ಗಂಗೊಳ್ಳಿ ಲೈಟ್ ಹೌಸ್ ಬಳಿ ಪಾಂಡವರ ಕಾಲದ ಗುಹೆ ಮತ್ತು ಶಿಲಾ ಕಲಾಕೃತಿಗಳು

ವ್ಯಾಸ ಮಹಾಭಾರತದಷ್ಟು ಬೃಹತ್ ಗಾತ್ರದ ಮಹಾಕಾವ್ಯವು ಜಗತ್ತಿನಲ್ಲಿಯೇ ಬೇರೆ ಯಾವುದೂ ಇಲ್ಲ. ಸಾಧಾರಣವಾಗಿ ಇದನ್ನು ಸಾಗರಕ್ಕೂ, ಹಿಮವಂತನಿಗೂ ಹೋಲಿಸುವುದುಂಟು. ಮಹಾಭಾರತ ಪುರಾಣವಾದರೂ ಅಂದಿನ ಕಾಲದ ಸಮಾಜದ ನೈಜ ಕಥೆ. ಆ ಕಾಲದ ಸಮಾಜದ ಬದುಕಿನ ನಂಬಿಕೆ ಕಲೆ, ಸಾಂಸ್ಕೃತಿಕ ಧಾರ್ಮಿಕ ಮೌಲ್ಯ ಗಳ ಅನುಪಮ ಚಿತ್ರಣ. ಪಾಂಡವರು ಶಕುನಿಯ ಕುತಂತ್ರದಿಂದ ಪಗಡೆಯಾಟದಲ್ಲಿ ಸೋತು ದ್ಯೂತ ನಿಯಮದಂತೆ ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಅನುಭವಿಸುತ್ತಾರೆ. ಈ ಸಂದರ್ಭದಲ್ಲಿ ಪಾಂಡವರು ಭರತಭೂಮಿಯಲ್ಲಿ ಪರ್ಯಟನ ಮಾಡುತ್ತಾ ಬರುತ್ತಾರೆ. ಹಾಗೆ ಬಂದ ಪಾಂಡವರು ಕರ್ನಾಟಕಕ್ಕೂ ಬರುತ್ತಾರೆ. ಈ ಬಗ್ಗೆ ಹಲವಾರು ದಾಖಲೆಗಳು,ದೃಷ್ಟಾಂತಗಳು ಸಿಗುತ್ತದೆ.

ಮಹಾಭಾರತದ ಕಾಲದಲ್ಲಿ ಕರ್ನಾಟಕವನ್ನು ಕುಂತಲದೇಶ ಎಂದು ಕರೆಯಲಾಗುತ್ತಿತ್ತು. ಉತ್ತರ ಕರ್ನಾಟಕದ ಕಲ್ಬುರ್ಗಿಯ ಮಾದನ ಹಿಪ್ಪರಗಿಯಲ್ಲಿ ಪಾಂಡವರು ಕೆಲ ಕಾಲ ತಂಗಿದ್ದ ಗುಡ್ಡವಿದೆ. ಅದಕ್ಕೆ ದ್ರೌಪದಿ ಗುಡ್ಡ ಎಂದು ಕರೆಯುತ್ತಾರೆ. ಹಾಗೆಯೇ ಕರಾವಳಿ ತೀರಕ್ಕೆ ಬಂದರೆ ಆ ಕಾಲದಲ್ಲಿ ಈ ಪ್ರದೇಶವನ್ನು ನಾಗಾವಂಶಗಳ ರಾಜರು ಆಳುತ್ತಿದ್ದರು. ನಾಗಾರಾಧನೆಯನ್ನು ಮಾಡಿಕೊಂಡು ಬಂದ ನಾಗಾವಂಶಗಳ ಆಳ್ವಿಕೆಯಿಂದಾಗಿ ಕರ್ನಾಟಕದ ಕರಾವಳಿಯಲ್ಲಿ ನಾಗಾರಾಧನೆ ಪ್ರಬಲವಾಗಿ ಬೇರೂರಿತು ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಕಲ್ಯಾಣ ಕರ್ನಾಟಕದಿಂದ ಕರಾವಳಿಗೆ ಸಾಗಿ ಬಂದ ಪಾಂಡವರ ಅನೇಕ ಕುರುಹುಗಳು ಪತ್ತೆಯಾಗಿವೆ.

ಇಂತಹ ಮಹತ್ವಪೂರ್ಣ ಕುರುಹುಗಳು ಕುಂದಾಪುರ ತಾಲೂಕಿನ ಗಂಗೊಳ್ಳಿ ಲೈಟ್ ಹೌಸ್ ಬಳಿ ಇದೆ ಎಂದರೆ ನಿಮಗೆ ಆಶ್ಚರ್ಯ ವಾಗಬಹುದಲ್ಲವೇ ಹೌದು ಗಂಗೊಳ್ಳಿ ಕಡಲಕಿನಾರೆಯ ಮಡಿ ಲೈಟ್ ಹೌಸ್ ಬಳಿ ಪಾಂಡವರ ಕಾಲದ ಗುಹೆ ಮತ್ತು ಬಂಡೆಕಲ್ಲಿನ ಮೇಲೆ ಕೆತ್ತಲಾದ ಶಿಲ್ಪ ಕಲೆಯಿದೆ. ನಾಗಾವಂಶದ ಅರಸರ ಅನುಮತಿ ಪಡೆದು ಪಾಂಡವರು ಈ ಗುಹೆಯಲ್ಲಿ ಕೆಲವು ಕಾಲ ಉಳಿದುಕೊಂಡಿದ್ದರು. ಈ ಗುಹೆಯ ಒಳಭಾಗದಲ್ಲಿ ಪಾಂಡವರ ಕಾಲದ ಮಡಿಕೆ, ಮತ್ತಿತರ ಹಳೆಯ ಪಳೆಯುಳಿಕೆಗಳು ಇವೆ ಎನ್ನಲಾಗಿದ್ದು, ಪ್ರಸ್ತುತ ಗುಹೆಯ ಎಲ್ಲಾ ಭಾಗಗಳಲ್ಲಿ ಗಿಡಮರ ಪೊದೆಗಳು ವ್ಯಾಪಕವಾಗಿ ಬೆಳೆದು ನಿಂತಿರುವುದರಿಂದ ಗುಹೆಯೊಳಗೆ ಪ್ರವೇಶಿಸುವುದು ಅಸಾಧ್ಯದ ಮಾತು. ಹೊರಭಾಗದಲ್ಲಿ ಲೈಟ್ ಹೌಸ್ ನಿರ್ಮಾಣಗೊಂಡಿರುವ ಬಂಡೆಕಲ್ಲಿನ ಮೇಲೆ ಹೊರಚಾಚಿದಂತೆ ಕಲ್ಲಿನ ಹಾಸಿನ ಮೇಲೆ ವೃತ್ತಾಕಾರದ ಸುಂದರವಾದ ಕಲಾಕೃತಿಯನ್ನು ಕೆತ್ತಲಾಗಿದೆ ಮತ್ತು ವಿಭಿನ್ನ ಶೈಲಿಯ ಆಕೃತಿಯನ್ನು ರಚಿಸಲಾಗಿದೆ. ಈ ಕಲಾಕೃತಿಗಳು ಮತ್ತು ರಚನೆಗಳು ಭೋಧಾಯನ ಮಹರ್ಷಿಯ ಶುಲ್ಬ ಸೂತ್ರ ದಂತೆ ರೇಖಾಗಣಿತದ ಪ್ರಾಕಾರದಲ್ಲಿ ಇದೆ.

ಸುತ್ತಳತೆ ಎಲ್ಲ ದಿಕ್ಕಿನಿಂದಲೂ ಜ್ಯಾಮಿತಿಯ ಪರಿಮಿತಿಯಲ್ಲಿದೆ. ಪ್ರಸ್ತುತದಲ್ಲಿ ನಾವು ಪೈಥೋಗರಸ್ ಹೇಳಿರುವ ಸಿದ್ದಾಂತವೆಂದು ಹೇಳುವುದನ್ನೇ ಪೈಥೋಗರಸ್ಸನಿಗಿಂತ ಕನಿಷ್ಠ ನೂರೈವತ್ತು ವರ್ಷಗಳ ಮೊದಲಿದ್ದ ಬೋಧಾಯನ ಮಹರ್ಷಿ ಹೇಳಿದ್ದಾರೆ. ಆ ಕಾಲದಲ್ಲಿ ಅಂಕಗಣಿತ,ಜ್ಯಾಮಿತಿ,ಬೀಜಗಣಿತ,ರೇಖಾ ಗಣಿತ ಉಚ್ಚ್ರಾಯ ಸ್ಥಿತಿಯಲ್ಲಿದ್ದವು. ಚೌಕದಿಂದ ವೃತ್ತಾಕಾರದಲ್ಲಿ ನಿರ್ಮಿಸಲಾಗಿರುವ ಈ ಕಲಾಕೃತಿಗಳು ನೋಡಲು ಆಕರ್ಷಕವಾಗಿವೆ ಮತ್ತು ಅದ್ಬುತವಾಗಿವೆ.ಈ ಸುಂದರ ಕಲಾಕೃತಿಗಳನ್ನು ರಚಿಸಲು ನೈಸರ್ಗಿಕವಾಗಿ ನಿರ್ಮಾಣಗೊಂಡಿರುವ ಬಂಡೆಗಲ್ಲಿನ ಕೆಳಭಾಗವನ್ನು ಬಳಸಿಕೊಳ್ಳಲಾಗಿದೆ. ಕಲ್ಲನ್ನು ಸಮತಳವಾಗುವಂತೆ ಕೆತ್ತಿ ಕಲಾಕೃತಿಯನ್ನು ಕೆತ್ತಲಾಗಿದೆ.ಈ ಕಾರಣದಿಂದಾಗಿ ಶತಶತಮಾನಗಳು ಕಳೆದರೂ ನೈಸರ್ಗಿಕ ಹೊಡೆತದಿಂದಲೂ, ಮಾನವನ ಕೈಗಳಿಂದಲೂ ಈ ಕಲಾಕೃತಿಗಳು ಇದುವರೆಗೂ ಸುರಕ್ಷಿತವಾಗಿದೆ.

ಸ್ಥಳೀಯರಾದ ಶ್ರೀ ಬಿಕ್ಯ ಖಾರ್ವಿ ಯವರು ಇದರ ಬಗ್ಗೆ ನಮಗೆ ಅಭೂತಪೂರ್ವ ಮಾಹಿತಿ ನೀಡಿ ಸಹಕರಿಸಿದ್ದಾರೆ. ಇವರು ಸಾಮಾಜಿಕ ಹೋರಾಟಗಾರರಾಗಿದ್ದು,ಮತ್ಸ್ಯಕ್ಷಾಮಕ್ಕೆ ಮೂಲಕಾರಣವಾಗಿರುವ ಲೈಟ್ ಫಿಶಿಂಗ್ ನ್ನು ನಿಷೇಧಿಸುವಂತೆ ಮೀನುಗಾರಿಕೆ ಇಲಾಖೆಯಿಂದ ಹಿಡಿದು ಪ್ರಧಾನಿ ಮೋದಿ ತನಕ ಎಲ್ಲರಿಗೂ ಪತ್ರ ಬರೆದಿದ್ದಾರೆ. ಪುರಾತನ ಸಂಸ್ಕೃತಿಯ ಮಹತ್ವದ ಈ ಪಾಂಡವರ ಗುಹೆ ಮತ್ತು ಕಲಾಕೃತಿಗಳನ್ನು ಸಂರಕ್ಷಣೆ ಮಾಡಬೇಕೆಂದು ಆಗ್ರಹಿಸುತ್ತಾರೆ. ಪ್ರಸ್ತುತ ಹಲವು ಕಾಲದಿಂದ ಇಲ್ಲಿ ಕಾರ್ಯ ಚರಿಸುತ್ತಿದ್ದ ಲೈಟ್ ಹೌಸ್ ನ್ನು ಬಂದ್ ಮಾಡಲಾಗಿದ್ದು,ಬದಲಿಗೆ ಕುಂದಾಪುರ ಕೋಡಿಯಲ್ಲಿ ಲೈಟ್ ಹೌಸ್ ಸ್ಥಾಪಿಸಿ ಉನ್ನತೀಕರಿಸಲಾಗಿದೆ. ಇದರಿಂದ ಈ ಭಾಗದ ಮೀನುಗಾರರಿಗೆ ಅನ್ಯಾಯವಾಗಿದೆ ಎಂದು ಬಿಕ್ಯಖಾರ್ವಿ ನೊಂದು ನುಡಿಯುತ್ತಾರೆ.

ಇಲ್ಲಿರುವ ಐತಿಹಾಸಿಕ ಪಾಂಡವರ ಗುಹೆ ಮತ್ತು ಅಭೂತಪೂರ್ವ ಶಿಲಾ ಕಲಾಕೃತಿಗಳು ಸೂಕ್ತ ಪೋಷಣೆ ಇಲ್ಲದೇ ನಲುಗುತ್ತಿದೆ. ಇದನ್ನು ಪ್ರಾಚ್ಯ ವಸ್ತು ಇಲಾಖೆ ಗಮನಿಸಿ, ಗುರುತಿಸಿ ಸಂರಕ್ಷಣೆ ಮಾಡಬೇಕಾಗಿದೆ. ಸದ್ಯ ಈ ಅಮೂಲ್ಯವಾದ ಸ್ಮರಣಿಕೆಗಳು ಅನಾಥವಾಗಿದೆ. ಇದನ್ನು ಸಂರಕ್ಷಿಸಿ ಐತಿಹಾಸಿಕ ಪ್ರದೇಶವನ್ನಾಗಿ ಅಭಿವೃದ್ಧಿ ಪಡಿಸಬೇಕಾಗಿದೆ.

ಈ ಐತಿಹಾಸಿಕ ಪಾಂಡವರ ಗುಹೆಯ ಪ್ರದೇಶವನ್ನು ಬೆಳಕಿಗೆ ತಂದು ಅಭಿವೃದ್ಧಿ ಪಡಿಸಲು ಪರಿಸರದ ಯುವಕ ವಿಶ್ವನಾಥ್ ಗಂಗೊಳ್ಳಿ ಯವರು ಭಾರೀ ಪ್ರಯತ್ನ ಪಟ್ಟಿರುತ್ತಾರೆ. ಈ ಗುಹೆಯೊಳಗೆ ಪಿರಮಿಡ್ ಆಕೃತಿಯ ಪ್ರಾಂಗಣವಿದ್ದು ಇದರೊಳಗೆ ಸುಮಾರು ನೂರೈವತ್ತು ಜನರು ಕುಳಿತುಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ವೀರ ಸಂಗೊಳ್ಳಿ ರಾಯಣ್ಣ ಈ ಗುಹೆಯೊಳಗೆ ತನ್ನ ಸಹಚರರೊಂದಿಗೆ ಸಭೆ ನಡೆಸಿದ್ದರು ಎನ್ನುವ ಅಭೂತಪೂರ್ವ ಮಾಹಿತಿಯೂ ಇದೆ. ವಿಶ್ವನಾಥ ಗಂಗೊಳ್ಳಿ ಯವರು ಈ ಬಗ್ಗೆ ಮಾಹಿತಿಯನ್ನು ತನ್ನ ಹಿರಿಯರಿಂದ ಪಡೆದುಕೊಂಡಿದ್ದರು. ಪಾಂಡವರು ಹಲವು ದಿನಗಳ ಕಾಲ ತಂಗಿದ್ದರು ಈ ಗುಹೆಯೊಳಗೆ ಪಾಂಡವರು ಊಟ ಮಾಡಿದ ಪಾತ್ರೆ ಪಗಡೆಗಳು ಇದೆ ಎನ್ನಲಾಗಿದೆ.

ಪಾಂಡವರು ಇಲ್ಲಿಂದ ಹೋದ ಬಳಿಕ ನಾಗಾ ಅರಸರು ಗುಹೆಯ ಸುತ್ತಲೂ ಭದ್ರವಾದ ರಕ್ಷಣಾ ವ್ಯವಸ್ಥೆ ನಿರ್ಮಿಸಿಕೊಂಡು ಸಮುದ್ರ ಮಾರ್ಗ ವಾಗಿ ದಂಡೆತ್ತಿ ಬರುವ ಶತ್ರುಗಳನ್ನು ಸದೆಬಡಿಯುತ್ತಿದ್ದರು. ಇಲ್ಲಿಂದಲೇ ನಾಗಾ ಅರಸರು ಶೀಲಂಕಾದ ಮೇಲೆ ದಂಡೆತ್ತಿ ಹೋಗಿ ಕೆಲವು ಪ್ರಾಂತ್ಯಗಳನ್ನು ಗೆದ್ದು ಕೊಂಡ ಉಲ್ಲೇಖವೂ ಇದೆ. ಶತಶತಮಾನದಿಂದ ಹಲವು ಐತಿಹಾಸಿಕ ಘಟಾನಾವಳಿಗಳಿಗೆ ಸಾಕ್ಷಿ ಯಾದ ಈ ಗುಹೆ ಮತ್ತು ಪರಿಸರವನ್ನು ಪುನುರುಜ್ಜೀವನಗೊಳಿಸಲು ಉತ್ಸಾಹಿ ಯುವಕ ಊರ ಮಂದಿಯ ಸಹಕಾರದೊಂದಿಗೆ ಶತಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ. ಇಂತಹ ಅಭೂತಪೂರ್ವ ಐತಿಹಾಸಿಕ ಸ್ಥಳವನ್ನು ಪುನುರುಜ್ಜೀವನಗೊಳಿಸಲು ಖಾರ್ವಿ ಆನ್ಲೈನ್ ಊರಿನವರೊಂದಿಗೆ ಕೈ ಜೋಡಿಸಿ ಈ ಪ್ರದೇಶವನ್ನು ಐತಿಹಾಸಿಕ ತಾಣವಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ.

ಹಿಂದಣ ಹೆಜ್ಜೆ ಅರಿಯುವುದೆಂದರೆ ಬದುಕಿನ ಮೇಲೆ ಪರಿಣಾಮ ಬೀರಿದ ಘಟನೆ. ಅದೇ ಇತಿಹಾಸ ಅದು ಸ್ಮರಣೆ ಮಾತ್ರವಲ್ಲ. ವರ್ತಮಾನ ಹಾಗೂ ಭವಿಷ್ಯತ್ತಿಗೆ ಪ್ರೇರಕವಾಗುವ ಸನ್ನೆಗೋಲು. ಅಲ್ಲಮಪ್ರಭುಗಳ ವಿವೇಕವಾಣಿಯಂತೆ ಹಿಂದಣ ಹೆಜ್ಜೆಯನರಿಯದೆ ನಿಂದ ಹೆಜ್ಜೆಯನರಿಯಬಾರದು. ಅಂದರೆ ಇತಿಹಾಸ ತಿಳಿಯದವನು ವರ್ತಮಾನವನ್ನು ಭವಿಷ್ಯತ್ತನ್ನು ಅರಿಯಲಾರ ಎಂಬುದೇ ಈ ಮಾತಿನ ತಾತ್ಪರ್ಯ.

ಉಮಾಕಾಂತ ಖಾರ್ವಿ
ಕುಂದಾಪುರ

Leave a Reply

Your email address will not be published. Required fields are marked *