ಅಸಾಧ್ಯವಾದದನ್ನು ಮಾಡಿ ತೋರಿಸುವುದೇ ಸಾಧನೆ ಈ ಸಾಧನೆ ಎಂಬ ಮೂರು ಅಕ್ಷರಗಳಲ್ಲಿ ವ್ಯಕ್ತಿಯೊಬ್ಬನ ಧೀಮಂತ ವ್ಯಕ್ತಿತ್ವದ ಜೊತೆಗೆ ಸತತ ಪರಿಶ್ರಮ, ದೃಡಸಂಕಲ್ಪಗಳು ಅಡಕವಾಗಿದೆ ಸಾಧಕನಿಗೆ ಇವೇ ಪ್ರಮುಖ ಅಸ್ತ್ರಗಳು. ಬಾಲ್ಯದಿಂದಲೇ ವ್ಯಕ್ತಿಯೊಬ್ಬನಿಗೆ ಸಾಧನೆಯ ಆಯಾಮಗಳು ಲಭಿಸಿದರೆ ಮುಂದೆ ಆತ ಪರಿಪಕ್ವಗೊಳ್ಳುತ್ತಾನೆ ಇದಕ್ಕೆ ದೃಷ್ಟಾಂತವಾಗಿ ಕುಂದಾಪುರದ ಭದ್ರಜಿ ಮನೆ ಹರ್ಷಿತ್ ಖಾರ್ವಿಯವರ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ.
ಕುಂದಾಪುರ ಖಾರ್ವಿಕೇರಿ ಭದ್ರಜಿ ಮನೆ ನಾಗೇಶ್ ಖಾರ್ವಿ ಮತ್ತು ನಾರಾಯಣಿ ಖಾರ್ವಿಯವರ ಪ್ರಥಮ ಪುತ್ರನಾದ ಹರ್ಷಿತ್ ಖಾರ್ವಿ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿ ಕೈಗೊಂಡರು.
ಮಂಗಳೂರು ಬೆಂಗ್ರೆಯಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ಇದ್ದ ಹರ್ಷಿತ್ ರಿಗೆ ಈಜುವಿಕೆಯಲ್ಲಿ ಅಪರಿಮಿತ ಆಸಕ್ತಿ ಹರ್ಷಿತ್ ತನ್ನ ವಿದ್ಯಾಭ್ಯಾಸಕ್ಕಾಗಿ ನೆಲೆ ನಿಂತ ಮಂಗಳೂರು ಸ್ಯಾಂಡ್ಸ್ ಫಿಟ್ ಬೆಂಗ್ರೆ ಪ್ರದೇಶ ವೈಶಿಷ್ಟ್ಯಪೂರ್ಣ ಭೌಗೋಳಿಕ ಪರಿಸರವನ್ನು ಹೊಂದಿದ್ದು, ಪೂರ್ವದಲ್ಲಿ ನೇತ್ರಾವತಿ, ಫಲ್ಗುಣಿ ನದಿ ಮತ್ತು ಪಶ್ಚಿಮದಲ್ಲಿ ಅರಬ್ಬಿ ಸಮುದ್ರವಿದೆ.
ಹರ್ಷಿತ್ ರವರ ಸೋದರ ಮಾವನಾದ ಪ್ರಸಿದ್ಧ ಈಜುಪಟು ದಯಾನಂದ ಖಾರ್ವಿಯವರು ತನ್ನ ಸೋದರಳಿಯನಿಗೆ ಈಜುವ ಕಲೆಯಲ್ಲಿ ಸಂಪೂರ್ಣ ತರಬೇತಿ ಕೊಟ್ಟರು ನದಿ ಮತ್ತು ಸಮುದ್ರದಲ್ಲಿ ಈಜುವ ಕುರಿತಂತೆ ತನ್ನೆಲ್ಲಾ ವಿದ್ಯೆಯನ್ನು ಸಂಪೂರ್ಣ ಧಾರೆಯೆರೆದು ಹರ್ಷಿತ್ ನನ್ನು ಪರಿಪೂರ್ಣ ಈಜುಪಟುವನ್ನಾಗಿ ರೂಪಿಸಿದರು ಈ ಈಜು ತರಬೇತಿ, ಅಭ್ಯಾಸ ಹುಟ್ಟೂರಾದ ಕುಂದಾಪುರದ ಪಂಚಗಂಗಾವಳಿ ನದಿ ಮತ್ತು ಅರಬ್ಬೀ ಸಮುದ್ರದಲ್ಲೂ ನಡೆಯಿತು.
ಹರ್ಷಿತ್ ರವರ ಈಜು ಪರಿಣಿತಿಯ ಸಾಧನೆ ಮೊತ್ತಮೊದಲು 2007 ರಲ್ಲಿ ಜಗತ್ತಿನ ಮುಂದೆ ಅನಾವರಣಗೊಂಡಿತು ಹರ್ಷಿತ್ ಹದಿಮೂರು ವರ್ಷದ ಬಾಲಕನಾಗಿದ್ದಾಗ ಕೈಕಾಲುಗಳಿಗೆ ಸಂಕೋಲೆ ಕಟ್ಟಿಕೊಂಡು ಗಂಗೊಳ್ಳಿ ಲೈಟ್ ಹೌಸ್ ಸಮುದ್ರತೀರದಿಂದ ಕುಂದಾಪುರ ಸಂಗಮ್ ತನಕ ಸಮುದ್ರ ಮತ್ತು ಪಂಚಗಂಗಾವಳಿ ನದಿಯಲ್ಲಿ ಈಜಿ ಅಭೂತಪೂರ್ವ ಸಾಧನೆಗೈದರು.
ಇದು ಈಜುವಿಕೆಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ ಅದ್ಬುತ ದಾಖಲೆ. ಕೇವಲ ಹದಿಮೂರು ವರ್ಷದ ಎಳೆಬಾಲಕನೊಬ್ಬನ ಈ ಅಭೂತಪೂರ್ವ ಸಾಧನೆಗೆ ಜನ ದಂಗಾದರು. ಗಂಗೊಳ್ಳಿ ಸಮುದ್ರದಿಂದ ಕುಂದಾಪುರ ಸಂಗಮ್ ತನಕ ಪಂಚಗಂಗಾವಳಿ ನದಿಯಲ್ಲಿ ಸುಮಾರು 25 ಕೀ ಮೀ ದೂರ ಕೈಕಾಲು ಕಟ್ಟಿಕೊಂಡು ಈಜಿದ ಹರ್ಷಿತ್ ಸಾಧನೆ zee ರಾಷ್ಟ್ರೀಯ ವಾಹಿನಿಯ ಶಹಬ್ಬಾಸ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗುವ ಮೂಲಕ ಕುಂದಾಪುರದ ಕೀರ್ತಿ ಬೆಳಗಿತು.
ಹರ್ಷಿತ್ ಈಜುವಿಕೆ ಕಾರ್ಯಕ್ರಮದುದ್ದಕ್ಕೂ ಗಂಗೊಳ್ಳಿ ಸಮುದ್ರ ತೀರದಿಂದ ಕುಂದಾಪುರ ಪಂಚಗಂಗಾವಳಿ ತೀರದುದ್ದಕ್ಕೂ ಶಹಬ್ಬಾಸ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸದಸ್ಯರು ಈ ಅಭೂತಪೂರ್ವ ದೃಶ್ಯಾವಳಿಗಳನ್ನು ಸೆರೆಹಿಡಿದಿದ್ದರು.ಅದು zee ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರಗೊಂಡು ಅಪಾರ ಜನಮನ್ನಣೆಗಳಿಸಿತ್ತು ಎಂಬುದನ್ನು ಇಲ್ಲಿ ಬಹಳ ಹೆಮ್ಮೆಯಿಂದ ಸ್ಮರಿಸಿಕೊಳ್ಳಬಹುದಾಗಿದೆ.
ಸಮುದ್ರದ ರೌದ್ರರೂಪದ ತೆರೆಗಳನ್ನು ಕಂಡರೆ ಭಯವಾಗುತ್ತದೆ.ಅಂತಹದುರಲ್ಲಿ ಎಳೆ ಬಾಲಕನೊಬ್ಬ ಕೈಕಾಲುಗಳಿಗೆ ಸಂಕೋಲೆಗಳನ್ನು ಕಟ್ಟಿಕೊಂಡು ಸಮುದ್ರದಲ್ಲಿ ಮೈಲುಗಟ್ಟಲೆ ಈಜುವುದೆಂದರೆ ಸಾಮಾನ್ಯದ ಮಾತಲ್ಲ.
ಇವರ ಸೋದರ ಮಾವ ದಯಾನಂದ ಕುಡ್ತೋಲ್ ಕಾರ್ ರವರು ಕೂಡಾ ಪ್ರಸಿದ್ಧ ಈಜುಪಟುವಾಗಿದ್ದು, ಗಂಗೊಳ್ಳಿ ಬಂದರಿನಿಂದ ಮಂಗಳೂರಿನ ಹಳೆ ಬಂದರಿನ ತನಕ ಸುಮಾರು 150 ಕೀಮೀ ಈಜಿ ಸಾಧನೆ ಮಾಡಿದ ದಾಖಲೆ ಇದೆ. ಹರ್ಷಿತ್ ಸಾಧನೆಯನ್ನು ಗುರುತಿಸಿ ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನ, ವಿದ್ಯಾರಂಗ ಮಿತ್ರಮಂಡಳಿ ಖಾರ್ವಿಕೇರಿ ಕುಂದಾಪುರ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಬೆಂಗರೆ, ಮಂಗಳೂರು ಕೊಂಕಣಿ ಸಾಹಿತ್ಯ ಅಕಾಡೆಮಿ, ಭಟ್ಕಳ ಕೊಂಕಣಿ ಸಾಹಿತ್ಯ ಅಕಾಡೆಮಿ, ಜಿ ಪಂ ಹಿ ಪ್ರಾ ಶಾಲೆ ಗಂಗೊಳ್ಳಿ, ಕೊಂಕಣಿ ಖಾರ್ವಿ ಮಹಾಸಭಾ ಬೆಂಗ್ರೆ ಮಂಗಳೂರು, ಕೊಂಕಣಿ ಖಾರ್ವಿ ಸಮಾಜ ಗಂಗೊಳ್ಳಿ, ಕುಂದಾಪುರ ಜೇಸಿಸ್, ಅಖಿಲ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮುಂತಾದ ಸಂಘ ಸಂಸ್ಥೆಗಳು ಗೌರವಿಸಿ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ.
ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಉಡುಪಿ ಜಿಲ್ಲೆಯ ಜಿಲ್ಲಾ ಪ್ರಶಸ್ತಿ ಕೂಡಾ ಲಭಿಸಿದ್ದು, ಹರ್ಷಿತ್ ಈಜು ಕ್ಷೇತ್ರದಲ್ಲಿ ಮಾಡಿದ ಸಾಧನೆ, ಹಲವರ ಜೀವ ಉಳಿಸಿದ ಸಾಂಧರ್ಭಿಕ ಸೇವಾಕೈಂಕರ್ಯಗಳನ್ನು ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಸಾರ್ವಜನಿಕರು ಅಭಿಮತ ವ್ಯಕ್ತಪಡಿಸುತ್ತಾರೆ. ಪ್ರಸ್ತುತ ಹರ್ಷಿತ್ ಖಾರ್ವಿ ಮಂಗಳೂರಿನ ಕರ್ನಾಟಕ ಕರಾವಳಿ ಕಾವಲುಪಡೆಯ ಪೋಲೀಸ್ ಠಾಣೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಹರ್ಷಿತ್ ಗೆ ಖಾಯಂ ಕೆಲಸದ ಸುಭದ್ರ ನೆಲೆ ಬೇಕಾಗಿದೆ. ತನ್ನ ಪ್ರಾಣದ ಹಂಗು ತೊರೆದು ಜನರ ಪ್ರಾಣವನ್ನು ರಕ್ಷಿಸಿದ ಈ ಸಾಹಸಿ ಯುವಕನಿಗೆ ಸರ್ಕಾರ ಸರಕಾರಿ ಉದ್ಯೋಗ ನೀಡಬೇಕು.
ಕಳೆದ 2019 ಜುಲೈ ತಿಂಗಳಲ್ಲಿ ಮಂಗಳೂರು ಬೆಂಗ್ರೆಯ ಕಡಲಿನಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಪ್ರಾಣ ರಕ್ಷಿಸಿಕೊಳ್ಳಲು ಹೋರಾಡುತ್ತಿದ್ದ ಮೂವರು ಮೀನುಗಾರರನ್ನು ಹರ್ಷಿತ್ ತನ್ನ ಪ್ರಾಣವನ್ನು ಲೆಕ್ಕಿಸದೆ ಕಾಪಾಡಿದ್ದಾರೆ. ಭೋರ್ಗರೆದು ಮುನ್ನುಗ್ಗುತ್ತಿದ್ದ ರಣಭಯಂಕರ ಭಾರೀ ಗಾತ್ರದ ಸಮುದ್ರದ ಅಲೆಗಳನ್ನು ಭೇಧಿಸಿ ಹರ್ಷಿತ್ ಕಾಪಾಡಿದ ದೃಶ್ಯಗಳು ಸುದ್ದಿ ಮಾಧ್ಯಮಗಳಲ್ಲಿ ,ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.ಅತ್ಯಂತ ವೇಗ ಮತ್ತು ರಭಸದಿಂದ ಮೊರೆಮೊರೆದು ಅಬ್ಬರಿಸುವ ಕಡಲಲೆಗಳ ಎದುರಿಗೆ ಸೆಟೆದು ನಿಂತು ಮೀನುಗಾರರ ಪ್ರಾಣ ಉಳಿಸಿದ ಆ ದೃಶ್ಯಾವಳಿಗಳನ್ನು ನೋಡಿದಾಗ ಮೈ ಜುಂ ಎನ್ನಿಸುತ್ತದೆ.
ಬಡತನದ ನಡುವೆಯೂ ಕಠಿಣ ಪರಿಶ್ರಮ ಮತ್ತು ಸಾಹಸಿ ಪ್ರವೃತಿಯಿಂದ ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿರುವ ಹರ್ಷಿತ್ ರವರಿಗೆ ಸರ್ಕಾರ ಗುರುತಿಸಿ ಸೇವಾಭದ್ರತೆಯ ಕೆಲಸ ಕೊಟ್ಟರೆ ಸಾರ್ಥಕತೆ ಪಡೆದುಕೊಳ್ಳುತ್ತದೆ. ಈ ಆಶೋತ್ತರಗಳು ಶೀಘ್ರದಲ್ಲೇ ಈಡೇರಲಿ ಎಂದು ಸಾರ್ವಜನಿಕರು ಶುಭ ಹಾರೈಸಿರುತ್ತಾರೆ. ಈ ನಿಟ್ಟಿನಲ್ಲಿ ಖಾರ್ವಿ ಆನ್ಲೈನ್ ಹರ್ಷಿತ್ ರವರಿಗೆ ತುಂಬು ಹೃದಯದ ಶುಭ ಹಾರೈಸುತ್ತದೆ.
ಸುಧಾಕರ್ ಖಾರ್ವಿ
Editor
www.kharvionline.com
ನಮ್ಮ ಸಮುದಾಯದ ಮತ್ತೊಬ್ಬ ಸಾಧಕ ಹರ್ಷಿತ್ ಖಾರ್ವಿಗೆ ಅಭಿನಂದನೆಗಳು.
ಸಾಧಿಸುವ ಹಂಬಲ ಮತ್ತು ಪ್ರಯತ್ನ ನಿಮ್ಮನ್ನು ಚಾಂಪಿಯನ್‌ನನ್ನಾಗಿ ಮಾಡಿದೆ…Congratulations … ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಅಪಾಯಕಾರಿ ಸಾಧನೆಯನ್ನು ಮಾಡಲು ನಿಮ್ಮನ್ನು ಬೆಂಬಲಿಸಿದ ಮತ್ತು ಪ್ರೋತ್ಸಾಹಿಸಿದ ನಿಮ್ಮ ಹೆತ್ತವರು ಕೂಡ ಶ್ಲಾಘನೀಯ!
ಕ್ರೀಡೆಯಲ್ಲಿ ನೀವು ದೀರ್ಘಾವಧಿಯ ಸಾಧನೆಗಳನ್ನು ಸಾಧಿಸುವಂತಾಗಲಿ ಮತ್ತು ಉತ್ತಮ ಭವಿಷ್ಯ ನಿಮ್ಮದಾಗಲಿ.
ಚಿಕ್ಕ ವಯಸ್ಸಿನಲ್ಲೇ 25 ಕಿಲೋಮೀಟರ್ ದೂರದಷ್ಟು ಸಮುದ್ರದಲ್ಲಿ ಈಜಿ ಕುಂದಾಪುರದ ಜನರನ್ನು ಅಚ್ಚರಿಮೂಡಿಸುವ ಸಾಧನೆಯನ್ನು ಮಾಡಿ ಇತಿಹಾಸದಲ್ಲಿ ಯಾರು ಮಾಡದ ಸಾಧನೆ ಮೊದಲಿಗೆ ಮಾಡಿದ್ದೀರಿ. ಹಾಗೂ 3 ಜನರ ಪ್ರಾಣ ಉಳಿಸುಲು ತಮ್ಮ ಪ್ರಾಣದ ಅಂಗನ್ನೇ ತೊರೆದು 3 ಜನರನ್ನು ಯಶಸ್ವಿಯಾಗಿ ದಡ ಸೇರಿಸಿದ ಹರ್ಷಿತ್ ಖಾರ್ವಿ ಯವರಿಗೆ ನನ್ನದೊಂದ್ದು ಹೃದೆಯ ಪೂರ್ವಕ ಅಭಿನಂದನೆಗಳು ❤️👏💐 ನಿಮ್ಮ ಸಾಧನೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿಯನ್ನು ನೀಡಲು ಸಮಾಜದ ಗಣ್ಯವೇಕ್ತಿ ಯೋಬ್ಬರು ಮುಂದಾಗಿ ಬರಲಿ ನಿನ್ನ ಯಿಂದೆ ಬೆನ್ನವಾಲಾಗಿ ನಿಂತುಕೊಳ್ಳಲಿ ಎಂದು ಪ್ರಾತಿಸುತ್ತೇನೆ.🙏🙏💐
ಚಿಕ್ಕ ವಯಸ್ಸಿನಲ್ಲೇ 25 ಕಿಲೋಮೀಟರ್ ದೂರದಷ್ಟು ಸಮುದ್ರದಲ್ಲಿ ಈಜಿ ಕುಂದಾಪುರದ ಜನರನ್ನು ಅಚ್ಚರಿಮೂಡಿಸುವ ಸಾಧನೆಯನ್ನು ಮಾಡಿ ಇತಿಹಾಸದಲ್ಲಿ ಯಾರು ಮಾಡದ ಸಾಧನೆ ಮೊದಲಿಗೆ ಮಾಡಿದ್ದೀರಿ. ಹಾಗೂ 3 ಜನರ ಪ್ರಾಣ ಉಳಿಸುಲು ತಮ್ಮ ಪ್ರಾಣದ ಅಂಗನ್ನೇ ತೊರೆದು 3 ಜನರನ್ನು ಯಶಸ್ವಿಯಾಗಿ ದಡ ಸೇರಿಸಿದ ಹರ್ಷಿತ್ ಖಾರ್ವಿ ಯವರಿಗೆ ನನ್ನದೊಂದ್ದು ಹೃದೆಯ ಪೂರ್ವಕ ಅಭಿನಂದನೆಗಳು ❤️👏💐 ನಿಮ್ಮ ಸಾಧನೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿಯನ್ನು ನೀಡಲು ಸಮಾಜದ ಗಣ್ಯವೇಕ್ತಿ ಯೋಬ್ಬರು ಮುಂದಾಗಿ ಬರಲಿ ನಿನ್ನ ಯಿಂದೆ ಬೆನ್ನವಾಲಾಗಿ ನಿಂತುಕೊಳ್ಳಲಿ ಎಂದು ಪ್ರಾತಿಸುತ್ತೇನೆ.🙏🙏💐