ಲುಕ್ರೀಷಸ್ ಕವಿ ಹೇಳುತ್ತಾನೆಃ ಸಮುದ್ರದ ದಂಡೆಯಲ್ಲಿ ನಿಂತಿರುವವನು ಮೀನು ಹಿಡಿಯಲು ಹೋಗುತ್ತಿರುವ ಮೀನುಗಾರನ ಕಷ್ಟವನ್ನು ನೋಡಿ ಎರಡು ವಿಧದಲ್ಲಿ ಸಂತೋಷ ಪಡುತ್ತಾನಂತೆಃ ಆ ಮೀನುಗಾರ ಸಮುದ್ರದಲ್ಲಿ ಮಾಡುತ್ತಿರುವ ಸಾಹಸವನ್ನು ನೋಡಿ ಒಂದು ಸಂತೋಷವಾದರೆ ತನಗೆ ಆ ಕಷ್ಟವಿಲ್ಲವಲ್ಲ ಎಂಬುದು ಇನ್ನೊಂದು ಸಂತೋಷ.
ಸಮುದ್ರ ದಂಡೆಯಲ್ಲಿ ನಿಂತು ನೋಡುವವನ ವಿಚಿತ್ರ ನಿರ್ಲಿಪ್ತತೆಯಂತೆ ಮೀನುಗಾರರನ್ನು ನೋಡುವ ಪರಿಪಾಠ ಬೆಳೆದು ಬಂದಿದೆ ಹೊಟ್ಟೆಪಾಡಿನ ದುಡಿಮೆಗಾಗಿ ಸಮುದ್ರಕ್ಕೆ ಮೀನು ಹಿಡಿಯಲು ಹೋದ ಮೀನುಗಾರನ ಪ್ರಾಣ ಪಕ್ಷಿ ಹಾರಿಹೋಗಿದೆ ಇದುವರೆಗೂ ಮೃತಪಟ್ಟ ನತದೃಷ್ಟ ಮೀನುಗಾರನ ಮನೆಗೆ ಯಾವ ಅಧಿಕಾರಿಯಾಗಲಿ, ಜನಪ್ರತಿನಿಧಿಗಳಾಗಲಿ ಭೇಟಿ ನೀಡಿಲ್ಲ.
ಎಲ್ಲರೂ ದೂರ ನಿಂತು ಏನೂ ಆಗಿಲ್ಲವೆಂಬಂತೆ ನಿರ್ಲಿಪ್ತತೆಯಿಂದ ವರ್ತಿಸುತ್ತಿದ್ದಾರೆ ಮೀನುಗಾರನ ಹೆಣದ ಮೇಲೆ ರಾಜಕೀಯ ಮಾಡಿ ಗದ್ದುಗೆ ಹಿಡಿದ ಮಹಾನುಭಾವರ ಸುಳಿವೇ ಇಲ್ಲ ನಾನಿರುವುದೇ ನಿಮಗಾಗಿ ಎಂದು ಸಿಹಿಹೂರಣದ ಮಾತುಗಳನ್ನಾಡಿದ ಆ ಮಹಾನುಭಾವರಿಗೆ ಮೃತನ ಮನೆಗೆ ಭೇಟಿ ನೀಡಿ ಸಾಂತ್ವನ ನೀಡುವಷ್ಟು ವ್ಯವಧಾನವಿಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ.
ಭ್ರಷ್ಟಾಚಾರ ಎಲ್ಲಿ ನಮ್ಮ ಅಭಿವೃದ್ಧಿ ಕಾರ್ಯ ಗಳ ಅಂತರ್ಗತ ಅಂಶವಾಗುತ್ತದೆಯೋ ಅಲ್ಲಿ ಯೋಜನೆ ಎಂಬುದು ಕೇವಲ ನೆಪ ಮಾತ್ರ ಇದನ್ನು ಯೋಜನಾ ಬದ್ಧ ಪ್ರಗತಿ ಎಂದು ಕರೆದುಕೊಳ್ಳುವುದು ಆತ್ಮ ವಂಚನೆಯಷ್ಟೇ ಏಕೆಂದರೆ ಯೋಜನೆ ನಿರ್ಮಾಣದ ಎಷ್ಟಂಶ ಯಾರಿಗೆಲ್ಲ ಸೇರುತ್ತದೆಯೋ ಯಾರಿಗೂ ಗೊತ್ತಿಲ್ಲ ಬಡವ ಮಾತ್ರ ಗುಡಿಸಲಿನಲ್ಲಿ ಬದುಕು ಮುಗಿಸುತ್ತಾನೆ ಕಾಸರಕೋಡ ವಾಣಿಜ್ಯ ಬಂದರು ಕಾಮಗಾರಿ ಬಡ ಮೀನುಗಾರನೊಬ್ಬನ ಪ್ರಾಣ ಬಲಿ ಪಡೆದಿದೆ.
ಮುಂದಿನ ಕರಾಳ ದಿನಗಳನ್ನು ನೆನೆಸಿಕೊಂಡರೆ ಭಯವಾಗುತ್ತದೆ ಮಗನ ಸಾವಿನಿಂದ ಸಂಕಟ ಅನುಭವಿಸುತ್ತಿರುವ ವೃದ್ಧ ತಂದೆ ತಾಯಿಗಳು, ಬಾಳ ಸಂಗಾತಿಯಿಲ್ಲದೇ ಅನೂಹ್ಯ ನೋವು ಪಡುತ್ತಿರುವ ಮಡದಿ, ತಂದೆಯ ಪ್ರೀತಿಯಿಂದ ವಂಚಿತರಾಗಿರುವ ಎಳೆ ಕಂದಮ್ಮಈ ದೃಶ್ಯ ಕಣ್ಣಾರೆ ಕಂಡ ನನಗೆ ಅಪಾರವಾದ ವೇದನೆಯಾಗಿದೆ ಈ ಬಡ ಮೀನುಗಾರನ ಕುಟುಂಬದ ಸಂಕಟದಲ್ಲಿ ನಾವೂ ಭಾಗಿಯಾಗುತ್ತೇವೆ ಸರ್ಕಾರ ಈ ಬಡ ಕುಟುಂಬದ ನೆರವಿಗೆ ನಿಂತು ಸ್ವಲ್ಪವಾದರೂ ಪಾಪ ತೊಳೆದುಕೊಳ್ಳಲಿ ಎಲ್ಲವೂ ಶಾಂತವಾಗುತ್ತದೆ ಎಂದು ಬಂಡವಾಳಶಾಹಿಗಳು ಭಾವಿಸುವುದು ಬೇಡ ಇದು ದೌರ್ಜನ್ಯದ ವಿರುದ್ಧ ಅಂತ್ಯದ ಆರಂಭ.
ಉಮಾಕಾಂತ ಖಾರ್ವಿ ಕುಂದಾಪುರ