ಟೈಟಾನಿಕ್….’ ಎಂಬ ಹೆಸರು ಕೇಳಿದ ಕೂಡಲೇ ಕೂಡಲೇ ವಿಶಾಲ ಸಾಗರ, ಸುಂದರವಾದ ಐಶಾರಾಮಿ ಹಡಗು, ಅದು ಮುಳುಗುವ ದೃಶ್ಯ ಕಣ್ಮುಂದೆ ಸುಳಿಯುತ್ತದೆ. ‘ಮುಳುಗಲಾರದ ನೌಕೆ’ ಎಂದೇ ಹೆಸರು ಪಡೆದಿದ್ದ ಈ ಹಡಗು ತನ್ನ ಮೊದಲ ಯಾನದಲ್ಲಿಯೇ ಹಿಮಬಂಡೆಗೆ ಬಡಿದು ಅಂತ್ಯ ಕಂಡಿದ್ದು ಇತಿಹಾಸದ ಘೋರ ದುರಂತ. ಇಂಗ್ಲೆಂಡಿನ ಸೌತ್ ಹ್ಯಾಂಪ್ಟನ್ ನಿಂದ ಅಮೆರಿಕಾದ ನ್ಯೂಯಾರ್ಕ್‌ಗೆ ಹೊರಡುವ ಮಾರ್ಗಮಧ್ಯದಲ್ಲಿ 1912 ಎಪ್ರಿಲ್ 14ರ ಮಧ್ಯರಾತ್ರಿ ನ್ಯೂಫೌಂಡ್‌ಲ್ಯಾಂಡಿನ ಸಮುದ್ರತೀರದಿಂದ 640 ಕಿ.ಮೀ. ದೂರದಲ್ಲಿ ಮುಳುಗಿತು. ಹಡಗಿನಲ್ಲಿದ್ದ 2220 ಜನರಲ್ಲಿ ಕೊನೆಗೆ ಬದುಕುಳಿಯುವ ಭಾಗ್ಯ ದೊರೆತದ್ದು ಕೇವಲ 705 ಜನರಿಗೆ ಮಾತ್ರ. ದಡದಿಂದ ಹೊರಡುವಾಗ ಮುಳುಗಲಾರದ ಹಡಗೆಂದು ಕಿರೀಟ ತೊಟ್ಟುಕೊಂಡು ಹೊರಟ ಹಡಗು ಈ ರೀತಿಯ ದುರಂತಕ್ಕೀಡಾಗಲು ಹಲವು ಕಾರಣಗಳನ್ನು ಈಗಿನ ಸಂಶೋಧಕರು ನೀಡುತ್ತಾರೆ. ಕ್ಯಾಪ್ಟನ್‌ನ ನಿರ್ಲಕ್ಷ್ಯ, ಬೈನಾಕುಲರ್ ಇದ್ದರೂ ಬಳಸದಿರುವುದು, ದಿನಂಪ್ರತಿ ನೂರಾರು ಟನ್‌ಗಳಷ್ಟು ಕಲ್ಲಿದ್ದಲು ಉರಿಸಿದ್ದರಿಂದ ತಳಪಾಯ ಶಿಥಿಲವಾಗಿ ನೀರ್ಗಲ್ಲಿನ ಹೊಡೆತಕ್ಕೆ ಸುಲಭವಾಗಿ ಗುರಿಯಾಗಿದ್ದು, ಕೆಲವೇ ಕಿ.ಮೀ.ದೂರದಲ್ಲಿದ್ದ ಹಡಗಿನ ಜೊತೆ ಸಂಪರ್ಕ ಸಾಧಿಸಲು ಸಾಧ್ಯವಾಗದೇ ಇದ್ದಿದ್ದು…ಇತ್ಯಾದಿ…
ಸಮುದ್ರದಲ್ಲಿ ಚಲಿಸುವ ಯಾವುದೇ ಹಡಗು, ಬೋಟು, ದೋಣಿಗಳು ಮುಳುಗಬೇಕಾದರೆ ಕೆಲವು ನಿರೀಕ್ಷಿತ ಕಾರಣಗಳು ಇರುತ್ತವೆ; ಅಥವಾ ಅನಿರೀಕ್ಷಿತ ಕಾರಣಗಳೂ ಇರಬಹುದು. ಕಾಲಾವಕಾಶ ನೀಡದೇ ಮುಳುಗಬಹುದು; ಸಾಕಷ್ಟು ಸಮಯ ನೀಡಿ ಮುಳುಗಬಹುದು. ಆದರೆ ಒಂದು ಹಡಗು ಮುಳುಗುವುದೆಂದರೆ ಒಂದು ದೊಡ್ಡ ವ್ಯವಸ್ಥೆ ನಾಮಾವಶೇಷವಾದಂತೆ; ಒಂದು ಉತ್ತಮ ಕಥನ-ಕವನಕ್ಕೆ ಪೂರ್ಣವಿರಾಮ ಇಟ್ಟಂತೆ. ಒಂದು ದೋಣಿ ಮುಳುಗುವುದೆಂದರೆ ಹತ್ತಾರು ಕುಟುಂಬಗಳು ಬೀದಿಗೆ ಬಂದಂತೆ; ಹಲವರ ಬದುಕಿನ ಆಶಾಗೋಪುರ ಧರೆಗೆ ಉರುಳಿದಂತೆ. ಕೆಲವು ದಶಕಗಳ ಹಿಂದೆ ಗಂಗೊಳ್ಳಿ ಬಂದರಿನಿಂದ ಹಡಗಿನ ಮೂಲಕ ಮ್ಯಾಂಗನೀಸ್ ರಫ್ತಾಗುತ್ತಿತ್ತು. ಯಾವಾಗ ಮ್ಯಾಂಗನೀಸ್ ತುಂಬಿದ ಎರಡು ಹಡಗುಗಳು ಗಂಗೊಳ್ಳಿ ಸಮುದ್ರ ತೀರದಿಂದ ಕೇವಲ ಏಳೆಂಟು ಕಿ.ಮೀ. ಅಂತರದೊಳಗೆ ಮುಳುಗಿತೋ, ಅಲ್ಲಿಂದ ಮ್ಯಾಂಗನೀಸ್ ರಫ್ತಾಗುವುದು ನಿಂತು ಹೋಯಿತು. ಹಡಗಿಗೆ ಮ್ಯಾಂಗನೀಸ್ ತುಂಬಿಸುತ್ತಿದ್ದ ಸ್ಥಳವನ್ನು ಮ್ಯಾಂಗನೀಸ್ ರೋಡ್ ಎಂದು ಈಗಲೂ ಕರೆಯಲಾಗುತ್ತದೆ. ಆದರೆ ಹಿಂದಿನಂತೆ ಹಡಗುಗಳ ಸಂಚಾರ ಈಗ ಇಲ್ಲ. ಹಡಗುಗಳು ಮುಳುಗಿದ ಕಾರಣ ಒಂದು ವ್ಯವಸ್ಥೆಯೇ ಅವ್ಯವಸ್ಥೆಗೊಂಡ ಉದಾಹರಣೆಯಿದು.
ಎರಡು ವಾರಗಳ ಹಿಂದೆ ಮೀನುಗಾರಿಕೆ ನಡೆಸಿ ಮಂಗಳೂರು ಬಂದರಿಗೆ ಬರುತ್ತಿದ್ದ ಬೋಟೊಂದು ಮುಳುಗಡೆಯಾಗಿ ಐದು ಮಂದಿ ಜೀವ ಕಳೆದುಕೊಂಡು, ಒಬ್ಬರು ಕಣ್ಮರೆಯಾಗಿ ಹೋದರು. ದಡಕ್ಕೆ ಬರುತ್ತಿದ್ದ ಬೋಟು ಯಾವುದೇ ಅಲೆಗಳ ಹೊಡೆತಕ್ಕೆ ಸಿಲುಕದೇ, ಯಾವುದೇ ಬಂಡೆಗೆ ಢಿಕ್ಕಿ ಹೊಡೆಯದೇ, ಹಡಗಿನ ಯಾವುದೇ ಭಾಗಗಳಿಗೆ ಹಾನಿಯಾಗದೇ ಮುಳುಗಿದ್ದು ಆಶ್ಚರ್ಯ. ಜೀವನೋಪಾಯಕ್ಕಾಗಿ ಹಿಡಿದು ತರುತ್ತಿದ್ದ ಮೀನಿನ ಭಾರದಿಂದಲೇ ಬೋಟು ಮಗುಚಿದೆ ಎಂದು ಕೆಲವರು ಹೇಳುತ್ತಾರೆ. ಕಣ್ಣು ಮುಚ್ಚಿ ತೆರೆಯುವುದರೊಳಗೆ ಬೋಟು ಮಗುಚಿದ್ದರಿಂದ ಅಪಾಯದ ವಿರುದ್ಧ ಸೆಣಸಾಡುವ ಮೊದಲೇ ಐದಾರು ಮಂದಿ ಬಲೆಯೊಳಗೆ ಸಿಲುಕಿ ಜೀವ ಕಳೆದುಕೊಂಡಿದ್ದರು. ಆದರೆ ಈ ರೀತಿಯ ದುರಂತ ಮೀನುಗಾರಿಕೆಯ ಇತಿಹಾಸದಲ್ಲೇ ಮೊದಲಿರಬಹುದು. ಇವೆಲ್ಲಾ ಅನಿರೀಕ್ಷಿತವಾಗಿ ಆಗುವ ದುರಂತಗಳು. ಮುಳುಗುವ ಮೊದಲು ಯಾವುದೇ ಸೂಚನೆಯಿಲ್ಲದಿರುವಾಗ ಜೀವ ನಷ್ಟ ಹೆಚ್ಚಾಗುತ್ತದೆ. ಟೈಟಾನಿಕ್ ಹಡಗು ಸಹ ಅನಿರೀಕ್ಷಿತವಾಗಿ ಮುಳುಗಿ ಹೋಗಿತು. ಮೂರು ಗಂಟೆಗಳ ಸಮಯಾವಕಾಶ ದೊರೆತರೂ ಸಹ ಸಮುದ್ರದ ನಟ್ಟನಡು ಭಾಗದಲ್ಲಿರುವಾಗ, ಅದರಲ್ಲೂ ಸಮುದ್ರದ ನೀರೆಲ್ಲ ಹೆಪ್ಪುಗಟ್ಟುವ ಸಮಯದಲ್ಲಿ ಎಷ್ಟು ಜೀವ ಉಳಿಸಿಕೊಳ್ಳಬಹುದು. ಮೀನುಗಾರಿಕೆಗೆ ತೆರಳಲಿದ ಬೋಟುಗಳು ಮುಳುಗಿದಾಗ, ಮನೆಯಲ್ಲಿ ದುಡಿಯುವ ಆಧಾರ ಸ್ತಂಭವೇ ನೀರುಪಾಲಾದಾಗ, ಅವರನ್ನೇ ನಂಬಿಕೊಂಡಿದ್ದ ಕುಟುಂಬಗಳು ಬೀದಿಪಾಲಾಗುತ್ತವೆ. ಕೆಲವು ಬಾರಿ ಒಂದೊಂದು ಊರಿನ ಹತ್ತಾರು ಮನೆಗಳಲ್ಲಿ ಸ್ಮಶಾನ ಮೌನ ಆವರಿಸಿ ಬಿಡುವುದು.
ಸಮುದ್ರದಲ್ಲಿ ಬಂಡೆಗಳಿಗೆ ಢಿಕ್ಕಿ ಹೊಡೆದು ಅಥವಾ ಮರಳಿನ ದಿಬ್ಬಕ್ಕೆ ಢಿಕ್ಕಿ ಹೊಡೆದು ಎಷ್ಟೋ ಹಡಗುಗಳು ಮುಳುಗಿದ್ದನ್ನು ನೋಡಿದ್ದೇವೆ. ಇದರಿಂದ ಎಷ್ಟೋ ಕಂಪೆನಿಗಳು, ಉದ್ಯಮಿಗಳು ಮೇಲೇಳದಷ್ಟು ನಷ್ಟವನ್ನು ಅನುಭವಿಸಿ ಉದ್ಯಮವನ್ನೇ ಮುಚ್ಚಿ ಬಿಡುತ್ತಾರೆ. ಆನೆ ಸಾಕಿದವನಿಗೆ ಮಾತ್ರ ಗೊತ್ತು ಅದರ ಖರ್ಚು ವೆಚ್ಚ. ಸಾಲ-ಸೋಲ ಮಾಡಿ, ದೋಣಿಯ ಮೇಲೆ ಬಂಡವಾಳ ಹೂಡುವ ಸಣ್ಣ ಸಣ್ಣ ಬಂಡವಾಳಶಾಹಿಗಳು ಕೈ ಸುಟ್ಟುಕೊಂಡು ಮೂಲೆಗುಂಪಾದ ಎಷ್ಟೋ ಮೀನುಗಾರರಿದ್ದಾರೆ. ಹೊರಗಿನಿಂದ ನೋಡುವವರಿಗೆ ಮತ್ಸ್ಯೋದ್ಯಮವೆಂಬುದು ಲಾಭದಾಯಕ ಎಂದು ಅನ್ನಿಸುತ್ತದೆ. ಆದರೆ ನೀರಿನ ಮೇಲೆ ತೇಲುವ ಯಾವ ವಸ್ತುವೇ ಇರಲಿ, ಜೀವವೇ ಇರಲಿ ಯಾವ ಕ್ಷಣದಲ್ಲೂ ಮುಳುಗಿ ಹೋಗಬಹುದೆಂಬ ಕಲ್ಪನೆ, ಮೇಲೆ ನಿಂತು ನೋಡುವವರಿಗೆ ಅನುಭವಕ್ಕೆ ಬಾರದು. ಇಂತಹ ಒಂದೊಂದು ದುರಂತ ಸಂಭವಿಸಿದರೆ ಸಮುದ್ರವನ್ನೇ ನಂಬಿಕೊಂಡು ಬದುಕುವ ಕುಟುಂಬದವರ ಜೀವನೋತ್ಸಾಹವೇ ಕುಗ್ಗಿ ಹೋಗಬಹುದು; ಪುನಃ ಜೀವನವನ್ನು ಶೂನ್ಯದಿಂದ ಪ್ರಾರಂಭಿಸಬೇಕಾದ ಅನಿವಾರ್ಯತೆ ಉಂಟಾತ್ತದೆ.
ಸ್ಥಳೀಯವಾಗಿ ಮೀನುಗಾರಿಕೆ ಮಾಡುವವರಿಗೆ ಸಮುದ್ರದ ಯಾವ ಯಾವ ದಿಕ್ಕಿನಲ್ಲಿ, ಎಷ್ಟು ಆಳದಲ್ಲಿ ಎಷ್ಟು ದೊಡ್ಡ ಬಂಡೆಗಳಿವೆ, ಯಾವುದು ಅಪಾಯಕಾರಿ ಎಂಬ ಮಾಹಿತಿ ಇರುತ್ತದೆ. ಇದು ಕೇವಲ ಅನುಭವದಿಂದ ಬಂದಿದ್ದು. ಈಗ ಕಾಲ ಬದಲಾಗಿದೆ. ಬಂಡೆಗಳನ್ನು, ಮರಳಿನ ದಿಬ್ಬಗಳನ್ನು ಬಹುದೂರದಿಂದಲೇ ಗುರುತಿಸುವಂತಹ ಉಪಕರಣಗಳು ಹಡಗುಗಳಲ್ಲಿ ಬಳಸಲಾಗುತ್ತದೆ. ಹಡಗುಗಳಲ್ಲಿ ಬಳಸುತ್ತಿದ್ದ ತಂತ್ರಜ್ಞಾನಗಳು ಸಾಮಾನ್ಯ ಬೋಟುಗಳಿಗೂ ಸಿಗುತ್ತಿವೆ. ಆದರೂ ಕೆಲವು ಬಾರಿ ನಾವಿಕರ ನಿಯಂತ್ರಣ ಮೀರಿದಾಗ ದುರಂತ ಸಂಭವಿಸುವುದುಂಟು. ಇಂತಹ ಸಂದರ್ಭಗಳಲ್ಲಿ ಸಿಕ್ಕಿದ್ದೇ ಸಮಯವೆಂಬಂತೆ ತಲೆಗೊಬ್ಬರಂತೆ ತಮ್ಮ ಮೂಗಿನ ನೇರಕ್ಕೆ ತೀರ್ಪು ನೀಡಲು ಪ್ರಾರಂಭಿಸುತ್ತಾರೆ.
ಈ ಮಳೆಗಾಲದಲ್ಲಿ ಹೋಗಬೇಕಾದ ಅನಿವಾರ್ಯತೆ ಇತ್ತಾ; ಆಳ ಸಮುದ್ರಕ್ಕೆ ಹೋಗಬೇಕಿತ್ತಾ; ಲೈಪ್ ಜಾಕೇಟ್ ಬಳಸಬಹುದಿತ್ತಲ್ಲ; ಈಜು ಗೊತ್ತಿಲ್ಲದವರು ಏಕೆ ಮೀನುಗಾರಿಕೆ ಮಾಡಬೇಕು. ಹೀಗೆ ಪುಂಖಾನುಪುಂಖವಾಗಿ ಪ್ರಶ್ನೆ ಗಳನ್ನು ಎಸೆಯುತ್ತಾರೆ. ಆದರೆ ಸಮುದ್ರವೆಂಬುದು ನಾವಂದುಕೊಂಡಷ್ಟು ಸಂಕುಚಿತವಲ್ಲ. ಅದೊಂದು ನಿಗೂಢಗಳ ಆಗರ; ಪ್ರತಿ ಕ್ಷಣವೂ ಬದಲಾಗುವ ಅಪಾಯಕಾರಿ ಗುಡಾಣ; ಅನುಭವಿಯ ಎದೆಯನ್ನೂ ನಡುಗಿಸುವಂತಹ ವಿಸ್ಮಯದ ತಾಣ. ಸಮುದ್ರ, ಯಾರ ಮಾತಿಗೂ, ಭಾವನೆಗೂ, ಯೋಚನೆಗೂ ನಿಲುಕದ್ದು. ಬೆದಕಿದರೆ ವಿಸ್ಮಯ; ಕೆದಕಿದರೆ ಅಯೋಮಯ ಎಂಬ ಮಾತಿಗೆ ಉದಾಹರಣೆಯಾಗಿ ನಿಲ್ಲಬಲ್ಲದ್ದು ಸಮುದ್ರ. ಇಂತಹ ಸಮುದ್ರದಲ್ಲಿ ಅನಿರೀಕ್ಷಿತವಾಗಿ ದುರಂತವಾದಾಗ ಏನೇನೋ ಬಡಬಡಿಸುವ ಬದಲು ನೊಂದವರಿಗೆ ಸಹಾಯ ಹಸ್ತ ಚಾಚೋಣ; ಸಾಂತ್ವನದ ನುಡಿಗಳನ್ನಾಡೋಣ; ಮೀನುಗಾರರ ಸಮಸ್ಯೆಗಳಿಗೆ ಅಕ್ಷರದ ರೂಪ ನೀಡೋಣ; ನಮ್ಮನ್ನಳುವವರಿಗೆ ಅವರ ಕಷ್ಟಗಳನ್ನು ಮನವರಿಕೆ ಮಾಡಿಕೊಡೋಣ. ಇದ್ಯಾವುದೂ ಸಾಧ್ಯವಾಗದಿದ್ದರೆ, ಸುಮ್ಮನಿರುವುದೇ ಅವರಿಗೆ ನೀಡುವ ಅತೀ ದೊಡ್ಡ ಕೊಡುಗೆ.
ನಾಖಾರ್ವಿ ಕಂಚುಗೋಡು