ಹೊನ್ನಾವರದ ಕಾಸರಕೋಡು-ಟೊಂಕ ಕಡಲತೀರ ಸ್ವಚ್ಛತಾ ಕಾರ್ಯಕ್ರಮ

ಕಡಲು ನಮ್ಮ ಅನ್ನದ ಬಟ್ಟಲು ನಮ್ಮನ್ನು ಪೊರೆಯುವ ತೊಟ್ಟಿಲು ಕೋಟಿ ಕೋಟಿ ಜೀವರಾಶಿಗಳಿಗೆ ಜೀವಸೆಲೆಯಾಗಿರುವ ಕಡಲು ಇಂದು ತ್ಯಾಜ್ಯ ಗಳ ಅಗರವಾಗಿದೆ. ಸಮುದ್ರ ತೀರಗಳಲ್ಲಿ ಬಹೃತ್ ಪ್ರಮಾಣದಲ್ಲಿ ಸಂಗ್ರಹವಾದ ತ್ಯಾಜ್ಯ ವಸ್ತುಗಳು ಒಂದೆಡೆಯಾದರೆ, ಇನ್ನೊಂದೆಡೆ ಎಲ್ಲಾ ಕಡೆಯಿಂದಲೂ ಸಮುದ್ರಕ್ಕೆ ಸೇರುತ್ತಿರುವ ಮಲಿನಕಾರಗಳು ಕಡಲಿನ ಜಲಚರಗಳು ಮಾತ್ರವಲ್ಲ ಈ ಜಲಚರಗಳನ್ನು ಸೇವಿಸುವ ಮಾನವರಿಗೂ ಇತರ ಪ್ರಾಣಿಗಳಿಗೂ ಕಂಟಕಪ್ರಾಯವಾಗಿರುತ್ತದೆ.

ಸಾಗರ ಮಾಲಿನ್ಯದಿಂದಾಗಿ ಕಡಲಿನಲ್ಲಿ ಸಮೃದ್ಧವಾಗಿ ಸಿಗುತ್ತಿದ್ದ ಅಪೂರ್ವ ಜಲಚರಗಳು ಇಂದು ಕಣ್ಮರೆಯಾಗಿದೆ ಅನ್ನದ ಬಟ್ಟಲಿಗೆ ವಿಷಪ್ರಾಶನವಾಗಿದೆ ಇದರ ದುಷ್ಪರಿಣಾಮವಾಗಿ ಕಡಲಿನಲ್ಲಿ ಮತ್ಸಸಂತತಿ ನಶಿಸಿ ಮತ್ಸಕ್ಷಾಮ ಉಂಟಾಗಿದೆ ಸಾಗರ ಪರಿಸರ ವ್ಯವಸ್ಥೆಯ ಉತ್ಪಾದಕತೆ ಮತ್ತು ನಿರಂತರತೆಯನ್ನು ತುಂಬಾ ತೀವ್ರವಾಗಿ ಘಾಸಿಗೊಳಿಸಿದೆ. ಮನುಷ್ಯರ ಬದುಕಿನ ಪ್ರಮುಖ ಭಾಗವಾಗಿರುವ ಸಮುದ್ರದ ಮಾಲಿನ್ಯ ನಿಯಂತ್ರಣ ಮತ್ತು ಕಡಲತೀರಗಳ ಸ್ವಚ್ಛತೆಯನ್ನು ಪರಿಣಾಮಕಾರಿಯಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಕರಾವಳಿ ತೀರಗಳ ಸ್ವಚ್ಛತಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.

ನಮ್ಮ ಕರಾವಳಿಯಲ್ಲೂ ಈ ಕರಾವಳಿ ಕಡಲತೀರ ಸ್ವಚ್ಛತಾ ಅಭಿಯಾನ ಭರದಿಂದ ನಡೆಯುತ್ತಿದೆ ಈ ದಿನ ಹೊನ್ನಾವರ ಕಾಸರಕೋಡು ಟೊಂಕದಲ್ಲಿ ಸಮುದ್ರ ತೀರದ ಸ್ವಚ್ಛತೆಯ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತ್ತು. ರಾಷ್ಟ್ರೀಯ ಕರಾವಳಿ ಸಂಶೋಧನಾ ಕೇಂದ್ರ ಭಾರತ ಸರ್ಕಾರ, ಸ್ನೇಹ ಕುಂಜ ಹೊನ್ನಾವರ ಮತ್ತು ವಿವಿಧ ಮೀನುಗಾರರ ಸಂಘಟನೆಗಳ ಸಹಭಾಗಿತ್ವದಲ್ಲಿ ನೂರಾರು ಜನರ ಸಹಕಾರದೊಂದಿಗೆ ಸಮುದ್ರ ತಟದಲ್ಲಿ ಅಪಾರ ಪ್ರಮಾಣದಲ್ಲಿ ಹರಡಿಕೊಂಡಿದ್ದ ಹಲವು ವಿಧದ ತ್ಯಾಜ್ಯ ಗಳನ್ನು ಸಂಗ್ರಹಿಸಲಾಯಿತು.

ಸಮುದ್ರ ಜಲಚರಗಳಿಗೆ ಮಾರಕವಾಗಿರುವ ಈ ತ್ಯಾಜ್ಯ ವಸ್ತುಗಳು ಕಡಲತಡಿಯಲ್ಲಿ ಉದ್ದಕ್ಕೂ ಹರಡಿಕೊಂಡು ಅಣಕಿಸುತ್ತಿದ್ದವು. ನಮ್ಮ ಸಮಾಜದ ಹೆಮ್ಮೆಯ ಕಡಲ ವಿಜ್ಞಾನಿ ಶ್ರೀ ಪ್ರಕಾಶ ಮೇಸ್ತರ ಮಾರ್ಗದರ್ಶನದಲ್ಲಿ ನಡೆದ ಈ ಸ್ವಚ್ಛತಾ ಅಭಿಯಾನ ನಿಜಕ್ಕೂ ಸಾರ್ಥಕತೆಯ ಭಾವ ಮೂಡಿಸಿದೆ. ಈ ಅಭಿಯಾನದಲ್ಲಿ ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯ ದರ್ಶಿ ಶ್ರೀ ಚಂದ್ರಹಾಸ ಕೊಚರೆಕಾರ್, ಸ್ನೇಹ ಕುಂಜದ ಡಾಕ್ಟರ್ ನಾರಾಯಣ ಹೆಗಡೆ, ಕಾರ್ಯದರ್ಶಿ ಶ್ರೀ ನರಸಿಂಹ ಹೆಗಡೆ, ಮೀನುಗಾರ ಮಹಿಳೆಯರ ಸಂಘ ಕಾಸರಕೋಡು ಟೊಂಕದ ಅಧ್ಯಕ್ಷ ರಾದ ಶ್ರೀಮತಿ ರೇಣುಕಾ ತಾಂಡೇಲ್, ಕೊಂಕಣಿ ಖಾರ್ವಿ ಸಮಾಜದ ಶ್ರೀ ರಾಜೇಶ್ ತಾಂಡೇಲ್, ಹೊನ್ನಾವರ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಶೀ ಗಣಪತಿ ಈಶ್ವರ ತಾಂಡೇಲ್, ಸಾಮಾಜಿಕ ಕಾರ್ಯಕರ್ತರಾಗಿರುವ ಶ್ರೀ ವೀವನ್ ಫೆರ್ನಾಂಡಿಸ್, ಜನಾಬ್ ಮಹಮ್ಮದ್ ಕೋಯಾ ಸಾಬ್ ಮತ್ತು ಕಾಸರಕೋಡು ಟೊಂಕದ ಮೀನುಗಾರರು, ಮಹಿಳೆಯರು ಅಪಾರ ಪ್ರಮಾಣದಲ್ಲಿ ಈ ಸಮಾಜ ಮುಖಿ ಕಾರ್ಯ ದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ಈ ನಡುವೆ ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಡಲಂಚಿನಲ್ಲಿ ಮೃತಪಟ್ಟ ಬೃಹತ್ ಆಮೆಯೊಂದರ ಶರೀರದ ಭಾಗಗಳು ದೊರಕಿತು. ಈ ಪ್ರದೇಶದಲ್ಲಿ ಆಮೆ ಗೂಡು ಕಟ್ಟುವುದಿಲ್ಲ ಎಂಬ ವಿತಂಡವಾದ ಮಂಡಿಸುತ್ತಿರುವ ಮತಿಗೇಡಿಗಳಿಗೆ ಇದು ಕಪಾಳಮೋಕ್ಷವಾಗಿದೆ. ಕುಚೋದ್ಯವೆಂದರೆ ಈ ಪ್ರದೇಶದಲ್ಲಿ ಕಸ ಹೆಕ್ಕುತ್ತಿರುವಾಗ ಬಹಳ ಗತ್ತಿನಿಂದ ಬಂದ ಬಂದರು ನಿರ್ಮಾಣ ಕಾಮಗಾರಿಯ ಭಧ್ರತಾ ಅಧಿಕಾರಿ ಇಲ್ಲಿ ನೀವು ಕಸ ಹೆಕ್ಕುವುದು ಬೇಡ. ಕಸ ಹೆಕ್ಕಲಿಕ್ಕೆ ನಮ್ಮ ಕೆಲಸಗಾರರು ಇದ್ದಾರೆ ಎಂದು ಹೇಳಲು ಆರಂಭಿಸಿದರು. ಅವನ ಮಾತಿಗೆ ಯಾರೂ ಸೊಪ್ಪು ಹಾಕಲಿಲ್ಲ. ಕರಾವಳಿ ಕಾವಲು ಪೋಲೀಸ್ ಪಡೆಯ ಪೋಲೀಸರು ಇದು ಭಾರತ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮ ಎಂದಾಗ ಆತ ಬಂದ ದಾರಿಗೆ ಸುಂಕವಿಲ್ಲದೇ ಹೊರಟು ಹೋದ.

ಈ ಬಂದರು ನಿರ್ಮಾಣ ಯೋಜನೆಯ ಕಪ್ಪು ದೈತ್ಯರು ನಿಜಕ್ಕೂ ಗಾಬರಿಗೊಂಡಿದ್ದಾರೆ ಎಂಬುದು ಈ ಘಟನೆಯಿಂದ ವ್ಯಕ್ತವಾಯಿತು. ನೈಸರ್ಗಿಕ ಪರಿಸರ ಮತ್ತು ಎಲ್ಲ ಜೀವಿಗಳ ಬದುಕು ಪ್ರಕೃತಿಯ ಲಯದೊಂದಿಗೆ ಆಪ್ತವಾಗಿ ಬೆಸೆದುಕೊಂಡಿದೆ. ಎಲ್ಲ ಜೀವಿಗಳು ಮಾನವ ಪ್ರಾಣಿ ಮತ್ತು ನೈಸರ್ಗಿಕ ಪರಿಸರ ಪವಿತ್ರವಾದವು ಮತ್ತು ಒಂದಕ್ಕೆ ಆಘಾತವಾದಾಗ ಇನ್ನೊಂದು ತತ್ತರಿಸುತ್ತದೆ ಎಂಬುದನ್ನು ಭಾರತೀಯ ಪರಂಪರೆ ನಮಗೆ ಕಲಿಸುತ್ತದೆ.

ಸಂರಕ್ಷಣೆಯು ಈ ಕಲ್ಪನೆಯನ್ನೇ ಆಧರಿಸಿದೆ. ಕಡಲತೀರದ ಮಾಲಿನ್ಯ ಮತ್ತು ದುಪ್ಪರಿಣಾಮಗಳ ಬಗ್ಗೆ ಸ್ನೇಹ ಕುಂಜದ ಡಾಕ್ಟರ್ ನಾರಾಯಣ ಹೆಗಡೆ, ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯ ದರ್ಶಿ ಚಂದ್ರಹಾಸ ಕೊಚೆರಕರ್ ಹಾಗೂ ಕಡಲ ಜೀವಶಾಸ್ತ್ರಜ್ಞ ಪ್ರಕಾಶ ಮೇಸ್ತರವರ ಅರ್ಥ ಪೂರ್ಣ ಮಾತುಗಳು ಎಲ್ಲರ ಮನಮುಟ್ಟುವಂತಿತ್ತು.

ಖಾರ್ವಿ ಆನ್ಲೈನ್ ಪ್ರತಿನಿಧಿಯಾಗಿ ಈ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ ನನಗೆ ನಿಜಕ್ಕೂ ಧನ್ಯತಾ ಭಾವ ಮೂಡಿದೆ. ನಮ್ಮ ಸಮುದ್ರ ಸ್ವಚ್ಛ ಸಮುದ್ರ ಎಂಬ ಘೋಷ ವಾಕ್ಯ ದಡಿಯಲ್ಲಿ ನಡೆದ ಈ ಕಾರ್ಯಕ್ರಮ ಇಡೀ ಜಿಲ್ಲೆಯಲ್ಲಿಯೇ ಅಪೂರ್ವವಾಗಿ ಸಂಪನ್ನಗೊಂಡ ಕಾರ್ಯಕ್ರಮವೆಂದರೆ ಉತ್ಪ್ರೇಕ್ಷೆ ಯಲ್ಲ. ನಮ್ಮ ಅನ್ನದ ಬಟ್ಟಲಾದ ಸಮುದ್ರವನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಅಭಿಯಾನ ನಿತ್ಯ ನಿರಂತರವಾಗಿ ನಡೆಯುವಂತಗಾಲು ಪ್ರತಿಯೊಬ್ಬರ ಮೇಲೆ ಉತ್ತರದಾಯಿತ್ವವಿದೆ

ಉಮಾಕಾಂತ ಖಾರ್ವಿ
ಕುಂದಾಪುರ

Leave a Reply

Your email address will not be published. Required fields are marked *