ಜಾಗತಿಕ ತಾಪಮಾನ ಏರಿಕೆಯಾದಂತೆಲ್ಲ ಧ್ರುವ ಪ್ರದೇಶಗಳಲ್ಲಿ ಶೇಖರಣೆಯಾಗಿರುವ ಮಂಜುಗಡ್ಡೆ ಕರಗಿ ನೀರಾಗುತ್ತಿದೆ ಈ ನೀರು ಸಮುದ್ರವನ್ನು ಬಂದು ಸೇರುತ್ತಿದೆ ಜಗತ್ತಿನ ಎಲ್ಲಾ ಸಮುದ್ರಗಳು ಒಂದಕ್ಕೊಂದು ಸಂಪರ್ಕವಿರುವ ಕಾರಣ ಎಲ್ಲಾ ಸಮುದ್ರಗಳ ಮಟ್ಟ ಮೇಲೇರುತ್ತಿದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ದೇಶಗಳು, ಸಂಘಗಳು, ಸಂಸ್ಥೆಗಳು ಒಕ್ಕೊರಲಿನಿಂದ ಬೊಬ್ಬೆ ಹೊಡೆಯುತ್ತಿದ್ದರೂ ಯಾರಿಗೂ ಈ ವಿಚಾರದ ಕುರಿತು ಅರಿವು ಮೂಡುತ್ತಿರುವಂತೆ ಕಾಣುತ್ತಿಲ್ಲ ತತ್ಫಲವಾಗಿ ನೆಲೆಯೂರಿದ ನೆಲೆಯೇ ಸಮುದ್ರಪಾಲಾಗುವುದೋ ಎಂಬ ಭಯದಲ್ಲಿಂದು ಜನರು ಬದುಕು ಸಾಗಿಸುತ್ತಿದ್ದಾರೆ.
ಕಾಡುಮನುಷ್ಯ ನಾಗರಿಕನೆನಿಸಿಕೊಂಡ ಮೇಲೆ ನದಿ, ಸಮುದ್ರಗಳ ದಂಡೆಯು ಆತನ ಆವಾಸಸ್ಥಾನವಾಯಿತು ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಪಕ್ಷಿಗಳಿಗೆ ಅಂಜಿದರೆ ಹೇಗೇ ಎಂದು ವಚನಕಾರರು ಪ್ರಶ್ನಿಸುವಂತೆ ಸಮುದ್ರದ ದಂಡೆಯಲ್ಲಿಯೋ, ದಂಡೆಯ ಮೇಲೋ ಮನೆ ಕಟ್ಟಿ ತೆರೆಗಳಿಗೆ ಅಂಜುತ್ತಾರೆಯೇ? ಇಲ್ಲಿ ಅಂಜಿಕೆಗಿಂತ, ನೆಲೆಯೂರಲು ಬೇರೆ ಜಾಗಯಿಲ್ಲದ ಅನಿವಾರ್ಯತೆ ಎಂದು ಹೇಳಬಹುದು 2004 ರಲ್ಲಿ ಸುನಾಮಿ ಬರುವವರೆಗೆ ಎಲ್ಲರೂ ಅಂದುಕೊಂಡಿದ್ದು ಸಮುದ್ರಕ್ಕೊಂದು ಎಲ್ಲೆ ಇದೆ ಎಂದು ಆದರೆ ಯಾವಾಗ ಸಮುದ್ರ ಎಲ್ಲೆ ಮೀರಿ ಬಂದು ಮನುಷ್ಯನನ್ನು ಎತ್ತಿಕೊಂಡು ಹೋಯಿತೋ, ಆಗ ಅಂದುಕೊಂಡ, ಸಮುದ್ರದ ಗಡಿಯೊಳಗೆ ನಾವು ಬದುಕುತ್ತಿದ್ದೇವೆ ಎಂದು ಆದರೂ ಸಮುದ್ರ ಇಂತಹ ವಿಕೋಪದ ಸಂದರ್ಭಗಳಲ್ಲಿ ಎಲ್ಲೆ ಮೀರುತ್ತದೆ ಹೊರತು ಉಳಿದೆಲ್ಲ ಸಮಯದಲ್ಲಿ ಮನುಷ್ಯನ ಸುದ್ದಿಗೆ ಬಾರದು ಗಡಿಯ ವಿಚಾರಕ್ಕೆ, ನದಿಗೆ ಹೋಲಿಸಿದರೆ ಸಮುದ್ರವನ್ನು ಹೆಚ್ಚು ನಂಬಬಹುದು.
ಮಳೆಗಾಲದ ಸಮಯದಲ್ಲಿ ಸಮುದ್ರ ಉಕ್ಕುವುದು ಸ್ವಾಭಾವಿಕ ಆಗ ಸಮುದ್ರದ ಅಂಚಿನಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಜೀವ ಬಾಯಿಗೆ ಬಂದಿರುತ್ತದೆ ಹತ್ತು ಸೆಂಟ್ಸ್ ಜಾಗ, ಹತ್ತು ತೆಂಗಿನ ಮರಗಳು, ಒಂದು ಪುಟ್ಟ ಮನೆ ನುಂಗಲು ಸುನಾಮಿ ಬರಬೇಕಾಗಿಲ್ಲ ಒಂದೇ ಒಂದು ತೆರೆ ಸಾಕಾಗುತ್ತದೆ ಈ ಸಂದರ್ಭದಲ್ಲಿ ಸಮುದ್ರ ಒಂದೊಂದೇ ಇಂಚಿನಷ್ಟು ಜಾಗ ಕಬಳಿಸುತ್ತ ಮುಂದೆ ಬರುತ್ತದೆ ಇದನ್ನೇ ಕಡಲ್ಕೊರೆತ ಎನ್ನುತ್ತೇವೆ ಸಮುದ್ರದಂಡೆಯಲ್ಲಿ ಕೊರೆತ ತಪ್ಪಿಸುವ ಒಂದೆರಡು ಬಗೆಯ ಗಿಡದ ಬಳ್ಳಿಯಿದೆ ಅದು ದಟ್ಟವಾಗಿ ಹಬ್ಬಿಕೊಂಡರೆ, ನೆಲದ ಮಣ್ಣು ಅಷ್ಟು ಸುಲಭವಾಗಿ ಸಮುದ್ರದ ಪಾಲಾಗದು ಸಮುದ್ರದ ದಂಡೆಯಲ್ಲಿ ಗಾಳಿ ಮರದ ತೋಪು, ಕಾಂಡ್ಲವನವಿದ್ದರೆ ಸಮುದ್ರದ ಕೊರೆತ ತೀರ ಕಡಿಮೆ ಆದರೆ ಇದ್ಯಾವುದೂ ಇಲ್ಲದಿರುವಾಗ ಸದಾ ಚಿಂತೆ ಕಾಡಲಾರಂಭಿಸುತ್ತದೆ ಇಂತಹ ಮರಗಿಡಗಳನ್ನು ಬೆಳೆಸುವಷ್ಟು ಜಾಗವಿದ್ದರೆ, ಒಂದು ಮನೆ ಕಟ್ಟಬಹುದೆಂಬ ಆಸೆ ಹೊಂದಿರುವ ಮನುಷ್ಯನಿಂದ ಇದನ್ನು ನಿರೀಕ್ಷಿಸುವುದೇ ತಪ್ಪು.
ದಕ್ಷಿಣ ಕನ್ನಡದ ಉಳ್ಳಾಲದಿಂದ ಮೊದಲ್ಗೊಂಡು ಕಾರವಾರದ ಸದಾಶಿವಗಡದವರೆಗೂ ಕಡಲ್ಕೊರೆತ ಇಲ್ಲದ ಜಾಗವಿಲ್ಲ ತಲತಲಾಂತರಗಳಿಂದ ತಮ್ಮದೆಂದು, ಬಿಗಿದಪ್ಪಿಕೊಂಡು, ಹಸಿರಾಗಿಸಿ, ಹತ್ತಾರು ತೆಂಗಿನ ಸಸಿಗಳನ್ನು ನೆಟ್ಟು, ಇನ್ನೇನು ಸಸಿ, ಮರವಾಗಿ, ಮರಗಳು ಮೊದಲ ಫಲ ಬಿಟ್ಟ ಸಂಭ್ರಮದಲ್ಲಿರುವಾಗಲೇ ಸಮುದ್ರ ತನ್ನೊಡಲಿಗೆ ಸೇರಿಸಿಕೊಳ್ಳಲು ಒಂದೊಂದೆ ಮರಗಳನ್ನು ನುಂಗಿ ನೊಣೆಯುತ್ತಾ ಬರುತ್ತದೆ ಆಗ ಎಂಥವರಿಗೂ ಸಂಕಟವಾದೀತು ಒಂದು ಸಾಲಿನ ತೆಂಗಿನ ಮರಗಳನ್ನು ನುಂಗಿದ ಬಳಿಕ ನೇರ ಮನೆ ಹತ್ತಿರ ಸಮುದ್ರ ಧಾವಿಸತೊಡಗುತ್ತದೆ ಬಾಲ್ಯ, ಯೌವನವೆಲ್ಲ ಕಳೆದ ಮನೆ ಕಣ್ಣೆದುರಿಗೆ ಸಮುದ್ರಪಾಲಾಗುವಾಗ ಆಗುವ ಸಂಕಟ ಅನುಭವಿಸಿದವರಿಗೆ ಮಾತ್ರ ಗೊತ್ತು ಇದೆಲ್ಲ ಒಂದೆರಡು ನಿಮಿಷದಲ್ಲಿ ಆಗುವ ಪ್ರಕ್ರಿಯೆಯಲ್ಲ ಸುನಾಮಿಯಾದರೆ ಒಂದೇ ನಿಮಿಷದಲ್ಲಿ ಎಲ್ಲವನ್ನೂ ಸ್ವಾಹ ಮಾಡುತ್ತದೆ ಕಡಲ್ಕೊರೆತ ವಾರದ ಪ್ರಕ್ರಿಯೆ ಕೆಲವು ಬಾರಿ ತಿಂಗಳ ಕಾರ್ಯಕ್ರಮದಂತೆ ಊರಿನ ಮುಖಂಡರು, ರಾಜಕಾರಣಿಗಳು, ಮಂತ್ರಿಗಳು ಸ್ಥಳಕ್ಕೆ ಭೇಟಿಕೊಡುವಷ್ಟು ಸಮಯಾವಕಾಶ ನೀಡುತ್ತದೆ ಅವರು ನೀಡುವ ಭರವಸೆ ಅವರ ಹಿಂತಿರುಗಿ ಹೋದ ದಿಕ್ಕಿಗೆ ಹೋಗಿ ಬಿಡುತ್ತದೆ.
ಎಷ್ಟೋ ಸಮಯದ ನಂತರ ಕೆಲವು ಫಲನುಭವಿ ಊರುಗಳಿಗೆ ತಡೆಗೋಡೆ ರಚನೆಗೆ ಅಪ್ಪಣೆ ಸಿಗುತ್ತದೆ ಆದರೆ ಈ ಕೆಲಸ ದೇವರಿಗೆ ಪ್ರೀತಿ. ದೈತ್ಯ ಅಲೆಗಳ ಬಾಯಿಗೆ ಹಾಕುವ ಸಣ್ಣ ಸಣ್ಣ ಶಿಲೆಗಲ್ಲುಗಳು, ಬಕಾಸುರನ ಹೊಟ್ಟೆಗೆ ಹೊಯ್ಯುವ ಮಜ್ಜಿಗೆಯಂತಾಗುತ್ತದೆ ಅದಕ್ಕಾಗಿ ಇತ್ತೀಚಿಗೆ ಸಿಮೆಂಟ್ಗಳಿಂದ ರಚಿಸಿವ ಟೆಟ್ರಾಪಾಡ್ಗಳನ್ನು ಹಾಕುತ್ತಾರೆ ನೆಲವನ್ನು ಕಚ್ಚಿ ನಿಲ್ಲಲು ಈ ರೀತಿಯ ಕೃತಕ ಕಲ್ಲುಗಳು ತುಂಬಾ ಉಪಯುಕ್ತವಾಗಿದೆ ಗಂಗೊಳ್ಳಿಯ ಸೀ ವಾಕ್, ಮರವಂತೆಯ ಹೊಸ ಬಂದರಿನ ನಿರ್ಮಾಣ ಕಾರ್ಯದಲ್ಲಿ ಈ ರೀತಿಯ ಟೆಟ್ರಾಪಾಡ್ ಗಳು ತುಂಬಾ ಬಳಕೆಯಾಗಿವೆ ಇನ್ನು ಕೆಲವು ಕಡೆ ಪ್ರಾನ್ಸ್ ಮಾದರಿಯ ತಡೆಗೋಡೆ ನಿರ್ಮಿಸುತ್ತಿದ್ದಾರೆ ಆದರೆ ಈ ತಡೆಗೋಡೆಯ ಮುಖ್ಯ ಸಮಸ್ಯೆಯೆಂದರೆ ತಡೆಗೋಡೆ ಕಟ್ಟಿದ ಸ್ಥಳದಲ್ಲಿ ದೋಣಿ ನಿಲ್ಲಿಸಲು ಆಗದು ನಾಡದೋಣಿ ಮೀನುಗಾರರಿಗೆ ಮರಳಿನ ದಂಡೆಯಲ್ಲಿ ದೋಣಿ ನಿಲ್ಲಿಸಿದರೆ ಮಾತ್ರ ಮೀನುಗಾರಿಕೆಗೆ ತೆರಳಲು, ಬಲೆ ತುಂಬಿಸಲು ಅನುಕೂಲ ತಡೆಗೋಡೆಗೆ ಹಾಕಿದ ಕಲ್ಲುಗಳ ಮೇಲೆ ಮಳೆಗಾಲದಲ್ಲಿ ಪಾಚಿ ಬೆಳೆದು ಅದರ ಮೇಲೆ ನಿಲ್ಲವವರಿಗೆ ಸಮಸ್ಯೆಯಾಗಿದ್ದೂ ಇದೆ.
ತ್ರಾಸಿ ಮರವಂತೆಯ ಕಡಲ ತೀರದ ಸೌಂದರ್ಯಕ್ಕೆ ಮನಸೋಲದವರಿಲ್ಲ ಇತ್ತೀಚಿಗೆ ಅಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಉಳಿಸುವ ಸಲುವಾಗಿ ಟಿ-ಶೇಪ್ ತಡೆಗೋಡೆ ನಿರ್ಮಾಣ ಮಾಡಲಾಗಿದೆ ಈ ತಡೆಗೋಡೆ ನಿರ್ಮಾಣದ ಬಳಿಕ ಆ ಭಾಗದಲ್ಲಿ ಬೃಹತ್ ಪ್ರಮಾಣದಲ್ಲಿ ಮರಳು ಶೇಖರಣೆಯಾಗಿದ್ದು ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಸಿಕ್ಕಿದೆ. ಆದರೆ ಅದರ ನೇರ ಪರಿಣಾಮ ಮರವಂತೆಯಿಂದ ಮೂರ್ನಾಕ್ಕು ಕಿ.ಮೀ ದಕ್ಷಿಣ ಭಾಗದಲ್ಲಿರುವ ಕಂಚುಗೋಡಿಗೆ ತಟ್ಟಿದೆ. ಒಂದು ಕಡೆ ಹೆಚ್ಚಾದ ನೀರನ್ನು ಸಮುದ್ರ ಇನ್ನೊಂದು ಕಡೆ ಸರಿದೂಗಿಸಿಕೊಳ್ಳುತ್ತದೆ ಯಾವತ್ತು ಕಡಲ್ಕೊರೆತದ ಸಮಸ್ಯೆ ಇರದ ಕಂಚುಗೋಡಿನಲ್ಲಿ ಕಡಲ್ಕೊರೆತ ಪ್ರಾರಂಭವಾಗಿದೆ ಅದು ಅತ್ಯಂತ ನಿಧಾನವಾಗಿ ಗುಜ್ಜಾಡಿ ಮತ್ತು ಹೊಸಾಡು ಗ್ರಾಮಗಳನ್ನು ಬೇರ್ಪಡಿಸುವ ಜಟ್ಟಿಗನ ಕಲ್ಲು ಎಂಬ ಹೆಸರಿನ ಉದ್ದದ ಕಲ್ಲೊಂದಿದೆ ಸಾಮಾನ್ಯ ದಿನಗಳಲ್ಲಿ ಈ ಹಿಂದೆ ಅದು ಮುಕ್ಕಾಲು ಭಾಗ ಮಾತ್ರ ಮುಳುಗಿರುತ್ತಿತ್ತು ಆದರೆ ಇತ್ತೀಚಿಗೆ ಅದು ಪೂರ್ತಿ ಮುಳುಗಿ ಹೋಗಿ ಆತಂಕಕ್ಕೀಡು ಮಾಡಿದೆ. ತಡೆಗೋಡೆಯಿಂದ ಒಂದು ಕಡೆಯ ವಾಸಿಗಳಿಗೆ ಲಾಭವಾದರೆ, ಇನ್ಮೊಂದು ಕಡೆಯಲ್ಲಿ ಸಮಸ್ಯೆಯಾಗುವುದಂತು ಖಂಡಿತ.
ಹೀಗೆ ತಡೆಗೋಡೆ ನಿರ್ಮಿಸುತ್ತಾ ಹೋದರೆ ಮುಂದೊಂದು ದಿನ ಸಮುದ್ರದ ಪ್ರವೇಶಕ್ಕೆ ವಿಶೇಷ ಸ್ಥಳ ನಿಗದಿಗೊಳಿಸಬೇಕಾದೀತು ತಡೆಗೋಡೆ ನಿರ್ಮಿಸದಿದ್ದರೆ ಕೆಲವು ಊರುಗಳು ಸಮುದ್ರ ಪಾಲಾದೀತು. ಒಂದು ರೀತಿಯಲ್ಲಿ ಅಡಕತ್ತರಿಯಲ್ಲಿ ಸಿಕ್ಕಿಕೊಂಡ ಅನುಭವ ಆಧುನಿಕತೆಯ ಭರಾಟೆಯಲ್ಲಿ ಸ್ವಾಭಾವಿಕ ನೆಲ ಜಲವನ್ನು ಮನುಷ್ಯ ಕೆರಳಿಸುತ್ತಿದ್ದಾನೆ ಕೃತಕವಾಗಿ ಮಾಡಿದ್ದೆಲ್ಲವೂ ಮನುಷ್ಯನಿಗೆ ಪೂರಕವಾಗಿರುತ್ತದೆ ಎಂಬ ಖಾತ್ರಿಯಿಲ್ಲ ಆದರೂ ತಂತ್ರಜ್ಞಾನದೊಂದಿಗೆ ಮೌನವಾಗಿ ಹೆಜ್ಜೆಯೂರಲೇಬೇಕು.
ನಾಗರಾಜ ಖಾರ್ವಿ ಕಂಚುಗೋಡು
ಹೃದಯಸ್ಪರ್ಶಿ ಲೇಖನ. ವಸ್ತುನಿಷ್ಠ ವಿಷಯ ಮಂಡನೆ. ನವಿರಾದ ನಿರೂಪಣೆ ನೈಜತೆಯ ದರ್ಶನ👋👋👋👌👍👌👍🙏🙏🙏🙏🙏