ಜಗದ್ಗುರು ಶ್ರೀ ಆದಿಶಂಕರಾಚಾರ್ಯರಿಂದ ಸ್ಥಾಪಿತ ಚತುರಾಮ್ನಾಯ ಪೀಠಗಳಲ್ಲೊಂದಾದ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ವಿನಮ್ರ ಶಿಷ್ಯ ವರ್ಗದವರಾದ ಕೊಂಕಣಿ ಖಾರ್ವಿ ಸಮಾಜದವರು ಹಲವಾರು ವರ್ಷಗಳಿಂದಲೂ ಗುರುಪೀಠಕ್ಕೆ ತೆರಳಿ ಗುರುದರ್ಶನ ಪಡೆದು, ಧನ್ಯತೆಯನ್ನು ಪಡೆದಿರುವುದನ್ನು ನಾನು ನನ್ನ ಬಾಲ್ಯದಿಂದಲೂ ಕೇಳಿರುತ್ತೇನೆ. ಇದೇ ಪರಂಪರೆಯು ಮುಂದುವರಿದು ಕಳೆದ ಹಲವು ವರ್ಷಗಳ ಹಿಂದೆ ಸಮಾಜದ ಮುಖಂಡರೆಲ್ಲ ಸೇರಿ ಗುರುವಂದನ ಸಮಿತಿಯನ್ನು ರಚಿಸಿ, ಆ ಸಮಿತಿಯ ನೇತೃತ್ವದಲ್ಲಿ ಗುರುಗಳ ಚಾತುರ್ಮಾಸ ಪ್ರಾರಂಭದ ಪ್ರಥಮ ಭಾನುವಾರದಂದು ನಮ್ಮ ಸಮಾಜಕ್ಕೆ ಗುರುದರ್ಶನ ಹಾಗೂ ಗುರುವಂದನ. ಪಾದಪೂಜೆಗಳನ್ನು ಮಾಡಿ ಗುರುಗಳ ಆಶೀರ್ವಚನ ಸಂದೇಶಗಳನ್ನು ಆಲಿಸಿ, ಮಂತ್ರಾಕ್ಷತೆ ಪಡೆದು ಶ್ರೀ ಶಾರದಾಂಬೆಯ ದರ್ಶನ ಪಡೆದು ಯಥಾಸಕ್ತಿ ಸೇವೆಯನ್ನು ಅರ್ಪಿಸಿ, ಅನ್ನಪ್ರಸಾದವನ್ನು ಸ್ವೀಕರಿಸಿ ಪುನೀತರಾಗಿ ತಮ್ಮ ಊರುಗಳಿಗೆ ಮರಳುತ್ತಿರುವುದನ್ನು ನೋಡಿ ನಾನು ಹರ್ಷಿತನಾಗಿದ್ದೆ. ವರ್ಷದಿಂದ ವರ್ಷಕ್ಕೆ ಗುರುದರ್ಶನಕ್ಕೆ ತೆರಳುವವರ ಸಂಖ್ಯೆ ಗಣನೀಯವಾಗಿ ಏರುತ್ತಾ ಸಾಗಿ 7-8 ವರ್ಷಗಳ ಹಿಂದೆ ಗುರುದರ್ಶನಕ್ಕೆ ವಿಪರೀತ ಜನಸಂದಣಿಯ ಸಂದರ್ಭದಲ್ಲಿ ಸಾಲಾಗಿ ಶಿಸ್ತಿನಿಂದ ಗುರುದರ್ಶನ ಪಡೆಯುವಲ್ಲಿ ಹಾಗೂ ಮಂತ್ರಾಕ್ಷತೆ ಪಡೆಯುವಲ್ಲಿ ನೂಕು ನುಗ್ಗಲಿನಿಂದ ಒಂದಷ್ಟು ಗೊಂದಲ ಹಾಗೂ ಅನಾನುಕೂಲತೆಗಳಾದುದನ್ನು ನಾನು ಗಮನಿಸಿದ್ದೇನೆ.
ಅನಂತರ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಮುಖಂಡರು ವಿಚಾರ ವಿನಿಮಯ ಮಾಡಿ ಪ್ರಯೋಗಾರ್ಥವಾಗಿ ಒಂದು ವ್ಯವಸ್ಥೆಯನ್ನು ಮಾಡಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯವರು ಚಾತುರ್ಮಾಸದ ಪ್ರಥಮ ಶನಿವಾರ ಹಾಗೂ ಉತ್ತರಕನ್ನಡ, ಶಿವಮೊಗ್ಗ, ಬೆಂಗಳೂರು, ಗೋವಾ ಹಾಗೂ ಮುಂಬೈಯ ಸಮಾಜ ಬಾಂಧವರು ಪ್ರಥಮ ಭಾನುವಾರದಂದು ತೆರಳಿ ಗುರುಸೇವೆಗೈದು ಬರುತ್ತಿದ್ದುದು ನಾನು ಗಮನಿಸಿದ್ದೇನೆ. ಉಡುಪಿ ದ.ಕ. ಜಿಲ್ಲೆಯ ಸಮಾಜ ಬಾಂಧವರಿಂದ ಶನಿವಾರಕ್ಕೆ ಕಾರ್ಯಕ್ರಮ ಆಯೋಜಿಸಿದರೆ, ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ ಹಾಗೂ ಇನ್ನಿತರ ಖಾಸಗಿ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುವ ಮತ್ತೆ ಇನ್ನಿತರ ಹಲವರು ಈ ಅಮೂಲ್ಯ ಅವಕಾಶದಿಂದ ವಂಚಿತರಾಗುತ್ತಾರೆ. ಭಾನುವಾರಕ್ಕೆ ನಮಗೂ ಸಹಾ ಅವಕಾಶ ಮಾಡಿಕೊಟ್ಟರೆ ಒಳಿತು ಎಂಬ ಸಲಹೆ ಬಂದಾಗ ನಾವು ಉತ್ತರಕನ್ನಡ ಗುರುವಂದನ ಸಮಿತಿಯ ಮುಖಂಡರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ವಿಚಾರ ವಿನಿಮಯ ಮಾಡಿ ಕಳೆದ ವರ್ಷ (2024 ರಲ್ಲಿ) ಕೆಲವು ಯುವಕರನ್ನು ಮತ್ತು ಹಿರಿಯರನ್ನು ಸೇರಿಸಿ ವಿಚಾರ ವಿನಿಮಯ ಮಾಡಿ, ‘ಗುರುಸೇವಕ’ ಎಂಬ ಒಂದಷ್ಟು ಬ್ಯಾಡ್ಜ್ಗಳನ್ನು ರಚಿಸಿ ಗುರುಗಳ ಆಶೀರ್ವಚನ ಸಂದೇಶ ಆಲಿಸುವಾಗ ಮತ್ತು ಮಂತ್ರಾಕ್ಷತೆ ಪಡೆಯುವಾಗ ಶಿಸ್ತಿನಿಂದ ಸಾಲಾಗಿ ತೆರಳುವಂತೆ ವ್ಯವಸ್ಥೆ ಮಾಡಿದ್ದು, ಇದರಿಂದ ನಾವು ಯಶಸ್ವಿಯಾಗಿದ್ದೇವೆ.
ಈ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು ಯೋಚಿಸುತ್ತಿರುವಾಗ ಈ ವರ್ಷದ ಗುರುದರ್ಶನದ ಮುಂಚಿತವಾಗಿ ನಾವು ಇದೇ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಇನ್ನಷ್ಟು ಪೂರ್ವಸಿದ್ಧತೆಯೊಂದಿಗೆ ಸಿದ್ದರಾಗೋಣ ಎಂಬ ಉದ್ದೇಶದಿಂದ ನನ್ನ ಮನಸ್ಸಿಗೆ ತೋಚಿದ ಕೆಲವು ವಿಷಯಗಳನ್ನು ಎಲ್ಲಾ ಸಮಾಜ ಬಾಂಧವರ ಮುಂದಿಡಲು ಇಚ್ಛಿಸುತ್ತೇನೆ. ಗುರುವಂದನ ಸಮಿತಿ ಉಡುಪಿ ಮತ್ತು ದ.ಕ. ಜಿಲ್ಲೆಯ ಅಧ್ಯಕ್ಷನಾಗಿ 3 ವರ್ಷಗಳ ಹಿಂದೆ ಕುಂದಾಪುರ ಶ್ರೀ ಮಹಾಕಾಳಿ ಅಮ್ಮನವರ ದೇವಸ್ಥಾನದ ಮುಂಭಾಗದಲ್ಲಿ ನಡೆದ ಸಭೆಯಲ್ಲಿ ಸಮಿತಿಯ ಅಧ್ಯಕ್ಷನಾಗಿ ನನ್ನನ್ನು ಆಯ್ಕೆ ಮಾಡಿದರು. ಆ ಸಮಯದಲ್ಲಿ ನನ್ನ ವಯಸ್ಸು 78 ವರ್ಷ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಕುಂದಾಪುರ ನಾರಾಯಣ ಖಾರ್ವಿಯವರು ರಾಜೀನಾಮೆ ಸಲ್ಲಿಸಿದ್ದು ಆ ಸ್ಥಾನವು ಖಾಲಿಯಾಗಿದ್ದು, ಕಾರ್ಯದರ್ಶಿ ಶ್ರೀ ಸುರೇಶ್ ಖಾರ್ವಿ ಕೋಡಿ ಕನ್ಯಾಣ ಇವರ ನೇತೃತ್ವದಲ್ಲಿ ಸಮಿತಿಯ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿತ್ತು. ಶ್ರೀ ನಾರಾಯಣ ಖಾರ್ವಿ, ಶ್ರೀ ಸುರೇಶ್ ಖಾರ್ವಿ ಹಾಗೂ ನಾನು ಮೂವರು ಶ್ರೀ ಗುರುಗಳವರ ಚಾತುರ್ಮಾಸ ವೃತ ಪ್ರಾರಂಭಕ್ಕೂ ಕೆಲವು ತಿಂಗಳ ಪೂರ್ವದಲ್ಲಿ ಭೇಟಿಯಾದಾಗ ಸಮಿತಿಯನ್ನು ಪುನರ್ ರಚಿಸುವ ಕುರಿತು ವಿಚಾರ ವಿನಿಮಯ ಮಾಡಿ ಸಭೆ ಕರೆಯಲಾಯಿತು. ಅನಿರೀಕ್ಷಿತವಾಗಿ ಆಗಸದಲ್ಲಿ ಮೋಡಗಳು ಕಾಣಿಸಿಕೊಂಡು ವಿಪರೀತ ಮಳೆಯು ಪ್ರಾರಂಭವಾಯಿತು. ಹಾಗಾಗಿ ಕೋಡಿಬೆಂಗ್ರೆ, ಹಂಗಾರಕಟ್ಟೆ, ಮಂಗಳೂರು, ಕುಂದಾಪುರ, ಗಂಗೊಳ್ಳಿ, ಬಸ್ರೂರು, ಕೋಟೇಶ್ವರ, ಕುಂದಾಪುರ ಕೋಡಿ ಇಲ್ಲಿನ ಹಲವಾರು ಸಮಾಜ ಬಾಂಧವರ ಉಪಸ್ಥಿರಿಗೆ ಅಡಚಣೆಯಾಯಿತು.
ಅಂದಿನ ಸಭೆಗೆ ಕೇವಲ 25ರಿಂದ 30 ಜನರಷ್ಟು ಮಾತ್ರ ಸೇರಿದ್ದು, ಆ ಸಭೆಯಲ್ಲಿ ಹಾಜರಾತಿಯ ಸಂಖ್ಯೆಯನ್ನು ಗಮನಿಸಿ ಸಭೆಯನ್ನು ಮುಂದೊಂದು ದಿನ ಆಯೋಜಿಸುವ ಎನ್ನುವ ಅಭಿಪ್ರಾಯ ಬಂದಾಗ ಹಲವರು ಚಾತುರ್ಮಾಸ ಸಮಯ ಒಂದೆರಡು ತಿಂಗಳಲ್ಲೇ ಬರುವುದರಿಂದ ಪೂರ್ವಸಿದ್ಧತೆಗೆ ಸಮಯಾವಕಾಶವೂ ಕಡಿಮೆಯಾಗಬಹುದು ಅಲ್ಲದೇ ನಾವು ಸಭೆ ಕರೆದಾಗ ಪುನಃ ಮಳೆಯ ಅಬ್ಬರ ಪ್ರಾರಂಭವಾದರೆ ಸಮಾಜ ಬಾಂಧವರ ಹಾಜರಾತಿ ಇದೇ ರೀತಿಯಾದರೆ ಕಷ್ಟ ಆದುದರಿಂದ ಇದೇ ಈಗಲೇ ಸಮಿತಿ ರಚನೆ ಮಾಡೋಣ ಅಂತ ಅಭಿಪ್ರಾಯ ವ್ಯಕ್ತವಾಯಿತು. ಆಗ ನಾನು ನನ್ನ ಒಂದು ಸಲಹೆಯನ್ನು ಮುಂದಿಟ್ಟೆ. ಸದ್ಯದ ಸಮಿತಿಯಲ್ಲಿ ಎಲ್ಲರೂ ಇದ್ದು, ಅಧ್ಯಕ್ಷರು ಮಾತ್ರ ರಾಜೀನಾಮೆ ಕೊಟ್ಟಿರುವುದರಿಂದ ಅಧ್ಯಕ್ಷರ ರಾಜೀನಾಮೆ ಅಂಗೀಕಾರವಾಗದಿದ್ದರೆ ಶ್ರೀ ನಾರಾಯಣ ಖಾರ್ವಿಯವರೇ ಮುಂದುವರಿಯಲಿ. ಗುರುವಂದನ ಕಾರ್ಯಕ್ರಮ ಮುಗಿದ ನಂತರ ಸಮಿತಿ ರಚನೆ ಮಾಡೋಣ ಅಂತ ತಿಳಿಸಿದೆ. ಶ್ರೀ ನಾರಾಯಣ ಖಾರ್ವಿಯವರು ತಾನು ಈಗಾಗಲೇ ರಾಜೀನಾಮೆ ಕೊಟ್ಟಿರುವುದರಿಂದ ನಾನು ಮುಂದುವರಿಯಲಾರೆನೆಂದು ತಿಳಿಸಿದರು ನಂತರ ನಾನು ನನಗೀಗ ಇಳಿವಯಸ್ಸಿನಲ್ಲಿ ಯಾವುದೇ ಸಂಘಟನೆಯ ಮುಂದಾಳತ್ವವನ್ನು ವಹಿಸುವುದು ಅದನ್ನು ಮುನ್ನಡೆಸುವುದು ಕಷ್ಟಕರವಾದೀತು. ಆದುದರಿಂದ 75 ವರ್ಷದ ಒಳಗಿನವರಿಗೆ ಅಂದರೆ ಸುಮಾರು 60ರಿಂದ 70 ವರ್ಷದ ಒಳಗಿನವರಿಗೆ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಅವರಿಗಿಂತ ಸ್ವಲ್ಪ ಕಿರಿಯರಿಗೆ ಉಪಾಧ್ಯಕ್ಷ ಕಾರ್ಯದರ್ಶಿ ಇನ್ನಿತರ ಜವಾಬ್ದಾರಿಯನ್ನು ನೀಡಿ ಮುನ್ನಡೆಯೋಣ, ಕೊಂಕಣಿ ಖಾರ್ವಿ ಮಹಾಜನ ಸಭಾ (ರಿ.) ಸಂಘವು ಹಿಂದೆ ರಾಜ್ಯ ಮಟ್ಟದ ಸಂಘಟನೆಯಾಗಿದ್ದು, ಕ್ರಮೇಣ ರಾಷ್ಟ್ರಮಟ್ಟಕ್ಕೆ ಬೆಳೆದು ನಿಂತು ಬಹುಕೋಟಿ ಹಣ ವ್ಯಯಿಸಿ ಒಂದು ಭವ್ಯ ಸಮಾಜ ಭವನವನ್ನು ತ್ರಾಸಿಯಲ್ಲಿ ನಿರ್ಮಿಸಿದ್ದು ತಮಗೆಲ್ಲಾ ತಿಳಿದೇ ಇದೆ.
ಅದೇ ರೀತಿಯಲ್ಲಿ ಗುರುವಂದನ ಸಮಿತಿಯನ್ನು ನಾವು ಪ್ರಾದೇಶಿಕವಾಗಿ ವಿಭಜಿಸಿ ಕಾರ್ಯನಿರ್ವಹಿಸುವುದಕ್ಕಿಂತ ರಾಷ್ಟ್ರ ಮಟ್ಟದಲ್ಲಿ ಸಂಘಟಿಸಿ ಸಮಾಜದ ಜನರಿರುವ ಪ್ರತೀ ಊರುಗಳಲ್ಲಿ ಜಿಲ್ಲೆಗೊಬ್ಬ ಪ್ರಧಾನ ಸಂಚಾಲಕರೊಂದಿಗೆ ಆಯಾ ಊರಿನ ಜನಸಂಖ್ಯೆಯ ಆಧಾರದಲ್ಲಿ ಇತರ ಸದಸ್ಯರನ್ನು ಸೇರಿಸಿ ಸಂಚಾಲನ ಮಂಡಳಿಯನ್ನು ರಚಿಸಿ ಕಾರ್ಯ ಪ್ರವೃತ್ತರಾದರೆ ಒಳಿತು ಎಂಬ ನನ್ನ ಅನಿಸಿಕೆಗಳನ್ನು ತಮ್ಮ ಮುಂದಿಡಲು ಬಯಸುತ್ತೇನೆ. ನಾವು ಹಿರಿಯರು ಅವರುಗಳೊಂದಿಗೆ ಇದ್ದು, ಆವಶ್ಯಕತೆ ಇದ್ದಾಗ ಸಲಹೆ ಸೂಚನೆಗಳನ್ನು ನೀಡಿ ಮಾರ್ಗದರ್ಶನ ಮಾಡೋಣ ಅಂತ ಹೇಳಿದೆ. ಈ ಸಲಹೆಯು ಹಲವರಿಗೆ ಸಹಮತವಾದುದನ್ನು ಅಂದಿನ ಸಭೆಯಲ್ಲಿ ನಾನು ಸೂಕ್ಷ್ಮವಾಗಿ ಗಮನಿಸಿದ್ದೆ. ಸಭೆಯಲ್ಲಿ ಉಪಸ್ಥಿತರಿದ್ದ ಶ್ರೀ ಕೆ.ಬಿ. ಖಾರ್ವಿಯವರು ಒಂದು ಮಾತು ಹೇಳಿದರು. 75 ವರ್ಷ ಮೇಲ್ಪಟ್ಟವರು ರಾಜಕೀಯದಿಂದ ಹಿಂದೆ ಸರಿಯಬೇಕೆಂದು ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಮಾತುಗಳು ಇಲ್ಲಿ ರಾಜಕೀಯ ಇಲ್ಲ ಆದುದರಿಂದ ನೀವು ಒಪ್ಪಿಕೊಳ್ಳಿ ಎಂದಾಗ ಸಭೆಯಲ್ಲಿದ್ದ ಇನ್ನಿತರರು ಸಹಾ ಅವರ ಮಾತುಗಳಿಗೆ ಪೂರಕವಾಗಿ ಮಾತಾಡಿ ನನ್ನನ್ನು ಆಯ್ಕೆ ಮಾಡಿದರು. ಸಮಾಜ ಬಾಂಧವರ ಅಭಿಮಾನ ಸಹಕಾರಗಳಿಗೆ ನಾನು ಮಣಿದು ಜವಾಬ್ದಾರಿಗೆ ಒಪ್ಪಿದೆ ಹಾಗೂ ಕಳೆದೆರೆಡು ವರ್ಷಗಳಿಂದ ಎಲ್ಲರ ಸಂಪೂರ್ಣ ಸಹಕಾರ ಹಾಗೂ ಪ್ರೀತಿ ವಿಶ್ವಾಸಗಳೊಂದಿಗೆ ದೇವರ ಅನುಗ್ರಹ ಹಾಗೂ ಗುರುಗಳ ಆಶೀರ್ವಾದಗಳೊಂದಿಗೆ ನನ್ನ ಜವಾಬ್ದಾರಿಯನ್ನು ನಿರ್ವಹಿಸಿರುವ ಸಂತೃಪ್ತಿ ನನಗಿದೆ.
ಈ ವರ್ಷದ ಗುರುವಂದನ ಕಾರ್ಯಕ್ರಮವನ್ನು ಕಳೆದ ವರ್ಷದಂತೆಯೇ ಎಲ್ಲರೂ ಸೇರಿ ಪ್ರಥಮ ಭಾನುವಾರದಂದೇ ನಡೆಸೋಣ ಎನ್ನುವ ಮನೋಭಿಲಾಷೆಯೊಂದಿಗೆ ನನ್ನ ಅನಿಸಿಕೆಗಳಿಗೆ ವಿರಾಮವೀಯುವ ಮುನ್ನ ಮುಂದಿನ ವರ್ಷದಿಂದ ನಾವು ಹೊಸ ಸಮಿತಿಯನ್ನು ರಚಿಸುವಾಗ ನಾವು ಗುರುದರ್ಶನ ಮಾಡಿದ ದಿನದಂದೇ ಗುರುದರ್ಶನದ ಕಾರ್ಯಕ್ರಮದ ನಂತರ ಶ್ರೀ ಶಾರದಾಂಬಾ ಸನ್ನಿಧಿಯಲ್ಲಿ ಎಲ್ಲರೂ ಸೇರಿ ಹೊಸ ಸಮಿತಿಯನ್ನು ರಚಿಸಿ ನಿಕಟಪೂರ್ವ ಹಾಗೂ ಹೊಸ ಸಮಿತಿಯವರು ಸಮಾಜ ಬಾಂಧವರ ಜೊತೆಯಲ್ಲಿ ಶ್ರೀ ಶಾರದಾಂಬೆಯ ಸನ್ನಿಧಾನದಲ್ಲಿ ನಮ್ಮೆಲ್ಲರಿಗೂ ಪೂರ್ಣಾನುಗ್ರಹ ಪ್ರಾಪ್ತಿಯ ಬಗ್ಗೆ ಪ್ರಾರ್ಥಿಸೋಣ. ನಂತರ ಕೃತಾರ್ಥತೆಯಿಂದ ನಮ್ಮ ನಮ್ಮ ಊರುಗಳಿಗೆ ತೆರಳೋಣ ಗುರುವಂದನಕ್ಕೆ ಶೃಂಗೇರಿಗೆ ಬರುವಾಗ ಈ ಬಗ್ಗೆ ಸಾಕಷ್ಟು ಸಮಯವಕಾಶ ಮಾಡಿಕೊಂಡು ಬನ್ನಿರಿ ಎಂದು ಸಮಾಜ ಬಾಂಧವರಲ್ಲಿ ನನ್ನ ಕಳಕಳಿಯ ವಿನಂತಿ.
ಎಲ್ಲರಿಗೂ ಶುಭವಾಗಲಿ..
ಬಿ. ಮಾಧವ ಖಾರ್ವಿ