ಯುಗಾದಿಯ ಶುಭದಿನ ಸಮುದ್ರಕ್ಕೆ ಕಡಲಾಮೆ ಮರಿಗಳ ಪಯಣ

ಹಿರಿಯ ಜಾನಪದ ವಿದ್ವಾಂಸ ಡಾ. ಎನ್. ಆರ್. ನಾಯಕ ದಂಪತಿಗಳು ಮತ್ತು ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ, ಸ್ವಾಮಿ ವಿವೇಕಾನಂದ ಯೂತ್ ಮುಮೆಂಟಿನ ಉತ್ತರ ಕರ್ನಾಟಕದ ವ್ಯವಸ್ಥಾಪಕ ಡಾ.ಮೋಹನಕುಮಾರ ತಂಬದ, ಬೂಡಾ ಎನ್ ಜಿ ಓದ ಸವಿತಾ ಉದಯ, ಕಡಲ ವಿಜ್ಞಾನಿ ಡಾ.ಪ್ರಕಾಶ ಮೇಸ್ತ, ಸ್ನೇಹಕುಂಜದ ಡಾ ನಾರಾಯಣ ಹೆಗಡೆ ಮುಂತಾದ ಪ್ರಮುಖರ ಉಪಸ್ಥಿತಿಯಲ್ಲಿ ಇಲ್ಲಿನ ಹಿಂದು, ಮುಸ್ಲಿಂ, ಕ್ರೈಸ್ತ ಸಮುದಾಯದ ಜನರು ಹೊನ್ನಾವರ ತಾಲ್ಲೂಕಿನ ಕಾಸರಕೋಡ ಟೊಂಕದ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ಯೋಜನೆಯ ಹತ್ತಿರದ ಕಡಲತೀರದಲ್ಲಿ ಇಂದು ಬೆಳ್ಳಂಬೆಳಗ್ಗೆ ಒಂದೆಡೆ ಸೇರಿ – ಸಂರಕ್ಷಣೆ ಮಾಡಿರುವ – ಅಳಿವಿನ ಅಂಚಿನಲ್ಲಿರುವ ಅಲೀವ್ ರಿಡ್ಲೆ ಜಾತಿಯ ನೂರಾರು ಕಡಲಾಮೆಮರಿಗಳನ್ನು ಸಮುದ್ರಕ್ಕೆ ಬಿಟ್ಟು ಯುಗಾದಿಯ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ಅವರು ಮಾತನಾಡಿ ಚಾಂದ್ರಮಾನ ಯುಗಾದಿಯ ಈ ಶುಭ ಸಂದರ್ಭದಲ್ಲಿ ಬೇವು ಬೆಲ್ಲ ತಿಂದು, ಸಮಾಜದಲ್ಲಿ ಪರಷ್ಪರ ಪ್ರೀತಿ, ಸಾಮರಸ್ಯ, ಶಾಂತಿ, ಸೌಹಾರ್ದತೆಯ ಮೂಲಕ ಎಲ್ಲರೊಳಗೊಂದಾಗುವ ಮಾನವ ಧರ್ಮವನ್ನು ಬಲಪಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಎಲ್ಲರೂ ಸೇರಿ ಮಾಡೋಣ. ಸರ್ವಧರ್ಮಗಳ, ಶಾಂತಿ, ಸೌಹಾರ್ದತೆಯ ನೆಲೆಬೀಡಾದ ಮತ್ತು ವಿವಿಧತೆಯಲ್ಲಿಯೂ ಏಕತೆಯನ್ನು ಹೊಂದಿರುವ ನಮ್ಮ ನಾಡಿನಲ್ಲಿ ಇತ್ತೀಚೆಗೆ, ಅಧಿಕಾರ ಮತ್ತು ರಾಜಕೀಯ ಸ್ವಾರ್ಥಕ್ಕಾಗಿ ಹಲವೆಡೆ, ಧರ್ಮ, ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಮತ್ತು ಜನರಲ್ಲಿ ದ್ವೇಷ ಬಿತ್ತುವ ಕೆಲಸ ನಡೆಯುತ್ತಿರುವದನ್ನು ಕಾಣುತ್ತಿದ್ದೇವೆ. ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುವ ಇಂತಹ ಅಪಾಯದ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕಾಗಿದೆ. ಬೆಲೆ ಏರಿಕೆ, ನಿರೋದ್ಯೋಗ ಮತ್ತು ಬಡತನದ ಹೆಚ್ಚಳದಿಂದಾಗಿ ಜನರು ಇಂದು ಸಂಕಷ್ಟದಲ್ಲಿದ್ದಾರೆ. ಶುಭಕ್ರತನಾಮ ಸಂವತ್ಸರದ ಹೊಸ ವರ್ಷದಲ್ಲಿ ನಾಡಿನ ಜನರ ಸಂಕಷ್ಟಗಳು ದೂರವಾಗಿ ಸರ್ವರ ಬಾಳಿನಲ್ಲೂ ಸುಖ, ಶಾಂತಿ, ನೆಮ್ಮದಿ ಮತ್ತು ಸಮ್ರಧ್ಧಿ ತರಲೆಂದು ಶುಭ ಹಾರೈಸುವದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಮ್ಮ ಅನಿಸಿಕೆಯನ್ನು ಹಂಚಿ ಕೊಂಡ ಖ್ಯಾತ ಹಿರಿಯ ಸಾಹಿತಿ ನಿವೃತ್ತ ಪ್ರಾಂಶುಪಾಲ ಡಾ. ಎನ್ ಆರ್ ನಾಯಕ ಅವರು ಇಂದು ತಾನು ತನ್ನ ಜೀವನದಲ್ಲಿಯೇ ಅಪೂರ್ವವಾದ ಸಂತಸದ ಕ್ಷಣಗಳನ್ನು ಈ ಕಡಲತೀರದಲ್ಲಿ ಅನುಭವಿಸಿದ್ದೇನೆ. ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಟ್ಟಿರುವ ಆನಂದ ಸಂಭ್ರಮ ಹೇಳತೀರದು. ಅಪರೂಪದ ಕಡಲಾಮೆಗಳು ಇಂತಹ ಸುಂದರ ಪರಿಸರದ ಕಡಲತೀರದಲ್ಲಿ ತಮ್ಮ ವಂಶಾಭಿವ್ರಧ್ಧಿಗಾಗಿ ಮೊಟ್ಟೆಇಟ್ಟಿರುವದನ್ನು ಹಾಗೂ ಅವುಗಳ ಸಂರಕ್ಷಣೆಗೆ ಸ್ಥಳೀಯರು ಮತ್ತು ಅರಣ್ಯ ಇಲಾಖೆ ವಹಿಸುತ್ತಿರುವ ಕಾಳಜಿ ಅನನ್ಯವಾದುದು. ಜೀವ ವೈವಿಧ್ಯತೆಗಳಿಗೆ ಮತ್ತು ಜನರಿಗೆ ಪರಿಸರದ ನೈಜ ಲಾಭ ಸಿಗುವ ಇಂತಹ ಅಪರೂಪದ ಸುಂದರ ಕಡಲತೀರಗಳನ್ನು ಮುಂದಿನ ತಲೆಮಾರಿನ ಪಿಳಿಗೆಯ/ ಜನರಿಗಾಗಿ ರಕ್ಷಿಸಿಕೊಳ್ಳುವದು ತೀರಾ ಅಗತ್ಯ ವಿರುವದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಸಾಹಿತಿ ಶಾಂತಿ ನಾಯಕ, ಉಪವಲಯ ಅರಣ್ಯಾಧಿಕಾರಿ ಮಹ್ಮದ್ ಗೌಸ, ಮತ್ತು ವಿವಿಧ ಸಿಬ್ಬಂದಿಗಳು, ಸ್ಥಳೀಯ ಮುಖಂಡರಾದ ಗಣಪತಿ ತಾಂಡೇಲ, ಭಾಷ್ಕರ ತಾಂಡೇಲ್, ಮಹ್ಮದಕೋಯಾ, ವಿವನ್ ಫರ್ನಾಂಡಿಸ್, ರಾಜುತಾಂಡೇಲ, ರೇಣುಕಾ ತಾಂಡೇಲ, ಸಫಿಯಾಬಿ ಇಸೂಬ, ಮಹ್ಮದ್ ಪಂಡಿತ್, ಹಸರತೇ ಅಬ್ದುಲ್, ಪ್ರೀತಿ ತಾಂಡೇಲ್, ಜೈನಜಟಗೇಶ್ವರ ಸಂಘದ ರಮೇಶ್ ತಾಂಡೇಲ್, ರೇಖಾ ರಾಜೇಶ್ ತಾಂಡೇಲ್, ರಾಜು ಶೇಷಗಿರಿ, ಚಿದಂಬರ ತಾಂಡೇಲ್, ವಿಠ್ಠಲ, ಬಾಬು ಮತ್ತು ಹಲವು ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಉಪಸ್ಥಿತರಿದ್ದರು. ಕಾರ್ಮಿಕರ ಸಂಘದ ಕಾರ್ಯದರ್ಶಿ ರಾಜುತಾಂಡೇಲ ಕಡಲಾಮೆಮರಿಗಳಿಗೆ ಪೂಜೆ ಸಲ್ಲಿಸಿದರು.

ವರದಿ: ಚಂದ್ರಕಾಂತ ಕೊಚರೇಕರ

One thought on “ಯುಗಾದಿಯ ಶುಭದಿನ ಸಮುದ್ರಕ್ಕೆ ಕಡಲಾಮೆ ಮರಿಗಳ ಪಯಣ

  1. ಹೃದಯಸ್ಪರ್ಶಿ ಕಾರ್ಯಕ್ರಮ.ದೇವರು ಮೆಚ್ಚುವ ಕಾರ್ಯ.ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಪ್ರಜ್ಞೆಯಾಗಿದೆ ಈ ಕಾರ್ಯಕ್ರಮ.ಸರ್ವರಿಗೂ ಯುಗಾದಿಯ ಶುಭಾಶಯಗಳು.ಕಾಸರಕೋಡು ಟೊಂಕದ ಜನರ ಒಗ್ಗಟ್ಟು,ಪ್ರೀತಿ ವಿಶ್ವಾಸ,ಧಾರ್ಮಿಕ ಸಮಭಾವ ಎಲ್ಲರಿಗೂ ಮಾದರಿ.👍👌🙏🙏🙏🙏💐💐💐💐🙏🙏🙏🙏🙏

Leave a Reply

Your email address will not be published. Required fields are marked *