ಕಾಸರಕೋಡ ಪಂಚಾಯತ ವಿಶೇಷ ಗ್ರಾಮ ಸಭೆ: ಎಚ್.ಪಿ.ಪಿ.ಎಲ್. ಕಂಪನಿಗೆ ದಿಕ್ಕಾರ ಕೂಗಿದ ಗ್ರಾಮಸ್ಥರು

ಕಾಸರಕೋಡ ಪಂಚಾಯತ ವಿಶೇಷ ಗ್ರಾಮ ಸಭೆ: ಎಚ್.ಪಿ.ಪಿ.ಎಲ್. ಕಂಪನಿಗೆ ದಿಕ್ಕಾರ ಕೂಗಿದ ಗ್ರಾಮಸ್ಥರು , ಬಂದರು ನಿರ್ಮಾಣ ಕೈಬಿಡಿ, ಮೀನುಗಾರರನ್ನು ಬದುಕಲು ಬಿಡಿ ಸುಂದರ ಕಡಲತೀರವನ್ನು ಉಳಿಸಿ, ಪರಿಸರವನ್ನು ರಕ್ಷಿಸಿ” ಎಚ್.ಪಿ.ಎಲ್ ಗೆ ಧಿಕ್ಕಾರ “,ಇದು ಇಲ್ಲಿನ ಕಾಸರಕೋಡ ಗ್ರಾಮ ಪಂಚಾಯಿತಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಗ್ರಾಮಸಭೆಯಲ್ಲಿ ಉದ್ದೇಶಿತ ಖಾಸಗೀ ಮೂಲದ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯ ವಿರುದ್ಧ ಮತ್ತು ಪರಿಸರ ಅನುಮತಿಯ ವಿರುದ್ಧ ಸಾರ್ವಜನಿಕರು ತೀವ್ರ ಆಕ್ಷೇಪಣೆಯನ್ನು ವ್ಯಕ್ತಪಡಿಸಿದರು. ದಿ ಹೊನ್ನಾವರ ಪೋರ್ಟ ಪ್ರೈವೇಟ ಲಿ.ಕಂಪೆನಿಯವರು ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯನ್ನು ಈ ಹಂತದಲ್ಲಿಯೇ ಕೈಬಿಟ್ಟು ಹಿಂದೆ ಸರಿಯಬೇಕು. ಯಾವದೇ ಕಾರಣದಿಂದ ನಮ್ಮ ಭಾಗದಲ್ಲಿ ವಾಣಿಜ್ಯ ಬಂದರು ನಿರ್ಮಾಣ ಮಾಡಲು ಗ್ರಾಮ ಪಂಚಾಯತಿಯು ಅವಕಾಶ ನೀಡಬಾರದು ಮತ್ತು ಈ ಯೋಜನೆಗಾಗಿ ಕಡಲತೀರದಲ್ಲಿ ಚತುಷ್ಪಥ ರಸ್ತೆ ಮತ್ತು ರೈಲು ಮಾರ್ಗದ ನಿರ್ಮಾಣಕ್ಕೆ ಅವಕಾಶನೀಡದಂತೆ ಹಾಗೂ ಪರಿಸರ ಅನುಮತಿ ಹಿಂಪಡೆಯುವಂತೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಕೋರಲು ಗ್ರಾಮಸಭೆ ಸರ್ವಾನುಮತದಿಂದ ನಿರ್ಣಯ ಸ್ವೀಕರಿಸಿದೆ.

ಪರಿಸರ ಅನುಮತಿ ನೀಡಿರುವ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಸಭೆ ಆರಂಭದಲ್ಲಿ ಪಿ.ಡಿ.ಓ.ಉದಯ ಬಾಂದೇಕರ ಗ್ರಾಮ ಸಭೆ ಆಯೋಜಿಸಿರುವ ಉದ್ದೇಶವನ್ನು ವಿವರಿಸಿ ದಿ ಹೊನ್ನಾವರ ಪೋರ್ಟ ಪ್ರೈವೇಟ ಲಿ.ಕಂಪೆನಿಯ ಮಾಲಕ ರಾಘವೇಂದ್ರ ರೆಡ್ಡಿ ಅವರು ಕೇಂದ್ರ ಪರಿಸರ ಇಲಾಖೆಯ ಪರಿಸರ ಅನುಮತಿಯ ಪ್ರತಿಯೊಂದಿಗೆ ಸಾರ್ವಜನಿಕ ಗಮನಸೆಳೆಯುವ ಕುರಿತು ಗ್ರಾಮ ಪಂಚಾಯಿತಿಗೆ ಸಲ್ಲಿಸಿರುವ ಪ್ರಸ್ತಾವದ ಹಿನ್ನೆಲೆಯಲ್ಲಿ,ಸಾರ್ವಜನಿಕ ಹಿತದೃಷ್ಟಿಯಿಂದ ವಿಶೇಷ ಗ್ರಾಮ ಸಭೆ ಕರೆಯಲಾಗಿದೆ. ಹೊನ್ನಾವರ ಪೋರ್ಟ ಪ್ರೈವೇಟ ಲಿ. ಕಂಪನಿಯ ರಾಘವೇಂದ್ರ ರೆಡ್ಡಿಯವರು,ಶರಾವತಿ ನದಿ ಸಮುದ್ರ ಸೇರುವ ಕಾಸರಕೋಡ ಟೊಂಕ ಪ್ರದೇಶದಲ್ಲಿ ವಾಣಿಜ್ಯಬಂದರು ನಿರ್ಮಾಣ ಮಾಡುವ ಬಗ್ಗೆ ಮತ್ತು ಇಕೋಬೀಚ್ ಕಡಲತೀರದಬದಿಯಿಂದ ಕಾಸರಕೋಡ ಟೊಂಕದ ಕಡಲತೀರದ ಮೂಲಕ ಬಂದರು ನಿರ್ಮಾಣ ಸ್ಥಳದ ವರೆಗೆ ಚತುಷ್ಪಥ ರಸ್ತೆ,ಮತ್ತು ಹೊಸಪಟ್ಟಣದಿಂದ ರೈಲುಮಾರ್ಗ ನಿರ್ಮಾಣ ಮಾಡುವ ಬಗ್ಗೆ ಶರತ್ತು ಬಧ್ಧ ಪರಿಸರ ಅನುಮತಿ ಪಡೆದಿರುವದಾಗಿ ತಿಳಿಸಿದ್ದು ಈ ಬಗ್ಗೆ ಸಾರ್ವಜನಿಕರ ಆಕ್ಷೇಪಣೆಗಳಿದ್ದರೆ ಸೂಕ್ತ ಪ್ರಾಧಿಕಾರಗಳಲ್ಲಿ ದೂರನ್ನು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ಇದು ನಮ್ಮ ಭಾಗದ ಪರಸರ,ಜೀವವೈವಿಧ್ಯತೆ ಮತ್ತು ಜನರ ಜೀನೋಪಾಯಕ್ಕೆ ಸಂಬಂಧಿಸಿದ ವಿಚಾರ ಅಡಕವಾಗಿರುವುದರಿಂದ ಮತ್ತು ಸ್ಥಳೀಯರು ಈ ಯೋಜನೆಯ ವಿರುದ್ಧ ದಶಕಗಳಿಂದ ಹೋರಾಟ ನಡೆಸುತ್ತಿರುವದರಿಂದ ಈ ಬಗ್ಗೆ ವಿಶೇಷ ಗ್ರಾಮ ಸಭೆಕರೆದು ಸೂಕ್ತ ಚರ್ಚೆಯಿಂದ ನಿರ್ಣಯ ಮಾಡುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ತಿರ್ಮಾನಿಸಲಾಗಿತ್ತು. ಅದರಂತೆ ಇಂದು ಈ ಸಭೆ ಕರೆಯಲಾಗಿದೆ ಎಂದು ವಿವರಿಸಿ ಸಾರ್ವಜನಿಕರು ತಮ್ಮ ಅಭಿಪ್ರಾಯ ತಿಳಿಸಿ,ಚರ್ಚೆಯಲ್ಲಿ ಪಾಲ್ಗೊಂಡು ಸೂಕ್ತ ನಿರ್ಣಯ ಸ್ವೀಕರಿಸಬಹುದು ಎಂದರು.

ಪರಿಸರ ಅನುಮತಿಯ ಶರತ್ತುಗಳು ಮತ್ತು ಉದ್ದೇಶಿಸಿತ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಮಹ್ಮದ ಸಾಬ ಚರ್ಚೆಯನ್ನು ಆರಂಭಿಸಿ ಸ್ಥಳೀಯ ಜನರ ಅಹವಾಲು ಆಲಿಸದೇ ಬಂದರು ಮತ್ತು ಚತುಷ್ಪಥ ರಸ್ತೆ ಯೋಜನೆಗೆ ಅನುಮತಿ ನೀಡಿರುವ ಪರಿಸರ ಮೌಲ್ಯ ಮಾಪನ ಶಾಸ್ತ್ರ ಇಲಾಖೆಯ ನಡೆಯನ್ನು ಪ್ರಶ್ನಿಸಿ,ಗ್ರಾಮ ಪಂಚಾಯಿತಿಯು ಸ್ಥಳೀಯ ಜನರ ಪರವಾಗಿ ನಿಲ್ಲಬೇಕು,ನಮ್ಮ ಭಾಗದಲ್ಲಿ ವಾಣಿಜ್ಯ ಬಂದರು ಮತ್ತು ಕಡಲತೀರದಲ್ಲಿ ಚತುಷ್ಪಥ ರಸ್ತೆ, ಹಾಗೂ ರೈಲು ಮಾರ್ಗದ ನಿರ್ಮಾಣಕ್ಕೆ ಅವಕಾಶ ನೀಡಬಾರದು ಮತ್ತು ಗ್ರಾಮ ಪಂಚಾಯಿತಿಯಿಂದ ಯೋಜನೆಯ ವಿರುದ್ಧ ಆಕ್ಷೇಪಣೆ ಸಲ್ಲಿಸಬೇಕೆಂದು ನಿರ್ಣಯ ಮಂಡಿಸಿದರು.ಈಬಗ್ಗೆ ಸದಸ್ಯರಾದ ಜಗದೀಶ ತಾಂಡೇಲ,ಮತ್ತು ವೀವನ ಫರ್ನಾಂಡಿಸ್,ನಿರ್ಣಯವನ್ನು ಬೆಂಬಲಿಸಿ ಮಾತನಾಡಿ ಹೊನ್ನಾವರ ಕಾಸರಕೋಡ ಟೊಂಕದ ಉದ್ದೇಶಿತ ಖಾಸಗೀ ಮೂಲದ ವಾಣಿಜ್ಯ ಬಂದರು ಯೋಜನೆ ಅನುಷ್ಠಾನ ಮಾಡಿದರೆ ಸ್ಥಳೀಯ 2000 ಜನರು ತಮ್ಮ ಈಗಿನ ಉದ್ಯೋಗದಿಂದ ವಂಚಿತರಾಗುತ್ತಾರೆ ಕಡಲತೀರದಲ್ಲಿ ವಾಸವಿರುವ ಸುಮಾರು 500 ಮೀನುಗಾರರ ಕುಟುಂಬಗಳು ತಮ್ಮಪರಂಪರಾಗತ ವಸತಿನೆಲೆಗಳನ್ನು ಕಳೆದುಕೊಂಡು ಬೀದಿಗೆ ಬರಲಿವೆ.

ಸಾಂಪ್ರದಾಯಿಕ ಮೀನುಗಾರಿಕೆ ,ಒಣಮೀನು ಉದ್ಯಮ ನಶಿಸಲಿದೆ .ಆದ್ದರಿಂದ ಈ ಯೋಜನೆಗೆ ನಮ್ಮ ತೀವ್ರ ವಿರೋಧವಿದೆ ಎಂದರು. ವಿವನ ಫರ್ನಾಂಡಿಸ್ ಮಾತನಾಡಿ ಪರಿಸರವಾಗಿ ಅತ್ಯಂತ ಸೂಕ್ಷ್ಮವಾಗಿರುವ ಈ ಪ್ರದೇಶದಲ್ಲಿ ವಾಣಿಜ್ಯ ಬಂದರು ನಿರ್ಮಾಣ ಮಾಡಿದರೆ ಈ ಬಂದರಿಗೆ ಅಗತ್ಯವಿರುವ ರಸ್ತೆ ಮತ್ತು ರೈಲು ಮಾರ್ಗ ಸಹಿತ ವಿವಿಧ ಮೂಲಸೌಕರ್ಯ ಕಲ್ಪಿಸಲು, ಇಲ್ಲಿನ 350ಕ್ಕೂ ಹೆಚ್ಚಿನ ಮೀನುಗಾರರ ಪರಂಪರಾಗತ ವಸತಿನೆಲೆಗಳಿಗೆ, ,ಸಾವಿರಾರು ಮೀನುಗಾರರಿಗೆ ಬದುಕನ್ನು ನೀಡಿರುವ ಒಣ ಮೀನು ಉದ್ಯಮಕ್ಕೆ,ಅಂತರಾಷ್ಟ್ರೀಯ ಬ್ಲೂ ಫ್ಲಾಗ್ ಮನ್ನಣೆ ಪಡೆದ ಇಲ್ಲಿನ “ಇಕೋ ಬೀಚ್ “, ಸಹಿತ ಇಲ್ಲಿನ ಪ್ರವಾಸೋದ್ಯಮಕ್ಕೆ,ಭವಿಷ್ಯದ ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ ಮತ್ತು ಜೀವ ವೈವಿಧ್ಯತೆ ಸಹಿತ ಸ್ಥಳೀಯ ಪರಿಸರಕ್ಕೆ ಆತಂಕ ಉಂಟಾಗುತ್ತದೆಯಾದ್ದರಿಂದ ಕಾಸರಕೋಡ ಟೊಂಕದ ಉದ್ದೇಶಿಸಿತ ಹೊನ್ನಾವರ ವಾಣಿಜ್ಯ ಬಂದರು ಯೋಜನೆಯನ್ನು ಕೈಬಿಡಬೇಕು ಮೀನುಗಾರರು ವಾಸವಿರುವ ಕಡಲತೀರದಲ್ಲಿ ಪಕ್ಕಾರಸ್ತೆ ಮತ್ತು ಚತುಷ್ಪಥ ರಸ್ತೆಯ ಕಾಮಗಾರಿ ನಡೆಸಲು ಗ್ರಾಮ ಪಂಚಾಯಿತಿ ಅವಕಾಶ ಕೊಡಬಾರದು ಎಂದು ನಿರ್ಣಯವನ್ನು ಬೆಂಬಲಿಸಿ ಮಾತನಾಡಿದರು ,ರಾಜೇಶ ಜಿ.ತಾಂಡೇಲ ಮೀನುಗಾರರ ಸಂಘಟನೆಯ ಲಿಖಿತ ಆಕ್ಷೇಪಣೆಯನ್ನು ಒದಿಹೇಳಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಮಾಜಿ ಗ್ರಾ.ಪಂ.ಅಧ್ಯಕ್ಷ ಮಂಜು ಗೌಡ,ರಾಜು ತಾಂಡೇಲ, ಹಮಜಾ ಪಟೇಲ,ಪರಮೇಶ್ವರ ಮೇಸ್ತ,ಚಂದ್ರಹಾಸ ಗೌಡ,ಸ್ಟೀವನ್ ಫರ್ನಾಂಡಿಸ್ ,ಗಣಪತಿ ತಾಂಡೇಲ,ಲಿಂಗಾ ಗೌಡ ಚರ್ಚೆಯಲ್ಲಿ ಪಾಲ್ಗೊಂಡು ನಿರ್ಣಯವನ್ನು ಬೆಂಬಲಿಸಿದರು.ಗ್ರಾಮ ಪಂಚಾಯತ ಅಧ್ಯಕ್ಷೆ ಮಂಕಾಳಿ ಹರಿಜನ ಸಭೆಯ ಅಧ್ಯಕ್ಷತೆ ವಹಿಸಿದ್ದರು.

Leave a Reply

Your email address will not be published. Required fields are marked *