“ಪಡುಗಡಲಿನಿಂದ ಕೃತಿಯಲ್ಲಿ ಕಡಲಿಗೆ ಸಂಬಂಧಿಸಿದಂತೆ ಜನಪದೀಯ ವಿಚಾರ, ವೈಚಾರಿಕ ಚಿಂತನೆ, ಸಂಸ್ಕೃತಿ-ಸಂಪ್ರದಾಯದ ವಿವರಣೆಗಳಿವೆ. ಖಾರ್ವಿಯವರು ಮೀನುಗಾರಿಕೆಯಲ್ಲಿ ಪಡೆದ ನೈಜ ಅನುಭವಗಳ ಮಿಶ್ರಣ ಈ ಕೃತಿಯಲ್ಲಿದೆ. ಮೀನುಗಾರಿಕೆ ಮತ್ತು ಕಡಲಿನ ಕುರಿತು ಇಷ್ಟು ಸಂಖ್ಯೆಯಲ್ಲಿ ಅಂಕಣಗಳನ್ನು ಬರೆದಿದ್ದು ಇದೇ ಮೊದಲು. ಮೀನುಗಾರಿಕಾ ಪದವಿಯಲ್ಲಿ ಪಠ್ಯವಾಗುವಷ್ಟು ಪ್ರಬುದ್ಧ ಮತ್ತು ಸಮೃದ್ಧ ಸಾಹಿತ್ಯ ಇದರಲ್ಲಿದೆ.” ಎಂದು ಹೊಸದಿಗಂತ ಪತ್ರಿಕೆಯ ಅಂಕಣಕಾರರಾದ ಹಕ್ಲಾಡಿ ಸಂದೇಶ್ ಹೆಚ್ ನಾಯ್ಕ್ ಅವರು ಹೇಳಿದರು. ಇವರು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ, ಕಥಾಬಿಂದು ಪ್ರಕಾಶನದವರು ಪ್ರಕಟಿಸಿರುವ ಪಡುಗಡಲಿನಿಂದ ಕೃತಿಯನ್ನು ಪರಿಚಯಿಸುತ್ತಾ ಈ ಮಾತನ್ನು ಹೇಳಿದರು.
ಮುಲ್ಲಕಾಡಿನ ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯ ಪದವೀಧರ ಶಿಕ್ಷಕರಾದ ನಾಗರಾಜ ಖಾರ್ವಿಯವರು ಬರೆದ ಮೂರನೆಯ ಪುಸ್ತಕ ಇದಾಗಿದ್ದು, ಕೃತಿಯನ್ನು ಯುವಲೇಖಕಿ, ಗಡಿನಾಡ ಕನ್ನಡತಿ ಡಾ. ವಾಣಿಶ್ರೀಯವರು ಬಿಡುಗಡೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಹರಿಕೃಷ್ಣ ಪುನರೂರು ಅವರು ಮಾತನಾಡುತ್ತಾ “ಇದೊಂದು ವಿಭಿನ್ನ ಕೃತಿಯಾಗಿದ್ದು ಕಡಲಿನ ಬಗ್ಗೆ ಪ್ರತಿಯೊಬ್ಬ ಕರಾವಳಿಗನೂ ತಿಳಿಯಲೇಬೇಕಾದ ವಿಚಾರ ಇದರಲ್ಲಿದೆ.” ಎಂದರು.
ಜಯಕಿರಣ ಪತ್ರಿಕೆಯಲ್ಲಿ ಬರುತ್ತಿದ್ದ ಸರಣಿ ಅಂಕಣಗಳಲ್ಲಿ 50 ಲೇಖನಗಳು ಪಡುಗಡಲಿನಿಂದ ಕೃತಿಯಲ್ಲಿ ಮುದ್ರಿತವಾಗಿದೆ.
ಪಿ.ವಿ. ಪ್ರದೀಪ್ ಕುಮಾರ್ ಅವರ ನೇತೃತ್ವದಲ್ಲಿ ಕಥಾಬಿಂದು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ(ರಿ.) ಹಾಗೂ ಯುಗಪುರುಷ ಸಹಯೋಗದೊಂದಿಗೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ನಡೆದಿತ್ತು. ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣ ಕಟೀಲು ಆಶೀರ್ವಚನ ನೀಡಿದರು. ಭುವನಾಭಿರಾಮ ಉಡುಪ, ಬೈಂದೂರು ಶಿಕ್ಷಣ ಸಮನ್ವಯಧಿಕಾರಿ ಅಬ್ದುಲ್ ರವೂಫ್, ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್‌ಪೆಕ್ಟರ್ ಬಿ.ಕೆ.ನಾಯ್ಕ್ , ಶಿಕ್ಷಕರಾದ ಗಿರೀಶ್ ಗೌಡ ತೋಟದ್, ಡಾ. ಶೇಖರ್ ಅಜೆಕಾರ್, ಕೆ.ವಿ. ಲಕ್ಷ್ಮಣ ಮೂರ್ತಿ, ಶಿಕ್ಷಕಿ ಶ್ರೀಮತಿ ಕೃಪಾ ಉಪಸ್ಥಿತರಿದ್ದರು.