ಸಾಂಪ್ರದಾಯಿಕ ಪದ್ಧತಿಯಲ್ಲಿ ಮೀನುಗಾರಿಕೆ ಮಾಡಿದರೆ ಮೀನುಗಳ ಸಂತಾನ ಕಡಿಮೆಯಾಗುವುದಿಲ್ಲ, ಎಂದು ಹಿರಿಯರು ಆಗಾಗ ಹೇಳುತ್ತಿರುತ್ತಾರೆ. ಈ ಹೇಳಿಕೆ ಕೇವಲ ಮೀನುಗಾರಿಕೆಗೆ ಮಾತ್ರ ಸೀಮಿತವಲ್ಲ. ನೆಲದ ಮೇಲೆ ಮಾಡುವ ವ್ಯವಸಾಯಕ್ಕೂ ಅನ್ವಯಿಸುತ್ತದೆ. ಸಾವಯವ ಪದ್ಧತಿಯಲ್ಲಿ ವ್ಯವಸಾಯ ನಡೆಸಿದಷ್ಟು ಕಾಲ, ಭೂಮಿ ಹೆಚ್ಚು ಹೆಚ್ಚು ಫಲವತ್ತತೆಯನ್ನು ಉಳಿಸಿಕೊಳ್ಳುತ್ತದೆ. ಅಧಿಕ ಇಳುವರಿಯ ಆಸೆಗಾಗಿ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಯಂತ್ರೋಪಕರಣಗಳನ್ನು ಬಳಸಿದಂತೆ ಭೂಮಿಯ ಫಲವತ್ತತೆ ನಾಶವಾಗಿ ಒಂದು ದಿನ ಭೂಮಿ ಬಂಜರು ಭೂಮಿಯಾಗಿ ಪರಿವರ್ತನೆಯಾಗುವುದು. ಸಮುದ್ರವೂ ಇದಕ್ಕೆ ಹೊರತಾಗಿಲ್ಲ. ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಸಮುದ್ರದ ಮೇಲಿನ ಒತ್ತಡವೂ ಹೆಚ್ಚಾಗುತ್ತಿದೆ. ಹಾಗಾಗಿ ಕಡಿಮೆ ಆದಾಯ ನೀಡುವ ಸಂಪ್ರದಾಯಿಕ ಕೆಲವು ವಿಧಾನಗಳು ಕಣ್ಮರೆಯಾಗಿ ಹೋಗುತ್ತಿವೆ. ಅದರ ಜಾಗದಲ್ಲಿ ಹೊಸ ಹೊಸ ರೀತಿಯ ಮೀನುಗಾರಿಕಾ ಪದ್ಧತಿಗಳು ಕಂಡುಬರುತ್ತಿದೆ.
‘ಕೈರಂಪಣಿ’ ಈ ಹೆಸರನ್ನು ಸಾಮಾನ್ಯವಾಗಿ ತೀರ ಪ್ರದೇಶದ ಜನರು ಕೇಳಿರುತ್ತಾರೆ. ಕೈರಂಪಣಿ ಎಂಬ ಮೀನುಗಾರಿಕಾ ಪದ್ಧತಿ, ದಡದಲ್ಲಿ ನಡೆಸುವ ಮೀನುಗಾರಿಕೆ ಮತ್ತು ಆಧುನಿಕತೆಯ ಸೋಂಕು ತಾಗದ ಮೀನುಗಾರಿಕಾ ಪದ್ಧತಿಯಾಗಿದೆ. ಅಲೆಗಳು ಬಂದು ದಡಕ್ಕೆ ಅಪ್ಪಳಿಸುವ ಜಾಗದಿಂದ ಸ್ವಲ್ಪ ಮುಂದೆ, ಬಲೆ ತುಂಬಿಸಿಕೊಂಡ ದೋಣಿಯ ಹುಟ್ಟು ಹಾಕಿಕೊಂಡು ಹೋಗುತ್ತದೆ. ಅದರ ಮೇಲಿರುವ ಒಬ್ಬ ಮೀನುಗಾರ ಬಲೆಯ ಒಂದು ತುದಿಯ ಹಗ್ಗವನ್ನು ದಡದತ್ತ ಬಿಸಾಡುತ್ತಾನೆ. ಆಗ ದಡದಲ್ಲಿ ನಿಂತಿರುವ, ಒಬ್ಬ ನುರಿತ ಈಜುಗಾರ, ಈಜಿಕೊಂಡು ಹೋಗಿ ಹಗ್ಗವನ್ನು ಎಳೆದು ತಂದು ಉಳಿದವರ ಕೈಗೆ ನೀಡಬೇಕು. ಅದು ಬೆಳಗ್ಗೆ ಆರು ಗಂಟೆಯಾಗಲಿ, ಕತ್ತಲ ರಾತ್ರಿಯಾಗಲಿ, ಮೈ ಕೊರೆಯುವ ಚಳಿಯಿರಲಿ, ಮಳೆಯಿರಲಿ, ಅವನು ಈಜಿಕೊಂಡು ಹೋಗಿ ತರಲೇಬೇಕು. ದೋಣಿಯಲ್ಲಿರುವ ನಾಲ್ಕು ಮಂದಿ ಗಟ್ಟಿ ಆಳುಗಳು ಹುಟ್ಟು ಹಾಕಿದರೆ, ಒಬ್ಬ ದೋಣಿಯ ಪಥವನ್ನು ನಿಯಂತ್ರಿಸುತ್ತಾನೆ. ದೋಣಿ ಹೋಗುವ ವೇಗಕ್ಕೆ ಸರಿಯಾಗಿ ಇಬ್ಬರು, ಅರ್ಧಚಂದ್ರಾಕೃತಿಯಲ್ಲಿ ಬಲೆ ಬೀಸುತ್ತಾ ಹೋಗುತ್ತಾರೆ. ಬಲೆ ಬೀಸಿದ ನಂತರ ಎರಡೂ ಬದಿಯಲ್ಲಿ ನೆಲದ ಮೇಲೆ ನಿಂತ ಎಲ್ಲರೂ ಬಲೆ ಎಳೆಯಲು ಪ್ರಾರಂಭಿಸುತ್ತಾರೆ. ದಡದಲ್ಲಿ ನಿಂತು ಬಲೆ ಎಳೆಯುವವರಿಗೆ ಸಂಭಾವನೆಯ ರೂಪದಲ್ಲಿ, ಆ ದಿನದಲ್ಲಿ ಸಿಕ್ಕ ಹಣದಲ್ಲಿ ಒಂದು ಪಾಲು ಸಿಕ್ಕರೆ, ಮೈ ಒದ್ದೆ ಮಾಡಿಕೊಂಡು ಹಗ್ಗದ ಸೆರಗು ತಂದವನಿಗೆ ಎರಡು ಪಾಲು. ದೋಣಿ ಏರಿದ ಅಷ್ಟೂ ಜನರಿಗೂ ಎರಡೆರಡು ಪಾಲು ಸಿಗುತ್ತವೆ. ಬಲೆಯ ಮಧ್ಯಭಾಗ ಅತ್ಯಂತ ಗಟ್ಟಿ ಬಲೆಯಿಂದ ನಿರ್ಮಾಣ ಮಾಡಿರುತ್ತಾರೆ. ಮೀನೆಲ್ಲ ಮಧ್ಯಭಾಗದಲ್ಲಿ ಸಂಗ್ರಹವಾಗುತ್ತಾ ಹೋದಂತೆ ಅಲ್ಲಿ ಒತ್ತಡ ಹೆಚ್ಚಾಗಿ, ಅಷ್ಟು ಮೀನಿನ ಭಾರ ತಾಳಿಕೊಳ್ಳದೆ ಹರಿದು ಹೋದರೆ, ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಬಹುದು.
ಇದು ದಿನವಿಡೀ ನಡೆಯುವ ಮೀನುಗಾರಿಕೆಯಲ್ಲ. ಒಂದು ಬಾರಿ ಬಲೆ ಬಿಟ್ಟರೆ ಒಂದೆರಡು ಗಂಟೆಗಳಲ್ಲಿ ಕೆಲಸ ಮುಗಿದು ಹೋಗುತ್ತದೆ. ಈ ಕಾರಣಕ್ಕಾಗಿ ಶಾಲೆ, ಕಾಲೇಜುಗಳಿಗೆ ಹೋಗುವ ಮಕ್ಕಳು, ವಯಸ್ಸಾದ ಮುದುಕರು, ಆಳ ಸಮುದ್ರದ ಮೀನುಗಾರಿಕೆಗೆ ತೆರಳಲಾಗದ ಅಶಕ್ತರು ಎಲ್ಲರೂ ಇದರಲ್ಲಿ ಸೇರಿಕೊಳ್ಳುತ್ತಾರೆ. ಕೈರಂಪಣಿ ವರ್ಷದ ಎಲ್ಲ ಋತುಗಳಲ್ಲಿ ನಡೆಯದು. ಮೀನುಗಳು ತೀರ ಪ್ರದೇಶಕ್ಕೆ ಬರುವ ಅಗಸ್ಟ್ ತಿಂಗಳಿನಿಂದ ಐದಾರು ತಿಂಗಳುಗಳ ಕಾಲ ಮಾತ್ರ ನಡೆಯುತ್ತದೆ.
ಕೈರಂಪಣಿ ಎಳೆಯುವ ಸ್ಥಳದಲ್ಲಿ ವಾರದ ಸಂತೆ ನಡೆಯುತ್ತಿದೆಯೇ ಎಂದು ಅನ್ನಿಸುವುದುಂಟು. ಮಕ್ಕಳು ಮುದುಕರು, ಹೆಂಗಸರು ಎಲ್ಲರಿಗೂ ಒಂದು ಕುತೂಹಲ. ಕೆಲವರಂತೂ ಒಂದು ಚಿಕ್ಕ ಕೈಚೀಲ ಹಿಡಿದುಕೊಂಡೇ ಬರುತ್ತಾರೆ. ಬಲೆ ಎಳೆಯುವಾಗ ಸಿಗುವ ಚಿಕ್ಕಪುಟ್ಟ ಮೀನುಗಳಿಂದ ಮಧ್ಯಾಹ್ನದ ಪದಾರ್ಥಕ್ಕೆ ಪರಿಮಳ ಬರಬಹುದು ಎಂಬುದು ಅವರು ಆಸೆ. ಕೊಡ್ಡಾಯಿ, ಬೊಂಡಾಸ್, ಏಡಿ, ಸಿಗಡಿ ಮೀನುಗಳ ಜೊತೆಗೆ ಅಪರೂಪದ ಮೀನುಗಳಾದ ಹಾರುವ ಮೀನು, ಎಲೆಕ್ಟ್ರಿಕ್ ರೇ ಮೀನು, ಪಪ್ಫರ್ ಮೀನು, ಕಡಲ ಹಾವು ಮುಂತಾದವುಗಳನ್ನು ನೋಡಬಹುದೆಂಬ ಆಸೆಯಿಂದ ಬರುವವರೂ ಇದ್ದಾರೆ. ಉತ್ತರ ಕನ್ನಡದಲ್ಲಿ ಈ ಬಾರಿ ಕೈರಂಪಣಿ ಎಳೆಯುವಾಗ ಮೊಸಳೆ ಸಿಕ್ಕಿದ್ದು ಕೇಳಿರಬಹುದು. ಅದು ನೆರೆ ನೀರಿನಿಂದ ನದಿಯ ಮೂಲಕ ಸಮುದ್ರಕ್ಕೆ ಬಂದ ಮೊಸಳೆ. ನಿಯಮಬದ್ಧವಾಗಿ ಬಲೆ ಎಳೆಯುವ ವಿಧಾನ, ರಾಗವಾಗಿ ಹೇಳುವ ಹೈ ಜೋಸ್ ಗೆ ಮರುಳಾಗಿ ನೋಡಲು, ಕೇಳಲು ಬರುವವರಿದ್ದಾರೆ. ಸಿಕ್ಕ ಮೀನನ್ನು ಬಲೆಯ ಚೀಲದಲ್ಲಿ ತುಂಬಿ, ದೊಡ್ಡ ಬಿದಿರಿನ ಕೋಲಿಗೆ ಸಿಕ್ಕಿಸಿ ಇಬ್ಬರು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ರೀತಿ ಅದ್ಭುತ. ಮೀನನ್ನು ಹರಾಜು ಕೂಗುವುದು, ಮೀನಿನ ರಾಶಿಗೆ ದರ ನಿಗದಿ ಪಡಿಸುವುದೆಲ್ಲವೂ ಹೆಂಗಸರು ಮತ್ತು ಮಕ್ಕಳಿಗೆ ಹೊಸದು. ಸಮುದ್ರ ಮಧ್ಯಕ್ಕೆ ಹೋಗಿ ಮೀನುಗಾರಿಕೆ ನೋಡದ ಇವರಿಗೆ ಇದೊಂದು ವಿಸ್ಮಯ ಅನ್ನಿಸುವುದುಂಟು. ಕುತೂಹಲದ ಕಣ್ಣುಗಳಿಂದ ನೋಡುತ್ತಾ ನಿಂತಿರುತ್ತಾರೆ.
ಕಂಚುಗೋಡಿನ ಪತ್ರಿ ಚಂದ್ರಣ್ಣನವರು ಬಹು ದೀರ್ಘ ಸಮಯದಿಂದ ಕೈರಂಪಣಿ ಬಲೆಯಿಂದ ಮೀನುಗಾರಿಕೆ ಮಾಡಿಕೊಂಡು ಬಂದವರು. ಆದರೆ ಇತ್ತೀಚಿಗೆ ಅವರು ಈ ಕಸುಬನ್ನೇ ಬಿಟ್ಟಿದ್ದಾರೆ. ಕಾರಣ ಹಲವು ಇದೆ. ಮೊದಲೆಲ್ಲ ಆಳ ಸಮುದ್ರದಿಂದ ಮೀನುಗಳು ದಡಕ್ಕೆ ಬರುತ್ತಿದ್ದವು. ಈಗ ದಡಕ್ಕೆ ಮೀನು ಬರುವ ಮೊದಲೇ ಬೇಟೆಯಾಡಲಾಗುತ್ತದೆ. ದೊಡ್ಡ ದೊಡ್ಡ ಬೋಟುಗಳ ಶಬ್ದವೂ ಕೂಡ ಮೀನುಗಳನ್ನು ದಡಕ್ಕೆ ಬರದಂತೆ ತಡೆದಿರಬಹುದು. ಆದ್ದರಿಂದ ಇಂದು ಮತ್ಸ್ಯಕ್ಷಾಮ ತಲೆದೋರಿದೆ. ಇದರ ಜೊತೆ ಮೊದಲಿನಂತೆ ಕೆಲಸದಾಳುಗಳನ್ನು ಒಟ್ಟು ಮಾಡಲಾಗದು. ಹೆಚ್ಚು ಹಣ ಸಂಪಾದನೆಯ ಮಾರ್ಗ ಕಂಡುಹಿಡಿದವರು, ಕೈರಂಪಣಿಯಂತಹ ಕಡಿಮೆ ಹಣ ಸಿಗುವ ಉದ್ಯೋಗಕ್ಕೆ ಬರಲಾರರು. ವರ್ಷವಿಡೀ ಈ ಮೀನುಗಾರಿಕೆ ಇಲ್ಲದ ಕಾರಣ ಇತ್ತ ಕಡೆ ಯುವ ಜನತೆ ತಲೆ ಹಾಕುತ್ತಿಲ್ಲ. ಈ ಎಲ್ಲಾ ಕಾರಣಕ್ಕೆ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ದೊಡ್ಡ ಪಾತ್ರ ನಿರ್ವಹಿಸಿದ್ದ ಕೈರಂಪಣಿ ಮೀನುಗಾರಿಕೆ ತನ್ನ ಪಾತ್ರವನ್ನು ಕಳಚಿಟ್ಟು ತೆರೆಮರೆಗೆ ಸರಿಯುತ್ತಿದೆ. ಇದೊಂದೆ ಅಲ್ಲ, ಒಂದು ದಿನ ಮೊದಲೇ ಕಟ್ಟಿ ಬರುತ್ತಿದ್ದ, ರಂಪಣಿ ಮೀನುಗಾರಿಕೆಯೂ ಕಣ್ಮರೆಯಾಗಿದೆ. ಅತ್ಯಂತ ಉದ್ದದ ಹಗ್ಗಕ್ಕೆ, ಒಂದೈದು ಮೀಟರ್ ಅಂತರದಲ್ಲಿ ಹತ್ತಾರು ಗಾಳ ಸಿಕ್ಕಿಸಿ, ಎರೆ ಹಾಕಿ ಸಮುದ್ರ ಬಿಟ್ಟು ಗುರುತು ಮಾಡಿ ಬರುತ್ತಾರೆ. ಮರುದಿನ ಹೋಗಿ ಎಳೆದುಕೊಂಡು ಬರುತ್ತಿದ್ದರು. ಇದು ಇತ್ತೀಚಿನ ದಿನಗಳಲ್ಲಿ ಇಲ್ಲವೇ ಇಲ್ಲ ಎಂದು ಹೇಳಬಹುದು.
ಒಟ್ಟಾರೆಯಾಗಿ ಆಧುನಿಕತೆಯ ಬೆನ್ನು ಹತ್ತಿರುವ ಮನುಷ್ಯ ಎಲ್ಲವೂ ವೇಗವಾಗಿ ಆಗಬೇಕು, ಹೆಚ್ಚು ಶ್ರಮವಿಲ್ಲದೆ ಆಗಬೇಕು ಎಂಬ ತತ್ತ್ವಕ್ಕೆ ಜೋತು ಬಿದ್ದಿದ್ದಾನೆ. ಕಡಿಮೆ ಶ್ರಮ, ಹೆಚ್ಚು ಗಳಿಕೆ ಎಂಬ ವಿಚಾರ ಎಲ್ಲಿಯವರೆಗೆ ಮನುಷ್ಯನ ಮನಸ್ಸಿನಿಂದ ಹೊರ ಹೋಗುವುದಿಲ್ಲವೋ ಅಲ್ಲಿಯವರೆಗೆ ಪ್ರಕೃತಿಯೂ ಪೂರಕವಾಗಿ ನಮ್ಮೊಂದಿಗೆ ಸಹಕರಿಸಲಾರದು.
ನಾಖಾರ್ವಿ ಕಂಚುಗೋಡು
ನಾಖಾರ್ವಿ ಕಂಚಗೋಡುರವರ ಕೈರಂಪಣಿ ಲೇಖನದಲ್ಲಿ ಪ್ರಸ್ತುತ ನಡೆಯುತ್ತಿರುವ ಮೀನುಗಾರಿಕೆ ವಿದ್ಯಮಾನಗಳ ನೈಜ ಚಿತ್ರಣವಿದೆ