ಜೀವವೈವಿಧ್ಯತೆಗಳ ವಿಶ್ವರೂಪ ನೇತ್ರಾಣಿ ದ್ವೀಪ

ಜೀವವೈವಿಧ್ಯತೆಗಳ ವಿಶ್ವರೂಪ ನೇತ್ರಾಣಿ ದ್ವೀಪ

ನೇತ್ರಾಣಿ ಭಟ್ಕಳ ತಾಲೂಕಿನ ಮುರುಡೇಶ್ವರ ಬಳಿ ಇರುವ ಸುಂದರ ದ್ವೀಪ ಇದು ಅಪರೂಪದ ಜೀವ ವೈವಿಧ್ಯಗಳ ಅಪೂರ್ವ ತಾಣ ಮುರುಡೇಶ್ವರದಿಂದ ಸಮುದ್ರ ಮಧ್ಯದಲ್ಲಿ ಇರುವ ಈ ದ್ವೀಪ ತಲುಪಲು ಸುಮಾರು 19 ಕಿ.ಮೀ ದೂರ ಕ್ರಮಿಸಬೇಕು ಸರಿ ಸುಮಾರು ಹದಿನೈದು ಎಕ್ರೆಯಷ್ಟು ವಿಸ್ತೀರ್ಣದ ಈ ದ್ವೀಪ ಪ್ರದೇಶ ಹಲವು ಕೌತುಕಗಳ ತಾಣ ನೇತ್ರಾಣಿಯ ಸಮುದ್ರ ಜೀವ ವಿಜ್ಞಾನದ ದೃಷ್ಟಿಯಿಂದ ಅತ್ಯಂತ ಶ್ರೀಮಂತ ಪ್ರದೇಶ ಅತ್ಯಧಿಕ ಜೀವವೈವಿಧ್ಯತೆಗಳು ನೆಲೆಗೊಂಡ ತಾಣ ಅತ್ಯಧಿಕ ಉತ್ಪಾದನಾ ಸಾಮರ್ಥ್ಯವಿರುವ ಪ್ರಪಂಚದ ಸಮುದ್ರಗಳಲ್ಲೊಂದಾಗಿದೆ ನೇತ್ರಾಣಿ ದ್ವೀಪದ ಸಮುದ್ರ ಪಾರಿಸಾರಿಕ ಶ್ರೇಷ್ಠತೆಯನ್ನು ಪರಿಗಣಿಸಿ ನೇತ್ರಾಣಿ ದ್ವೀಪವನ್ನು ಸಂರಕ್ಷಿತ ಪ್ರದೇಶವನ್ನಾಗಿ ಘೋಷಣೆ ಮಾಡಬೇಕು ಎಂದು ಪರಿಸರವಾದಿಗಳು ನ್ಯಾಯಲಯದಲ್ಲಿ ದಾವೆ ಹೂಡಿದ್ದರು ಆದರೆ ಭಾರತೀಯ ನೌಕಾಪಡೆ ತಮಗೆ ಸಮರಾಭಾಸ್ಯ ಕೈಗೊಳ್ಳಲು ನೇತ್ರಾಣಿ ದ್ವೀಪ ಪರಿಸರ ಬೇಕೆಂದು ಪ್ರತಿವಾದ ಮಂಡಿಸಿದ್ದರಿಂದ ನ್ಯಾಯಲಯ ಈ ದ್ವೀಪವನ್ನು ನೌಕಾಪಡೆಯವರ ಸುರ್ಪಧಿಗೆ ಕೊಟ್ಟಿತ್ತು.

ಅಲ್ಲಿಯವರೆಗೂ ನೇತ್ರಾಣಿ ದ್ವೀಪಕ್ಕೆ ಹೋಗಲು ಮುಕ್ತ ಸ್ವಾತಂತ್ರ್ಯವಿತ್ತು ಆದರೆ ನೌಕಾಪಡೆಯ ಸ್ವಾಧೀನಕ್ಕೆ ಬಂದ ಮೇಲೆ ಈ ದ್ವೀಪಕ್ಕೆ ಹೋಗಲು ಪೂರ್ವಾನುಮತಿಯ ನಿರ್ಬಂಧವಿದೆ ದ್ವೀಪದಲ್ಲಿ ಮೀನುಗಾರರು ಶ್ರೀ ಜಟ್ಟಿಗೇಶ್ವರ ದೇವರನ್ನು ಆರಾಧಿಸಿಕೊಂಡು ಬಂದಿದ್ದಾರೆ ಪ್ರತಿವರ್ಷ ಮೀನುಗಾರ ಸಮುದಾಯದವರು ಶ್ರೀ ಜಟ್ಟಿಗೇಶ್ವರನಿಗೆ ಪೂಜೆ ಸಲ್ಲಿಸಿ ಸಮೃದ್ಧಿ ಮತ್ತು ಸುರಕ್ಷತೆಗಾಗಿ ಪ್ರಾರ್ಥಿಸುತ್ತಾರೆ ಅಚ್ಚರಿಯೆಂಬಂತೆ ನೇತ್ರಾಣಿ ದ್ವೀಪದಲ್ಲಿ ಸಿಹಿನೀರಿನ ಬಾವಿಯಿದ್ದು ಕುಡಿಯಲು ಯೋಗ್ಯವಾಗಿದೆ ಎಂದು ಹೇಳುತ್ತಾರೆ ಸುತ್ತ ಸಮುದ್ರದ ಅಗಾಧ ಜಲರಾಶಿಯಿದ್ದರೂ ಇಲ್ಲಿ ಮಾತ್ರ ಸಿಹಿನೀರಿನ ಬಾವಿ ಇರುವುದು ಪವಾಡವೇ ಸರಿ.

ಈ ಹಿಂದೆ ಅಂದಿನ ಕೇಂದ್ರ ಸರಕಾರ ತಮಿಳುನಾಡಿನ ಪಾಕ್ ಜಲಸಂಧಿ ಹಾಗೂ ಮನ್ನಾರ್ ಖಾರಿ ಪ್ರದೇಶದಲ್ಲಿ ಸೇತುಸಮುದ್ರಂ ಯೋಜನೆ ಕೈಗೊಂಡಿತ್ತು.ಆದರೆ ದೇಶಾದ್ಯಂತ ನಡೆದ ಪ್ರತಿಭಟನೆಯ ಫಲವಾಗಿ ಸರ್ಕಾರ ಆ ಯೋಜನೆಯನ್ನು ಕೈಬಿಟ್ಟಿತ್ತು.ಪರಿಣಾಮವಾಗಿ ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಮಂತ್ರಾಲಯ ಹಾಗೂ ತಮಿಳುನಾಡು ಅರಣ್ಯ ಇಲಾಖೆ ಮನ್ನಾರ್ ಖಾರಿ ಮತ್ತು ಕಾಲುವೆಯ ನಡುವಿನ 21 ದ್ವೀಪ ಪ್ರದೇಶಗಳನ್ನು ರಾಷ್ಟ್ರೀಯ ಸಾಗರೋದ್ಯಾನವೆಂದು ಘೋಷಿಸಿದೆ ಇದೇ ಮಾದರಿಯಲ್ಲಿ ಜೀವವೈವಿಧ್ಯಗಳ ತಾಣವಾಗಿರುವ ನೇತ್ರಾಣಿ ದ್ವೀಪವನ್ನು ಉಳಿಸಿಕೊಳ್ಳಲು ಚಳವಳಿ ನಡೆಯಬೇಕಾಗಿತ್ತು ದುರದೃಷ್ಟವಶಾತ್ ಆ ಪ್ರಯತ್ನವಾಗಲಿಲ್ಲ ನೇತ್ರಾಣಿ ದ್ವೀಪದ ಸಮುದ್ರದಲ್ಲಿ ಇಂದು ಸ್ಕೂಭಾ ಡ್ರೈವಿಂಗ್ ನಡೆಯುತ್ತದೆ ನೌಕಾಪಡೆಯವರು ಸಮರಾಭಾಸ್ಯಕ್ಕಾಗಿ ಮದ್ದುಗುಂಡುಗಳನ್ನು ಸಿಡಿಸುತ್ತಾರೆ ಇಲ್ಲಿ ಅಪರೂಪದ ಹವಳದ ದಿಬ್ಬಗಳಿವೆ ಇದು ಅತಿ ಹೆಚ್ಚಿನ ಜೀವವೈವಿಧ್ಯತೆಯನ್ನು ಮತ್ತು ಹೆಚ್ಚಿನ ಉತ್ಪಾದಕತೆಯನ್ನು ಹೊಂದಿರುವ ಪ್ರದೇಶಗಳಾಗಿವೆ ಎಲ್ಲಾ ಜಾತಿಯ ಮೀನುಗಳು ಮೂರನೇ ಒಂದು ಭಾಗದಷ್ಟು ಹೇಗೋ ಒಂದು ರೀತಿಯಲ್ಲಿ ಹವಳದ ದಿಬ್ಬವನ್ನು ಅವಲಂಬಿಸಿರುತ್ತದೆ ಈ ಹವಳದ ದಿಬ್ಬಗಳು ಕರಾವಳಿಯನ್ನು ಸವಕಳಿಯಿಂದ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ನೇತ್ರಾಣಿ ಜಲರಾಶಿಯಲ್ಲಿ ಒಟ್ಟು 800 ಕ್ಕೂ ಹೆಚ್ಚು ಮತ್ಸ್ಯ ಪ್ರಭೇದಗಳನ್ನು ಗುರುತಿಸಲಾಗಿದ್ದು ಅವುಗಳಲ್ಲಿ 300 ಕ್ಕೂ ಹೆಚ್ಚು ಪ್ರಭೇದಗಳು ವಾಣಿಜ್ಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. 37 ಜಾತಿಯ ಹವಳದ ಪ್ರಭೇದಗಳನ್ನು ಇಲ್ಲಿ ಗುರುತಿಸಲಾಗಿದೆ. 32 ಪ್ರಭೇದಗಳ ಶೈವಲಗಳನ್ನು ಗುರುತಿಸಲಾಗಿದೆ. ಈ ಶೈವಲಗಳು ಭವಿಷ್ಯದಲ್ಲಿ ಮನುಷ್ಯರಿಗೆ ಆಹಾರ ರೂಪದಲ್ಲಿ ಉಪಯೋಗವಾಗುವ ಲಕ್ಷಣಗಳಿವೆ. ಮುತ್ತು ಮಳಿ, ಶಂಖದ ಹುಳು, ಕಡಲಸೌತೆ, ಕಡಲಕಳೆಗಳೊಡನೆ ಅಪರೂಪದ ಮತ್ತು ಅಪಾಯಕ್ಕೀಡಾಗಿರುವ ಆಲೀವ್ ರಿಡ್ಲೆ ಕಡಲಾಮೆಗಳು, ಡಾಲ್ಫಿನ್ ಮತ್ತು ಬೃಹತ್ ಗಾತ್ರದ ತಿಮಿಂಗಿಲಗಳು ಇಲ್ಲಿವೆ. ಇದಕ್ಕೆ ದೃಷ್ಟಾಂತವೆಂಬಂತೆ ಇಂದು ನೇತ್ರಾಣಿ ಸಮುದ್ರದಲ್ಲಿ ಬೃಹತ್ ಗಾತ್ರದ ತಿಮಿಂಗಿಲಗಳು ಮೀನುಗಾರರ ಕಣ್ಣಿಗೆ ಗೋಚರವಾಗಿವೆ.

ಭಟ್ಕಳದ ನೇತ್ರಾಣಿ ದ್ವೀಪಕ್ಕೂ ಹೊನ್ನಾವರ ಸಮುದ್ರ ಪರಿಸರಕ್ಕೂ ಕೆಲವೇ ಕೀಮೀ ಗಳ ಅಂತರವಿದೆ. ಈ ಎರಡೂ ಸಮುದ್ರ ಪರಿಸರಗಳು ಅಪರೂಪದ ಮತ್ತು ಅಪೂರ್ವವಾದ ಜೀವವೈವಿಧ್ಯತೆಗಳ ತಾಣವೆಂದು ಪದೇ ಪದೇ ಸಾಬೀತಾಗುತ್ತಿದೆ. ಕೇಳಿಸಿಕೊಳ್ಳಬೇಕಾಗಿದವರಿಗೆ ಸ್ವಲ್ಪವೂ ವ್ಯವಧಾನವಿಲ್ಲ. ಇಂತಹ ಅಪರೂಪದ ಜೀವವೈವಿಧ್ಯತೆಗಳ ಸಮುದ್ರ ಪರಿಸರವು ಬಂದರು ನಿರ್ಮಾಣ ಯೋಜನೆಯಿಂದ ಸರ್ವನಾಶವಾಗಿ ಮೀನುಗಾರರ ಬದುಕು ಮೂರಾಬಟ್ಟೆಯಾಗುವುದರಲ್ಲಿ ಸಂಶಯವೇ ಇಲ್ಲ. ಈ ಬಗ್ಗೆ ಕಳವಳವನ್ನು ಪರಿಸರವಾದಿಗಳು ಎತ್ತುತ್ತಲೇ ಇದ್ದಾರೆ. ಪರಿಣಾಮ ಮಾತ್ರ ಶೂನ್ಯ. ಇಂದು ನೇತ್ರಾಣಿ ಸಮುದ್ರದಲ್ಲಿ ಕಾಣಿಸಿಕೊಂಡ ಬೃಹತ್ ತಿಮಿಂಗಿಲವನ್ನು ಅಪರೂಪದ ಪ್ರಭೇದವೆಂದು ಕಡಲ ವಿಜ್ಞಾನಿಗಳು ಗುರುತಿಸಿದ್ದಾರೆ.

ನೇತ್ರಾಣಿ ದ್ವೀಪ ಹತ್ತು ಹಲವು ಅದ್ಬುತ, ವೈಶಿಷ್ಟ್ಯತೆಗಳ ವಿಶ್ವರೂಪ. ಇಲ್ಲಿಗೆ ಪಯಣಿಸುವುದೆಂದರೆ ರೋಮಾಂಚಕ ಅನುಭವ. ನಮ್ಮ ದೇಶದ ಅತಿ ಮಹತ್ವದ ಜೀವವೈವಿಧ್ಯತೆಗಳ ತಾಣವನ್ನಾಗಿ ಸರ್ಕಾರ ನೇತ್ರಾಣಿ ದ್ವೀಪವನ್ನು ಜೀವವಲಯ ಸಂರಕ್ಷಿತ ಪ್ರದೇಶವನ್ನಾಗಿ ಘೋಷಣೆ ಮಾಡುವುದು ಎಂದಿಕ್ಕಿಂತಲೂ ಇಂದು ಅಗತ್ಯವಾಗಿದೆ.

ಉಮಾಕಾಂತ ಖಾರ್ವಿ ಕುಂದಾಪುರ

2 thoughts on “ಜೀವವೈವಿಧ್ಯತೆಗಳ ವಿಶ್ವರೂಪ ನೇತ್ರಾಣಿ ದ್ವೀಪ

  1. ಬಹಳ ವಿವರವಾದ ಮಾಹಿತಿ… ನಿಜವಾಗಿಯೂ ನೇತ್ರಾಣಿಯ ಬಗ್ಗೆ ಕುತೂಹಲ ಮೂಡಿಸುತ್ತದೆ. ಹಾಗೆ ಸರ್ಕಾರಿ ವ್ಯವಸ್ಥೆ ಸ್ಥಳೀಯರಿಂದ ಭೂಮಿಯನ್ನು ಕಸಿದುಕೊಳ್ಳುವುದನ್ನು ತಿಳಿದು ಬೇಸರವಾಯಿತು.

  2. ಅಪೂರ್ವ ಮಾಹಿತಿಯನ್ನೊಳಗೊಂಡ ಲೇಖನ. ಜಲ ಪರಿಸರದ ಕಾಳಜಿಯೂ ವ್ಯಕ್ತವಾಗಿದೆ‌.ನಮ್ಮನ್ನಾಳುವ ಪ್ರಭುಗಳು ಈ ಲೇಖನ ಓದಿದರೆ ಉತ್ತಮ….

Leave a Reply

Your email address will not be published. Required fields are marked *