ಮನುಷ್ಯನ ಮಾತುಗಾರಿಕೆಯ ಬಗ್ಗೆ ಸಂತಕವಿ ಕಬೀರ್ ತುಂಬಾ ಸ್ವಾರಸ್ಯಕರವಾಗಿ ತಮ್ಮ ದೋಹಾ ದ್ವಿಪದಿಯಲ್ಲಿ ಹೀಗೆ ವರ್ಣಿಸಿದ್ದಾರೆ. ರೇ ಮನ್ ಜಿಹ್ವಾ ಬಾವರಿ ಕಹಗಯೀ ಸರಗ್ ಪತಾಲ್ ಆಪ ತೋ ಭೀತರ್ ಗಯಿ,ಝೂತಿಖಾತ್ ಕಪಾಲ್ ಇದರರ್ಥ ಮನಸ್ಸೇ,ಅಂದರೆ ಮನುಷ್ಯನೇ ನಾಲಿಗೆಯನ್ನು ಹರಿಯಲು ಬಿಡಬೇಡ.ಅದು ಹುಚ್ಚು ಹುಚ್ಚಾಗಿ ಹರಿದು ಹೋಗುವುದು.ನಾವು ಹರಟುತ್ತಿದ್ದರೆ ಕೇಳುವವರ ಮನಸ್ಸಿಗೆ ಬೇಸರ ಆಗುವುದು.ನೋವು ಉಂಟಾಗಲೂ ಬಹುದು.ಕೋಪ ಬರಬಹುದು.ಆಗ ದಾಕ್ಷಿಣ್ಯವಿಲ್ಲದೇ ನಾಲ್ಕು ಬಾರಿಸಲೂಬಹುದು.ಹಾಗೆ ಬಾರಿಸಿದಾಗ ಇದುವರೆಗೂ ಹರಿಯುವ ನೀರಿನಂತೆ ಮಾತನ್ನು ಒದರಿದ ನಾಲಿಗೆ ಬಾಯಿಯೊಳಗೆ ಸುರಕ್ಷಿತವಾಗಿದ್ದು ಪಾರಾಗುತ್ತದೆ. ಏನೂ ತಪ್ಪು ಮಾಡದ ಕಪಾಲಗಳು ಹೊಡೆತ ತಿನ್ನಬೇಕಾಗುತ್ತದೆ.
ತನ್ನದೇ ಸರಿ ಎಂದು ವಾಮತರ್ಕ ಮಂಡಿಸುವ ವ್ಯಕ್ತಿಯ ವಯಸ್ಸು,ಅಂತಸ್ತು, ಬಿರುದು, ಬಾವಲಿ ಏನೇ ಇರಲಿ ಆತ ಖಂಡಿತಾ ನಂಬಿಕೆಗೆ ಅರ್ಹನಲ್ಲ.ಆವನಂಥ ಮೂರ್ಖ ಶಿಖಾಮಣಿ ಮತ್ತೊಬ್ಬನಿಲ್ಲ.
ಮಾತು ನ್ಯಾಯಸಮ್ಮತವಾಗಿರಬೇಕು. ವಿಷಯ ಪ್ರತಿಪಾದನೆಯ ಧ್ಯೇಯ ಉತ್ತಮವಾಗಿರಬೇಕಾದರೆ, ಈ ಕಟ್ಟುಪಾಡು ಅವಶ್ಯಕ. ಆಡಿದ ಮಾತೋ, ಮಾಡಿದ ಕೆಲಸವೋ ಆಕ್ಷೇಪಾರ್ಹವಾದುದಾದರೆ ,ಆ ಮಾತಿನ, ಕೆಲಸದ ಸಮರ್ಥನೆಗಾಗಿ ತರ್ಕ ಮಾಡುತ್ತಾ ಹೋಗುವುದು ಸರಿಯಲ್ಲ.
ವಿಷಯ ಪ್ರತಿಪಾದನೆಯು ಸ್ವೀಕಾರಾರ್ಹವಾಗಬೇಕಾದರೆ ತರ್ಕಬದ್ದವಾದ ವಾದ ಉಚಿತವೆನಿಸುತ್ತದೆ.ಆಡುವ ಮಾತು ಹದ ತಪ್ಪಿದಾಗ ಆಗುವ ಅನಾಹುತಗಳು ಅಷ್ಟಿಷ್ಟಲ್ಲ.
ಇದಕ್ಕೆ ಹಲವಾರು ದೃಷ್ಟಾಂತಗಳಿವೆ ಹಲವು ಆಹಿತಕರ ಘಟನೆಗಳು ಸಂಭವಿಸಿದ ಕರಾಳ ಉದಾಹರಣೆಗಳಿವೆ.
ಮನುಷ್ಯನ ಮಾತು, ಮಾತಾಡುವ ರೀತಿ ನೀತಿಗಳು ಆತನ ವ್ಯಕ್ತಿತ್ವವನ್ನು ನಿರೂಪಿಸುತ್ತವೆ. ನಯ ವಿನಯ ಸೌಜನ್ಯಗಳು ವ್ಯಕ್ತಿಯ ವ್ಯಕ್ತಿತ್ವದ ಮೆರುಗನ್ನು ಹೆಚ್ಚಿಸುತ್ತದೆ.
ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಭಕ್ತಿಭಂಡಾರಿ ಬಸವಣ್ಣನವರು ತಮ್ಮ ವಚನವೊಂದರಲ್ಲಿ ಪಡಿಮೂಡಿಸಿದ ಮಾತುಗಳು ಮನುಷ್ಯನ ಮಾತಿನ ಸಂಸ್ಕಾರದ ಬಗ್ಗೆ ಉತ್ತಮ ಮಾರ್ಗದರ್ಶನ ನೀಡುತ್ತದೆ.
ಕೇವಲ ತನ್ನ ಸ್ವಾರ್ಥಕ್ಕಾಗಿ ಚಿಂತಿಸುವ ಮನುಷ್ಯ ಸದಾಕಾಲ ಪರರ ನಿಂದನೆ ಮತ್ತು ಸಮಾಜದ ನಿಂದನೆ ಮಾಡುತ್ತಾ ಇರುತ್ತಾನೆ. ತಮ್ಮ ಸ್ವಾರ್ಥಸಾಧನೆಗೆ ಸಮಾಜದ ಜನರ ಹಿತಾಸಕ್ತಿಗಳನ್ನು ಬಲಿಗೊಡುವ ಧೂರ್ತರು ಸಜ್ಜನಿಕೆಯ ಮುಖವಾಡಗಳನ್ನು ಧರಿಸಿ ನಮ್ಮೆಲ್ಲರ ನಡುವೆಯೇ ನಗು ನಗುತ್ತಾ ಇರುತ್ತಾರೆ. ಸೂಕ್ತ ಅವಕಾಶಕ್ಕಾಗಿ ಬಣ್ಣ ಬಣ್ಣದ ಮಾತಗಳನ್ನಾಡುತ್ತಾ ನಮ್ಮ ಸುತ್ತ ಮುತ್ತ ರಾಜಗಾಂಭೀರ್ಯದಿಂದ ಠಳಾಯಿಸುತ್ತಿರುತ್ತಾರೆ.
ಇವರು ತಮ್ಮ ಮಾತುಗಾರಿಕೆಯಿಂದ ಸಮಾಜದ ಮುಂದಾಳು ಎನಿಸಿಕೊಳ್ಳುತ್ತಾರೆ. ಅಭಿವೃದ್ಧಿಯ ಹೆಸರಿನಲ್ಲಿ ಊರಿಗೆ ದೊಡ್ಡ ಯೋಜನೆಯೊಂದು ರಂಗಪ್ರವೇಶ ಮಾಡುತ್ತದೆ. ಜನರ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಈ ಯೋಜನೆಗೆ ಜನರ ಪ್ರತಿರೋಧ ವ್ಯಕ್ತವಾಗುತ್ತದೆ. ಇಂತಹ ಸಮಯದಲ್ಲಿ ದೊಡ್ಡ ಯೋಜನೆಯನ್ನು ಕಾರ್ಯಗತ ಮಾಡಲು ಬಂದ ಬಂಡವಾಳಶಾಹಿಗಳಿಗೆ ಸಮಾಜ ಸೇವೆಯ ಮುಖವಾಡ ತೊಟ್ಟ ಗೋಮುಖ ವ್ಯಾಘ್ರಗಳ ಪರಿಚಯವಾಗುತ್ತದೆ. ಜನರ ಹೋರಾಟವನ್ನು ದುರ್ಬಲಗೊಳಿಸಲು ಅಪವಿತ್ರ ಮೈತ್ರಿ ಏರ್ಪಡುತ್ತದೆ. ಬಂಡವಾಳ ಶಾಹಿಗಳು ನೀಡುವ ಕಂತೆ ಕಂತೆ ನೋಟುಗಳಿಂದ ಗೋಮುಖವ್ಯಾಘ್ರ ಸಂತಸಗೊಂಡು ಜನರ ಹೋರಾಟವನ್ನು ಹತ್ತಿಕ್ಕಲು ವಿಧವಿಧವಾದ ತಂತ್ರಗಾರಿಕೆ ಮಾಡುತ್ತಾನೆ. ಕೊನೆಗೆ ಇಂತವರ ಬಣ್ಣ ಬಯಲಾಗುತ್ತದೆ. ಆದರೂ ಅವರ ಕುತಂತ್ರಗಾರಿಕೆ ನಿಲ್ಲುವುದಿಲ್ಲ.ಸೂಕ್ತ ಅವಕಾಶಕ್ಕಾಗಿ ಕತ್ತಿ ಮಸೆಯುತ್ತಲೇ ಇರುತ್ತಾರೆ.
ಇಂತಹ ಗೋಮುಖ ವ್ಯಾಘ್ರಗಳ ನಿಜ ಬಣ್ಣದ ಅರಿವಿಲ್ಲದೇ ಕೆಲವೊಮ್ಮೆ ಅನೀರಿಕ್ಷಿತವಾಗಿ ದೊಡ್ಡ ವೇದಿಕೆಯೊಂದು ಸಿಕ್ಕರೆ ಮುಗಿಯಿತು. ತನ್ನನ್ನು ಪ್ರಚಾರ ಲೋಲುಪ್ತಿಯ ಮೋಹಕ್ಕೆ ಒಪ್ಪಿಸಿಕೊಳ್ಳುವ ಈ ನಯವಂಚಕರು ಬಾಯಿಚಪಲದಿಂದ ಸಮಾಜದ ಜನರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಹರಿಯಬಿಡುತ್ತಾರೆ. ವಿವಾದವನ್ನು ಸೃಷ್ಟಿಸುತ್ತಾರೆ.
ಜನರ ಅಥವಾ ಸಮಾಜದ ಹೆಸರು ಬಳಸಿಕೊಂಡು ಪ್ರಚಾರ ಪಡೆಯುವ ಇಂತಹ ಪೃವ್ರತ್ತಿ ಒಂದು ರೀತಿಯ ಮಾನಸಿಕ ಕಾಯಿಲೆ. ಬಹು ಮಾಧ್ಯಮಗಳು ವಿಜೃಂಬಿಸುತ್ತಿರುವ ಈ ಕಾಲದಲ್ಲಿ ಈ ಧೂರ್ತರು ಅವಕಾಶ ಸಿಕ್ಕಾಗಲೆಲ್ಲಾ ತಮ್ಮನ್ನು ಮಾಧ್ಯಮಗಳೆದುರು ಒಡ್ಡಿಕೊಳ್ಳಲು ಕಾತರರಾಗಿರುತ್ತಾರೆ.
ಸುಸಂಸ್ಕೃತವಾದ ತುಂಬಿದ ಸಭೆಯಲ್ಲಿ ತನ್ನನ್ನು ನರಕವಿ ಎಂದು ಪರಿಚಯಿಸಿಕೊಳ್ಳುತ್ತಲೇ ಇಂಥವರು ಹೆಂಡ ಕುಡಿದ ಕಪಿಯಂತೆ ವರ್ತಿಸುತ್ತಾರೆ.
ತಮ್ಮ ಜನಪ್ರಿಯತೆಗೆ ಸಮಾಜವನ್ನು ಲೇವಡಿ ಮಾಡುವ ಇಂಥ ಧೂರ್ತ ಪ್ರಚಾರ ಲೋಲುಪರನ್ನು ಕುರಿತ ಒಂದು ಶ್ಲೋಕ ಇಂದಿಗೂ ಪ್ರಸ್ತುತ. ಅದು ಹೀಗಿದೆ ಘಟಂ ಭಿಂದ್ಯಾತ್, ಪಟಂ ಛಿಂದ್ಯಾತ್, ಕುರ್ಯಾತ್ ರಾಸಭರೋಹಣಮ್ ಯೇನ ಕೇನ ಪ್ರಕರೇಣ, ಪ್ರಸಿದ್ಧ ಪುರುಷೋ ಭವೇತ್ ಇದರರ್ಥ ಮಡಕೆಯನ್ನು ಒಡೆದೋ, ತಡಿಕೆ ಹರಿದೋ ,ಕತ್ತೆಯನ್ನೇರಿಯೋ, ಹೇಗಾದರೂ ಸರಿ, ಪ್ರಸಿದ್ಧನಾಗು.
ಪ್ರಸ್ತುತ ಸಮಾಜ ಸೇವೆಯ ಸೋಗಿನಲ್ಲಿ ಸಜ್ಜನಿಕೆಯ ಮುಖವಾಡಗಳನ್ನು ಧರಿಸಿ ಬಣ್ಣ ಬಣ್ಣದ ಮಾತುಗಳನ್ನಾಡುತ್ತಾ ಜನರನ್ನು ವಂಚಿಸುವ ಧೂರ್ತರನ್ನು, ಕಪಟಿಗಳನ್ನು,ಗೋಮುಖ ವ್ಯಾಘ್ರಗಳನ್ನು ಕಂಡುಹಿಡಿಯಲು ದೂರ ಹೋಗಬೇಕಾಗಿಲ್ಲ. ನಮ್ಮ ಸುತ್ತ ಮುತ್ತ ಇಂಥವರು ಬಹಳ ಅಪ್ಯಾಯಮಾನವಾಗಿ ವಿಜೃಂಭಿಸುತ್ತಾರೆ. ಇವರ ಬಗ್ಗೆ ಸಮಾಜದ ಜನತೆ ಸದಾಕಾಲ ಎಚ್ಚರಿಕೆಯಿಂದ ಇರಬೇಕಾಗಿರುವ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿರುವುದಂತೂ ಸುಳ್ಳಲ್ಲ.
ಉಮಾಕಾಂತ ಖಾರ್ವಿ
ಕುಂದಾಪುರ
very hard hitting article… ಇತರರ ಭಾವನೆಗಳ ಬಗ್ಗೆ ಕಿಂಚಿತ್ತೂ ವಿಚಾರ ಮಾಡದೇ ತಮ್ಮ ಮಾತೇ ಮುಖ್ಯ ಎಂಬುವವರ ಮಂಡಿಗೆ ಪೆಟ್ಟು ಕೊಟ್ಟಂತಿದೆ ಈ article