ಕಾಸರಕೋಡು ಟೊಂಕದಲ್ಲಿ ಕಡಲಾಮೆಗಳ ಮರಣ ಮೃದಂಗ

ಮೊನ್ನೆ ಮೊನ್ನೆಯಷ್ಟೇ ಕಾಸರಕೋಡು ಟೊಂಕ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಕಡಲಾಮೆಯ ಶಿಥಿಲಗೊಂಡ ಕಳೇಬರ ಸಿಕ್ಕಿತ್ತು.ಇದೀಗ ಬೆಳಿಗ್ಗೆ ಉದ್ದೇಶಿತ ವಾಣಿಜ್ಯ ಬಂದರು ಪ್ರದೇಶದಲ್ಲಿಯೇ ಮತ್ತೊಂದು ಬೃಹತ್ ಗಾತ್ರದ ಕಡಲಾಮೆ ಸಂಪೂರ್ಣ ಮೃತದೇಹ ಪತ್ತೆಯಾಗಿದ್ದು, ಅದರ ಹೊಟ್ಟೆಯ ತಳಭಾಗದಲ್ಲಿ ಭಾರೀ ಗಾಯಗಳಾಗಿದೆ. ಈ ಗಾಯದಿಂದ ಅದು ಸತ್ತಿರುವುದು ಬಹುತೇಕ ಖಚಿತವಾಗಿದೆ. ಮೀನುಗಾರರು ನೀಡಿದ ಮಾಹಿತಿಯಂತೆ ಅರಣ್ಯ ಇಲಾಖೆಯವರು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋದರೆನ್ನಲಾಗಿದ್ದು ವಾಸ್ತವ ಸಂಗತಿಗಳನ್ನು ಮರೆಮಾಚಿ ಬಂದರು ನಿರ್ಮಾಣದ ಕಪ್ಪು ದೈತ್ಯರ ಮರ್ಜಿಗೆ ತಕ್ಕಂತೆ ವರದಿ ಬರುವ ಸಾಧ್ಯತೆ ಇದೆ.

ಈಗಾಗಲೇ ಪರಿಸರ ಮಂತ್ರಾಲಯ, ಅರಣ್ಯ ಮತ್ತು ಜೀವವೈವಿಧ್ಯ ಸಚಿವಾಲಯ ದೆಹಲಿಯ A/C ರೂಮಿನಲ್ಲಿ ಕುಳಿತು ಕಾಸರಕೋಡು ಮಾತ್ರವಲ್ಲ, ಇಡೀ ಕರ್ನಾಟಕ ಕರಾವಳಿ ಯಲ್ಲಿ ಏಲ್ಲಿಯೂ ಆಮೆ ಗೂಡು ಕಟ್ಟುವುದಿಲ್ಲ ಎಂಬ ಸುಳ್ಳಿನ ಕಂತೆ ಸೃಷ್ಟಿಸಿದೆ. ಅವರ ಈ ಸುಳ್ಳು ವರದಿಯ ಹಿಂದಿರುವುದು ಮಾತ್ರ ಭಯಾನಕ ಸತ್ಯ. ಈಗಾಗಲೇ ಕಾರವಾರ, ಬೇಲೇಕೇರಿ, ಪಾವಿನಕುರ್ವೆ, ಹಳದೀಪುರ, ಹೆಜಮಾಡಿಕೋಡಿ, ಕನ್ಯಾಣಕೋಡಿ ಮುಂತಾದ ಕರಾವಳಿ ಕಡಲತೀರವನ್ನು ಅಭಿವೃದ್ಧಿಯ ನೆಪದಲ್ಲಿ ವಶಪಡಿಸಿಕೊಂಡು ವಾಣಿಜ್ಯ ಬಂದರು ನಿರ್ಮಾಣ ಮಾಡಲು ಮುಂದಡಿಯಿಟ್ಟುರುವ ನಮ್ಮನಾಳುವ ಪ್ರಭುಗಳು ಯೋಜನೆ ರೂಪಿಸಲು ಸಂಚು ರೂಪಿಸಿದ್ದಾರೆ. ಈ ಕಾಸರಕೋಡು ಟೊಂಕ ಕಡಲಾಮೆ ಸಂರಕ್ಷಿತ ಪ್ರದೇಶವನ್ನು ಕೇಂದ್ರಿಕರಿಸಿಕೊಂಡು ಮುಂಬರುವ ಖಾಸಗಿ ವಾಣಿಜ್ಯ ಬಂದರು ಯೋಜನೆಗಳಿಗೆ ತೊಂದರೆಯಾಗಬಾರದೆಂಬುದೇ ಕಡಲಾಮೆ ಗೂಡು ಕಟ್ಟುವುದಿಲ್ಲ ಎಂಬ ಸುಳ್ಳು ವರದಿಯ ಹಿಂದಿನ ಕುಹಕ ತಂತ್ರಗಾರಿಕೆ.

ಕಾಸರಕೋಡು ಮತ್ತು ಕಾರವಾರದಲ್ಲಿ ಎರಡು ವಾರಗಳ ಅಂತರದಲ್ಲಿ ಕಡಲತೀರಗಳಲ್ಲಿ ನಾಲ್ಕಕ್ಕೂ ಹೆಚ್ಚು ಕಡಲಾಮೆಗಳು ಮೃತ ಪಟ್ಟಿದ್ದು, ಕರ್ನಾಟಕ ಕರಾವಳಿಯಲ್ಲಿ ಕಡಲಾಮೆ ಗೂಡು ಕಟ್ಟುವುದಿಲ್ಲ ಎಂಬ ಸುಳ್ಳು ವರದಿಯ ಜನಕರು ಹೊಟ್ಟೆಗೆ ಏನು ತಿನ್ನುತ್ತಾರೆ? ಸಿಕ್ಕಿದಷ್ಟನ್ನು ಗೆಬರಿಕೊಳ್ಳುವ ಈ ಬಕಪಕ್ಷಿಗಳಿಗೆ ಜನರ ನೋವು ಅರ್ಥ ವಾಗುವುದಿಲ್ಲ. ಇಂದು ಹೊಟ್ಟೆ ಭಾಗದಲ್ಲಿ ತೀವ್ರ ತರದ ಗಾಯವಾಗಿರುವ ಸ್ಥಿತಿಯಲ್ಲಿ ಮೃತಪಟ್ಟ ಕಡಲಾಮೆಯ ಶರೀರ ಗಮನಿಸಿದರೆ ಶರಾವತಿ ಆಳಿವೆ ಭಾಗದಲ್ಲಿ ನಡೆಯುತ್ತಿರುವ ವಾಣಿಜ್ಯ ಬಂದರು ಕಾಮಗಾರಿಯ ಡ್ರೆಜ್ಜಿಂಗ್ ಸಂದರ್ಭದಲ್ಲಿ ಆಗಿರುವ ಗಾಯದಿಂದ ಆಮೆ ಮೃತ ಪಟ್ಟಿರಬಹುದು ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಈ ಡ್ರೆಜ್ಜಿಂಗ್ ಕಾಮಗಾರಿಯಿಂದ ಶರಾವತಿ ಆಳಿವೆ ಯಲ್ಲಿ ವ್ಯತ್ಯಾಸ ಕಂಡುಬಂದಿದ್ದು ಶರಾವತಿ ನದಿಯ ಹರವಿನಲ್ಲಿ , ಅದರ ಪಥದಲ್ಲಿ ವಿಲಕ್ಷಣ ಬದಲಾವಣೆಗಳಾಗಿದೆ. ದುಷ್ಪರಿಣಾಮವಾಗಿ ಇಲ್ಲಿ ಎರಡು ಬೋಟ್ ಗಳು ಮುಳುಗಡೆಯಾದ ಪ್ರಸಂಗ ನಡೆದಿದೆ. ಓಟು ಕೇಳಲು ಬರುವರಿಗೆ ಮೀನುಗಾರರ ನೋವು ಅರ್ಥ ವಾಗುವುದಿಲ್ಲ. ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಯಿಂದ ಬದುಕು ಕಳೆದುಕೊಳ್ಳುತ್ತಿರುವ ಮೀನುಗಾರರ ಬಗ್ಗೆ ನಾಶವಾಗುತ್ತಿರುವ ಜೀವವೈವಿಧ್ಯತೆಗಳ ಕಿಂಚಿತ್ತೂ ಕಾಳಜಿ ಇಲ್ಲ. ಯಾರೂ ಬೇಕಾದರೂ ಹಾಳಾಗಿ ಹೋಗಲಿ ತಾವು ಮಾತ್ರ ಉದ್ದಾರವಾದರೆ ಸಾಕು ಎಂಬ ಮನೋಧರ್ಮದ ಈ ನಡವಳಿಕೆ ಹೇವರಿಕೆ ಹುಟ್ಟಿಸುತ್ತದೆ. ಆಳಿವೆ ಪ್ರದೇಶದಲ್ಲಿ ಹೂಳು ಎತ್ತುವ ಸಂದರ್ಭದಲ್ಲಿ ಕರಾವಳಿ ನಿಯಂತ್ರಣಾವಲಯದ ನಿಬಂಧನೆಗಳಿಗನಾಸಾರವಾಗಿ ಅನುಮತಿ ಪಡೆಯಬೇಕು. ಎತ್ತಿದ ಹೂಳನ್ನು ಸಮುದ್ರ ದಲ್ಲಿ ವಿಸರ್ಜಿಸಬೇಕಾಗಿ ಬಂದಾಗ , ಸೂಕ್ಷ್ಮ ಪ್ರದೇಶದಿಂದ 25 ಕಿ.ಮೀ.ಗಳ ದೂರದಲ್ಲಿ 40 ಮೀಟರ್ ಆಳದಲ್ಲಿ ಹರಡಬಹುದು. ಆದರೆ ಕಾಸರಕೋಡು ಆಳಿವೆ ಪ್ರದೇಶದಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ. ಗ

ಸಮುದ್ರದ ಹೂಳನ್ನು ತೆಗೆದು ಶರಾವತಿ ಆಳಿವೆಗೆ ತಂದು ಸುರಿಯುತ್ತಿದ್ದಾರೆ. ಪರಿಣಾಮವಾಗಿ ಶರಾವತಿ ಆಳಿವೆ ಹೂಳು ತುಂಬಿಕೊಂಡು ಮೀನುಗಾರರ ಪಾಲಿಗೆ ಮೃತ್ಯು ಕಂದರವಾಗಿದೆ. ಇಲ್ಲಿ ಖಾಸಗಿ ವಾಣಿಜ್ಯ ಬಂದರು ಯೋಜನೆಯನ್ನು ಆಳುವ ಪ್ರಭುಗಳು ,ಕಪ್ಪು ದೈತ್ಯರು ನಿರ್ವಹಿಸಿರುವ ರೀತಿಯನ್ನು ಗಮನಿಸಿದಾಗ ಆಶ್ವಾಸನೆ ಮತ್ತು ಆಚರಣೆಗಳ ನಡುವಿನ ಆಳಕಂದರ ಎದ್ದು ಕಾಣುತ್ತದೆ. ಹೀಗಾಗಿ ಮೀನುಗಾರರು ಯಾರನ್ನೂ ನಂಬದ ಪರಿಸ್ಥಿತಿಯಲ್ಲಿದ್ದಾರೆ. ಖಾಸಗಿ ಬಂದರು ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ವ್ಯಕ್ತವಾಗತ್ತಿರುವ ವಿರೋಧಗಳನ್ನು ಆಳುವ ಪ್ರಭುಗಳು, ಅವರ ಚೇಲಾಗಳು, ಕಪ್ಪು ದೈತ್ಯ ರು ನಿಭಾಯಿಸುತ್ತಿರುವ ಪರಿ ನೋಡಿದರೆ ದಿಗಿಲು ಹುಟ್ಟುತ್ತದೆ. ನೀರು, ನೆಲ, ಜೀವವೈವಿಧ್ಯಗಳ ನಡುವೆ ಲಕ್ಷಾಂತರ ವರ್ಷಗಳ ವಿಕಾಸ ಕ್ರಿಯೆಯ ಮೂಲಕ ಬಲಗೊಂಡಿದ್ದ ಸೂಕ್ಷ್ಮ ಸಂಬಂಧ ನಮ್ಮ ಕಣ್ಣೆದುರಿನಲ್ಲೇ ಕರಗುತ್ತಿದೆ.

ಕಡಲಾಮೆ ಕೇವಲ ಒಂದು ಪ್ರಾಣಿಯಲ್ಲ. ಅದು ಕಡಲಿನ ಸ್ವಚ್ಛತೆಯ ಪ್ರತಿರೂಪ. ಅದು ಕೇವಲ ನೆನಪಾಗಿ ದಿವಾನ ಖಾನೆಯ ಗೋಡೆಯ ಮೇಲೆ ತೂಗು ಹಾಕಿದ ಚಿತ್ರವಾಗಬಾರದು. ಕಡಲಾಮೆಗಳಿಗೆ ತಮ್ಮ ತವರಿನ ಪರಿಸರದಲ್ಲೇ ಅಭಯ ಅಗತ್ಯ ವಾಗಿರುವುದು ನಿಜಕ್ಕೂ ಒಂದು ದೊಡ್ಡ ವಿಪರ್ಯಾಸ.

ಉಮಾಕಾಂತ ಖಾರ್ವಿ
ಕುಂದಾಪುರ

One thought on “ಕಾಸರಕೋಡು ಟೊಂಕದಲ್ಲಿ ಕಡಲಾಮೆಗಳ ಮರಣ ಮೃದಂಗ

  1. ಅರಣ್ಯ ಇಲಾಖೆ ಮತ್ತು ಸಂಬಂಧ ಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ.

    ಮೊನ್ನೆ ಸಿಕ್ಕಿದ ಅಮೆಗಳ ಮೂಳೆಗಳನ್ನು ಅಧಿಕಾರಿಗಳು ಬಂದು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ HPPL ಕಂಪನಿಯ ಕರ್ಮಕಾಂಡ ಬಿಚ್ಚಿಟ್ಟಿದ್ದೆ ಆದರೂ ನಮ್ಮ ಅಳಲನ್ನು ಲೆಕ್ಕಿಸದ ಅಧಿಕಾರಿಗಳು ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ವಿಪರ್ಯಾಸ.

    HPPL ಕಂಪನಿಯು ತನ್ನ security guard ಗಳನ್ನೂ ಸಮುದ್ರದ ತೀರದಲ್ಲಿ ನಿಯೋಜಿಸಿ ಆಮೆಗಳ ಮರಣಹೋಮ ನಡೆಸುತ್ತಿದೆ.

    ಗೇಟ್ ಹಾಗೂ ತಮ್ಮ ಸಲಕರಣೆಗಳು ಇರುವ ಜಾಗ ಬಿಟ್ಟು ಕಡಲ ತೀರದಲ್ಲಿ 200 ರಿಂದ 300 ಮೀಟರ್ ಅಂತರದಲ್ಲಿ ಕುಳಿತು ಸಮುದ್ರದ ಅಲೆಗಳನ್ನು ಲೆಕ್ಕ ಹಾಕುವ ಕೆಲಸವಿದೆಯ ಅನ್ನೋ ಸಂಶಯ ಮೂಡುತ್ತದೆ.

    ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ತನ್ನ ಸೆಕ್ಯೂರಿಟಿ ಸಿಬ್ಬಂದಿಗಳಿಗೆ
    ಆಮೆಗಳನ್ನು ಪತ್ತೆ ಹಚ್ಚಿದರೆ ಹಾಗೂ ಆಮೆ ಮೊಟ್ಟೆ ಇಟ್ಟ ಜಾಗ ಪತ್ತೆ ಹಚ್ಚಿದರೆ 5000 ವರೆಗಿನ ಬಹುಮಾನ ಘೋಷಿಸಿದ್ದಾರೆ.

    #ಆಮೆಗಳನ್ನು_ಉಳಿಸಿ

Leave a Reply

Your email address will not be published. Required fields are marked *