ಕುಂದಾಪುರ ಖಾರ್ವಿಕೇರಿಯ “ಶಬರಿಮಲೆ ಯಾತ್ರೆ” ನಡೆದು ಬಂದ ದಾರಿ

ದೇವರ ಸ್ವಂತ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೇರಳದ ಪತ್ತಂನತಿಟ್ಟ ಜಿಲ್ಲೆಯ ಪಶ್ಚಿಮ ಘಟ್ಟಗಳ ಶ್ರೇಣಿಯ ಹದಿನೆಂಟು ಬೆಟ್ಟಗಳ ನಡುವೆ ವಿರಾಜಮಾನವಾಗಿರುವ ಹರಿಹರ ಪುತ್ರನ ಪರಮಪವಿತ್ರ ಕ್ಷೇತ್ರವೇ ಶ್ರೀ ಕ್ಷೇತ್ರ ಶಬರಿಮಲೆ. ಭಕ್ತಿಯ ಪರಕಾಷ್ಠೆಯೊಂದಿಗೆ ಏಕತೆ ಸಹಬಾಳ್ವೆ ಸಾರುವ ಶಬರಿಮಲೆ ಯಾತ್ರೆ ಭಗವಂತನಲ್ಲಿ ತಮ್ಮನ್ನು ಸಮರ್ಪಿಸಿಕೊಳ್ಳುವ ಪುಣ್ಯಪ್ರದ ಯಾತ್ರೆ. ಶಬರಿಮಲೆಯ ಯಾತ್ರೆಯ ವೃತಾಚಾರಣೆ ವ್ಯಕ್ತಿಯನ್ನು ಭಕ್ತಿಯ ಮಾರ್ಗದರ್ಶನದಲ್ಲಿ ಸಜ್ಜನನನ್ನಾಗಿ ರೂಪಿಸುವ ಸದ್ದುದ್ದೇಶವನ್ನು ಹೊಂದಿರುತ್ತದೆ.

ಸ್ವಾಮಿ ಅಯ್ಯಪ್ಪನು ನೆಲೆ ನಿಂತ ಶಬರಿಮಲೆ ಕ್ಷೇತ್ರ ಕೋಟ್ಯಾಂತರ ಭಕ್ತರ ಶ್ರದ್ದಾ ಭಕ್ತಿಯ ಪರಮಪವಿತ್ರ ಸನ್ನಿಧಾನ. ಅಯ್ಯಪ್ಪ ದೇವರ ಆರಾಧನೆಯೊಂದಿಗೆ ಶಬರಿಮಲೆ ಕ್ಷೇತ್ರ ಕರ್ನಾಟಕದಲ್ಲಿ ಹೆಚ್ಚು ಪ್ರಚಾರಕ್ಕೆ ಬಂದಿದ್ದು ಎಂಬತ್ತರ ದಶಕದ ಪ್ರಥಮಾರ್ದದಲ್ಲಿ.ತಮಿಳುನಾಡಿನ ನಾಟಕ ಕಂಪನಿಯೊಂದು ಆ ಸಮಯದಲ್ಲಿ ಶಬರಿಮಲೆ ಅಯ್ಯಪ್ಪ ಎಂಬ ನಾಟಕವನ್ನು ಆಡುತ್ತಿತ್ತು.ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯ ಈ ನಾಟಕ ಕಂಪನಿ ಬೆಂಗಳೂರಿನಲ್ಲೂ ಪ್ರದರ್ಶನ ನೀಡಿ ಅಯ್ಯಪನ ಶಬರಿಮಲೆ ಸನ್ನಿಧಾನದ ಪರಿಚಯವನ್ನು ಜನರಿಗೆ ಪರಿಚಯಿಸಿತ್ತು.ಅದರ ಜೊತೆಗೆ ಮಂಗಳೂರಿನಲ್ಲಿ ನೆಲೆ ನಿಂತ ಕೇರಳದ ಮಲೆಯಾಳಿಗಳು ಅಯ್ಯಪ್ಪ ಮಾಲೆ ಧರಿಸಿ ತಾವು ಇದ್ದ ಪ್ರದೇಶದಲ್ಲಿ ಶಬರಿಮಲೆ ವೃತಾಚಾರಣೆ ಮಾಡತೊಡಗಿದರು.ಇದು ಕರ್ನಾಟಕದ ಭಕ್ತಾದಿಗಳನ್ನು ಆಕರ್ಷಿಸಲು ಹೆಚ್ಚು ಸಮಯ ಹಿಡಿಯಲಿಲ್ಲ.

ಸಹಸ್ರಾರು ಜನ ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಳ್ಳಲು ಪ್ರಾರಂಭಿಸಿದರು.ಹೀಗೆ ಲಕ್ಷೋಪಲಕ್ಷ ಜನ ಅಯ್ಯಪ್ಪನ ಭಕ್ತರಾದರು.ಹಲವಾರು ಪವಾಡ ಸೃದಸ್ಯ ಘಟನೆಗಳು ನಡೆದು ಕ್ಷಿಪ್ರಗತಿಯಲ್ಲಿ ಅಯ್ಯಪ್ಪ ಸ್ವಾಮಿ ಜಗತ್ಪ್ರಸಿದ್ಧನಾಗಲು ಕಾರಣವಾಯಿತು. ಇದೇ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಆರಾಧನೆ ಶಬರಿಮಲೆ ಯಾತ್ರೆಯ ಹೆಜ್ಜೆಗಳು ಕುಂದಾಪುರದಲ್ಲಿ ಪ್ರಪ್ರಥಮ ಬಾರಿಗೆ ಖಾರ್ವಿಕೇರಿಯಲ್ಲಿ ಮೂಡಲು ಆರಂಭವಾಯಿತು. ಆಧ್ಯಾತ್ಮಿಕ ಕ್ಷೇತ್ರದ ದಿವ್ಯಾನುಭೂತಿ ಖಾರ್ವಿಕೇರಿ ಪರಿಸರದಲ್ಲಿ ಪ್ರಬಲವಾಗಿ ಹರಡಿ ಅಯ್ಯಪ್ಪ ಸ್ವಾಮಿ ಮಾಲೆ ಹಾಕುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಯಿತು.

ಖಾರ್ವಿಕೇರಿ ಪ್ರದೇಶದ ಕೆಲವು ಕಡೆ ಚಪ್ಪರ ಹಾಕಿಕೊಂಡು ಅಯ್ಯಪ್ಪ ಭಕ್ತರು ಮಾಲೆ ಧರಿಸಿ ನಿಯಮ ನಿಷ್ಠೆಯಿಂದ ವೃತಾಚಾರಣೆ ಕೈಗೊಂಡು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದರು.ವಿವಿಧ ಪೂಜೆ ಕಾರ್ಯಗಳು,ಸಾರ್ವಜನಿಕ ಅನ್ನಸಂತರ್ಪಣೆ ಇತ್ಯಾದಿ ಧಾರ್ಮಿಕ ಸೇವಾ ಕಾರ್ಯಕ್ರಮಗಳು ಸಾರ್ವಜನಿಕ ಭಕ್ತಾಧಿಗಳ ಸಹಯೋಗದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಶ್ರದ್ಧೆ ಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದರು.ಅಯ್ಯಪ್ಪ ವೃತಾಚಾರಣೆಯ ಕಾಲದಲ್ಲಿ ಖಾರ್ವಿಕೇರಿ ಪರಿಸರವು ಧಾರ್ಮಿಕ ಪವಿತ್ರ ಸೊಗಡಿನಿಂದ ಕಂಗೊಳಿಸುತ್ತಿತ್ತು.ಇದೇ ಸಮಯದಲ್ಲಿ ಮದ್ದುಗುಡ್ಡೆ ಪರಿಸರದಲ್ಲೂ ಕೂಡಾ ಅಯ್ಯಪ್ಪ ವೃತಾಚಾರಣೆ,ಶಬರಿಮಲೆ ಯಾತ್ರೆ ಸಾಂಗವಾಗಿ ನಡೆದುಕೊಂಡು ಬಂತು.ಶಬರಿಮಲೆ ಯಾತ್ರೆ ವೃತಾಚಾರಣೆಯ ಪರಿಣಾಮವಾಗಿ ಹಲವರು ದುಶ್ಚಟಗಳಿಂದ ವಿಮುಕ್ತರಾಗಿ ಒಳ್ಳೆಯ ಸಂಸ್ಕಾರ ರೂಪಿಸಿಕೊಂಡ ಉದಾಹರಣೆಗಳು ಉಂಟು.ಖಾರ್ವಿಕೇರಿ ಪರಿಸರದಲ್ಲಿ 1978 ರಲ್ಲಿ ಮೊತ್ತ ಮೊದಲ ಬಾರಿಗೆ ಬಾಳೆಹೊನ್ನೂರು ಶ್ರೀಧರ ಆಚಾರ್ಯ ಗುರುಸ್ವಾಮಿಗಳು ಅಯ್ಯಪ್ಪ ವೃತಾಚಾರಣೆಗೆ ನಾಂದಿ ಹಾಡಿದರು. ವಿಠ್ಠಲ ಗುರುಸ್ವಾಮಿಯವರಿಗೆ ಪ್ರಥಮವಾಗಿ ದೀಕ್ಷೆ ನೀಡಿದರು. ಅವರಿಂದ ದೀಕ್ಷೆ ತೆಗೆದುಕೊಂಡ ವಿಠ್ಠಲ ಗುರುಸ್ವಾಮಿಯವರು ಖಾರ್ವಿಕೇರಿ ಪರಿಸರದಲ್ಲಿ ಅಯ್ಯಪ್ಪ ಆರಾಧನೆ, ಶಬರಿಮಲೆ ಯಾತ್ರೆ ದೃಡವಾಗಿ ಬೇರೂರಲು ಕಾರಣೀಕರ್ತರಾದರು. ವಿಠ್ಠಲ ಗುರುಸ್ವಾಮಿಯವರು ಹದಿನೆಂಟು ವರ್ಷ ಶಬರಿಮಲೆ ಯಾತ್ರೆ ಪೂರೈಸಿದ ಸವಿನೆನಪಿಗಾಗಿ ಕುಂದಾಪುರದಲ್ಲಿ ವೈಭವದ ಪುರ ಮೆರವಣಿಗೆಯನ್ನು ಹಮ್ಮಿಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

1981 ರಲ್ಲಿ ಕೊಯ್ತ್ಕಾರ್ ಗಣಪತಿಯವರು ಅಯ್ಯಪ್ಪ ದೀಕ್ಷೆಯನ್ನು ವಿಠ್ಠಲ ಗುರುಸ್ವಾಮಿಯವರಿಂದ ಪಡೆದುಕೊಂಡರು.ಈ ಶಿಷ್ಯ ಪರಂಪರೆ ಕೃಷ್ಣ ಗುರುಸ್ವಾಮಿ, ಭಾಸ್ಕರ ಗುರುಸ್ವಾಮಿ, ಸುಂದರ ಗುರುಸ್ವಾಮಿ ಹೀಗೆ ಮುಂದುವರಿದುಕೊಂಡು ಬಂತು. ಪ್ರಸ್ತುತ ಶ್ರೀ ಭಾಸ್ಕರ ಗುರುಸ್ವಾಮಿಯವರು ಖಾರ್ವಿಕೇರಿ ಶ್ರೀ ಅಯ್ಯಪ್ಪ ವೃತಾಚಾರಣೆ, ಶಬರಿಮಲೆ ಯಾತ್ರೆಯನ್ನು ಮುನ್ನಡೆಸುತ್ತಿದ್ದಾರೆ. ಅಯ್ಯಪ್ಪ ಆರಾಧನೆ ಖಾರ್ವಿಕೇರಿ ಪರಿಸರದಲ್ಲಿ ಪ್ರಾರಂಭಗೊಂಡ ಆರಂಭಿಕ ದಿನಗಳ ಸುಂದರ ನೆನಪು ಈಗಲೂ ನನ್ನ ಸ್ಮೃತಿ ಪಟಲದಲ್ಲಿ ಇದೆ. ಸ್ವಾಮಿಗಳು ಶ್ರೀ ವೆಂಕಟರಮಣ ದೇವಸ್ಥಾನದ ನೀಲಾಧರ ಕೆರೆಯಲ್ಲಿ ಮಿಂದು ಶುಚಿರ್ಭೂತರಾಗಿ ರಸ್ತೆಯಲ್ಲಿ ಅಯ್ಯಪ್ಪನ ಶರಣಘೋಷ ಹಾಡುತ್ತಾ ಅಯ್ಯಪ್ಪ ಮಂಟಪಕ್ಕೆ ಶಿಸ್ತುಬದ್ದರಾಗಿ ಬರುತ್ತಿದ್ದರು. ಮಹಿಳೆಯರು ಸ್ವಾಮಿಗಳು ಬರುವ ದಾರಿಯೂದ್ದಕ್ಕೂ ರಂಗೋಲಿ ಬಿಡಿಸಿ ಹೂವುಗಳನ್ನು ಹರಡುತ್ತಿದ್ದರು. ಅಲ್ಲಿ ದೈವಿಕ ಮನೋಭಾವದಿಂದ ಕೂಡಿದ ಸುಮಧುರ ಪರಿಸರ ಸೃಷ್ಟಿಯಾಗುತ್ತಿತ್ತು.ಅಯ್ಯಪ್ಪನ ಮಂಟಪದಿಂದ ಕೇಳಿ ಬರುತ್ತಿದ್ದ ವೀರಮಣಿ, ಜೇಸುದಾಸ್, ರಾ ಮಾರ ಹಾಡಿದ ಹಾಡುಗಳು, ಭಜನೆಗಳು, ಅಯ್ಯಪ್ಪ ಮಾಲಾಧಾರಿಗಳ ಶರಣಘೋಷ ,ಅನ್ನದಾನದ ಸಂಭ್ರಮಗಳು, ದೈವಿಕ ಪ್ರಭೆಯ ಹೊಸಲೋಕವನ್ನೇ ಸೃಷ್ಟಿ ಮಾಡುತ್ತಿದ್ದವು. ಇಂದಿಗೂ ಸ್ಮೃತಿಪಟಲದಲ್ಲಿ ಅಚ್ಚೊತ್ತಿದ್ದಂತಿದೆ.

ಅಯ್ಯಪ್ಪ ವೃತಾಚಾರಣೆ ಅವಧಿ ನಲವತ್ತೆಂಟು ದಿನಗಳಾಗಿದ್ದು,ಅಯ್ಯಪ್ಪ ಮಾಲೆ ಧರಿಸಲು ಕಾರ್ತೀಕ ಮಾಸ ಪ್ರಶಸ್ತವಾಗಿರುತ್ತದೆ. ಮಾಲೆ ಹಾಕಿಕೊಳ್ಳಲು ಬ್ರಾಹ್ಮಿ ಮೂಹೂರ್ತದಿಂದ ಸುರ್ಯೋದಯದ ಮುಂಚಿನ ಅವಧಿ ನಿಗದಿಪಡಿಸಲಾಗಿದೆ. ಈ ಅವಧಿಯಲ್ಲಿ ಅಯ್ಯಪ್ಪ ಮಾಲೆ ಧರಿಸುವುದು ಶ್ರೇಯಸ್ಕರ ಎಂದು ಹೇಳಲಾಗಿದೆ. ಅಯ್ಯಪ್ಪ ಮಾಲೆ ಧರಿಸಿ ಮನೆಮಠ ಲೌಕಿಕ ಸುಖಭೋಗಗಳನ್ನು ಪರಿತ್ಯಜಿಸಿ, ಶ್ರದ್ಧೆ ಭಕ್ತಿಯಿಂದ ಅಯ್ಯಪ್ಪಸ್ವಾಮಿ ಆರಾಧನೆ ಮಾಡಿದರೆ ಆ ಸ್ವಾಮಿಯ ಪರಿಪೂರ್ಣ ಅನುಗ್ರಹ ಪ್ರಾಪ್ತಿಯಾಗುತ್ತದೆ. ಈ ಮೊದಲು ಇರುಮುಡಿಯನ್ನು ರಾತ್ರಿ ವೇಳೆಯಲ್ಲಿ ಕಟ್ಟುವ ಪದ್ಧತಿ ಇತ್ತು. ಕಾಲಕ್ರಮೇಣ ಈ ಪದ್ಧತಿ ಬದಲಾವಣೆಯಾಗಿ ಹಗಲಲ್ಲಿ ಇರುಮುಡಿ ಕಟ್ಟುವ ಪದ್ಧತಿ ಆರಂಭವಾಯಿತು.

ಇರುಮುಡಿ ಎಂದರೆ ಎರಡು ಮುಡಿ ಎಂದರ್ಥ.ಅಂದರೆ ಎರಡು ಗಂಟುಗಳ ಚೀಲ. ಇರುಮುಡಿ ಅಯ್ಯಪ್ಪ ಮಾಲಾಧಾರಿಗಳ ಆಧ್ಯಾತ್ಮಿಕ ಮತ್ತು ಭೌತಿಕ ಘಟಕಗಳ ಸಂಕೇತವಾಗಿರುತ್ತದೆ.ಒಂದು ಗಂಟಿನಲ್ಲಿ ಮನೆಮಂದಿ ಹಾಕಿದ ಪಡಿಯಕ್ಕಿ ಇರುತ್ತದೆ.ಮತ್ತೊಂದು ಗಂಟಿನಲ್ಲಿ ತೆಂಗಿನಕಾಯಿ,ತುಪ್ಪ,ಬೆಲ್ಲ,ವಿಭೂತಿಯನ್ನು,ಜೇನುತುಪ್ಪ,ಅರಶಿನ ಕುಂಕುಮ,ಚಂದನ,ಕಾಳುಮೆಣಸು,ಒಣದ್ರಾಕ್ಷಿ,ಅರಳು,ಅವಲಕ್ಕಿ,ಪನ್ನೀರು,ಅಗರಬತ್ತಿ,ಕರ್ಪೂರ,ವೀಳ್ಯದೆಲೆ ಅಡಿಕೆ ಇತ್ಯಾದಿ ಇರುತ್ತದೆ. ಇರುಮುಡಿ ಕಟ್ಟಿನಲ್ಲಿರುವ ತೆಂಗಿನಕಾಯಿಯನ್ನು ಕನ್ನಿಮೂಲ ಗಣಪತಿಗೆ, ಅರಶಿನವನ್ನು ಮಾಳಿಗೆ ಪುರುತ್ತಮ್ಮನಿಗೆ, ಮೆಣಸನ್ನು ವಾವರಸ್ವಾಮಿಗೆ ,ಬೆಲ್ಲವನ್ನು ಅಯ್ಯಪ್ಪನ ನೈವೇದ್ಯಕ್ಕೆ ಸಮರ್ಪಿಸಲಾಗುತ್ತದೆ. ಶಬರಿಮಲೆ ಯಾತ್ರೆಯ ಪ್ರಾರಂಭಿಕ ದಿನಗಳಲ್ಲಿ ಇರುಮುಡಿಯನ್ನು ಅಡಿಕೆ ಹಾಳೆಯಲ್ಲಿ ಕಟ್ಟುತ್ತಿದ್ದರು. ಕ್ರಮೇಣ ಆ ಪದ್ಧತಿ ಬದಲಾವಣೆ ಆಗಿ ಹೊಸತನ ಕಂಡುಬಂತು.

ಅಯ್ಯಪ್ಪ ಮಾಲೆ ಧರಿಸಿದ ವೃತಧಾರಿಗಳು ಕಪ್ಪು ಬಣ್ಣದ ವಸ್ತ್ರ ಧರಿಸುತ್ತಾರೆ.ಇದಕ್ಕೆ ನಿಖರವಾದ ಕಾರಣ ಇದೆ. ಕಪ್ಪು ಬಣ್ಣವು ಬೆಳಕನ್ನು ಪ್ರತಿಫಲಿಸುವುದಿಲ್ಲ.ಕಪ್ಪು ಬಣ್ಣವು ಅಲೌಕಿಕತೆಯ ಸಂಕೇತವಾಗಿದ್ದು ಲೌಕಿಕ ವಸ್ತುಗಳಿಂದ ಬೇರ್ಪಡುವಿಕೆಯನ್ನು ಸೂಚಿಸುತ್ತದೆ.ಕಪ್ಪು ಬಣ್ಣವು ಮನುಷ್ಯನೊಳಗಿನ ನಕರಾತ್ಮಕ ಶಕ್ತಿಗಳನ್ನು ದೂರವಾಗಿಸುತ್ತದೆ.ಸಕರಾತ್ಮಕ ಚಿಂತನೆಯನ್ನು ಹೆಚ್ಚಿಸುತ್ತದೆ.ಈ ಅಭೂತಪೂರ್ವ ತಾತ್ವಿಕ ಮತ್ತು ವೈಜ್ಞಾನಿಕ ವಿಷಯಗಳು ಅಯ್ಯಪ್ಪ ಸ್ವಾಮಿ ವೃತಧಾರಿಗಳು ಕಪ್ಪು ಬಣ್ಣದ ವಸ್ತ್ರ ಧರಿಸುವುದರಲ್ಲಿ ಅಡಕವಾಗಿದೆ. ಶಬರಿಮಲೆಯಾತ್ರೆಯಲ್ಲಿ ಪಂಪಾಸಜ್ಜೆ ಮತ್ತು ಪಂಪಾದೀಪ ಎಂಬ ದೈವಿಕ ಆಚರಣೆಗಳಿವೆ. ಪಂಪಾಸಜ್ಜೆಯೆಂದರೆ ಶಬರಿಮಲೆಯಲ್ಲಿ ಅಡುಗೆ ತಯಾರಿಸಿ ಅಯ್ಯಪ್ಪನಿಗೆ ಪ್ರಪ್ರಥಮವಾಗಿ ಬಾಳೆಎಲೆಯಲ್ಲಿ ನೈವೇದ್ಯ ಸಮರ್ಪಿಸುತ್ತಾರೆ.ಇಲ್ಲಿ ಸಾವಿರಾರು ಭಕ್ತರು ಕಾಡಿನಲ್ಲಿ ಅಡುಗೆ ತಯಾರಿಸಿ ಅಯ್ಯಪ್ಪನಿಗೆ ಸಮರ್ಪಿಸಿದ ಬಳಿಕ ಅಡುಗೆಯನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸುತ್ತಾರೆ. ಬಳಿಕ ಎಲ್ಲಾ ಭಕ್ತರು ಅಡುಗೆ ಒಲೆಯ ಬೂದಿಯನ್ನು ಸಂಗ್ರಹಿಸಿ ಅದನ್ನು ಅಯ್ಯಪ್ಪನ ಪ್ರಸಾದದ ರೂಪದಲ್ಲಿ ಊರಿನಲ್ಲಿ ಜನರಿಗೆ ಹಂಚುತ್ತಾರೆ.

ಪಂಪಾದೀಪವೆಂದರೆ ಮೊದಲ ಬಾರಿ ಮಾಲೆ ಧರಿಸಿದ ಕನ್ನಿಸ್ವಾಮಿಗಳು ಪುಣ್ಯ ನದಿ ಪಂಪಾನದಿಗೆ ದೀಪ ಬೆಳಗಿಸುವ ಮೂಲಕ ಗೌರವ ಸಮರ್ಪಿಸುವ ವೈಶಿಷ್ಟ್ಯಪೂರ್ಣ ಆಚರಣೆ.ದಕ್ಷಿಣದ ಭಾಗೀರಥಿ ನದಿಯೆಂದು ಪಂಪಾನದಿ ಪ್ರಸಿದ್ದಿ ಗಳಿಸಿದ್ದು,ಶಬರಿಮಲೆಯ ಜೀವನದಿ ಪರಮಪವಿತ್ರ ಪಂಪಾನದಿಗೆ ಕನ್ಯಾಸ್ವಾಮಿಗಳು ಭಕ್ತಿಯಿಂದ ಸಲ್ಲಿಸುವ ಗೌರವ ವಂದನೆ ಇದಾಗಿದೆ. ತಮ್ಮ ಬಾಳು ಪ್ರಕಾಶಮಾನವಾಗಿ ಬೆಳಗಲಿ ಎಂದು ಕನ್ಯಾಸ್ವಾಮಿಗಳಿಂದ ಈ ವೈಶಿಷ್ಟ್ಯಪೂರ್ಣ ಪಂಪಾದೀಪ ಆಚರಣೆ ನಡೆಯುತ್ತದೆ.

ಕಳೆದ ಮೂರು ವರ್ಷಗಳಿಂದ ಕಾರಾಣಾಂತರಗಳಿಂದ ಸರ್ಕಾರ ಪಂಪಾದೀಪ ಆಚರಣೆಯನ್ನು ನಿರ್ಬಂಧ ಹೇರಿದ ಪರಿಣಾಮವಾಗಿ ಕುಂದಾಪುರ ಖಾರ್ವಿಕೇರಿಯ ಅಯ್ಯಪ್ಪ ಮಾಲಾಧಾರಿ ಸ್ವಾಮಿಗಳು ಕುಂದಾಪುರದ ಜೀವನದಿ ಪಂಚಗಂಗಾವಳಿಯಲ್ಲಿ ಈ ಆಚರಣೆ ಮಾಡುತ್ತಾರೆ. ಖಾರ್ವಿಕೇರಿಯ ರಿಂಗ್ ರೋಡ್ ಮೂಲಕ ಅಯ್ಯಪ್ಪ ಮೆರವಣಿಗೆ ಸಾಗಿ ಪಂಚಗಂಗಾವಳಿಯಲ್ಲಿ ಪಂಪಾದೀಪದ ಪ್ರತಿರೂಪವಾಗಿ ಈ ಪವಿತ್ರ ಆಚರಣೆ ಸಕಲ ಧಾರ್ಮಿಕ ವಿಧಿ ವಿಧಾನದೊಂದಿಗೆ ನಡೆಸುತ್ತಿದ್ದಾರೆ.

1978 ರಲ್ಲಿ ಖಾರ್ವಿಕೇರಿಯಲ್ಲಿ ಆಚರಣೆಗೆ ಬಂದ ಅಯ್ಯಪ್ಪ ವೃತಾಚಾರಣೆ ಶಬರಿಮಲೆಯಾತ್ರೆ ಅಂದಿನಿಂದ ಇಂದಿನವರೆಗೂ ಅತ್ಯಂತ ಶ್ರದ್ಧೆ ಭಕ್ತಿಯಿಂದ ಸಂಪನ್ನಗೊಂಡು ಸಾಗುತ್ತಾ ಬಂದಿದೆ.ಪ್ರಸ್ತುತ ಇಲ್ಲಿನ ಗುರುಸ್ವಾಮಿ ಶ್ರೀ ಭಾಸ್ಕರ ಸ್ವಾಮಿಯವರು ಇದೀಗ ನಿರಂತರ 35 ವರ್ಷಗಳ ಶಬರಿಮಲೆಯಾತ್ರೆಯ ಹೊಸ್ತಿಲಲ್ಲಿ ಇದ್ದಾರೆ. 1984 ರಲ್ಲಿ ಖಾರ್ವಿಕೇರಿಯ ಅಯ್ಯಪ್ಪ ಭಕ್ತರಾದ ಗುಳ್ಳ ಸಂಜೀವ ಖಾರ್ವಿ,ಕಾಳಪ್ಪ ನಾಯ್ಕ್ ಮತ್ತು ಕೇರಳದ ಸ್ವಾಮಿಗಳು ಸೇರಿ ಕುಂದಾಪುರ ಖಾರ್ವಿಕೇರಿಯಿಂದ ಪಾದಯಾತ್ರೆ ಮೂಲಕ ಶಬರಿಮಲೆ ಯಾತ್ರೆ ಕೈಗೊಂಡಿದ್ದು ಕುಂದಾಪುರದ ಮಟ್ಟಿಗೆ ದಾಖಲೆಯಾಗಿ ಉಳಿದಿದೆ.ಈ ಪಾದಯಾತ್ರೆಯ ಕೆಲವೊಂದು ಅವಿಸ್ಮರಣೀಯ ಘಟನೆಗಳನ್ನು ಗುಳ್ಳ ಸಂಜೀವ ಖಾರ್ವಿಯವರು ಬಹಳ ಉತ್ಸಾಹದಿಂದಲೇ ಮೆಲುಕು ಹಾಕುತ್ತಾರೆ.

ಪಾದಯಾತ್ರೆ ಮೂಲಕ ಕಾಸರಕೋಡು ತಲುಪಿದಾಗ ಅಲ್ಲಿನ ಪ್ರಸಿದ್ಧ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಅವರ ಮೂರು ಜನರ ತಂಡವನ್ನು ದೇಗುಲದವರು ಮತ್ತು ಊರ ನಾಗರಿಕರು ಬಹಳ ಪ್ರೀತಿ ಗೌರವಗಳಿಂದ ಬರಮಾಡಿಕೊಂಡಿದ್ದರು. ಜನರ ಭಕ್ತಿಯೆಷ್ಟಿದೆಯೆಂದರೆ ಮೂರು ಸ್ವಾಮಿಗಳಿಗೆ ಜನರು ನಾಣ್ಯಗಳ ಮೂಲಕ ಪಾದಪೂಜೆ ಮಾಡಿದ್ದರು.ಈ ಅಭೂತಪೂರ್ವ ಘಟನೆಯನ್ನು ನೆನಪಿಸಿಕೊಂಡು ಗುಳ್ಳ ಸಂಜೀವ ಖಾರ್ವಿಯವರು ಭಾವಪರವಶರಾಗುತ್ತಾರೆ.ಈ ಗೌರವಗಳೆಲ್ಲ ಸರ್ವರಕ್ಷಕ ಶ್ರೀ ಅಯ್ಯಪ್ಪ ಸ್ವಾಮಿಗೆ ಸಮರ್ಪಿತವೆಂದು ಹೃದಯ ತುಂಬಿ ನುಡಿಯುತ್ತಾರೆ.

ಹರಿಹರ ಪುತ್ರ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಹದಿನೆಂಟು ಮೆಟ್ಟಿಲು ಜ್ಞಾನದ ಸಂಕೇತ.ಒಂದೊಂದು ಮೆಟ್ಟಿಲಿಗೂ ಒಂದೊಂದು ಅಧಿದೇವತೆ ಇರುತ್ತಾರೆ. ಭಾರತೀಯ ಪರಂಪರೆಯಲ್ಲಿ 18 ರ ಸಂಖ್ಯೆಗೆ ಗೌರವಪೂರ್ವಕ ಸ್ಥಾನವಿದೆ.ಭಾರತದ 18 ಪೀಠಗಳು,ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳು,18 ಪುರಾಣಗಳು ಪವಿತ್ರ ಸ್ಥಾನ ಪಡೆದುಕೊಂಡಿವೆ. ಶಬರಿಮಲೆಯ ಸುತ್ತಲೂ ಇರುವ ಹದಿನೆಂಟು ಬೆಟ್ಟಗಳು ಹದಿನೆಂಟು ಮೆಟ್ಟಿಲುಗಳ ಪ್ರತೀಕ ಎಂದು ಹೇಳುತ್ತಾರೆ.ಶ್ರದ್ಧೆ ಭಕ್ತಿಯಿಂದ 48 ದಿನಗಳ ವೃತಾಚಾರಣೆ ಮಾಡಿ ಬರುವ ಸ್ವಾಮಿಗಳಿಗೆ ಮಾತ್ರ ಹದಿನೆಂಟು ಮೆಟ್ಟಿಲು ಹತ್ತುವ ಅವಕಾಶ ಲಭಿಸುತ್ತದೆ.

ಹದಿನೆಂಟು ಮೆಟ್ಟಿಲು ಹತ್ತಿ ಶ್ರೀ ಧರ್ಮಶಾಸ್ತನ ದಿವ್ಯ ದರುಶನ ಪಡೆದುಕೊಂಡ ಸ್ವಾಮಿಗಳಿಗೆ ಇಹಪರಗಳಲ್ಲೂ ಸುಖಶಾಂತಿ ಲಭಿಸುತ್ತದೆ ಎಂಬ ದೃಡವಾದ ನಂಬಿಕೆ ಇದೆ. ಶಬರಿಮಲೆಯಾತ್ರೆಯಲ್ಲಿ ಹದಿನೆಂಟನೇ ವರ್ಷದ ಯಾತ್ರೆಗೆ ವಿಶೇಷ ಮಹತ್ವವಿದೆ.ಹದಿನೆಂಟನೇ ವರ್ಷದ ಯಾತ್ರೆ ಕೈಗೊಳ್ಳುವ ಸ್ವಾಮಿ ಸನ್ನಿಧಾನದ ಪರಿಸರದಲ್ಲಿ ತೆಂಗಿನ ಗಿಡವನ್ನು ನೆಟ್ಟು ಬರುವ ಸಂಪ್ರದಾಯವಿದೆ.ತೆಂಗಿನ ಮರ ಕಲ್ಪವೃಕ್ಷ.ಅದರಂತೆ ಹದಿನೆಂಟು ವರ್ಷ ಶಬರಿಮಲೆ ಯಾತ್ರೆ ಪೂರ್ತಿಗೊಳಿಸಿದ ಸ್ವಾಮಿ ತನ್ನ ಪುಣ್ಯ ಕರ್ಮ ಮತ್ತು ಜ್ಞಾನವನ್ನು ಇತರರಿಗೆ ಹಂಚಬೇಕು ಎಂಬುದು ತೆಂಗಿನ ಗಿಡ ನೆಡುವ ಉದ್ದೇಶ.

ಮಾಲೆ ಧರಿಸುವವರ ಸಂಖ್ಯೆ ಹೆಚ್ಚಾಗಿ ಕುಂದಾಪುರ ಮದ್ದುಗುಡ್ಡೆ ಶ್ರೀ ಜಟ್ಟೀಗೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿಗಳ ಭಕ್ತವೃಂದ ಸ್ಥಾಪನೆಯಾಯಿತು. ಶ್ರೀ ನಾರಾಯಣ ಖಾರ್ವಿ ಇಲ್ಲಿ ಪ್ರಥಮವಾಗಿ ಗುರುಸ್ವಾಮಿಯಾದರು.ತದನಂತರ ಮಂಜುನಾಥ ಖಾರ್ವಿ ಮೈನಾ, ಸುಬ್ರಹ್ಮಣ್ಯ ಖಾರ್ವಿಯವರು ಈ ಗುರುಸ್ವಾಮಿ ಪರಂಪರೆಯನ್ನು ಮುಂದುವರಿಸಿದರು. ಕೊಂಕಣಿ ಖಾರ್ವಿ ಪ್ರಗತಿಪರ ಸಂಘ ಮದ್ದುಗುಡ್ಡೆ ಇದರ ನೇತೃತ್ವ ಮತ್ತುಸಹಕಾರದೊಂದಿಗೆ ಮದ್ದುಗುಡ್ಡೆ ಅಯ್ಯಪ್ಪ ಸ್ವಾಮಿ ಭಕ್ತ ಸಮಿತಿಯು ಇದೀಗ 35 ನೇ ವರ್ಷದ ಶಬರಿಮಲೆ ಯಾತ್ರೆಯ ಸಂಭ್ರಮದಲ್ಲಿದೆ. ಇಲ್ಲಿ ಕೂಡಾ ಅಯ್ಯಪ್ಪ ದೀಪೋತ್ಸವ ಮತ್ತು ಪಂಪಾದೀಪ ಕಾರ್ಯಕ್ರಮಗಳು ಸಾಂಪ್ರದಾಯಿಕವಾಗಿ ಜರುಗುತ್ತದೆ. ಸಾಂಘಿಕ ಜೀವನ, ಸರಳತೆಯ ಜೀವನ ಮತ್ತು ಸೌಹಾರ್ದತೆಯ ಜೀವನದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಶಬರಿಮಲೆ ಯಾತ್ರೆ ಮನುಷ್ಯನನ್ನು ಉತ್ತಮ ಸಂಸ್ಕಾರಯುತ ಮೌಲ್ಯಗಳತ್ತ ಕೊಂಡೊಯುತ್ತದೆ.ಕುಂದಾಪುರ ಖಾರ್ವಿಕೇರಿಯಲ್ಲಿ 43 ವರ್ಷಗಳಿಂದ ನಿರಂತರವಾಗಿ ಶಬರಿಮಲೆ ಯಾತ್ರೆಯ ವೃತಾಚಾರಣೆ ನಡೆಯುತ್ತಿದೆ.ಖಾರ್ವಿಕೇರಿಯ ಅಯ್ಯಪ್ಪನ ಈ ಸನ್ನಿಧಿ ತುಂಬಾ ಪ್ರಸಿದ್ದಿ ಪಡೆದಿದ್ದು ಶಬರಿಮಲೆ ಸನ್ನಿಧಾನದ ರೀತಿಯಲ್ಲಿ ಇಲ್ಲಿ ಸೇವಾಕೈಂಕರ್ಯ ಪೂಜಾ ವಿಧಾನಗಳು ನಡೆಯುತ್ತದೆ. ಶಬರಿಮಲೆ ಸನ್ನಿಧಾನದಲ್ಲಿ ರಾತ್ರಿ ನಡೆಯುವಂತೆ ಅಯ್ಯಪ್ಪ ಸ್ವಾಮಿಯನ್ನು ಮಲಗಿಸುವ ಲಾಲಿ ಹಾಡು ಹರಿವರಾಸನಂ ಹಾಡನ್ನು ಇಲ್ಲಿ ಪ್ರತಿನಿತ್ಯ ಹಾಡುತ್ತಾರೆ.

ಶ್ರೀ ಭಾಸ್ಕರ ಗುರುಸ್ವಾಮಿ ಮತ್ತು ಶ್ರೀ ಸಂಜೀವ ಗುರುಸ್ವಾಮಿಯವರ ನೇತೃತ್ವದಲ್ಲಿ ಖಾರ್ವಿಕೇರಿಯ ಅಯ್ಯಪ್ಪ ಸನ್ನಿಧಾನದ ಮಂಟಪದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಮತ್ತು ಪೂಜಾದಿ ಕಾರ್ಯಗಳು ವೈಭವದಿಂದ ನಡೆಯಲಿದೆ.ಈ ವರ್ಷ ವಿಶೇಷವಾಗಿ ಶ್ರೀ ಪ್ರವೀಣ ಗುರುಸ್ವಾಮಿಯವರ ಹದಿನೆಂಟನೇ ವರ್ಷದ ಶಬರಿಮಲೆ ಯಾತ್ರೆ ನಡೆಯಲಿದೆ. ಸಕಲ ದುರಿತ ನಿವಾರಕ ಶ್ರೀ ಹರಿಹರ ಸುತನ ಪವಿತ್ರ ಧಾರ್ಮಿಕ ಸಂಭ್ರಮದ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ಪಾಲ್ಗೊಂಡು ಆ ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗೋಣ.ಶಬರಿಮಲೆ ಅಯ್ಯಪ್ಪನ ದಿವ್ಯಕ್ಷೇತ್ರಕ್ಕೆ ತೆರಳಲಿರುವ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆಲ್ಲ ಖಾರ್ವಿ ಆನ್ಲೈನ್ ವತಿಯಿಂದ ಶುಭವನ್ನು ಹಾರೈಸುತ್ತೇನೆ.

ಸ್ವಾಮೀಯೇ ಶರಣಂ ಅಯ್ಯಪ್ಪ

ಸುಧಾಕರ್ ಖಾರ್ವಿ
Editor
www.kharvionline.com

Leave a Reply

Your email address will not be published. Required fields are marked *