ಜೀವನದಲ್ಲೊಂದು ಗುರಿಯಿರಬೇಕು; ಗುರಿಯನ್ನು ಸಾಧಿಸಲು ಇಚ್ಛಾಶಕ್ತಿ ಇರಬೇಕು. ಆಗ ಮಾತ್ರ, ಇಲ್ಲದ ಅವಕಾಶಗಳು ನಮ್ಮ ಸುತ್ತಲು ನಿರ್ಮಾಣಗೊಳ್ಳತೊಡಗುತ್ತವೆ; ಬಡತನವೆಂಬ ಹಿಮಗೋಡೆ ಕರಗಿ ನೀರಾಗಲಾರಂಭಿಸುತ್ತದೆ. ಹೀಗೆ ಸಾಧಿಸ ಹೊರಟ ನಮ್ಮ ಸಮಾಜದ ಪ್ರತಿಭೆಯೆಂದರೆ ಶ್ರೀಯುತ ನಾಗರಾಜ ಖಾರ್ವಿ ತ್ರಾಸಿ ಹೊಸಪೇಟೆ. ಪೊಲೀಸ್ ನಾಗರಾಜ್ ಎಂದರೆ ಎಲ್ಲರಿಗೂ ತಿಳಿಯುತ್ತದೆ. ಕಂಚುಗೋಡು ಮೂಲದ ಶ್ರೀಯುತ ಕೊಗ್ಗ ಖಾರ್ವಿ ಮತ್ತು ಶ್ರೀಮತಿ ಸಾಕು ದಂಪತಿಯ ಸುಪುತ್ರರಾದ ಇವರು ಚಿಗುರು ಮೀಸೆ ಮೂಡುವಾಗಲೇ ಶಿಕ್ಷಣ ಪದವಿಯನ್ನು ಪಡೆದರು. ತೀಕ್ಷ್ಣ ವಿಚಾರಧಾರೆಯೊಂದಿಗೆ ಕಾಲೇಜಿನ ವಿದ್ಯಾಭ್ಯಾಸ ಮುಗಿಸಿ ಹೊರ ಬಂದರು. ಸ್ಪರ್ಧಾತ್ಮಕ ಪರೀಕ್ಷೆ ಯಾವುದೇ ಇರಲಿ ಪಾಸಾಗುವೆನೆಂಬ ಹುಮ್ಮಸ್ಸಿನಲ್ಲಿದ್ದವರಿಗೆ ಮೊದಲಿಗೆ ಸಿಕ್ಕ ಪರೀಕ್ಷೆಯೇ ಪೊಲೀಸ್ ಪೇದೆಯ ಹುದ್ದೆಗಾಗಿ ನಡೆಯುವ ಪರೀಕ್ಷೆ. ಶಿಕ್ಷಕನಾಗಿ ವೃತ್ತಿ ಜೀವನ ಆರಂಭಿಸಬೇಕೆಂದು ಕನಸು ಕಂಡವರು, 2008 ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆಗೆ ಸೇರಿಕೊಂಡರು. ಅನಿವಾರ್ಯ ಕಾರಣದಿಂದ, ಪೊಲೀಸ್ ಸಮವಸ್ತ್ರ ತೊಟ್ಟು ಕರ್ತವ್ಯಕ್ಕೆ ನಿಂತರು.
ಆದರೆ ಪ್ರತಿಭೆ ಮತ್ತು ಕರ್ತವ್ಯ ತತ್ಪರತೆ ಇದ್ದರೆ ಯಾವ ರಂಗವಾದರೂ ಮಿಂಚಬಹುದು ಎಂಬುಹುದಕ್ಕೆ ಇವರೇ ಉದಾಹರಣೆ. ಕೊಡಗಿನಲ್ಲಿ ಉತ್ತಮ ಪೊಲೀಸ್ ಪೇದೆಯಾಗಿ, ನಂತರ ಕುಂದಾಪುರಕ್ಕೆ ವರ್ಗಾವಣೆ ಪಡೆದುಕೊಂಡರು. ಕುಂದಾಪುರದ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಅಪಾರ ಜನಮನ್ನಣೆ ಗಳಿಸಿದರು. ಆತ್ಮೀಯತೆ ಮತ್ತು ನಗುಮೊಗದಿಂದಲೇ ಎಲ್ಲರ ಮನಸ್ಸನ್ನು ಗೆದ್ದರು. ಅದರೊಂದಿಗೆ ನಾ-ಅಭಿಸಾರಿಕೆ ಎಂಬ ಹೆಸರಿನಲ್ಲಿ ಸಾಹಿತ್ಯ ಕೃಷಿಯನ್ನೂ ಪ್ರಾರಂಭಿಸಿದರು. ಯಕ್ಷಗಾನದಲ್ಲಿ ಹವ್ಯಾಸಿ ಕಲಾವಿದರಾಗಿಯೂ ಬಣ್ಣ ಹಚ್ಚಿಕೊಂಡರು; ಬೂಟು ಹಾಕಿಕೊಂಡು ಪಥಸಂಚನ ಮಾಡುವ ಕಾಲುಗಳು, ಚೆಂಡೆಯ ಸದ್ದಿಗೆ ಕುಣಿಯ ಬಯಸಿತು. ತಬಲ ಕಂಡಾಗ, ಚೆಂಡೆ ಕಂಡಾಗ, ಹಾರ್ಮೋನಿಯಂ ಕಂಡಾಗ ನಾನೂ ನುಡಿಸುತ್ತೇನೆಂದು ಮೆಲ್ಲನೆ ಅದರ ಮೇಲೆ ಕೈಯಾಡಿಸತೊಡಗಿದರು. ಕಲೆಯ ಕುರಿತಾದ ಅಭಿಮಾನ, ಅಭಿರುಚಿ ಇದ್ದರೆ ಮಾತ್ರ ಇವೆಲ್ಲದರ ಕುರಿತು ಗೌರವ ಬರಲು ಸಾಧ್ಯ. ಸಾಮಾನ್ಯವಾಗಿ ಪೊಲೀಸ್ ಕೆಲಸವೆಂದರೆ ಬಿಡುವಿರದ ಉದ್ಯೋಗ. ಆದರೆ ಇವರು ಮಾತ್ರ ಅಪವಾದವೆಂಬಂತಿದ್ದರು.
ಇದೀಗ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಿಂದ, ಗಂಗೊಳ್ಳಿಯ ಕರಾವಳಿ ಪೊಲೀಸ್ ಠಾಣೆ, ವರ್ಗಾವಣೆಗೊಂಡಿದ್ದಾರೆ. ಮೊದಲೇ ಮೀನುಗಾರಿಕೆಯ ಹಿನ್ನೆಲೆಯಿಂದ ಬಂದವರು, ಕರ್ತವ್ಯ ನಿರ್ವಹಿಸಲು ಸಿಕ್ಕಿದ್ದು ಕರ್ನಾಟಕ ಕರಾವಳಿ ಪೊಲೀಸ್ ಪಡೆಯಲ್ಲಿ ಎಂದಾಗ ಅವರ ಸಂತಸ ಇಮ್ಮಡಿಯಾಯಿತು. ಈಗ ಗುಜರಾತಿನ ಓಕಾದಲ್ಲಿರುವ NATIONAL ACADEMY FOR COASTAL POLICING ಕೇಂದ್ರಕ್ಕೆ ತೆರಳುತ್ತಿದ್ದಾರೆ. ನಾಲ್ಕು ತಿಂಗಳ ಪೂರ್ಣ ತರಬೇತಿಯೊಂದಿಗೆ ಗಂಗೊಳ್ಳಿಗೆ ಮರಳಲಿದ್ದಾರೆ. ಮೀನುಗಾರಿಕೆ, ಸಮುದ್ರ, ದೋಣಿ, ಬೋಟ್ ಗಳನ್ನು ನೋಡಿ ಬೆಳೆದು ಯುವಕ ಕರಾವಳಿಯನ್ನು ಕಾಯುವ ಆರಕ್ಷಕರಾಗಿ ನಮ್ಮೂರಿಗೆ ಬರಲಿದ್ದಾರೆ. ಗುಜರಾತಿನಲ್ಲಿಯೂ ಅವರ ಪ್ರತಿಭೆಯ ಅನಾವರಣವಾಗಲಿ, ಜೊತೆಗೆ ಉತ್ತಮ ತರಬೇತಿಯೂ ಅವರಿಗೆ ಸಿಗಲಿ. ಹೊಸ ಹುಮ್ಮಸ್ಸಿನೊಂದಿಗೆ ಗಂಗೊಳ್ಳಿ ಕರಾವಳಿ ಪೊಲೀಸ್ ಪಡೆಯನ್ನು ಸೇರಿಕೊಳ್ಳಲಿ ಎಂದು ನಾವೆಲ್ಲರೂ ಹಾರೈಸೋಣ.
ನಾಖಾರ್ವಿ ಕಂಚುಗೋಡು
God bless Him.
ಹೃದಯವಂತ ಆರಕ್ಷಕ… ತಾಯಿ ಶ್ರೀ ಮಹಾಕಾಳಿ ಅಮ್ಮನವರ ಆಶೀರ್ವಾದ ಸದಾ ನಿಮ್ಮಮೇಲಿರಲಿ.