ಕಾಸರಕೋಡ ಟೊಂಕದ ಕಡಲತೀರದ ಉದ್ದೇಶಿತ ವಾಣಿಜ್ಯ ಬಂದರು ಪ್ರದೇಶದಲ್ಲಿ ರಿಡ್ಲೆ ಜಾತಿಯ ಕಡಲಾಮೆಯೊಂದು 50 ದಿವಸಗಳ ಹಿಂದೆ ಇಟ್ಟಿರುವ ಸುಮಾರು 250ಕ್ಕೂ ಹೆಚ್ಚು ಸಂಖ್ಯೆಯ ಮೊಟ್ಟೆಗಳು ನಿನ್ನೆ ತಡರಾತ್ರಿ ಮರಿಯಾಗಿದ್ದು ಇದ್ದಕ್ಕಿದ್ದಂತೆ ಮರಿಗಳು ನಾಪತ್ತೆಯಾಗಿದ್ದು ಕೇವಲ ಒಂದು ಮರಿಮಾತ್ರ ಸ್ಥಳೀಯರ ಕಣ್ಣಿಗೆ ಬಿದ್ದು ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನು ರಕ್ಷಿಸಿ ಕಡಲಿಗೆ ಬಿಟ್ಟಿರುವ ವಿದ್ಯಮಾನ ವರದಿಯಾಗಿದೆ. ಉಳಿದ ಕಡಲಾಮೆ ಮರಿಗಳು ಗೂಡಿನ ಸೂತ್ತಲು ಚಲಿಸಿದ ಕುರುಹುಗಳು ಇದೆಯಾದರೂ ಕಡಲಿಗೆ ಚಲಿಸಿರುವ ಯಾವುದೇ ಕುರುಹುಗಳು ಸ್ಥಳದಲ್ಲಿ ಲಭ್ಯವಾಗದೇ ಇರುವದು ಸ್ಥಳೀಯವಾಗಿ ಹಲವು ಅನುಮಾನಕ್ಕೆ ಕಾರಣವಾಗಿದೆ.
ಕಡಲಾಮೆ ಮರಿಗಳು ಗೂಡಿನ ಸುತ್ತ ಓಡಾಡಿದ ಕುರುಹುಗಳು ಕಂಡುಬಂದಿವೆಯಾದರೂ ಅದರ ಮೇಲೆ ಬೂಟುಕಾಲಿನ ಗುರುತುಗಳು ಮೂಡಿರುವದು ಹಲವು ರೀತಿಯ ಸಂಸಯವನ್ನು ಹುಟ್ಟು ಹಾಕಿದೆ. ಕಡಲಾಮೆ ಮರಿಗಳನ್ನು ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣ ಕಂಪನಿಯ ಕಾವಲು ಸಿಬ್ಬಂದಿಗಳೇ ನಾಶಮಾಡಿರುವ ಸಾಧ್ಯತೆ ಇದ್ದು ಈ ಬಗ್ಗೆ ಕಂಪೆನಿಯ ಕಾವಲು ಸಿಬ್ಬಂದಿಗಳ ಮತ್ತು ಕಂಪನಿಯ ಸ್ಥಾನಿಕ ಅಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿಯು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯನ್ನು ಆಗ್ರಹ ಪಡಿಸಿದೆ. ಈ ಸಂಬಂಧ ಹೋರಾಟ ಸಮಿತಿಯ ಅಧ್ಯಕ್ಷ ರಾಜೇಶ್ ಗೋವಿಂದ ತಾಂಡೇಲ್ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಘಟನೆಯ ಬಗ್ಗೆ ತೀವ್ರ ಕಳವಳ ಮತ್ತು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಅರಣ್ಯ ಇಲಾಖೆಯು ಇಲ್ಲಿನ ಕಡಲತೀರದಲ್ಲಿ ಕಡಲಾಮೆಗಳು ಇಟ್ಟಿರುವ ಮೊಟ್ಟೆಗಳನ್ನು ಸಂರಕ್ಷಣೆ ಮಾಡುವ ಕೆಲಸವನ್ನು ಸ್ಥಳೀಯರ ಸಹಕಾರದಿಂದ ನಡೆಸುತ್ತ ಬಂದಿದೆ. ಈ ಒಂದು ತಿಂಗಳ ಅವಧಿಯಲ್ಲಿ ಈ ಭಾಗದಲ್ಲಿ 11ಕ್ಕೂ ಹೆಚ್ಚು ಕಡಲಾಮೆಗಳು ಇಟ್ಟಿರುವ ಸುಮಾರು 2500ಕ್ಕೂ ಹೆಚ್ಚು ಮೊಟ್ಟೆಗಳ ಸಂರಕ್ಷಣೆಗೆ ಸ್ಥಳೀಯ ಅರಣ್ಯ ಇಲಾಖೆ ಕ್ರಮ ಕೈಗೊಂಡು ದಾಖಲೀಕರಣಕ್ಕೂ ವ್ಯವಸ್ಥೆ ಮಾಡುತ್ತಬಂದಿದೆ. ರಿಡ್ಲೆ ಜಾತಿಯ ಆಮೆಗಳ ಮೊಟ್ಟೆಗಳು ಇತ್ತೀಚೆಗೆ ಪೋಲೀಸ್ ಬಂದೋಬಸ್ತ್ ನಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲ್ಲೂ ಸಹ ಪತ್ತೆಯಾಗಿದ್ದವು.ಇತ್ತೀಚಿನ ಒಂದು ತಿಂಗಳ ಅವಧಿಯಲ್ಲಿ ಮೂರಕ್ಕೂ ಹೆಚ್ಚು ರಿಡ್ಲೆ ಜಾತಿಯ ಕಡಲಾಮೆಗಳು ರಕ್ತಸಿಕ್ತ ಅವಸ್ಥೆಯಲ್ಲಿ ಇಲ್ಲಿನ ಕಡಲತೀರದಲ್ಲಿ ಸಾವನ್ನಪ್ಪಿದ್ದವು. ಈ ಎಲ್ಲ ಬೆಳವಣಿಗೆಗಳ ನಡುವೆ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ವಾಣಿಜ್ಯ ಬಂದರು ಯೋಜನೆಗಾಗಿ ಸಿಆರ್ ಝೆಡ್ ನಿಯಮಗಳನ್ನು ಉಲ್ಲಂಘಿಸಿ ಇಲ್ಲಿನ ಕಡಲತೀರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು. ಕಡಲಾಮೆಗಳು ಮೊಟ್ಟೆ ಇಡುವ ಕಡಲತೀರದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಬಂದರು ಒಳನಾಡು ಜಲ ಸಾರಿಗೆ ಇಲಾಖೆ ಮತ್ತು ರಾಜ್ಯಸರಕಾರವನ್ನು ಇತ್ತೀಚೆಗೆ ಆಗ್ರಹ ಪಡಿಸಿದ್ದರು.ಈ ನಡುವೆ ಉದ್ದೇಶಿತ ವಾಣಿಜ್ಯ ಬಂದರು ಯೋಜನಾ ಪ್ರದೇಶದಲ್ಲಿಯೇ ಇದ್ದಕ್ಕಿದ್ದಂತೆ 250ಕ್ಕೂ ಹೆಚ್ಚು ಕಡಲಾಮೆ ಮರಿಗಳು ನಾಪತ್ತೆ ಪ್ರಕರಣ ನಡೆದಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
This is a huge legal offense, unfortunately, the Govt system is being misused to support this