ಸೋಮಣ್ಣ ಮೊನ್ನೆ ಫೋನ್ ಮಾಡಿ, “ನಾನು ಕಾಂಪಿಟೇಶನ್ ಗೆ ಶಿವಮೊಗ್ಗಕ್ಕೆ ಹೋಗುತ್ತಿದ್ದೇನೆ” ಅಂದ್ರು. ಆ ಮುಮೆಂಟಿನಲ್ಲಿ, “ಆಲ್ ದಿ ಬೆಷ್ಟ್ ಸೋಮಣ್ಣ, ಸೋಲಿರಲಿ ಗೆಲುವಿರಲಿ, ಆದರೆ ಪ್ರಯತ್ನ ಮಾತ್ರ ಖಂಡಿತಾ ನಿಲ್ಲದಿರಲಿ, ಹೋಗಿ ಬನ್ನಿ…ಏನೇ ಆದರೂ ನೀವು ನಮ್ಮವರೇ…” ಅಂತ ಬಾಯಿ ಮಾತಿನಲ್ಲಷ್ಟೇ ಹೇಳೋಕೆ ಸಾಧ್ಯವಾಯಿತು. ಗೆದ್ದ ಮೇಲೂ ಪುನಃ ಫೋನ್ ಮಾಡಿ ಫಲಿತಾಂಶ ತಿಳಿಸಿದರು.
ಶಿವಮೊಗ್ಗದ ನಿನ್ನೆಯ ರಾಜ್ಯಮಟ್ಟದ ಯುವ ದಸರಾ ಸ್ಪರ್ಧೆಯಲ್ಲಿ ಸೋಮಣ್ಣ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಸೆಕೆಂಡ್ ಪ್ರೈಸ್ ಗೆದ್ದುಕೊಂಡರು. ಏಳೆಂಟು ತಿಂಗಳಿಂದೆ ಕುದಿಯುವ ಬಿಸಿ ಎಣ್ಣೆ ಸೋಮಣ್ಣನ ಮೈ ಮೇಲೆಲ್ಲಾ ಅಚಾನಕ್ ಆಗಿ ಬಿದ್ದು, ಫೋಟೋದಲ್ಲಿ ತೋರಿಸಿದಂತೆ ಆಗಿತ್ತು. ಆ ಸಮಯದಲ್ಲಿ ಅವರು ಮುಂಬರುವ ತಿಂಗಳಿನಲ್ಲಿ ನಡೆಯಲಿದ್ದ ಮಿ.ಇಂಡಿಯಾ ಸ್ಪರ್ಧೆಗೆ ತಯಾರಿಯಲ್ಲಿದ್ದರು. ಅನಿವಾರ್ಯವಾಗಿ ಗಾಯಗಳು ಮಾಸುವವರೆಗೆ ಕೆಲವು ತಿಂಗಳಗಳ ಕಾಲ ಅಭ್ಯಾಸದಿಂದ ದೂರವುಳಿಯಬೇಕಾಯ್ತು. ಸಾಧಾರಣ ಮನುಷ್ಯರಾದರೆ ವರ್ಷಗಳ ಕಾಲ ಬೆಡ್ ರೆಸ್ಟ್ ತಗೊಳ್ಳುತ್ತಿದ್ದರೇನೋ ಅಥವಾ ಗಾಯ ನೋಡಿದ ಶಾಕ್ ನಿಂದಾಗಿ ಸತ್ತೇ ಹೋಗುತ್ತಿದ್ದರೇನೋ. ಆದರೆ ಸೋಮಣ್ಣನದು ಕಾಂಕ್ರೀಟಿನ ಹಾಗೆ ಬಾಡಿ. ಸ್ಟೀಲ್ ಕಂಬಿ ಹಾಗೆ ಮನಸ್ಸು. ಮತ್ತೆ ಫಿನಿಕ್ಸ್ ಹಕ್ಕಿಯಂತೆ ಚೇತರಿಸಿಕೊಂಡ ಸೋಮಣ್ಣ ಹಗಲೂ ರಾತ್ರಿ ಗಂಟೆಗಟ್ಟಲೆ ಕಾಲ ಜಿಮ್ಮಿನಲ್ಲಿ ಕಸರತ್ತು ಮಾಡಿ, ರಕ್ತವನ್ನ ಬೆವರಾಗಿಸಿ ಬಾಡಿ ಬೆಳೆಸಿ ತಯಾರಿಯಾದರು.
ಅದರ ಆರಂಭಿಕ ಫಲಿತಾಂಶ ನಿನ್ನೆಯ ಗೆಲುವಿನ ರೂಪದಲ್ಲಿ ಬಂದಿದೆ ಅಷ್ಟೇ. ಆದರೆ ಸೋಮಣ್ಣ ಸಾಗಬೇಕಾದ ದೂರ ಇನ್ನೂ ಇದೆ. ಅವರ ಮಿಸ್ಟರ್ ಇಂಡಿಯಾ ಕನಸು ನನಸಾಗಬೇಕಿದೆ. ಅದು ಕೇವಲ ಅವರೊಬ್ಬರ ಕನಸು ಮಾತ್ರವಲ್ಲ. ನಮ್ಮ ಊರು, ಗ್ರಾಮ, ರಾಜ್ಯ, ದೇಶಕ್ಕೇ ಹೆಮ್ಮೆ ತರಬಲ್ಲ ಸಂಗತಿ. ಕಡುಬಡತನದ ಹಿನ್ನೆಲೆಯಲ್ಲಿ ಬೆಳೆದು, ಬಾಡಿಗೆ ಮನೆಯಲ್ಲಿ ಹೆಂಡತಿ ಇಬ್ಬರು ಮಕ್ಕಳ ಜೊತೆ ವಾಸವಾಗಿರುವ ಸೋಮಣ್ಣನದ್ದು ಮೀನು ಹಿಡಿಯುವ ಕಸುಬು. ಅವರ ತರಬೇತಿಗೆ, ಸ್ಪರ್ಧೆಗೆ ಹೋಗೋ ಬರೋ ಖರ್ಚು, ಮನೆಯ ನಿರ್ವಹಣೆ, ಚಿಕಿತ್ಸಾ ವೆಚ್ಚ, ಮಕ್ಕಳ ವಿದ್ಯಾಭ್ಯಾಸ ಎಲ್ಲವನ್ನೂ ಒಟ್ಟಿಗೆ ನಿರ್ವಹಿಸೋದು ಸದ್ಯಕ್ಕಂತೂ ತುಂಬಾನೇ ಕಷ್ಟ. ಹಾಗಾಗಿ ನಾವು ನಮ್ಮ ಕೈಲಾದಷ್ಟು, ಜೊತೆಗೆ ನಮ್ಮ ಪರಿಚಿತರ, ಜನಪ್ರತಿನಿಧಿಗಳ ಮೂಲಕ ಅವರ ಮುಂದಿನ ಸ್ಪರ್ಧಾ ತಯಾರಿಗೆ ಸಜ್ಜಾಗಲು ತನು-ಮನ-ಧನ ಸಹಾಯ ಮಾಡೋಣ. ಬಿಡುವಿದ್ದರೆ ಅವರಿಗೆ ಫೋನ್ ಹಾಕಿ ಮಾತಾಡಿ, ನಿಮ್ಮ ಒಂದು ಶುಭಾಶಯ ತಿಳಿಸಿ. ಹಾಗೂ ಏನಾದರೂ ಕೊಡುವ ಶಕ್ತಿಯಿದ್ದರೆ ಗೂಗಲ್ ಪೇ, ಫೋನ್ ಪೇ ಮಾಡಿ
#ಸೋಮಶೇಖರ – 6363194548
ನಿತೇಶ್ ಖಾರ್ವಿ ಹೊಸಪೇಟೆ