ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲಿ ಬದುಕು

ನೋಡು ನೋಡುತ್ತಿದ್ದಂತೆ ಮಳೆಗಾಲದ ಎರಡು ತಿಂಗಳ ಅವಧಿಯ ಮೀನುಗಾರಿಕೆ ನಿಷೇಧದ ಅವಧಿ ಮುಕ್ತಾಯವಾಗಿದೆ ಕಡಲ ಮಕ್ಕಳು ತಮ್ಮ ಹೊಟ್ಟೆಪಾಡಿಗಾಗಿ ಕಡಲಿಗೆ ಇಳಿಯಲು ಸರ್ವಸನ್ನದ್ದರಾಗಿದ್ದಾರೆ ಸಮುದ್ರರಾಜನಿಗೆ ಪೂಜೆ ಸಲ್ಲಿಸಿ ಬದುಕು ಕಟ್ಟಿಕೊಳ್ಳಲು ಕ್ಷಣಗಣನೆ ಪ್ರಾರಂಭವಾಗಿದೆ.

ಕರ್ನಾಟಕದ ಕರಾವಳಿಯಲ್ಲಿ ಅಂದಾಜು ಸುಮಾರು 4800 ಕ್ಕೂ ಹೆಚ್ಚು ಯಾಂತ್ರಿಕ ದೋಣಿಗಳು, 7500 ಕ್ಕೂ ಹೆಚ್ಚು ನಾಡದೋಣಿಗಳಲ್ಲಿ ಮೀನುಗಾರಿಕೆ ನಡೆಸಲಾಗುತ್ತಿದೆ ಸರಿಸುಮಾರು 3.29 ಲಕ್ಷ ಕರಾವಳಿ ಮೀನುಗಾರರಿದ್ದಾರೆ ರಾಷ್ಟ್ರದ ಕಡಲ ಮೀನುಗಳ ಒಟ್ಟು ಫಸಲಿನಲ್ಲಿ ಕರ್ನಾಟಕದ ಪಾಲು ಶೇಕಡಾ 20 ರ ಮಟ್ಟದಲ್ಲಿದೆ ಭಾರತಕ್ಕೆ 6000 ಕಿ.ಮೀ ಉದ್ದದ ಕಡಲ ತೀರವಿದ್ದು, ಅದರಲ್ಲಿ 320 ಕಿ ಮೀ ನಷ್ಟು ಚಿಕ್ಕ ಪಾಲು ಕರ್ನಾಟಕ ಹೊಂದಿದೆ. ಕಡಲತೀರ ಸಣ್ಣ ಪ್ರಮಾಣದಲ್ಲಿದ್ದರೂ ಸಾಗರದ ಮತ್ಸ್ಯ ಸಂಪತ್ತನ್ನು ಯಥಾಯೋಗ್ಯ ವಾಗಿ ಬಳಸಿಕೊಳ್ಳುವಲ್ಲಿ ಕರಾವಳಿಯ ಮೀನುಗಾರರು ಮಂಚೂಣಿಯಲ್ಲಿದ್ದಾರೆ.

ಕರ್ನಾಟಕ ಕರಾವಳಿ ಉತ್ತರ ಆಕ್ಷಾಂಶ 12.43 ಡಿಗ್ರಿ ಯಲ್ಲಿ ದಕ್ಷಿಣದ ತುತ್ತತುದಿ ಮಂಜೇಶ್ವರದಿಂದ ಹಿಡಿದು ಉತ್ತರದಲ್ಲಿ ಉತ್ತರ ಆಕ್ಷಾಂಶ 14.51 ಡಿಗ್ರಿಯಲ್ಲಿಸದಾಶಿವಗಡ ತನಕವೂಚಾಚಿಕೊಂಡಿದೆ ಪಶ್ಚಿಮಘಟ್ಟ ಹಿನ್ನೆಲೆ ಹೊಂದಿರುವ ಕರ್ನಾಟಕ ಕಡಲ ತೀರ ಉಷ್ಣ ವಲಯ ಸಾಗರ ಪರಿಸರದ ಎಲ್ಲಾ ಅಪರೂಪದ ಜೀವವೈವಿಧ್ಯ ಗಳನ್ನು ಒಳಗೊಂಡಿದೆ. ಅರಬ್ಬಿ ಸಮುದ್ರಕ್ಕೆ ಸೇರುವ ಕರಾವಳಿಯ ಪ್ರಮುಖ 14 ನದಿಗಳು ಮತ್ತು ಉಪನದಿಗಳು ತಮ್ಮಲ್ಲಿನ ಪೋಷಕಾಂಶಗಳನ್ನು ಮುಖ್ಯ ವಾಗಿ ಮುಂಗಾರು ಅವಧಿಯಲ್ಲಿ ಹೊತ್ತು ತಂದು ಸಾಗರ ನೀರಿನ ಪ್ರಾಥಮಿಕ ಉತ್ಪಾದನೆಯಾದ ಸಮುದ್ರ ಪಾಚಿ ಶೈವಲ್ಯಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಸಮುದ್ರ ನೀರಿನಲ್ಲಿ ಮೂಲತಃ ಈ ಪೋಷಕಾಂಶಗಳು ಕಡಿಮೆ ಇರುವುದರಿಂದ ಅವು ಎಷ್ಟು ಹೆಚ್ಚಾಗಿ ಲಭ್ಯವಾಗುತ್ತದೋ ಅಷ್ಟೇ ಪ್ರಮಾಣದಲ್ಲಿ ಜಲಸಸ್ಯಗಳ ಬೆಳವಣಿಗೆಯೂ ಹೆಚ್ಚುತ್ತದೆ. ಈ ಪಾಚಿ ಶೈವಲಗಳು ಸಮುದ್ರದ ಮೀನುಗಳ ಪ್ರಮುಖ ಪೌಷ್ಟಿಕಾಂಶಗಳ ಆಹಾರವಾಗಿದೆ ಸಿಹಿ ನೀರಿನಲ್ಲಿ ಸೂಕ್ಷ್ಮ ಪೋಷಕಾಂಶಗಳ ಸಾಂದ್ರತೆ ಉಪ್ಪು ನೀರಿಗಿಂತ ಏಷ್ಟೋ ಪಟ್ಟು ಹೆಚ್ಚಾಗಿದ್ದು, ಮಳೆಗಾಲದ ಅಧಿಕ ಪ್ರವಾಹಗಳಿಂದಾಗಿ ಸಮುದ್ರಕ್ಕೆ ದೊಡ್ಡ ಪ್ರಮಾಣದಲ್ಲೇ ಪೋಷಕಾಂಶಗಳು ಪೂರೈಕೆಯಾಗುತ್ತದೆ.

ಅಲ್ಲದೇ ಭಾರತದ ಪಶ್ಚಿಮ ಕರಾವಳಿಯಲ್ಲಿ ಮುಂಗಾರು ಅವಧಿಯಲ್ಲೇ ಸಾಗರ ಕಂದರದ ಆಳದಿಂದ ತಳದ ನೀರಿನ ಬುಗ್ಗೆ ಮೇಲೆದ್ದು ಬರುತ್ತದೆ. ಈ ನೀರಿನಲ್ಲಿ ಪುನರುತ್ಪಾದಿತ ಪೋಷಕಾಂಶಗಳು ಸಮೃದ್ಧವಾಗಿದ್ದು, ಮತ್ಸ್ಯ ಸಂಪತ್ತಿನ ಸಮೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತದೆ. ಈ ಎಲ್ಲಾ ಅಂಶಗಳು ಮುಂಗಾರು ಋತುವಿನಲ್ಲಿ ಕರಾವಳಿ ತೀರದ ನೀರಿನ ಪೋಷಕಾಂಶಗಳ ಮಟ್ಟವನ್ನು ಋತುಮಾನದ ಗರಿಷ್ಠಕೇರಿಸುತ್ತದೆ. ನದಿ ಸಮುದ್ರ ಸಂಗಮದ ಕರಾವಳಿಯ ಆಳಿವೆ ಪ್ರದೇಶಗಳು ಮೇಲ್ನೋಟಕ್ಕೆ ಶಾಂತವಾಗಿ ಕಂಡರೂ ಸದಾ ಹೂಳು ತುಂಬಿ ಪ್ರತಿವರ್ಷ ಒಂದಲ್ಲ ಒಂದು ಬೋಟ್ ದುರಂತ ಸಂಭವಿಸುತ್ತಲೇ ಇರುತ್ತದೆ. ಈ ಅಪಾಯಕಾರಿ ಸಮಸ್ಯೆಗೆ ಇದುವರೆಗೂ ಶಾಶ್ವತ ಪರಿಹಾರ ಸಿಕ್ಕಿರುವುದಿಲ್ಲ.

ಮೀನುಗಾರಿಕೆ ಒಂದರ್ಥದಲ್ಲಿ ಹೇಳುವುದಾದರೆ ಸಾವಿನೊಡನೆ ಸರಸ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಹವಾಮಾನ ವರದಿಯನ್ನು ನಿಖರವಾಗಿ ಹೇಳಲು ಹವಮಾನ ಇಲಾಖೆಗೂ ಸಾಧ್ಯವಿಲ್ಲ ಭಾರತಕ್ಕೆ ಸುನಾಮಿ ಅಪ್ಪಳಿಸಿದ ಬಳಿಕ ಹವಮಾನ ವೈಪರೀತ್ಯದ ಪ್ರಕರಣಗಳು ತುಂಬಾ ಜಾಸ್ತಿ ಯಾಗಿದೆ ಭೂಮಿಯ ಇತಿಹಾಸದಲ್ಲಿ ಸಮುದ್ರ ಸಾಗರಗಳ ದೊಡ್ಡದು ಯುಗಯುಗಗಳ ಹಿಂದೆ ಜೀವಿಗಳ ಹುಟ್ಟು ಸಾಗರವೇ ಆಗಿತ್ತು. ಇಂದಿಗೂ ನಮ್ಮ ವಾತಾವರಣಕ್ಕೆ ತೇವನ್ನೀಯುವಿದು, ಜೀವನದಾಯಿ ಮಳೆಯನ್ನು ಕೊಡುವುದು ಸಮುದ್ರವೇ ಆಗಿದೆ. ಮಾನವನಿಗೆ ಬೇಕಾದ ಮತ್ಸ್ಯ ಸಂಪತ್ತು ಮತ್ತು ಖನಿಜಗಳ ನಿಧಿಯನ್ನು ಕೊಡುವುದು ಸಮುದ್ರ ದೇವತೆಯೇ. ದೈವಿಶಕ್ತಿ ಪ್ರತಿರೂಪವಾದ ಕಡಲು ಮೀನುಗಾರರ ಬದುಕಿನ ಜೀವ ಸಂಜೀವಿನಿ. ಈ ವರ್ಷದ ಮೀನುಗಾರಿಕಾ ಋತು ಆಗಸ್ಟ್ 1 ರಿಂದ ಆರಂಭಗೊಳ್ಳಲ್ಲಿದ್ದು,ಕಡಲ ಮಕ್ಕಳ ನಿರೀಕ್ಷೆಯಂತೆ ಸಮೃದ್ಧ ಮತ್ಸ್ಯ ಸಂಪತ್ತು ಪ್ರಾಪ್ತಿ ಯಾಗಲಿ. ಕಡಲಿನಲ್ಲಿ ಯಾವುದೇ ರೀತಿಯ ದುರಂತಗಳು ಸಂಭವಿಸದೇ ಇರಲಿ. ಮೀನುಗಾರರ ಬದುಕು ಹಸನಾಗಲಿ ಎಂದು ಹಾರೈಸುತ್ತಾ, ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲಿ ಬದುಕು ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.

ಉಮಾಕಾಂತ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *