ನೋಡಬನ್ನಿ, ರಾಜ್ಯದ ಏಕೈಕ ಕಾಂಡ್ಲಾ ನಡಿಗೆಯ

ಕನ್ನಡ ನಾಡಿನ ಜೀವನದಿಗಳಲ್ಲಿ ಶರಾವತಿಯೂ ಒಂದು. ಶಿವಮೊಗ್ಗದ ಅಂಬುತೀರ್ಥದಲ್ಲಿ ಜನ್ಮತಾಳುವ ಶರಾವತಿ, ಗೇರುಸೊಪ್ಪೆಯಲ್ಲಿ ಜೋಗ್ ಜಲಪಾತವೆಂಬ ಹೆಸರಿನೊಂದಿಗೆ ನಾಲ್ಕು ಕವಲುಗಳಾಗಿ ಧುಮ್ಮಿಕ್ಕಿ ಹೊನ್ನಾವರದಲ್ಲಿ ಅರಬ್ಬಿ ಸಮುದ್ರದಲ್ಲಿ ಸೇರುತ್ತದೆ. ಶರಾವತಿಯು ಪಾತ್ರದುದ್ದಕ್ಕೂ ನೋಡುಗರ ಮನ ತಣಿಸುತ್ತಾ, ಗಮನ ಸೆಳೆಯುತ್ತಾ, ಮೀನುಗಾರಿಕೆ ಮಾಡುವವರ ಹೊಟ್ಟೆ ತುಂಬುತ್ತಾ ಕನ್ನಡ ನಾಡನ್ನು ಸಮೃದ್ಧಿಗೊಳಿಸಿದ್ದಂತೂ ಸತ್ಯ.

ಈ ಹಿಂದೆ ಪಡುಗಡಲಿನಿಂದ ಅಂಕಣದಲ್ಲಿ ಕಾಂಡ್ಲಾ ಸಸ್ಯವರ್ಗದ ಬಗ್ಗೆ ಒಂದಿಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದೆವು. ಇವತ್ತು ಶರಾವತಿ ಕಾಂಡ್ಲಾ ನಡಿಗೆಯ ಕುರಿತು ಒಂದಿಷ್ಟು ಮಾಹಿತಿ ನಿಮ್ಮ ಮುಂದಿಡುತ್ತೇನೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕು ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿ; ಹಾಗೆಯೇ ಅತಿಥಿ ಸತ್ಕಾರಕ್ಕೂ ಎತ್ತಿದ ಕೈ. ಉತ್ತರ ಕನ್ನಡ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯು ಜನರಿಗೆ ಕಾಂಡ್ಲಾವನದ ಕುರಿತು ಅರಿವು ಮೂಡಿಸುವ ಸಲುವಾಗಿ ಕಾಂಡ್ಲಾ ನಡಿಗೆಯ ಪಥವನ್ನು ಹೊನ್ನಾವರದಲ್ಲಿ ನಿರ್ಮಿಸಿದೆ. ಹೆದ್ದಾರಿಯಿಂದ ಕೇವಲ ನೂರು ಮೀಟರ್ ಅಂತರ ಇರುವ ಕಾರಣ ಅತ್ಯಂತ ಸುಲಭವಾಗಿ ತಲುಪಬಹುದಾದ ಸ್ಥಳ ಇದಾಗಿದೆ. ಉಡುಪಿಯಿಂದ ಹೊನ್ನಾವರ ತಾಲುಕು ಕೇಂದ್ರಕ್ಕೆ ಬರುವಾಗ ಸೇತುವೆ ಸಿಗುವ ಮೊದಲೇ ಇಕೋ ಬೀಚ್ ಸಿಗುತ್ತದೆ. ಇಕೋ ಬೀಚ್‌ನ ಪೂರ್ವ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ದಾಟಿ ಕಾಸರಕೋಡಿಗೆ ಹೋಗುವ ಮಾರ್ಗದಲ್ಲಿಯೇ ಹೋದರೆ ಎಡಭಾಗದಲ್ಲಿ ಈ ಶರಾವತಿ ಕಾಂಡ್ಲಾ ನಡಿಗೆ ಕಾಣಸಿಗುತ್ತದೆ. ತಲೆಗೆ ಹತ್ತು ರೂಪಾಯಿ ಪ್ರವೇಶ ಶುಲ್ಕ ಪಾವತಿಸಿ ಕಾಂಡ್ಲಾ ನಡಿಗೆಯನ್ನು ಪ್ರಾರಂಭಿಸಬಹುದು.

ಕಾಂಡ್ಲಾ ನಡಿಗೆಯು ನಾವು ಹಿಂದೆಂದೂ ನೋಡಿರದ ಅದ್ಭುತ ಲೋಕವನ್ನು ಅನಾವರಣ ಮಾಡುತ್ತದೆ. ಸುಮಾರು ಇಪ್ಪತ್ತು ಲಕ್ಷ ರೂಪಾಯಿಗಳ ಅನುದಾನದಿಂದ ನಿರ್ಮಿತವಾಗಿರುವ ಕಾಂಡ್ಲಾ ನಡಿಗೆಯು ಪ್ರವಾಸಿಗರ ಹೃನ್ಮನವನ್ನು ಮುದಗೊಳಿಸುವುದರಲ್ಲಿ ಸಂದೇಹವೇ ಇಲ್ಲ. ಮರದ ಹಲಗೆಯನ್ನು ಸುಂದರವಾಗಿ ಜೋಡಿಸಿ ಸೇತುವೆಯ ರೀತಿಯಲ್ಲಿ ಕಟ್ಟಿದ ಕಾಂಡ್ಲಾ ನಡಿಗೆಯ ಮೇಲೆ ನಡೆಯುತ್ತಿದ್ದರೆ, ದಟ್ಟವಾದ ಅರಣ್ಯದೊಳಗೆ ಹೋದಂತಹ ಅನುಭವವಾಗುತ್ತದೆ. ಈ ಸೇತುವೆಯ ಮೇಲೆ ಕಾಂಡ್ಲಾ ಸಸ್ಯವರ್ಗದ ವಿಶೇಷತೆ, ಅದರ ಸಂತಾನೋತ್ಪತ್ತಿ ವಿಧಾನ, ಹೂವು ಕಾಯಿಯ ಕುರಿತು ಚಿತ್ರ ಸಹಿತ ಬರೆದ ದೊಡ್ಡ ದೊಡ್ಡ ಫಲಕಗಳನ್ನು ಅಳವಡಿಸಲಾಗಿದೆ. ನಡೆಯುವಾಗ ಆಯಾಸವಾದವರಿಗೆ ಕುಳಿತುಕೊಳ್ಳಲು, ಮೂರ್ನಾಲ್ಕು ಕಡೆ ವ್ಯವಸ್ಥೆ ಮಾಡಲಾಗಿದೆ. ಈ ಸೇತುವೆಯನ್ನು ಸಿಮೆಂಟು ಮತ್ತು ಮರದ ಕಂಬಗಳ ಮೇಲೆ ರಚಿಸಲಾಗಿದೆ. ಸಮುದ್ರದ ಉಬ್ಬರವಿಳಿತದ ಪರಿಣಾಮ ನದಿಯಲ್ಲೂ ಸಂಭವಿಸುವ ವಿಚಾರ ನಿಮಗೆ ಗೊತ್ತೇ ಇದೆಯಲ್ಲ. ವಿಶೆಷವೆಂದರೆ ನದಿಯಲ್ಲಿ ಉಂಟಾಗುವ ಉಬ್ಬರವಿಳಿತದ ಚಿತ್ರಣವನ್ನು ಅತ್ಯಂತ ಸಮೀಪದಿಂದ ನೀವಿಲ್ಲಿ ನೋಡಬಹುದು.

ಕಾಂಡ್ಲಾ ವನದ ಮಧ್ಯದಲ್ಲಿ ನೀರು ಮತ್ತು ಕಾಂಡ್ಲಾದ ಬೇರುಗಳು ಸ್ಪಷ್ಟವಾಗಿ ಗೋಚರಿಸುವ ಕಾರಣ ಕಾಂಡ್ಲಾವನ ಪ್ರವಾಹವನ್ನು ಹೇಗೆ ತಪ್ಪಿಸುತ್ತದೆ ಎಂಬುದು ತಿಳಿಯುತ್ತದೆ. ಸುನಾಮಿಯನ್ನೂ ಹಿಮ್ಮೆಟ್ಟಿಸಬಲ್ಲ ಸಸ್ಯವರ್ಗ ಇದ್ದರೆ ಅದು ಕಾಂಡ್ಲಾ ಎಂಬುದು ಸರ್ವವಿಧಿತ. ಇದು ಮಣ್ಣಿನ ಸವಕಳಿಯನ್ನು ತಪ್ಪಿಸಿ, ನದಿ ಪಾತ್ರಗಳ ಸುಸ್ಥಿರತೆಯನ್ನು ಕಾಪಾಡುತ್ತದೆ. ಸಮುದ್ರದ ಉಬ್ಬರವಿಳಿತದಿಂದ ನದಿಗಳ ಮೇಲಾಗುವ ಸಮಸ್ಯೆಗಳನ್ನು ತಡೆಯುತ್ತದೆ. ಹಲವು ಬಗೆಯ ಜಲಚರಗಳಿಗೆ ಆವಾಸ ಸ್ಥಾನವನ್ನೂ ಇದು ಒದಗಿಸುತ್ತದೆ. ಆ ಫಲಕಗಳನ್ನು ಗಮನವಿಟ್ಟು ಓದಿದವರಿಗೆ ಕಾಂಡ್ಲಾಕಾಡಿನ ಅನಿವಾರ್ಯತೆಯ ಅರಿವಾಗುತ್ತದೆ.

ಈ ಎಲ್ಲಾ ವಿಚಾರಗಳನ್ನು ಅಲ್ಲಿ ಹೋದ ಎಲ್ಲಾ ಪ್ರವಾಸಿಗರು ಅರಿಯುತ್ತಾರೆಂಬ ಭರವಸೆಯಿಲ್ಲ. ಪರಿಸರ ವೀಕ್ಷಣೆಗಾಗಿ ಬರುವವರು ಕೆಲವರಾದರೆ, ಆ ಪರಿಸರದಲ್ಲಿ ತೆಗೆಯುವ ಫೋಟೋಗಳು ಅತ್ಯದ್ಭುತವಾಗಿ ಮೂಡಿಬರಬಹುದೆಂಬ ಆಸೆಯಿಂದ ಬರುವವರು ಇದ್ದಾರೆ. ಹ್ಞಾ… ಒಂದು ವಿಷಯ, ನಾನು ಈಗಾಗಲೇ ಹೇಳಿದಂತೆ ಈ ಸೇತುವೆ ಮರದ ಹಲಗೆಗಳಿಂದ ಮಾಡಿದ್ದು, ಸೇತುವೆಯ ತಳಭಾಗದ ಪರಿಸರ ವೀಕ್ಷಿಸಲು ಪ್ರತೀ ಎರಡು ಹಲಗೆಗಳ ನಡುವೆ ಸ್ಥಳಾವಕಾಶ ಇಟ್ಟಿದ್ದಾರೆ. ಫೋಟೋ ತೆಗೆಯುವ ಭರದಲ್ಲಿ ಮೊಬೈಲ್ ಕೆಳಗೆ ಬಿದ್ದರೆ‌ ನೀರುಪಾಲಾಗುವುದು ಗ್ಯಾರಂಟಿ. ಫೋಟೋ ತೆಗೆಯುವ ಗಡಿಬಿಡಿಯಲ್ಲಿ ನಿಮ್ಮ ಮೊಬೈಲು ಶರಾವತಿಯ ಪಾಲಾಗದಿರಲಿ. ಇದು ನದಿಯ ಹಿನ್ನೀರಾಗಿರುವ ಕಾರಣ ಮೊಣಕಾಲಿಗಿಂತ ಹೆಚ್ಚು ನೀರು ಇರುವುದಿಲ್ಲ. ಇದನ್ನೇ ಕಾರಣವಾಗಿರಿಸಿಕೊಂಡು ಕೆಳಗಿಳಿದು ವಿಕೃತಿ ಮೆರೆಯುವ ಸಾಹಸಕ್ಕೆ ಹೋಗದಿರುವುದು ಒಳಿತು. ಅದರಲ್ಲೂ ಕೊನೆಯ 50 ಮೀಟರ್ ಸೇತುವೆಯ ಮೇಲೆ, ಸುರಕ್ಷಾ ಆವರಣ ಇಲ್ಲದ ಕಾರಣ, ಅತ್ಯಂತ ಜಾಗರೂಕರಾಗಿ ಹೋಗಬೇಕು. ಪಾಸ್ಟಿಕ್ ಬಾಟಲ್‌ಗಳನ್ನು, ಪ್ಲಾಸ್ಟಿಕ್ ಲಕೋಟೆಗಳನ್ನು ಎಸೆಯುವ ಸಾಹಸಕ್ಕಂತೂ ಹೋಗಲೇಬೇಡಿ. ಅದೊಂದು ಸಂಕೀರ್ಣ ಜೀವ ಪ್ರಪಂಚವಾಗಿರುವ ಕಾರಣ ತಿಂಡಿತಿನಿಸುಗಳನ್ನು ಎಸೆಯುವುದು ಅಕ್ಷಮ್ಯ.

ನಾವು ತಿನ್ನುವ ಎಲ್ಲಾ ಆಹಾರ ಅಲ್ಲಿರುವ ಜೀವಿಗಳ ದೇಹಕ್ಕೆ ಒಗ್ಗುವುದಿಲ್ಲ. ಕೆಲವು ಆಹಾರಗಳಂತೂ ಅವುಗಳ ಮಾರಣ ಹೋಮಕ್ಕೂ ಕಾರಣವಾಗಬಹುದು. ಆಮೆ, ಮೀನು, ಏಡಿಗಳು ತಮ್ಮ ಸಂತಾನೋತ್ಪತ್ತಿಗಾಗಿ ಕಾಂಡ್ಲಾ ಪರಿಸರವನ್ನೇ ಆಯ್ದುಕೊಳ್ಳುವ ಕಾರಣ, ಪ್ರವಾಸಿಗರು ಆದಷ್ಟು ಶಾಂತತೆಯನ್ನು ಕಾಯ್ದುಕೊಳ್ಳಬೇಕು. ನಾವು ಮಾಡುವ ಗದ್ದಲದಿಂದ ಅವುಗಳ ನೆಮ್ಮದಿ ಹಾಳಾಗಬಾರದಲ್ಲ. ಇತ್ತೀಚಿಗೆ ನಾನು ಅಲ್ಲಿ ಭೇಟಿ ಕೊಟ್ಟಾಗ, ಯುವ ಪ್ರವಾಸಿಗರ ಇನ್ನೊಂದು ವಿಕಾರತೆಯನ್ನು ಗಮನಿಸಿದ್ದೆ. ಸೇತುವೆಯ ಎರಡೂ ಬದಿಯ ಸುರಕ್ಷತಾ ಬೇಲಿಯ ಹಲಗೆಯ ಮೇಲೆ ಕೆಲವರು ತಮ್ಮ ಹೆಸರನ್ನು, ತಮ್ಮ ಸಂಗಾತಿಯ ಹೆಸರನ್ನು ಕೆತ್ತಿದ್ದಾರೆ. ಹಳೆಬೀಡಿನಲ್ಲಿ ಶಿಲೆಯ ಬೃಹತ್ ನಂದಿಯ ಪೃಷ್ಠಭಾಗದಲ್ಲಿ ಕೆಲವರು ತಮ್ಮ ಹೆಸರನ್ನು ಕೆತ್ತಿರುವುದನ್ನೂ ನೋಡಿದ್ದೆ. ಶಿಲೆಯ ಮೇಲೆಯೇ ಬರೆಯುವ ಶಕ್ತಿಯಿದ್ದವರು ಮರದ ಹಲಗೆಯನ್ನು ಬಿಡುವರೆ? ಐತಿಹಾಸಿಕ ಸ್ಥಳಗಳಿರಬಹುದು, ಪ್ರೇಕ್ಷಣೀಯ ಸ್ಥಳಗಳಿರಬಹುದು ಅವುಗಳ ಮೇಲೆ ನಮ್ಮ ಹೆಸರು ಬರೆದ ಮಾತ್ರಕ್ಕೆ ಅದರ ನಿರ್ಮಾತೃ ನಾವಾಗಲಾರೆವು. ಇಂತಹ ಕೊಳಕು ಕೆಲಸಕ್ಕೆ ಇಳಿಯದಿರುವುದೇ ನಾವು ನಮ್ಮ ದೇಶಕ್ಕೆ ನೀಡುವ ಬಹುದೊಡ್ಡ ಕೊಡುಗೆ.

“ಶರಾವತಿ ಕಾಂಡ್ಲಾ ನಡಿಗೆ” ಎಂಬುವುದರಲ್ಲಿ ‘ನಡಿಗೆ’ ಎಂಬ ಪದವೇ ಅತ್ಯಂತ ಮಹತ್ತ್ವದ್ದು. ಅದರರ್ಥ ನಮ್ಮ ನಡಿಗೆ ಮಾದರಿ ನಡಿಗೆಯಾಗಬೇಕು. ಓಡಿಕೊಂಡು ಹೋಗುವುದು; ಕುಪ್ಪಳಿಸುತ್ತಾ ಜಿಗಿಯುವುದು; ಸದ್ದು ಮಾಡಲೆಂದು ಕುಣಿಯುವುದು; ಅದರ ಮೇಲೆ ಬಿದ್ದು ಉರುಳುವುದೆಲ್ಲ ಮಾಡಲೇಬಾರದು. ನಮ್ಮದು ನಿಜವಾದ ನಡಿಗೆಯಾದರೆ ಮಾತ್ರ ಇಂತಹ ಸೂಕ್ಷ್ಮ ಮತ್ತು ಸಂಕೀರ್ಣ ಉಳಿಯಲು ಸಾಧ್ಯ; ಇಂತಹ ಸ್ಥಳಗಳನ್ನು ಪ್ರವಾಸಿಗರಿಗೆ ತೋರಿಸಬೇಕೆಂಬ ಯೋಜಕರ ಯೋಜನೆಗೊಂದು ಅರ್ಥ ಬರುತ್ತದೆ. ನಮ್ಮ ನಡಿಗೆ‌ ನಡಿಗೆಯಾದಾಗ ಮಾತ್ರ ಆ ಪರಿಸರದ ಸೂಕ್ಷ್ಮತೆಗಳನ್ನು ಗಮನವಿಟ್ಟು ನೋಡಲು‌ ಸಾಧ್ಯವಾಗುತ್ತದೆ. ಇಡೀ ಕರ್ನಾಟಕದಲ್ಲಿ ಇದೊಂದೇ ಕಾಂಡ್ಲಾವನ ನಡಿಗೆಯೆಂಬುವುದನ್ನು ನಾವು ಮರೆಯಬಾರದು. ನಮ್ಮ ವಿಕೃತಿಗಳು ಅಲ್ಲಿ ವಿಜೃಂಭಿಸಿದರೆ, ಅರಣ್ಯ ಇಲಾಖೆ ಮುಂದೆಂದೂ ಇಂತಹ ಸಾಹಸಕ್ಕೆ ಕೈಹಾಕದು. ಇಂತಹ ಸ್ಥಳಗಳಿಗೆ ಬರುವ ನಮ್ಮ ನಡಿಗೆಯೂ ಮಾದರಿಯಾಗಿರಬೇಕೆಂಬುದು ಯೋಜಕರ ಆಶಯವಾಗಿದೆ.

ನಾಗರಾಜ ಖಾರ್ವಿ ಕಂಚುಗೋಡು

Leave a Reply

Your email address will not be published. Required fields are marked *