ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಎಂಬ ಜನಪ್ರಿಯ ಗಾದೆ ಮಾತಿದೆ. ಗಾದೆ ಮಾತುಗಳನ್ನು ನಮ್ಮ ಹಿರಿಯರು ಸುಮ್ಮನೆ ಹೇಳಿಲ್ಲ. ಅದು ಅವರ ಬದುಕಿನ ಅನುಭವಗಳ ಇಡಿಗಂಟು ಆದರೆ ಕಾಲ ಬದಲಾಗಿದೆ. ಮನುಷ್ಯರೂ ಬದಲಾಗಿದ್ದಾರೆ ಪ್ರಸ್ತುತ ಕಾಲಘಟ್ಟದಲ್ಲಿ ಈ ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಎಂಬ ಗಾದೆ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವಾಗಿದೆ. ಸತ್ಯ ಹೇಳಿದವನು ಸತ್ತೇ ಹೋದ ಎಂಬ ಮಾತುಗಳು ಜನಜನಿತವಾಗಿದೆ.
ಉಳಿಯುವುದು ಸತ್ಯ ಹೇಳಿದವನ ಆಸ್ಥಿಪಂಜರ ಮಾತ್ರ ಹೌದು ನಿನ್ನೆ ಕಾಸರಕೋಡು ಟೊಂಕ ಕಡಲತೀರ ಸ್ವಚ್ಛ ಮಾಡುವಾಗ ಉದ್ದೇಶಿತ ವಾಣಿಜ್ಯ ಬಂದರು ಕಾಮಗಾರಿ ಪ್ರದೇಶದ ನೇರ ಎದುರಿಗೆ ಬೃಹತ್ ಗಾತ್ರದ ಆಲೀವ್ ರಿಡ್ಲೆ ಪ್ರಭೇದದ ಆಮೆಯೊಂದರ ಆಸ್ಥಿಪಂಜರ ಪತ್ತೆಯಾಯಿತು. ಇದು ತೀರಾ ಇತ್ತೀಚೆಗೆ ಕಡಲಂಚಿನಲ್ಲಿ ಸಾವಿಗೀಡಾಗಿರಬಹುದು ಎಂದು ಅದರ ದೇಹ ಪ್ರಕೃತಿ ಕಳೇಬರವನ್ನು ನೋಡಿದಾಗ ಅಂದಾಜಿಸಲಾಗಿದೆ. ಜನವಿರೋಧಿ, ಪರಿಸರ ವಿರೋಧಿ ವಾಣಿಜ್ಯ ಬಂದರು ಕಾಮಗಾರಿಯನ್ನು ವಿರೋಧಿಸಿ ಹೊನ್ನಾವರ ಹಸಿಮೀನು ವ್ಯಾಪಾರಸ್ಥರು ಸಲ್ಲಿಸಿದ್ದ ಅರ್ಜಿಯನ್ವಯ ರಾಜ್ಯ ಹೈಕೋರ್ಟ್ ವಿಚಾರಣೆ ನಡೆಸಿ ಕಾಸರಕೋಡು ಟೊಂಕ ವಾಣಿಜ್ಯ ಬಂದರು ನಿರ್ಮಾಣದಿಂದ ಆಮೆಗಳ ಗೂಡು ಕಟ್ಟುವಿಕೆಗೆ ತೊಂದರೆ ಆಗಲಿದೆಯೇ ಎಂಬುದರ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಸರಕಾರಕ್ಕೆ ಆದೇಶ ನೀಡಿತ್ತು.
ಈ ನಡುವೆ ವಾಣಿಜ್ಯ ಬಂದರು ನಿರ್ಮಾಣದ ಕಂಪನಿ ನ್ಯಾಯಾಲಯಕ್ಕೆ ಈ ಪ್ರದೇಶದಲ್ಲಿ ಯಾವುದೇ ಆಮೆ ಗೂಡು ಕಟ್ಟುವಿಕೆ ಇಲ್ಲ ಎಂಬ ವಿತಂಡವಾದ ಮಂಡಿಸಿದೆ. ಈ ವಿತಂಡವಾದಕ್ಕೆ ಪೂರಕವಾಗಿ ಪರಿಸರ ಮಂತ್ರಾಲಯ ಮತ್ತು ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವಾಲಯ ಇಡೀ ಕರ್ನಾಟಕ ಕರಾವಳಿಯಲ್ಲಿಯೇ ಎಲ್ಲೂ ಆಮೆಗಳು ಗೂಡು ಕಟ್ಟುವಿಕೆ ಇಲ್ಲ ಎಂಬ ವರದಿ ನೀಡಿದೆ ಎನ್ನಲಾಗಿದ್ದು ಕಂಪನಿ ಸಂಬಂಧಪಟ್ಟ ಇಲಾಖೆಯ ಮೇಲೆ ಒತ್ತಡ ತಂತ್ರ ತಂದು ಕಾಮಗಾರಿಗೆ ಕ್ಲಿಯರೆನ್ಸ್ ಪಡೆದುಕೊಂಡಿದೆ ಎಂದು ವರದಿಗಳು ಬಂದಿದೆ.
ಇಡೀ ಕರ್ನಾಟಕದ ಕರಾವಳಿಯಲ್ಲಿ ಚಳಿಗಾಲದಲ್ಲಿ ಸಾವಿರ ಸಾವಿರ ಮೈಲುಗಳ ದೂರದಿಂದ ವಿಭಿನ್ನ ಪ್ರಭೇದಗಳ ಆಮೆಗಳು ಮೊಟ್ಟೆ ಇಡಲು ಬರುತ್ತಿದ್ದು ಭಟ್ಕಳದ ಮಾವಿನಕುರ್ವೆಯಿಂದ ಹಿಡಿದು ತ್ರಾಸಿ ಮರವಂತೆ, ಕುಂದಾಪುರ ಕೋಡಿ ಉಡುಪಿಯ ಹೆಜಮಾಡಿಕೋಡಿ ತನಕ ಮೊಟ್ಟೆ ಇಡಲು ಬರುವ ಕಡಲಾಮೆಗಳಿಗೆ ಪೂರಕ ವಾತಾವರಣ ಕಲ್ಪಿಸಿ ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ಕುಂದಾಪುರದ FSL INDIA ಸಂಸ್ಥೆ ವಹಿಸಿಕೊಂಡು ಮೀನುಗಾರರ ಸಹಕಾರದೊಂದಿಗೆ ಸಾವಿರಾರು ಆಮೆ ಮರಿಗಳನ್ನು ಜತನದಿಂದ ಕಾಪಾಡಿ ಸಮುದ್ರಕ್ಕೆ ಬಿಟ್ಟಿದೆ.
ಹಾಗೇಯೇ ಹೊನ್ನಾವರ ಅರಣ್ಯ ಇಲಾಖೆ ಕಳೆದ 15 ವರ್ಷಗಳಿಂದ ಜೀವವೈವಿಧ್ಯತೆಯ ಸಂರಕ್ಷಣೆ ಕಾರ್ಯ ಸೂಚಿಯಂತೆ ಕಡಲಾಮೆ ಸಂರಕ್ಷಣೆ ಮಾಡುತ್ತಾ ಬಂದಿರುತ್ತದೆ. ಕಳೆದ ಏಪ್ರಿಲ್ ತಿಂಗಳ 5 ನೇ ತಾರೀಕುದಂದು ವಾಣಿಜ್ಯ ಬಂದರು ನಿರ್ಮಾಣ ಪ್ರದೇಶದಲ್ಲಿ ಕಂಡುಬಂದ ಆಮೆ ಮೊಟ್ಟೆ ಗಳನ್ನು ಸಂರಕ್ಷಣೆ ಮಾಡಿ ಮರಿಗಳನ್ನು ಕಡಲಿಗೆ ಬಿಡಲಾಗಿದೆ. ಈ ಕಾರ್ಯ ಕ್ರಮದಲ್ಲಿ ಸೈಂಟ್ ಜೋಸೆಫ್ ಚರ್ಚ್ ನ ಫಾದರ್ ಅನಿಲ್ ಸುನಿಲ್, ಮೀನುಗಾರರು ಮತ್ತು ಅರಣ್ಯ ಇಲಾಖೆಯವರು ಉಪಸ್ಥಿತರಿದ್ದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಟ್ಕಳದಿಂದ ಹಿಡಿದು ಕಾಸರಕೋಡು ಟೊಂಕ, ಕರ್ಕಿ ಪಾವಿನಕುರ್ವೆ, ಹಳದೀಪುರ, ಕುಮಟಾ, ಹೀರೆಗುತ್ತಿ, ಅಂಕೋಲಾ ಕಾರವಾರದ ತನಕವೂ ಕಡಲಾಮೆಗಳು ಕಡಲತೀರದಲ್ಲಿ ಗೂಡು ಕಟ್ಟುತ್ತದೆ. ಸತ್ಯ ಇಷ್ಟೊಂದು ಸ್ಪಷ್ಟ ನಿಖರವಾಗಿರುವಾಗ ಪರಿಸರ ಮಂತ್ರಾಲಯ ಮತ್ತು ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಕರ್ನಾಟಕದ ಕರಾವಳಿಯಲ್ಲಿ ಕಡಲಾಮೆ ಗೂಡು ಕಟ್ಟುವಿಕೆ ಇಲ್ಲ ಎಂಬ ವರದಿ ನೀಡಿರುವುದು ವಿಪರ್ಯಾಸ ಮತ್ತು ಕುಚೋದ್ಯದ ಸಂಗತಿಯಾಗಿದೆ.
ಸಂಬಂಧಪಟ್ಟ ಬಂದರು ನಿರ್ಮಾಣ ಯೋಜನೆಯ ಪೃಭತಿಗಳ ಒತ್ತಡ ಆಮಿಷಗಳಿಗೆ ಒಳಗಾಗಿ ಮೇಲ್ಕಂಡ ಸಚಿವಾಲಯಗಳು ಈ ರೀತಿಯ ವರದಿ ನೀಡಿದ ಶಂಕೆ ವ್ಯಕ್ತವಾಗಿದೆ. ತನ್ಮೂಲಕ ಜನಸಾಮಾನ್ಯರ ಮೂಲಭೂತ ಸ್ವಾತಂತ್ರ್ಯ ದ ಹಕ್ಕುಗಳ ಹರಣವಾಗಿದ್ದು,ನ್ಯಾಯ ನಿರಾಕರಣೆ ಮಾಡಿದ ಅಕ್ಷಮ್ಯ ಅಪರಾಧವಾಗಿದೆ. ಶತಾಯಗತಾಯ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಮಾಡಲೇಬೇಕೆಂಬ ಹಠ ತೊಟ್ಟಿರುವ ಬಂಡವಾಳಶಾಹಿಗಳ ಕೈಗೊಂಬೆಯಾಗಿರುವ ಆಳುವ ಪ್ರಭುಗಳು ಮೀನುಗಾರರ ಬದುಕನ್ನು ಮೂರಾಬಟ್ಟೆ ಮಾಡುವುದಲ್ಲದೇ ಕಡಲ ಜೀವವೈವಿಧ್ಯ ಗಳ ವಿನಾಶಕ್ಕೆ ನಾಂದಿ ಹಾಡಿದೆ.
ಪ್ರಕೃತಿಯ ನಿಯಮಗಳು ಪ್ರಕೃತಿಯೊಡನೆ ಹೊಂದಿ ಬಾಳುವ ಮಾರ್ಗ ವನ್ನು ತೋರಿಸುತ್ತದೆ. ಆದರೆ ಸ್ವಾರ್ಥ ದುರಾಸೆಗಳೇ ಆಡಳಿತ ವೈಖರಿಯನ್ನಾಗಿ ಮಾಡಿಕೊಂಡಿರುವ ಆಳುವ ಪ್ರಭುಗಳು ಹೆಜ್ಜೆ ಹೆಜ್ಜೆಗೂ ನಿಯಮಗಳನ್ನು, ಕಾನೂನುಗಳನ್ನು ಉಲ್ಲಂಘನೆ ಮಾಡುತ್ತಿರುವಾಗ ನ್ಯಾಯ ಕೇಳುವುದು ಯಾರ ಬಳಿ?
ಕೊನೆಯದಾಗಿ ಈ ಲೇಖನವನ್ನು ಯಕ್ಷಗಾನ ಪ್ರಸಂಗವೊಂದರ ಅರ್ಥ ಗರ್ಭಿತ ಮಾತುಗಳಿಂದ ಮುಗಿಸುತ್ತಿದ್ದೇನೆ. ಯಕ್ಷ ದಿಗ್ಗಜ ಶ್ರೀ ಕೆರೆಮನೆ ಶಂಭು ಹೆಗಡೆಯವರು ರಾವಣನಾಗಿ ಅಭಿನಯಿಸಿರುವ ಈ ಪ್ರಸಂಗದಲ್ಲಿ ರಾವಣ ರಾಮನೊಡನೆ ಯುದ್ಧಕ್ಕೆ ಹೋಗುವಾಗ ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಾ ಮಂಡೋದರಿಗೆ ಹೇಳುವ ಮಾತುಗಳು ಹೀಗಿವೆ ಈ ಪ್ರಪಂಚದ ಸ್ವರೂಪ ಮೇಲೆ ಕಂಡ ಹಾಗೆ ಒಳಗಡೆ ಇರುವುದಿಲ್ಲ. ಒಳಗಿದ್ದಂತೆಲ್ಲ ಹೊರಗೆ ಕಾಣುವ ಸಾಧ್ಯತೆಯೂ ಕಡಿಮೆ. ಮೇಲಿಂದ ಮೇಲೆ ನೋಡಿದರೆ ಔದಾರ್ಯ, ಸಂಭಾವಿತೆ, ಸದ್ಗುಣ ಸತ್ಯ ಗಳನ್ನು ಈ ಪ್ರಪಂಚ ಗೌರವಿಸುತ್ತದೆ ಎಂಬ ಭ್ರಮೆ ಹುಟ್ಟುತ್ತದೆ. ಸೂಕ್ಷ್ಮ ವಾಗಿ ಅವಲೋಕಿಸಿದರೆ ಈ ಪ್ರಪಂಚದಲ್ಲಿ ನಿಂತ ಸತ್ಯ, ಸಿದ್ದಾಂತಗಳು ಯಾವುದು ಗೊತ್ತೆ! ಎಲ್ಲಿ ಬಲವಿದೆಯೋ ಅಲ್ಲಿ ನೆಲೆಯಿದೆ. ತುಳಿದವನು ಶ್ರೇಷ್ಠ ತುಳಿಸಿಕೊಂಡವನು ಕನಿಷ್ಠ. ಇದೆಲ್ಲವೂ ವಿಕೃತ ಸಿದ್ದಾಂತ , ವಿಚಿತ್ರ ಸತ್ಯ ವಾದರೂ ಇದೇ ವಾಸ್ತವ.
ಉಮಾಕಾಂತ ಖಾರ್ವಿ
ಕುಂದಾಪುರ
ಈ article ನೋಡಿ ಎರಡು ದೃಷ್ಟಿಕೋನಗಳಿಂದ ನಿಜವಾಗಿಯೂ ಇದೊ ಚಿಂತನೀಯ ವಿಷಯವೆಂದು ಅನಿಸುತಿದೆ.
ಒಂದು ಕಡೆಯಲ್ಲಿ – ನಾವು ಮನುಷ್ಯರು ನಮ್ಮ ಪ್ರಕೃತಿ ಮಾತೆಗೆ ನಿಧಾನವಾಗಿ ಮರಣವದ ನೋವನ್ನು ಉಂಟುಮಾಡುತ್ತಿದ್ದೇವೆ. ನಾವು ಅವಳಿಗೆ ಮಾಡುತ್ತಿರುವ ಎಲ್ಲಾ ಹಾನಿಗೆ ನಾವು ಪಶ್ಚಾತ್ತಾಪ ಪಡುವ ದಿನ ದೂರವಿಲ್ಲ. ನಾವು ಈಗಾಗಲೇ ಹವಾಮಾನದಲ್ಲಿ ಅತಿವೃಷ್ಠಿಯ ಬದಲಾವಣೆಗಳನ್ನು (ಮಳೆ ಮತ್ತು ಶಾಖ) ನೋಡಿದ್ದೇವೆ. ಇದಲ್ಲದೆ ಸಮುದ್ರ ಸಂಪನ್ಮೂಲಗಳ ಲಭ್ಯತೆಯಲ್ಲಿ ಕಡಿತವನ್ನು ನೋಡುತ್ತಿದ್ದೇವೆ.
ಇನ್ನೊಂದು ಬದಿಯಲ್ಲಿ – ಈ ದೃಶ್ಯಗಳನ್ನು ನೋಡಿ ಅನಿಸಿದು … ನಮ್ಮ ಕಾಸರಗೋಡು ಟೊಂಕಾ ಪ್ರಕರಣದಲ್ಲಿ, … ವಾಣಿಜ್ಯ ಬಂದರು ನಿರ್ಮಾಣದ ಕಂಪನಿಯ ಅಧಿಕಾರಿಗಳು ತಮ್ಮ ಬೆಳೆ ಬೇಯಿಸಿ ಕೊಳ್ಳಲು ಈ ವಲಯದಲ್ಲಿ ಆಮೆಗಳಿಲ್ಲ ಎಂದು ಸುಳ್ಳು ವರದಿ ಕೊಟ್ಟು .. ನ್ಯಾಯಾಲಯ ಮತ್ತು ಸರ್ಕಾರ ಎರಡನ್ನೂ ಮೋಸ ಮಾಡಿದರೆ ಅನಿಸುತಿದೆ … ನಾವು ಆಳವಾಗಿ ಆಲೋಚನೆ ಮಾಡಿದರೆ ಇದು ಇಷ್ಟು ಸುಲಭವಾಗಿ ಸಾಧ್ಯ ವಾಗಿದು ಬಹುಷಃ ನಮ್ಮಲ್ಲಿ ಒಗ್ಗಟ್ಟು ಮತ್ತು ನಮ್ಮ ನೇತೃತ್ವಕ್ಕೆ ಇದರ ಅರಿವು ಇಲ್ಲ ಎಂಬ ಕಾರಣದಿಂದ ಇರಬಹುದು.
ಕಾಕತಾಳೀಯವಾಗಿ… ಇತ್ತೀಚೆಗೆ ನಾನು ನಮ್ಮ ಸಮುದಾಯದ Whatsapp ಗುಂಪೊಂದರಲ್ಲಿ ನೋಡಿದು … ಸಂಬಂಧವಿಲ್ಲದ ಯಾವೊದೊ ಊರಿನ ವಿಷಯದ ಬಗ್ಗೆ ಇಡೀ ದಿನ ತರ್ಕ ಮತ್ತು ಚರ್ಚೆ ಮಾಡಿದರು . ಆದರೆ ಕಾಸರಕೋಡು ಟೊಂಕದಲ್ಲಿ ನಮ್ಮದೇ ಸಮಾಜದವರು ನಮ್ಮದೇ ಊರಿನ ಸಂಬಂಧಿತ ಗಂಭೀರ ವಿಷಯಕ್ಕೆ ಬಂದಾಗ, ಅವರು ಕಣ್ಣುರೆಪ್ಪೆಯನ್ನು ಮಿಟುಕಿಸಲಿಲ್ಲ ಎಂಬುದು ನೋವಿನ ವಿಷಯ.
ನಮಸ್ಕಾರ ಸರ್.ತಮ್ಮ ವಿಚಾರಪ್ರಚೋದಕ ಚಿಂತನಾಶೀಲತೆಯ ಮಾತುಗಳು ಹೃದಯಸ್ಪರ್ಶಿ. ವಾಸ್ತವದ ಸನ್ನಿ ವೇಶಗಳನ್ನು.ನಡೆಯುತ್ತಿರುವ ಬೆಳವಣಿಗೆಗಳನ್ನು ತಾವು ಸೂಕ್ಷ್ಮ ವಾಗಿ ಅವಲೋಕಿಸಿದ್ದೀರಿ.ಧನ್ಯವಾದಗಳು🙏🙏🙏🙏🙏