ಕ್ಷಮಿಸಿ ಬಿಡು ತಾಯೇ ಶರಾವತಿ ನಾವು ಅಸಹಾಯಕರಮ್ಮ…

ಕ್ಷಮಿಸಿ ಬಿಡು ತಾಯೇ ಶರಾವತಿ ನಾವು ಅಸಹಾಯಕರಮ್ಮ ಕಪ್ಪು ದೈತ್ಯರು ನಿನ್ನ ದಾರಿಯನ್ನು ತಪ್ಪಿಸಿದ್ದಾರೆ...

ಹೊನ್ನಾವರ ಕಾಸರಕೋಡು ಟೊಂಕದ ಬಡ ಮೀನುಗಾರರ ಮೇಲೆ ಕಡಲಿನ ಜೀವವೈವಿಧ್ಯವಾದ ಕಡಲಾಮೆಗಳ ಮೇಲೆ ಮತ್ತು ಜೀವನದಿ ಶರಾವತಿಯ ಮೇಲೆ ಖಾಸಗಿ ವಾಣಿಜ್ಯ ಬಂದರು ನಿರ್ಮಾಣದ ಕಮಂಗಿಗಳು ನಡೆಸುತ್ತಿರುವ ನಿರಂತರ ಪ್ರಹಾರದ ಫಾಲೋ ಆಫ್ ಸ್ಟೋರಿ ಸರಣಿ ಇದಾಗಿದೆ.

ಇಡೀ ಕಾಸರಕೋಡು ತಮ್ಮದು ಎಂಬಂತೆ ದೌರ್ಜನ್ಯ ನಡೆಸುತ್ತಿರುವ ಕಪ್ಪು ದೈತ್ಯ ರಿಗೆ ಉತ್ತರವಾಗಿ ಸೃಷ್ಟಿಯಾದ ಈ ಬರಹ ಆ ಎಡಬಿಡಂಗಿಗಳಿಗೆ ಸಮರ್ಪಿತ. ಶರಾವತಿ ಕನ್ನಡ ನಾಡಿಗೆ ಬೆಳಕು ನೀಡಿದ ನದಿ ಕೋಟ್ಯಾಂತರ ಜನರ ಬದುಕಿನ ಜೀವಸೆಲೆ ತೀರ್ಥಹಳ್ಳಿಯ ಅಂಬುತೀರ್ಥದಲ್ಲಿ ಹುಟ್ಟಿ ಜೋಗದಿಂದ ಧುಮ್ಮಕ್ಕುವ ಶರಾವತಿಯ ಹರಿವಿನ ಮಾರ್ಗ 128 ಕಿ.ಮೀಗಳು ತಾನು ಹರಿದು ಬಂದ ದಾರಿಯನ್ನು ನಿತ್ಯ ಹರಿದ್ವರ್ಣವನ್ನಾಗಿಸಿ ಪೊರೆಯುವ ಶರಾವತಿ ತನ್ನೊಡನೆ ಹನ್ನೆರಡು ಉಪನದಿಗಳನ್ನು ಸೇರಿಸಿಕೊಂಡು ಕಾಸರಕೋಡು ಟೊಂಕದ ಆಳಿವೆ ಪ್ರದೇಶದಲ್ಲಿ ಅರಬ್ಬೀ ಸಮುದ್ರವನ್ನು ಸೇರುತ್ತಾಳೆ.

ಶತಶತಮಾನಗಳ ಇತಿಹಾಸದಲ್ಲಿ ಶರಾವತಿ ನದಿ ತನ್ನ ಹರಿವಿನ ಪಥವನ್ನು ಬದಲಾಯಿಸಿದ ಉದಾಹರಣೆಗಳಿಲ್ಲ ಆದರೆ ಇದೀಗ ಇಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಯ ದುಷ್ಪರಿಣಾಮವಾಗಿ ಶರಾವತಿ ತನ್ನ ಪಥವನ್ನು ಪ್ರತಿನಿತ್ಯ ಬದಲಾಯಿಸುತ್ತಿದ್ದಾಳೆ. ಇಲ್ಲಿ ಭಾರೀ ಗಾತ್ರದ ಹಡಗುಗಳು ಬರಲು ಅನುಕೂಲವಾಗುವಂತೆ ತುಂಬಾ ಆಳವಾಗಿ ಡ್ರೆಜ್ಜಿಂಗ್ ಬರ್ತ್ ಮಾಡಲಾಗುತ್ತಿದೆ ಬೃಹತ್ ಗಾತ್ರದ ಯಂತ್ರೋಪಕರಣಗಳಿಂದ ಆಳಿವೆಯ ಹೂಳನ್ನು ತೆಗೆದು ಶರಾವತಿ ನದಿಗೆ ಹಾಕಲಾಗುತ್ತಿದೆ. ಪರಿಣಾಮವಾಗಿ ಶರಾವತಿ ಸಂಗಮ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಹೂಳು ಸಂಗ್ರಹವಾಗಿದ್ದು, ನದಿನೀರಿನ ಸಹಜ ಹರಿವಿಗೆ ತೊಂದರೆಯಾಗಿದೆ.

ಮೀನುಗಾರಿಕೆ ಬೋಟ್ ಗಳಿಗೆ ಸಮುದ್ರಕ್ಕೆ ತೆರಳಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಇದರ ಪರಿಣಾಮವಾಗಿ ಆಗಸ್ಟ್ 18 ರಂದು ಮತ್ತು ಸೆಪ್ಟೆಂಬರ್ 3 ರಂದು ಎರಡು ಬೋಟ್ ಗಳು ಮುಳುಗಿ ಲಕ್ಷಾಂತರ ನಷ್ಟ ವಾಗಿರುತ್ತದೆ. ಬೇರೆ ಬೋಟ್ ನವರು ಮುಳುಗಡೆಯಾದ ಬೋಟ್ ನ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಆಳಿವೆಯಲ್ಲಿ ಹೂಳೆತ್ತಿದ್ದ ಟನ್ ಗಟ್ಟಲೆ ಕೆಸರು ಮಿಶ್ರಿತ ಹೂಳು ಶರಾವತಿ ನದಿಯ ಸಹಜ ಹರಿವಿಗೆ ತೊಡಕಾಗಿರುವುದರಿಂದ ನದಿ ತನ್ನ ಹರಿವಿನ ಪಥವನ್ನು ಬದಲಾಯಿಸಿದ್ದು ಮುಂದೆ ವಿಸ್ತಾರವಾಗಿ ಬಲದಂಡೆಯ ಊರುಗಳತ್ತ ನುಗ್ಗುವ ಸಾಧ್ಯತೆಯೂ ಇರುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಇಲ್ಲಿ ಎತ್ತಿದ ಹೂಳನ್ನು ನೆಲದ ಮೇಲೆ ಹರಡುವಾಗ ಕರಾವಳಿ ನಿಯಂತ್ರಣಾವಲಯದ ನಿಬಂಧನೆಗಳನುಸಾರವಾಗಿ ಅನುಮತಿ ಪಡೆಯಬೇಕು. ಒಂದು ವೇಳೆ ಸಮುದ್ರದಲ್ಲೇ ವಿಸರ್ಜಿಸುವ ಪ್ರಮೇಯ ಬಂದಾಗ ಸೂಕ್ಷ್ಮ ಪ್ರದೇಶದಿಂದ 25 ಕಿ.ಮೀ ದೂರದಲ್ಲಿ,40 ಮೀಟರ್ ಆಳದಲ್ಲಿ ಹರಡಬೇಕು ಎಂಬ ನಿಯಮ ಉಂಟು. ಆದರೆ ಇಲ್ಲಿ ಯಾವ ನಿಯಮ ಕಾನೂನಿಗೆ ಬೆಲೆಯೇ ಇಲ್ಲ. ಇಲ್ಲಿರುವುದು ಅಂಧಾಕಾನೂನು ಖಾಸಗಿ ವಾಣಿಜ್ಯ ಬಂದರು ನಿರ್ಮಾಣದ ಕಮಂಗಿಗಳು ಶರಾವತಿ ನದಿಯ ಸಹಜ ಹರಿವಿನ ವ್ಯವಸ್ಥೆಯನ್ನೇ ಬುಡಮೇಲು ಮಾಡಿಬಿಟ್ಟಿದ್ದಾರೆ ಜೀವನದಿ ಶರಾವತಿಯ ಒಡಲನ್ನೇ ಬಸಿಯುತ್ತಿದ್ದಾರೆ. ಈ ಆಘಾತಕಾರಿ ದುರಂತವನ್ನು ಮೂಕಪ್ರೇಕ್ಷಕರಾಗಿ ನೋಡುವ ದೈನ್ಯ ಪರಿಸ್ಥಿತಿ ನಮ್ಮದಾಗಿದೆ.

ಕಳೆದ ವಾರ ಕಾಸರಕೋಡು ಟೊಂಕ ಕಡಲತೀರದಲ್ಲಿ ಅಂತರಾಷ್ಟ್ರೀಯ ಕರಾವಳಿ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದ್ದಾಗ ಆಲೀವ್ ರಿಡ್ಲೆ ಪ್ರಭೇದದ ಕಡಲಾಮೆಯ ಆಸ್ಥಿಪಂಜರ ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ಶುಕ್ರವಾರ ಬಂದರು ನಿರ್ಮಾಣ ಕಾಮಗಾರಿಯ ಸ್ಥಳದಲ್ಲೇ ಆಲೀವ್ ರಿಡ್ಲೆ ಜಾತಿಯ ಮತ್ತೊಂದು ಕಡಲಾಮೆಯ ಸಂಪೂರ್ಣ ಮೃತದೇಹ ಕೂಡಾ ಪತ್ತೆಯಾಯಿತು. ಮೀನುಗಾರರ ಕರೆ ಮೇರೆಗೆ ಸಂಬಂಧಪಟ್ಟ ಇಲಾಖೆ ಸ್ಥಳಕ್ಕೆ ಧಾವಿಸಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದರೂ ಇದುವರೆಗೂ ಕಡಲಾಮೆಗಳ ಸಾವಿಗೆ ನಿಖರ ಕಾರಣ ಕಂಡುಬಂದಿಲ್ಲ. ಕಡಲಾಮೆಗಳು ಇಲ್ಲಿ ಗೂಡು ಕಟ್ಟುವುದಿಲ್ಲ ಎಂದು ಸುಳ್ಳು ವರದಿ ಸೃಷ್ಟಿ ಮಾಡಿದವರು ಮುಖ ಸುಟ್ಟು ಕೊಂಡ ಬೆಕ್ಕಿನಂತೆ ಆಗಿದ್ದಾರೆ. ಮತ್ತೊಂದು ಸುಳ್ಳು ಸೃಷ್ಟಿಸುವ ಕುಹಕ ಯತ್ನ ಗಳು ಕಪ್ಪು ದೈತ್ಯರ ಮಹಾದಂಡನಾಯಕನ ಅಪ್ಪಣೆಯಂತೆ ನಡೆಯುತ್ತಿದೆ.

ಮೀನುಗಾರರ ಮನೆಬದುಕು ಸರ್ವನಾಶ ಮಾಡಲೊರಟಿರುವ ಅಮಾನವೀಯರಿಗೆ ಕಡಲಾಮೆಗಳು ಯಾವ ಲೆಕ್ಕ? ಜೀವವೈವಿಧ್ಯಗಳ ನೈಸರ್ಗಿಕ ಆವಾಸ ಸ್ಥಳಗಳನ್ನು ಧಂಸ್ವ ಮಾಡುವುದು ಇಲ್ಲವೇ ಮಾರ್ಪಾಡು ಮಾಡುವುದು ಪರಿಸರದ ಮೇಲೆ ಮಾನವ ಮಾಡುವ ಅತಿ ದೊಡ್ಡ ದೌರ್ಜನ್ಯ. ಈ ದೌರ್ಜನ್ಯ ಗಳ ಉದಾಹರಣೆಗಳು ಬೆನ್ನು ಬೆನ್ನಿಗೆ ಕಂಡುಬಂದಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಮಾನವರು ತಾವು ಪರಿಸರದ ಮೇಲೆ ಉಂಟುಮಾಡುತ್ತಿರುವ ಕೆಟ್ಟ ಪರಿಣಾಮಗಳನ್ನು ಕಡಿಮೆಗೊಳಿಸಲು ಮತ್ತು ತೊಡೆದು ಹಾಕಲು ಸಾಧ್ಯ ವಿದೆ. ಆದರೆ ಹೃದಯಹೀನ, ಕ್ರೌರ್ಯವನ್ನೇ ಬದುಕಿನ ಸಿದ್ದಾಂತ ಮಾಡಿಕೊಂಡಿರುವ ದಾನವರಿಗೆ ಇದೆಲ್ಲ ಅರ್ಥ ವಾಗುವುದು ಹೇಗೆ?

ಉಮಾಕಾಂತ ಖಾರ್ವಿ, ಕುಂದಾಪುರ

One thought on “ಕ್ಷಮಿಸಿ ಬಿಡು ತಾಯೇ ಶರಾವತಿ ನಾವು ಅಸಹಾಯಕರಮ್ಮ…

  1. ಕುರುಡು ಕಾಂಚಾಣ ವಿರುವ ಖಾಸಗೀ ಕಂಪನಿ ಮತ್ತೊಮ್ಮೆ ಪ್ರಕರಣವನ್ನು ತಿರುಚಿ ಹಾಕಲು ಮುಂದಾಗಿದೆ .

    ಮೊನ್ನೆ ಖಾಸಗಿ ಕಂಪನಿಯ ಸ್ಥಳದಲ್ಲಿ ಸಿಕ್ಕಿದ ಮೃತ ಆಮೆಯನ್ನು ಅರಣ್ಯ ಇಲಾಖೆ ತೆಗೆದುಕೊಂಡು ಹೋಗಿದ್ದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ.
    ಈಗ HPPL ಕಂಪೆನಿಯ ಮೂಲಗಳ ಮಾಹಿತಿಯ ಪ್ರಕಾರ ಸತ್ತ ಆಮೆಯನ್ನು ಸ್ಥಳೀಯ ನಿವಾಸಿಗಳೇ ಬೇರೆ ಸ್ಥಳದಿಂದ ತಂದು ಹಾಕಿದ್ದಾರೆ ಅಂತ ಶೊ ಕೇಸ್ ನೋಟಿಸ್ ಅನ್ನು ತನ್ನ ಸೆಕ್ಯೂರಿಟಿ ಗಾರ್ಡ್ ಗಳಿಗೆ ನೀಡಿದ್ದಾರೆ

Leave a Reply

Your email address will not be published. Required fields are marked *