ಜೂನ್ ಮತ್ತು ಜುಲೈ ತಿಂಗಳಲ್ಲಿ ಸಮುದ್ರ ಯಾವಾಗಲೂ ರೌದ್ರಾವತಾರವನ್ನು ತಾಳಿರುತ್ತದೆ. ಜಿಲ್ಲಾಡಳಿತವೂ ಸಹ ಜೂನ್ ಮತ್ತು ಜುಲೈ ತಿಂಗಳಲ್ಲಿ ಯಾಂತ್ರಿಕ ಮೀನುಗಾರಿಕೆ ನಿಷೇಧಿಸುತ್ತದೆ. ಇದಕ್ಕೆ ಕಾರಣ, ಒಂದು ಅತಿಯಾದ ಮಳೆ, ಗಾಳಿಯ ಅಬ್ಬರಕ್ಕೆ ಸಮುದ್ರ ಯಾವ ಸಮಯದಲ್ಲಿಯೂ ಮೀನುಗಾರರ ಜೀವಕ್ಕೆ ಹಾನಿ ಉಂಟುಮಾಡಬಹುದು ಎಂಬುದು; ಇನ್ನೊಂದು ಈ ಸಮಯದಲ್ಲೇ ಮೀನುಗಳು ಮೊಟ್ಟೆ ಇಟ್ಟು ಸಂತಾನಾಭಿವೃದ್ಧಿ ಮಾಡಲು ಸಮುದ್ರದಂಡೆಗೆ ಆಗಮಿಸುತ್ತದೆ ಎಂದು. ಈ ಸಮಯದಲ್ಲಿ ಮೀನುಗಳನ್ನು ಹಿಡಿದರೆ ಮತ್ಸ್ಯ ಸಂತತಿ ನಾಶವಾಗುತ್ತದೆ ಎಂಬುದಾಗಿ ಸಾಗರ ವಿಜ್ಞಾನಿಗಳು ಹೇಳುತ್ತಾರೆ. ಆದರೆ ಮೀನುಗಾರರಿಗೆ ಮಾತ್ರ ಈ ಎರಡು ತಿಂಗಳುಗಳು ಅತ್ಯಂತ ಕಷ್ಟದ ಸಮಯ. ಏಕೆಂದರೆ ಈ ಎರಡು ತಿಂಗಳುಗಳಲ್ಲಿ ಬದುಕಲು ಬೇಕಾದ ಮೂಲಭೂತ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲೂ ಕಷ್ಟ ಸಾಧ್ಯ.
ಎಲ್ಲಾ ಉದ್ಯಮಗಳು ಇನ್ನೇನು ಕೈ ಹಿಡಿಯುತ್ತವೆ ಎನ್ನುವಾಗ ಕೊರೋನಾದ ಎರಡನೆಯ ಅಲೆಯನ್ನು ಎದುರಿಸಬೇಕಾಯಿತು. ಮೀನುಗಾರಿಕೆಯೂ ಎರಡನೆಯ ಅಲೆಯ ನೇರ ಪರಿಣಾಮ ಎದುರಿಸಿತು. ಕಡಲಿನ ಅಬ್ಬರದ ಅಲೆಗಳಿಗೆ ಹೆದರದವ ಕೊರೊನಾ ಅಲೆಗೆ ಮಂಡಿಯೂರಿದ. ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸ್ವಲ್ಪಮಟ್ಟಿಗಾದರೂ ಮೀನುಗಾರಿಕೆ ಚೇತರಿಸಿಕೊಳ್ಳುತ್ತದೆ. ಎರಡನೆಯ ಅಲೆಯ ಲಾಕ್‌ಡೌನ್ ಆರಂಭಕ್ಕಿಂತ ಮೂರ್ಕಾಲ್ಕು ತಿಂಗಳುಗಳ ಹಿಂದೆ, ಮತ್ಸ್ಯ ಕ್ಷಾಮ ಉಂಟಾಗಿತ್ತು.
ಅದರ ನಂತರ ಲಾಕ್ ಡೌನ್; ಅದರ ಬೆನ್ನಿಗೆ ತೌಖ್ತೆ ಚಂಡಮಾರುತದ ಅಬ್ಬರ. ಚಂಡಮಾರುತವು ಮನೆ, ಮಠ, ದೋಣಿಗಳು, ಹಡಗುಗಳು, ಮರಗಳನ್ನು ನುಂಗಿ ನೀರು ಕುಡಿದರೂ ಹತ್ತು ಹದಿನೈದು ದಿನಗಳಲ್ಲಿ, ಸಮುದ್ರ ಸಹಜ ಸ್ಥಿತಿಗೆ ಬಂದಂತೆ ಕಂಡಿತು. ಆದರೂ ಮೀನುಗಾರಿಕೆ ಸಾಧ್ಯವಾಗಿರಲಿಲ್ಲ. ಇದೀಗ ಸಮುದ್ರ ಪುನಃ ಪ್ರಕ್ಷುಬ್ಧಗೊಂಡಿದೆ. ಒಟ್ಟಾರೆಯಾಗಿ ಕಳೆದ ಏಳೆಂಟು ತಿಂಗಳುಗಳಿಂದ ಬಡ ಮೀನುಗಾರರು ಸಂಕಷ್ಟದಲ್ಲೇ ದಿನ ದೂಡುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಕಡಲ ತೀರದಲ್ಲೇ ಮೀನುಗಾರಿಕೆ ಮಾಡಿದರೂ, ಐಸ್ ಪ್ಲಾಂಟ್ ಗಳಿಂದ ಐಸ್ ಲಭ್ಯವಿಲ್ಲದ ಕಾರಣ ಮೀನುಗಳ ಸಂಗ್ರಹಣೆ, ಸಂಸ್ಕರಣೆ ಅಸಾಧ್ಯವಾಯಿತು.
ಆಯಾಯ ದಿನವೇ ಮಾರುಕಟ್ಟೆಗೆ ಕಳಿಸಬೇಕಾದ ಅನಿವಾರ್ಯತೆ ಉಂಟಾಯಿತು. ದುರದೃಷ್ಟವಶಾತ್ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ದೂರದ ಮಾರುಕಟ್ಟೆಯೊಂದಿಗೆ ಬೆಸೆಯುವುದು ಮರೀಚಿಕೆಯಾಗಿ ಉಳಿಯಿತು. ಮೀನುಗಾರಿಕೆಯ ನಿರೀಕ್ಷೆಯಲ್ಲಿ ದೋಣಿಗಳು ಸಮುದ್ರ ದಂಡೆಯಲ್ಲಿ ಸಮುದ್ರವನ್ನೇ ದಿಟ್ಟಿಸಿ ನೋಡುತ್ತಿರುವಂತೆ ಭಾಸವಾಗುತ್ತದೆ. ಈ ರೀತಿಯಲ್ಲಿ ಒಂದರ ಬೆನ್ನಿಗೆ ಒಂದರಂತೆ ಸಮಸ್ಯೆಗಳ ಸರಮಾಲೆಯಲ್ಲೇ ಮೀನುಗಾರ ಧರಿಸುವಂತಾಯಿತು. ಉದ್ಯೋಗವಿಲ್ಲದೆ ಖಾಲಿ ಕೈಯಲ್ಲಿ ಜೀವನ ದೂಡುವಂತಾಯಿತು.
ಲಾಕ್ ಡೌನ್ ನಲ್ಲಿ ಜೀವನ ದುರ್ಭರಗೊಂಡವರ ರಕ್ಷಣೆಗಾಗಿ ಸರಕಾರ ಮೊದಲ ಹಂತದ ಪರಿಹಾರದ ಮೊತ್ತ ಘೋಷಣೆ ಮಾಡಿತು. ಅದರಲ್ಲಿ ಮೀನುಗಾರಿಕಾ ವಲಯ ತಪ್ಪಿ ಹೋಯಿತು. ಇದಕ್ಕೆ ಹತ್ತಾರು ಕಾರಣಗಳಿರಬಹುದು. ಆದರೆ ಮೀನುಗಾರರ ಅಸ್ಮಿತೆಗೆ ಕೊಡಲಿಯೇಟು ಬಿದ್ದಂತಾಯ್ತು. ಮೀನುಗಾರಿಕೆಯನ್ನು ಕೃಷಿಯೆಂದು ಪರಿಗಣಿಸಿದರೂ, ಕೃಷಿಕರಿಗೆ ಸಿಗುವ ಸವಲತ್ತುಗಳು ಮೀನುಗಾರರಿಗೆ ಸಿಗದು. ಪರಿಹಾರದ ವಿಷಯದಲ್ಲಿ ಸರಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಮೀನುಗಾರರು ಒಕ್ಕೊರಲಿನಿಂದ ಹೇಳಿದರು; ಜನಪ್ರತಿನಿದಿಗಳ ಗಮನ ಸೆಳೆದರು; ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಇದು ನಾಡನಾಳುವ ದೊರೆಯ ಕಿವಿಗೆ ತಲುಪಿತು. ತತ್ಪರಿಣಾಮವಾಗಿ ಎರಡನೆಯ ಹಂತದ ಪರಿಹಾರ ಘೋಷಣೆಯಾಗುವಾಗ ಮೀನುಗಾರಿಕೆ ಮಾಡುವವರನ್ನು ಪರಿಗಣಿಸುತ್ತೇವೆ ಎಂದು ಹೇಳಲಾಯಿತು.
ಆದರೆ ಕೆಲವು ತಾಂತ್ರಿಕ ನಿಯಮಗಳಿಂದಾಗಿ ಇದು ಎಲ್ಲಾ ಮೀನುಗಾರರಿಗೆ ಸಿಗುವುದಿಲ್ಲ ಎಂಬ ನಗ್ನ ಸತ್ಯವೂ ಎಲ್ಲರಿಗೂ ತಿಳಿಯಿತು. ಪುನಃ ಪುನಃ ಪ್ರತಿಭಟನೆ ಸರಿಯಲ್ಲವೆಂದು ಸ್ವಾಭಿಮಾನಿ ಮೀನುಗಾರರು ಮೌನಿಯಾಗಿದ್ದಾರೆ. ಯಾವುದೇ ಸರಕಾರವಿದ್ದರೂ ಕೈ ತುಂಬಾ ಹಣ ಕೊಟ್ಟು, ರಾಜ್ಯದ ಕೋಟ್ಯಂತರ ಜನರನ್ನು ಉಪಚರಿಸಲಾಗದು; ತೃಪ್ತಿ ಪಡಿಸಲೂ ಆಗದು. ದುಡಿಯುವ ಕೈಗಳಿಗೆ ಒಂದು ಸಣ್ಣ ಗೌರವದ ಮೊತ್ತ ಖಂಡಿತ ತಲುಪುತ್ತದೆ. ಇದು ಅರೆಕಾಸಿನ ಮಜ್ಜಿಗೆಯೆಂಬುದು ಸರಕಾರಕ್ಕೂ ಗೊತ್ತು; ಪ್ರಜೆಗಳಿಗೂ ಗೊತ್ತು. ಆದರೆ ಕಷ್ಟಕಾಲದಲ್ಲಿ ನಮ್ಮೊಂದಿಗೆ ಸರಕಾರ ಇದೆ ಎಂಬ ಮಾನಸಿಕ ಸ್ಥೈರ್ಯ ಜನರಿಗೆ ಮೂಡಲಿ ಎಂಬುದೇ ಇದರ ಉದ್ದೇಶ. ಇದನ್ನು ಮೀನುಗಾರರೂ ನಿಧಾನವಾಗಿ ಅರ್ಥ ಮಾಡಿಕೊಂಡಿದ್ದಾರೆ. ತಮಗೆ ಸಿಗುವ ಸಣ್ಣ ಮೊತ್ತದ ಹಣಕ್ಕಿಂತ ತಮ್ಮ ವಲಯವನ್ನು ಸೇರಿಸಿದ್ದಾರಲ್ಲ ಎಂಬ ವಿಶಾಲ ಭಾವ ಮೂಡಿತು.
ಕದಡಿದ ಕೆಸರಿನ ಕೊಳ ನಿಧಾನವಾಗಿ ತಿಳಿಗೊಳ್ಳುತ್ತಿದೆ. ದೇಶವಾಸಿಗಳ ಕಷ್ಟದ ದಿನಗಳು ಕೊಳದ ಕೆಸರಿನಂತೆ ತಳ ಸೇರಿ ನೆಮ್ಮದಿ ಕಾಣುವ ದಿನಗಳು ಸಮೀಪಿಸಲಿ ಎಂಬುದು ಸರ್ವರ ಹರಕೆಯಾಗಿದೆ. ಮೀನುಗಾರಿಕೆ ಪುನಃ ಪ್ರಾರಂಭಗೊಂಡು, ಸ್ತಬ್ಧಗೊಂಡ ಕರಾವಳಿ ಮರಳಿ ನಳನಳಿಸಲಿ. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಮೀನುಗಾರಿಕೆಯನ್ನೇ ನಂಬಿಕೊಂಡು ಬದುಕುತ್ತಿರುವ ಕರಾವಳಿಯ ಶೇಕಡಾ ಎಂಬತ್ತರಷ್ಟು ಜನರ ಜೀವನಕ್ಕೆ ನವ ಚೈತನ್ಯ ಬರುವಂತಾಲಿ.
ಹಾಯಿದೋಣಿ ಅಂಕಣ ಬರೆಹ
ನಾಗರಾಜ ಖಾರ್ವಿ ಕಂಚುಗೋಡು