ಚೆಂಡೆಯ ಕಲರವದಲ್ಲಿ ಕಂಗೊಳಿಸುತ್ತಿರುವ ಶ್ರೀ ಮಹಾಕಾಳಿ ಚೆಂಡೆ ಬಳಗ

ಚೆಂಡೆಯ ಕಲರವದಲ್ಲಿ ಕಂಗೊಳಿಸುತ್ತಿರುವ ಶ್ರೀ ಮಹಾಕಾಳಿ ಚೆಂಡೆ ಬಳಗ

ಸಾಧಿಸುವ ಛಲ, ಕಲಿಕೆಯ ಹಂಬಲ, ನಿರಂತರ ಅಭ್ಯಾಸ, ಶ್ರದ್ಧೆ, ಏಕಾಗ್ರತೆಯೊಂದಿಗೆ ದೈವಾನುಗ್ರಹ ಪ್ರಾಪ್ತಿಯಾದರೆ ಕಲೆ ಪರಿಪಕ್ವಗೊಳ್ಳುತ್ತದೆ ಎಂಬುದಕ್ಕೆ ಕುಂದಾಪುರದ ಬಹೂದ್ದೂರ್ ಷಾ ರಸ್ತೆಯ ಶ್ರೀ ಮಹಾಕಾಳಿ ಚೆಂಡೆ ಬಳಗ ಅತ್ಯುತ್ತಮ ಉದಾಹರಣೆಯಾಗಿದೆ. ಕೊಂಕಣಿ ಖಾರ್ವಿ ಸಮಾಜದ ಪ್ರಪ್ರಥಮ ಚೆಂಡೆ ಬಳಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹಾಕಾಳಿ ಚೆಂಡೆ ಬಳಗ ನಮ್ಮ ಸಮಾಜದ ಹೆಮ್ಮೆಯ ಕಲಾತಂಡ.

ಈ ಚೆಂಡೆ ಬಳಗ ಹುಟ್ಟಿಕೊಂಡ ಕಥೆಯೇ ಬಹಳ ರೋಚಕವಾಗಿದೆ. ಕುಂದಾಪುರ ಕೊಂಕಣಿ ಖಾರ್ವಿ ಸಮಾಜದ ಆರಾಧ್ಯ ದೇವತೆಯಾದ ಶ್ರೀ ಮಹಾಕಾಳಿ ಅಮ್ಮನವರ ಪಲ್ಲಕ್ಕಿ ಮಹೋತ್ಸವವು ನಗರ ಪ್ರದಕ್ಷಿಣಿಗೆ ಹೋಗುವಾಗ ತಮ್ಮ ಪರಿಸರದಲ್ಲೂ ಬರಬೇಕೆಂದು ಬಹೂದ್ದೂರ್ ಷಾ ರಸ್ತೆ ಪರಿಸರದ ನಿವಾಸಿಗಳು ಭಕ್ತಿಪೂರ್ವಕ ಇಚ್ಛೆಯನ್ನು ಇಟ್ಟುಕೊಂಡಿದ್ದರು. ಈ ಪರಿಸರದ ಶ್ರದ್ದಾಳು ಭಕ್ತಾಭಿಮಾನಿಗಳ ಭಕ್ತಿಪೂರ್ವಕ ವಿನಂತಿಗೆ ಸಮಾಜದ ಹತ್ತು ಸಮಸ್ತರ ಗೌರವಪೂರ್ವಕ ಒಪ್ಪಿಗೆಯೂ ದೊರೆಯಿತು. ಶ್ರೀ ಮಹಾಕಾಳಿ ಅಮ್ಮನವರ ಪಲ್ಲಕ್ಕಿ ಉತ್ಸವವು ತಮ್ಮ ಪರಿಸರಕ್ಕೆ ಬರುವ ಶುಭ ಸಮಾಚಾರದಿಂದ ಸಂತಸಗೊಂಡ ಬಹೂದ್ದೂರ್ ಷಾ ರಸ್ತೆ ನಿವಾಸಿಗಳು ಶ್ರೀ ಅಮ್ಮನವರನ್ನು ವೈಭವಪೂರ್ಣವಾಗಿ ಬರ ಮಾಡಿಕೊಳ್ಳಬೇಕು ಎಂದು ಸಂಕಲ್ಪಿಸಿದಾಗ ಹುಟ್ಟಿಕೊಂಡಿದ್ದೇ ಶ್ರೀ ಮಹಾಕಾಳಿ ಚೆಂಡೆ ಬಳಗ.

ಶ್ರೀ ಮಹಾಕಾಳಿ ಅಮ್ಮನವರ ಪುಣ್ಯ ಪ್ರೇರಣೆಯಿಂದ ಹುರುಪುಗೊಂಡ ಸ್ಥಳೀಯ ನಿವಾಸಿಗಳು ಸಂಕಲ್ಪ ಸಿದ್ದಿಗಾಗಿ ಕಾರ್ಯೋನ್ಮುಖರಾದರು. ಪರಿಸರದ ಕೊಂಕಣಿ ಖಾರ್ವಿ ಸಮಾಜ ಭಾಂಧವರ ಉತ್ಕಟವಾದ ಹಂಬಲದಂತೆ ಶುಭ ಮೂಹೂರ್ತದಲ್ಲಿ ಚೆಂಡೆ ಬಳಗ ರೂಪುಗೊಂಡಿತ್ತು. ಬಹೂದ್ದೂರ್ ಷಾ ರಸ್ತೆ ಪರಿಸರದಲ್ಲಿ ಶ್ರೀ ಮಹಾಕಾಳಿ ಅಮ್ಮನವರ ಪಲ್ಲಕ್ಕಿ ಇರಿಸಲು ಪೀಠ ಸ್ಥಾಪನೆಗೆ ಸಹೃದಯಿ ದಾನಿಗಳ ಉದಾರ ದೇಣಿಗೆಯಿಂದ ಜಾಗವನ್ನು ಖರೀದಿಸಿ ಸುವ್ಯವಸ್ಥಿತವಾದ ಪೀಠ ನಿರ್ಮಿಸಲಾಯಿತು.

ಶ್ರೀ ಮಹಾಕಾಳಿ ಅಮ್ಮನವರ ಕೃಪಾಕಟಾಕ್ಷದಿಂದ ಪ್ರಾರಂಭಗೊಂಡ ಮಹಾಕಾಳಿ ಚೆಂಡೆ ಬಳಗ ಕಠಿಣ ಪರಿಶ್ರಮದ ನಿರಂತರ ತಾಲೀಮು, ಸಂಪೂರ್ಣ ಪ್ರಕ್ರಿಯೆ ಸ್ವಯಂ ಕಲಿಕೆ ಅದರ ಫಲವಾಗಿ ಶ್ರೀ ಮಹಾಕಾಳಿ ಚೆಂಡೆ ಬಳಗ ಜನಪ್ರಿಯತೆಯ ಉತ್ತುಂಗದಲ್ಲಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಪ್ರದರ್ಶನ ನೀಡಿರುವ ಇವರಿಗೆ ಇಂದು ಬಿಡುವಿಲ್ಲದಷ್ಟು ಕಾರ್ಯಕ್ರಮವಿದೆ. ಜರಿ ಅಂಚಿನ ಮುಂಡು ಚೆಂಡೆ ಬಳಗದ ಪುರುಷ ಸದಸ್ಯರ ಸಮವಸ್ತ್ರವಾದರೆ ಮಹಿಳಾ ಸದಸ್ಯರು ಶ್ವೇತ ವಸನಧಾರಿಗಳು. ಮಣಭಾರದ ಚೆಂಡೆಯನ್ನು ತೋಳಿಗೇರಿಸಿ ಕೈಯಲ್ಲಿರುವ ಬಲಿಷ್ಠ ಹುಣಸೆ ಕೋಲಿನಿಂದ ಬಾರಿಸಿ ಹೊರಡಿಸುವ ಚೆಂಡೆ ನಿನಾದ ದೊಡ್ಡ ಗಾತ್ರದ ಪ್ರತಿದ್ವನಿ ಹೊರಡಿಸುವ ತಾಳಗಳ ಲಯಬದ್ದ ಮಾರ್ದನಿಯ ಜೊತೆಗೆ ಶಿಸ್ತುಬದ್ದ ನರ್ತನ ಮಹಾಕಾಳಿ ಚೆಂಡೆ ಬಳಗಕ್ಕೆ ಅಪಾರ ಜನಪ್ರಿಯತೆ ತಂದುಕೊಟ್ಟಿದೆ.

ಚೆಂಡೆ ಬಳಗದ ಕಲಾವಿದರು ಹೊರಹೊಮ್ಮಿಸುವ ಚೆಂಡೆ ನಿನಾದ ಅವರ ಕರದಿಂದ ಮಧುರ ದ್ವನಿತರಂಗ ಹೊರಡಿಸುವ ತಾಳಗಳ ಸದ್ದು, ಹಾಕುವ ಹೆಜ್ಜೆಯ ಆಕರ್ಷಕ ನೋಟ ನೋಡುಗರ ಪ್ರಶಂಸೆಗೆ ಪಾತ್ರವಾಗಿದೆ. ಇಂದು ಚೆಂಡೆ ವಾದನ ಜನಪ್ರಿಯವಾಗಿದ್ದು,ದೇವಸ್ಥಾನಗಳ ಹಬ್ಬ ಹರಿದಿನ ಉತ್ಸವಗಳಲ್ಲಿ, ಕಾರ್ಪೊರೇಟ್ ಕಂಪನಿಗಳ ಕಾರ್ಯಕ್ರಮಗಳಲ್ಲಿ,ಈವಿಂಟ್ ಮ್ಯಾನೇಜ್ಮೆಂಟ್ ಕಾರ್ಯಕ್ರಮಗಳಲ್ಲಿ, ರಾಜಕೀಯ ಕಾರ್ಯಕ್ರಮಗಳಲ್ಲಿ, ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಚೆಂಡೆ ವಾದನ ಬೇಡಿಕೆ ಪಡೆದುಕೊಂಡಿದೆ. ಮೂಲತಃ ಕೇರಳ ರಾಜ್ಯದ ಧಾರ್ಮಿಕ ಸಂಸ್ಕೃತಿಯಲ್ಲಿ ಪ್ರಾಮುಖ್ಯತೆ ಪಡೆದಿರುವ ಚೆಂಡೆ ವಾದನ ಕಲಿಕೆ ಸುಲಭದಲ್ಲಿ ಕೈಗೂಡುವ ಕಲೆಯಲ್ಲ. ಅದಕ್ಕೆ ತನ್ನದೇ ಆದ ಕಲಿಕಾ ವಿಧಾನಗಳಿವೆ. ಶ್ರೇಷ್ಠತೆಯ ಸಂಸ್ಕಾರವಿದೆ. ಶಿಕ್ಷಣಾರ್ಥಿಗಳಿಗೆ ಆರಂಭದಲ್ಲಿ ನೆಲದ ಮೇಲೆ ಕುಳಿತು ಮಣೆ, ಗ್ರಾನೈಟ್ ಕಲ್ಲುಗಳು, ಸಪಟಾದ ಶಿಲೆಕಲ್ಲುಗಳ ಮೇಲೆ ಲಯಬದ್ದವಾಗಿ ಬಾರಿಸಲು ಕಲಿಸುತ್ತಾರೆ. ಇದು ಆರು ತಿಂಗಳ ತರಬೇತಿ. ಇದರಲ್ಲಿ ಪಳಗಿದ ಬಳಿಕವಷ್ಟೇ ಮುಂದಿನ ಹಂತವಾಗಿ ಚೆಂಡೆ ಕಲಿಕೆಯ ಆರು ತಿಂಗಳ ತರಬೇತಿ. ಶಿಲೆಕಲ್ಲು,ಗ್ರ್ಯಾನೆಟ್ ಕಲ್ಲು, ಮತ್ತು ಮಣೆಗಳ ಮೇಲೆ ಬಲ ಕೈಯಲ್ಲಿ ಹುಣೆಸೆಮರದ ಕೋಲಿನಿಂದ ಬಾರಿಸಬೇಕು. ಇಲ್ಲಿ ಎಡ ಕೈಗಳಿಗೆ ನೇರವಾಗಿ ಕಲ್ಲು ಮಣೆಗಳ ಮೇಲೆ ಬಡಿಯುವ ಪ್ರಯಾಸಕರ ಕೆಲಸ. ಎಡಗೈ ಈ ಸಂದರ್ಭದಲ್ಲಿ ತುಂಬಾ ನೋವು ಅನುಭವಿಸುತ್ತದೆ.

ಈ ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದರೆ ಮಾತ್ರ ಸಾರ್ವಜನಿಕವಾಗಿ ಚೆಂಡೆ ಬಾರಿಸುವ ಅವಕಾಶ ದೊರಕುತ್ತದೆ.ಸಾಮಾನ್ಯವಾಗಿ ಚೆಂಡೆ ವಾದಕರು ಕೇರಳದಲ್ಲಿ ಚೆಂಡೆ ವಾದನ ತರಬೇತಿ ಪಡೆಯುತ್ತಾರೆ. ಅಲ್ಲಿ ಹಲವಾರು ತರಬೇತಿ ಕೇಂದ್ರಗಳಿವೆ. ಹಲವು ಪ್ರಕಾರದ ಚೆಂಡೆ ಕಲಿಕಾ ವಿಧಾನಗಳಿವೆ. ಅಚ್ಚರಿಯ ವಿಷಯವೆಂದರೆ, ಮಹಾಕಾಳಿ ಚೆಂಡೆ ಬಳಗದ ಕಲಾವಿದರು ಅಪೂರ್ವ ಛಲ ಕಠಿಣ ಪರಿಶ್ರಮದಿಂದ ಚೆಂಡೆ ವಾದನವನ್ನು ಸ್ವಯಂ ಕಲಿತು ಜನಮೆಚ್ಚುಗೆ ಗಳಿಸಿದ್ದಾರೆ. ನಿರಂತರ ಅಭ್ಯಾಸ, ಶ್ರದ್ಧೆ, ಏಕಾಗ್ರತೆ ಕಲಿಕೆಯ ತುಡಿತದಿಂದ ಚೆಂಡೆ ವಾದನದಲ್ಲಿ ಪರಿಪಕ್ವರಾಗಿದ್ದಾರೆ. ಇದಕ್ಕೆ ಶ್ರೀ ಮಹಾಕಾಳಿ ಅಮ್ಮನವರ ಕೃಪಾರ್ಶೀವಾದವೂ ಲಭಿಸಿತು ಎಂದು ಚೆಂಡೆ ಕಲಾವಿದರು ಸ್ಮರಿಸಿಕೊಳ್ಳುತ್ತಾರೆ.

ಮನುಕುಲಕ್ಕೆ ಪರಮಾತ್ಮನು ಕರುಣಿಸಿರುವ ವರಪ್ರಸಾದವೇ ಸಂಗೀತ. ಸಂಗೀತವು ದೈವಕೃಪೆ. ಪರಶಿವನು ಡಮರುಗ ನುಡಿಸುತ್ತಾನೆ. ಶ್ರೀ ಕೃಷ್ಣನು ಕೊಳಲನ್ನೂದುತ್ತಾನೆ. ದೇವಾನುದೇವತೆಗಳು ಸಂಗೀತ ಪ್ರಿಯರು.ಪ್ರಪಂಚದಲ್ಲೇ ಅತೀ ಹೆಚ್ಚಿನ ಸಂಖ್ಯೆಯ ಸಂಗೀತ ವಾದ್ಯಗಳು ಹೊಂದಿರುವ ದೇಶ ಭಾರತ. ಪ್ರತ್ಯೇಕವಾದ ಹೆಸರುಳ್ಳ ಐನೂರಕ್ಕೂ ಹೆಚ್ಚು ಸಂಗೀತ ವಾದ್ಯಗಳು ಭಾರತದಲ್ಲಿದೆ. ವಿವಿಧ ತೆರನಾದ ವಾದ್ಯಗಳು ರಚನೆಯಲ್ಲಿ, ಆಕಾರದಲ್ಲಿ ದ್ವನಿಮಾಧುರ್ಯಗಳಲ್ಲಿ ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿವೆ. ದ್ವನಿಮಾಧುರ್ಯಗಳ ಸಂಕ್ಷಿಪ್ತ ವರ್ಗೀಕರಣದಂತೆ ವಾದ್ಯಗಳನ್ನು ಮುಖ್ಯವಾಗಿ ನಾಲ್ಕುವಿಧಗಳಾಗಿ ವಿಂಗಡಿಸಲಾಗಿದೆ.

ಅವುಗಳೆಂದರೆ ಮುಖ್ಯವಾಗಿ ತತ, ಸುಷಿರ, ಅವನದ್ದ ಮತ್ತು ಘನ ಅವನದ್ದವೆಂದರೆ ಚರ್ಮದಿಂದ ಮುಚ್ಚಿದ ವಾದ್ಯ. ಇದರಲ್ಲಿ ಚೆಂಡೆ, ಮೃದಂಗ, ಲೋಲಕ, ತಬಲಾ ಇತ್ಯಾದಿ. ಘನವೆಂದರೆ ಲೋಹ ಅಥವಾ ಮರದಿಂದ ಮಾಡಿದ ಗೆಜ್ಜೆ, ತಾಳ, ಘಟಂ ಇತ್ಯಾದಿ ಒಳಗೊಂಡಿರುತ್ತದೆ. ವಿಭಿನ್ನ ವಿನ್ಯಾಸಗಳುಳ್ಳ ತಾಳಗಳು ನೃತ್ಯದ ಲಯವನ್ನು ಸಮರ್ಪಕ ಏಟಿನಿಂದ ನಿರ್ವಹಿಸುತ್ತದೆ.

ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಕಲಾಪ್ರಕಾರಗಳು ಬದುಕಿನ ಮತಿಬಿಂಬ. ಜೀವನದ ಹಲವು ಮುಖಗಳನ್ನು ಸುಂದರವಾಗಿ ನಿರೂಪಿಸುವ ಕಲೆಗೆ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ವದ ಸ್ಥಾನವಿದೆ.

ತಮ್ಮ ಕಠಿಣ ಪರಿಶ್ರಮ,ನಿರಂತರ ಕಲಿಕೆಯ ಫಲವಾಗಿ ಕುಂದಾಪುರ ಬಹೂದ್ದೂರ್ ಷಾ ರಸ್ತೆಯ ಶ್ರೀ ಮಹಾಕಾಳಿ ಚೆಂಡೆ ಬಳಗ ರಾಜ್ಯದ ಜನಪ್ರಿಯ ಚೆಂಡೆ ಬಳಗವೆನಿಸಿಕೊಂಡಿದೆ. ಕೊಂಕಣಿ ಖಾರ್ವಿ ಸಮಾಜಕ್ಕೆ ಇದೊಂದು ಹೆಮ್ಮೆಯ ವಿಚಾರ. ರಾಜ್ಯದ ನಾನಾ ಕಡೆ ಯಶಸ್ವಿ ಚೆಂಡೆ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿರುವ ಮಹಾಕಾಳಿ ಚೆಂಡೆ ಬಳಗದ ಕೀರ್ತಿ ಸಪ್ತ ಸಾಗರದಾಚೆಗೂ ಹರಡಲಿ ಎಂದು ಹೃದಯಪೂರ್ವಕವಾಗಿ ಶುಭ ಹಾರೈಸುತ್ತೇನೆ.

ಉಮಾಕಾಂತ ಖಾರ್ವಿ ಕುಂದಾಪುರ

One thought on “ಚೆಂಡೆಯ ಕಲರವದಲ್ಲಿ ಕಂಗೊಳಿಸುತ್ತಿರುವ ಶ್ರೀ ಮಹಾಕಾಳಿ ಚೆಂಡೆ ಬಳಗ

  1. ಭಾರತೀಯ ಕಲೆ ಮತ್ತು ಸಂಪ್ರದಾಯಗಳಿಗೆ ಸಂಬಂಧಿಸಿದ ಈ ವಿಶಿಷ್ಟ ಪ್ರತಿಭೆಯನ್ನು ಹೊಂದಿರುವ ನಮ್ಮ ಸಮುದಾಯದ ಯುವಕರಿಗೆ ನಾನು ಶುಭ ಹಾರೈಸುತ್ತೇನೆ ಮತ್ತು ದೇವರು ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಿ

Leave a Reply

Your email address will not be published. Required fields are marked *