ಹೊನ್ನಾವರ: ಕಾಸರಕೋಡು ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ವಿವಾದವನ್ನು ಬಗೆಹರಿಸಲು ಮಧ್ಯ ಪ್ರವೇಶಿಸುವಂತೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಪರಮಪೂಜ್ಯ ಶ್ರೀ ವಿರೇಂದ್ರ ಹೆಗ್ಗಡೆಯವರನ್ನು ಮೀನುಗಾರರ ವಿವಿಧ ಸಂಘಟನೆಗಳು ಮನವಿ ಮಾಡಿಕೊಂಡಿದ್ದಾರೆ.
ರಾಷ್ಟ್ರೀಯ ಮೀನುಗಾರರ ಸಂಘಟನೆಯ ಅಧ್ಯಕ್ಷರಾದ ಚಂದ್ರಹಾಸ ಕೊಚರೆಕಾರ್,ಕಡಲವಿಜ್ಞಾನಿ ಪ್ರಕಾಶ್ ಮೇಸ್ತ,ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಗಣಪತಿ ತಾಂಡೇಲ್,ಟ್ರಾಲರ್ ಬೋಟ್ ಕಾರ್ಮಿಕರ ಸಂಘದ ಅಧ್ಯಕ್ಷರಾದ ರಾಜು ತಾಂಡೇಲ್,ಪರ್ಶಿಯನ್ ಬೋಟ್ ಯೂನಿಯನ್ ಕಾರ್ಯದರ್ಶಿ ವೀವನ್ ಫೆರ್ನಾಂಡಿಸ್,ಮಹ್ಮದ್ಶಕೋಯಾ,ಪ್ರೀತಿ ತಾಂಡೇಲ್,ರೇಣುಕಾ ತಾಂಡೇಲ್ ಮುಂತಾದವರು ಉಪಸ್ಥಿತರಿದ್ದರು.
ಮೀನುಗಾರರ ಮನವಿಗೆ ಶ್ರೀ ವೀರೇಂದ್ರ ಹೆಗ್ಗಡೆಯವರು ಸಕರಾತ್ಮಕ ಪ್ರತಿಕ್ರಿಯೆ ನೀಡಿದ್ದು ,ಇನ್ನೊಂದು ವಾರದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗುವ ಕಾರ್ಯಕ್ರಮವಿದ್ದು ಆ ಸಂದರ್ಭದಲ್ಲಿ ಕಾಸರಕೋಡು ವಾಣಿಜ್ಯ ಬಂದರು ಯೋಜನೆಯ ವಿಚಾರವಾಗಿ ಮುಖ್ಯಮಂತ್ರಿಗಳ ಗಮನ ಸೆಳೆದು ಮುಖ್ಯಮಂತ್ರಿಗಳು ಈ ಸ್ಥಳಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ ಬಳಿಕ ಪುನರ್ ಪರಿಶೀಲನೆ ಮಾಡಿದ ನಂತರವೇ ಸೂಕ್ತ ತೀರ್ಮಾನ ಕೈಗೊಳ್ಳಲು ವಿನಂತಿಸುವುದಾಗಿ ಶ್ರೀ ಹೆಗ್ಗಡೆಯವರು ಸಾಮಾಜಿಕ ಕಾರ್ಯಕರ್ತ ಜೀನದತ್ತಾ ಗೌಡರ ಮೂಲಕ ಮೀನುಗಾರರಿಗೆ ಅಮೂಲ್ಯ ಸಂದೇಶ ನೀಡಿದ್ದಾರೆ ಎಂಬ ವಿಷಯ ತಿಳಿದು ಬಂದಿದ್ದು ಮೀನುಗಾರರು ಆಶಾಭಾವನೆ ವ್ಯಕ್ತಪಡಿಸಿರುತ್ತಾರೆ.
ಹೊನ್ನಾವರ ಇಕೋ ಬೀಚ್ ಬಳಿ ಇತಿಹಾಸ ಪ್ರಸಿದ್ಧ ರಾಣಿ ಚೆನ್ನಾ ಬೈರಾ ದೇವಿಯ ಥೀಮ್ ಪಾರ್ಕ್ ನಿರ್ಮಾಣ ಯೋಜನೆಯನ್ನು ವೀರೇಂದ್ರ ಹೆಗ್ಗಡೆಯವರು ಪ್ರವಾಸೋದ್ಯಮ ದೃಷ್ಟಿಯಿಂದ ಕೈಗೆತ್ತಿಕೊಂಡಿರುತ್ತಾರೆ.ಇದರ ಪೂರ್ವಭಾವಿ ಸಮಾಲೋಚನೆಗಾಗಿ ಬಂದಾಗ ಮೀನುಗಾರರು ಮನವಿ ಸಲ್ಲಿಸಿದರು.ಜನರ ಆರೋಗ್ಯ,ಮೀನುಗಾರರ ಹಿತರಕ್ಷಣೆ,ಮತ್ತು ಕಡಲತೀರದ ಸಂರಕ್ಷಣೆ ದೃಷ್ಟಿಯಿಂದ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೈಬಿಡಬೇಕು ಎಂದು ಈ ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಧರ್ಮಾಧಿಕಾರಿಗಳ ರಾಣಿ ಚೆನ್ನಾಬೈರಾ ದೇವಿಯ ಈ ಥೀಮ್ ಪಾರ್ಕ್ ಯೋಜನೆಗೆ ಮೀನುಗಾರರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಉಮಾಕಾಂತ ಖಾರ್ವಿ
ಕುಂದಾಪುರ