ಕಾರಣಿಕ ನೆಲೆ: ಭಟ್ಕಳ ಶ್ರೀ ಕುಟುಮೇಶ್ವರ ಮತ್ತು ಶ್ರೀ ದುರ್ಗಾ ಪರಮೇಶ್ವರಿ ದೇಗುಲಗಳು
ಚರಿತ್ರೆಯ ಕಾಲಘಟ್ಟದಲ್ಲಿ ಸಂಭವಿಸಿದ ಪ್ರಮಾದಗಳು ನೇಪಥ್ಯಕ್ಕೆ ಸರಿದರೂ ಅದರ ಪ್ರಭಾವಗಳು ಗುಪ್ತಗಾಮಿನಿಯಾಗಿ ನಿರಂತರ ಪ್ರವಹಿಸುತ್ತಲೇ ಇರುತ್ತದೆ. ಅದು ನಿರ್ದಿಷ್ಟ ಪ್ರದೇಶದ ಅಭಿವೃದ್ಧಿಗೆ ತೊಡರುಗಾಲಿಕ್ಕುತ್ತಲೇ ತನ್ನ ಇರುವಿಕೆಯನ್ನು ದೃಡಪಡಿಸುತ್ತಲೇ ಸಾಗುತ್ತದೆ. ಚರಿತ್ರೆಯ ಕಾಲಘಟ್ಟದಲ್ಲಿ ಸಂಭವಿಸಿದ ಪ್ರಮಾದಗಳಿಗೆ ಗುರುವರ್ಯರ ಶ್ರೇಷ್ಠ ಮಾರ್ಗದರ್ಶನದಲ್ಲಿ ಭಕ್ತಿ ಮಾರ್ಗದ ದೈವಿಕ ಪರಿಹಾರ ಲಭಿಸಿದರೆ ಪರಿಸರ, ಊರು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತದೆ.
ಊರಿನ ಜನರಿಗೆ ಜೀವನ್ಮುಖಿ ಪಯಣದ ದೈವಸಂಕಲ್ಪ ಸಿದ್ದಿಯಾಗುತ್ತದೆ ಎಂಬುದಕ್ಕೆ ಶ್ರೇಷ್ಠ ದೃಷ್ಟಾಂತವಾಗಿ ಭಟ್ಕಳ ಬಂದರ ಮಾವಿನಕುರ್ವೆ ಯಲ್ಲಿ ಐತಿಹಾಸಿಕ ಭಕ್ತಿ ಸಂಕಲ್ಪದ ಅಭೂತಪೂರ್ವ ಸಾಕ್ಷಿಯಾಗಿ ತಲೆ ಎತ್ತಿ ನಿಂತಿರುವ ಶ್ರೀ ಕುಟುಮೇಶ್ವರ ಮತ್ತು ಶ್ರೀ ದುರ್ಗಾ ಪರಮೇಶ್ವರಿ ದೇಗುಲಗಳು ಕಾರಣಿಕ ನೆಲೆಯಾಗಿ ರೂಪಿತಗೊಂಡಿವೆ. ಈ ದೇಗುಲಗಳ ತಲಸ್ಪರ್ಶಿ ಮಾಹಿತಿಯಂತೆ ಈಗಿನ ದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿ ಹಿಂದೆ ಶಿವನು ಅರಮಲಿಂಗ ಎಂಬ ಹೆಸರಿನಿಂದ ಪೂಜಿಸಲ್ಪಟ್ಟರೆ, ಲೈಟ್ ಹೌಸ್ ಗುಡ್ಡದಲ್ಲಿ ಜಟ್ಟಿಗೇಶ್ವರ ದೇವರನ್ನು ಪೂಜಿಸಲಾಗುತ್ತಿತ್ತು. ಜೀರ್ಣೋದ್ಧಾರ ಕಾರ್ಯಗಳ ಬಳಿಕ ಅರಮಲಿಂಗ ದೇಗುಲ ಅಮರಲಿಂಗ ಎಂಬ ಹೆಸರಿನಿಂದ ನಾಮಾಂಕಿತವಾಯಿತು. ಈ ಸಮಯದಲ್ಲಿ ಬಂದರು ಮೀನುಗಾರಿಕೆ ಪ್ರದೇಶ ಬಡತನದಿಂದ ತುಂಬಿತ್ತು. ಅಭಿವೃದ್ಧಿ ಕುಂಠಿತವಾಗಿತ್ತು. ಊರಿನ ಹತ್ತು ಸಮಸ್ತರು ಈ ಬಗ್ಗೆ ಉಡುಪಿ ಶಿರ್ವದ ಶಿಲ್ಪಿ ಶ್ರೀ ಅನಂತಯ್ಯ ಆಚಾರ್ಯ ಮತ್ತು ಮಂಗಳೂರಿನ ಅಷ್ಟಮಂಗಲ ವಿದ್ವಾನ್ ಗಳಾದ ಶ್ರೀ ನಂದಕೃಷ್ಟರ ಬಳಿ ವಿಚಾರ ವಿಮರ್ಶೆ ನಡೆಸಿದಾಗ ಅಮರಲಿಂಗ ದೇಗುಲದಲ್ಲಿ ದುರ್ಗಾ ಪರಮೇಶ್ವರಿಯನ್ನು ಮತ್ತು ಮೇಲೆ ಲೈಟ್ ಹೌಸ್ ಗುಡ್ಡದಲ್ಲಿ ಈಶ್ವರ ಲಿಂಗವನ್ನು ಪ್ರತಿಷ್ಠಾಪನೆ ಮಾಡಬೇಕೆಂಬ ಸೂಚನೆ ಅಷ್ಟಮಂಗಲ ಪ್ರಶ್ನಾಮಾರ್ಗದಲ್ಲಿ ತೋರಿಬಂತು. ಅದರೊಂದಿಗೆ ಕಾಲಗತಿಯಲ್ಲಿ ನೇಪಥ್ಯಕ್ಕೆ ಸರಿದುಹೋದ ಲೈಟ್ ಹೌಸ್ ಕೆಳಗಡೆ ಇರುವ ಗುಹೆಯಲ್ಲಿ ವಾಸಿಸುತ್ತಿದ್ದ ಋಷಿಯ ಕಥೆ ಮತ್ತು ಊರಿಗೆ ಅವನ ಶಾಪದ ವಿಷಯವೂ ಪ್ರಶ್ನಾಮಾರ್ಗದಲ್ಲಿ ಗೋಚರವಾಯಿತು.
ಅನಾದಿಕಾಲದಲ್ಲಿ ಲೈಟ್ ಹೌಸ್ ಕೆಳಗಡೆ ಇರುವ ಕಡಿದಾದ ಪ್ರದೇಶದ ಗುಹೆಯೊಳಗೆ ಋಷಿಯೊಬ್ಬರು ವಾಸ ಮಾಡುತ್ತಿದ್ದರು. ಅವರಿಗೆ ಜನರು ಆನಾದಾರ ತೋರಿದ ಪರಿಣಾಮವಾಗಿ ಆತ ಪೋಷಣೆಯಿಲ್ಲದೇ ಬಹಳ ನೋವಿನಿಂದ ಸತ್ತನೆಂದು, ಅವನ ನೋವು ಅನಾದಿಕಾಲದಿಂದಲೂ ಈ ಪ್ರದೇಶಕ್ಕೆ ಶಾಪವಾಗಿ ಪರಿಣಮಿಸಿದೆ ಎಂಬ ವಿಚಾರವೂ ಬೆಳಕಿಗೆ ಬಂತು. ಊರಿನ ಅಭಿವೃದ್ಧಿ ಮತ್ತು ಋಷಿಯ ಶಾಪ ವಿಮೋಚನೆಗಾಗಿ ಅಮರಲಿಂಗ ಸಾನ್ನಿಧ್ಯದಲ್ಲಿ ದುರ್ಗಾ ಪರಮೇಶ್ವರಿಯನ್ನು ಮತ್ತು ಮೇಲೆ ಲೈಟ್ ಹೌಸ್ ಪ್ರದೇಶದಲ್ಲಿ ಶಿವನನ್ನು ಕುಟುಮೇಶ್ವರನ ರೂಪದಲ್ಲಿ ಪ್ರತಿಷ್ಟಾಪನೆ ಮಾಡಬೇಕೆಂದು ಎಲ್ಲರ ಸಹಭಾಗಿತ್ವದಲ್ಲಿ ಊರಿನವರು ಸಂಕಲ್ಪ ತೊಟ್ಟು ಕಾರ್ಯ ಪ್ರವೃತರಾದರು.
ಊರಿನವರ ಈ ಸಂಕಲ್ಪಕ್ಕೆ ಪರಮಪೂಜ್ಯ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಯವರ ಪರಮಾನುಗ್ರಹವೂ ಪ್ರಾಪ್ತಿ ಯಾಯಿತು. ಕುಟುಮೇಶ್ವರ ಶಿವನ ಲಿಂಗವನ್ನು ಬಂಟಕಲ್ಲು ಶಿಲ್ಪಿಗಳಾದ ಶ್ರೀ ಅನಂತಯ್ಯ ಆಚಾರ್ಯ ರವರು ನಿರ್ಮಿಸಿಕೊಟ್ಟರು. ದುರ್ಗಾ ಪರಮೇಶ್ವರಿ ಮೂರ್ತಿ ಯನ್ನು ಕಾರ್ಕಳದ ಶಿಲ್ಪಿ ಶ್ಯಾಮ್ ರಾಂ ಆಚಾರ್ಯರು ನಿರ್ಮಿಸಿ ಕೊಟ್ಟರು. ದುರ್ಗಾ ಪರಮೇಶ್ವರಿ ಮೂರ್ತಿ ವಿಚಾರವಾಗಿ ದೇವಸ್ಥಾನ ಸಮಿತಿಯವರು ಕಾರ್ಕಳಕ್ಕೆ ಹೋದಾಗ ಅಲ್ಲಿ ಶ್ಯಾಮ್ ರಾವ್ ಆಚಾರ್ಯರು ನಿರ್ಮಿಸಿಟ್ಟ ಸಿದ್ಧ ಮೂರ್ತಿ ಇತ್ತು. ಈ ಮೂರ್ತಿಯ ಚಿತ್ರ ತೆಗೆದು ಶ್ರೀ ಶೃಂಗೇರಿ ಗುರುಗಳ ಸನ್ನಿಧಾನದಲ್ಲಿ ನಿವೇದಿಸಿಕೊಂಡಾಗ ಈ ಮೂರ್ತಿಯಲ್ಲಿ ಉಗ್ರ ರೂಪವಿದೆ. ಅದನ್ನು ಸೌಮ್ಯ ರೂಪದಲ್ಲಿ ಪ್ರತಿಷ್ಟಾಪನೆ ಮಾಡಬೇಕಾದರೆ ಚಂದ್ರನನ್ನು ದೇವಿ ಮೂರ್ತಿಯ ಶಿರಭಾಗದಲ್ಲಿ ಬಿಡಿಸಬೇಕೆಂದು ಸೂಚಿಸಿ ಅದಕ್ಕೆ ಸೂಕ್ತವಾದ ಶ್ಲೋಕವೊಂದನ್ನು ಪಠಿಸಿ ನೀಡಿದರು.
ಪರಮಪೂಜ್ಯ ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಯವರ ದಿವ್ಯ ಸೂಚನೆಯಂತೆ ದುರ್ಗಾ ಪರಮೇಶ್ವರಿ ಅಮ್ಮನವರ ಶಿರಭಾಗದಲ್ಲಿ ಚಂದ್ರನನ್ನು ಬಿಡಿಸಲಾಯಿತು. ಈ ಪ್ರದೇಶದ ಕೊಂಕಣಿ ಖಾರ್ವಿ ಸಮಾಜ, ಮೋಗೇರ ಸಮಾಜ ಮತ್ತು ಹರಿಕಂತ್ರ ಸಮಾಜದ ಸಹಭಾಗಿತ್ವದಲ್ಲಿ ಭಕ್ತಜನರ ಸಹಯೋಗದಿಂದ 2001 ರಲ್ಲಿ ಈ ಭವ್ಯ ದಿವ್ಯ ದೇಗುಲಗಳು ಲೋಕಾರ್ಪಣೆಗೊಂಡವು. ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಂಡ ಈ ದೇಗುಲಗಳ ಧಾರ್ಮಿಕ ಕಾರ್ಯಕ್ರಮ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿತು. ದೇಗುಲ ಲೋಕಾರ್ಪಣೆಯಾದ ಪವಿತ್ರ ದಿನದಿಂದ ಈ ಊರು ಋಷಿಯ ಶಾಪದಿಂದ ಸಂಪೂರ್ಣ ಮುಕ್ತಿಯಾಯಿತು ಎಂದು ಪರಮಪೂಜ್ಯ ಶ್ರೀ ಶೃಂಗೇರಿ ಗುರುಗಳು ಸಮಸ್ತ ಜನರಿಗೆ ಆಶೀರ್ವಚನ ನೀಡಿ ಶುಭ ಹಾರೈಸಿದರು. ದೇಗುಲದ ಅಭಿವೃದ್ಧಿ ಕಾರ್ಯಗಳಲ್ಲಿ ಮಾರ್ಗ ದರ್ಶಕರಾಗಿ ಕುಂದಾಪುರ ಕುಂದೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ H.ನರಸಿಂಹ ಮೂರ್ತಿ ಯವರು ಸಹಕಾರ ನೀಡಿದ್ದರು.
ಮಾವಿನಕುರ್ವೆ, ಬೆಳ್ನಿ, ತಲಗೋಡು ಪ್ರದೇಶಗಳ ಸಂಧಿಸ್ಥಾನದ ಸಿರಿ ಭೂವಲಯದಲ್ಲಿ ನಿರ್ಮಾಣಗೊಂಡಿರುವ ಶ್ರೀ ಕುಟುಮೇಶ್ವರ ಮತ್ತು ದುರ್ಗಾ ಪರಮೇಶ್ವರಿ ದೇಗುಲಗಳು ಅಭೂತಪೂರ್ವ ಆರಾಧನಾ ಶ್ರದ್ದಾ ಕೇಂದ್ರವಾಗಿದೆ. ಮೂಡಣದಿ ಸುತ್ತ ಕಂಗೊಳಿಸುವ ಹರಿದ್ವರ್ಣಕ್ಕೆ ದೂರದ ನೀಲವರ್ಣದ ಸಹ್ಯಾದ್ರಿಯ ಹಿನ್ನೆಲೆ. ಎದುರಲ್ಲಿ ನದಿಅಳಿವೆಗಳ ಸಂಗಮ. ಪಶ್ಚಿಮದಲ್ಲಿ ಶರಧಿಯ ನೀಲಿಮೆಯ ಹರವಿನ ಸ್ಧಿಗ್ದ ಸೌಂದರ್ಯ. ಇಂತಹ ನಯನ ಮನೋಹರ ಸ್ವರ್ಗ ಸದೃಸ್ಯ ತಾಣ ಬೇರೆಲ್ಲೂ ಕಾಣಸಿಗದು. ಶ್ರೀ ಕುಟುಮೇಶ್ವರ ಮತ್ತು ದುರ್ಗಾ ಪರಮೇಶ್ವರಿಯ ಪರಮಪುಣ್ಯ ದೇಗುಲಗಳ ಅಭೂತಪೂರ್ವ ಸಮಗ್ರ ಮಾಹಿತಿಯನ್ನು ನಮಗೆ ಬಹಳ ಸೌಜನ್ಯ ಪೂರಿತವಾಗಿ ಒದಗಿಸಿಕೊಟ್ಟು ಸಹಕರಿಸಿದ ಈ ಎರಡೂ ದೇಗುಲಗಳ ಅಭಿವೃದ್ಧಿ ಕಾರ್ಯಗಳಲ್ಲಿ ಮಂಚೂಣಿಯಲ್ಲಿ ನಿಂತು ಸೇವಾಕೈಂಕರ್ಯ ಸಲ್ಲಿಸಿದ್ದ ಕೊಂಕಣಿ ಖಾರ್ವಿ ಸಮಾಜದ ಮುಖಂಡ ಶ್ರೀ ವಸಂತ ಖಾರ್ವಿಯವರಿಗೆ ತುಂಬು ಹೃದಯದ ಧನ್ಯವಾದಗಳು. ಹಾಗೆಯೇ ತಮ್ಮ ಎಲ್ಲಾ ಕೆಲಸಗಳ ನಡುವೆ ನಮ್ಮೊಡನೆ ಓಡಾಡಿ ಮಾಹಿತಿ ನೀಡಿದ ಶ್ರೀ ಈಶ್ವರ ಮಂಜುನಾಥ ಖಾರ್ವಿ ಯವರಿಗೂ ಧನ್ಯವಾದಗಳು ಮತ್ತು ಲೈಟ್ ಹೌಸ್ ಕೆಳಗಡೆ ಇರುವ ಋಷಿಯ ಗುಹೆ ಮತ್ತು ಜಟ್ಟಿಗೇಶ್ವರ ಸನ್ನಿಧಿಯ ವಿಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿ ಪ್ರಚುರಗೊಳಿಸಿದ ಶ್ರೀ ಈಶ್ವರ ನಾಯ್ಕ ರಿಗೂ ಧನ್ಯವಾದಗಳು. ಶ್ರೀ ಯುತರು ಬಂದರಿನಲ್ಲಿ ಸೈಬರ್ ಸೆಂಟರ್ ನಡೆಸುತ್ತಿದ್ದು ನಮಗೆ ಋಷಿ ಗುಹೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಶ್ರೀ ಕುಟುಮೇಶ್ವರ ದೇಗುಲದಲ್ಲಿ ವರ್ಷಂಪ್ರತಿ ಶಿವರಾತ್ರಿ ಉತ್ಸವ ಮತ್ತು ವರ್ಧಂತಿ ಉತ್ಸವ ವೈಭವದಿಂದ ನಡೆಯುತ್ತದೆ. ಹಾಗೇಯೇ ಶ್ರೀ ದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿ ವಾರ್ಷಿಕ ಪ್ರತಿಷ್ಟಾ ವರ್ಧಂತಿ ಮತ್ತು ನವರಾತ್ರಿ ಉತ್ಸವ ಬಹಳ ವಿಜೃಂಭಣೆಯಿಂದ ನೆರವೇರುತ್ತದೆ. ಪ್ರಸ್ತುತ ಒಂಬತ್ತು ದಿನಗಳ ನವರಾತ್ರಿ ಉತ್ಸವ ವೈಭವದಿಂದ ಸಂಪನ್ನಗೊಳ್ಳುತ್ತಿದೆ. ಭಕ್ತ ಮಹಾಶಯರು ಸಾವಿರಾರು ಸಂಖ್ಯೆಯಲ್ಲಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಪುನೀತರಾಗುತ್ತಿದ್ದಾರೆ.ಸರ್ವವರದೆಯಾಗಿರುವ ಶ್ರೀ ದುರ್ಗಾ ಪರಮೇಶ್ವರಿ ಮತ್ತು ಮೋಕ್ಷದಾಯಕ ಕುಟುಮೇಶ್ವರನನ್ನು ಭಕ್ತಿ ಯಿಂದ ಆರಾಧಿಸಿ ನಾವೆಲ್ಲರೂ ಕೃತಾರ್ಥರಾಗೋಣ.
ನವರಾತ್ರಿ ಪರ್ವಕಾಲದ ಈ ಶುಭ ಸಂದರ್ಭದಲ್ಲಿ ಸರ್ವರಿಗೂ ಖಾರ್ವಿ ಆನ್ಲೈನ್ ವಿಜಯದಶಮಿಯ ಶುಭ ಹಾರೈಸುತ್ತದೆ.
ಉಮಾಕಾಂತ ಖಾರ್ವಿ
ಕುಂದಾಪುರ