ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಮಾರಿಪೂಜೆಯ ಸಂಭ್ರಮ

ಗ್ರಾಮದೇವತೆಗಳು ಪರಿಸರದ ಮಂದಿಯ ಜೀವನದಲ್ಲಿ ಅನಾದಿಕಾಲದಿಂದಲೂ ಹಾಸುಹೊಕ್ಕಾಗಿ ಬೆರೆತು ಬಂದಿರುವ ಧಾರ್ಮಿಕ ಬದುಕಿನ ಒಂದು ಭಾಗವಾಗಿ ಅನಾವರಣಗೊಳ್ಳುತ್ತಾರೆ. ದೇವತೆಗಳಿಲ್ಲದೇ ಜನರು ಯಾವುದನ್ನೂ ಆರಂಭಿಸುವುದಿಲ್ಲ. ಇಡೀ ಪರಿಸರದ, ಸಮಾಜದ ಐಕ್ಯತೆ, ಸಾಮರಸ್ಯದ ಜೀವಾಳ ಈ ದೇವತೆಯೇ ಆಗಿರುತ್ತದೆ. ದೇವತೆಯ ಆರಾಧನಾ ಕ್ರಮಗಳಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಆಚರಣಾ ಕ್ರಮಗಳು ಕಾಲಘಟ್ಟದಲ್ಲಿ ರೂಪಾಂತರಗೊಂಡು ಸ್ವಾತ್ವಿಕತೆಯ ಸ್ವರೂಪ ಪಡೆದುಕೊಂಡಿರುವುದನ್ನು ನಾವು ಗಮನಿಸಬಹುದಾಗಿದೆ.

ಈ ನೆಲೆಗಟ್ಟಿನಲ್ಲಿ ವಿಸ್ತ್ರತವಾಗಿ ಅವಲೋಕಿಸಿದಾಗ ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ಅಮ್ಮನವರ ದಿವ್ಯ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ಎರಡು ದಿನಗಳ ಕಾಲ ಆಚರಿಸಲ್ಪಡುವ ಮಾರಿಪೂಜೆ, ಮಾರಿಹಬ್ಬವು ವೈವಿಧ್ಯಮಯ ಧಾರ್ಮಿಕ ಸಂಭ್ರಮವಾಗಿ ಅನಾವರಣಗೊಳ್ಳುತ್ತದೆ. ಪಂಚಗಂಗಾವಳಿಯ ತಟದಲ್ಲಿ ಶಕ್ತಿಸ್ವರೂಪಿಣಿಯಾಗಿ ಭಕ್ತರ ಪೊರೆಯುತ್ತಿರುವ ಶ್ರೀ ಮಹಾಕಾಳಿ ಅಮ್ಮನವರ ದೇಗುಲ ಕೊಂಕಣಿ ಖಾರ್ವಿ ಸಮಾಜದ ಅಭೂತಪೂರ್ವ ನಂಬಿಕೆಯ ತಾಣ. ಲಕ್ಷಾಂತರ ಭಕ್ತರ ಶ್ರದ್ಧಾಭಕ್ತಿಯ ಆರಾಧನಾ ಕೇಂದ್ರ. ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಆಚರಿಸಲ್ಪಡುವ ಮಾರಿಪೂಜೆ ಮಹೋತ್ಸವವು ಒಂದು ವಾರ ಇರುವಾಗಲೇ ಒಂಬತ್ತು ಎಡೆ ಪೂಜೆಯಿಂದ ಆರಂಭವಾಗುತ್ತದೆ. ಇದನ್ನು ಸ್ಥಳೀಯವಾಗಿ ಮಾರಿಹಬ್ಬಕ್ಕೆ ದಿನ ಇಡುವುದು ಎಂದು ಕರೆಯುತ್ತಾರೆ.

ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಧಾರ್ಮಿಕ ನಿಯಮದ ಪ್ರಕಾರ ಪರಿಸರದವರು ಊರು ಬಿಟ್ಟು ಪರವೂರಿಗೆ ಹೋಗಬಾರದು ಎಂಬ ಕಟ್ಟುಪಾಡುಗಳಿವೆ. ಮಾರಿಹಬ್ಬ, ಮಾರಿಪೂಜೆಗೆ ಜನರನ್ನು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಸಿದ್ಧಗೊಳಿಸುವ ಆರಂಭದ ಆಚರಣೆ ಇದಾಗಿದೆ. ಜನರಿಗೆ ಹಬ್ಬದ ಸೂಚನೆಯನ್ನು ಕೊಡುವುದರ ಜೊತೆಗೆ ಅವರು ಪಾಲಿಸಬೇಕಾದ ವಿಧಿ ನಿಷೇಧಗಳನ್ನು ಆಗ ತಿಳಿಸಲಾಗುತ್ತದೆ. ಒಂಬತ್ತು ಎಡೆ ಪೂಜೆ ಮತ್ತು ಮಾರಿಪೂಜೆಯನ್ನು ಮಂಗಳವಾರವೇ ಆಚರಿಸುವುದು ವಿಶೇಷ. ಒಂಬತ್ತು ಎಡೆ ಪೂಜೆ ಎಂದರೆ ಒಂಬತ್ತು ದೇವಿ ಗಣಗಳಿಗೆ ಸಲ್ಲಿಸುವ ವಿಶೇಷ ಪೂಜೆ. ಆ ದಿನ ಬಿದಿರಿನ ತೆಮೆಯಲ್ಲಿ ಉದ್ದನೆಯ ಮಂಟಪ ರಚಿಸಿ ಅದರ ತಳಭಾಗದಲ್ಲಿ ಹುಲ್ಲನ್ನು ಸಮ ಪ್ರಮಾಣದಲ್ಲಿ ವಿಸ್ತೀರ್ಣಕ್ಕೆ ಹೊಂದುವಂತೆ ಹರಡುತ್ತಾರೆ. ನಂತರ ಒಂಬತ್ತು ಬಾಳೆಎಲೆಯಲ್ಲಿ ದೇವಿಗಣಗಳಿಗೆ ನೈವೇದ್ಯವಾಗಿ ಅವಲಕ್ಕಿ ಬೆಲ್ಲ, ಕಾಯಿ ಮತ್ತು ಎಲೆಗೊಂದರಂತೆ ಒಂಬತ್ತು ಸೀಯಾಳ ಇಡುತ್ತಾರೆ. ದೇವಿಗಣಗಳಿಗೆ ಪ್ರಿಯವಾದ ಕೆಂಪುಹೂವುಗಳನ್ನು ಹೆಚ್ಚಾಗಿ ಇಡುತ್ತಾರೆ. ಅಬ್ಬಲಿಗೆ ಹೂಗಳನ್ನು ಇಡುವುದು ವಾಡಿಕೆ.

ಒಂಬತ್ತು ಎಡೆ ಮಂಟಪದ ನಡುಮಧ್ಯೆ ಒಂಬತ್ತು ಸಿದ್ದೆ ಹಾಲನ್ನು ಇಡಲಾಗುತ್ತದೆ. ಸಿದ್ದತೆಗಳೆಲ್ಲ ಪೂರ್ಣಗೊಂಡ ಬಳಿಕ ಒಳಗಡೆ ದೇವಿಪಾತ್ರಿಯ ಆಸನದ ಕೆಳಗೆ ಹಾಲು ,ದೇವಿಪಾತ್ರಿಯು ಧರಿಸುವ ಆಭರಣಗಳನ್ನು ಇಡುತ್ತಾರೆ. ಒಳಗೆ ಶ್ರೀ ಮಹಾಕಾಳಿ ಅಮ್ಮನವರ ಪೂಜೆ ಜರುಗಿದ ಬಳಿಕ ಒಂಬತ್ತು ಎಡೆ ಪೂಜೆಯ ಬಂಡಿಯನ್ನು ಪಂಚಗಂಗಾವಳಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ ಇಲ್ಲಿಗೆ ಮಾರಿಪೂಜೆಯ ಪ್ರಾರಂಭಿಕ ಹಂತ ಮುಗಿಯುತ್ತದೆ. ಮುಂದಿನದು ಮಂಗಳವಾರದ ಮಾರಿಪೂಜೆಯ ಆಚರಣೆ. ಆಚರಣೆಯ ಅಂಗವಾಗಿ ಪ್ರಥಮವಾಗಿ ವೈದಿಕರ ಉಪಸ್ಥಿತಿಯಲ್ಲಿ ಪಂಚಗಂಗಾವಳಿಯಿಂದ ಕತ್ತಲು ಆವರಿಸಿದಾಗ ಪಂಚಗಂಗಾವಳಿಯಿಂದ ಕಲಶದಲ್ಲಿ ನೀರು ತರಲಾಗುತ್ತದೆ. ನೀರನ್ನು ದೇವಿಯ ಸನ್ನಿಧಿಯಲ್ಲಿ ಇಟ್ಟ ಬಳಿಕ ಮಾರಿಪೂಜೆಯ ಮುಂದಿನ ಕಾರ್ಯಕ್ರಮಕ್ಕೆ ಚಾಲನೆ ದೊರಕುತ್ತದೆ. ಇಲ್ಲಿ ಮಾರಿ ಓಡಿಸುವ ಸಂಪ್ರದಾಯದ ಅಂಗವಾಗಿ ದೊಡ್ಡ ಗಾತ್ರದಲ್ಲಿ ಬಂಡಿಯನ್ನು ಮಾಡಿ ಅದರೊಳಗೆ ಹದಿನೈದು ಕೆ.ಜಿ ಅಕ್ಕಿಯ ಚರವನ್ನು ಬಾಳೆಎಲೆಯಲ್ಲಿ ಬಡಿಸಿ ಕುಂಬಳಕಾಯಿ ತುಂಡುಗಳನ್ನು ಅದರೊಂದಿಗೆ ಇಟ್ಟು ಕುಂಕುಮದ ನೀರನ್ನು ಹರಡುತ್ತಾರೆ. ನಡುಮಧ್ಯೆ ಮಣ್ಣಿನ ಮಡಕೆಯಲ್ಲಿ ಹತ್ತು ಸಿದ್ದೆ ಹಾಲು ಇಡುತ್ತಾರೆ. ಮಾರಿ ಓಡಿಸುವ ಬಂಡಿ ತೆಗೆದುಕೊಂಡು ಹೋಗುವ ಮುನ್ನ ದೊಡ್ಡ ಕಲ್ಲೊಂದನ್ನು ಇಟ್ಟು ಅದಕ್ಕೆ ದೇಗುಲದ ಆಡಳಿತ ಮಂಡಳಿಯವರು, ಊರಿನ ಗಣ್ಯರು, ಸಮಾಜದ ಮೊಕ್ತೇಸರರು, ವಾದ್ಯದವರು, ಅರ್ಚಕರು.ಪೋಲಿಸ್ ಇಲಾಖೆ, ಹೀಗೆ ವಿವಿಧ ವ್ಯಕ್ತಿಗಳು ಗಣ್ಯರು ಕಲ್ಲಿಗೆ ಕಾಯಿ ಒಡೆಯುತ್ತಾರೆ. ಸಂಪ್ರದಾಯ ಮುಗಿದ ಬಳಿಕ ಬಂಡಿಯನ್ನು ಮಾರಿ ಓಡಿಸುವ ಪ್ರಕ್ರಿಯೆಯೊಂದಿಗೆ ಪಂಚಗಂಗಾವಳಿಯಲ್ಲಿ ವಿಸರ್ಜನೆ ಮಾಡುತ್ತಾರೆ. ನಂತರ ದೇಗುಲದಲ್ಲಿ ಮಹಾಪೂಜೆ ಪ್ರಾರಂಭವಾಗುತ್ತದೆ.

ಅದೇ ದಿನ ರಾತ್ರಿ ತುಲಾಭಾರ ಸೇವೆ ಇತ್ಯಾದಿ ಕಾರ್ಯಕ್ರಮಗಳು ಜರುಗುತ್ತದೆ. ಮರುದಿನ ಹಬ್ಬದ ಸಡಗರ.ದೇವಸ್ಥಾನದ ವತಿಯಿಂದ ಪ್ರಸಾದ ರೂಪದಲ್ಲಿ ದೋಸೆಯನ್ನು ವಿತರಿಸಲಾಗುತ್ತದೆ. ಭಕ್ತಾದಿಗಳಿಗೆ ದೋಸೆ ಪ್ರಸಾದ ವಿತರಿಸುವ ಮುನ್ನ ಮಕ್ಕಳಿಗೆ ವಿತರಿಸಬೇಕೆಂಬ ದೇವಿ ಆಜ್ಞೆಯ ಪ್ರಕಾರ ಮೊದಲು ದೋಸೆ ಪ್ರಸಾದವನ್ನು ವಿತರಣೆ ಮಾಡುತ್ತಾರೆ. ಮಹಾಕಾಳಿ ಅಮ್ಮನವರ ಜೊತೆಯಲ್ಲಿ ಪೂಜಿಸಲ್ಪಡುವ ಹೊಸದೇವತೆಯು ಈ ಆಜ್ಞೆಯನ್ನು ನೀಡಿದ್ದಾಳೆ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ. ಮಾರಿಪೂಜೆ, ಮಾರಿಹಬ್ಬ ಹೀಗೆ ಎರಡು ದಿನ ಸಂಪ್ರದಾಯದ ನೆಲೆಗಟ್ಟಿನಲ್ಲಿ ವೈಭವಪೂರ್ಣವಾಗಿ ಸಂಪನ್ನಗೊಳ್ಳುತ್ತದೆ. ಎಲ್ಲರ ಮನೆಯಲ್ಲಿ ಸಂಭ್ರಮ ಸಡಗರ ಬಂಧುಮಿತ್ರರ ಜೊತೆಗೆ ಸಹಭೋಜನ. ಮಾರಿಪೂಜೆಯ ದಿನ ಸಹಸ್ರಾರು ಭಕ್ತಾದಿಗಳು ಶ್ರೀ ಮಹಾಕಾಳಿ ಅಮ್ಮನವರ ದರ್ಶನ ಪಡೆದು ಧನ್ಯತೆ ಪಡೆದುಕೊಳ್ಳುತ್ತಾರೆ.

ಧಾರ್ಮಿಕ ಸಂಸ್ಕೃತಿಗೆ ಆಚರಣೆಗಳೇ ಬೆನ್ನಲುಬು. ಆಚರಣೆಯಿಂದ ದೇವರು ಸಂತೃಪ್ತಗೊಳ್ಳುತ್ತಾರೆ. ದೇವರ ಮಹಿಮೆ ಇಲ್ಲಿ ವಿರಾಟ್ ಸ್ವರೂಪ ಪಡೆದುಕೊಳ್ಳುತ್ತದೆ. ದೇವರಿಗೂ ಸಮಾಜಕ್ಕೂ ಇರುವ ಸಂಬಂಧ ಅಭಿವ್ಯಕ್ತಿಗೊಳ್ಳುವ ಧಾರ್ಮಿಕ ಪ್ರಕ್ರಿಯೆಗಳೇ ಹಬ್ಬ ಹರಿದಿನಗಳ ಆಚರಣೆಗಳು. ಸಮಾಜದ ಹಿತರಕ್ಷಣೆಗಾಗಿ ವಾರ್ಷಿಕವಾಗಿಯೂ, ವಿಶೇಷ ಸಂದರ್ಭಗಳಲ್ಲಿ ಆಚರಿಸುವ ಸಂಪ್ರದಾಯ, ಆಚರಣೆಗಳನ್ನು ಒಳಗೊಂಡ ಸಂಕೀರ್ಣ ಸ್ವರೂಪವನ್ನೇ ಹಬ್ಬ ಎಂದು ಕರೆಯುತ್ತಾರೆ. ಸಂಪ್ರದಾಯ, ಹಬ್ಬ,ಆಚರಣೆ ಈ ಮೂರಕ್ಕೂ ದೇವರ ಮೇಲಿನ ಅದಮ್ಯ ನಂಬಿಕೆಯೇ ಜೀವಧಾತು. ಶಕ್ತಿಸ್ವರೂಪಿಣಿಯಾದ ಶ್ರೀ ಮಹಾಕಾಳಿ ಅಮ್ಮನವರ ಸನ್ನಿಧಿಯಲ್ಲಿ ಮಾರಿಪೂಜೆಯ ಪ್ರಯುಕ್ತ ನಡೆಯುವ ಆಚರಣೆಗಳು ವೈಶಿಷ್ಟ್ಯಪೂರ್ಣವಾಗಿದ್ದು, ಅಧ್ಯಯನ ಯೋಗ್ಯವಾಗಿದೆ ಅಪಾರ ಸಂಖ್ಯೆಯ ಭಕ್ತಾದಿಗಳನ್ನು ತನ್ನ ಬಳಿ ಸೆಳೆದುಕೊಂಡು ಅಭಯ ನೀಡುತ್ತಿರುವ ಶ್ರೀ ಮಹಾಕಾಳಿ ಅಮ್ಮನವರ ಸನ್ನಿಧಿಗೆ ಭಕ್ತಾಧಿಗಳು ಆಗಮಿಸಿ ತಾಯಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿಜ್ಞಾಪನೆ.

ಸುಧಾಕರ್ ಖಾರ್ವಿ
www.kharvionline.com

Leave a Reply

Your email address will not be published. Required fields are marked *