ಮುಕ್ತಿ ಧಾಮ : ಗಂಗೊಳ್ಳಿಯ ರುದ್ರ ಭೂಮಿಯ ಪರಿಕಲ್ಪನೆಗೆ ಪಾವಿತ್ರ್ಯತೆಯ ಹೊಸ ಸ್ಪರ್ಶ

ಗಂಗೊಳ್ಳಿ ಖಾರ್ವಿ ಕೇರಿ ಯುತ್ ಕ್ಲಬ್ ಪರಿಶ್ರಮ ಸಾಧನೆಯ ಉತ್ಕರ್ಷ. ಆಗಬೇಕಾಗಿದೆ ಮತ್ತಷ್ಟು ಕಾಯಕಲ್ಪದ ಹೊಸ ಸ್ಪರ್ಶ

ಮನುಷ್ಯ ನಾಗಿ ಹುಟ್ಟಿದ ಮೇಲೆ ತನ್ನ ಜೀವಿತಾವಧಿಯ ಬದುಕಿಗಾಗಿ ಉತ್ತಮ ವ್ಯವಸ್ಥೆ ಗಳನ್ನು ಕ್ರೋಢೀಕರಿಸುವಂತೆ ಸತ್ತ ನಂತರವೂ ಮುಕ್ತಿ ಹೊಂದಲು ಮುಕ್ತಿ ಧಾಮದ ಅಗತ್ಯವಿದೆ. ಈ ಮುಕ್ತಿ ಧಾಮ ಸಾಮಾನ್ಯ ವಾಗಿ ಸ್ಮಶಾನವೆಂದು ಗ್ರಾಂಥಿಕ ಕನ್ನಡ ಭಾಷೆಯಲ್ಲಿ ರುದ್ರ ಭೂಮಿ ಎಂದು ಕರೆಯಲ್ಪಡುತ್ತದೆ. ಸ್ಮಶಾನ ಎಂದೊಡನೆ ನಮಗೆ ಕಣ್ಣಿಗೆ ರಾಚುವುದು ಭಯ ನೋವು ನಿರಾಶೆ, ವೈರಾಗ್ಯ ಗಳ ಅಸಂಗತ ರೂಪ. ಆದರ ಜೊತೆಗೆ ಕೆಲವು ಸ್ಮಶಾನಗಳ ಮೂಲಭೂತ ಸೌಕರ್ಯಗಳಿಲ್ಲದೇ ಅವ್ಯವಸ್ಥೆಗಳಿಂದ ಕೂಡಿದ ನೈಜ ಸ್ವರೂಪ. ಆದರೆ ಕೆಲವು ಉತ್ಸಾಹಿ ಸಮಾಜ ಸೇವಾ ಮನಸ್ಸುಗಳು ಅವ್ಯವಸ್ಥೆಗಳಿಂದ ಕೂಡಿದ ಸ್ಮಶಾನಗಳಿಗೆ ರಮಣೀಯ ಸ್ಪರ್ಶ ನೀಡಿ ಕಂಗೊಳಿಸಲಿದ ಹಲವು ಉದಾಹರಣೆಗಳೂ ನಮ್ಮೆದುರು ಅನಾವರಣಗೊಳ್ಳುತ್ತದೆ.

ಆ ಪೈಕಿ ಗಂಗೊಳ್ಳಿ ಖಾರ್ವಿ ಕೇರಿಯ ಕಡಲತಡಿಯ ಯೂತ್ ಕ್ಲಬ್ ಯುವಕರು ತಮ್ಮ ಪರಿಶ್ರಮ ಇಚ್ಛಾಶಕ್ತಿಯಿಂದ ರುದ್ರ ಭೂಮಿಯನ್ನು ಅಭಿವೃದ್ಧಿ ಪಡಿಸಿದ ಚಿತ್ರಣ ಇಲ್ಲಿದೆ. ಈ ಪರಿಸರದ ಕೊಂಕಣಿ ಖಾರ್ವಿ ಸಮಾಜ ಭಾಂಧವರಿಗೆ ಹೆಣ ಸುಡಲು ರುದ್ರ ಭೂಮಿ ಇರಲಿಲ್ಲ ಕಡಲತಡಿಯ ಮರಳಿನಲ್ಲಿ ಶವಸಂಸ್ಕಾರ ಮಾಡುತ್ತಿದ್ದರು ಇಂತಹ ಶವಸಂಸ್ಕಾರ ಪದ್ದತಿಗೆ ತಿಲಾಂಜಲಿ ನೀಡಿ ಸುಸಜ್ಜಿತವಾದ ರುದ್ರ ಭೂಮಿಯನ್ನು ರಚಿಸಬೇಕೆಂಬ ಪರಿಕಲ್ಪನೆಯಲ್ಲಿ ಈ ಪರಿಸರದ ಯುವಕರು, ಗ್ರಾಮಸ್ಥರು ಉತ್ಸಾಹಿ ಯುವಕ ರವಿಶಂಕರ್ ಖಾರ್ವಿ ಯವರ ಸಾರಥ್ಯದಲ್ಲಿ ದಿಟ್ಟ ಹೆಜ್ಜೆ ಇಟ್ಟರು. ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶ್ರೀ ಗೋಪಾಲ ಪೂಜಾರಿಯವರು ಗ್ರಾಮಸ್ಥರ ಬೇಡಿಕೆಯನ್ನು ಸಾದರದಿಂದ ಮನ್ನಿಸಿ ಕಡಲತಡಿಯಲ್ಲಿ ಸುಮಾರು 20 ಸೆಂಟ್ಸ್ ಭೂಮಿಯನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಿ ಅದಕ್ಕೆ ಅಗತ್ಯವಾದ ಭೂ ದಾಖಲಾತಿಗಳನ್ನು ಒದಗಿಸಿಕೊಟ್ಟರಲ್ಲದೇ, 15 ಲಕ್ಷ ಅನುದಾನವನ್ನು ಮಂಜೂರು ಮಾಡಿಕೊಟ್ಟು ಬಹಳ ದೊಡ್ಡದಾದ ನೆರವಿನ ಕೊಡುಗೆ ನೀಡಿದರು.

ಯೂತ್ ಕ್ಲಬ್ ಪ್ರಾರಂಭಿಕ ಹಂತದಿಂದಲ್ಲೂ ನಿರಂತರವಾಗಿ ಮಾಜಿ ಶಾಸಕರ ಸಂಪರ್ಕ ದಲ್ಲಿದ್ದು ಅವಿರತವಾಗಿ ಈ ರುದ್ರ ಭೂಮಿ ನಿರ್ಮಾಣಕ್ಕೆ ಶ್ರಮಿಸಿದೆ, ಅವರ ಈ ಮಹಾತ್ಕಾರ್ಯಗಳು ಸ್ಮಶಾನದ ಅಭಿವೃದ್ಧಿ ಕಾರ್ಯ ಗಳಿಗೆ ಅಭೂತಪೂರ್ವ ಮುನ್ನುಡಿ ಬರೆಯಿತು. ಪರಮಪೂಜ್ಯ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ.ವಿರೇಂದ್ರ ಹೆಗ್ಗಡೆಯವರು ರುದ್ರ ಭೂಮಿಯ ಅಭಿವೃದ್ಧಿಯ ಕಾರ್ಯ ಕ್ಕೆ 2 ಲಕ್ಷ ದೇಣಿಗೆಯನ್ನು ನೀಡಿದರು. ಸ್ಮಶಾನ ನಿರ್ಮಾಣವಾದ ಈ ಪ್ರದೇಶ ಮೊದಲು ನೀರಿನಿಂದ ಆವೃತವಾಗಿದ್ದ ಜವಗು ಪ್ರದೇಶವಾಗಿತ್ತು ಗ್ರಾಮಸ್ಥರ ಅಪಾರ ಪರಿಶ್ರಮ ಶ್ರಮದಾನದಿಂದ ಸಮತಟ್ಟಾಗಿ ರೂಪುಗೊಂಡು ಸುಸಜ್ಜಿತ ವಾಗಿ ನಳನಳಿಸಿತು.

ಇದೀಗ ಇಲ್ಲಿ ಶವಸಂಸ್ಕಾರಕ್ಕೆ ಅಗತ್ಯವಾದ ಎಲ್ಲಾ ಮೂಲಭೂತ ಸೌಕರ್ಯಗಳು ಇದೆ. ಬಾವಿ, ಸೋಲಾರ್ ದೀಪದ ವ್ಯವಸ್ಥೆಯೂ ಇದೆ ಗಂಗೊಳ್ಳಿ ಗ್ರಾಮ ಪಂಚಾಯತ್ ಬಾವಿ ನಿರ್ಮಿಸಲು ಸೂಕ್ತ ಅನುದಾನವನ್ನು ಮಂಜೂರು ಮಾಡಿತು. ಇಲ್ಲಿ ಲಯಕರ್ತ ಶಿವನ ಮೂರ್ತಿ ಯನ್ನು ಸ್ಥಾಪಿಸಲು ಯೋಜಿಸಲಾಗಿದೆ. ಈ ಪರಿಸರದಲ್ಲಿ ಕಾಡುತ್ತಿರುವ ಮತ್ತೊಂದು ಸಮಸ್ಯೆ ಯೆಂದರೆ , ಅಂತಿಮ ಕ್ರಿಯೆಗಾಗಿ ಶವವನ್ನು ಹೊತ್ತುಕೊಂಡು ಬರಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದಿರುವುದು. ಕಡಲತಡಿಯ ಮರಳಿನ ರಾಶಿಯಲ್ಲಿ ಖಾರ್ವಿ ಕೇರಿ ರಸ್ತೆ ಯಿಂದ ಬರಬೇಕಾದ ಅನಿವಾರ್ಯತೆ ಇದೆ. ಮಳೆಗಾಲದಲ್ಲಿ ಕಡಲಲೆಗಳು ರುದ್ರ ಭೂಮಿಯ ಸಮೀಪಲ್ಲೇ ಪ್ರಕ್ಷುಬ್ಧವಾಗಿ ಅಪ್ಪಳಿಸುವುದರಿಂದ ಇದರ ನಿವಾರಣೆಗೆ ಇಲ್ಲೊಂದು ರಸ್ತೆ ನಿರ್ಮಾಣ ಆವಶ್ಯಕ ವಾಗಿ ಆಗಬೇಕು. ಇಲ್ಲದಿದ್ದರೆ ಮಳೆಗಾಲದಲ್ಲಿ ರುದ್ರ ಭೂಮಿಗೆ ಸುತ್ತು ಬಳಸಿ ಹೋಗಬೇಕಾದ ಸನ್ನಿವೇಶ ಸೃಷ್ಟಿ ಯಾಗುತ್ತದೆ.

ಬೈಂದೂರು ಕ್ಷೇತ್ರದ ಶಾಸಕರಾಗಿರುವ ಶ್ರೀ ಸುಕುಮಾರ್ ಶೆಟ್ಟಿಯವರು ರುದ್ರ ಭೂಮಿಯ ಅಭಿವೃದ್ಧಿಗಾಗಿ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದು ಜನರ ಬಹುಮುಖ್ಯ ಬೇಡಿಕೆಯಾದ ರುದ್ರ ಭೂಮಿಗೆ ನೇರ ಸಂಪರ್ಕ ಕಲ್ಪಿಸುವ 250 ಮೀಟರ್ ರಸ್ತೆಯನ್ನು ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ.

ರುದ್ರ ಭೂಮಿಯಿಂದ 250 ಮೀಟರ್ ದೂರದಲ್ಲಿ ಖಾರ್ವಿ ಕೇರಿ ರಸ್ತೆ ಇದ್ದು ಈ ರಸ್ತೆಗೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಾಣವಾದರೆ ತುಂಬಾ ಅನೂಕೂಲವಾಗುತ್ತದೆ. ಈ ಬಗ್ಗೆ ತುಂಬಾ ಪ್ರಯತ್ನ ಗಳಾಗುತ್ತಿದ್ದು ಸಂಬಂಧಪಟ್ಟ ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಂಡು 250 ಮೀಟರ್ ಉದ್ದದ ರಸ್ತೆ ನಿರ್ಮಿಸಿ ಕೊಟ್ಟರೆ ಜನರಿಗೆ ಅನೂಕೂಲವಾಗುತ್ತದೆ. ಈ ಊರಿನ ರುದ್ರ ಭೂಮಿ ನಿರ್ಮಾಣ ಅಭಿವೃದ್ಧಿ ಕಾರ್ಯಗಳನ್ನು ದೇವಸ್ಥಾನ ಜೀರ್ಣೋದ್ಧಾರ ಕಾರ್ಯದಷ್ಟೇ ಪುಣ್ಯ ಕಾರ್ಯವೆಂಬಂತೆ ಅಪಾರ ಪರಿಶ್ರಮ ಶ್ರಧ್ದೆಯಿಂದ ಮಾಡುತ್ತಿದ್ದಾರೆ. ಉತ್ಸಾಹಿ ಯುವಕ ರವಿಶಂಕರ್ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಯುವಕರು ರುದ್ರ ಭೂಮಿಯನ್ನು ಹಸಿರುಗೊಳಿಸಿ ಉದ್ಯಾನವನದ ರೂಪು ಕೊಡುವ ಹಂಬಲದಲ್ಲಿದ್ದಾರೆ.

ಈಗಾಗಲೇ ರುದ್ರ ಭೂಮಿಯ ಸೂತ್ತಲೂ ಸುದೃಢವಾದ ಕಂಪೌಂಡ್ ತಡೆಗೋಡೆ ನಿರ್ಮಿಸಲಾಗಿದ್ದು, ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ರುದ್ರ ಭೂಮಿಯ ಪರಿಕಲ್ಪನೆಗೆ ಹೊಸ ರೂಪ ಕೊಡುವ ಯೋಜನೆಗಳಿವೆ. ಈ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ಇಲ್ಲಿ ನಡೆಯುತ್ತಿವೆ.ಈ ಪರಿಸರದ ಜನರ ಅಪೂರ್ವ ಯಶಸ್ಸಿನ ಗುಟ್ಟೆಂದರೆ ಜನರ ಒಗ್ಗಟ್ಟು. ತಮ್ಮ ಒಳಿತಿಗಾಗಿ ಬೇಕಾದ ಯೋಜನೆಗಳನ್ನು ತಾವೇ ಗ್ರಾಮ ಮಟ್ಟದಲ್ಲಿ ರೂಪಿಸಿಕೊಂಡು ಅದನ್ನು ಸರಕಾರದ ಸಹಾಯ, ಮತ್ತು ಎಲ್ಲರ ಸಕ್ರಿಯ ಸಹಕಾರದಿಂದ ಕಾರ್ಯಗತಗೊಳಿಸುವ ಸಾಮರ್ಥ್ಯ. ಇದೇ ಅಭಿವೃದ್ಧಿಯ ಮೂಲತತ್ವ ಮತ್ತು ನಿರಂತರ ಅಭಿವೃದ್ಧಿಯ ಜೀವಾಳ ಕೂಡಾ. ತಮ್ಮಸಂಕಲ್ಪ ಸಿದ್ದಿಯ ಶ್ರಮದಿಂದ ಊರಿನ ಪ್ರಗತಿಗೆ ಅಭೂತಪೂರ್ವ ಕೊಡುಗೆ ಸಲ್ಲಿಸುತ್ತಿರುವ ಉತ್ಸಾಹಿ ಯುವಕರಿಗೆ ಖಾರ್ವಿ ಆನ್ಲೈನ್ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಶೀಘ್ರದಲ್ಲೇ ರಸ್ತೆ ನಿರ್ಮಾಣದ ಬೇಡಿಕೆ ಪರಿಪೂರ್ಣ ಗೊಳ್ಳಲ್ಲಿ ಮತ್ತು ಸುಂದರವಾದ ಉದ್ಯಾನವನ ನಿರ್ಮಾಣಗೊಂಡು ರುದ್ರ ಭೂಮಿಯ ಪರಿಕಲ್ಪನೆಗೆ ಪಾವಿತ್ರ್ಯತೆಯ ಹೊಸ ಸ್ಪರ್ಶ ಲಭಿಸಲಿ ಎಂಬ ಹಾರೈಸುತ್ತೇನೆ.

ವರದಿ: ಸುಧಾಕರ್ ಖಾರ್ವಿ
www.kharvionline.com

One thought on “ಮುಕ್ತಿ ಧಾಮ : ಗಂಗೊಳ್ಳಿಯ ರುದ್ರ ಭೂಮಿಯ ಪರಿಕಲ್ಪನೆಗೆ ಪಾವಿತ್ರ್ಯತೆಯ ಹೊಸ ಸ್ಪರ್ಶ

  1. ರುದ್ರಭೂಮಿಗೆ ಪಾವಿತ್ರ್ಯತೆಯ ಹೊಸ ಸ್ಪರ್ಶ ನೀಡಿ ಅಭಿವೃದ್ಧಿಯ ಕಾಯಕಲ್ಪ ನೀಡುತ್ತಿರುವ ಶ್ರೀ ರವಿಶಂಕರ್ ಖಾರ್ವಿ ಮತ್ತು ಗಂಗೊಳ್ಳಿ ಖಾರ್ವಿ ಕೇರಿಯ ಯೂತ್ ಕ್ಲಬ್ ಸರ್ವ ಸದಸ್ಯರಿಗೂ ಅಭಿನಂದನೆಗಳು.👌👍👌👍👌👍🙏🙏🙏💐💐💐💐👋👋👋👋👌👍👋👋👋

Leave a Reply

Your email address will not be published. Required fields are marked *