ಪಂಚಗಂಗಾವಳಿಯಲ್ಲಿ ಮರೆಯಾದ ಮಳಿವೆ (ಕುಬ್ಬೆ)

ಪಂಚಗಂಗಾವಳಿಯಲ್ಲಿ ಮರೆಯಾದ ಮಳಿವೆ (ಕುಬ್ಬೆ) ಪಡುವಣದಿ ಶರಧಿಯ ಭೋರ್ಗರೆತ ಮೂಡಣದಿ ಕೊಡಚಾದ್ರಿ ಗಿರಿಶಿಖರಗಳ ರಮ್ಯ ನೋಟ ನಡುಮಧ್ಯೆ ಹರಿಯುವುಳು ಜೀವನದಿ ಪುಣ್ಯ ನದಿ ಪಂಚಗಂಗಾವಳಿ ತಾನು ಹರಿದು ಬರುವ ನೆಲವನ್ನೆಲ್ಲ ಪರಮ ಪವಿತ್ರಗೊಳಿಸಿ ಲಕ್ಷಾಂತರ ಜನರ ಬದುಕನ್ನು ಪಾವನಗೊಳಿಸಿದ ಪಂಚಗಂಗಾವಳಿ ನದಿ ಇಂದು ಹಲವು ರೀತಿಯ ಮಾಲಿನ್ಯಕ್ಕೊಳಕ್ಕಾಗಿ ಮೌನವಾಗಿ ರೋಧಿಸುತ್ತಿದ್ದಾಳೆ.

ಹಿಂದೆ ಈ ನದಿ ಅಸಂಖ್ಯಾತ ಜಾತಿಯ ಮಳಿವೆ ಪ್ರಭೇಧಗಳಿಗೆ ಪ್ರಸಿದ್ಧ ವಾಗಿತ್ತು ಪಂಚಗಂಗಾವಳಿಯ ಅಗಾಧ ಜಲರಾಶಿಯ ತಳದಲ್ಲಿ ಲಕ್ಷಾಂತರ ಮಳಿವೆಗಳು ಸಮೃದ್ಧ ವಾಗಿ ಸಿಗುತ್ತಿತ್ತು ಇದನ್ನೇ ನಂಬಿಕೊಂಡು ಮುಖ್ಯ ವಾಗಿ ಕೊಂಕಣಿ ಖಾರ್ವಿ ಸಮಾಜದ ಮೀನುಗಾರರು ಜೀವನೋಪಾಯ ಮಾಡುತ್ತಿದ್ದರು ಆದರೆ ನಾಗಾಲೋಟದ ನಗರೀಕರಣ ಕೈಗಾರಿಕಾ ಮಾಲಿನ್ಯದ ವಿಷಯುಕ್ತ ರಾಸಾಯನಿಕಗಳು ಈ ಪುಣ್ಯ ನದಿಯ ಒಡಲಿಗೆ ಆಘಾತ ಉಂಟು ಮಾಡಿದವು ನದಿನೀರಿನ ಮಾಲಿನ್ಯ ದ ಪರಿಣಾಮವಾಗಿ ಮಳಿವೆ ಸಂತತಿಗಳ ಮೇಲೆ ನೀರಿನ ಮಾಲಿನ್ಯ ಮತ್ತು ಇತರ ಬಗೆಯ ಒತ್ತಡಗಳು ಉಂಟಾಗಿ ಕಾಲ ಕ್ರಮೇಣ ಪಂಚಗಂಗಾವಳಿಯಲ್ಲಿ ಮಳಿವೆ ಸಂತತಿ ಸಂಪೂರ್ಣ ನಾಶವಾಯಿತು.

ಮಳಿವೆಯನ್ನು ಕುಂದಗನ್ನಡದಲ್ಲಿ ಮಳಿ ಎಂದು ಕರೆದರೆ ತುಳು ಭಾಷೆಯಲ್ಲಿ ಮರುವಾಯಿ ಎಂದು ಕರೆಯುತ್ತಾರೆ ಈಗ ನಾವು ತಿನ್ನುತ್ತಿರುವ ಮಳಿವೆ ಕೇರಳದ ಹೀನ್ನೀರು ಪ್ರದೇಶದಿಂದ ಬರುತ್ತದೆ ಪಂಚಗಂಗಾವಳಿಯಲ್ಲಿ ಮಳಿವೆ ಕಡಿಮೆಯಾಗುತ್ತಿದ್ದ ಸಂದರ್ಭದಲ್ಲಿ ಆನೆಗಳನ್ನು ನದಿನೀರು ಇಳಿತವಾದಾಗ ಮಳಿವೆಗಳು ಹುಟ್ಟುವ ಸ್ಥಳದಲ್ಲಿ ನಡೆದಾಡಿಸುತ್ತಿದ್ದ ಬಾಲ್ಯದ ನೆನಪುಗಳು ಇಂದಿಗೂ ನನ್ನ ಸ್ಮತಿಪಟಲದಲ್ಲಿದೆ ಭಿಕ್ಷಾಟನೆಗೆಂದು ಉತ್ತರ ಪ್ರದೇಶದ ಬಾಬಾಗಳು ಕುಂದಾಪುರಕ್ಕೆ ಬಂದಾಗ ಅವರಿಗೆ ಇಂತಿಷ್ಟು ಹಣ ನೀಡಿ ಖಾರ್ವಿ ಮೀನುಗಾರರು ಆನೆಗಳನ್ನು ಕರೆತರುತ್ತಿದ್ದರು ಮಳಿವೆ ಹುಟ್ಟುವ ಸ್ಥಳದಲ್ಲಿ ಆನೆ ನಡೆದಾಡಿದರೆ ಮಳಿವೆ ತುಂಬಾ ಸಂಖ್ಯೆಯಲ್ಲಿ ವೃದ್ಧಿ ಯಾಗುತ್ತದೆಯೆಂಬ ನಂಬಿಕೆ ಮೀನುಗಾರರಲ್ಲಿ ಮನೆ ಮಾಡಿತ್ತು ಕಾಕತಾಳೀಯವೆಂಬಂತೆ ಮರುದಿನದಿಂದಲೇ ಮಳಿವೆಗಳು ಅಗಾಧ ಸಂಖ್ಯೆಯಲ್ಲಿ ಸಿಗುತ್ತಿದ್ದವು ಇದಕ್ಕೆ ವೈಜ್ಞಾನಿಕ ಕಾರಣವೂ ಇತ್ತು ಆನೆಯ ಕಾಲುಗಳು ನದಿತಳದ ಮೃದು ಉಸುಕಿನ ತಳಭಾಗದಲ್ಲಿ ಹೋಗಿ ಮಳಿವೆಗಳು ಮೇಲಕ್ಕೆ ಎದ್ದು ಬರುತ್ತಿದ್ದವು ಎಂಬ ಅಭಿಮತವೂ ಇತ್ತು

ಏನೇ ಇರಲಿ ಇಂದು ಪಂಚಗಂಗಾವಳಿಯಲ್ಲಿ ದಿನವಿಡೀ ಹುಡುಕಿದರೂ ಒಂದೇ ಒಂದು ಮಳಿವೆ ಸಿಗುವುದಿಲ್ಲ ಇದು ನದಿ ಮಾಲಿನ್ಯ ದ ಸಾಕ್ಷಿ ಯಾಗಿದ್ದು ಮನುಷ್ಯನಿಂದ ಬಾಧಿಸಲ್ಪಟ್ಟ ಪರಿಸರ ವ್ಯವಸ್ಥೆ ಮತ್ತು ಜಲಚರಗಳ ವಿನಾಶಕ್ಕೆ ಹಿಡಿದ ಕೈಗನ್ನಡಿ ಯಾಗಿದೆ ಪಂಚಗಂಗಾವಳಿ ನದಿತೀರದ ಮೂರನೇ ಎರಡರಷ್ಟು ಜನ ಕೃಷಿ ಮತ್ತು ಮೀನುಗಾರಿಕೆಯನ್ನು ಅವಲಂಬಿಸಿ ಬದುಕು ಕಟ್ಟಿ ಕೊಂಡಿದ್ದಾರೆ ಮೀತಿಮೀರಿದ ನಗರೀಕರಣ ಅವರ ಬದುಕನ್ನು ಮೂರಾಬಟ್ಟೆಯಾಗಿಸಿದೆ ಅಷ್ಟೇ ಅಲ್ಲದೇ ಕಾಂಡ್ಲಾಗಿಡಗಳ ಕೆಸರಿನಲ್ಲಿ ಹುಟ್ಟುವ ಮಾರನಕಲ್ಲು ಎಂಬ ದೊಡ್ಡ ಗಾತ್ರದ ಮಳಿವೆ ಸಂತತಿ ಕೂಡಾ ವಿನಾಶದ ಅಂಚಿನಲ್ಲಿದೆ

ಕುಂದಾಪುರದ ಚಿಕ್ಕಮ್ಮನ ಸಾಲು ಪ್ರದೇಶದ ಹೊಳೆಸಾಲಿನಲ್ಲಿ ಈ ಮಾರನಕಲ್ಲು ಮಳಿವೆಗಳು ಧಾರಾಳವಾಗಿ ಸಿಗುತ್ತಿದ್ದವು ಈಗ ಅದೂ ಕೂಡಾ ನದಿ ಮಾಲಿನ್ಯ ದ ಪರಿಣಾಮವಾಗಿ ನಾಶವಾಗುತ್ತಿದೆ ಜಲಚರಗಳು ನದಿ ಪರಿಸರ ವ್ಯವಸ್ಥೆಯ ಅವಿಭಾಜ್ಯ ಅಂಗಗಳಾಗಿದ್ದು ಅವುಗಳು ಮನುಷ್ಯನ ಹೊಟ್ಟೆ ತುಂಬಿಸುವ ಆರ್ಥಿಕ ಮೌಲ್ಯಗಳನ್ನು ಹೊಂದಿವೆ ಅಪೂರ್ವ ಜಲಚರಗಳ ಜೀವ ವೈವಿಧ್ಯ ಗಳ ಸಮೃದ್ಧ ಕಣಜವಾಗಿರುವ ಪಂಚಗಂಗಾವಳಿಯ ಒಡಲು ಬರಿದಾಗುತ್ತಿರುವುದು ಭವಿಷ್ಯದ ಕರಾಳ ದಿನಗಳ ಮೂನ್ಸೂಚನೆಯಾಗಿದೆ.

ಉಮಾಕಾಂತ ಖಾರ್ವಿ ಕುಂದಾಪುರ

4 thoughts on “ಪಂಚಗಂಗಾವಳಿಯಲ್ಲಿ ಮರೆಯಾದ ಮಳಿವೆ (ಕುಬ್ಬೆ)

  1. ನಿಜವಾದ ವಿಷಯ ಮಂಡಿಸಿದ್ದಾರೆ …ತುಂಬಾ ಬೇಸರ ಕೂಡಾ ಆಗುತ್ತೆ ಗತಾ ಕಾಲದ ಒಂದು ವಂಶ ನಾಶ ಆಗ್ತಾ ಇದೆ ಅಂಥ …😔😔

  2. ಲೇಖನ ಚೆನ್ನಾಗಿದೆ… ಗೊತ್ತಿರದ ಕೆಲವು ವಿಚಾರಗಳು ತಿಳಿಯಿತು….

  3. ಹೋಟೆಲಗಳ ಕಲುಷಿತ ನೀರು ಒಂದೆಡೆ ಆದ್ರೆ ಕೊಳಚೆ ನೀರು ಮತ್ತು ಪ್ರಾಣಿಗಳ ತ್ಯಾಜ್ಯ ಇವೆಲ್ಲವೂ ನಮ್ಮ ಪಂಚ ಗಂಗಾವಳಿಗೆ ಸೇರೋದನ್ನ ಎಲ್ರು ನೋಡ್ತಿದಾರೆ ಯಾರು ದನಿ ಕುಡ್ಸೋರಿಲ್ಲ.

  4. ಹೋಟೆಲಗಳ ಕಲುಷಿತ ನೀರು ಒಂದೆಡೆ ಆದ್ರೆ ಕೊಳಚೆ ನೀರು ಮತ್ತು ಪ್ರಾಣಿಗಳ ತ್ಯಾಜ್ಯ ಇವೆಲ್ಲವೂ ನಮ್ಮ ಪಂಚ ಗಂಗಾವಳಿಗೆ ಸೇರೋದನ್ನ ಎಲ್ರು ನೋಡ್ತಿದಾರೆ ಯಾರು ದನಿ ಕುಡ್ಸೋರಿಲ್ಲ.

Leave a Reply

Your email address will not be published. Required fields are marked *