ಹಾಯಿ ದೋಣಿ
ಮಳೆಗಾಲವೆಂಬ ಭಯದ ಕಾಲ
ಮತ್ತೆ ಮಳೆಗಾಲ ಆರಂಭವಾಗಿದೆ ಸುರಿಯುವ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸವಿದ್ದರೂ ಈ ನಾಲ್ಕು ತಿಂಗಳುಗಳ ಕಾಲವನ್ನು ಮಳೆಗಾಲವೆಂದೇ ಕರೆಯುತ್ತೇವೆ ಮಳೆಗಾಲ ಬಂತೆಂದರೆ ಕರಾವಳಿಯ ಬಹುತೇಕ ನಗರಗಳು, ಊರುಗಳು ಮೌನವಾಗಿ ಬಿಡುತ್ತವೆ, ದುಡಿಯುವ ಕೈಗಳು ಸ್ತಬ್ಧಗೊಳ್ಳುತ್ತವೆ, ನಗುವ ಮುಖಗಳು ನಿಸ್ತೇಜಗೊಳ್ಳುತ್ತವೆ ಸರಕಾರ ಸೂಚಿಸಿದಂತೆ ಮಳೆಗಾಲದ ಮೊದಲೆರಡು ತಿಂಗಳುಗಳು ಮೀನುಗಳ ಸಂತಾನೋತ್ಪತ್ತಿಯ ಕಾಲ ಈ ಸಮಯದಲ್ಲಿ ಯಾಂತ್ರಿಕ ಮೀನುಗಾರಿಕೆಗೆ ನಿಷೇಧವಿದೆ ಈ ನಿಷೇಧದ ಅರಿವು, ಉದರಕ್ಕೆ ಇರಬೇಕಲ್ಲ ಅದನ್ನು ಪೊರೆಯಲು ಸಮುದ್ರಕ್ಕೆ ಇಳಿಯಲೇಬೇಕು.
ಸಹಜವಾಗಿ ಜೂನ್ ಆರಂಭದಲ್ಲಿ ಮುಂಗಾರು ಮಳೆಯ ಆರಂಭ ತೆಂಕಣದ ಗಾಳಿ ಬಲಗೊಳ್ಳುತ್ತಾ ಹೋಗುತ್ತದೆ ತೆಂಕಣದ ಗಾಳಿ ಬಂದ ಬಳಿಕ ಸಮುದ್ರದಲ್ಲಿ ಅಲೆಗಳ ಏರಿಳಿತ ಪ್ರಾರಂಭವಾಗುತ್ತದೆ ಒಂದೆರಡು ದಿನಗಳಲ್ಲೇ ಸಮುದ್ರ ರುದ್ರ ಸ್ವರೂಪವನ್ನು ತಾಳುತ್ತದೆ ಸಮುದ್ರದ ದಂಡೆಯಲ್ಲಿ ನಿಂತ ಮೀನುಗಾರ ಸಂತಸ ಪಡುತ್ತಾನೆ ಈ ಉಬ್ಬರ, ಆರ್ಭಟ ಒಂದು ತಿಂಗಳವರೆಗೆ ಇದ್ದರೆ ಮುಂದೆ ಮತ್ಸ್ಯ ಸಂತತಿ ಹೆಚ್ಚುವುದು ಖಂಡಿತ ಎಂಬುದು ಆತನಿಗೆ ತಿಳಿಸಿರುತ್ತದೆ ಸಮುದ್ರದೊಳಗೆ ನಡೆಯುವ ಈ ಮಹಾ ಮಂಥನದ ಕಾಲದಲ್ಲಿ ಮನುಷ್ಯನಿಗೆ ಪ್ರಕೃತಿಯೇ ವಿಧಿಸುವ ನಿರ್ಬಂಧವಿದು.
ಸಮುದ್ರ ಮತ್ತು ಜಲಚರಗಳ ಅನುಬಂಧದ ಕಾಲವಿದು ಒಂದು ತಿಂಗಳು ಕಳೆಯುವಷ್ಟರಲ್ಲಿ ದಂಡೆಯಲ್ಲಿ ಕಾಯುತ್ತಿದ್ದ ಮೀನುಗಾರನ ಹೊಟ್ಟೆಯಲ್ಲಿ ಹಸಿವು ಹೆಚ್ಚಾಗತೊಡಗುತ್ತದೆ ಕೆಲಸವಿಲ್ಲದೆ ಜೀವನ ಸಾಗಿಸೋದೇ ಕಷ್ಟ ಸಾಧ್ಯವಾಗತೊಡಗುತ್ತದೆ ಸಮುದ್ರದ ತೆರೆಗಳ ಅಬ್ಬರ ಅರ್ಧದಷ್ಟು ಕಡಿಮೆ ಆಗುವುದನ್ನು ನೋಡುತ್ತಿದ್ದ ಮೀನುಗಾರ ನಾಡದೋಣಿಗಳ ಮೂಲಕ ಸಾಂಪ್ರದಾಯಿಕ ಮೀನುಗಾರಿಕೆಗೆ ಅಣಿಯಾಗುತ್ತಾನೆ ಆದರೆ ನೆನಪಿರಲಿ ಸಮುದ್ರ ಸಂಪೂರ್ಣ ಶಾಂತವಾಗಿಲ್ಲದ ಸಮಯವಿದು ಮೇಲ್ನೋಟಕ್ಕೆ ಸಮುದ್ರ ಸ್ವಲ್ಪ ಮಟ್ಟಿಗೆ ಶಾಂತಗೊಂಡಂತೆ ಭಾಸವಾಗುತ್ತದೆ ಸಮುದ್ರ ಮಂಥನಗೊಂಡಿದ್ದರ ಪರಿಣಾಮ ಸಮುದ್ರದೊಳಗಿನ ಪ್ರವಾಹ ಮೂರು ತಿಂಗಳುಗಳ ಕಾಲ ಹಾಗೆಯೇ ಇರುತ್ತದೆ ಅನಿಯಂತ್ರಿತವಾಗಿ ಸುರಿದ ಮಳೆಯ ನೀರು, ನದಿಗಳಿಂದ ಸಮುದ್ರಕ್ಕೆ ಸೇರಿದ ಕೆಮ್ಮಣ್ಣು ಮಿಶ್ರಿತ ನೆರೆ ನೀರಿನಿಂದಾಗಿ ಸಮುದ್ರದ ನೀರು ದಪ್ಪ ಆಗಿರುತ್ತದೆ ಅದರ ಜೊತೆ ಸಮುದ್ರದ ಆಳದ ಕೆಸರು ಕದಡಿ ನೀರಿನಲ್ಲಿ ಸೇರಿಬಿಡುತ್ತದೆ ತಿಂಗಳುಗಳ ಕಾಲ ಕೆಲಸವಿಲ್ಲದೆ ಹಸಿದು ಕೂತವನು ನಾಡ ದೋಣಿಯ ಮೂಲಕ ಸಮುದ್ರದೊಳಗೆ ಪ್ರವೇಶ ಪಡೆಯಲು ಪ್ರಯತ್ನಿಸುತ್ತಾನೆ.
ಈ ಪ್ರವೇಶವೇ ಅತ್ಯಂತ ಭಯಾನಕ ಸಮುದ್ರದ ಎಲ್ಲಾ ತೀರಪ್ರದೇಶಗಳಿಂದ ಸಮುದ್ರದವನ್ನು ಪ್ರವೇಶಿಸಲು ಸಾಧ್ಯವೇ ಇಲ್ಲ ತೆರಗಳ ಆರ್ಭಟ ತಕ್ಕಮಟ್ಟಿಗೆ ಕಡಿಮೆಯಿರುವ ಕೆಲವು ಸ್ಥಳಗಳಿಂದ ಸಮುದ್ರಕ್ಕೆ ಪ್ರವೇಶ ಪಡೆಯುತ್ತಾರೆ ಇದು ಮೀನುಗಾರಿಕೆಯ ಆರಂಭವೂ ಹೌದು ಪ್ರವೇಶ ಮಾಡುವ ಮುನ್ನ ಸಮುದ್ರ ಪೂಜೆ ಮಾಡಿಯೇ ಬಂದಿರುತ್ತಾರೆ ಕುಂದಾಪುರದಿಂದ ಕಿರಿಮಂಜೇಶ್ವರದವರೆಗಿನ ಮೀನುಗಾರರಿಗೆ ಅತ್ಯಂತ ಪ್ರಶಸ್ತ ಸ್ಥಳವೆಂದರೆ ಗಂಗೊಳ್ಳಿ ಸಮೀಪ ಬೆಣ್ಗೆರೆಯ ಮಡಿ ಎಂಬ ಊರು ಈ ಸ್ಥಳದಲ್ಲಿ ಸಮುದ್ರವು ಭೂಮಿಯ ಒಳಚಾಚಿದಂತಿರುವ ಕಾರಣ ಮತ್ತು ದೂರದಲ್ಲಿ ಬಂಡೆಗಳ ಸಮುಚ್ಚಯ ಇರುವ ಕಾರಣ ತಕ್ಕ ಮಟ್ಟಿಗೆ ಸುರಕ್ಷಿತ ಜಾಗವಿದು ಕರ್ನಾಟಕದ ಕರಾವಳಿಯಲ್ಲಿ ಇಂತಹ ಬೆರಳೆಣಿಕೆಯಷ್ಟು ಸ್ಥಳಗಳಿವೆ ಹಾಗಂತ ಇವುಗಳು ಪೂರ್ಣ ಪ್ರಮಾಣದಲ್ಲಿ ಸುರಕ್ಷಿತವೂ ಅಲ್ಲ.
ಮೊನ್ನೆ ಮೊನ್ನೆ ಇದೇ ಮೊದಲ ಮೀನುಗಾರಿಕೆಯ, ಮೊದಲ ದಿನವೇ ಕೇರಳದ ಕಾಸರಗೋಡು ಮತ್ತು ಹೊನ್ನಾವರದ ಕಾಸರಕೋಡಿನಲ್ಲಿ ಎರಡು ಮಹಾ ದುರಂತ ಸಂಭವಿಸಿತು ಸಮುದ್ರಕ್ಕೆ ಪ್ರವೇಶಿಸುವ ಹಂತದಲ್ಲಿಯೇ ಗಜಗಾತ್ರದ ಅಲೆಗಳು ಅಪ್ಪಳಿಸಿ ನಾಡದೋಣಿಗಳನ್ನು ಮುಳುಗಿಸಿಬಿಟ್ಟಿತು ಕಣ್ಣು ಮುಚ್ಚಿ ತೆರೆಯುವುದರೊಳಗೆ ಎರಡು ಸ್ಥಳಗಳಲ್ಲಿ ನಾಲ್ಕು ಮಂದಿ ಸಮುದ್ರಪಾಲಾದರು ಮುಳುಗಿದ್ದು ಕೇವಲ ದೋಣಿಗಳಲ್ಲ, ಆ ನಾಲ್ಕು ಮನೆಗಳ ಜೀವನವೆಂಬ ನಾವೆ ಸಮುದ್ರಕ್ಕೆ ತೆರಳಿದ ಮಗ ಬರುತ್ತಾನೆಂದು ಕಾದ ಕುಳಿತ ತಾಯಿ, ಗಂಡ ಬರುವನೆಂದು ಸಮುದ್ರವನ್ನೇ ದಿಟ್ಟಿಸಿ ನೋಡುತ್ತಿದ್ದ ಹೆಂಡತಿ, ಅಪ್ಪ ಬರುವನೆಂದು ಆಸೆಗಣ್ಣಿನಿಂದ ಕಾಯುತ್ತಿದ್ದ ಮಕ್ಕಳು ಬರಮಾಡಿಕೊಂಡಿದ್ದು ಮೃತದೇಹವನ್ನು ಮೀನುಗಾರಿಕೆಗೆ ತೆರಳುವವರೆಲ್ಲರೂ ನುರಿತ ಈಜುಗಾರರಲ್ಲ ಈಜು ಬಂದರೂ ಮಳೆಗಾಲದ ಅಬ್ಬರದ ಸಮುದ್ರದಲ್ಲಿ ಹೆಚ್ಚು ದೂರ ಈಜಲಾಗುವುದಿಲ್ಲ ದಡದಲ್ಲೇ ದೋಣಿ ಮುಳುಗಿದರೆ ಈಜುವ ಮೊದಲೇ ದಡಕ್ಕೆ ಅಪ್ಪಳಿಸಿಯೋ, ದೋಣಿ ಅಡಿಯಲ್ಲಿಯೋ ಸಿಲುಕಿ, ಬಂಡೆಗಳಿಗೆ ಅಪ್ಪಳಿಸಿ ಜೀವ ಕಳೆದುಕೊಳ್ಳುವವರಿದ್ದಾರೆ.
ಈಜುಕೊಳದ ಎದುರು ನಿಂತು ತೀರ್ಪುಗಾರ ನೀಡುವ ವಿಶಲ್ ಕೇಳಿ ನೀರಿಗೆ ಧುಮುಕುವಂತಹ ವ್ಯವಸ್ಥೆ ಸಮುದ್ರದಲ್ಲಿಲ್ಲ ಇಲ್ಲಿ ವಿಧಿ ವಿಶಲ್ ಊದುವುದಿಲ್ಲ, ಯಾವುದೇ ಮುನ್ಸೂಚನೆ ನೀಡುವುದಿಲ್ಲ ಮೈಯೆಲ್ಲಾ ಕಣ್ಣಗಿದ್ದು ಪ್ರತಿಕ್ಷಣವೂ ಅಪಾಯದ ಅರಿವು ಇದ್ದರೆ ಮಾತ್ರ ಮರಳಿ ಬರಬಹುದು ಈ ಸಮಯದಲ್ಲಿ ಮೀನುಗಾರಿಕೆಗೆ ನಿಷೇಧ ಇರುವ ಕಾರಣ ಯಾವ ಜೀವವಿಮೆ ಸಂಸ್ಥೆಯವರು ವಿಮೆ ನೀಡುವುದಿಲ್ಲ ಕೆಲವರಿಗೆ ಅನ್ನಿಸಬಹುದು ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಮುದ್ರಕ್ಕೆ ಹೋಗಬೇಕಿತ್ತಾ ಎಂದು ಆದರೆ ಜೀವನದ ಎದುರು ಜೀವದ ಲೆಕ್ಕ ಯಾರು ಹಿಡಿಯುತ್ತಾರೆ ಹೊಟ್ಟೆಯ ಹಸಿವಿನ ಎದುರು ಸಮುದ್ರದ ದೈತ್ಯ ಅಲೆಗಳೂ ಕುಬ್ಜವಾಗಿ ಕಾಣುತ್ತವೆ ಸಾವಿರಾರು ದೋಣಿಗಳು ಸಮುದ್ರಕ್ಕೆ ಇಳಿಯುವಾಗ ಯಾವುದಾದರು ಒಂದು ದೋಣಿ ಸಮುದ್ರಕ್ಕೆ ಇಳಿಯಲು ಹಿಂದೇಟು ಹಾಕಿದರೆ, ಅದಕ್ಕಿಂತ ಅವಮಾನದ ವಿಚಾರ ಇನ್ನೊಂದಿಲ್ಲ ದಡದಲ್ಲಿ ನಿಂತವನು, ಯುದ್ಧದಿಂದ ಓಡಿ ಬಂದ ಹೇಡಿಯೆಂತಾಗುತ್ತಾನೆ ಎಂತಹ ಅಲೆಗಳು ಬಂದರೂ ಜಯಿಸಬಲ್ಲೆ ಎಂಬ ಆತ್ಮವಿಶ್ವಾಸ ಹೊತ್ತ ಸಾವಿರ ಸಾವಿರ ನಾವಿಕರು ಸಮುದ್ರ ಅಲೆಗಳ ಜೊತೆ ಹೋರಾಡುತ್ತಲೇ ಬದುಕು ಸಾಗಿಸುತ್ತಾರೆ.
ಇಂತಹ ಘಟನೆಗಳು ಮರುಕಳಿಸಬಾರದೆಂದು ಹೇಳುತ್ತಲೇ ಪುನಃ ಪುನಃ ಆಗುತ್ತಲೇ ಇರುತ್ತವೆ ಹೊನ್ನಾವರದ ಬಂದರು ನಿರ್ಮಾಣದ ಯೋಜನೆಯಲ್ಲಿ ಲಕ್ಷಾಂತರ ಮೀನುಗಾರರು ನಿರ್ಗತಿಕರಾಗಿದ್ದಾರೆ. ನೂರಾರು ವರ್ಷಗಳ ನೆಲಜಲದೊಂದಿಗೆ ಮಧುರ ಬಾಂಧವ್ಯದ ಕೊಂಡಿ ಈ ಯೋಜನೆಯೊಂದಿಗೆ ಮುರಿದು ಹೋಗಿದೆ ಸುರಕ್ಷಿತವಲ್ಲದ ಸ್ಥಳಗಳಿಗೆ ಮೀನುಗಾರ ವಲಸೆ ಹೋಗಿದ್ದಾನೆ ತತ್ಪರಿಣಾಮವಾಗಿ ಸಮುದ್ರ ಪ್ರವೇಶಿಸಿದ ದೋಣಿ ಮುಳುಗಿ ಹೋಗಿದೆ ಮೀನುಗಾರನ ಕ್ಷೀಣ ಧ್ವನಿ ಯಾರಿಗೂ ಕೇಳದಾಗಿದೆ ಸಂಖ್ಯಾಬಲದಲ್ಲೂ, ಅಧಿಕಾರದ ಬಲದಲ್ಲೂ ಅಬಲರಾಗಿರುವ ಕಾರಣ ಮೀನುಗಾರನ ಅಳಲು ಅರಣ್ಯರೋದನೆಯಾಗಿದೆ.
ದಿನಾ ಸಾಯುವವರಿಗೆ ಅಳುವವರು ಯಾರು ಎಂಬ ಸ್ಥಿತಿ ನಿರ್ಮಾಣವಾಗಿದೆ ಸರಕಾರ ಕೇಳುವುದು ಪ್ರಮಾಣಪತ್ರವನ್ನು ಸಮುದ್ರದಂಡೆಯಲ್ಲಿ ನೂರಾರು ವರ್ಷಗಳಿಂದ ನೆಲೆನಿಂತ ಕುಟುಂಬಗಳಿಗೆ ನೂರಾರು ಕಾರಣಗಳಿಂದ ನೆಲದ ಹಕ್ಕು ಪತ್ರ ಸಿಕ್ಕಿರುವುದಿಲ್ಲ ಒಕ್ಕಲೆಬ್ಬಿಸಿದಾಗ, ಹಕ್ಕು ಮಂಡಿಸಲು ಹಕ್ಕು ಪತ್ರವೇ ಇಲ್ಲದೆ ಕಣ್ಣೀರಿಡುತ್ತಾ ಅಲ್ಲಿಂದ ಮುಂದೆ ಸಾಗುತ್ತಾರೆ ಭಾವನೆಗೆ, ಕಣ್ಣೀರಿಗೆ ಮನಸ್ಸು ಕರಗುವ ಕಾಲ ಎಂದೋ ಮುಗಿದು ಹೋಗಿದೆ ಇದು ಕಲಿಗಾಲ ಕಾಲಕ್ಕೆ ತಕ್ಕ ಕೋಲ ಎಲ್ಲದ್ದಕ್ಕೂ ಕಾಲವೇ ಉತ್ತರಿಸಬೇಕು ನೆಲ, ಜಲ, ಭಾಷೆ, ಕಸುಬಿನ ವಿಷಯ ಬಂದಾಗ ಪಕ್ಷಾತೀತವಾಗಿ, ಧರ್ಮಾತೀತರಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ.
ನಾಖಾರ್ವಿ ಕಂಚುಗೋಡು