ತವರಿಗೆ ಬಂದ ಕಡಲಾಮೆಗಳು ಪತರುಗಟ್ಟಿರುವ ಕಪ್ಪು ದೈತ್ಯರು

ಕುಳಿರ್ಗಾಳಿ ಬೀಸುತ್ತಿದೆ ಮೈನಡುಗಿಸುವ ಚಳಿ ಆರಂಭವಾಗಿದೆ ಋತುಚರ್ಯೆ ಆಯಾ ಪ್ರದೇಶ, ಜೀವರಾಶಿಗಳ ಮೇಲೆ ಪರಿಣಾಮ ಉಂಟು ಮಾಡಿದೆ ಕಾಲಚಕ್ರದ ನಿಯಮದಂತೆ ನಿರ್ದಿಷ್ಟ ಪ್ರದೇಶದ ಜೀವರಾಶಿಗಳು ತಮ್ಮ ಆಹಾರ ಸಂಗ್ರಹ, ಸಂತಾನೋತ್ಪತ್ತಿ, ಸಂತಾನ ಬೆಳೆಸುವ ಪ್ರಕ್ರಿಯೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಋತುಮಾನದ ಕ್ರಮದಂತೆ ಆಲೀವ್ ರಿಡ್ಲೇ ಪ್ರಭೇದದ ಕಡಲಾಮೆಗಳು ತಮ್ಮ ತವರಾದ ಹೊನ್ನಾವರ ಕಾಸರಕೋಡು ಟೊಂಕದ ಕಡಲತೀರದಲ್ಲಿ ಮೊಟ್ಟೆ ಇಟ್ಟು ಹೋಗಿದೆ ಸ್ಥಳೀಯ ಮೀನುಗಾರರಲ್ಲಿ ಸಂತಸ ಸಂಭ್ರಮ ಮನೆ ಮಾಡಿದೆ ಆದರೆ ಕೆಲವು ಸ್ವಾರ್ಥಿಗಳಿಗೆ ಈ ಮೈಕೊರೆಯುವ ಈ ಚಳಿಯಲ್ಲೂ ಬೆವರುವ ಅನುಭವ ಉಂಟಾಗಿದೆ.

ಖಾಸಗಿ ಬಂದರು ನಿರ್ಮಾಣ ಕಾಮಗಾರಿ ಪುನಾರಾರಂಭವಾಗುತ್ತದೆ ಎಂಬ ಖುಷಿಯಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸಿದ ಈ ಪರಮ ಸ್ವಾರ್ಥಿಗಳಿಗೆ ಕಡಲಾಮೆಗಳು ತವರಿಗೆ ಬಂದ ಸುದ್ದಿ ಕೇಳಿ ಬಹಳ ನಿರಾಶೆ ಆಗಿದೆ ಅವರು ಬಾಯಿ ಬಾಯಿ ಬಡಿದುಕೊಂಡು ಪತರುಗುಟ್ಟಿ ಹೋಗಿದ್ದಾರೆ ಪಟಾಕಿ ಸಂಭ್ರಮ ಜಾಸ್ತಿ ದಿನ ಉಳಿಯಲಿಲ್ಲ ಎಂಬ ನಿರಾಶೆಯ ಭಾವ ಅವರನ್ನು ಕಾಡತೊಡಗಿದೆ. ಕಾಸರಕೋಡು ಟೊಂಕ ಮೊದಲಿನಿಂದಲೂ ಕಡಲಾಮೆಗಳ ತವರು ಇಲ್ಲಿ ಅರಣ್ಯ ಇಲಾಖೆ ಸ್ಥಳೀಯ ಮೀನುಗಾರರ ನೆರವಿನಿಂದ ಕಡಲಾಮೆಗಳ ಮೊಟ್ಟೆಗಳನ್ನು ಸಂರಕ್ಷಣೆ ಮಾಡಿ ಮರಿಗಳನ್ನು ಸಮುದ್ರಕ್ಕೆ ಬಿಡುತ್ತಿದ್ದರು.

ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದ ಪ್ರಕ್ರಿಯೆ ಕಾಸರಕೋಡು ಖಾಸಗಿ ಬಂದರು ನಿರ್ಮಾಣ ಕಾಮಗಾರಿ ಪ್ರಾರಂಭವಾದ ಬಳಿಕ ಕಡಲಾಮೆಗಳ ಆವಾಸಸ್ಥಾನವಾದ ಈ ಕಡಲತೀರದ ದಾಖಲಾತಿಗಳನ್ನು ತಿರುಚುವ ಪ್ರಯತ್ನ ನಡೆಯಿತು ಅದರ ಭಾಗವಾಗಿ ನಡೆದ ಬೆಳವಣಿಗೆಯಲ್ಲಿ ಚೆನ್ನೈನ ಸಂಶೋಧನಾ ಕೇಂದ್ರ ಕಾಸರಕೋಡು ಟೊಂಕ ಕಡಲತೀರ ಸೇರಿದಂತೆ ಕರ್ನಾಟಕದ ಎಲ್ಲೂ ಕಡಲಾಮೆಗಳು ಗೂಡು ಕಟ್ಟುವುದಿಲ್ಲ ಎಂಬ ಸುಳ್ಳು ವರದಿಯನ್ನು ರಾಜ್ಯ ಹೈಕೋರ್ಟ್ ಗೆ ಸಲ್ಲಿಸಿತ್ತು. ಈ ಸುಳ್ಳು ವರದಿಯ ಹಿಂದೆ ಯಾವ ಕುಹಕ ತಂತ್ರ ಅಡಗಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಪರಿಸರದ ಹಿತ ಕಾಪಾಡಬೇಕಾದ ಸಂಸ್ಥೆ ಖಾಸಗಿ ಬಂಡವಾಳಶಾಹಿ ಶಕ್ತಿಗಳ ಕೈಗೊಂಬೆಯಾಗಿ ಕೆಲಸ ಮಾಡಿರುವುದು ವಿಷಾದನೀಯ ಸಂಗತಿ.

ಇದೀಗ ಶನಿವಾರ ರಾತ್ರಿ ಎರಡು ಮೂರು ಕಡಲಾಮೆಗಳು ಕಡಲತೀರಕ್ಕೆ ಬಂದು ಮೊಟ್ಟೆ ಇಟ್ಟು ಹೋಗಿದೆ ಉದ್ದೇಶಿತ ಖಾಸಗಿ ಬಂದರು ನಿರ್ಮಾಣ ಯೋಜನೆಯ ಕಡಲತೀರ ಆಮೆಗಳು ಮೊಟ್ಟೆ ಇಡುವ ಜೀವವೈವಿಧ್ಯ ಪ್ರದೇಶ ಎಂಬುದು ಸಾಬೀತಾಗಿದೆ. ಚೆನ್ನೈ ಸಂಸ್ಥೆಯ ವರದಿ ಸುಳ್ಳು ಎಂದು ಜಗಜ್ಜಾಹೀರಾಗಿದೆ. ಕಡಲಾಮೆಗಳು ಮೊಟ್ಟೆ ಇಟ್ಟ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ, ದೃಶ್ಯ ಸುದ್ದಿ ಮಾಧ್ಯಮಗಳಲ್ಲಿ ಶರವೇಗದಲ್ಲಿ ಪ್ರಸಾರಗೊಂಡ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಕಡಲಾಮೆಗಳು ಮೊಟ್ಟೆ ಇಟ್ಟ ಪ್ರದೇಶದಲ್ಲಿ ಸುರಕ್ಷಿತ ಪಂಜರ ಇಟ್ಟಿದೆ. ಸ್ಥಳೀಯ ಮೀನುಗಾರರ ಸಮಯಪ್ರಜ್ಞೆಯಿಂದ ಕಡಲಾಮೆಗಳ ಮೊಟ್ಟೆಗಳು ಸುರಕ್ಷಿತವಾದವು ಇಲ್ಲದಿದ್ದರೆ ಕಡಲಾಮೆಗಳ ಮೊಟ್ಟೆಗಳನ್ನು ಮತ್ತು ಕಡಲಾಮೆಗಳು ಬಂದು ಹೋದ ಮರಳಿನ ರಾಶಿಯ ಚಹರೆಗಳನ್ನು ನಾಶಪಡಿಸುವ ಸಾಧ್ಯತೆ ಇತ್ತು.ಈಗ ಖಾಸಗಿ ಬಂದರು ನಿರ್ಮಾಣ ಕಂಪನಿ ಯಾವ ರೀತಿ ನಾಟಕ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಅಂದ ಹಾಗೆ ಕಡಲಾಮೆಗಳ ಆಸ್ತಿತ್ವ ಕಾಸರಕೋಡು ಕಡಲತೀರದಲ್ಲಿ ಕಂಡುಬಂದಿದ್ದು ಇದೇ ಮೊದಲ ಸಲವಲ್ಲ.ಮೂರು ತಿಂಗಳ ಹಿಂದೆ ಇಲ್ಲಿ ಕಡಲಾಮೆಗಳ ಆಸ್ಥಿಪಂಜರ ಪತ್ತೆಯಾಗಿತ್ತು.ಇದರ ಬೆನ್ನಲ್ಲೇ ಗಾಯಗೊಂಡ ಕಡಲಾಮೆಯ ಮೃತ ಶರೀರ ಪತ್ತೆಯಾಗಿತ್ತು. ಈ ಸುದ್ದಿ ಭಾರಿ ಸಂಚಲನ ಸೃಷ್ಟಿಸಿದ್ದರೂ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ಸಂಬಂಧಪಟ್ಟ ಇಲಾಖೆಗೆ ಇರಲಿಲ್ಲ ಬದಲಾಗಿ ಮೀನುಗಾರರೇ ಬೇರೆ ಕಡೆಯಿಂದ ತಂದು ಇಟ್ಟಿದ್ದಾರೆ ಎಂಬ ಆರೋಪವನ್ನು ತೇಲಿ ಬಿಡಲಾಯಿತು ಬೇರೆ ಕಡೆಯಿಂದ ತಂದು ಇಡಲು ಕಡಲಾಮೆಗಳು ಅಂಗಡಿಯಲ್ಲಿ ಕಾಸು ಕೊಟ್ಟರೆ ಸಿಗುವ ವಸ್ತುವಲ್ಲ.

ಕಡಲಜೀವ ತಜ್ಞರ ಅಧ್ಯಯನಗಳ ಪ್ರಕಾರ ಆಲೀವ್ ರಿಡ್ಲೇ ಪ್ರಭೇದದ ಕಡಲಾಮೆಗಳು ಎಂದಿಗೂ ತಮ್ಮ ಹುಟ್ಟಿದ ಸ್ಥಳವನ್ನು ಮರೆಯುವುದಿಲ್ಲ ಇಲ್ಲಿ ಜನ್ಮ ತಳೆದ ಕಡಲಾಮೆಗಳ ಮರಿಗಳು 16 ವರ್ಷಗಳ ಬಳಿಕ ಪುನಃ ಜನ್ಮ ಸ್ಥಳವನ್ನು ಹುಡುಕಿಕೊಂಡು ಬಂದು ಮೊಟ್ಟೆ ಇಟ್ಟು ಹೋಗುತ್ತದೆ. ಕಡಲಜೀವಶಾಸ್ತ್ರದ ಹತ್ತು ಹಲವು ಸಂಶೋಧನೆಗಳು ಈ ಅಭೂತಪೂರ್ವ ಸಂಗತಿಯನ್ನು ದೃಡಪಡಿಸಿವೆ ಒಂದು ಜೀವವೈವಿಧ್ಯ ನೈಸರ್ಗಿಕವಾಗಿ ನಿರ್ದಿಷ್ಟ ರೀತಿಯ ಪರಿಸರವನ್ನು ಆವರಿಸಿಕೊಂಡಾಗ ಅದರ ಉಳಿವಿಗಾಗಿ ಬೇಕಾದ ಅವಶ್ಯಕತೆಗಳ ಸೌಲಭ್ಯಗಳು ಅಲ್ಲಿರುತ್ತದೆ ಮತ್ತು ಅವುಗಳು ಆ ಪರಿಸರದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುತ್ತವೆ. ಯಾವುದೇ ಪ್ರಾಣಿ, ಅದು ಮೀನು, ಸರೀಸೃಪ, ಪಕ್ಷಿ, ಸಸ್ತನಿ ಅಥವಾ ಕೀಟವಾಗಲಿ ತನ್ನ ಆವಾಸ ಸ್ಥಾನವನ್ನುಇತರ ಜೀವಿಗಳಿಂದ ಕಾಯ್ದುಕೊಳ್ಳುವುದನ್ನು ಪ್ರಾದೇಶಿಕ ನಡವಳಿಕೆ ಎನ್ನುತ್ತಾರೆ ಇದು ಸಾಮಾನ್ಯವಾಗಿ ಆಹಾರ ಮತ್ತು ಸಂತಾನೋತ್ಪತ್ತಿಗೆ ಸಂಬಂಧಪಟ್ಟ ನಡವಳಿಕೆಗಳಿಗೆ ಅನ್ವಯವಾಗುತ್ತದೆ.

ಒಂದು ವೇಳೆ ಅದರ ಆವಾಸ ಸ್ಥಾನಗಳಿಗೆ ಧಕ್ಕೆಯಾದರೆ ಇಡೀ ಜೀವವೈವಿಧ್ಯಗಳ ಸಂಕುಲ ವಿನಾಶಕ್ಕೆ ನಾಂದಿಯಾಗುತ್ತದೆ.ಬದಲಾಗುವ ಪರಿಸರಕ್ಕೆ ಹೊಂದಿಕೊಳ್ಳಲು ಅವುಗಳಿಗೆ ಸಾಧ್ಯವಾಗದೇ ಹೋಗುವುದೇ ಅದರ ನಶಿಸುವಿಕೆಗೆ ಇಲ್ಲವೇ ಕಣ್ಮರೆಯಾಗುವುದಕ್ಕೆ ಕಾರಣವಾಗುತ್ತದೆ ಕಾಸರಕೋಡು ವಾಣಿಜ್ಯ ಬಂದರು ನಿರ್ಮಾಣದಿಂದ ನೈಸರ್ಗಿಕ ಕಡಲತೀರ ಸಂಪೂರ್ಣ ನಾಶವಾಗಿ ವಿಶಿಷ್ಟ ಪ್ರಭೇದದ ಕಡಲಾಮೆಗಳ ಸಹಿತ ಸಾವಿರಾರು ಜೀವವೈವಿಧ್ಯತೆಗಳು ನಾಶವಾಗುವ ಸಾಧ್ಯತೆ ಇದೆಯೆಂದು ಕಡಲ ಪರಿಸರ ತಜ್ಞರು ಭೀತಿ ವ್ಯಕ್ತಪಡಿಸುತ್ತಾರೆ. ಆಳುವ ಪ್ರಭುಗಳು ತರುವ ಯೋಜನೆಗಳಿಗೆ ಪರಿಸರವನ್ನು ಬದಲಿಸುವ ಸಾಮರ್ಥ್ಯವಿರಬಹುದು ಆದರೆ ಇದರಿಂದ ಸಂಭವಿಸುವ ದೂರಗಾಮಿ ದುಷ್ಪರಿಣಾಮಗಳ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ ಜೀವವೈವಿಧ್ಯತೆಗಳು ನಾಶವಾಗಲಿ, ಜನ ಬೇಕಾದರೂ ಸಾಯಲಿ ಅವರಿಗೆ ಬೇಕಾಗಿರುವುದು ನಿರ್ದಿಷ್ಟ ಯೋಜನೆಗಳಿಂದ ನಿರ್ದಿಷ್ಟ ಕಪ್ಪಕಾಣಿಕೆಗಳು ಮಾತ್ರ.

ಖಾಸಗಿ ಬಂದರು ನಿರ್ಮಾಣ ಯೋಜನೆಯ ಕೆಲವೊಂದು ಕ್ರಿಯೆಗಳಿಂದ ಕೇವಲ ಕಾಸರಕೋಡು ಟೊಂಕ ಮಾತ್ರವಲ್ಲ ಇಡೀ ಹೊನ್ನಾವರ ಪಟ್ಟಣವೇ ಭಾಧಿಸಲ್ಪಡುತ್ತದೆಯೆಂಬುದು ಪರಿಸರ ವಿಜ್ಞಾನದ ಪ್ರಶ್ನೆಯಾಗುತ್ತದೆ. ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಪಂಜರದೊಳಗೆ ಇರುವ ಕಡಲಾಮೆ ಮೊಟ್ಟೆಗಳು ಮರಿಗಳಾಗಲು 45 ದಿನಗಳು ಬೇಕಾಗುತ್ತದೆ. ಅಷ್ಟರ ತನಕ ಕಡಲಾಮೆ ಮೊಟ್ಟೆಗಳು ಸುರಕ್ಷಿತವಾಗಿ ಇರುತ್ತದೆ ಎಂಬ ನಂಬಿಕೆಯನ್ನು ಇಡುವುದು ಕೂಡಾ ಸದ್ಯದ ಪ್ರಶ್ನೆಯಾಗಿದೆ. ಮೀನುಗಾರರ ಬದುಕನ್ನು ಸರ್ವನಾಶ ಮಾಡಲೊರಟಿರುವವರಿಗೆ ಕಡಲಾಮೆಗಳ ಮೊಟ್ಟೆಗಳನ್ನು ನಾಶಗೊಳಿಸುವುದು ಕಷ್ಟ ಸಾಧ್ಯವಲ್ಲ.ಮೀನುಗಾರರ ಜೊತೆಗೆ ಕಡಲಾಮೆಗಳು ಕೂಡಾ ನ್ಯಾಯ ಕೇಳುತ್ತಿದೆ. ಆದರೆ ನ್ಯಾಯ ಕೇಳುವುದಾದರೂ ಯಾರ ಬಳಿ ಪ್ರಶ್ನೆ ಪೆಡಂಭೂತವಾಗಿ ಕಾಡುತ್ತಿದೆ.

ಉಮಾಕಾಂತ ಖಾರ್ವಿ ಕುಂದಾಪುರ.

One thought on “ತವರಿಗೆ ಬಂದ ಕಡಲಾಮೆಗಳು ಪತರುಗಟ್ಟಿರುವ ಕಪ್ಪು ದೈತ್ಯರು

  1. ಈ ರಕ್ಷಣಾ ಚಟುವಟಿಕೆಗಾಗಿ ಕಾಸರಕೋಡು ಟೊಂಕದಲ್ಲಿರುವ ನಮ್ಮ ಸಮುದಾಯದ ಸಂಬಂಧಪಟ್ಟ ಮೀನುಗಾರರಿಗೆ ಹ್ಯಾಟ್ಸ್ ಆಫ್. ನಿಮ್ಮ ನೆಲ ಮತ್ತು ನಿಮ್ಮ ಜಲದ ಬಗ್ಗೆಯ ಹೋರಾಟದಲ್ಲಿ ನಿಮಗೆ ಸಹಾಯ ಮಾಡಲು ಭಗವಾನ್ ವಿಷ್ಣು ಕೂರ್ಮ ರೂಪದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದ್ದಾನೆ ಎಂದು ನಾನು ಭಾವಿಸುತ್ತೇನೆ.

Leave a Reply

Your email address will not be published. Required fields are marked *