ಸಾಗರದಲ್ಲಿ ಬಲಶಾಲಿ ಯಾರೆಂದುಕೊಂಡಿದ್ದೀರಿ

ಸಮುದ್ರದ ಹೆಸರೆತ್ತಿದರೆ ಮೊದಲಿಗೆ ಕಣ್ಮುಂದೆ ಬರುವ ವಿಚಾರವೆಂದರೆ ಜಲಚರಗಳು. ಅದರಲ್ಲೂ ಅತ್ಯಂತ ಭಯಾನಕ ಮೀನುಗಳು. ಮೃತ ಸಮುದ್ರವನ್ನು ಹೊರತುಪಡಿಸಿ ಬೇರೆಲ್ಲ ಸಮುದ್ರದ ಮುಖ್ಯ ಆಕರ್ಷಣೆಯೇ ಮೀನುಗಳು. ಮೃತ ಸಮುದ್ರದಲ್ಲಿ ಒಂದೇ ಒಂದು ಶಿಲೀಂದ್ರವೂ ಬದುಕಲಾರದು, ಜಲಚರಗಳಂತೂ ದೂರದ ಮಾತು. ಆದ್ದರಿಂದಲೇ ಮೃತ ಸಮುದ್ರ ಎಂಬ ಹೆಸರನ್ನು ಪಡೆದಿದೆ. ಉಳಿದ ಎಲ್ಲಾ ಸಮುದ್ರಗಳು ವಿಭಿನ್ನ ಮತ್ತು ಜಲಚರಗಳ ಆಗರವಾಗಿವೆ. ಸಾಗರಗಳಲ್ಲಿ ದೊಡ್ಡ ಗಾತ್ರವನ್ನು ಹೊಂದಿರುವ ತಿಮಿಂಗಿಲಕ್ಕೆ ಅಗ್ರಸ್ಥಾನವಿದ್ದರೂ ಇದು ಮೀನಲ್ಲ; ಇದೊಂದು ಸಸ್ತನಿ. ತನ್ನ ಶಕ್ತಿ ಸಾಮರ್ಥ್ಯ ಮತ್ತು ದೇಹದಾಢ್ಯತೆಯಿಂದ, ಮೀನುಗಳ ಪ್ರಪಂಚದಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲಬಲ್ಲ ಮೀನೆಂದರೆ ಶಾರ್ಕ್. ಹರಿತವಾದ ಮತ್ತು ಅತ್ಯಂತ ಬಲಶಾಲಿಯಾದ 50 ಹಲ್ಲುಗಳನ್ನು ನೋಡಿದಾಗ ಶಾರ್ಕ್ ಎಂತಹ ಅಪಾಯಕಾರಿ ಮೀನು ಎಂಬುದು ನೋಟ ಮಾತ್ರದಿಂದಲೇ ಅರಿಯಬಹುದು. ಇಷ್ಟೊಂದು ಭಯಾನಕ, ಬಲಾಢ್ಯ ಮೀನಿನ ದೇಹದ ಮೂಳೆಗಳು ಮಾತ್ರ ಮೃದು ಮೂಳೆಯೆಂದರೆ ಏಕಾಏಕಿ ಯಾರಿಗೂ ನಂಬಿಕೆ ಬಾರದು. ಆದರೂ ಇದು ಸತ್ಯ. ಹಾಲಿವುಡ್ ಸಿನೆಮಾ ನಿರ್ದೇಶಕರಿಗೆ, ಚಿತ್ರ ನಿರ್ದೇಶನಕ್ಕೆ ಹೇಳಿ ಮಾಡಿಸಿದ ಜೀವಿ ಎಂದರೆ ಅತಿಶಯೋಕ್ತಿಯಾಗಲಾರದು. ಶಾರ್ಕ್ ಒಂದು ನರಭಕ್ಷಕ ಜೀವಿ. ಆದ್ದರಿಂದಲೇ ಶಾರ್ಕ್‌ನ್ನು ಕಂಡ ಕೂಡಲೆ ಸಮುದ್ರಯಾನ ಮಾಡುವವರ ಎದೆಯೊಮ್ಮೆ ಬಿರಿದು ಹೋಗುತ್ತದೆ; ನಿಂತಲ್ಲೇ ಕುಸಿಯುತ್ತಾರೆ. ಶಾರ್ಕ್‌ಗೆ ಸಂಬಂಧಿತ ಸಿನೆಮಾವೊಂದರಲ್ಲಿ ಹಾರಾಡುವ ವಿಮಾನವನ್ನು ಶಾರ್ಕ್ ಕಬಳಿಸುವ ದೃಶ್ಯವನ್ನು ನೋಡಿರಬಹುದು. ಇದು ಶಾರ್ಕ್ ನ್ನು ಅತಿ ರಂಜಿಸುವ ಸಲುವಾಗಿ ಮಾಡಿದ ದೃಶ್ಯಗಳಷ್ಟೆ. ಇಂತಹ ಸಿನೆಮಾ ನೋಡಿ, ಕನಸಲ್ಲೂ ಬೆಚ್ಚಿ ಬೀಳುವವರೂ ಇದ್ದಾರೆ. ಆದರೆ ವಿಮಾನ ಹಾರಾಡುವಷ್ಟು ಎತ್ತರಕ್ಕೆ ಇದಕ್ಕೆ ಹಾರಲಾಗದೆಂಬುದು ಶುದ್ಧ ಚಿನ್ನದಷ್ಟು ಸತ್ಯ. ದೊಡ್ಡ ದೊಡ್ಡ ಹಡಗನ್ನು ಮುಳುಗಿಸುವಷ್ಟೂ ಸಾಮರ್ಥ್ಯವೂ ಇಲ್ಲ. ಆದರೂ ಶಾರ್ಕ್‌ನ್ನು ನಿರ್ಲಕ್ಷಿಸುವಂತಿಲ್ಲ. ಅತ್ಯಂತ ವೇಗ ಮತ್ತು ನಿಖರವಾಗಿ ಬೇಟೆಯಾಡಬಲ್ಲ ಶಕ್ತಿ ಶಾರ್ಕ್‌ಗಳಿಗಿದೆ. ಕಿ.ಮೀ.ಗಟ್ಟರೆ ದೂರದಿಂದಲೇ ವಾಸನೆಯನ್ನು ಗ್ರಹಿಸಿ ಆಕ್ರಮಣ ಮಾಡಬಲ್ಲ ಸೂಕ್ಷ್ಮ ಗ್ರಹಿಕಾ ಶಕ್ತಿ ಇದಕ್ಕಿದೆ‌. ಒಮ್ಮೆ ಆಕ್ರಮಣಕ್ಕೆ ಇಳಿದರೆ ಸೋಲಬಾರದೆಂಬ ದಿಟ್ಟತನವಿದೆ. ಅದಕ್ಕಿಂತ ಮಿಗಿಲಾಗಿ ಹೋರಾಟ ಮಾಡಲು ಅನುಕೂಲವಾಗುವಂತಹ ದೇಹವಿದೆ; ದೇಹ ಬಲವಿದೆ.

ನಮ್ಮ ಕರ್ನಾಟಕದಲ್ಲಿ ತಾಟೆ, ಚಾಟೆ, ಬಲ್ಯೆರ್ ಎಂಬೆಲ್ಲ ಹೆಸರುಗಳಿಂದ ಕರೆಸಿಕೊಳ್ಳುವ ಶಾರ್ಕ್‌ನ ವೈಜ್ಞಾನಿಕ ಹೆಸರು ಸೆಲಾಕಿಮೋರ್ಪ. ಪಟ್ಟೆ ಶಾರ್ಕ್, ಸುತ್ತಿಗೆ ತಲೆಯ ಶಾರ್ಕ್, ವೇಲ್ ಶಾರ್ಕ್, ಬಾಸ್ಕಿಂಗ್ ಶಾರ್ಕ್, ಬುಲ್ ಶಾರ್ಕ್, ಟೈಗರ್ ಶಾರ್ಕ್, ಬಿಳಿ‌ ಶಾರ್ಕ್ ಸೇರಿದಂತೆ ಜಗತ್ತಿನಲ್ಲಿ 450 ಕ್ಕೂ ಹೆಚ್ಚು ಪ್ರಭೇದಗಳ ಶಾರ್ಕ್‌ಗಳಿವೆ. ಸಾಮಾನ್ಯವಾಗಿ ಎಲ್ಲಾ ಪ್ರಭೇದದ ಶಾರ್ಕ್‌ಗಳೂ ಆಕ್ರಮಣಕಾರಿ ಗುಣವನ್ನು ಹೊಂದಿವೆ. ಈ ಗುಣದಿಂದಲೇ ಶಾರ್ಕ್‌ ಮೀನು ಬೇಟೆಗಾರರಿಗೆ ಸುಲಭವಾಗಿ ಸಿಗುವಂತಾಗಿದೆ. ಮೀನುಗಾರರು ಎರೆಯನ್ನು ಚುಚ್ಚಿದ ಗಾಳವನ್ನು ನೀರಿಗೆ ಎಸೆದರೆ ಸಾಕು, ಅತ್ಯಂತ ವೇಗವಾಗಿ ಬಂದು, ಗಾಳದ ಮೀನನ್ನು ಸೆಳೆದು ಕೊಂಡು ಹೋಗಲು ಯತ್ನಿಸುತ್ತದೆ. ಈ ರೀತಿಯ ಆಕ್ರಮಣಕಾರಿ ಗುಣದಿಂದಲೇ ಅದು ಗಾಳಕ್ಕೆ ಸಿಲುಕಿಕೊಳ್ಳುತ್ತದೆ. ನಾಲ್ಕು ದಶಕಗಳ ಹಿಂದೆ ನಮ್ಮ ಕರಾವಳಿ ಭಾಗದಲ್ಲಿ ಮನುಷ್ಯರಿಗಿಂತಲೂ ದೊಡ್ಡ ಗಾತ್ರದ ಸಾವಿರಾರು ಶಾರ್ಕ್ ಗಳನ್ನು ರಂಪಣಿಯ ಗಾಳದಿಂದಲೇ ಹಿಡಿಯುತ್ತಿದ್ದರು. ಈಗ ಅಷ್ಟು ದೊಡ್ಡ ಗಾತ್ರದ ಶಾರ್ಕ್‌ಗಳು ಹೇಳಹೆಸರಿಲ್ಲದೆ ಕಣ್ಮರೆಯಾಗಿವೆ. ಕೇವಲ ಹತ್ತು ಕಿ.ಮೀ. ಅಂತರದೊಳಗೆ ಕಂಡು ಬರುತ್ತಿದ್ದ ಶಾರ್ಕ್‌ಗಳು ನೂರಾರು ಕಿ.ಮೀ.ದೂರ ಹೋದರೂ ಕಾಣ ಸಿಗುತ್ತಿಲ್ಲ.. ಈಗ ಸಣ್ಣ ಗಾತ್ರ ಶಾರ್ಕ್‌ಗಳು ಮಾತ್ರ ಸಿಗುತ್ತದೆ. ಅತ್ಯಂತ ಅಪಾಯಕಾರಿ ಶಾರ್ಕ್ ಮೀನು ಸಮುದ್ರದಲ್ಲಿ ಇಲ್ಲದಿದ್ದರೆ ಉತ್ತಮ ಎಂದು ನಿಮ್ಮ ಮನಸ್ಸಿಗೆ ಬರಬಹುದು. ಆದರೆ ಆಳ ಸಾಗರದಲ್ಲಿನ ಅಪಾರ ಪ್ರಮಾಣದ ಬಂಗಡೆ, ಬೂತಾಯಿ ಮೀನುಗಳು ದಡಕ್ಕೆ ಬರಲು ಶಾರ್ಕ್‌ಗಳ ಪಾತ್ರ ಅಲ್ಲಗೆಳೆಯುವಂತಿಲ್ಲ. ಜೈವಿಕ ಪರಿಸರ ಸರಪಳಿಯಲ್ಲಿ ಇವುಗಳ ಪಾತ್ರ ನಿರ್ಣಾಯಕವೂ ಹೌದು.

ಶಾರ್ಕ್‌ನ ದೇಹದ ಚರ್ಮವು ಗಡಸಾಗಿದ್ದು, ರಬ್ಬರ್ ಕೈಗಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ತಲೆಯ ಅಕ್ಕಪಕ್ಕದಲ್ಲಿ ಎರಡು ಕಿವಿರುಗಳಿದ್ದು, ಇದರಲ್ಲಿ ಐದೈದು ಸೀಳುಗಳಿವೆ. ಆದರೆ ಉಳಿದ ಮೀನುಗಳಂತೆ ಈ ಕಿವಿರುಗಳನ್ನು ತೆರೆಯಾಗುವುದಿಲ್ಲ. ಶಾರ್ಕ್‌ನ ದೇಹದಲ್ಲಿನ ಯೂರಿಯಾ ಅಂಶ ದೇಹದಿಂದ ಹೊರ ಹೋಗದ ಕಾರಣ ಅದರ‌ ಮಾಂಸ ಕೊಂಚ ಮಟ್ಟಿಗೆ ಆಮ್ಲೀಯ ರುಚಿ ಹೊಂದಿರುತ್ತದೆ. ಆದ್ದರಿಂದ ಶಾರ್ಕ್‌ನ ಮಾಂಸವನ್ನು ವಿಪರೀತ ತಿನ್ನುವವರು ಸ್ವಲ್ಪ ಯೋಚಿಸಬೇಕು. ಮಾಂಸವನ್ನು ಅರ್ಧ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಇಡುವುದರಿಂದ ಯೂರಿಯಾ ಪ್ರಮಾಣವನ್ನು ಕಡಿಮೆ ಮಾಡಬಹುದು. ಶಾರ್ಕ್‌ನ ಲಿವರ್‌ಗೆ ತುಂಬಾ ಬೇಡಿಕೆ; ಕಾರಣ ಅದರ ರುಚಿ. ಹಿಂದೆಲ್ಲ ದೈತ್ಯ ಗಾತ್ರದ ಶಾರ್ಕ್ ಗಳನ್ನು ಮೀನುಗಾರರು ಹಿಡಿದು ತರುವಾಗ ಅದನ್ನು ಕತ್ತರಿಸದೇ, ಬಾಯಿಯ ಮೂಲಕ ಲಿವರ್ ನ್ನು ತೆಗೆಯುತ್ತಿದ್ದರು. ಈ ರೀತಿಯಲ್ಲಿ ಬಾಯಿಯ ಮೂಲಕ ಕೈ ತುರುಕುವಾಗ, ಅರೆ ಸತ್ತ ಶಾರ್ಕ್ ಮೀನು ಒಮ್ಮೆ ಕಚ್ಚಿದರೆ, ಕೈ ತುಂಡಾಗಿ ಹೋಗುವ ಅಪಾಯವಿದ್ದರೂ ಈ ಕೆಲಸವನ್ನು ಮಾಡುತ್ತಿದ್ದರು. ಅಷ್ಟರಮಟ್ಟಿಗೆ ಅದರ ಲಿವರ್‌ನ ರುಚಿಗೆ ಮಾರು ಮನ ಸೋತಿದ್ದಾರೆ. ಈಗ ಲಿವರ್‌ನಿಂದ ಎಣ್ಣೆ ತೆಗೆದು ಹಲವು ಔಷಧಿಗಳಲ್ಲಿ ಬಳಸುತ್ತಾರೆ. ದೇಹದಲ್ಲಿ ನಿಶ್ಯಕ್ತಿ ಉಂಟಾದರೆ, ಕೂಡಲೇ ಬಲವರ್ಧಿಸಲು ಇದರ ಎಣ್ಣೆ ಸಹಕಾರಿ. ಕ್ಯಾನ್ಸರ್‌ನಂತಹ ರೋಗಗಳಿಗೂ ಇದು ಪ್ರತಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಶಾರ್ಕ್‌ನ ಲಿವರ್ ನಲ್ಲಿ ಅತೀ ಹೆಚ್ಚಿನ ರೋಗ ನಿರೋಧಕ ಶಕ್ತಿ ಇರುವುದರಿಂದ ಕರೊನಾ ಲಸಿಕೆಯನ್ನು ಅಭಿವೃದ್ಧಿ ಪಡಿಸಲು ಕಳೆದ ನಾಲ್ಕೈದು ತಿಂಗಳುಗಳಲ್ಲಿ ಸುಮಾರು ಐದು ಲಕ್ಷ ಶಾರ್ಕ್‌ಗಳ ಮಾರಣಹೋಮ ಮಾಡಲಾಗಿದೆ. ಚೀನಾ, ಹಾಂಕಾಂಗ್ ಮುಂತಾದ ದೇಶಗಳಲ್ಲಿ ಇದರ ರೆಕ್ಕೆಗಳಿಂದ ಮಾಡುವ ಸೂಫ್‌ಗೆ ತುಂಬಾ ಬೇಡಿಕೆಯಿದೆ. ಈ ಕಾರಣಕ್ಕಾಗಿಯೇ ಇದನ್ನು ಭಾರಿ ಸಂಖ್ಯೆಯಲ್ಲಿ ಅಕ್ರಮವಾಗಿ ಬೇಟೆಯಾಡಲಾಗುತ್ತದೆ. ಶಾರ್ಕ್‌ನ್ನು ತಳಿಯನ್ನು ಸಲುವಾಗಿ ಪ್ರತಿವರ್ಷ ಜುಲೈ 14 ರಂದು ಶಾರ್ಕ್ ದಿನವನ್ನಾಗಿ ಆಚರಿಸುತ್ತಾರೆ. ಜೈವಿಕ ಪರಿಸರದ ಬಹುಮುಖ್ಯ ಕೊಂಡಿಯಾದ ಶಾರ್ಕ್ ಅವನತಿ ಹೊಂದಬಾರದೆಂಬ ಅಭಿಲಾಷೆಯಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ಇಂದಿನ ಮಿತಿಮೀರಿದ ಕೈಗಾರಿಕೀಕರಣದಿಂದ, ಹಡಗುಗಳ ಸಂಚಾರದಿಂದ, ಅಕ್ರಮ ಬೇಟೆಯಿಂದ ಇದರ ಸಂಖ್ಯೆ ಕಡಿಮೆಯಾಗಿದೆ. ಅತ್ಯಂತ ಸಣ್ಣ ಗಾತ್ರದ ಮರಿಗಳನ್ನು ಹಿಡಿಯುವುದರಿಂದಲೂ ಇದರ ಸಂಖ್ಯೆ ಇಳಿಮುಖವಾಗುತ್ತಿದೆ. ಈಗಲೆ ನಾವು ಎಚ್ಚೆತ್ತುಕೊಂಡರೆ ಮಾತ್ರ, ಪರಿಸರದ ಒಂದ ವಿಭಿನ್ನ, ವಿಶಿಷ್ಟ ಮೀನೊಂದನ್ನು ಉಳಿಸಬಹುದು.

ನಾಗರಾಜ ಖಾರ್ವಿ ಕಂಚುಗೋಡು

Leave a Reply

Your email address will not be published. Required fields are marked *