ಅರ್ಚಕರ ಭಾವಭಕ್ತಿಯಲ್ಲಿ ಅಲಂಕೃತಗೊಳ್ಳುವ ಶ್ರೀ ಮಹಾಕಾಳಿ ಅಮ್ಮನವರು

ಅರ್ಚಕಸ್ಯ ಪ್ರಭಾವೇನಾ ಶಿಲಾಭವತಿ ಶಂಕರ ಎಂಬ ಸಂಸ್ಕೃತ ಸುಭಾಷಿತವಿದೆ ಸಮರ್ಪಣಾ ಮನೋಭಾವ ಮತ್ತು ಶೃದ್ದೆ ಭಕ್ತಿಯಿಂದ ಅರ್ಚಕರು ಪೂಜೆಗೈದರೆ ಶಿಲೆಯಲ್ಲಿ ಶಿವನು ಅವತರಿಸುತ್ತಾನೆ ಎಂಬುದು ಇದರ ಅರ್ಥ ಅರ್ಚಕರ ಶ್ರದ್ಧೆ ಭಕ್ತಿಪೂರ್ವಕ ಪೂಜಾಕೈಂಕರ್ಯಗಳು ದೇವರ ಮಹಿಮೆಯ ಉತ್ಕರ್ಷಕ್ಕೆ ಮತ್ತು ದೇಗುಲದ ಪ್ರಸಿದ್ದಿಗೂ ಕಾರಣವಾಗುತ್ತದೆ. ಈ ಮಾತಿಗೆ ಉತ್ಕೃಷ್ಟ ದೃಷ್ಟಾಂತವಾಗಿ ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಅರ್ಚಕರಾದ ಶ್ರೀ ಸುಮಂತ್ ಭಟ್ ಶುಂಠಿಯವರು ಪ್ರಸ್ತುತರಾಗುತ್ತಾರೆ.

ಅರ್ಚಕರ ಕುಟುಂಬದ ಮೂಲ ಕೊಡಚಾದ್ರಿ ತಪ್ಪಲಿನ ಸಂಪೆಕಟ್ಟು ಆಗಿದ್ದು, ಅವರ ಹಿರಿಯ ತಲೆಮಾರು ನೂರು ವರ್ಷಗಳ ಹಿಂದೆ ಜೋಗ್ ಫಾಲ್ಸ್ ಸಮೀಪದ ಬಚ್ಚಗಾರು ಎಂಬಲ್ಲಿ ನೆಲೆನಿಂತಿತು. ಅರ್ಚಕರ ಅಜ್ಜ ಪುರೋಹಿತ್ಯ ವೃತ್ತಿಯ ಜೊತೆಗೆ ಕೃಷಿಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಶುಂಠಿ ಮನೆತನವೆಂದು ಅರ್ಚಕರ ಕುಟುಂಬ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿತ್ತು. ಅರ್ಚಕರ ತಂದೆ ಪುರೋಹಿತ್ಯ ವೃತ್ತಿಯನ್ನು ಕೈಗೊಳ್ಳಲಿಲ್ಲ. ಬೆಂಗಳೂರಿನಲ್ಲಿ SSLC ಮುಗಿಸಿದ ಅರ್ಚಕರು ಸಂಸ್ಕೃತದಲ್ಲಿ MA ಕೋರ್ಸ್ ನ್ನು ಪೂರ್ತಿಗೊಳಿಸಿದರು. ಸಂಸ್ಕೃತ ಗ್ರಾಮ ಎಂದೇ ಪ್ರಸಿದ್ಧಿಗೊಂಡ ಮತ್ತೂರಿನಲ್ಲಿ ಸ್ವಲ್ಪ ಕಾಲ ಅಧ್ಯಯನ ನಡೆಸಿದ ಬಳಿಕ ಸಂಪೆಕಟ್ಟು ಪಾಠಶಾಲೆಯಲ್ಲಿ ವೇದ ಅಧ್ಯಯನ ಕೈಗೊಂಡರು. ಜ್ಯೋತಿಷ್ಯ ಶಾಸ್ತ್ರದ ಶಿಕ್ಷಣವನ್ನು ಶಿರಸಿ ಮತ್ತು ಕೇರಳದ ಕಾಲಡಿಯಲ್ಲಿ ಪಡೆದುಕೊಂಡರು. ಕಾಲಡಿ ಭಗವಾನ್ ಶಂಕರಾಚಾರ್ಯರ ಜನ್ಮಭೂಮಿ ಎಂಬುದು ಇಲ್ಲಿ ಉಲ್ಲೇಖನೀಯ ಸಂಗತಿ.

ಇದಾದ ಬಳಿಕ ಕೂಡ್ಲಿ ಶಂಕರ ಮಠದಲ್ಲಿ ಐದು ವರ್ಷಗಳ ಕಾಲ ಗುರುಗಳ ಜೊತೆಗೆ ಸೇವೆ ಸಲ್ಲಿಸಿದ್ದರು. ಕೂಡ್ಲಿ ಮಠದಲ್ಲಿ ಸಲ್ಲಿಸಿದ ಸೇವೆ ಅವರ ಬದುಕಿಗೆ ತಿರುವು ನೀಡಿತು. ಮರವಂತೆಯ ಅರ್ಚಕರೊಬ್ಬರು ನೀಡಿದ ಮಾಹಿತಿಯಂತೆ ಕುಂದಾಪುರ ಖಾರ್ವಿಕೇರಿ ಮಹಾಕಾಳಿ ದೇಗುಲದ ಪೂಜಾ ಕೈಂಕರ್ಯಕ್ಕಾಗಿ ಅರ್ಚಕರೊಬ್ಬರ ಅವಶ್ಯಕತೆ ಇತ್ತು. ಆ ದಿನ ದೇವಸ್ಥಾನ ಬಳಿ ಬಂದಾಗ ಬೀಗ ಹಾಕಿದ ಪ್ರಧಾನ ಬಾಗಿಲಿನಿಂದ ದೀಪಗಳ ಬೆಳಕಿನ ಪ್ರಭೆಯಲ್ಲಿ ಹೊಳೆಯುತ್ತಿದ್ದ ಶ್ರೀ ಮಹಾಕಾಳಿ ಅಮ್ಮನವರ ದಿವ್ಯ ದರುಶನದಿಂದ ಅರ್ಚಕರು ಭಕ್ತಿಭಾವ ಪರವಶರಾದರು. ಅವರ ನರನಾಡಿಗಳಲ್ಲಿ ಪವಿತ್ರ ಭಕ್ತಿಯ ಮಧುರ ಅನೂಭೂತಿ ಸೃಷ್ಟಿಯಾಯಿತು. ತಾಯೇ ನಿನ್ನ ಸೇವೆಗಾಗಿ ನನ್ನನ್ನು ಸಮರ್ಪಿಸಿಕೊಳ್ಳುತ್ತೇನೆ ಎಂಬ ಅರ್ಚಕರ ಭಕ್ತಿಭಾವ ಪರವಶತೆಯ ಅಂತರಂಗದ ಪ್ರಾರ್ಥನೆಗೆ ಶ್ರೀ ಮಹಾಕಾಳಿ ಅಮ್ಮನವರು ಸ್ಪಂದಿಸಿದರು.

ಶಕ್ತಿ ಸ್ವರೂಪಿಣಿ ಶ್ರೀ ಮಹಾಕಾಳಿ ಅಮ್ಮನವರ ದೇಗುಲದಲ್ಲಿ ಅರ್ಚಕರಾಗಿ ನಿಯುಕ್ತಿಗೊಂಡ ಅರ್ಚಕರ ಪೂಜೆಕೈಂಕರ್ಯಗಳು ಭಕ್ತಾದಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಬಹಳ ಮುಖ್ಯವಾಗಿ ದೇವಿಯನ್ನು ಅವರು ಅಲಂಕೃತಗೊಳಿಸುವ ಕಲೆ ಸರ್ವರ ಪ್ರಶಂಸೆಗೆ ಪಾತ್ರವಾಗಿದೆ. ಅರ್ಚಕರು ದೇವಿಯನ್ನು ಅಪೂರ್ವವಾಗಿ ಅಲಂಕಾರ ಮಾಡುವ ಪರಿ ಹೃನ್ಮನ ಸೆಳೆಯುತ್ತದೆ. ಭಕ್ತಾದಿಗಳನ್ನು ಭಕ್ತಿಪರವಶತೆಯ ಲೋಕಕ್ಕೆ ಕೊಂಡೊಯ್ಯುವ ಪವಿತ್ರ ಕ್ಷಣಗಳು ಅನನ್ಯವಾಗಿದೆ. ಅರ್ಚಕರು ಶ್ರೀ ಮಹಾಕಾಳಿ ಅಮ್ಮನವರನ್ನು ಅಲಂಕೃತಗೊಳಿಸಿದ ದೃಶ್ಯ ನೋಡಲೆಂದೇ ಸಹಸ್ರಾರು ಭಕ್ತಾದಿಗಳು ದೇಗುಲಕ್ಕೆ ಆಗಮಿಸುತ್ತಾರೆ ಎಂಬುದು ವಿಶೇಷವಾಗಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಅಮ್ಮನವರಿಗೆ ಅವರು ಮಾಡಿದ್ದ ಅಲಂಕಾರ ಅಮೋಘವಾಗಿತ್ತು.ಇದೀಗ ಶ್ರೀ ಮಹಾಕಾಳಿ ಅಮ್ಮನವರ ಸನ್ನಿಧಿಯಲ್ಲಿ ಮಾರಿಹಬ್ಬದ ಪ್ರಯುಕ್ತ ಎರಡು ದಿನ ಅಮ್ಮನವರನ್ನು ಶೃಂಗರಿಸಿದ ಪರಿ ಪರಮ ಅದ್ಬುತವನ್ನೇ ಸೃಷ್ಟಿಸಿದ್ದವು. ಅದು ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಂಡಿದೆ. ಲಕ್ಷಾಂತರ ಭಕ್ತಾದಿಗಳ ಶ್ಲಾಘನೆಗೆ ಪಾತ್ರವಾಗಿದೆ. ಅಮ್ಮನವರಿಗೆ ವಸ್ತ್ರಾಭರಣ ಪುಷ್ಪಗಳನ್ನು ಸಿಂಗಾರಗೊಳಿಸಿದ ಅದ್ಬುತ ಕೈಚಳಕಕ್ಕೆ ಸರ್ವರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದರಲ್ಲಿ ತನ್ನದೇನು ಪಾತ್ರವಿಲ್ಲ ಎಲ್ಲವನ್ನೂ ಶ್ರೀ ಮಹಾಕಾಳಿ ಅಮ್ಮನವರೇ ಮಾಡಿಸಿಕೊಳ್ಳುತ್ತಾರೆ ಎಂದು ಅರ್ಚಕರು ವೀನೀತಾ ಭಾವದಿಂದ ನುಡಿಯುತ್ತಾರೆ. ಅಮ್ಮನವರು ಸರ್ವವಿಧದಿಂದಲೂ ತನ್ನನ್ನು ಪ್ರಭಾವಿಸಿದ್ದಾಳೆ ಎಂದು ಅರ್ಚಕರು ಭಕ್ತಿಭಾವದಿಂದ ಹೇಳುತ್ತಾರೆ. ದೇವಿ ತನ್ನ ಸೇವಾಕೈಂಕರ್ಯಗಳಿಗೆ ಅತ್ಯಂತ ಸಮರ್ಥ ಮತ್ತು ವಿನಯವಂತ ಅರ್ಚಕರನ್ನು ಕರೆಸಿಕೊಂಡಿದ್ದಾಳೆ ಎಂದು ಸಾರ್ವಜನಿಕರು ಅಭಿಮತ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಕೊಂಕಣಿ ಖಾರ್ವಿ ಸಮಾಜದ ಆರಾಧ್ಯ ದೇವತೆಯಾದ ಶ್ರೀ ಮಹಾಕಾಳಿ ಅಮ್ಮನವರ ಸನ್ನಿಧಿಯಲ್ಲಿ ಭಕ್ತಿಪೂರ್ವಕ ಸೇವೆ ಸಲ್ಲಿಸುತ್ತಿರುವ ಅರ್ಚಕರಾದ ಶ್ರೀ ಸುಮಂತ್ ಭಟ್ ಶುಂಠಿಯವರಿಗೆ ಗೌರವಪೂರ್ವಕ ವಂದನೆಗಳನ್ನು ಸಲ್ಲಿಸೋಣ.

ಸುಧಾಕರ್ ಖಾರ್ವಿ
Editor
www.kharvionline.com

Leave a Reply

Your email address will not be published. Required fields are marked *