ಹಾಡು ಹಸಿರಾಗಿ ಜೀವ ಮಣ್ಣಾದ ಕಥೆ

ಎರಡು ವರ್ಷಗಳ ಹಿಂದೆ ಮೃತಪಟ್ಟ ಕುಂದಾಪುರದ ಬೀದಿ ಗಾಯಕ ರಾಕ್ ಸ್ಟಾರ್ ಎಂದೇ ಖ್ಯಾತಿಗಳಿಸಿದ ವೈಕುಂಠನ ಬಗ್ಗೆ ತಮಗೆಲ್ಲ ತಿಳಿದಿರಬಹುದು.ಅಂದು ಸಾಮಾಜಿಕ ಜಾಲತಾಣಗಳಲ್ಲಿ ವೈಕುಂಠನ ಹವಾ ದೊಡ್ಡ ಮಟ್ಟದಲ್ಲಿ ಸೃಷ್ಟಿಯಾಗಿತ್ತು. ಅವನಿಗೆ ಲಕ್ಷಾಂತರ ಅಭಿಮಾನಿಗಳು ಇದ್ದರು.ಆತ ತನ್ನದೇ ಶೈಲಿಯಲ್ಲಿ ಪದ್ಯವನ್ನು ಕಟ್ಟಿ ಹಾಡುತ್ತಿದ್ದ ರೀಮೀಕ್ಸ್ ಮಾಡುತ್ತಿದ ಜನರನ್ನು ರಂಜಿಸುತ್ತಿದ್ದ ಯಾವುದೇ ಹಾಡಿರಲಿ ಅದು ಕನ್ನಡ ಹಿಂದಿ ಚಿತ್ರಗೀತೆಯಿರಲಿ, ಜನಪದ ಗೀತೆಯಿರಲಿ,ಭಕ್ತಿಗೀತೆಯಿರಲಿ ವೈಕುಂಠನ ಕಂಠಸಿರಿಯಲ್ಲಿ ಅದ್ಭುತವಾಗಿ ಮೂಡಿ ಬರುತ್ತಿತ್ತು. ಕುಂದಾಪುರ ಕನ್ನಡದ ಹಾಸ್ಯದ ಮಾತುಗಳು ಬಲು ರಂಜನೀಯವಾಗಿರುತ್ತಿತ್ತು.

ಹಾಡುವಾಗ ಬೆಂಕಿಪೊಟ್ನ, ಪ್ಲಾಸ್ಟಿಕ್ ಬಾಟಲ್, ಮೇಜು ಕುರ್ಚಿ, ವಾಹನ ಹೀಗೆ ಅದನ್ನು ಬಳಸಿಕೊಂಡು ತಬಲಾ ನಾದವನ್ನು ಲಯಬದ್ಧವಾಗಿ ಹೊರಹೊಮ್ಮಿಸುತ್ತಿದ್ದ ತನ್ನ ಖಾಸಗಿ ಬದುಕಿನ ಅಧ್ವಾನಗಳಿಂದ ನೊಂದುಕೊಂಡ ಆತನಿಗೆ ಕೊಂಚ ಮಟ್ಟಿಗೆ ಮಾನಸಿಕ ವಿಕಲ್ಪ ಉಂಟಾಗಿತ್ತು ಆದರೆ ದೈವದತ್ತವಾಗಿ ಆತನಿಗೆ ಸಿದ್ದಿಯಾದ ಹಾಡುಗಾರಿಕೆ ಅದೆಲ್ಲವನ್ನು ಮರೆಮಾಚಿತ್ತು. ತನ್ನೆಲ್ಲಾ ನೋವುಗಳನ್ನು ನುಂಗಿ ಕೊಂಡು ವೈಕುಂಠ ಎದೆ ತುಂಬಿಕೊಂಡು ಹಾಡುತ್ತಿದ್ದ ನಗು ನಗುತ್ತಲೇ ಹಾಡುತ್ತಿದ್ದ ಆದರೆ ಆತನ ನಗುವಿನ ಹಿಂದಿನ ಸಂಕಟವನ್ನು ಮಾತ್ರ ಜನರು ಅರ್ಥ ಮಾಡಿಕೊಳ್ಳಲೇ ಇಲ್ಲ ಆತ ಹೀಗೆ ಹಾಡುತ್ತಿರುವಾಗಲೇ ಕೆಲವರು ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡತೊಡಗಿದರು. ಕೆಲವರು ಟ್ರೋಲ್ ಮಾಡಿದರು. ಇವರೆಲ್ಲರಿಗೂ ವೈಕುಂಠನ ಗಾಯನ ಪ್ರತಿಭೆಯಿಂದ ಲಕ್ಷಾಂತರ ವೀವ್ಸ್ ಗಳು ಬಂದವು.

ಕೆಲವರು ಹಣ ಮಾಡಿಕೊಂಡರು ವೈಕುಂಠ ಜನಪ್ರಿಯನಾಗಿದ್ದ ಸಹೃದಯಿಗಳು ಆತನಿಗೆ ಹಣ, ಊಟ ಬಟ್ಟೆ ಬರೆಗಳನ್ನು ನೀಡಿ ಸಹಾಯ ಮಾಡುತ್ತಿದ್ದರು ಕುಂದಾಪುರ ಗಾಂಧಿ ಮೈದಾನ ಮತ್ತು ಪಶು ಆಸ್ಪತ್ರೆ ವಠಾರ ಆತನ ಆಶ್ರಯ ತಾಣವಾಗಿತ್ತು ಆದರೆ ಯಾವಾಗ ವೈಕುಂಠನ ಮೇಲೆ ವಿಕೃತ ಮನುಷ್ಯರ ಕಾಕ ದೃಷ್ಟಿ ಬಿತ್ತೋ ಆವಾಗಿಂದ ಆತನ ಬದುಕು ಅಧಪತನದತ್ತ ಸಾಗತೊಡಗಿತು ಈ ವಿಕೃತ ಮನುಷ್ಯರು ವೈಕುಂಠನನ್ನು ಕಾಮಿಡಿ ಫೀಸ್ ರೂಪದಲ್ಲಿ ದುರುಪಯೋಗ ಪಡಿಸಿಕೊಳ್ಳಲಾರಂಭಿಸಿದರು. ಆತನಿಗೆ ಕಂಠಪೂರ್ತಿ ಹೆಂಡ ಕುಡಿಸಿ ಮೊಬೈಲ್ ಮೂಲಕ ತಮ್ಮ ಸ್ನೇಹಿತರಿಗೆ, ಅವರಿವರಿಗೆ ಬೈಯಲು ಹೇಳಿ ವಿಕೃತ ಆನಂದ ಪಡುತ್ತಿದ್ದರು. ಇಂದಿರಾ ಕ್ಯಾಂಟೀನ್ ಬಳಿ ಚಾ ಕುಡಿಯಲು ಬರುತ್ತಿದ್ದ ವಯೋವೃದ್ದರ ಮೇಲೆ ವೈಕುಂಠನನ್ನು ದೂಡಿ ಹಾಕಿ ಜಗಳ ಉಂಟು ಮಾಡುವುದು, ಅಕ್ಕಪಕ್ಕದ ಊರುಗಳಿಗೆ ಹೋಗಿ ಅನಾವಶ್ಯಕ ಕೀಟಲೆಗಳನ್ನು ವೈಕುಂಠನಿಂದ ಮಾಡಿಸಿಕೊಂಡು ವಿಕೃತಿ ಮೆರೆಯುತ್ತಿದ್ದರು.

ಈ ನಡುವೆ ಆತನನ್ನು ರಿಯಾಲಿಟಿ ಶೋ ಗೆ ಪರಿಚಯ ಮಾಡಿಸಿ ಆತನ ಗಾಯನ ಪ್ರತಿಭೆಯನ್ನು ಅನಾವರಣಗೊಳಿಸಬೇಕೆಂಬ ಸದ್ದುದ್ದೇಶದಿಂದ ಸಾಕಷ್ಟು ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ. ಅದಾಗಲೇ ಆತ ವಿಕೃತ ಮನಸ್ಥಿತಿಯವರ ಕೃಪೆಯಿಂದ ಸಂಪೂರ್ಣ ಮದ್ಯ ವಸನಿಯಾಗಿ ಪರಿವರ್ತನೆಗೊಂಡಿದ್ದ. ಹಾಡು ಹಾಡುವುದು ಬಿಡಿ ಆತನಿಗೆ ನಿಂತುಕೊಳ್ಳಲು ತ್ರಾಣವಿರಲಿಲ್ಲ ಕೈಕಾಲು ನಡುಗುತ್ತಿತ್ತು ಸಂಪೂರ್ಣ ಶಕ್ತಿಹೀನನಾಗಿ ಪಶುವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಅಸ್ವಸ್ಥತೆಯಿಂದ ನರಳುತ್ತಾ ಬಿದ್ದಿದ್ದ ಪುಣ್ಮಾತ್ಮರಾದ ಸಮಾಜ ಸೇವಕ ರಂಜಿತ್ ಹೆಂಗವಳ್ಳಿ ಹಾಗೂ ಅವರ ಸ್ನೇಹಿತರು ಬಹಳ ಕಾಳಜಿಯಿಂದ ವೈಕುಂಠನನ್ನು ಉಡುಪಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು ಆದರೆ ಆತ ಬಹು ಅಂಗಾಂಗ ವೈಪಲ್ಯದಿಂದ ಧಾರುಣವಾಗಿ ಮೃತಪಟ್ಟ.ಆತನ ಹಾಡುಗಳು ಮತ್ತು ಹಾಸ್ಯಭರಿತ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಹಣ ಮಾಡಿಕೊಂಡವರು ಯಾರೂ ವೈಕುಂಠ ಕಾಯಿಲೆಯಿಂದ ನರಳುತ್ತಿರುವಾಗ ಬರಲೇ ಇಲ್ಲ. ಕನಿಷ್ಠ ಪಕ್ಷ ಆತನಿಗೆ ಸ್ವಲ್ಪ ಹಣವನ್ನು ಆತನ ಚಿಕಿತ್ಸೆಗೆ ಕೊಟ್ಟಿದ್ದರೂ ಸಹಾಯವಾಗುತ್ತಿತ್ತು. ಬಳಸಿ ಬಿಸಾಡುವ ಬಾಳೆಎಲೆ ಪರಿಯಲ್ಲಿ ವೈಕುಂಠನ ಜೀವನ ನೂಚ್ಚೂ ನೂರಾಯಿತು.

ಸಾವಿನಲ್ಲೂ ಆತನಿಗೆ ನ್ಯಾಯ ಸಿಗಲೇ ಇಲ್ಲ ವೈಕುಂಠ ಎಂಬ ಬೀದಿ ಗಾಯಕನ ಹಾಡು ಹಸಿರಾಗಿ ಜೀವ ಮಣ್ಣಾಯಿತು. ಆತನನ್ನು ಸಮರ್ಪಕವಾಗಿ ಬಳಸಿಕೊಂಡಿದ್ದರೆ ಗಾನ ಪ್ರಪಂಚಕ್ಕೆ ಕಂಚಿನ ಕಂಠದ ಗಾಯಕನೊಬ್ಬ ದೊರಕುತ್ತಿದ್ದ. ಆದರೆ ವಿಕೃತ ಮನಸ್ಸುಗಳು ಅದಕ್ಕೆ ಅವಕಾಶವನ್ನೇ ನೀಡಲಿಲ್ಲ ತನ್ನೆಲ್ಲಾ ನೋವು ಸಂಕಟಗಳನ್ನು ಅದುಮಿಟ್ಟುಕೊಂಡು ಜನರನ್ನು ತನ್ನ ಹಾಡಿನ ಮೂಲಕ ರಂಜಿಸುತ್ತಿದ್ದ ಬಡ ಗಾಯಕನೊಬ್ಬನ ಬದುಕು ಹೀಗೆ ದಾರುಣ ಅಂತ್ಯ ಕಂಡಿತ್ತು.

ಆತ ಮೃತಪಟ್ಟು ನವೆಂಬರ್ 19 ಕ್ಕೆ ಎರಡು ವರ್ಷವಾಗುತ್ತದೆ ವೈಕುಂಠ ಸೆಲೆಬ್ರಿಟಿ ಆಗಿದ್ದರೆ ವಾರದ ಮೊದಲೇ ನಮ್ಮ ಸುದ್ದಿ ದೃಶ್ಯ ಮಾಧ್ಯಮಗಳಲ್ಲಿ ವಿವಿಧ ವರದಿಗಳು, ಕಾರ್ಯಕ್ರಮಗಳು ಬಿತ್ತರವಾಗುತ್ತಿದ್ದವು ಆದರೆ ವೈಕುಂಠ ನತದೃಷ್ಟ, ಬಡವ ಮತ್ತು ಅಮಾಯಕನಾಗಿರುವುದರಿಂದ ಎಲ್ಲರೂ ಅವನನ್ನು ಮರೆತು ಬಿಟ್ಟಿದ್ದಾರೆ. ಇದೇ ಬದುಕಿನ ವಿಪರ್ಯಾಸ ಯಾರೇ ಆಗಲಿ ಮತ್ತೊಬ್ಬರ ಬದುಕನ್ನು ಲಘುವಾಗಿ ಪರಿಗಣಿಸಬಾರದು ತಮ್ಮ ತೆವಲು , ವಿಕೃತಿ ಮೆರೆಯಲು ಅಮಾಯಕರನ್ನು ದುರುಪಯೋಗ ಮಾಡಿಕೊಳ್ಳುವುದು ನೀಚತನದ ಪರಮಾವಧಿ. ನಾಳೆ ಇದೇ ಪರಿಸ್ಥಿತಿ ಅವರಿಗೂ ಬರಬಹುದು ಕಾಲ ಎಲ್ಲರ ಕಾಲು ಎಳೆಯುತ್ತದೆ ಅದರಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ನೋವು ಸಂಕಟ ದುಖಃ ದುಮ್ಮಾನಗಳ ನಡುವೆ ಬದುಕುತ್ತಿರುವ ಮನುಷ್ಯನ ಬಗ್ಗೆ ಕನಿಕರವಿದ್ದರೆ ತಮ್ಮ ಕೈಲಾದ ಸಹಾಯ ಮಾಡುವುದು ಮಾನವೀಯತೆ. ಸಹಾಯ ಮಾಡಲು ಸಾಧ್ಯವಿಲ್ಲದಿದ್ದರೆ ಆ ವ್ಯಕ್ತಿಯನ್ನು ಅವನಷ್ಟಕ್ಕೆ ಅವನನ್ನು ಬಿಟ್ಟರೆ ಸಾಕು. ಅವನೇ ತನ್ನ ಕಷ್ಟವನ್ನು ಸಹಿಸಿಕೊಂಡು ಆ ಕಷ್ಟದೊಂದಿಗೆ ಬದುಕುವ ಹೊಂದಾಣಿಕೆಯನ್ನು ಕಂಡುಕೊಳ್ಳುತ್ತಾನೆ. ಅದನ್ನು ಬಿಟ್ಟು ಆತನನ್ನು ಲೇವಡಿ ಮಾಡುವುದು, ಆತನ ಬದುಕನ್ನು ಜರ್ಜರಿತಗೊಳಿಸುವವರು ಕ್ರೂರ ಮೃಗಗಳಿಕ್ಕಿಂತಲೂ ಕಡೆ.

ವೈಕುಂಠ ಇಂದು ನಮ್ಮ ನಡುವೆ ಇಲ್ಲ.ಆತ ಹಾಡಿರುವ ಹಾಡುಗಳು ಹಚ್ಚ ಹಸಿರಾಗಿದೆ. ಮುಂದೆ ಯಾವ ಪ್ರತಿಭೆಗೂ ಈ ಪರಿಯ ದೌರ್ಭಾಗ್ಯ ಬಾರದಿರಲಿ ಎಂದು ಆಶಿಸುವಾ.

ಉಮಾಕಾಂತ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *