ನ ಭೂತೋ ನ ಭವಿಷ್ಯತೇ ಎಂಬ ಜನಪ್ರಿಯ ಮಾತಿದೆ ವಿಷಯವೊಂದರ ಕುರಿತು ಅತಿಶಯವಾದ ಮತ್ತು ಮರೆಯಲಾಗದ ಸಾಧನೆ ನಡೆದರೆ ಈ ಮಾತು ಅನ್ವಯವಾಗುತ್ತದೆ ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ಅಮ್ಮನವರ ನವೀಕೃತ ಶಿಲಾದೇಗುಲ ಲೋಕಾರ್ಪಣೆಯ ಕಾರ್ಯಕ್ರಮವು ಅಂತದೊಂದು ಐತಿಹಾಸಿಕ ದಾಖಲೆ ನಿರ್ಮಿಸಿದ್ದು, ಕೊಂಕಣಿ ಖಾರ್ವಿ ಸಮಾಜದ ಕೀರ್ತಿ ದಶದಿಕ್ಕುಗಳಲ್ಲಿ ದೈದೀಪ್ಯಮಾನವಾಗಿ ಹರಡಿದೆ.
ಒಂಬತ್ತು ದಿನಗಳ ಕಾಲ ನಡೆದ ಕಾರ್ಯಕ್ರಮಗಳು ಕಾಲವೂ ಕೂಡಾ ಅಳಿಸಲಾಗದಂತಹ ಅಭೂತಪೂರ್ವ ಹೆಜ್ಜೆಗುರುತುಗಳನ್ನು ಪಡಿಮೂಡಿಸಿದೆ. ದೇಗುಲ ನಿರ್ಮಾಣ ಕಾರ್ಯದಿಂದ ಹಿಡಿದು ಲೋಕಾರ್ಪಣೆ ಕಾರ್ಯದ ತನಕವೂ ಪರೋಕ್ಷವಾಗಿಯೂ, ಅಪರೋಕ್ಷವಾಗಿಯೂ ಶ್ರಮಿಸಿದ ಕೈಗಳು ನೂರಾರು, ಸಾವಿರಾರು ದೊಡ್ಡದೊಡ್ಡ ತಲೆಗಳ ಹಂಗಿಲ್ಲದೇ, ಜನಸಾಮಾನ್ಯ ಭಕ್ತರ ನೇತೃತ್ವದಲ್ಲಿ ಕ್ಷಿಪ್ರಗತಿಯಲ್ಲಿ ನಿರ್ಮಾಣಗೊಂಡಿರುವ ಭವ್ಯ ದೇಗುಲವೇ ಶ್ರೀ ಮಹಾಂಕಾಳಿ ಅಮ್ಮನವರ ಪುಣ್ಯ ಸನ್ನಿಧಿ.
ಜನಸಾಮಾನ್ಯರ ತೋಳಿನಲ್ಲಿ ಅಜೇಯ ಶಕ್ತಿಯನ್ನು ತುಂಬಿ ಜಗನ್ಮಾತೆ ಶ್ರೀ ಮಹಾಂಕಾಳಿ ಅಮ್ಮನವರು ಭವ್ಯದೇಗುಲ ನಿರ್ಮಾಣ ಕಾರ್ಯವನ್ನು ಮಾಡಿಸಿಕೊಂಡಿದ್ದಾರೆ.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ ಖಾರ್ವಿ ಮತ್ತು ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಮಡಿ ಶಂಕರ ಖಾರ್ವಿಯವರ ಮಾರ್ಗದರ್ಶನದಲ್ಲಿ, ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಶ್ರೀ ರಾಮಪ್ಪ ಖಾರ್ವಿ ನೇತೃತ್ವದಲ್ಲಿ, ಶ್ರೀ ರವಿಶಂಕರ್ ಖಾರ್ವಿಯವರ ನಾಯಕತ್ವದಲ್ಲಿ, ಗುರು ಖಾರ್ವಿ,
ಪೊಕ್ಕೆ ಚಂದ್ರ ಖಾರ್ವಿ ಮುಂತಾದ ಸಹಸ್ರಾರು ಕಾರ್ಯಕರ್ತರ ಅಭೂತಪೂರ್ವ ಸಹಭಾಗಿತ್ವದಲ್ಲಿ ಭವ್ಯ ಶಿಲಾಮಯ ದೇಗುಲ ಇಂದು ತಲೆಯೆತ್ತಿ ನಿಂತಿದೆ. ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನೆಲ್ಲಾ ಬದಿಗೊತ್ತಿ, ಮಹಾಂಕಾಳಿ ಅಮ್ಮನವರ ದೇಗುಲ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡ ಇವರೆಲ್ಲರ ಸೇವಾಕೈಂಕರ್ಯಗಳು ಶ್ಲಾಘನೀಯವಾಗಿದೆ.
ಇದೇ ಸಂದರ್ಭದಲ್ಲಿ ಕೊಂಕಣಿ ಖಾರ್ವಿ ಸಮಾಜದ ಯುವಶಕ್ತಿಯ ಧೀಮಂತ ಇಚ್ಛಾಶಕ್ತಿಯು ಅನಾವರಣಗೊಂಡಿದ್ದು, ಯುವಕರು ಈ ಪವಿತ್ರ ಧಾರ್ಮಿಕ ಸಂಭ್ರಮದಲ್ಲಿ ಮುಂಚೂಣಿಯಲ್ಲಿ ನಿಂತುಕೊಂಡು ಕೆಲಸ ಮಾಡಿದ್ದು ಗಮನಾರ್ಹ ಸಂಗತಿಯಾಗಿದೆ.
ಈ ಪವಿತ್ರ ಧಾರ್ಮಿಕ ಸಂಭ್ರಮ ಅನ್ನಸಂತರ್ಪಣೆಯ ಪುಣ್ಯ ಕಾರ್ಯ ನಿರೀಕ್ಷೆ ಮಾಡಿದ್ದಕ್ಕಿಂತಲೂ ಯಶಸ್ವಿಯಾಗಿದೆ. ಇದೊಂದು ಐತಿಹಾಸಿಕ ದಾಖಲೆಯಾಗಿದೆ ಸುಧೀರ್ ಪಂಡಿತ್ ಇವರ ಮಾರ್ಗದರ್ಶನದಲ್ಲಿ, ನಾಗೇಶ್ ಖಾರ್ವಿ ಕಂಚಗೋಡು ಇವರ ನೇತೃತ್ವದಲ್ಲಿ ನಾಡದೋಣಿ ಮೀನುಗಾರರ ಅಭೂತಪೂರ್ವ ಸಹಕಾರದೊಂದಿಗೆ ಮಹಾ ಅನ್ನಸಂತರ್ಪಣೆ ಕಾರ್ಯವು ಅತ್ಯಂತ ಶಿಸ್ತುಬಧ್ಧವಾಗಿ, ಸುಲಲಿತವಾಗಿ ಎಲ್ಲಿಯೂ ಜನಜಂಗುಳಿಗೆ ಎಡೆಮಾಡಿಕೊಡದೇ ಅತ್ಯಂತ ವ್ಯವಸ್ಥಿತವಾಗಿ, ಶಿಸ್ತುಬದ್ದವಾಗಿ ಅನ್ನದಾಸೋಹದ ಕಾರ್ಯಕ್ರಮ ಸಮರ್ಪಕವಾಗಿ ನೇರವೇರಿದ್ದು ಅಮ್ಮನವರ ಪರಮ ಪ್ರಸಾದ ಸೇವಿಸಿದ ಪ್ರತಿಯೊಬ್ಬರ ಮಾತಿನಲ್ಲಿ ಶ್ಲಾಘನೆಯ ಮಾತುಗಳು ಕೇಳಿ ಬಂದಿದೆ. ಇದೊಂದು ಕೊಂಕಣಿ ಖಾರ್ವಿ ಸಮಾಜದ ಹಿರಿಮೆಯನ್ನು ನೂರ್ಮುಡಿಸಿದೆ. ಸಾರ್ವಜನಿಕರ ಅಪಾರ ಪ್ರಶಂಸೆಗೆ ಪಾತ್ರವಾದ ಈ ಅನ್ನದಾಸೋಹ ಕಾರ್ಯಕ್ರಮದ ರೂವಾರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ಶಿಲಾದೇಗುಲ ಸಮರ್ಪಣೆ ಕಾರ್ಯದಲ್ಲಿ ಪಾಲ್ಗೊಂಡ ಪರಮಪುಜ್ಯ ಸ್ವಾಮೀಜಿಯವರು, ಗಣ್ಯಾತಿಗಣ್ಯರು, ವೇದಮೂರ್ತಿಗಳು, ವಾಗ್ಮಿಗಳು, ಹೀಗೆ ಎಲ್ಲರ ಬಾಯಲ್ಲೂ ಕೊಂಕಣಿ ಖಾರ್ವಿ ಸಮಾಜದ ಅಭೂತಪೂರ್ವ ಒಗ್ಗಟ್ಟು, ಅಪ್ರತಿಮ ಪರಿಶ್ರಮ, ಇಚ್ಛಾಶಕ್ತಿಯ ಗುಣಗಾನಗಳ ಸರಣಿಯೇ ಹರಿದು ಬಂದಿದೆ ಸಮಾಜದ ಪ್ರತಿಯೊಬ್ಬರ ಅಪರಿಮಿತ ಪರಿಶ್ರಮ, ಶ್ರದ್ಧಾಭಕ್ತಿಯ ಪ್ರತಿಫಲವಾಗಿ ಶ್ರೀ ಮಹಾಂಕಾಳಿ ಅಮ್ಮನವರ ಶಿಲಾಮಯ ಭವ್ಯ ದೇಗುಲ ಕೇವಲ ಏಳೇ ತಿಂಗಳಲ್ಲಿ ನಿರ್ಮಾಣಗೊಂಡು ಹೊಸ ಇತಿಹಾಸ ಸೃಷ್ಟಿಯಾಗಿದೆ. ಕೊಂಕಣಿ ಖಾರ್ವಿ ಸಮಾಜದ ಹಿರಿಮೆಗೆ ಗರಿಮೂಡಿದೆ ಭವ್ಯ ಆಲಯದಲ್ಲಿ ವಿರಾಜಮಾನಳಾದ ಜಗನ್ಮಾತೆ ಶ್ರೀ ಮಹಾಂಕಾಳಿ ಅಮ್ಮನವರು ಸರ್ವರಿಗೂ ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸೋಣ.
ಇತಿಹಾಸ ಸದಾಕಾಲವೂ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಕೊಂಕಣಿ ಖಾರ್ವಿ ಮೀನುಗಾರ ಸಮಾಜ ಮತ್ತು ಇತರ ಸಮಾಜದವರ ಅಭೂತಪೂರ್ವ ಸಹಕಾರದಿಂದ ರೂಪುಗೊಂಡ ಶ್ರೀಮಹಾಂಕಾಳಿ ದೇಗುಲ ನಿರ್ಮಾಣ ಕಾರ್ಯದಲ್ಲಿ ಸರ್ಕಾರದಿಂದ ಏನೊಂದೂ ಅನುದಾನ ಸ್ವೀಕಾರವಾಗಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಶಿಲಾದೇಗುಲ ಸಮರ್ಪಣಾ ಕಾರ್ಯದ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಪೂರ್ಣ ಜವಾಬ್ದಾರಿಗಳನ್ನು ರಾಘವೇಂದ್ರ ಕೋಟಾನ್ ರವರು ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಇದಲ್ಲದೇ ಸ್ಥಳೀಯ ಯುವ ಉತ್ಸಾಹಿ ಬೈಣಿ ಸತೀಶ್ ಖಾರ್ವಿ ಮತ್ತು ಬಾರ್ಕೂರು ಸಂತೋಷ್ ಖಾರ್ವಿಯವರು ಸಂಪೂರ್ಣ ಕಾರ್ಯಕ್ರಮಗಳಲ್ಲಿ ಪಾದರಸದಂತೆ ಓಡಾಡಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ ಅವರಿಗೆ ಅಭಿನಂದನೆಗಳು. ಮಹಿಳಾ ಮಂಡಳಿಯ ಸರ್ವ ಸದಸ್ಯರು, ಆರು ಜನ ಪಠೇಲರು, ಹನ್ನೆರಡು ಜನ ಮೊಕ್ತೇಸರರು ಮತ್ತು ಗಂಗೊಳ್ಳಿಯ ಕೊಂಕಣಿ ಖಾರ್ವಿ ಸಮಾಜದ ಸರ್ವಸದಸ್ಯರು ದೇಗುಲ ನಿರ್ಮಾಣ ಕಾರ್ಯದಲ್ಲಿ ವಿಶೇಷ ಮುತುವರ್ಜಿಯಿಂದ ಕೆಲಸ ಮಾಡಿ ಶ್ಲಾಘನೆಗೆ ಪಾತ್ರರಾಗಿದ್ದಾರೆ ಜಗನ್ಮಾತೆಯ ದೇಗುಲ ನಿರ್ಮಾಣದ ಈ ಪುಣ್ಯ ಕಾರ್ಯದಲ್ಲಿ ತಮ್ಮನ್ನು ಶ್ರದ್ಧೆಭಕ್ತಿಯಿಂದ ಸಮರ್ಪಿಸಿಕೊಂಡ ಸರ್ವರಿಗೂ ಕೊಂಕಣಿ ಖಾರ್ವಿ ಸಮಾಜದ ಪರವಾಗಿ ಖಾರ್ವಿ ಆನ್ಲೈನ್ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಸುಧಾಕರ್ ಖಾರ್ವಿ
Editor
www.kharvionline.com