ಸರಕಾರಿ ಅಧಿಕಾರಿಗಳೇ ಕಾನೂನು ನಿಯಮಗಳನ್ನುಉಲ್ಲಂಘಿಸಿ ಮೀನುಗಾರರ ಮೇಲೆ ಪೋಲಿಸ್ ದೌರ್ಜನ್ಯ ನಡೆಸಿದ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು ದಾಖಲಾಗಿದೆ. ಸ್ಥಳೀಯರ ತೀವ್ರ ವಿರೋಧದ ನಡುವೆಯೂ ಅಭಿವೃದ್ಧಿ ನಿಷೇದಿತ ಕಾಸರಕೋಡ ಕಡಲತೀರದಲ್ಲಿ ಬಲವಂತದಿಂದ ಅಕ್ರಮ ರಸ್ತೆ ಕಾಮಗಾರಿ ನಿರ್ವಹಿಸಿದ ಮತ್ತು ಖಾಸಗಿ ಮೂಲದ ವಾಣಿಜ್ಯ ಬಂದರು ನಿರ್ಮಾಣ ಕಂಪನಿಯ ಆಮೀಶಗಳಿಗೆ ಒಳಗಾಗಿ ಸರಕಾರಿ ಆಡಳಿತ ಯಂತ್ರದ ದುರ್ಬಳಕೆ ಮಾಡಿರುವುದರ ವಿರುದ್ಧ ಹಾಗೂ ಗರ್ಭಿಣಿ ಮಹಿಳೆಯರು ಸೇರಿದಂತೆ ಪ್ರತಿಭಟನಾ ನಿರತನಾಗರಿಕರ ಆಕ್ರಮ ಬಂಧನ ಮತ್ತು ನಾಗರಿಕರ ಮೇಲಿನ ಪೋಲಿಸ್ ದೌರ್ಜನ್ಯದ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ, ದೆಹಲಿಯ ಹ್ಯುಮನ್ ರೈಟ್ ಡಿಫೆಂಡರ್ಸ್ ಅಲರ್ಟ್-ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಹೆನ್ರಿ ತಿಪಗ್ನೆ ಎನ್ನುವವರು ಹೊನ್ನಾವರ ಪೋಲಿಸ ಅಧಿಕಾರಿಗಳ ವಿರುದ್ಧ ತುರ್ತು ಮೇಲ್ಮನವಿ ರೂಪದ ದೂರನ್ನು ದಾಖಲಿಸಿದ್ದಾರೆ.
ಇನ್ನೊಂದೆಡೆ ಜಿಲ್ಲಾಧಿಕಾರಿಗಳು ಮತ್ತು ವಿವಿಧ ಅಧಿಕಾರಿಗಳ ವಿರುದ್ಧ ನಿಯಮಬಾಹಿರ ಕಾಮಗಾರಿ, ಕಾನೂನು ಉಲ್ಲಂಘನೆ, ಅಧಿಕಾರದ ದುರ್ಬಳಕೆ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಪೋಲಿಸ್ ದೌರ್ಜನ್ಯದ ವಿರುದ್ಧ ರಾಜ್ಯದ ರಾಜ್ಯಪಾಲರು ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತ ದೂರನ್ನು ಸಲ್ಲಿಸಲಾಗಿದ್ದು ಸಮಗ್ರ ಘಟನೆಯ ಕುರಿತಂತೆ ನ್ಯಾಯಾಂಗ ತನಿಖೆಗೆ ಆಗ್ರಹಪಡಿಸಿದ್ದು ಕೆಲವು ಪ್ರಮುಖ ವಿಚಾರಗಳ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳ ನೇತ್ರತ್ವದ ಸ್ವತಂತ್ರ ಸಮಿತಿಯಿಂದ ತನಿಖೆ ಏರ್ಪಡಿಸುವಂತೆ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ರವರಿಗೆ ಲಿಖಿತ ದೂರು ಸಲ್ಲಿಸಿ ಆಗ್ರಹಪಡಿಸಲಾಗಿದೆ ಎಂದು ವಿವಿಧ ಮೀನುಗಾರರ ಸಂಘಟನೆಗಳು ಇಲ್ಲಿನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸಿ ಕಚ್ಛಾ ರಸ್ತೆಯ ಸುಧಾರಣಿಯ ಹೆಸರಿನಲ್ಲಿ ಖಾಸಗಿ ಮೂಲದ ಕಂಪನಿಯ ಅಮೀಷಕ್ಕೆ ಒಳಗಾಗಿ ಅಭಿವೃದ್ಧಿ ನಿಷೇದಿತ ಕಡಲತೀರದಲ್ಲಿ ಅಕ್ರಮವಾಗಿ ಹೊಸ ರಸ್ತೆ ನಿರ್ಮಿಸಲು ಸರಕಾರಿ ಯಂತ್ರದ ದುರ್ಬಳಕೆ ಮಾಡಿರುವದರ ಹಿಂದೆ ಭಾರಿ ಬೃಷ್ಟಾಚಾರ ನಡೆದಿದೆ ಎಂದು ಹೋರಾಟ ಸಮಿತಿಯು ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನಲ್ಲಿ ಅಪಾದಿಸಿದ್ದು, ಪರಿಸರ ಮತ್ತು ಮೀನುಗಾರರ ಜೀವನೋಪಾಯವೂ ಸೇರಿದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯ ವಿರುದ್ಧದ ನಮ್ಮ ಶಾಂತಿಯುತ ಪ್ರತಿಭಟನೆಗಳು ಮತ್ತು ಕಾನೂನು ಹೋರಾಟವು ವಾಣಿಜ್ಯ ಬಂದರು ಯೋಜನೆಯನ್ನು ಸರಕಾರ ಕೈಬಿಡುವ ವರೆಗೂ ಮುಂದುವರಿಯಲಿದೆಯೆಂದು ಹೊರಾಟ ಸಮಿತಿ ಇಂದು ಹೇಳಿದೆ.
ವಿಶ್ವ ಸಮುದ್ರ ದಿನಾಚರಣೆಯ ಅಂಗವಾಗಿ ಕಾಸರಕೋಡ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಮೀನುಗಾರರು ಸಮುದ್ರ ಪೂಜೆ ನಡೆಸಿದ ನಂತರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮೀನುಗಾರರ ವಿವಿಧ ಸಂಘಟನೆಗಳ ಪ್ರಮುಖರು ಮಾತನಾಡಿ ಉದ್ದೇಶಿತ ವಾಣಿಜ್ಯ ಬಂದರು ಯೋಜನೆ ಈಗಷ್ಟೇ ಆರಂಭಿಕ ಹಂತದಲ್ಲಿದೆ. ತಾಲೂಕಿನ ಪರಿಸರ ಮತ್ತು ಸಾವಿರಾರು ಮೀನುಗಾರ ಕುಟುಂಬಗಳ ಜೀವನೋಪಾಯದ ಹಿತದೃಷ್ಟಿಯಿಂದ ದಿ ಹೊನ್ನಾವರ ಫೋರ್ಟ ಪ್ರೈವೇಟ ಲಿ ಕಂಪನಿಯು ಈ ಹಂತದಲ್ಲಿಯೇ ಬಂದರು ಯೋಜನೆಯನ್ನು ಕೈಬಿಟ್ಟು ಮನೆಗೆ ಮರಳಲಿ ಎನ್ನುವ ಅಗ್ರಹ ಮಾಡುತ್ತೇವೆ. ಅದೇ ಅವರಿಗೆ ಕ್ಷೇಮ. ಅವರು ಯೋಜನೆಯನ್ನು ಕೈಬಿಡುವ ವರೆಗೂ ನಾವು ಕಾನೂನು ಮತ್ತು ಸಂಘಟಿತ ಹೋರಾಟವನ್ನು ಮುಂದುವರಿಸುತ್ತೇವೆ. ಎ೦ದು ಅವರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ, ರಾಷ್ಟೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದಶಿ೯ ಚಂದ್ರಕಾಂತ ಕೊಚರೇಕರ , ಕಡಲ ವಿಜ್ಞಾನಿ ಡಾ. ಪ್ರಕಾಶ ಮೇಸ್ತ, ವಿವಿಧ ಸಂಘಟನೆಗಳ ಜಂಟಿ ಹೋರಾಟ ಸಮಿತಿಯ ಅಧ್ಯಕ್ಷ ರಾಜೇಶ ಜಿ. ತಾಂಡೇಲ, ಮೀನುಗಾರರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಗಣಪತಿ ತಾಂಡೇಲ, ಕಾರ್ಮಿಕ ಸಂಘದ ಕಾರ್ಯದರ್ಶಿ ರಾಜು ತಾಂಡೇಲ, ಭಾಷ್ಕರ ತಾಂಡೇಲ, ಸಂದೀಪ ತಾಂಡೇಲ, ರಮೇಶ ತಾಂಡೇಲ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
ವಿಶ್ವ ಸಾಗರ ದಿನಾಚರಣೆಯ ಅಂಗವಾಗಿ ಕಾಸರಕೋಡು ಟೊಂಕದ ಕಡಲತೀರದಲ್ಲಿ ಸ್ಥಳೀಯ ಮೀನುಗಾರರು ಮತ್ತು ಮೀನುಗಾರ ಸಂಘಟನೆಗಳ ಪ್ರಮುಖರು ಸೇರಿ ಮರಳಿನಲ್ಲಿ ಶಿವಲಿಂಗವನ್ನು ನಿರ್ಮಿಸಿ ಪೂಜೆ ಸಲ್ಲಿಸಿ ಸಮುದ್ರಕ್ಕೆ ಹಾಲೆರೆದು ಕುಬೇರನಿಗೆ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚ್ರೇಕರ , ಡಾ. ಪ್ರಕಾಶ ಮೇಸ್ತ, ಮೀನುಗಾರ ಪ್ರಮುಖರಾದ ರಾಜೇಶ ತಾಂಡೇಲ, ಗಣಪತಿ ತಾಂಡೇಲ, ರಾಜ ತಾಂಡೇಲ, ಭಾಷ್ಕರ ತಾಂಡೇಲ, ರೇಖಾ ತಾಂಡೇಲ, ಸುಸ್ಮಿತಾ ತಾಂಡ, ಸಂದೀಪ ತಾಂಡೇಲ, ರಮೇಶ ತಾಂಡೇಲ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಹುಬ್ಬಳ್ಳಿ ವಿಭಾಗದ ಪವನ ಕುಮಾರ, ಪತ್ರಕರ್ತರಾದ ವಿಶ್ವನಾಥ ಶೆಟ್ಟಿ, ವೆಂಕಟೇಶ್ ಮೇಸ್ತ್, ಶ್ರೀಧರ, ಎಚ್ ಎಲ್ ನಗರೆ ಮುಂತಾದವರು ಉಪಸ್ಥಿತರಿದ್ದರು.
ವರದಿ: ಚಂದ್ರಕಾಂತ ಕೊಚ್ರೇಕರ