ಆಧ್ಯಾತ್ಮ ದಶನದಲ್ಲಿ ಖಾರ್ವಿ ಸಮಾಜದ ಶ್ರೀ ಸಾಯಿಮುನಿ ಸ್ವಾಮೀಜಿ

ಭೌದ್ಧಿಕ ವಿಚಾರಕ್ರಾಂತಿಗಳಿಂದ ಪಶ್ಚಿಮದ ರಾಷ್ಟ್ರಗಳಿಂದ ಹಲವಾರು ತಂತ್ರಜ್ಞಾನಗಳು, ಯಾನಯಂತ್ರಗಳು, ವೈದ್ಯತಂತ್ರಗಳು ಮೂಡಿ ಬಂದು ಒಂದು ದೇಶದ ಆರ್ಥಿಕ ಪ್ರಗತಿಯಲ್ಲಿ ವಿಶೇಷವಾದ ವಿಕಾಸವಾಗಿದೆ. ಎಂಬುದನ್ನು ನಾವು ಒಪ್ಪಿಕೊಳ್ಳಬಹುದಾದರೂ ತಾತ್ವಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ನಮ್ಮ ದೇಶವು ಯಥೇಚ್ಛವಾದ ಕೊಡುಗೆಗಳನ್ನು ಈ ಹಿಂದೆಯೂ ಕೊಟ್ಟಿದೆ, ಇಂದೂ ನೀಡುತ್ತಾ ಇದೆ, ಮುಂದಕ್ಕೂ ನೀಡಬಲ್ಲದಾಗಿದೆ. ಭಾರತ ಪುರಾಣ ಪುರುಷರ, ಸಾಧುಸಂತರ ಪುಣ್ಯಭೂಮಿ. ಇಲ್ಲಿ ಅವತರಿಸಿದ ಪುಣ್ಯಪುರುಷರು ಸಮಸ್ತ ಜಗತ್ತಿಗೆ ದಾರಿದೀಪವಾಗಿದ್ದಾರೆ. ತಮ್ಮ ಜ್ಞಾನಜ್ಯೋತಿಯ ಆಧ್ಯಾತ್ಮಿಕ ಚಿಂತನೆಯನ್ನು ಜಗತ್ತಿನಾದ್ಯಂತ ಪಸರಿಸಿದ್ದಾರೆ. ಅವರೆಲ್ಲರ ಬದುಕಿನ ಆದರ್ಶಗಳು ನಮಗೆ ಮಾರ್ಗದರ್ಶನ ನೀಡುವ ದೀಪಸ್ತಂಭಗಳಂತೆ ಅನನ್ಯವಾದುದು.

ಈ ಪೀಠಿಕೆಯಲ್ಲಿ ಉಲ್ಲೇಖಿತವಾದಂತೆ ತಮ್ಮ ಲೌಕಿಕ ಬದುಕನ್ನು ಪರಿತ್ಯಾಗ ಮಾಡಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆಗೈದು ಸಮಾಜದ ಔನತ್ಯದ ಮಾರ್ಗದರ್ಶಕರಾಗಿ ಆರ್ವೀಭವಿಸಿರುವ ಕೊಂಕಣಿ ಖಾರ್ವಿ ಸಮಾಜದ ಸ್ವಾಮೀಜಿ ಶ್ರೀ ಸಾಯಿಮುನಿ ಸ್ವಾಮೀಜಿಯವರು ವಿರಾಜಮಾನರಾಗಿ ಕಂಗೊಳಿಸುತ್ತಾರೆ. ಅಂತರಂಗದಲ್ಲಿ ಉದ್ಬವಗೊಂಡ ಆಧ್ಯಾತ್ಮಿಕ ಸತ್ಯದ ದಿವ್ಯದರುಶನಕ್ಕಾಗಿ ನಿರಂತರವಾಗಿ ಸಾಧನೆಗೈದ ಶ್ರೀ ಸಾಯಿಮುನಿಗಳ ಲೌಕಿಕದಿಂದ ಆಧ್ಯಾತ್ಮಿಕತೆಯ 25 ವರ್ಷಗಳ ಪವಿತ್ರ ಪಯಣ ಇಲ್ಲಿ ಅನಾವರಣಗೊಂಡಿದೆ.

ಪ್ರಸ್ತುತ ಹೊನ್ನಾವರ ತಾಲೂಕಿನ ಗೇರುಸೊಪ್ಪದ ಹಾಡ್ಗೇರಿ ನಿನ್ನೂರಿನಲ್ಲಿ ದುರ್ಗಮ ಕಾಡು ಪ್ರದೇಶದಲ್ಲಿ ಕುಟೀರ ಕಟ್ಟಿಕೊಂಡು ಆಧ್ಯಾತ್ಮಿಕ ಪ್ರಭೆ ಪಸರಿಸುತ್ತಿರುವ ಶ್ರೀ ಸಾಯಿಮುನಿಗಳ ಪೂರ್ವಾಶ್ರಮದ ಹೆಸರು ನಾಗೇಶ್ ಬಿ ನಾಯ್ಕ್ ಊರು ಉಡುಪಿಯ ಕೋಡಿಬೆಂಗ್ರೆ ಅಪರಿಮಿತ ಬುದ್ದಿಶಾಲಿಯಾದ ನಾಗೇಶ್ ಬಿ ನಾಯ್ಕ್ ರವರಿಗೆ ಸಾಂಧರ್ಭಿಕ ಸನ್ನಿವೇಶವೊಂದರಲ್ಲಿ ಲೌಕಿಕ ಬದುಕಿನಿಂದ ಆಧ್ಯಾತ್ಮಿಕ ಕ್ಷೇತ್ರದತ್ತ ಅಪಾರವಾದ ಒಲವು ಉಂಟಾಗಿ ಲೌಕಿಕ ಬದುಕಿಗೆ ತಿಲಾಂಜಲಿ ನೀಡಿದರು. ಲೌಕಿಕ ಬದುಕಿನಿಂದ ವಿಮುಖರಾಗಿ ಅವರು ಊರಿನಲ್ಲಿ ಪ್ರತ್ಯೇಕವಾಗಿ ವಾಸಿಸತೊಡಗಿದರು. ಇವರ ಆಧ್ಯಾತ್ಮಿಕ ಚಿಂತನೆಗಳಿಗೆ ಮೆಚ್ಚಿಕೊಂಡ ಬಾಡಿಗೆ ಮನೆಯವರು ಬಾಡಿಗೆಯನ್ನೇ ತೆಗೆದುಕೊಳ್ಳಲಿಲ್ಲ. ಆಧ್ಯಾತ್ಮಿಕ ಅಧ್ಯಯನದಲ್ಲಿ ತೊಡಗಿಸಿಕೊಂಡ ಇವರು 2001 ರಿಂದ 2011 ರ ತನಕ ಹತ್ತು ವರ್ಷಗಳ ಕಾಲ ಹಂಗಾರಕಟ್ಟೆಯಲ್ಲಿ ಅವರ ಆಧ್ಯಾತ್ಮಿಕ ಸಾಧನೆಯ ಅಧ್ಯಯನ ನಡೆದ ಬಳಿಕ 2011 ರ ಕೊನೆಯಲ್ಲಿ ಹಿಮಾಲಯದ ಗಂಗೋತ್ರಿಯಲ್ಲಿ ಕೇರಳದ ಗುರುಗಳಿಂದ ಸನ್ಯಾಸಿ ದೀಕ್ಷೆ ಸ್ವೀಕರಿಸಿದರು.

2011 ರಿಂದ 2015 ರ ತನಕ ಹಿಮಾಲಯದ ಪರ್ವತ ಶ್ರೇಣಿ ಪ್ರದೇಶಗಳಾದ ಬಂಗ್ಲೂವಾಸ, ತಪೋವನ, ಗೋಮುಖ, ಉತ್ತರಕಾಶಿ ಮುಂತಾದ ಕಡೆ ಅವರ ಆಧ್ಯಾತ್ಮಿಕ ಸಾಧನೆಯ ಪಯಣ ಸಾಂಗವಾಗಿ ನೆರವೇರಿತು. ಇದೇ ಸಮಯದಲ್ಲಿ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲು ನಿವೃತ್ತ ಪೋಸ್ಟ್ ಮಾಸ್ಟರ್ ಶ್ರೀ ಮಾಧವ ಖಾರ್ವಿಯವರು ತಮ್ಮ ಸ್ನೇಹಿತರೊಂದಿಗೆ ಹಿಮಾಲಯದ ಗಂಗೋತ್ರಿಗೆ ಪುಣ್ಯ ಯಾತ್ರೆ ಕೈಗೊಂಡಿದ್ದರು.

ಹಿಮಾಲಯದ ಪುಣ್ಯಕ್ಷೇತ್ರ ಗಂಗೋತ್ರಿಯಲ್ಲಿ ತಪಸ್ಸು ಸಿದ್ದಿಗಳ ಮೂಲಕ ಅಪಾರವಾದ ಆಧ್ಯಾತ್ಮಿಕ ಸಾಧನೆಗೈದ ಸ್ವಾಮೀಜಿಯವರು ಬಳಿಕ ಗುರುಗಳ ಅಪ್ಪಣೆ ಪಡೆದು 2017 ರಲ್ಲಿ ರಾಜಸ್ಥಾನದ ಆಶ್ರಮದಲ್ಲಿ ಸ್ವಲ್ಪ ಕಾಲ ನೆಲೆಯಾಗಿದ್ದರು. ಮುಂದೆ ಪ್ರಯಾಣ ಬೆಳೆಸುತ್ತಾ ಶ್ರೀ ಕ್ಷೇತ್ರ ಕೊಲ್ಲೂರಿನಲ್ಲಿ ಆಶ್ರಮವೊಂದರಲ್ಲಿ ತಂಗಿದರು. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಗೈಯಲು ಅವರ ಮನಸ್ಸು ಹಾತೊರೆಯುತ್ತಿತ್ತು. ಇದಕ್ಕಾಗಿ ನಿರ್ಜನವಾದ ಪ್ರದೇಶದವೊಂದರ ಹುಡುಕಾಟದಲ್ಲಿ ನಿರತರಾಗಿದ್ದರು ಅವರ ಮನಸ್ಸಿನ ಇಚ್ಛೆಯಂತೆ 2019 ರಲ್ಲಿ ಗೇರುಸೊಪ್ಪದ ದುರ್ಗಮ ಕಾಡಿನೊಳಗೆ ಸುಮಾರು 23 ಕೀಮೀ ದೂರದಲ್ಲಿ ಹಾಡ್ಗೇರಿ ನಿನ್ನೂರಿನಲ್ಲಿ ಸೂಕ್ತವಾದ ಸ್ಥಳ ದೊರಕಿತು. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಇರುವ ಮಾಲ್ಕಿ ಭೂಮಿಯ ಮಾಲೀಕರೊಬ್ಬರು ಸ್ವಾಮೀಜಿಗಳಿಗೆ ತಮ್ಮ ಭೂಮಿಯಲ್ಲಿ ನೆಲೆಸಲು ಅವಕಾಶ ಮಾಡಿಕೊಟ್ಟರು. ಈ ದುರ್ಗಮ ಅರಣ್ಯ ಪ್ರದೇಶದ ಮೂರು ಕೀ ಮೀ ಅಂತರದಲ್ಲಿ ಮಠಾರಿ ಸಮಾಜದ ಕೆಲವು ಕುಟುಂಬಗಳು ಕೃಷಿಕಾಯಕ ಮಾಡಿ ಅನಾದಿಕಾಲದಿಂದಲೂ ನೆಲೆ ನಿಂತಿದ್ದಾರೆ. ಈ ಕುಟುಂಬಗಳು ತಮ್ಮ ಊರಿಗೆ ಸ್ವಾಮೀಜಿಯವರ ಆಗಮನದಿಂದ ಸಂತಸಗೊಂಡು ಅವರು ಆರಿಸಿಕೊಂಡ ಸ್ಥಳದಲ್ಲಿ ಕುಟೀರ ಕಟ್ಟಿಸಿಕೊಟ್ಟರು ಮತ್ತು ಸ್ವಾಮೀಜಿಯವರಿಗೆ ಅಂದಿನಿಂದ ಇಂದಿನವರೆಗೂ ಆಹಾರ ಸಾಮಗ್ರಿಗಳ ಪೂರೈಕೆಯ ವ್ಯವಸ್ಥೆಯನ್ನು ಇದೇ ಕುಟುಂಬಗಳು ಮಾಡುತ್ತಾ ಬಂದಿವೆ.

ಈ ಮರಾಠಿ ಕುಟುಂಬಗಳ ಅಭೂತಪೂರ್ವ ಭಕ್ತಿಪೂರ್ವಕ ಸೇವೆಯಿಂದ ಸ್ವಾಮೀಜಿಯವರು ಪ್ರಸನ್ನಗೊಂಡಿದ್ದಾರೆ. ಸ್ವಾಮೀಜಿಯವರ ಸಿದ್ದಿಸಾಧನೆಗಾಗಿ ಸಹಕರಿಸುತ್ತಿರುವ ಈ ಹೃದಯವಂತ ಮರಾಠಿ ಜನರು ಈ ದುರ್ಗಮ ಅರಣ್ಯ ಪ್ರದೇಶದಲ್ಲಿ ಸ್ವಾಮೀಜಿಗಳನ್ನು ಭೇಟಿಯಾಗಿ ಮರಳಿ ಬರುವ ತನಕ ಮಾಡಿದ ಉಪಕಾರವನ್ನು ಮರೆಯಲು ಸಾಧ್ಯವೇ ಇಲ್ಲ. ಸ್ವಾಮೀಜಿಗಳ ಭೇಟಿ ಮಾಡುವ ನಮ್ಮ ತಂಡದಲ್ಲಿ ಪೋಸ್ಟ್ ಮಾಸ್ಟರ್ ಮಾಧವ ಖಾರ್ವಿ, ಕೋಡಿಬೆಂಗ್ರೆಯ ಗಣೇಶ್ ಖಾರ್ವಿ, ಕುಂದಾಪುರದ ಉಮಾಕಾಂತ ಖಾರ್ವಿಯವರು ಇದ್ದರು. ನಮ್ಮನ್ನು ಕರೆದುಕೊಂಡು ಹೋಗಲು ಸ್ವಾಮೀಜಿಯವರ ಸೂಚನೆಯ ಮೇರೆಗೆ ವಿಶ್ವನಾಥ್ ಮರಾಠಿ ಎಂಬ ಚೈತನ್ಯಶಾಲಿ ಹುಡುಗ ಬಂದಿದ್ದರು.

ನಮ್ಮ ಕಾರು ಕಡಿದಾದ ದಾರಿಯಲ್ಲಿ ಹೋಗಲಾರದೆ ನಾವು ಸುಮಾರು ಎಂಟು ಕೀಮೀ ನಡೆದುಕೊಂಡೇ ಹೋಗುವ ಪ್ರಮೇಯ ಉಂಟಾಯಿತು.ಇಲ್ಲಿ ಕಾಡುದಾರಿಯಲ್ಲಿ ಶರಾವತಿ ನದಿಯ ಉಪನದಿಯೊಂದು ತೊರೆಯ ರೂಪದಲ್ಲಿ ರಭಸವಾಗಿ ಹರಿಯುತ್ತಿತ್ತು. ವಿಶ್ವನಾಥ್ ಮರಾಠಿ ಮಾರ್ಗದರ್ಶನ ಮತ್ತು ಸಹಕಾರದಿಂದ ನದಿಯನ್ನು ಸರಾಗವಾಗಿ ದಾಟಿದೆವು. ಮುಂದೆ ಮರಾಠಿ ಕುಟುಂಬದ ಮಂಜಯ್ಯ ಮರಾಠಿಯವರು ನಡೆದು ಸುಸ್ತಾಗಿ ಬಂದ ನಮ್ಮನ್ನು ಬೊಂಡ ಮತ್ತು ಬಾಳೆಹಣ್ಣು ನೀಡಿ ವಿಶೇಷವಾಗಿ ಆತಿಥ್ಯ ನೀಡಿದರು. ಅವರ ಪ್ರೀತಿ ವಿಶ್ವಾಸಗಳಿಗೆ ಬೆಲೆ ಕಟ್ಟಲಾಗದು. ಇದು ಸದಾಕಾಲ ನಮ್ಮ ನೆನಪಿನಲ್ಲಿ ಇರುತ್ತದೆ.

ಸ್ವಾಮೀಜಿಯವರು ನಮಗಾಗಿ ಭೋಜನ ಸಿದ್ದಪಡಿಸಿದ್ದರು. ಅವರು ತಮ್ಮ ಬದುಕಿನ ಆಧ್ಯಾತ್ಮಿಕ ಪಯಣ ಸಾಧನೆ ಮತ್ತು ಉದ್ದೇಶಗಳನ್ನು ನಮ್ಮೊಂದಿಗೆ ಎಳೆಎಳೆಯಾಗಿ ಬಿಚ್ಚಿಟ್ಟರು. ಒಂದು ಸಮಾಜದಲ್ಲಿ ಒಬ್ಬ ವ್ಯಕ್ತಿ ತನ್ನ ಹುಟ್ಟಿನಿಂದ ಸಾವಿನ ತನಕ ನಡೆಸಬಹುದಾದ ಮಾನವನ ಆದರ್ಶ ಚಟುವಟಿಕೆಗಳನ್ನು ಬಿಂಬಿಸಿ, ಅವನ ಮೇಲೆ ಪ್ರಭಾವ ಬೀರುವುದೇ ಆಧ್ಯಾತ್ಮಿಕತೆಯ ಗುರಿ ಎಂದು ಹೇಳುವ ಸ್ವಾಮೀಜಿಯವರು ಬದುಕಿನ ಎಲ್ಲಾ ನೋವು ಸಂಕಟಗಳನ್ನು ಸಹಿಸುವಂತೆ ಮಾಡುವ ಶಕ್ತಿ ಆಧ್ಯಾತ್ಮಕ್ಕಿದೆ ಎನ್ನುತ್ತಾರೆ. ಆಧ್ಯಾತ್ಮ ವಿಷಕಂಠನಂತೆ ಎಲ್ಲವನ್ನೂ ಅದು ನುಂಗಿ ಕೊರಳಿನಲ್ಲಿ ತುಂಬಿಕೊಳ್ಳಬಲ್ಲುದು. ಹೃದಯದೊಳಗಿನ ಆಧ್ಯಾತ್ಮ ವಿಷವನ್ನೂಅಮೃತವಾಗಿಸಬಲ್ಲದು. ವಿಷಕಂಠನಾದ ಶಿವನು ಅಮೃತಕಿರಣನಾಗಿ ನಲಿಯುತ್ತಾನೆ ಎಂದು ಶ್ರೀ ಸಾಯಿಮುನಿ ಸ್ವಾಮೀಜಿಯವರು ಹೃದಯಂಗಮವಾಗಿ ಆಧ್ಯಾತ್ಮಿಕತೆಯ ಶಕ್ತಿಯನ್ನು ಬಣ್ಣಿಸುತ್ತಾರೆ.

ಕೊಂಕಣಿ ಖಾರ್ವಿ ಸಮಾಜ ಉನ್ನತಿ ಪಡೆಯಬೇಕಾದರೆ ಮುಖ್ಯವಾಗಿ ಸಮಾಜದ ಯುವಕರು ಪಾನಮುಕ್ತರಾಗಬೇಕು ಮತ್ತು ಸಮಾಜದ ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ಶಿಕ್ಷಣ ಲಭಿಸಬೇಕೆಂದು ಹೇಳುತ್ತಾರೆ. ಸಮಾಜದ ಮಕ್ಕಳಿಗೆ ಲೌಕಿಕ ಶಿಕ್ಷಣದ ಜೊತೆಗೆ ವೇದಪಾಠ ಶಾಲೆಯ ಅಗತ್ಯವಿದೆ ಎಂದು ಸ್ವಾಮೀಜಿಯವರು ಅಭಿಪ್ರಾಯ ಪಡುತ್ತಾರೆ. ಪ್ರವಚನ ನೀಡುತ್ತಿರುವಾಗ ಅವರ ಮಾತುಗಳಲ್ಲಿ ಕೊಂಕಣಿ ಖಾರ್ವಿ ಸಮಾಜ ಅಭಿವೃದ್ಧಿಯಾಗಬೇಕು ಎಂಬ ಕಳಕಳಿ ವ್ಯಕ್ತವಾಗುತ್ತಿತ್ತು.

ನಮ್ಮ ಸಮಾಜದ ಹೆಮ್ಮೆಯ ಹಬ್ಬವಾದ ಹೋಳಿಹಬ್ಬಕ್ಕೆ ಪೌರಾಣಿಕ ಹಿನ್ನಲೆಯಿದ್ದು ಪರಶಿವನ ಮಹಿಮೆಯುಳ್ಳ ಅಪೂರ್ವ ಕಥಾನಕದ ಹೋಳಿಹಬ್ಬದಲ್ಲಿ ಮನುಷ್ಯ ತನ್ನ ಕಾಮನೆಗಳನ್ನು ಜಯಿಸಬೇಕು ಎಂಬ ಅರ್ಥಪೂರ್ಣ ಸಂದೇಶವಿದ್ದು ಇದರ ಪವಿತ್ರ ಸಂದೇಶಕ್ಕೆ ಅನುಗುಣವಾಗಿ ಸಂಪ್ರದಾಯಬದ್ದವಾಗಿ ಹೋಳಿಹಬ್ಬವನ್ನು ಆಚರಿಸಬೇಕೇಂದು ಪೂಜ್ಯ ಸ್ವಾಮೀಜಿಯವರು ಅಭಿಮತ ವ್ಯಕ್ತಪಡಿಸುತ್ತಾರೆ.

ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಂಡು ತಮ್ಮ ಅಮೂಲ್ಯ ನುಡಿಮುತ್ತುಗಳಿಂದ ಪ್ರೇರಣೆ ನೀಡಿ ಸ್ವಾಮೀಜಿಯವರು ನಮ್ಮನ್ನು ಕಳುಹಿಸಿಕೊಡಲು ಮರಾಠಿ ಸಮಾಜದ ಯುವಕರನ್ನು ಕಳುಹಿಸಿಕೊಟ್ಟು ನಮಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು. ಸ್ವಾಮೀಜಿಯವರು ನೆಲೆಸಿರುವ ಈ ಅರಣ್ಯ ಪ್ರದೇಶದಲ್ಲಿ ಕುಟೀರದ ಸಮೀಪ ಆಗಾಗ ಹುಲಿ, ಚಿರತೆ, ಕರಡಿಗಳು ಕಾಣಿಸಿಕೊಂಡರೂ ಇದುವರೆಗೂ ಅವುಗಳಿಂದ ಯಾವುದೇ ತೊಂದರೆಯಾಗಿಲ್ಲವೆಂದು ಹೇಳುತ್ತಾರೆ. ಸ್ವಾಮೀಜಿಗಳಿಗೆ ಸಾಗರ ಸೊರಬ ಸಮಾಜ ಭಾಂಧವರು ಪಾದುಕೆ, ಮರದ ಪ್ಲೇಟ್, ಮರದ ಲೋಟ ಮತ್ತು ಮರದ ಕಮಂಡಲಗಳನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಿದ್ದಾರೆ.

ಕೊಡಚಾದ್ರಿಯ ಚಿತ್ರಮೂಲದಲ್ಲಿ ನನ್ನ ಮತ್ತು ಸ್ವಾಮೀಜಿಯವರ ಭೇಟಿ ಸುಮಾರು 16 ವರ್ಷಗಳ ಹಿಂದೆ ನಡೆದಿತ್ತು. ದೈವಕೃಪೆಯಂತೆ ಮತ್ತೆ ಅವರನ್ನು ಗೇರುಸೊಪ್ಪದ ನಿನ್ನೂರಿನಲ್ಲಿ ಭೇಟಿಯಾಗಿ ಆಶೀರ್ವಚನ ಪಡೆದಿದ್ದು ನಮ್ಮೆಲ್ಲರ ಪರಮ ಸೌಭಾಗ್ಯವೆನ್ನಬಹುದು. ಈ ಪುಣ್ಯ ಕಾರ್ಯದ ಸಾರಥ್ಯವನ್ನು ವಹಿಸಿ ಮುನ್ನೆಡೆಸಿದ ಶ್ರೀ ಮಾಧವ ಖಾರ್ವಿಯವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲೇ ಬೇಕು. ಈ ಇಳಿ ವಯಸ್ಸಿನಲ್ಲೂ ಅವರ ದೃಡತೆ, ಸೇವಾಮನೋಭಾವ ಮತ್ತು ಕ್ರಿಯಾಶೀಲತೆ ಶ್ಲಾಘನೀಯ. ಸ್ವಾಮೀಜಿಯವರನ್ನು ಭೇಟಿ ಮಾಡಿ ಮರಳುವಾಗ ರಾತ್ರಿಯಾಗಿತ್ತು. ಬರುವಾಗ ಮಳೆ ಬಂದಿದ್ದರಿಂದ ಶರಾವತಿಯ ಉಪನದಿ ತುಂಬಿ ರಭಸದಿಂದ ಹರಿಯುತ್ತಿತ್ತು. ಹೃದಯವಂತ ಮರಾಠಿ ಸಮುದಾಯದ ಸುಮಾರು 10 ಜನರು ನಮ್ಮನ್ನು ದಟ್ಟಾರಣ್ಯದ ಆ ಒಂದು ಕತ್ತಲೆಯಲ್ಲಿ ಸುಲಭವಾಗಿ ನದಿ ದಾಟಿಸಿದರು. ಅವರ ಉಪಕಾರವನ್ನಂತೂ ಮರೆಯಲು ಸಾಧ್ಯವಿಲ್ಲ.

ಲೌಕಿಕ ಜಗತ್ತಿನ ಪಾರಮಾರ್ಥಿಕ ಸತ್ಯವನ್ನು ತನ್ನ ಆಧ್ಯಾತ್ಮಿಕ ಕ್ಷೇತ್ರದ ಅಪಾರ ಅನುಭೂತಿಯೊಂದಿಗೆ ಪ್ರಸ್ತುತ ಪಡಿಸುವ ಶ್ರೀ ಸಾಯಿಮುನಿ ಸ್ವಾಮೀಜಿಯವರು ನಮ್ಮ ಸಮಾಜಕ್ಕೆ ಅತ್ಯುತ್ತಮ ಸಂದೇಶ ನೀಡಿದ್ದಾರೆ. ಅವರ ಮಾರ್ಗದರ್ಶನ ಮತ್ತು ಆಶೀರ್ವಾದ ಸದಾಕಾಲ ನಮ್ಮ ಕೊಂಕಣಿ ಖಾರ್ವಿ ಸಮಾಜದ ಮೇಲಿರಲಿ ಎಂಬ ಪ್ರಾಮಾಣಿಕ ಆಪೇಕ್ಷೆ ನಮ್ಮದಾಗಿದೆ.

ಸುಧಾಕರ್ ಖಾರ್ವಿ
Editor
www.kharvionline.com

One thought on “ಆಧ್ಯಾತ್ಮ ದಶನದಲ್ಲಿ ಖಾರ್ವಿ ಸಮಾಜದ ಶ್ರೀ ಸಾಯಿಮುನಿ ಸ್ವಾಮೀಜಿ

  1. ಸ್ವಾಮೀಜಿಯವರಿಂದ ಮುಂದೊಂದು ದಿನ ಆಧ್ಯಾತ್ಮ ಮತ್ತು ಧರ್ಮದ ಮಾರ್ಗದರ್ಶನ ಮತ್ತು ಆಶೀರ್ವಾದ ನಮ್ಮ ಕೊಂಕಣಿ ಖಾರ್ವಿ ಸಮಾಜಕ್ಕೆ ಸಿಗಲಿ ಎಂದು ಆಶಿಸುತ್ತೇನೆ.
    ಹಾಗೆ ಇಂಥ ಮಹಾನ್ ಚೇತನರನ್ನು ಭೇಟಿಯಾಗಿ ನಮಗೆ ಪರಿಚಯಿಸಿದ ಹಿರಿಯರಾದ ಶ್ರೀಯುತ ಮಾಧವ ಖಾರ್ವಿ ಅವರಿಗೆ ಮತ್ತು kharvionline ತಂಡಕ್ಕೆ ವಂದನೆಗಳು.

Leave a Reply

Your email address will not be published. Required fields are marked *