ಗುರುಪೂರ್ಣಿಮೆ ಮತ್ತು ಚಾತುರ್ಮಾಸ್ಯ ವೃತಾಚರಣೆ ಸಂಸ್ಕೃತದ ಗುರು ಎಂಬ ಪದವು ಗು ಮತ್ತು ರು ಎಂಬ ಅಕ್ಷರಗಳಿಂದ ಬಂದಿದೆ. ಇಲ್ಲಿ ಗು ಎಂದರೆ ಅಜ್ಞಾನ/ಕತ್ತಲೆ ಮತ್ತು ರು ಎಂದರೆ ನಿವಾರಣೆ/ತೆಗೆಯುವಿಕೆ. ಅಜ್ಞಾನವನ್ನು ಕಿತ್ತೊಗೆಯುವವನೇ ಗುರು. ಹಿಂದೂ ಧರ್ಮದಲ್ಲಿ ಗುರುವಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಪ್ರತಿಯೊಬ್ಬರ ಬದುಕಿನಲ್ಲೂ ಸಾಕಷ್ಟು ಗುರುಗಳಿರುತ್ತಾರೆ. ಕೇವಲ ಅಕ್ಷರ ಕಲಿಸಿದವರಲ್ಲ, ಜೀವನ ಪಾಠ ಹೇಳಿಕೊಡುವ ಅಪ್ಪ, ಅಮ್ಮನಿಂದ ಹಿಡಿದು ಅಪರಿಚಿತರವರೆಗೆ ಏನೊಂದು ಒಳ್ಳೆಯದು ಕಲಿಸಿದವರೆಲ್ಲ ಗುರುವೇ. ಇಂಥ ಗುರುಗಳಿಗೆ ಧನ್ಯವಾದ ಹೇಳಲೊಂದು ವಿಶೇಷ ದಿನ ಗುರು ಪೂರ್ಣಿಮೆ ಧಾರ್ಮಿಕ ಗ್ರಂಥಗಳ ಪ್ರಕಾರ, ಈ ದಿನದಂದು ಗುರುವಿನ ಆಶೀರ್ವಾದವನ್ನು ಪಡೆಯುವ ವ್ಯಕ್ತಿಯು ಅವನ ಜೀವನ ಯಶಸ್ವಿಯಾಗುತ್ತಾನೆ.
ನಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನ ಗುರುವಿನದ್ದಾಗಿದೆ. ನಮ್ಮ ಭವಿಷ್ಯವನ್ನು ರೂಪಿಸಿ ನಮ್ಮನ್ನು ವಿದ್ಯಾವಂತರು ಬುದ್ಧಿವಂತರನ್ನಾಗಿ ಮಾಡುವ ಕಲೆ ನಮ್ಮ ಗುರಗಳದ್ದಾಗಿದೆ. ಹಸಿಮಣ್ಣಿಗೆ ಆಕಾರ ಕೊಡುವ ಗುರು ಎಂಬ ಮಾರ್ಗದರ್ಶಿ ತಂದೆ ತಾಯಿಯ ಸ್ಥಾನಕ್ಕೆ ಸಮಾನರು. ಜ್ಞಾನ ಎಂಬ ಬೆಳಕಿನೆಡೆಗೆ ನಮ್ಮನ್ನು ಕೊಂಡೊಯ್ಯುವ ಈ ಮಹಾನುಭಾವರಾದ ಗುರುಗಳು ನಮ್ಮ ಜೀವನದ ದಿಕ್ಕನ್ನು ಬದಲಾಯಿಸುವವರಲ್ಲಿ ಪ್ರಮುಖರಾಗಿದ್ದಾರೆ. ಹಿಂದೂ ಕ್ಯಾಲೆಂಡರ್‌ನಲ್ಲಿ ಗುರು ಪೂರ್ಣಿಮೆಯನ್ನು ನಮ್ಮ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಗುರುಗಳಿಗೆ ಅರ್ಪಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಗುರು ಅಥವಾ ಶಿಕ್ಷಕರನ್ನು ದೇವರಿಗೆ ಹೋಲಿಸಲಾಗುತ್ತದೆ. ನಿಜವಾದ ಗುರುವು ವ್ಯಕ್ತಿ ಮತ್ತು ಮಹಾನ್ ಶಕ್ತಿಗೆ ಒಂದು ಸಂಪರ್ಕ ಅಥವಾ ಕೊಂಡಿ ಇದ್ದಂತೆ. ಆದ್ದರಿಂದಲೇ ಗುರು ಪೂರ್ಣಿಮೆಯಂದು ಗುರುಗಳಿಗೆ ಶಿಕ್ಷಕರಿಗೆ ಗೌರವ ತೋರುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ನಮ್ಮನ್ನು ಶಿಕ್ಷಣದ ಮೂಲಕ ಉತ್ತಮ ಜೀವನಕ್ಕೆ ಕಾಲಿರಿಸುವಂತೆ ಮಾಡಿದ ಗುರುಗಳಿಗೆ ಈ ದಿನವನ್ನು ಅರ್ಪಿಸಬೇಕು. ಹಿಂದೂ ತಿಂಗಳ ಆಷಾಢ ಮಾಸ (ಜುಲೈ -ಆಗಸ್ಟ್) ದಂದು ಪೂರ್ಣ ಚಂದ್ರನ ದಿನದಂದು ಗುರುವಿಗೆ ವಿಶೇಷ ಗೌರವ ಸಲ್ಲಿಸುವ ದಿನವನ್ನಾಗಿ ಆಚರಿಸಲಾಗುತ್ತದೆ. ವ್ಯಾಸರ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ನಾಲ್ಕು ವೇದಗಳನ್ನು, 18 ಪುರಾಣಗಳನ್ನು ಮಹಾಭಾರತ ಮತ್ತು ಶ್ರೀಮದ್ಭಾಗವತವನ್ನು ರಚಿಸಿದ ಮಹಾತ್ಮರಾಗಿದ್ದಾರೆ ವೇದವ್ಯಾಸರು. ಬೌದ್ಧರಿಗೂ ಗುರು ಪೂರ್ಣಿಮೆ ಮಹತ್ವದ ದಿನವಾಗಿದೆ. ಸಾಂಪ್ರದಾಯಿಕವಾಗಿ ಬೌದ್ಧರು ಬುದ್ಧನಿಗೆ ಗೌರವ ಅರ್ಪಿಸುವ ದಿನವನ್ನಾಗಿ ಗುರುಪೂರ್ಣಿಮೆಯನ್ನು ಆಚರಿಸುತ್ತಾರೆ. ಸಾರನಾಥದಲ್ಲಿ ಪ್ರಥಮ ಉಪದೇಶವನ್ನು ಬುದ್ಧನು ಈ ದಿನ ಮಾಡಿದರೆಂದು ಪ್ರತೀತಿ ಇದೆ. ಗುರು ಪೂರ್ಣಿಮೆಯ ಆಚಾರಗಳು ಹಿಂದೂ ಆಧ್ಯಾತ್ಮಿಕ ಗುರುಗಳನ್ನು ಅವರ ಜೀವನ ಮತ್ತು ಕಲಿಸುವಿಕೆಗಳನ್ನು ಸ್ಮರಿಸಿಕೊಂಡು ಅವರಿಗೆ ಈ ದಿನ ಗೌರವ ಸಲ್ಲಿಸಲಾಗುತ್ತದೆ. ಹಲವಾರು ದೇವಸ್ಥಾನಗಳಲ್ಲಿ ವ್ಯಾಸ ಪೂಜೆಯನ್ನು ನೆರವೇರಿಸಲಾಗುತ್ತದೆ. ಹೂವು ಮತ್ತು ಕೆಲವೊಂದು ಉಡುಗೊರೆಗಳನ್ನು ಅವರ ಗೌರವಕ್ಕಾಗಿ ಈ ದಿನ ಅರ್ಪಿಸಲಾಗುತ್ತದೆ. ಅನುಯಾಯಿಗಳಿಗಾಗಿ ಪ್ರಸಾದ ರೂಪದಲ್ಲಿ ಹಬ್ಬವನ್ನು ಆಚರಿಸುವವರು ಈ ದಿನವನ್ನು ಆಚರಿಸುತ್ತಾರೆ. ಅಂದರೆ ಅನುಯಾಯಿಗಳಿಗೆ ಪ್ರಸಾದ ಮತ್ತು ಫಲ ಪುಷ್ಪಗಳನ್ನು ಅರ್ಪಿಸುವುದಾಗಿದೆ.ಗುರು ಪೂರ್ಣಿಮೆಯನ್ನು ಕೃಷ್ಣ ದ್ವೈಪಾಯನ ವ್ಯಾಸರಿಗೆ ಸಮರ್ಪಿಸಲಾಗಿದೆ. ಹಾಗಾಗಿಯೇ ಈ ದಿನವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ. ಹಿಂದೂ ನಂಬಿಕೆಯ ಪ್ರಕಾರ, ಭಗವಾನ್ ವಿಷ್ಣುವಿನ ಭಾಗಶಃ ಅವತಾರವಾದ ವ್ಯಾಸರು ವೇದಗಳ ಮಂತ್ರಗಳನ್ನು ನಾಲ್ಕು ವೇದಗಳಾಗಿ, ಹದಿನೆಂಟು ಪುರಾಣಗಳಾಗಿ ವಿಂಗಡಿಸಿದ್ದಾರೆ. ಅವರನ್ನು ಬ್ರಹ್ಮ ಸೂತ್ರಗಳ ಲೇಖಕ ಎಂದು ಪರಿಗಣಿಸಲಾಗುತ್ತದೆ. ಅವರು ಏಳು ಚಿರಂಜೀವಿಗಳಲ್ಲಿ ಒಬ್ಬರು. ಮಹಾಭಾರತದಂತ ಮಹಾನ್ ಗ್ರಂಥದ ಕರ್ತೃ ಕೂಡಾ ಹೌದು. ಅವರ ಶಿಷ್ಯರು ಉಪನಿಷತ್ತುಗಳನ್ನು ರಚಿಸಿದರು. ಗುರು ಪೂರ್ಣಿಮೆಯ ದಿನದಂದು ಗುರುಗಳು ಅಥವಾ ಶಿಕ್ಷಕರನ್ನು ಪೂಜಿಸಲಾಗುತ್ತದೆ. ಗುರು ಪೂರ್ಣಿಮಾ ತಿಥಿ ಹಿಂದೂ ತಿಂಗಳ ಆಷಾಢದಲ್ಲಿ ಹುಣ್ಣಿಮೆ (ಪೂರ್ಣಿಮಾ) ಉದಯಿಸುವ ದಿನಾಂಕದಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಈ ಬಾರಿ ಬುಧವಾರ 13ನೇ ತಾರೀಕಿನಂದು ಇಡೀ ಜಗತ್ತಿನಲ್ಲಿ ಆಚರಿಸ್ಪಟ್ಟಿತು.
ವಿಧಿವಿಧಾನಗಳ ಪ್ರಕಾರ, ಗುರು ಪೂರ್ಣಿಮೆಯಂದು ಶಿಷ್ಯನು ಸ್ನಾನ ಮಾಡಿ, ಶುಭ್ರವಾದ ಬಟ್ಟೆಗಳನ್ನು ಧರಿಸಿ, ಪೂಜೆಯನ್ನು ಮಾಡಿ, ವ್ಯಾಸರಿಗೆ ಪ್ರಾರ್ಥನೆ ಮತ್ತು ಮಾಲೆಗಳನ್ನು ಅರ್ಪಿಸಬೇಕು. ನಂತರ ತಮ್ಮ ಗುರುಗಳನ್ನು ಭೇಟಿ ಮಾಡಿ, ಅವರನ್ನು ಸ್ಥಿರ ಸ್ಥಳದಲ್ಲಿ ಕೂರಿಸಬೇಕು ಮತ್ತು ಅವರಿಗೆ ಹಾರವನ್ನು ಅರ್ಪಿಸಬೇಕು. ಅದರ ನಂತರ, ನಮ್ಮ ಗುರುಗಳಿಗೆ ಬಟ್ಟೆ, ಹಣ್ಣುಗಳು, ಹೂವುಗಳು, ಮಾಲೆ ಮತ್ತು ದಕ್ಷಿಣೆಯನ್ನು ಸ್ವಲ್ಪ ಹಣದ ರೂಪದಲ್ಲಿ ಅರ್ಪಿಸಿ ನಂತರ ಅವರ ಆಶೀರ್ವಾದವನ್ನು ಪಡೆಯಬೇಕು. ವ್ಯಾಸ ಪೂರ್ಣಿಮೆಯ ಈ ಪವಿತ್ರ ದಿನದಂದು ಪ್ರಪಂಚದಾದ್ಯಂತ ಎಲ್ಲಾ ಮಠ ಮಂದಿರಗಳಲ್ಲಿ ಸ್ವಾಮೀಜಿಯವರು, ಸನ್ಯಾಸಿಗಳು, ಆಧ್ಯಾತ್ಮಿಕ ಗುರುಗಳು ಚಾತುರ್ಮಾಸ್ಯ ವೃತವನ್ನು ಕೈಗೊಳ್ಳುತ್ತಾರೆ.
ಹಾಗೇಯೇ ನಮ್ಮ ಸಮುದಾಯದವರು ನಂಬಿಕೊಂಡು ಬಂದಂತ ಶೃಂಗೇರಿ ಗುರುಪೀಠದಲ್ಲಿ ಶುಭಕೃತ್ ಸಂವತ್ಸರದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಯವರು ತಮ್ಮ 48ನೇ ಚಾತುರ್ಮಾಸ್ಯ ವ್ರತ ಆಚರಣೆಯನ್ನು ತಮ್ಮ ಉತ್ತರಾಧಿಕಾರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳವರ (7ನೇ ಚಾತುರ್ಮಾಸ್ಯ ವ್ರತದ ಸಂಕಲ್ಪ ಕೈಗೊಂಡರು) ಜೊತೆಗೆ ತಾ.: 13 ಬುಧವಾರ, ಜುಲೈ , 2022ರಂದು ಪ್ರಾರಂಭಿಸಿದರು ಮತ್ತು ಭಾದ್ರಪದ ಪೂರ್ಣಿಮೆ ತಾ.: 10 ಶನಿವಾರ, ಸೆಪ್ಟೆಂಬರ್, 2022ರಂದು ಪೂರ್ಣಗೊಳಿಸಿ ಸೀಮೋಲಂಘನೆಯನ್ನು ಕೈಗೊಳ್ಳಲಿದ್ದಾರೆ. ಆಷಾಢ ಪೂರ್ಣಿಮೆಯಿಂದ ಎರಡು ತಿಂಗಳ ಕಾಲ ಭಾದ್ರಪದ ಪೂರ್ಣಿಮೆಗೆ ಚಾತುರ್ಮಾಸ್ಯ ವ್ರತವನ್ನು ಗುರುಗಳಿಂದ ಶಾಸ್ತ್ರನುನುಸಾರವಾಗಿ ಆಚರಿಸಲಾಗುತ್ತದೆ. ಚಾತುರ್ಮಾಸ್ಯದ ಸಮಯದಲ್ಲಿ, ಗುರುಗಳು ತಮ್ಮ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸುವುದಿಲ್ಲ. ಪರಮ ಬ್ರಹ್ಮನನ್ನು ಧ್ಯಾನಿಸಲು ತಮ್ಮ ಸಮಯವನ್ನು ವಿನಿಯೋಗಿಸಿ, ಅರ್ಹ ಶಿಷ್ಯರಿಗೆ ಶಾಸ್ತ್ರಗಳನ್ನು ಕಲಿಸುವುದು ಮತ್ತು ಅನುಮಾನಗಳನ್ನು ನಿವಾರಿಸುವುದು ಮತ್ತು ಆದ್ಯಾತ್ಮಿಕ ಅನ್ವೇಷಣೆಯನ್ನು ಮಾಡುವುದು ಮುಖ್ಯವಾಗಿರುತ್ತದೆ. ಚಾತುರ್ಮಾಸ್ಯವು ಜಗದ್ಗುರುಗಳಿಗೆ ಭಿಕ್ಷಾ ವಂದನೆ ಸಲ್ಲಿಸುವುದನ್ನು ಭಕ್ತರು ಯಾವಾಗಲೂ ಒಂದು ವಿಶೇಷ ಮತ್ತು ಕರ್ತವ್ಯವೆಂದು ಪರಿಗಣಿಸುತ್ತಾರೆ. ಚಾತುರ್ಮಾಸ್ಯದ ಸಮಯದಲ್ಲಿ. ಜಗದ್ಗುರುಗಳ ದರ್ಶನ ಪಡೆದು ಅವರ ಆಶೀರ್ವಾದ ಸ್ವೀಕರಿಸುವ ಮಹತ್ವದ ಸಂದರ್ಭವೂ ಹೌದು ಈ ಸಮಯದಲ್ಲಿ ಎಲ್ಲಾ ಭಕ್ತರು ಜಗದ್ಗುರುಗಳ ಪಾದಕಮಲಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ. ಇಂತಹ ಪರಮ ಪೂಜ್ಯನೀಯ ಗುರುಗಳು ನಮ್ಮನ್ನು ಶಿಷ್ಯ ವರ್ಗವಾಗಿ ಸ್ವೀಕಾರಮಾಡಿರುವುದು ನಮ್ಮ ಪುಣ್ಯವೇ ಸರಿ.
ವಿಶೇಷವಾಗಿ ಇದೇ ತಿಂಗಳ ಶನಿವಾರ ತಾರೀಖು 16ರಂದು ನಮಗೆ (ಗುರುವಂದನ ಸಮಿತಿ ಉಡುಪಿ ಮತ್ತು ದಕ್ಷಿಣ ಕನ್ನಡ) ಹಾಗೂ ಗುರುದರ್ಶನ ಸಮಿತಿಗೆ ಆದಿತ್ಯವಾರ 17ನೇ ತಾರೀಖಿನಂದು ಗುರುವಂದನೆಗೆ ಅವಕಾಶಮಾಡಿಕೊಟ್ಟಿರುತ್ತಾರೆ. ಹಾಗಾಗಿ ಗುರುವಂದನ ಸಮಿತಿ ಉಡುಪಿ ಮತ್ತು ದಕ್ಷಿಣ ಕನ್ನಡದ ಪ್ರಾಂತ್ಯವರಾದ ನಾವು ಸಮಯಕ್ಕೆ ಸರಿಯಾಗಿ ಅಂದರೆ ತಾ.16 ಶನಿವಾರ 10ಗಂಟೆಗೆ ಸರಿಯಾಗಿ ಗುರುಭವನದಲ್ಲಿ ಸೇರಿ ಸಾಮೂಹಿಕವಾಗಿ ಗುರುವಂದನೆಯನ್ನು ಮಾಡಿ ಗುರುಚರಣಗಳಿಗೆ ನಮಿಸಿ ಪರಮ ತಪಸ್ವಿಗಳಾದ ಗುರುವರ್ಯರ ಪರಮಾನುಗ್ರಹಕ್ಕೆ ಪಾತ್ರರಾಗಿ ಅವರ ಆಶೀರ್ಚನವನ್ನು ಆಲಿಸಿ, ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕೃತಾರ್ಥರಾಗೋಣವಲ್ಲವೇ..?
ಶ್ರೀ ಸುರೇಶ್ ಖಾರ್ವಿ ಕೋಡಿ
ಗುರುವಂದನ ಸಮಿತಿ