ಹೋಳಿಕಾಮದಹನವನ್ನು ನೆನಪಿಸುವ ಶಿವರಾತ್ರಿ ಹಣುಬು ಕಾಮನ ಹಬ್ಬ ಕುಂದಾಪುರ ತಾಲೂಕಿನ ವೈಶಿಷ್ಟ್ಯಪೂರ್ಣ ಆಚರಣೆ. ಕುಂದಾಪುರ ಕನ್ನಡ ಮಾತನಾಡುವ ಉತ್ತರದ ಬೈಂದೂರಿನಿಂದ ಹಿಡಿದು ದಕ್ಷಿಣದ ಬ್ರಹ್ಮಾವರ ತನಕವೂ ಹಣುಬು ಕಾಮನ ಹಬ್ಬ ಶಿವರಾತ್ರಿ ದಿನದಂದು ಬಹಳ ಶ್ರದ್ಧೆ ಭಕ್ತಿಯಿಂದ ಜರುಗುತ್ತದೆ.ಕೆಲವೆಡೆ ಶಿವರಾತ್ರಿ ಮಾರನೇ ದಿನ ಕೂಡಾ ಆಚರಿಸುತ್ತಾರೆ. ಶಿವನು ತನ್ನ ಮೂರನೇ ಕಣ್ಣಿನಿಂದ ಮನ್ಮಥನನ್ನು ದಹಿಸುವಿಕೆಯ ಪ್ರತೀಕವಾಗಿ ಹಣುಬು ಕಾಮನಹಬ್ಬ ಆಚರಿಸಲಾಗುತ್ತದೆ.
ಶಿವರಾತ್ರಿಯಂದು ಗ್ರಾಮಸ್ಥರೆಲ್ಲ ಒಟ್ಟು ಸೇರಿ ಊರಿನ ಮನೆ ಮನೆಗೆ ಭೇಟಿ ನೀಡಿ ಚೆಂಡೆ,ತಾಳ,ಜಾಗಟೆ ಬಾರಿಸುತ್ತಾ ಧೀಂಸ್ಸಾಲ್ ಎನ್ನಿರೋ ಧೀಂಗುಟ್ಕ ಕುಣಿರೋ ಎಂಬ ಕುಂದಗನ್ನಡ ಜನಪದ ಹಾಡು ಹೇಳುತ್ತಾರೆ.ಮನೆಮಂದಿ ವಾಡಿಕೆಯಂತೆ ತೆಂಗಿನಕಾಯಿ,ಅಕ್ಕಿ ಮತ್ತು ಒಣಗಿದ ತೆಂಗಿನ ಹೆಡೆಯನ್ನು ಊರಿನ ತಂಡಕ್ಕೆ ಕಾಣಿಕೆಯಾಗಿ ನೀಡುತ್ತಾರೆ. ಗ್ರಾಮದ ಜನರೆಲ್ಲ ನಿರ್ದಿಷ್ಟಪಡಿಸಿದ ಗದ್ದೆಯಲ್ಲಿ ಅಥವಾ ದೇವಸ್ಥಾನದ ವಠಾರದಲ್ಲಿ ಕಾಡುಜಾತಿಯ ಸಣ್ಣ ಮರವೊಂದನ್ನು ನೆಟ್ಟು ಅದಕ್ಕೆ ಮುಳ್ಳು ಜಾತಿಯ ಸಸ್ಯ ಬಳ್ಳಿಯನ್ನು ರಾಶಿ ಹಾಕುತ್ತಾರೆ.ಅದರ ಮೇಲೆ ಒಣಹುಲ್ಲು ಹಾಕಿ ಸುತ್ತಲೂ ತೆಂಗಿನ ಮಡಲನ್ನು ತಟ್ಟಿಯಂತೆ ಕಟ್ಟುತ್ತಾರೆ.ಇದಕ್ಕೆ ಹಣುಬಿನ ರಥ ಎಂದು ಕರೆಯುತ್ತಾರೆ.
ರಾತ್ರಿ ವೇಳೆಯಲ್ಲಿ ಗ್ರಾಮಸ್ಥರೆಲ್ಲ ದೇವಸ್ಥಾನದಲ್ಲಿ ಶಿವನಿಗೆ ಪೂಜೆ ಸಲ್ಲಿಸಿ ಧೀಮ್ಸಾಲ್ ಹಾಕುತ್ತಾ ಹಣುಬಿನ ರಥಕ್ಕೆ ಮೂರು ಸುತ್ತು ಬಂದು ತೆಂಗಿನಕಾಯಿಗಳನ್ನು ಹಾಕಿ ಬೆಂಕಿ ಹಾಕುತ್ತಾರೆ.ಹಣುಬಿನ ರಾಶಿಯಲ್ಲಿ ಬೆಂದು ಉಳಿದ ತೆಂಗಿನಕಾಯಿಗಳನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸುತ್ತಾರೆ. ಕೆಲವು ಕಡೆ ನೇರವಾಗಿ ನೆಟ್ಟ ಮರಕ್ಕೆ ಬೆಂಕಿ ಹಾಕುವುದು ಉಂಟು. ಶಿವನು ಮನ್ಮಥನನ್ನು ತನ್ನ ಉರಿಗಣ್ಣಿನಿಂದ ಸುಟ್ಟು ಭಸ್ಮ ಮಾಡಿದ ಪೌರಾಣಿಕ ಕಥೆಯ ಹಿನ್ನಲೆಯಲ್ಲಿ ಈ ಜನಪದ ಸ್ಪರ್ಶದ ಧಾರ್ಮಿಕ ಆಚರಣೆ ಕುಂದಾಪುರ ತಾಲೂಕಿನ ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಶಿವರಾತ್ರಿಯ ದಿನದಂದು ನಡೆಯುತ್ತದೆ.
ಆಧುನಿಕತೆಯ ವೈಭವೀಕರಣದಲ್ಲಿ ನಮ್ಮ ಸಂಪ್ರದಾಯ ಆಚರಣೆಗಳು ಮರೆಯಾಗುತ್ತಿದ್ದರೂ,ಕೆಲವೊಂದು ಆಚರಣೆಗಳು ಇಂದಿಗೂ ತಮ್ಮ ಆಸ್ತಿತ್ವ ಉಳಿಸಿಕೊಂಡಿರುವುದು ಸಮಾಧಾನಕಾರ ಸಂಗತಿ.
ನಮ್ಮ ಹಿಂದೂ ಸಂಪ್ರದಾಯಗಳ ಪ್ರಕಾರ ಸೌರ ಯುಗಾದಿ ಹೊಸ ವರುಷದ ಆರಂಭ.ಅಂತೆಯೇ ಪ್ರಾಚೀನ ಪರಂಪರೆಯಂತೆ ಯುಗಾದಿಯಿಂದ ಪ್ರಾರಂಭಗೊಂಡು ಹನ್ನೆರಡು ತಿಂಗಳ ಗಣನೆ ಆರಂಭವಾಗುತ್ತದೆ.
ಕುಂದಾಪುರ ಪರಿಸರದಲ್ಲಿ ಹನ್ನೆರಡು ತಿಂಗಳುಗಳು ವೈಶಿಷ್ಟ್ಯಪೂರ್ಣ ಹೆಸರಿನಿಂದ ಕರೆಯಲ್ಪಡುತ್ತದೆ.ತಿಂಗಳುಗಳ ಗಣನೆಯಂತೆ ಹನ್ನೊಂದನೇ ತಿಂಗಳನ್ನು ಶಿವರಾತ್ರಿ ತಿಂಗಳು ಎಂದು ಕರೆಯುತ್ತಾರೆ. ಶಿವರಾತ್ರಿಯ ಹಣ್ಬಿನ್ ಹಬ್ಬ ಈ ತಿಂಗಳ ವಿಶೇಷ.
ಶಿವರಾತ್ರಿಯ ಹಣುಬಿನ ಹಬ್ಬದ ಧೀಂಸ್ಸಾಲ್ ಪದ್ಯ ಅನಕ್ಷರಸ್ಥರ ಸೃಜನಶೀಲ ಪ್ರತಿಭೆಯ ಅತಿ ಸಹಜವಾದ ಶಕ್ತ ಅಭಿವ್ಯಕ್ತಿಯಾಗಿದೆ. ಶಿಷ್ಟ ಸಾಹಿತ್ಯ ಹುಟ್ಟುವ ಮೊದಲೇ ಪ್ರಾಚೀನರು ತಮ್ಮ ಧಾರ್ಮಿಕ ಸೊಗಡಿನ ಅನಿಸಿಕೆ ಅಭಿಪ್ರಾಯಗಳನ್ನು ಹಾಡಿನ ಮೂಲಕ ತೋಡಿಕೊಂಡರು.ಇದು ಆಡು ಮಾತಿಗಿಂತ ವಿಶೇಷವಾದ ಪರಿಣಾಮ ಬೀರಿ ಜನ ಮಾನಸದಲ್ಲಿ ಗಟ್ಟಿಯಾಗಿ ನೆಲೆಯೂರಲು ಕಾರಣವಾಯಿತು.ಕುಂದಾಪುರ ಕನ್ನಡದಲ್ಲಿ ಮೂಡಿ ಬರುವ ಈ ಧೀಂಸ್ಸಾಲ್ ಹಾಡುಗಳು ಅರ್ಥಗರ್ಭಿತವಾಗಿವೆ. ಲೋಕಕಲ್ಯಾಣಕ್ಕಾಗಿ ಪರಶಿವನ ಉರಿಗಣ್ಣಿಗೆ ತುತ್ತಾಗಿ ತನ್ನ ಪ್ರಾಣವನ್ನೇ ಬಲಿದಾನಗೈದ ಮನ್ಮಥನ ಕಥೆ ಧಾರ್ಮಿಕ ಸಾಹಿತ್ಯದ ಮೂಲ ವಾಹಿನಿಯಾಗಿ ಜನಪದ ಹೇಗೆ ಹರಿದಿದೆ ಎಂಬುದನ್ನು ಶಿವರಾತ್ರಿಯ ಧೀಂಸ್ಸಾಲ್ ಹಾಡುಗಳು ತೋರ್ಪಡಿಸುತ್ತದೆ. ಇಲ್ಲಿ ಕುಂದಾಪುರ ಕನ್ನಡದ ಜನಪದ ಸಾಹಿತ್ಯ ನೇರವಾಗಿ ಧಾರ್ಮಿಕ ಸಾಹಿತ್ಯದ ಗರ್ಭವನ್ನುಪ್ರವೇಶ ಮಾಡಿದೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲ್ಪಡುವ ಶಿವರಾತ್ರಿ ಹಬ್ಬ ಸರ್ವರಿಗೂ ಶುಭದಾಯಕವಾಗಲಿ.ಪರಶಿವನ ಅನುಗ್ರಹ ಕೃಪೆ ಎಲ್ಲರಿಗೂ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಸಿಕೊಳ್ಳುತ್ತೇನೆ.
ಉಮಾಕಾಂತ ಖಾರ್ವಿ
ಕುಂದಾಪುರ