ಕರಾವಳಿಯಲ್ಲಿ ನಿಲ್ಲದ ವರುಣಾರ್ಭಟ..! ಬಿಗಡಾಯಿಸಿದ ಪ್ರವಾಹ ಪರಿಸ್ಥಿತಿ..!


ನಮ್ಮ ದೇಶದ ಋತುಚಕ್ರವನ್ನು ಬೇಸಿಗೆಕಾಲ, ಮಳೆಗಾಲ ಮತ್ತು ಚಳಿಗಾಲ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ ಹವಾಮಾನ ಬದಲಾವಣೆಯಿಂದ ಮಳೆಗಾಲ ಮುಗಿದ ಬಳಿಕವೂ ಜನವರಿ ತನಕ ಅಕಾಲಿಕ ಮಳೆ ಸುರಿಯುತ್ತಿರುವುದರಿಂದ ಅಕಾಲಿಕ ಮಳೆಗಾಲ ಎಂಬ ಹೊಸ ಋತುಚಕ್ರ ಸೇರ್ಪಡೆಗೊಂಡಿದೆ. ಇದು ಕಳೆದ ಮೂರು ವರ್ಷಗಳ ಬೆಳವಣಿಗೆ ಇದಕ್ಕೂ ಮುನ್ನ 2018 ರಲ್ಲಿ ಉತ್ತರಕರ್ನಾಟಕ, ಕೊಡಗು, ಮಲೆನಾಡು ಭಾಗಗಳಲ್ಲಿ ಮಳೆಯಿಂದ ಪ್ರವಾಹ ಪರಿಸ್ಥಿತಿ, ಭೂಕುಸಿತ ಉಂಟಾಗಿತ್ತು 2019 ರಲ್ಲಿ ಮುಂಗಾರು ದುರ್ಬಲವಾಗಿದ್ದರೆ ತದ ನಂತರದ ವರ್ಷಗಳಲ್ಲಿ ಜನವರಿ ತನಕ ಅಕಾಲಿಕ ಮಳೆ ಉಂಟಾಗಿತ್ತು.

ಪ್ರಸ್ತುತ ದೇಶದಾದ್ಯಂತ ಕುಂಭದ್ರೋಣ ಮಳೆ ಸುರಿಯುತ್ತಿದೆ ಕಳೆದ ಒಂದು ವಾರದಿಂದ ನಿರಂತರವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆ ಕರಾವಳಿಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ ನೆರೆ, ಪ್ರವಾಹ, ಚಂಡಮಾರುತ, ಸಮುದ್ರ ಕೊರೆತಗಳು ಕರಾವಳಿ ಜಿಲ್ಲೆಗೆ ಸಾಮಾನ್ಯ ಸಂಗತಿ ಪಶ್ಚಿಮಘಟ್ಟಗಳ ಶ್ರೇಣಿಗಳಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಕರಾವಳಿಯಲ್ಲಿ ಹರಿದು ಸಮುದ್ರ ಸೇರುವ ನದಿಗಳು ಮಳೆಗಾಲದಲ್ಲಿ ಮೈದುಂಬಿಕೊಂಡು ನೆರೆ ಸೃಷ್ಟಿಯಾಗುವುದು ಕೂಡಾ ಪ್ರತಿವರ್ಷದ ಸಹಜ ಪ್ರಕ್ರಿಯೆ ಪ್ರಸ್ತುತ ಪರಿಸ್ಥಿತಿ ಉಲ್ಬಣಗೊಂಡಿದೆ ಒಂದು ಕಡೆ ನದಿನೀರು ಅಪಾಯಮಟ್ಟವನ್ನು ಮೀರಿ ಜನವಸತಿ ಗ್ರಾಮಗಳನ್ನು ಮುಳುಗಿಸಿದೆ ಮತ್ತೊಂದೆಡೆ ನಗರ ಪ್ರದೇಶಗಳಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೇ ಸಿಕ್ಕ ಸಿಕ್ಕ ಕಡೆ ನೀರು ಹರಿದು ಹೋಗಿ ಕೃತಕ ನೆರೆ ಸೃಷ್ಟಿಯಾಗಿದೆ ಮಂಗಳೂರು ಮತ್ತು ಉಡುಪಿ ನಗರಗಳು ಕಳೆದ ಐದು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಜಲಾವೃತಗೊಂಡು ನಲುಗಿ ಹೋಗಿತ್ತು ಈಗ ಸ್ವಲ್ಪ ಮಳೆ ಕಡಿಮೆಯಾದರೂ ಪರಿಸ್ಥಿತಿ ಅದೇ ರೀತಿಯಲ್ಲಿ ಪುನರಾವರ್ತನೆಯಾಗುವ ಸಾಧ್ಯತೆ ಇದೆ ಯಾಕೆ ಹೀಗಾಗುತ್ತದೆ ಎಂದು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಕಾರಣಗಳು ನಮ್ಮ ಕಣ್ಣ ಮುಂದೆಯೇ ಇದೆ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೇ ಸಿಕ್ಕ ಸಿಕ್ಕಲ್ಲಿ ಕಟ್ಟಿದ ಬೃಹತ್ ಕಟ್ಟಡಗಳು, ನೀರು ಹರಿದು ಹೋಗುವಲ್ಲೇ ಕಟ್ಟಿದ ಮನೆಗಳು, ನೀರಿನ ಮೂಲದ ಜವಗು ಪ್ರದೇಶ, ಕೆರೆಗಳನ್ನು ಅತಿಕ್ರಮಿಸಿ ಮಣ್ಣು ತುಂಬಿಸಿ ಮಾಡಲಾದ ಮನೆಸೈಟುಗಳು, ಗಗನಚುಂಬಿ ಕಟ್ಟಡಗಳು ಇತ್ಯಾದಿ ಇತ್ಯಾದಿ ಕಾರಣಗಳು ಮಂಗಳೂರು ಮತ್ತು ಉಡುಪಿ ನಗರದ ಕೃತಕ ನೆರೆಗೆ ಮುಖ್ಯ ಕಾರಣವೆಂದು ಹೇಳಬಹುದು.

ನದಿಗಳು ತುಂಬಿ ಹರಿದು ನೆರೆ ಪರಿಸ್ಥಿತಿ ಸೃಷ್ಟಿಯಾದರೂ, ಮನೆಮಠ ಬಿಡುವಂತ ಸಂದರ್ಭ ಬರಲಾರದು ಎಂದು ನಾವು ದೃಡ ವಿಶ್ವಾಸದಿಂದ ಹೇಳುತ್ತಿದ್ದೆವು ಆದರೆ ಈಗ ಪರಿಸ್ಥಿತಿ ಕೈಮೀರಿದೆ ಮೀತಿಮೀರಿದ ಮಾನವ ಚಟುವಟಿಕೆಗಳು, ಪರಿಸರ ನಾಶ ನಮ್ಮ ಕಾಲಬುಡದಲ್ಲಿ ಅಪಾಯಕಾರಿ ಸನ್ನಿವೇಶಗಳನ್ನು ಸೃಷ್ಟಿಸಿದೆ. ಈ ಸಾಂಧರ್ಭಿಕ ಸನ್ನಿವೇಶಗಳ ಉದಾಹರಣೆಯಾಗಿ ಬೈಂದೂರು ತಾಲೂಕಿನ ನಾವುಂದ, ಪಡುಕೋಣೆ, ಸಾಲ್ಬುಡ ಉದ್ದುಬೆಟ್ಟು ಗ್ರಾಮಗಳು ಸೌಪರ್ಣಿಕಾ ನದಿನೀರಿನ ಪ್ರವಾಹಕ್ಕೆ ಅಕ್ಷರಶಃ ಮುಳುಗಡೆಯಾಗಿದೆ ಇದಕ್ಕೆ ಮುಖ್ಯ ಕಾರಣ ಅವೈಜ್ಞಾನಿಕ ಕಾಮಗಾರಿಯ ಬಂಟ್ವಾಡಿ ವೆಂಟೆಡ್ ಡ್ಯಾಂ ಎಂಬ ಜನರು ಆರೋಪಿಸುತ್ತಾರೆ ಸೌಪರ್ಣಿಕಾ ನದಿ ನೀರು ತ್ರಾಸಿ ಮರವಂತೆಯಲ್ಲಿ ಹರಿದು ವೃತ್ತಾಕಾರವಾಗಿ ನಾವುಂದ ಅರೆಹೊಳೆ ಮೂಲಕವಾಗಿ ಬಂದು ಆರಾಟೆ ಮಾರ್ಗವಾಗಿ ಸಮುದ್ರ ಸೇರುತ್ತದೆ ವಿನಹಾ ಮರವಂತೆ ಮಾರಸ್ವಾಮಿ ದೇಗುಲದ ಎದುರು ಇರುವ ಸಮುದ್ರವನ್ನು ಸೇರುವುದಿಲ್ಲ.ಇಲ್ಲಿ ಸಮುದ್ರಕ್ಕೂ ನದಿಗೂ ಇರುವ ಅಂತರ ಕೇವಲ ನೂರೈವತ್ತು ಮೀಟರ್ ಮಾತ್ರ. ಇದು ವಿಚಿತ್ರವಾದರೂ ಸತ್ಯ. ನನಗೆ ಇನ್ನೂ ನೆನಪಿದೆ.1982 ರಲ್ಲಿ ಪಂಚಗಂಗಾವಳಿ ನದಿಯಲ್ಲಿ ನೆರೆ ಬಂದು ಕುಂದಾಪುರ ಖಾರ್ವಿಕೇರಿ ನದಿತಟದಲ್ಲಿರುವ ನಮ್ಮ ಮನೆ ಸೇರಿದಂತೆ ಅನೇಕ ಮನೆಗಳು ನಾಶವಾಗಿದ್ದವು ನಾವೆಲ್ಲರೂ ಗರ್ಲ್ ಶಾಲೆಯ ಗಂಜಿಕೇಂದ್ರದಲ್ಲಿದ್ದೆವು.

ಆಗ ನಮಗೆ ಸಿಕ್ಕಿದ ಪರಿಹಾರ ಪುಡಿಗಾಸು ಮಾತ್ರ ನದಿತೀರದ ಜನರ ಬವಣೆ ಈ ಪರಿಯಾದರೆ ಕಡಲತೀರದ ಜನರ ಮಳೆಗಾಲದ ಸಂಕಷ್ಟ ಮತ್ತಷ್ಟೂ ಭಯಾನಕ. ನದಿನೀರು ತುಂಬಿಸಿಕೊಂಡು ಸೊಕ್ಕುವ ಕಡಲಿನ ಅಲೆಗಳು ಮೀನುಗಾರರ ಮನೆಗಳಿಗೆ ನೇರವಾಗಿ ಅಪ್ಪಳಿಸುತ್ತದೆ. ಮೀನುಗಾರರ ಮನೆ, ನೆಟ್ಟು ಬೆಳೆಸಿದ ತೆಂಗಿನಮರಗಳು ಕಡಲ ಪಾಲಾಗುತ್ತದೆ. ಇಂತಹ ಪರಿಸ್ಥಿತಿ ಸಮುದ್ರ ತೀರದ ಮುಖ್ಯವಾಗಿ ಸಾಂಪ್ರದಾಯಿಕ ಮೀನುಗಾರರಾದ ಕೊಂಕಣಿ ಖಾರ್ವಿ ಸಮಾಜದವರು ಹೆಚ್ಚಾಗಿ ನೆಲೆಸಿರುವ ಗಂಗೊಳ್ಳಿ, ಕಂಚಗೋಡು, ಅಂಕೋಲಾದ ಮಂಜುಗುಣಿ ಪ್ರದೇಶದಲ್ಲಿ ಸೃಷ್ಟಿಯಾಗಿದೆ. ಇಲ್ಲಿ ಕೊಂಕಣಿ ಖಾರ್ವಿ ಸಮಾಜದ ಬಡ ಮೀನುಗಾರರ ಮನೆಗಳು ಕಡಲಕೊರೆತದಿಂದ ಹಾನಿಗೊಳಗಾಗಿದೆ ತೆಂಗಿನಮರಗಳು ಸಮುದ್ರ ಪಾಲಾಗಿದೆ. ಕೊಂಕಣಿ ಖಾರ್ವಿ ಸಮಾಜದ ಮೀನುಗಾರರು ಅಕ್ಷರಶಃ ನಲುಗಿ ಹೋಗಿದ್ದು, ಭೀತಿಯಲ್ಲಿ ದಿನ ದೂಡುತ್ತಿದ್ದಾರೆ. ಸರ್ಕಾರ ಕೂಡಲೇ ಮೀನುಗಾರರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ.

ಪಡುವಣ ಕರಾವಳಿಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಕಡಲಕೊರೆತ ಸಹಜ ಪ್ರಕ್ರಿಯೆ ದಕ್ಷಿಣದ ಉಳ್ಳಾಲದಿಂದ ಹಿಡಿದು ಉತ್ತರದ ಕಾರವಾರದ ತನಕವೂ ಇದು ಸಾಮಾನ್ಯ ಕಡಲಕೊರೆತ ಸಂತ್ರಸ್ತ ಸ್ಥಳಗಳಿಗೆ ಮಂತ್ರಿ ಮಾಗಧರು, ರಾಜಕಾರಣಿಗಳು, ಅಧಿಕಾರಿಗಳು ಭೇಟಿ ನೀಡಿ ಶಾಶ್ವತ ಪರಿಹಾರದ ಭರವಸೆ ನೀಡುತ್ತಾರೆ. ಮಳೆಗಾಲ ಮುಗಿದು ಕಡಲು ಶಾಂತವಾಗುವ ತನಕ ಈ ನಾಟಕ ನಡೆಯುತ್ತಲೇ ಇರುತ್ತದೆ. ಕಡಲಕೊರೆತವನ್ನು ತಡೆಗಟ್ಟುವ ಯೋಜನೆಗಳು ಪ್ರತಿವರ್ಷ ನವೀಕರಣಗೊಳ್ಳುತ್ತಲೇ ಇರುತ್ತದೆ. ಪ್ರತಿವರ್ಷವೂ ಕಡಲಿಗೆ ಕಲ್ಲು ಹಾಕಿ ದುಡ್ಡುಹೊಡೆಯುತ್ತಾರೆ. ಕಡಲ ತಡೆಗೋಡೆ ಕಾರ್ಯವನ್ನು ಸಮರ್ಪಕವಾಗಿ ಮತ್ತು ವೈಜ್ಞಾನಿಕವಾಗಿ ಮಾಡಿದ್ದಾರೋ ಇಲ್ಲವೋ ಎಂಬುದರ ಮಾಹಿತಿ ಸಂಬಂಧಪಟ್ಟವರಿಗೆ ಬೇಕಾಗಿಲ್ಲ. ಕಡಲಕೊರೆತವನ್ನು ತಡೆಗಟ್ಟುವ ಶಾಶ್ವತ ಪರಿಹಾರದ ಯೋಜನೆಗಳ ಬದಲು ತುರ್ತು ಹಾಗೂ ತಾತ್ಕಾಲಿಕ ನಿವಾರಣೋಪಾಯಗಳೇ ಸಂತ್ರಸ್ತರನ್ನು ಬಿಟ್ಟು ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ, ಮಧ್ಯವರ್ತಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಲಾಭದಾಯಕವಾಗಿದೆ. ಪ್ರಸ್ತುತ ಸರ್ಕಾರ ಕಡಲಕೊರೆತವನ್ನು ತಡೆಗಟ್ಟುವ ಆಧುನಿಕ ತಂತ್ರಜ್ಞಾನದ ಯೋಜನೆಯನ್ನು ಪ್ರಸ್ತಾಪನೆ ಮುಂದಿಟ್ಟುಕೊಂಡು ಕಡಲತೀರದ ವಾಸಿಗಳಲ್ಲಿ ಬಣ್ಣದ ಕನಸುಗಳನ್ನು ಬಿತ್ತನೆ ಮಾಡಿದೆ. ಇದು ಮಳೆಗಾಲ ಮುಗಿಯುವ ತನಕವೂ ನಡೆಯುತ್ತಲೇ ಇರುತ್ತದೆ. ನಂತರ ಈ ಯೋಜನೆಗಳ ಕಡತಗಳಿಗೆ ಜೀವ ಬರುವುದು ಮುಂದಿನ ಮಳೆಗಾಲದಲ್ಲಿ. ಅಲ್ಲಿಯ ತನಕ ಬಣ್ಣದ ಕನಸುಗಳು ಚಾಲ್ತಿಯಲ್ಲಿರುತ್ತದೆ.

ಕರಾವಳಿಯಲ್ಲಿ ಈ ಪರಿಯಲ್ಲಿ ಕುಂಭದ್ರೋಣ ಮಳೆ ಬರಲು ಮುಖ್ಯವಾಗಿ ವಾತಾವರಣದಲ್ಲಿ ರೂಪುಗೊಂಡ ಕಡಿಮೆ ಒತ್ತಡ ಪ್ರದೇಶ ಮತ್ತು ಕಡಲತೀರದಾಚೆಯ ಸುಳಿ ಎಂದು ಪವನ ವಿಜ್ಞಾನಿಗಳು ಗುರುತಿಸಿದ್ದಾರೆ. ಇವುಗಳು ರೂಪುಗೊಂಡು ವಿನಾಶಕಾರಿ ಮಳೆಯಾಗಲು ವಾತಾವರಣದಲ್ಲಿನ ಪ್ರಬಲ ಉಷ್ಣತೆಯೇ ಮೂಲ ಎಂದು ಅವರು ಅಭಿಪ್ರಾಯ ಪಡುತ್ತಾರೆ. ನೀರು, ನೆಲ, ಅರಣ್ಯದಂತಹ ಪ್ರಕೃತಿಯ ವ್ಯವಸ್ಥೆಯ ಪ್ರತಿಯೊಂದು ಘಟಕಕ್ಕೂ ಧಕ್ಕೆಯನ್ನುಂಟುಮಾಡಿದರ ಪ್ರತಿಫಲ ನಾವಿಂದು ಉಣ್ಣುತ್ತಿದ್ದೇವೆ. ಖನಿಜಗಳ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ರಸ್ತೆಗಳ ನಿರ್ಮಾಣಕ್ಕಾಗಿ ನಡೆಯುವ ನಿರಂತರ ಸ್ಪೋಟಗಳು ಭೂಮಿಯ ಶಿಲಾಸ್ಥರಗಳನ್ನು ಸಡಿಲಗೊಳಿಸಿದೆ. ಇದರಿಂದ ಭೂಕುಸಿತಗಳು ಉಂಟಾಗುತ್ತದೆ.

ಇತ್ತೀಚೆಗೆ ತೀವ್ರ ಕಡಲಕೊರೆತಕ್ಕೆ ಗುರಿಯಾಗಿರುವ ಮರವಂತೆಯಲ್ಲಿ ಸರ್ಕಾರ ಡಕ್ ಪುಟ್ ತಡೆಗೋಡೆ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಯೋಜನೆ ರೂಪಿಸಿದ್ದು,ಅದಕ್ಕೆ ಯಾವಾಗ ಕಾಲ ಕೂಡಿ ಬರುತ್ತದೆಯೋ ಗೊತ್ತಿಲ್ಲ. ಕಡಲ ತಡೆಗೋಡೆ ಯಶಸ್ವಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಮೊದಲು ಕಡಲ ಮರಳಿನ ರಾಶಿಯಲ್ಲಿ ಒಂದುವರ ಮೀಟರ್ ಆಳದಲ್ಲಿ ಜೀಯೋಪ್ಯಾಭ್ರಿಕ್ ಶೀಟ್ ಹಾಕಿ ಅದರ ಮೇಲೆ ಕಲ್ಲುಗಳನ್ನು ಪೇರಿಸುತ್ತಾ ಹೋಗುವುದು ವೈಜ್ಞಾನಿಕ ಕ್ರಮ. ಆದರೆ ಹೆಚ್ಚಿನ ಕಡೆ ಗುತ್ತಿಗೆದಾರರು ಇದನ್ನು ಹಾಕುವುದೇ ಇಲ್ಲ.ಈ ಜೀಯೋಪ್ಯಾಭ್ರಿಕ್ ಶೀಟ್ ಗಳು ಮರಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ ಮತ್ತು ಕಲ್ಲುಗಳನ್ನು ಜಾರದಂತೆ ನೋಡಿಕೊಳ್ಳುತ್ತದೆ. ಜೀಯೋಪ್ಯಾಭ್ರಿಕ್ ಹಾಕದೇ ಇದ್ದಲ್ಲಿ ಕಲ್ಲುಗಳು ಕಡಲಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತದೆ.

ಮರವಂತೆ ಬೀಚ್ ನಲ್ಲಿ ಕಡಲಕೊರೆತವನ್ನು ತಡೆಯಲು ಗ್ರಾಯಿನ್ ತಂತ್ರಜ್ಞಾನ ಆಳವಡಿಸಲಾಗಿದೆ. ಇದನ್ನು ಮುಂಬೈನ ನಾರಿಮನ್ ಬೀಚ್ ನಲ್ಲಿ ಪ್ರಥಮ ಬಾರಿಗೆ ಆಳವಡಿಸಲಾಯಿತು ಇದರ ಪ್ರಕಾರ ಮರವಂತೆ ಕಡಲತೀರದಲ್ಲಿ ಮೂರು ಕೀಮೀ ಉದ್ದಕ್ಕೂ 24 ತಡೆಗೋಡೆ ನಿರ್ಮಾಣ ಮಾಡಲಾಗಿದ್ದು,ಅವುಗಳು T ಮತ್ತು I ಶೇಪ್ ನಲ್ಲಿವೆ. ಇದರ ಪರಿಣಾಮವಾಗಿ ಕಡಲಲೆಗಳ ಸಹಜ ಪ್ರಕ್ರಿಯೆಯಿಂದ ಮರಳು ಶೇಖರಣೆಯಾಗಿ ಅಲ್ಲಿ ಕಡಲಕೊರೆತ ಬಹುಮಟ್ಟಿಗೆ ಕಡಿಮೆಯಾಗಿದೆ. ಹಾಗಂತ ಇದೇ ತಂತ್ರಜ್ಞಾನವನ್ನು ಎಲ್ಲಾ ಬೀಚ್ ಗಳಲ್ಲಿ ಅಳವಡಿಸಲು ಸಾಧ್ಯವಿಲ್ಲ.ಆಯಾ ಕಡಲತೀರಗಳ ಸ್ವರೂಪವನ್ನು ಅವಲಂಬಿಸಿ ಈ ತಂತ್ರಜ್ಞಾನ ಅಳವಡಿಸುತ್ತಾರೆ. ಕೇರಳದ ಕಾಸರಗೋಡು ನೆಲ್ಲಿಕುನ್ನಿ ಕಡಲತೀರದಲ್ಲಿ ಕೇರಳ ಸರ್ಕಾರ ಸೀವೇವ್ ತಂತ್ರಜ್ಞಾನ ಆಳವಡಿಸಿ ಕಡಲಕೊರೆತ ತಡೆಗೋಡೆ ಯೋಜನೆ ಅನುಷ್ಠಾನಗೊಳಿಸಿದೆ. ಇದೇ ತಂತ್ರಜ್ಞಾನವನ್ನು ಉಳ್ಳಾಲದ ಉಚ್ಚಿಲದಲ್ಲಿ ಆಳವಡಿಸಲು ಸ್ಥಳೀಯರು ವಿರೋಧಿಸಿದ್ದು,ಕಡಲ ಪರಿಸರದ ಹಿತದೃಷ್ಟಿ ಈ ವಿರೋಧಕ್ಕೆ ಕಾರಣವಾಗಿದೆ.

ಮಾನವ ಚಟುವಟಿಕೆಯು ಭೂಮಿಯ ವ್ಯವಸ್ಥೆಗಳು ಮತ್ತು ಋತು ಚಕ್ರಗಳನ್ನು ಬಹುವಾಗಿ ಮಾರ್ಪಡಿಸಬಲ್ಲದು. ಪ್ರಪಂಚದಾದಂತ್ಯ ಉಂಟಾಗಿರುವ ಅರಣ್ಯ ನಾಶದಿಂದ ಭೂಮಿಯ ವಾಯುಗುಣದ ನಮೂನೆಯಲ್ಲಿಯೇ ಬದಲಾವಣೆಯಾಗಿದೆ. ಇದರ ಸ್ಪಷ್ಟ ಚಿತ್ರಣ ಇತ್ತೀಚಿನ ವರ್ಷಗಳಲ್ಲಿ ಕಾಣಬಹುದಾಗಿದೆ. ಮೀತಿಮೀರಿದ ಕೈಗಾರಿಕೀರಣ ,ಜನಸಂಖ್ಯಾ ಹೆಚ್ಚಳ ಮತ್ತು ನೈಸರ್ಗಿಕ ಸಂಪನ್ಮೂಲಗಳ ಶೋಷಣೆ ಪರಿಸರವನ್ನು ಅವ್ಯಾಹತವಾಗಿ ಭಾಧಿಸಿದೆ. ಮಾನವ ಚಟುವಟಿಕೆಗಳಿಂದ ಪರಿಸರದಲ್ಲಿ ಉಂಟಾಗಿರುವ ಕೆಲವು ಬದಲಾವಣೆಗಳು ತುಂಬಾ ದೊಡ್ಡ ಪ್ರಮಾಣದಲ್ಲಿದ್ದು, ಸರಿಪಡಿಸಲು ಅಸಾಧ್ಯವಾದುದಾಗಿದೆ. ಪ್ರವಾಹ, ಭೂಕಂಪ, ಚಂಡಮಾರುತ, ಕಡಲಕೊರೆತಗಳು ನಿಸರ್ಗ ಸಹಜವಾದವುಗಳು ಅದೇನೇ ಆದರೂ ಮಾನವನ ಚಟುವಟಿಕೆಗಳಿಂದ ಅವುಗಳು ಸಂಭವಿಸುವ ವೇಗ ಅವುಗಳ ಪರಿಣಾಮದ ತೀವ್ರತೆ ಹೆಚ್ಚುತ್ತದೆ. ತಮ್ಮ ಪರಿಸರವನ್ನು ಬದಲಾಯಿಸುವ ಶಕ್ತಿ ಮನುಷ್ಯರಿಗಿದೆ. ಆದರೆ ಈ ಬದಲಾವಣೆಗಳು ಒಂದಾಗಿ ಜೀವಗೋಳದ ಮೇಲೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮ ತರಬಹುದು. ನಾವು ಇಂದು ಭೂಮಿಯನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆಯೋ ಅದಕ್ಕನುಗುಣವಾಗಿ ಇರುತ್ತದೆ ನಮ್ಮ ಭವಿಷ್ಯತ್ತಿನ ಬದುಕು.

ಉಮಾಕಾಂತ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *