ತನ್ನ ಕಕ್ಷೆಗೆ ಬರುವ ಎಲ್ಲ ವಸ್ತುಗಳನ್ನು ಗುಳುಂ ಮಾಡಬಲ್ಲ ಅಗೋಚರ ಅಪಾಯಕಾರಿ ಕಾಯವೇ ಕಪ್ಪು ಕುಳಿ ಅಥವಾ ಕಪ್ಪು ದೈತ್ಯ ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ ಇಂಗ್ಲಿಷ್ ನಲ್ಲಿ ಇದು Black Hole ಎಂದು ಕರೆಯಲ್ಪಡುತ್ತದೆ ನಭೋಮಂಡಲದಲ್ಲಿ ಅಗೋಚರ ರೂಪದಲ್ಲಿರುವ ಕಪ್ಪು ದೈತ್ಯನಿಂದ ಭೂಮಿಗೂ ಕೂಡಾ ಅಪಾಯ ತಪ್ಪಿದ್ದಲ್ಲ ಇದರ ಗುರುತ್ವಾಕರ್ಷಣ ಶಕ್ತಿಯು ಎಷ್ಟು ಬಲಿಷ್ಠವಾಗಿದೆಯೆಂದರೆ, ಬೆಳಕಿನ ಕಿರಣ ಕೂಡಾ ಇದರಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲಇದರ ಕಬಂಧ ಬಾಹುಗಳಿಗೆ ಸಿಲುಕಿದ ವಸ್ತುಗಳು ಸರ್ವನಾಶ ಖಂಡಿತಾ ಜಗತ್ತನ್ನೇ ಸರ್ವನಾಶ ಮಾಡುವಂತಹ ಮಹಾಬಲಶಾಲಿ ಕಪ್ಪು ದೈತ್ಯ ಆಗೋಚರ ಕಾಯದ ಬಗ್ಗೆ ಇಷ್ಟೆಲ್ಲ ಪೀಠಿಕೆ ವಿವರಣೆ ನೀಡಲು ಕಾರಣ ಕೇಳಿದರೆ ನಿಜಕ್ಕೂ ನೀವು ದಂಗಾಗುತ್ತೀರಿ.
ಈ ಕಪ್ಪು ದೈತ್ಯರ ಅಪರಾವತಾರವಾದ ಬಂಡವಾಳ ಶಾಹಿಗಳ ಖಾಸಗಿ ವಾಣಿಜ್ಯ ಬಂದರು ಯೋಜನೆ ಬೃಹತ್ ರೂಪದಲ್ಲಿ ನಮ್ಮ ಕರಾವಳಿ ತೀರಗಳನ್ನು ತನ್ನ ಕಬಂಧ ಬಾಹುಗಳ ಮೂಲಕ ಬಲಿ ತೆಗೆದುಕೊಳ್ಳುವ ವಿನಾಶಕಾರಿ ವಾರ್ತೆಯೊಂದು ಆಹಿತಕಾರಿಯಾಗಿ ಅಪ್ಪಳಿಸಿದೆ ಶೀಘ್ರದಲ್ಲೇ ನಮ್ಮ ಕರಾವಳಿಯೂದ್ದಕ್ಕೂ ಇಂತಹ ಮತ್ತಷ್ಟೂ ಜನವಿರೋಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಮೀನುಗಾರ ಸಮಾಜವನ್ನು ಅದರಲ್ಲೂ ರಾಜಕೀಯ ಪ್ರಾತಿನಿಧ್ಯವಿಲ್ಲದ ಕೊಂಕಣಿ ಖಾರ್ವಿ ಸಮಾಜವನ್ನು ನಿರ್ವಸಿತರನ್ನಾಗಿ ಮಾಡುವ ವಿನಾಶಕಾರಿ ತಂತ್ರಗಾರಿಕೆ ಅತೀ ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಕಾರವಾರದಿಂದ ಹಿಡಿದು ಮಂಗಳೂರು ತನಕ ನಮ್ಮ ಸಮಾಜವನ್ನು ಕೇಂದ್ರೀಕರಿಸಿಕೊಂಡು ಈ ಖಾಸಗಿ ಬಂದರು ಯೋಜನೆ ಬಲವಂತವಾಗಿ ಅನುಷ್ಠಾನಗೊಳ್ಳಲ್ಲಿದ್ದು ಕಾರವಾರದಲ್ಲಿ ನಡೆದ ಸಭೆಯೊಂದರಲ್ಲಿ ಜನನಾಯಕನೊಬ್ಬನ ಈ ಪ್ರಸ್ತಾಪ ಹೊರಬಿದ್ದಿದೆ ಇದರ ಪೂರ್ವಭಾವಿ ಪ್ರಯೋಗವಾಗಿ ಹೊನ್ನಾವರ ಕಾಸರಕೋಡು ಟೊಂಕದಲ್ಲಿ ನಡೆದ ನಮ್ಮ ಸಮಾಜದ ಮೀನುಗಾರರ ಮನೆಮಠ ದ್ವಂಸ ಪ್ರಕರಣವೇ ಜ್ವಲಂತ ಸಾಕ್ಷಿಯಾಗಿದೆ.
ಅನಾದಿಕಾಲದಿಂದಲೂ ಕಡಲತಡಿಯಲ್ಲಿ ವಾಸ್ಯವಿಸಿಕೊಂಡು ಮನೆ ಬದುಕು ಕಟ್ಟಿ ಕೊಂಡಿರುವ ನಮಗೆ ಉತ್ತರದಿಂದ ದಕ್ಷಿಣ ಕರಾವಳಿಯ ತನಕವೂ ಹಲವಾರು ದೇವದೇವತೆಗಳ ಅನುಗ್ರಹ ಕೃಪಾಕಟಾಕ್ಷ ಪ್ರಾಪ್ತಿಯಾಗಿ ಬಡತನದ ಬದುಕಿನಲ್ಲೂ ನೆಮ್ಮದಿಯಾಗಿದ್ದವು ಕಡಲಗರ್ಭ ದಿಂದ ಮೇಲೆದ್ದು ಬಂದ ಪ್ರಚಂಡ ಸುನಾಮಿಯೂ ನಾವು ನಂಬಿರುವ ದೈವಶಕ್ತಿಗಳ ಕೃಪೆಯಿಂದ ಕರಗಿಹೋಯಿತು ಇದೀಗ ನಮ್ಮನ್ನು ನಮ್ಮ ನೆಲದಿಂದಲೇ ಬಡಿದೋಡಿಸಲು ಸರ್ವನಾಶ ಮಾಡಲು ಬಂಡವಾಳಶಾಹಿ ಕಪ್ಪು ದೈತ್ಯರು ಹೊಂಚುಹಾಕಿ ಕುಳಿತಿದ್ದು ನಮ್ಮ ಸಮಾಜ ನಾಮಾವಶೇಷಗೊಳ್ಳುವ ಅಪಾಯ ಎದುರಾಗಿದೆ ಬಂಧುಗಳೇ ನಾವು ಎಲ್ಲವನ್ನೂ ಕಳೆದುಕೊಂಡು ನಮ್ಮ ನೆಲದಲ್ಲೇ ಪರದೇಶಿಗಳಾಗುವ ಪರಿಸ್ಥಿತಿ ಬರಬಾರದೆಂದರೆ ಪ್ರಚಂಡ ಸಂಘಟಿತ ಹೋರಾಟ ಅನಿವಾರ್ಯ ನಾವು ಬದುಕುಳಿಯಬೇಕಾದರೆ ರಾಜಕೀಯ ರಹಿತವಾದ ಚಳವಳಿಗೆ ದಿಟ್ಟ ಹೆಜ್ಜೆ ಇಡಬೇಕಾಗಿದೆ ಚಳವಳಿಯ ಬೆಳಕಿನಲ್ಲಿ ನಮ್ಮ ಆಸ್ಮಿತೆಯ ಪಂಜುಗಳನ್ನು ಹಿಡಿದು ಹಾದಿ ತುಳಿಯಬೇಕಾಗಿದೆ ಅದಕ್ಕಾಗಿ ನಮ್ಮಸಮಾಜದ ಯುವ ಮನಸ್ಸುಗಳು ಸಮರೋಪಾದಿಯಲ್ಲಿ ಸಜ್ಜಾಗಬೇಕಾಗಿದೆ ಸಮೂಹ ಮಾಧ್ಯಮಗಳ ಮೂಲಕ ಅಕ್ಷರ ಸಮರದ ಮೂಲಕ ಪ್ರತಿಯೊಬ್ಬರಿಗೂ ನಮ್ಮ ಹೋರಾಟ ತಲುಪಬೇಕಾಗಿದೆ ಇಲ್ಲದಿದ್ದರೆ ನಮಗೆ ಖಂಡಿತಾ ಉಳಿಗಾಲವಿಲ್ಲ.
ಬೃಹತ್ ಯೋಜನೆಗಳೆಂದರೆ ಬೃಹತ್ ಲಾಭವೆಂದು ಹೇಳುವ ಪರಿಪಾಠ ನಮ್ಮಲ್ಲಿದೆಯೇ ಹೊರತು, ಅವುಗಳ ಹಿಂದಿನ ಬೃಹತ್ ತ್ಯಾಗದ ಬಗ್ಗೆ ಮಾಹಿತಿಯನ್ನು ತೆರೆದಿಡುವ ಪರಿಪಾಠ ಬೆಳೆದಿಲ್ಲ, ಏಕೆಂದರೆ ಬಡವರು ಬೃಹತ್ ತ್ಯಾಗ ಮಾಡುತ್ತಾರೆ, ಬಲ್ಲಿದರು ಬೃಹತ್ ಲಾಭ ಪಡೆಯುತ್ತಾರೆ ಕರ್ನಾಟಕದಲ್ಲಿ ಹಲವಾರು ವಿವಿಧೋದ್ದೇಶ ಯೋಜನೆಗಳು ಜಾರಿಗೆ ಬಂದಿದೆ ಆದರೆ ಈವರೆಗೆ ಜಾರಿಗೆ ಬಂದ ಯಾವ ಯೋಜನೆಯಲ್ಲೂ ಮೀನುಗಾರಿಕೆ, ಸಂಚಾರ, ಸಾಗಾಟ, ಉದ್ಯೋಗಾವಕಾಶಗಳು ಇತ್ಯಾದಿ ಯಾವುದೇ ವಿವಿಧೋದ್ಧೇಶಗಳು ಸಫಲವಾಗಿಲ್ಲ. ಇಂತಹ ಯೋಜನೆಗಳಿಂದ ಪ್ರಯೋಜನ ಪಡೆಯುವವರಿಗಿಂತ ಹತ್ತು ಪಟ್ಟು ಜನ ತಮ್ಮ ಬದುಕು ಕಳೆದುಕೊಳ್ಳುತ್ತಾರೆ ಮೀನುಗಾರರು ನೆಲೆ ತಪ್ಪಿದವರಾಗುತ್ತಾರೆ ನೀರು ನೆರಳು ಇಲ್ಲದ ಜಾಗದಲ್ಲಿ ತಳ್ಳಲ್ಪಡುತ್ತಾರೆ ಇಂಥ ಅಲೆಮಾರಿ ಪರಿಸ್ಥಿತಿಯಿಂದಾಗಿ ಜನರ ಮಾನಸಿಕ ಹಾಗೂ ಸಾಮಾಜಿಕ ಬದುಕು ಹದಗೆಡುತ್ತದೆ ಎಲ್ಲವನ್ನೂ ಕಳೆದುಕೊಂಡು ಪರದೇಶಿಗಳಾಗುತ್ತಾರೆ ಆದುದರಿಂದ ಸಮಾಜ ಭಾಂಧವರೇ ನಮ್ಮ ಸಮಾಜದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ದೌರ್ಜನ್ಯ ಗಳನ್ನು ದಿಟ್ಟತನದಿಂದ ಎದುರಿಸಿ ನಮ್ಮ ಬದುಕಿನ ನೆಲೆಯಾದ ಕಡಲತೀರವನ್ನು ಬಂಡವಾಳ ಶಾಹಿ ಕಪ್ಪು ದೈತ್ಯರಿಂದ ರಕ್ಷಿಸಿಕೊಳ್ಳೋಣ ಒಗ್ಗಟ್ಟೇ ನಮ್ಮ ಮೂಲ ಮಂತ್ರ ವಾಗಿರಲಿ ವಂದನೆಗಳು.
ಉಮಾಕಾಂತ ಖಾರ್ವಿ ಕುಂದಾಪುರ
ಇದು ನಿಜ, ಮಾಲಿನ್ಯ ಎಂಬ ಕಪ್ಪು ಕುಳಿ ಈ ಬಂದರಿನ ರೂಪದಲ್ಲಿ ಕಾಸರ್ಕೋಡು ಹಾಗೆ ಮುಂದೆ ಕರಾವಳಿಯನ್ನು ಅವರಿಸಲಿದೆ. ನಾವು ಇಂದಿನ ಅಸಡ್ಡೆ ವರ್ತನೆಯಿಂದಾಗಿ ನಮ್ಮ ಸ್ವಂತ ಹಿತ್ತಲಿನಲ್ಲಿ ರಚಿಸಲಾಗುತಿರುವ ಕಪ್ಪು ಕುಳಿಯಿಂದ ನಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳುತಿದ್ದೇವೆ.
ವಿಪರ್ಯಾಸವೆಂದರೆ … ನಾನು ಈ ಬಂದರಿಗೆ ಮೀಸಲಿಟ್ಟ ಪ್ರದೇಶದಿಂದ 1 ಕಿ.ಮೀ ದೂರದಲ್ಲಿ ವಾಸಿಸುವ ಒಬ್ಬರ ಒಟ್ಟಿಗೆ ಮಾತನಾಡುತ ಅವರನ್ನು ಈ ಸಮಸ್ಯೆಗೆ ನೀವು ಏನು ಮಾಡುತ ಇದ್ದೀರಿ ಎಂದು ಕೇಳಿದಾಗ… ಅವರು ಕೊಟ್ಟ ಉತ್ತರ (ಆಮ್ಕ್ ಕೈ problem ನಾ ಆಮ್ಗೆಲೆ ಘರಸನ್ ಮಸ್ತ್ ದೂರ್ ಆಸಾ) “ನಮಗೆ ಯಾವುದೇ ಸಮಸ್ಯೆ ಇಲ್ಲ ಏಕೆಂದರೆ ಅದು ತುಂಬಾ ದೂರದಲ್ಲಿದೆ” .