣಿಸಿ ಕಟ್ಟುವ ಪದಲಾಲಿತ್ಯದ ಮಾತಿನ ಮಂಟಪ ನಿಜಕ್ಕೂ ಅದ್ಬುತ ಗೋವಾದ ಕನ್ನಡ ಸಂಘ ಸೇರಿದಂತೆ ಹತ್ತು ಹಲವು ಸಂಘಟನೆಗಳಿಂದ ಸನ್ಮಾನ ಗೌರವಗಳಿಗೆ ಪಾತ್ರವಾಗಿರುವ ಶೀಲಾ ಮೇಸ್ತರಿಗೆ ಪತಿಯಾದ ಪ್ರದೀಪ್ ರವರ ಬೆಂಬಲ ಮತ್ತು ಮಗಳಾದ ಸ್ತುತಿಯ ಸ್ಪೂರ್ತಿ ಇದೆ.

ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಕೊಂಕಣಿ ಭಾಷಿಕರು ಅಪಾರ ಕೊಡುಗೆ ನೀಡಿದ್ದಾರೆ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು, ಸಂತೋಷ್ ಕುಮಾರ್ ಗುಲ್ವಾಡಿ ಸೇರಿದಂತೆ ಅನೇಕ ಕೊಂಕಣಿ ಮಾತೃಭಾಷಿಕರು ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕೊಂಕಣಿ ಮಾತನಾಡುವ ಕಾರವಾರದಲ್ಲಿ ಕನ್ನಡ ಮತ್ತು ಕೊಂಕಣಿ ಭಾಷೆಗಳ ನಡುವೆ ಹೊಕ್ಕಳು ಬಳ್ಳಿಯ ಭಾಂಧ್ಯವವಿದೆ. ಪ್ರಸ್ತುತ ಶೀಲಾ ಮೇಸ್ತರವರು ಗೋವಾದಲ್ಲಿ ಕನ್ನಡ ಡಿಂಡಿಮವ ಬಾರಿಸುತ್ತಾ ಈ ಭಾಂಧ್ಯವವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದ್ದಾರೆ. ಅವರ ವೈಶಿಷ್ಟ್ಯಪೂರ್ಣ ನಿರೂಪಣೆಯ ಹರವುಗಳು ಮತ್ತಷ್ಟು ವಿಸ್ತಾರಗೊಂಡು ಕೀರ್ತಿಗೆ ಭಾಜನವಾಗಲಿ ಎಂದು ಶುಭ ಹಾರೈಸುತ್ತೇನೆ. ಕಾರ್ಯಕ್ರಮ ನಿರೂಪಣೆ ಸುಲಭದ ಮಾತಲ್ಲ ಸಭಿಕರನ್ನು ತನ್ನ ಸಮ್ಮೋಹನಕಾರಿ ಮಾತುಗಳಿಂದ ಹಿಡಿದಿಟ್ಟುಕೊಳ್ಳುವನೇ ಯಶಸ್ವಿ ನಿರೂಪಕನಾಗುತ್ತಾನೆ ಅಂತಹ ಅದ್ಬುತ ಸಾಮರ್ಥ್ಯ ಶೀಲಾ ಮೇಸ್ತರವರಿಗೆ ಕಠಿಣ ಪರಿಶ್ರಮದಿಂದ ಬಂದಿದೆ.

ನಿರೂಪಣೆಯ ಕ್ಷೇತ್ರಕ್ಕೆ ತನ್ನತನದ ಮೆರುಗು ಹಚ್ಚಿ ಹೊಸತನ್ನು ಸೃಷ್ಟಿಸುವ ಗಾರುಡಿಗರಾಗಿರುವ ಸೃಜನಶೀಲ ನಿರೂಪಕಿ ಶೀಲಾ ಮೇಸ್ತರವರ ಸಾಧನೆ ಅನನ್ಯ ನಿಜವಾದ ಕನ್ನಡಾಭಿಮಾನದ, ಸತ್ತ್ವದ ಜೊತೆ ಜೊತೆಗೆ ಎಲ್ಲಾ ಬಗೆಯ ಪೋಷಕ ಪೂರಕ ಸಾಧನಗಳನ್ನು ಬಳಸಿಕೊಂಡು ,ಸಾಧನೆಯ ಹೆಮ್ಮರವಾಗಿ ಬೆಳೆದಿರುವ ಅವರ ಪ್ರತಿಭೆಯ ಹೊಂಬೆಳಕಿನಲ್ಲಿ ಕನ್ನಡ ಭಾಷೆ ಶೃಂಗಾರಗೊಂಡು ಮೆರೆಯುತ್ತಿದೆ. ಅವರ ಕನ್ನಡ ಪ್ರೀತಿಯ ಅಭಿಮಾನಕ್ಕೆ, ಅಪೂರ್ವ ಸಾಧನೆಗೆ ಖಾರ್ವಿ ಆನ್ಲೈನ್ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ಸುಧಾಕರ್ ಖಾರ್ವಿ
Editor
www.kharvionline.com

2 thoughts on “ಗೋವಾದಲ್ಲಿ ಹೊನ್ನಾವರದ ಶೀಲಾ ಮೇಸ್ತರ ಅಭೂತಪೂರ್ವ ಸಾಧನೆ

  1. ನಮ್ಮ ಸಮುದಾಯದ ಮತ್ತೊಬ್ಬ ಮಹಿಳಾ ಸಾಧಕಿಯನ್ನು ಕಂಡು ನಿಜಕ್ಕೂ ಸಂತಸ ತಂದಿದೆ. ಇವರಂತೆ ಸ್ವ-ಉತ್ಸಾಹದಿಂದ ಮತ್ತು ಯಾವುದೇ ಪ್ರಚಾರವಿಲ್ಲದೆ ತಮ್ಮ ಗುರಿಯತ್ತ ಸಾಗಿ ಕೆಲಸ ಮಾಡುವವರು ಸಮಾಜಕ್ಕೆ ನಿಜವಾದ ಆದರ್ಶ. ನೀವು ಇನ್ನೂ ನಮಗೆಲ್ಲರಿಗೂ ಸ್ಪೂರ್ತಿ.
    ನಿಮ್ಮ ಮುಂದಿನ ಸಾಧನ ಪಥಕ್ಕೆ ದೇವರು ಆಯುರ್ ಆರೋಗ್ಯ ಹಾಗೂ ಐಶ್ವರ್ಯ ಅನುಗ್ರಹಿಸಲಿ. All the Best for your Future and We are proud of you.

Leave a Reply

Your email address will not be published. Required fields are marked *