ಪ್ರವಾಹ, ಭೂಕಂಪ, ಸುನಾಮಿ, ಚಂಡಮಾರುತ ಮತ್ತು ಬರಗಾಲಗಳು ನಿಸರ್ಗ ಸಹಜವಾದವುಗಳು. ಅದೇನೇಯಾದರೂ ಮಾನವ ಚಟುವಟಿಕೆಗಳಿಂದ ಅವುಗಳು ಸಂಭವಿಸುವ ವೇಗ ಮತ್ತು ಅವುಗಳ ಪರಿಣಾಮದ ತೀವ್ರತೆ ಹೆಚ್ಚುತ್ತದೆ ಇದಕ್ಕೆ ದೃಷ್ಟಾಂತವಾಗಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಯೇ ಸಾಕ್ಷಿಯಾಗಿದೆ.
ಇತಿಹಾಸದಲ್ಲೇ ಕಂಡು ಕೇಳರಿಯದ ಈ ಪರಿಯ ಮೇಘಸ್ಪೋಟ ಸಂಭವಿಸಲು ಕೆಲವೊಂದು ಕಾರಣಗಳು ನಮ್ಮೆದುರು ಅನಾವರಣಗೊಳ್ಳುತ್ತದೆ. ಈ ಮಹಾಮಳೆಗೆ ನಾವು ಪೃಕೃತಿಯನ್ನು ದೂರಿದರೂ ಅಂತಿಮವಾಗಿ ಅದು ನಮ್ಮತ್ತಲ್ಲೇ ಮುಖ ಮಾಡುತ್ತದೆ. ಪವನ ವಿಜ್ಞಾನಿಗಳ ಪ್ರಕಾರ ಈ ಮಹಾಮಳೆಗೆ ಪ್ರಮುಖ ಎರಡು ಕಾರಣಗಳಿವೆ. ಮೊದಲನೆಯದು ಏಕಕಾಲದಲ್ಲಿ ಬಂಗಾಳಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ರೂಪುಗೊಂಡ ಕಡಿಮೆ ಒತ್ತಡ ಪ್ರದೇಶ low pressure area. ಇದರಲ್ಲಿ ಕೇಂದ್ರ ಭಾಗದತ್ತ ಚಲಿಸುವ ತೇವಭರಿತ ಗಾಳಿ ವಾಯುಮಂಡಲದಲ್ಲಿ ಮೇಲೇರಿ ಧಾರಾಕಾರವಾದ ಮಳೆಯಾಗುತ್ತದೆ. ಇದು ಆಂಧ್ರಪ್ರದೇಶದ ಕರಾವಳಿ ಮತ್ತು ತಿರುಪತಿಯಲ್ಲಿ ಆವಾಂತರ ಸೃಷ್ಟಿಸಿ, ತಮಿಳುನಾಡನ್ನೂ ವ್ಯಾಪಿಸಿದೆ. ಅತ್ಯಂತ ವೇಗವಾಗಿ ಅಪ್ರದಕ್ಷಿಣಾಕಾರವಾಗಿ ಸುತ್ತುವ ಈ ವಾಯುಪ್ರವಾಹ ಆಂಧ್ರಪ್ರದೇಶ ಮತ್ತು ತಮಿಳುನಾಡು ಪ್ರದೇಶದಲ್ಲಿ ಕಾಣಿಸಿಕೊಂಡಿದೆ.
ಎರಡನೆಯ ಕಾರಣವನ್ನು ಕಡಲ ತೀರದಾಚೆಯ ಸುಳಿ ಆಫ್ ಶೋರ್ ವರ್ಟೆಕ್ಸ್ ಎಂದು ಗುರುತಿಸಲಾಗಿದೆ. ಈ ಆಫ್ ಶೋರ್ ವರ್ಟೆಕ್ಸ್ ಅರಬ್ಬೀ ಸಮುದ್ರದ ಕಡೆಯಿಂದ ಕೇರಳದ ಕರಾವಳಿ ಮೂಲಕ ಕರ್ನಾಟಕವನ್ನು ಪ್ರವೇಶಿಸಿದೆ. ಪ್ರಬಲವಾಗಿರುವ ಈ ವಾಯುಪ್ರವಾಹವನ್ನು ನಮ್ಮ ಪಶ್ಚಿಮ ಘಟ್ಟಗಳ ಶೋಲಾ ಅರಣ್ಯ ಕಾಡುಗಳು ದುರ್ಬಲವಾಗಿ ತಡೆಗಟ್ಟಿದ್ದರಿಂದ ಮಳೆ ಪಶ್ಚಿಮ ಘಟ್ಟಗಳನ್ನು ದಾಟಿ ಕರ್ನಾಟಕದ ರಾಜಧಾನಿ ಬೆಂಗಳೂರು ಸಹಿತ ಒಳನಾಡು ಪ್ರದೇಶವನ್ನು ಪ್ರವೇಶಿಸಿದೆ. ಪರಿಣಾಮವಾಗಿ ರಾಜ್ಯದ ಕಡಿಮೆ ಮಳೆ ಬೀಳುವ ಮತ್ತು ಬರಪೀಡಿತ ಪ್ರದೇಶಗಳಾದ ಬಳ್ಳಾರಿ, ದಾವಣಗೆರೆ, ಚಿಕ್ಕಬಳ್ಳಾಪುರ, ತುಮಕೂರು ಮುಂತಾದ ಕಡೆ ಕುಂಭದ್ರೋಣ ಮಳೆಯಾಗಿದೆ. ಇಲ್ಲಿನ ಕೆರೆಕಟ್ಟೆಗಳು ತುಂಬಿ ತುಳುಕಾಡಿ ಕೆಲವೊಂದು ಊರನ್ನೇ ಮುಳುಗಿಸಿದೆ. ಉಳಿದಂತೆ ನೋಡುವುದಾದರೆ ಪಶ್ಚಿಮ ಘಟ್ಟಗಳ ಮಲೆನಾಡು ಪ್ರದೇಶ, ಚಿತ್ರದುರ್ಗ, ಗದಗ, ಹಾವೇರಿ, ಬಾಗಲಕೋಟೆ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳು ಮಳೆಯ ಆರ್ಭಟದಿಂದ ನಲುಗಿ ಹೋಗಿದೆ. ರೈತಾಪಿ ಬಂಧುಗಳು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.
ಇದಕ್ಕೆ ಮುಖ್ಯ ಕಾರಣವೇನೆಂದರೆ ಪಶ್ಚಿಮ ಘಟ್ಟಗಳ ಶೋಲಾ ಮಳೆಕಾಡುಗಳು ಸಾಕಷ್ಟು ಪ್ರಮಾಣದಲ್ಲಿ ನಾಶವಾಗಿ ಮಹಾಮಳೆಯ ಸುಳಿಯನ್ನು ತಡೆಯಲಾರದೆ ಬಿಟ್ಟು ಕೊಟ್ಟಿರುವುದು. ಸಾಮಾನ್ಯವಾಗಿ ಮುಂಗಾರು ಮಳೆ ಮೋಡಗಳಿಗೆ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಗಳು ತಡೆಯೊಡ್ಡಿ ಮಳೆ ಸುರಿಯುತ್ತದೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದರೆ ಮಾತ್ರವೇ ಕರಾವಳಿಯ ನದಿತೊರೆಗಳು ತುಂಬಿ ನೆರೆ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕರಾವಳಿಯ ಉಭಯ ಜಿಲ್ಲೆಯ ನದಿಗಳಾದ ಶರಾವತಿ, ವಾರಾಹಿ, ನೇತ್ರಾವತಿಗಳ ಉಗಮ ಸ್ಥಾನ ಪಶ್ಚಿಮ ಘಟ್ಟಗಳು ಎಂಬುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
26 ಜುಲೈ 2005 ರಲ್ಲಿ ಮುಂಬೈಯಲ್ಲಿ ಸಂಭವಿಸಿದ ಮಹಾಮಳೆಯ ಜಲಪ್ರಳಯವನ್ನು ಒಮ್ಮೆ ನೆನಪಿಸಿಕೊಳ್ಳಿ. ಅಂದು ಒಂದೇ ದಿನದಲ್ಲಿ 94.4 ಸೆಂಟಿಮೀಟರ್ ನಷ್ಟು ಮಳೆ ಬಿದ್ದು ಜಲಪ್ರಳಯ ಉಂಟಾಗಿತ್ತು. ಇದರ ಪರಿಣಾಮವಾಗಿ ಮುಂಬೈ ಮಹಾನಗರದಲ್ಲಿ 546 ಜನ ಸತ್ತರು. 4000 ಕೋಟಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಯಿತು.10000 ಖಾಸಗಿ ವಾಹನಗಳು, 37000 ರಿಕ್ಷಾಗಳು, 4500 ಟ್ಯಾಕ್ಸಿಗಳು, 55 ರೈಲುಗಳು ತೀವ್ರವಾಗಿ ಜಖಂಗೊಂಡವು. ರೈಲು ಸಂಚಾರ ನಿಂತು ಹೋಯಿತು ವಿಮಾನ ನಿಲ್ದಾಣಗಳು ಮುಚ್ಚಬೇಕಾಯಿತು ಕಂಡುಕೇಳರಿಯದ ಮಹಾಮಳೆಗೆ ಮುಂಬೈ ತತ್ತರಿಸಿದರೂ ಅಲ್ಲಿನ ಜನ ಚಲ್ತಾ ಹೈ ದುನಿಯಾ ಮನೋಭಾವದ ಧೈರ್ಯಶಾಲಿಗಳಾಗಿದ್ದರಿಂದ ಮುಂಬೈ ಮಹಾನಗರ ಬಹು ಬೇಗ ಚೇತರಿಸಿಕೊಂಡಿತ್ತು. ಈ ಮಹಾಮಳೆಗೆ ಮುಖ್ಯ ಕಾರಣವೆಂದರೆ ಒರಿಸ್ಸಾ ಕಡಲತೀರದಲ್ಲಿ ರೂಪುಗೊಂಡ ಕಡಿಮೆ ಒತ್ತಡ ಪ್ರದೇಶ. ಅದು ಮಧ್ಯಪ್ರದೇಶ ಹಾಗೂ ಛತ್ತೀಸ್ ಗಡ್ ಪ್ರದೇಶಗಳನ್ನು ದಾಟಿ ಮುಂಬೈಯನ್ನು ಪ್ರವೇಶಿಸಿತ್ತು.
ಈ ಜಲಪ್ರಳಯವನ್ನು ಪರಿಸರತಜ್ಞರು ಪೃಕೃತಿ ತೀರಿಸಿಕೊಂಡ ಸೇಡು ಎಂದೇ ವಿಶ್ಲೇಷಿಸಿದ್ದಾರೆ. ಸಮುದ್ರವನ್ನು ಹಿಮ್ಮೆಟ್ಟಿಸಿ ನಗರ ಕಟ್ಟುವ ಭರದಲ್ಲಿ ಪ್ರವಾಹದ ನೀರನ್ನು ತಡೆಗಟ್ಟುವ ತರೀಭೂಮಿ, ರಭಸವನ್ನು ಕಡಿಮೆ ಮಾಡುವ ಕಾಂಡ್ಲಾ ವನಗಳನ್ನು ನಾಶ ಮಾಡಿ ಮಳೆಗಾಲದ ನೀರನ್ನು ಕೊಂಡೊಯ್ಯುವ ನಗರದ ಮೂಲಕ ಸಾಗುವ ಮಿಥಿಯಂತಹ ನದಿಗಳ ಅಗಲವನ್ನು ಕಡಿಮೆ ಮಾಡಿದ ಪರಿಣಾಮ ಇದಾಗಿದೆ. ಇಂತಹುದೇ ಜಲಪ್ರಳಯ ಮಳೆಗಾಲದಲ್ಲಿ 2018 ರಲ್ಲಿ ಕೇರಳ ಮತ್ತು ನಮ್ಮ ರಾಜ್ಯದ ಮುಖ್ಯವಾಗಿ ಕೊಡಗಿನಲ್ಲಿ ಅಪಾರ ಹಾನಿ ಸೃಷ್ಟಿಸಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. 2016 ರಲ್ಲಿ ಕರ್ನಾಟಕದಲ್ಲಿ ವಾಯುಭಾರ ಕುಸಿತದಿಂದಾಗಿ ಅಕಾಲಿಕ ಮಳೆ ಉಂಟಾಗಿತ್ತು. ಅದು ಸರಿಸುಮಾರು ಜನವರಿ ತನಕವೂ ಮುಂದುವರೆದಿತ್ತು. ಪ್ರಸ್ತುತ ಸಂಭವಿಸುತ್ತಿರುವ ಅಕಾಲಿಕ ಮಳೆಯಿಂದಾಗಿ ಹೇಕ್ಟರ್ ಗಟ್ಟಲೆ ಕೃಷಿ ನಾಶವಾಗಿದೆ. ರೈತರ ಬದುಕು ಮೂರಾಬಟ್ಟೆಯಾಗಿದೆ. ಹಲವರ ಪ್ರಾಣ ಬಲಿಯಾಗಿದೆ ಕೋಟ್ಯಾಂತರ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ.
ಮಳೆಯ ಮೂನ್ಸೂಚನೆಯನ್ನು ನೀಡಲು ನಮ್ಮ ದೇಶದ ಪವನ ವಿಜ್ಞಾನ ಇಲಾಖೆ ಪವರ್ ರಿಗ್ರೆಷನ್ ಮಾಡೆಲ್ ಎಂಬ ಐತಿಹಾಸಿಕ ಸಂಖ್ಯಾಕಲನ ವಿಜ್ಞಾನದ ಮಾದರಿಯನ್ನು ಬಳಸಿಕೊಳ್ಳುತ್ತಿದೆ. ಆದರೆ ಈ ಮಾದರಿಯಲ್ಲಿ ಪವನ ವಿಜ್ಞಾನ ಇಲಾಖೆ ನೀಡಿದ ಮಳೆಯ ಮೂನ್ಸೂಚನೆಗಳು ಹೆಚ್ಚಿನ ಬಾರಿ ವಿಫಲವಾಗಿದೆ. ಸಹಜ ಮುಂಗಾರು ಸೂಚನೆ ನೀಡಿದ ವರ್ಷದಲ್ಲಿ ಭೀಕರ ಅನಾವೃಷ್ಟಿ ಸಂಭವಿಸಿದೆ.
ಪಾಶ್ಚಾತ್ಯ ರಾಷ್ಟ್ರಗಳು ಗ್ಲೋಬಲ್ ಸರ್ಕ್ಯೂಲೇಷನ್ ಮಾಡೆಲ್ ತಂತ್ರಜ್ಞಾನವನ್ನು ಬಳಸಿಕೊಂಡು ಮಳೆಯ ಬಗ್ಗೆ ನಿಖರ ಮಾಹಿತಿ ನೀಡುತ್ತದೆ.ಈ ಮಾದರಿಯಲ್ಲಿ ನಿರಂತರವಾಗಿ ಬದಲಾಗುತ್ತಿರುವ ಸಾಗರ ಮತ್ತು ವಾಯುಮಂಡಲದ ಪರಿಸ್ಥಿತಿ ಮತ್ತು 24 ಗಂಟೆಗಳ ಹಿಂದಿನ ಹವಾಗುಣವನ್ನು ಅವಲೋಕಿಸಿ, ಹಠಾತ್ ಏರಿಳಿತಗಳನ್ನು ಗಮನಿಸಿ ಮೂನ್ಸೂಚನೆಯನ್ನು ನೀಡುವ ವ್ಯವಸ್ಥೆಯಿದೆ. ಇತ್ತೀಚೆಗೆ ಈ ವ್ಯವಸ್ಥೆಯನ್ನು ಕೂಡಾ ನಮ್ಮ ದೇಶದಲ್ಲಿ ಆಳವಡಿಸಿಕೊಳ್ಳಲಾಗಿದೆ. ಈಗಾಗಲೇ ಭಾರತ ಸರ್ಕಾರ ದೇಶದ ವಿವಿಧ ಭಾಗಗಳಲ್ಲಿ ಡಾಪ್ಲರ್ ರಾಡಾರ್ ವ್ಯವಸ್ಥೆ ಹಾಗೂ ಉಷ್ಣತೆ, ಮಳೆಯ ಪ್ರಮಾಣ, ಗಾಳಿಯ ವೇಗ ಹಾಗೂ ಆರ್ದ್ರತೆಗಳನ್ನು ಅಳೆಯುವ ಸ್ವಯಂಚಾಲಿತ ಹವಮಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೂ ಸದಾಕಾಲ ಪ್ರಕ್ಷುಬ್ದವಾಗಿರುವ ವಾಯುಮಂಡಲ, ಪ್ರತಿಕ್ಷಣದಲ್ಲೂ ಬದಲಾವಣೆಯ ಸಾಧ್ಯತೆಯಿರುವ ಸಾಗರ, ಉಷ್ಣವಲಯದ ಹವೆಯನ್ನು ರೂಪಿಸುವ ಪರಿಸರದ ಸಂಕೀರ್ಣತೆಯಿಂದಾಗಿ ಹವಾಗುಣದ ನಿಖರ ಮಾಹಿತಿ ಕಷ್ಟಸಾಧ್ಯವಾಗಿದೆ. ಇದಕ್ಕೆ ಮುಖ್ಯ ಕಾರಣ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಜಾಗತಿಕ ಹವಮಾನ. ಕೈಗಾರಿಕರಣ, ಜನಸಂಖ್ಯಾ ಹೆಚ್ಚಳ, ಮೀತಿಮೀರಿದ ಅಭಿವೃದ್ಧಿ ಕಾರ್ಯಗಳು, ಅಣೆಕಟ್ಟು ನಿರ್ಮಾಣ, ಅರಣ್ಯ ನಾಶ, ನೈಸರ್ಗಿಕ ಸಂಪನ್ಮೂಲಗಳ ಶೋಷಣೆ ನಮ್ಮ ಪರಿಸರವನ್ನು ತೀವ್ರತರದಲ್ಲಿ ಭಾಧಿಸಿದೆ. ಪರಿಣಾಮವಾಗಿ ಜಾಗತಿಕ ಹವಾಮಾನ ತ್ವರಿತಗತಿಯಲ್ಲಿ ಬದಲಾಗುತ್ತಿದೆ.
ಸಮುದ್ರಕ್ಕೆ ಹೊಂದಿಕೊಂಡು ಇರುವ ತೈಲಸ್ಥಾವರಗಳು ಮತ್ತು ಅವುಗಳ ಸಂಸ್ಕರಣೆಯ ಅಂತಿಮ ಹಂತಗಳಲ್ಲಿ ಹೊರ ಉಗುಳುವ ಮಲಿನಕಾರಕಗಳು ತೀವ್ರ ಜಲಮಾಲಿನ್ಯ ಮಾತ್ರವಲ್ಲದೇ ಸಮುದ್ರದ ತಳಭಾಗದಲ್ಲಿ ಅತ್ಯಂತ ಬಿಸಿ ವಲಯವನ್ನು ಸೃಷ್ಟಿ ಮಾಡುತ್ತದೆ.ಇದು ಸಾಗರ ಪರಿಸರ ವ್ಯವಸ್ಥೆಯನ್ನು ತೀವ್ರವಾಗಿ ಘಾಸಿಗೊಳಿಸಿದೆ.
ಗಾಳಿಯ ನಮೂನೆ ಮತ್ತು ರಾಸಾಯನಿಕ ವಿನಿಮಯಗಳ ಮೂಲಕ ಜಲಾವರಣ Hydrosphere ಮತ್ತು ವಾತಾವರಣಗಳು ಒಂದರೊಡನೊಂದು ಪರಸ್ಪರ ಸಂಬಂಧ ಪಡೆದಿವೆ. ಆವಿಯಾಗುವಿಕೆ ಸಾಗರ ಪ್ರವಾಹಗಳ ಚಾಲನೆಗೆ ಸಹಾಯಕವಾಗುವ ರೀತಿಯಲ್ಲಿ ನೀರಿನ ಸಾಂದ್ರತೆಯಲ್ಲಿ ಬದಲಾವಣೆಗಳನ್ನು ತರುತ್ತದೆ. ಜತೆಗೆ ಮಾನವ ಚಟುವಟಿಕೆಗಳಿಂದ ಹೊರಸೂಸುವ ಇಂಗಾಲದ ಡೈ ಆಕ್ಸೈಡ್ ನ್ನು ಸಾಗರಗಳು ಹೀರಿಕೊಳ್ಳುತ್ತವೆ. ಸಾಗರಗಳು ಶಾಖವನ್ನು ಹೀರಿಕೊಳ್ಳುವ ಮತ್ತು ಬಿಡುವ ರೀತಿಗಳು ತುಂಬಾ ವಿಭಿನ್ನವಾದವು. ಸಾಗರದೊಳಗೆ ಶಾಖವು ಸಂವಹನ convection ದಿಂದ ಚಲಿಸುತ್ತದೆ ಮತ್ತು ಭೂಮಿಗಿಂತ ಹೆಚ್ಚು ಆಳಕ್ಕೆ ತಲುಪುತ್ತದೆ. ಸಾಗರಗಳ ನೈಸರ್ಗಿಕ ವ್ಯವಸ್ಥೆಗಳಿಗೆ ಮಾನವ ಚಟುವಟಿಕೆಗಳಿಂದ ಧಕ್ಕೆಯಾದರೆ ಸಾಗರದ ತಳದಲ್ಲಿ ಸಂಗ್ರಹವಾದ ಶಾಖಗಳು ಮೇಲೆದ್ದು ಬಂದು ವಾಯುಮಂಡಲದಲ್ಲಿ ಸೇರಿಕೊಂಡು ವಾಯುಪ್ರವಾಹದ ಸುಳಿ ರೂಪುಗೊಂಡು ಭೂಮಿಯ ಮೇಲೆ ಅತ್ಯಧಿಕ ಘನಘೋರ ಮಹಾಮಳೆಯಾಗುತ್ತದೆ. ಇದೇ ವಿಜ್ಞಾನದ ಪರಿಭಾಷೆಯಲ್ಲಿ ಅಕಾಲಿಕ ಮಳೆಯೆಂದು ಕರೆಯಲ್ಪಡುತ್ತದೆ. ಕ್ಲೌಡ್ ಬರ್ಸ್ಟ್ ಎಂದು ಕರೆಯಲ್ಪಡುವ ಈ ಮೇಘಸ್ಪೋಟದಲ್ಲಿ ಸಾಮಾನ್ಯವಾಗಿ ಗಂಟೆಗೆ 100 ಮಿಲಿ ಮೀಟರ್ ಮಳೆಯಾಗುತ್ತದೆ. ಇದು ಬಿರುಗಾಳಿ ರೂಪದಲ್ಲಿ ಮೇಲ್ಮುಖವಾಗಿ ವಾಯುಪ್ರವಾಹದಲ್ಲಿ ಚಲಿಸುತ್ತದೆ.ಇದರಲ್ಲಿ ಅಪಾರ ಪ್ರಮಾಣದ ನೀರು ಇರುತ್ತದೆ.ನೀರಿನ ಭಾಷ್ಪ ಸಾಂದ್ರಿಕರಣಗೊಂಡು ಅಪಾರ ಪ್ರಮಾಣದಲ್ಲಿ ಆಯಾ ಪ್ರದೇಶದಲ್ಲಿ ಮಳೆ ಸುರಿಯುತ್ತದೆ.
ಇಂದು ವಿಶ್ವ ಮೀನುಗಾರಿಕಾ ದಿನಾಚರಣೆ. ಸಾಗರ ಪರಿಸರದಲ್ಲಿ ಹವಮಾನ ಬದಲಾವಣೆಯಿಂದ ಮೊದಲು ಸಂತ್ರಸ್ತನಾಗುವುದು ಮೀನುಗಾರರು. ಸಮುದ್ರದಲ್ಲಿ ಏಕಾಏಕಿ ವಾತಾವರಣ ವ್ಯತ್ಯಯ ಉಂಟಾಗಿ ಮೀನುಗಾರಿಕೆ ಸ್ಥಗಿತಗೊಳ್ಳುತ್ತದೆ. ಸಮುದ್ರವನ್ನೇ ನಂಬಿ ಬದುಕುವ ಮೀನುಗಾರರು ಅತಂತ್ರರಾಗುತ್ತಾರೆ. ಸಮುದ್ರದ ಪ್ರತಿಕೂಲ ಹವಮಾನ ತಿಳಿಯಾಗಲು ಒಂದಿಷ್ಟು ಸಮಯ ಹಿಡಿಯುತ್ತದೆ. ಕಳೆದೆರಡು ವರ್ಷಗಳಿಂದ ಇಂತಹ ಅನೇಕ ಪ್ರತಿಕೂಲ ಹವಮಾನದ ಪ್ರಕರಣಗಳು ನಡೆದು ಮೀನುಗಾರಿಕೆ ಸ್ಥಗಿತಗೊಳಿಸಿದ ಉದಾಹರಣೆಗಳು ಇವೆ.
ಹವಮಾನ ಬದಲಾವಣೆ ಇದೀಗ ಜಾಗತಿಕ ಸವಾಲಾಗಿ ಪರಿಣಮಿಸಿದೆ. ಅಕಾಲಿಕ ಮಳೆ ಮತ್ತು ಮಾನ್ಸೂನ್ ಏರುಪೇರುಗಳೇ ಮುಂತಾದ ಅನಿರೀಕ್ಷಿತ ಪ್ರಾಕೃತಿಕ ವಿದ್ಯಮಾನಗಳು ಜನರ ಬದುಕಿನ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಿದೆ. ಮಾನವರಿಂದ ಭೂಮಿಯ ಹವಮಾನದ ಮೇಲೆ ಆಗುತ್ತಿರುವ ಪರಿಣಾಮ ಆಪತ್ಕಾರಿಯಾಗಿದೆ. ಪರಿಸರದೊಂದಿಗೆ ಸಾಮರಸ್ಯ ಸಾಧಿಸಬಲ್ಲ ಜೀವನ ಕ್ರಮಗಳನ್ನು ಆಳವಡಿಸಿಕೊಳ್ಳುವುದು ಇಂದಿನ ಮತ್ತು ಮುಂದಿನ ಜನಾಂಗಗಳಿಗೆ ಒಳಿತನ್ನುಂಟು ಮಾಡುತ್ತದೆ. ಮನುಕುಲದ ಉಳಿವಿಗಾಗಿ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಪ್ರತಿಯೊಬ್ಬರು ಅರಿತುಕೊಳ್ಳುಬೇಕಾಗಿದೆ. ಇಲ್ಲದಿದ್ದರೆ ಮನುಕುಲ ಅಕಾಲಿಕ ಮಳೆಯಂತಹ ಪ್ರಾಕೃತಿಕ ವಿಕೋಪಗಳಿಗೆ ಬಲಿಯಾಗುವ ಸಾಧ್ಯತೆಗಳು ನಿಚ್ಚಳವಾಗಿದೆ. ವೈಜ್ಞಾನಿಕವಾಗಿ ನಿರೂಪಿತಗೊಂಡ ಹತ್ತು ಹಲವು ದುರ್ಘಟನೆಗಳು ಈ ಪರಮ ಸತ್ಯವನ್ನು ಮತ್ತೆ ಮತ್ತೆ ಜಗಜ್ಜಾಹೀರುಗೊಳಿಸಿದೆ.
ಉಮಾಕಾಂತ ಖಾರ್ವಿ
ಕುಂದಾಪುರ
ಮೊತ್ತೊಂದು ಅದ್ಭುತವಾದ ಲೇಖನ, ಚೆನ್ನಾಗಿ ಸಂಶೋಧಿಸಿದ ಮತ್ತು ತಿಳಿವಳಿಕೆಯಿಂದ ಬರೆದ, “interesting” ವಿಷಯಗಳು ಇರುವ ಲೇಖನ.
ಹವಾಮಾನದಲ್ಲಿನ ಅತಿರೇಕಗಳ ಕಾರಣಗಳ ಬಹಳ ಚೆನ್ನಾಗಿ ವಿವರಿಸಲಾಗಿದೆ ಮತ್ತು ತಾನೊಬ್ಬನೇ ಎಲ್ಲರಗಿಂತ ಸುಖವಾಗಿ ಬದುಕಬೇಕು ಎಂಬ ಮಾನವನ ದುರಾಶೆ ಕೂಡ ಈ ಒಂದು ಪ್ರಕೃತಿ ವಿಕೋಪಕ್ಕೆ ಕಾರಣವೆಂಬುದನ್ನು ಸಹ ಚೆನ್ನಾಗಿ ವಿವರಿಸಲಾಗಿದೆ.
Thank you Sir