ಕೊಂಕಣಿ ಖಾರ್ವಿ ಸಮಾಜ ಭಾಂದವರೆಲ್ಲರಿಗೂ ಹೋಳಿಹಬ್ಬದ ಶುಭಾಶಯಗಳು

ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳಿಂದಾಗಿ ಜಗತ್ತು ನಮ್ಮ ಊಹೆಗೂ ನಿಲುಕದಷ್ಟು ಸಂಕೀರ್ಣಗೊಂಡಿದೆ. ಈ ಸಂಕೀರ್ಣ ಜಗತ್ತಿನ ನಾಗಲೋಟಕ್ಕೆ ಹಲವು ಸಂಸ್ಕೃತಿ, ಆಚರಣೆಗಳು ನೇಪಥ್ಯಕ್ಕೆ ಸರಿದರೂ, ಕೆಲವು ಸಮಾಜದ ಸಂಸ್ಕೃತಿ ಆಚರಣೆಗಳು ಕಾಲದ ಪ್ರವಾಹದಲ್ಲಿ ಎಲ್ಲವನ್ನೂ ಎದುರಿಸಿ ಗಟ್ಟಿಯಾಗಿ ಬೇರೂರಿದೆ. ಕೊಂಕಣಿ ಖಾರ್ವಿ ಸಮಾಜದ ಹೋಳಿಹಬ್ಬದ ವೈಭವಪೂರ್ಣ ಆಚರಣೆಗಳು ಇಂದಿಗೂ ನಳನಳಿಸುತ್ತಿರುವುದು ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ.

ಇಡೀ ದಕ್ಷಿಣ ಭಾರತದಲ್ಲಿಯೇ ಕುಂದಾಪುರ ಖಾರ್ವಿ ಸಮಾಜದ ಹೋಳಿಹಬ್ಬದ ಆಚರಣೆಯು ವೈಶಿಷ್ಟ್ಯಪೂರ್ಣವಾಗಿ ಗುರುತಿಸಲ್ಪಟ್ಟಿದ್ದು, ಸಾಂಸ್ಕೃತಿಕ ನೆಲೆಗಟ್ಟಿನ ಸಾಂಪ್ರದಾಯಿಕ ಆಚರಣೆಯಾಗಿ ವಿಧೇಯಿಸಲ್ಪಟ್ಟಿದ್ದೆ. ನಿರಂತರವಾಗಿ ಆರುದಿನಗಳ ಕಾಲ ಸಂಭ್ರಮ ಉಲ್ಲಾಸಗಳಿಂದ ನಡೆಯುವ ಹೋಳಿಹಬ್ಬದ ಆಚರಣೆಗಳು‌ ಕೊಂಕಣಿ ಖಾರ್ವಿ ಸಮಾಜದ ಸಮೃದ್ಧ ಜನಪದ ಸಂಸ್ಕೃತಿಯನ್ನು ಜಗತ್ತಿನ ಎದುರು ಅನಾವರಣಗೊಳಿಸುತ್ತದೆ.

ಕುಂದಾಪುರ ಕೊಂಕಣಿ ಖಾರ್ವಿ ಸಮಾಜದ ಕೇಂದ್ರ ಸ್ಥಾನವಾಗಿರುವ ಶ್ರೀ ಮಹಾಕಾಳಿ ಅಮ್ಮನವರ ದಿವ್ಯ ಸಾನ್ನಿಧ್ಯದಲ್ಲಿ ಹೋಳಿಹಬ್ಬದ ಆಚರಣೆಗೆ ವಿದ್ಯುಕ್ತವಾಗಿ ಚಾಲನೆ ದೊರಕುತ್ತದೆ. ಹತ್ತುಸಮಸ್ತರು ನಿಶ್ಚಯಿಸಿದಂತೆ ಹೋಳಿಹಬ್ಬದ ಆಚರಣೆಯ ರೂಪುರೇಷೆಯಂತೆ ಪ್ರಥಮ ದಿನ ಕುಂದೇಶ್ವರ ಗಡ್ಡೆ ಕಾರ್ಯಕ್ರಮ. ಗಡ್ಡೆಯಂದರೆ ಶಿವನ ಗಣಗಳು ಎಂದರ್ಥ ಶಿವನ ಗಣಗಳು ಹೋಳಿಹಬ್ಬದ ಪರ್ವಕಾಲದಲ್ಲಿ ನಿರ್ದಿಷ್ಟ ವ್ಯಕ್ತಿಗಳ ಮೈಮೇಲೆ ಆವಾಹನೆಗೊಳ್ಳುತ್ತದೆ. ಈ ಗಡ್ಡೆಗಳು ಆಕಾಶದತ್ತ ಮುಖ ಮಾಡಿ ತಮ್ಮದೇ ಭಾಷೆಯಲ್ಲಿ ಸಂಭಾಷಿಸುತ್ತಾರೆ. ಗಣಗಳ ಒಡೆಯನಾದ ಪರಶಿವನ ಸಾನ್ನಿಧ್ಯವಾದ ಶ್ರೀ ಕುಂದೇಶ್ವರ ದೇಗುಲದ ಎದುರು ನಡೆಯುವ ಈ ಕಾರ್ಯಕ್ರಮ ವಿಶಿಷ್ಟ ಧಾರ್ಮಿಕ ಅನುಭೂತಿಯನ್ನು ಉಂಟು ಮಾಡುತ್ತದೆ.ಅಲ್ಲಿ ಗಡ್ಡೆಗಳು ಪರಶಿವನಿಗೆ ವಿಧವಿಧದಲ್ಲಿ ಪ್ರಣಾಮಗಳು ಸಲ್ಲಿಸುತ್ತಾರೆ.

ಎರಡನೇ ದಿನ ಕಾರ್ಯಕ್ರಮ ಬಹೂದ್ದೂರ್ ಷಾ ರಸ್ತೆ ಗದ್ದೆಬೈಲಿನಲ್ಲಿ ಗಡ್ಡೆಬೀಳುವುದು. ಮೂರನೇದಾಗಿ ಶ್ರೀ ವೆಂಕಟರಮಣ ದೇಗುಲದ ಮುಂಭಾಗದಲ್ಲಿ ಗಡ್ಡೆ ಬೀಳುವ ಕಾರ್ಯಕ್ರಮ, ನಾಲ್ಕನೇ ದಿನ ಕಾಮದಹನ ಕಾರ್ಯಕ್ರಮ ಇದನ್ನು ಪದ್ಧತಿ ಪ್ರಕಾರ ಹಾತ್ ಸೂಡಿ ಎಂದು ಕರೆಯುತ್ತಾರೆ. ಐದನೇ ದಿನ ಸಂಭ್ರಮದ ಹೋಳಿಹಬ್ಬ ಆಚರಣೆ ರಾತ್ರಿ ಕಾಮದಹನ ಪ್ರಕ್ರಿಯೆ ಮುಗಿದ ಬಳಿಕ ಮರುದಿನ ಬೆಳಿಗ್ಗೆ ಸಮಸ್ತ ಕೊಂಕಣಿ ಖಾರ್ವಿ ಸಮಾಜ ಭಾಂದವರು ಕುಂದೇಶ್ವರ ದೇಗುಲಕ್ಕೆ ತೆರಳಿ ಶ್ರೀ ಕುಂದೇಶ್ವರನ ದರ್ಶನ ಪಡೆಯುತ್ತಾರೆ. ಮಾರನೇ ದಿನ ಬಣ್ಣದ ಪೂಜೆ, ಓಕುಳಿ ಹಬ್ಬ ಆಚರಿಸಲಾಗುತ್ತದೆ. ಹೋಳಿಹಬ್ಬ ಆಚರಣೆಯ ಸಂದರ್ಭದಲ್ಲಿ ಶಿವನ ಗಣಗಳನ್ನು ಆವಾಹನೆ ಮಾಡಿಕೊಳ್ಳುವ ಗಡ್ಡೆಗಳಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತದೆ. ಈ ಗಡ್ಡೆಗಳ ವೈಶಿಷ್ಟ್ಯಪೂರ್ಣ ದೈವಿಕ ಪ್ರಸ್ತುತಿ ಹೋಳಿಹಬ್ಬದ ದಿನದಂದು ರೋಮಾಂಚನಕಾರಿ ರೀತಿಯಲ್ಲಿ ಅನಾವರಣಗೊಳ್ಳುತ್ತದೆ. ಹೋಳಿಕಾಮದಹನ ಪ್ರಕ್ರಿಯೆ ನಡೆಯುವ ಮೊದಲು ಈ ಗಡ್ಡೆಗಳು ಚಿಕ್ಕಮ್ಮನ ಸಾಲು ಹಿಂದೂ ರುದ್ರಭೂಮಿಗೆ ಮೂಳೆ ತರಲು ಹೋಗುತ್ತಾರೆ.ಹೋಳಿ ಕಾಮದಹನದ ಗದ್ದೆಯಿಂದ ಮಿಂಚಿನ ವೇಗದಲ್ಲಿ ಓಡುವ ಗಡ್ಡೆಗಳು ಮಿಂಚಿನ ವೇಗದಲ್ಲಿ ರುದ್ರಭೂಮಿಗೆ ಲಗ್ಗೆ ಇಡುತ್ತಾರೆ. ಸ್ಮಶಾನದಲ್ಲಿ ಮೂಳೆ ತೆಗೆದ ಬಳಿಕ ಅದೇ ವೇಗದಲ್ಲಿ ಗಡ್ಡೆಗಳು ಹೋಳಿ ಸುಡುವ ಗದ್ದೆಯಲ್ಲಿ ಧಾವಿಸುತ್ತಾರೆ. ಅಲ್ಲಿ ಮೂಳೆಗಳನ್ನು ಹುಗಿದ ಮೇಲೆ ಹೋಳಿಕಾಮದಹನ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಮನೆ ಮನೆಯಿಂದ ಸಂಗ್ರಹಿಸಲಾದ ಕಟ್ಟಿಗೆ, ತೆಂಗಿನಗರಿಗಳನ್ನು ಒಟ್ಟೂಗೂಡಿಸಿ ಅಗ್ನಿಸ್ಪರ್ಶ ಮಾಡಲಾಗುತ್ತದೆ. ಶಿವನು ಮನ್ಮಥನನ್ನು ತನ್ನ ಮೂರನೇ ಕಣ್ಣಿನಿಂದ ಸುಟ್ಟು ಭಸ್ಮಮಾಡಿದ ಲೋಕಕಲ್ಯಾಣದ ನೆನಪಿಗಾಗಿ ಹೋಳಿಕಾಮದಹನ ಆಚರಣೆ ಮಾಡುತ್ತಾರೆ ಮರುದಿನ ಪ್ರಾತಃಕಾಲದಲ್ಲಿಹೋಳಿಮನೆಯವರು ಶ್ರೀ ಕುಂದೇಶ್ವರ ದೇಗುಲಕ್ಕೆ ತೆರಳಿ ಸಮಾಜ ಭಾಂದವರ ಸಮ್ಮಖದಲ್ಲಿ ಪಾರ್ವತಿ ದೇವಿಯ ಸಂಕೇತವಾದ ಅಡಿಕೆ ಮರವನ್ನು ದೇಗುಲಕ್ಕೆ ಸಮರ್ಪಿಸುತ್ತಾರೆ. ಈ ಪವಿತ್ರ ಕಾರ್ಯ ಮುಗಿದ ಬಳಿಕ ಕೊಂಕಣಿ ಖಾರ್ವಿ ಸಮಾಜ ಭಾಂದವರು ಡೋಲು ವಾದ್ಯ,ಚೆಂಡೆವಾದನಗಳೊಂದಿಗೆ ,ಹೋಳಿಹಬ್ಬದ ಜನಪದ ಹಾಡುಗಳನ್ನು ಹಾಡುತ್ತಾ ಶ್ರೀ ಮಹಾಕಾಳಿ ಅಮ್ಮನವರ ಸಾನ್ನಿಧ್ಯಕ್ಕೆ ಆಗಮಿಸುತ್ತಾರೆ. ಅಲ್ಲಿಂದ ಹೋಳಿಮನೆಗೆ ಬಂದು ಹೋಳಿಮನೆಯವರ ಅತಿಥ್ಯ ಸ್ವೀಕರಿಸುತ್ತಾರೆ ಹೋಳಿಮನೆಯಲ್ಲಿ ಹೋಳಿನೃತ್ಯ, ಡೋಲು ಚೆಂಡೆಗಳ ಅಬ್ಬರ ಮುಗಿಲು ಮುಟ್ಟುತ್ತದೆ.

ಮರುದಿನ ಹೋಳಿಹಬ್ಬದ ಅಂತಿಮ ಚರಣವಾದ ಓಕುಳಿ ರಂಗೇರುತ್ತದೆ. ಮೊದಲು ಶ್ರೀ ಮಹಾಕಾಳಿ ಅಮ್ಮನವರಿಗೆ ಬಣ್ಣದ ಲೇಪನ ಮಾಡಿ ಪೂಜೆ ಸಲ್ಲಿಸಿದ ಬಳಿಕ ಓಕುಳಿ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ ಸಮಾಜ ಭಾಂದವರು ಪರಸ್ಪರ ಬಣ್ಣ ಎರಚಿಕೊಂಡು ಆಡುವ ಓಕುಳಿ ಸಂಭ್ರಮ ಉಲ್ಲಾಸಗಳ ಮೇರೆಯನ್ನು ದಾಟುತ್ತದೆ ವಯಸ್ಸಿನ ಮಿತಿಯಿಲ್ಲದೇ ಅಬಾಲ ವೃದ್ಧಿಯಾಗಿ ಸರ್ವರೂ ಬಣ್ಣದ ಓಕುಳಿಯಲ್ಲಿ ಮೀಯುತ್ತಾರೆ. ಮುಂದಿನ ಹಂತ ಹೋಳಿ ಓಕುಳಿ ಮೆರವಣಿಗೆಯ ಶೋಭಾಯಾತ್ರೆ ವಿವಿಧ ಸ್ಥಬ್ದ ಚಿತ್ರಗಳು ಮೆರವಣಿಗೆಗೆ ವಿಶಿಷ್ಟ ಕಳೆ ನೀಡುತ್ತದೆ ಮೆರವಣಿಗೆಯಲ್ಲಿ ಪುರುಷರು ಮಹಿಳೆಯರು ಎಂಬ ಭೇದವಿಲ್ಲದೆ ಅಬ್ಬರದ ಕುಣಿತ ರಂಗೇರುತ್ತದೆ. ಈ ಶೋಭಾಯಾತ್ರೆಯನ್ನು ಕಣ್ತುಂಬಿಸಿಕೊಳ್ಳಲು ದಾರಿಯ ಇಕ್ಕೆಲಗಳಲ್ಲಿ ಸಹಸ್ರಾರು ಜನ ನೆರೆದಿರುತ್ತಾರೆ.

ಹೋಳಿಹಬ್ಬದ ಆರುದಿನಗಳ ಆಚರಣೆಯಲ್ಲಿ ಪ್ರಮುಖವಾಗಿ ಹೋಳಿಹಬ್ಬದ ಜನಪದ ಹಾಡು ನೃತ್ಯಗಳು ಎಲ್ಲರ ಗಮನ ಸೆಳೆಯುತ್ತದೆ.ಡೋಲು ವಾದ್ಯಗಳ ಹಿಮ್ಮೇಳದಲ್ಲಿ ಸುಶ್ರಾವ್ಯವಾಗಿ ಮೂಡಿಬರುವ ಹೋಳಿ ಹಾಡು ಮತ್ತು ನೃತ್ಯಗಳು ಕೊಂಕಣಿ ಖಾರ್ವಿ ಸಮಾಜದ ಸಮೃದ್ಧ ಜನಪದ ಸಂಸ್ಕೃತಿಯನ್ನು ವೈಭವಪೂರ್ಣವಾಗಿ ಪ್ರತಿಬಿಂಬಿಸುತ್ತದೆ. ನದಿ ಮತ್ತು ಸಮುದ್ರ ತೀರಗಳಲ್ಲಿ ತಮ್ಮ ಬದುಕು ನಾಗರಿಕತೆಯನ್ನು ರೂಪಿಸಿಕೊಂಡ ಕೊಂಕಣಿ ಖಾರ್ವಿ ಸಮಾಜ ಭಾಂದವರು ಕರಾವಳಿ ಉದ್ದಕ್ಕೂ ಸಂಭ್ರಮ ಉಲ್ಲಾಸಗಳಿಂದ ಜನಪದ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಹೋಳಿಹಬ್ಬವನ್ನು ಆಚರಿಸುತ್ತಾರೆ.

ತಮ್ಮ ದೈನಂದಿನ ನೋವು ನಲಿವು, ಅನಿಸಿಕೆ ಅನುಭವಗಳನ್ನು,ಕನಸು ಕಲ್ಪನೆಗಳನ್ನು,ಕ್ರಿಯೆ ಪ್ರತಿಕ್ರಿಯೆಗಳನ್ನು ಮೌಖಿಕವಾಗಿ,ಹಾಡಿನ ಮೂಲಕ,ಕಥೆಯ ಮೂಲಕ,ಗಾದೆ ಒಗಟುಗಳ ಮೂಲಕ ತೋಡಿಕೊಂಡರು. ಇದು ಇಡೀ ಸಮುದಾಯಕ್ಕೆಜನಪದ ಸಾಹಿತ್ಯದ ರೂಪದಲ್ಲಿ ಹರಡಿಕೊಂಡಿತ್ತು. ಹೀಗೆ ಕೊಂಕಣಿ ಖಾರ್ವಿ ಸಮಾಜದ ಸಮೃದ್ಧ ಜನಪದ ಸಂಸ್ಕೃತಿಯ ಉಳಿವಿಗೆ ಕಾರಣವಾಯಿತು. ತಲೆತಲಾಂತರದಿಂದ ಕೊಂಕಣಿ ಖಾರ್ವಿ ಸಮಾಜದ ಮುಖ್ಯವಾಹಿನಿಯಲ್ಲಿ ಜನಪದ ಹಾಡು ನೃತ್ಯಗಳು ಮಹಾಪ್ರವಾಹವಾಗಿ ಹರಿಯಿತು. ಫಾಲ್ಗುಣ ಶುಕ್ಲ ಪೌರ್ಣಮಿಯಂದು ಸಂಪನ್ನಗೊಳ್ಳುವ ಹೋಳಿಹಬ್ಬ ಸಾಮುದಾಯಿಕ ಹಬ್ಬವಾಗಿದ್ದು,ಜನರ ಬದುಕಿನ ಏಕಾತಾನತೆಯನ್ನು ಹೋಗಾಲಾಡಿಸುವಲ್ಲಿ,ಸಡಗರ,ಸಂಭ್ರಮ,ಮನರಂಜನೆಯನ್ನು ಒದಗಿಸುವಲ್ಲಿಮತ್ತು ಭಾವೈಕ್ಯತೆಯನ್ನು ಮೂಡಿಸುವಲ್ಲಿ ನೆರವಾಗುತ್ತದೆ. ಇಡೀ ದಕ್ಷಿಣ ಭಾರತದಲ್ಲೀಯೇ ಏಕಮೇವಾದ್ವೀತಿಯವಾಗಿ ಸಾಂಪ್ರದಾಯಿಕವಾಗಿ ಮತ್ತು ವೈಭವಪೂರ್ಣವಾಗಿ ಆಚರಿಸಲ್ಪಡುವ ಕೊಂಕಣಿ ಖಾರ್ವಿ ಸಮಾಜದ ಸಮೃದ್ಧ ಜನಪದ ನೆಲೆಗಟ್ಟಿನ ಹೋಳಿಹಬ್ಬ ದೇಸೀ ಸಂಸ್ಕೃತಿಯ, ಪರಂಪರೆಯ ಅಧ್ಯಯನಕ್ಕೆ ಅತ್ಯುತ್ತಮ ಆಕರಗಳಾಗಿವೆ.

ಕೊಂಕಣಿ ಖಾರ್ವಿ ಸಮಾಜದ ಸಮೃದ್ಧ ಜನಪದ ಸಂಸ್ಕೃತಿಯ ಹೋಳಿಹಬ್ಬ, ಕೊಂಕಣಿ ಖಾರ್ವಿ ಸಮಾಜ ಭಾಂದವರೆಲ್ಲರಿಗೂ ಹೋಳಿಹಬ್ಬದ ಶುಭಾಶಯಗಳು.

ಸುಧಾಕರ ಖಾರ್ವಿ
www.kharvionline.com

Leave a Reply

Your email address will not be published. Required fields are marked *