ಇಂದು ವಿಶ್ವ ಸಾಗರ ದಿನಾಚರಣೆ : ಕಡಲು ಮಾಲಿನ್ಯರಹಿತವಾಗಿರಲಿ

ಸಾಗರವು ಸಮೃದ್ಧ ಸಂಪತ್ತಿನಾಗರ ಎಣೆಯಿರದ ಜಲಜಂತು ಸಂಗ್ರಹಾಗಾರ ಕಾರ್ಮೋಡ ಮಾಲೆಯನ್ನು ಆಗಸಕ್ಕೆ ತೊಡಿಸಿ ಮುತ್ತ ಮಳೆ ಸುರಿಸುವ ಜಲಚಕ್ರಕಾಧಾರ ಕವಿ ಲೇಖಕರ ಇ .ಡಿ. ನರಹರಿಯವರ ಕವನದ ಈ ಸಾಲುಗಳು ಅದೆಷ್ಟು ಅರ್ಥಪೂರ್ಣ ಸಾಗರಗಳ ಅನನ್ಯತೆಯನ್ನು ಕವಿ ಬಣ್ಣಿಸಿದ ಪರಿ ಸಾರ್ವಕಾಲಿಕ ಸತ್ಯ. ಜೂನ್ 8 ವಿಶ್ವಸಾಗರ ದಿನಾಚರಣೆ ಮನುಷ್ಯನ ಬದುಕಿನ ಜೀವಸಂಜೀವಿನಿ ಆಗಿರುವ ಕಡಲಿಗೆ ಗೌರವ ಸಲ್ಲಿಸುವ ಪುಣ್ಯ ದಿನ. ಈ ಸಂದರ್ಭದಲ್ಲಿ ಈ ನೆನಪುಗಳ ಮೆಲುಕು ಸಂದರ್ಭೋಚಿತ.

ವಿಶ್ವ ಸಾಗರ ದಿನಾಚರಣೆಯ ಪರಿಕಲ್ಪನೆಯನ್ನು ಮೊದಲು 1992 ರಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದ ಭೂಶೃಂಗ ಸಭೆಯಲ್ಲಿ ಪ್ರಸ್ತಾಪಿಸಲಾಯಿತು ಇದರ ಮುಖ್ಯ ಉದ್ದೇಶವೆಂದರೆ ನಮ್ಮ ಬದುಕಿನ ಜೀವಸಂಜೀವಿನಿಯಾದ ಸಮುದ್ರ ಸಾಗರಗಳನ್ನು ಸುಸ್ಥಿರ ಅಭಿವೃದ್ಧಿಯ ಭಾಗವಾಗಿಸುವುದು ಮತ್ತು ಸಾಗರ ಮಾಲಿನ್ಯವನ್ನು ತಡೆಗಟ್ಟುವುದು, ಜನಜಾಗೃತಿ ಮೂಡಿಸುವುದು ಆಗಿರುತ್ತದೆ. ಅಂದಿನಿಂದ ವಿಶ್ವಸಾಗರ ದಿನಾಚರಣೆಗೆ ನಾಂದಿಯಾಯಿತು ಪ್ರತಿವರ್ಷ ಜೂನ್ 8 ರಂದು ವಿಶ್ವ ಸಾಗರ ದಿನಾಚರಣೆ ಆಚರಣೆ ಮಾಡಲಾಗುತ್ತದೆ.

ಸಾಗರಗಳು ಜಾಗತಿಕ ತಾಪಮಾನ ನಿಯಂತ್ರಣ ಮಾಡುತ್ತದೆ .ಕೋಟಿ ಕೋಟಿ ಜನರು ತಮ್ಮ ಹೊಟ್ಟೆಪಾಡಿಗಾಗಿ ಸಮುದ್ರಗಳನ್ನೇ ಅವಲಂಬಿಸಿದ್ದಾರೆ .ಮೀನುಗಾರಿಕೆ, ತೈಲ ಮತ್ತು ಪ್ರವಾಸೋದ್ಯಮ ಮತ್ತು ಇತರ ಆರ್ಥಿಕ ಸಂಪನ್ಮೂಲಗಳಿಗಾಗಿ ಅನೇಕ ದೇಶಗಳು ಸಮುದ್ರವನ್ನೇ ಅವಲಂಬಿಸಿದೆ. ವಿಶ್ವ ಸಾಗರ ದಿನಾಚರಣೆಯನ್ನು ಮೀನುಗಾರರು ಭಯ ಮತ್ತು ಆತಂಕದಿಂದ ಆಚರಿಸಬೇಕಾದ ಪ್ರತಿಕೂಲ ವಾತಾವರಣ ನಿರ್ಮಾಣವಾಗಿದ್ದು, ಹೊನ್ನಾವರ ಖಾಸಗಿ ಬಂದರು ನಿರ್ಮಾಣ ಕಾಮಗಾರಿಯ ಕಪ್ಪುದೈತರಿಂದ ಈ ವಾತಾವರಣ ದೌರ್ಜನ್ಯದ ಪರಮಾವಧಿಯನ್ನು ತಲುಪಿದೆ. ಕಾಸರಗೋಡು ಟೊಂಕ ಅತಿ ಸೂಕ್ಷ್ಮ ಕಡಲತೀರ. ಅಪರೂಪದ ಜೀವವೈವಿಧ್ಯತೆಗಳ ಅಪೂರ್ವ ತಾಣ. ಜಗತ್ತಿನಲ್ಲೇ ಅಪರೂಪವಾದ ಆಲೀವ್ ರಿಡ್ಲೇ ಪ್ರಭೇದದ ಕಡಲಾಮೆಗಳ ತವರು. ಮೀನುಗಾರರ ಪಾಲಿಗೆ ದೈವೀ ಸಮಾನವಾದ ಕಡಲಾಮೆಗಳನ್ನು ಮೀನುಗಾರರು ಬಲು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ.

ಅಭಿವೃದ್ಧಿಯ ಹೆಸರಿನಲ್ಲಿ ತಮ್ಮ ಮನೆ ಬದುಕು ಕಳೆದುಕೊಳ್ಳುತ್ತಿರುವ ಕರಾವಳಿಯ ಮೀನುಗಾರರಿಗೆ ಬರಸಿಡಿಲಿನಂತಹ ಸುದ್ದಿಯೊಂದು ಆಘಾತ ಉಂಟು ಮಾಡಿದ್ದು,ಕರ್ನಾಟಕ ಕರಾವಳಿಯಲ್ಲಿರುವ 93 ಕಡಲತೀರಗಳ ಪೈಕಿ ಏಳು ಕಡಲತೀರಗಳಲ್ಲಿ ಮಾತ್ರ ಮೀನುಗಾರಿಕಾ ಚಟುವಟಿಕೆ ನಡೆಸುತ್ತಾರೆ ಎಂದು ಕರ್ನಾಟಕದ ಪ್ರವಾಸೋದ್ಯಮ ಇಲಾಖೆಯು CRZ ಪ್ರಸ್ತಾಪನೆ ಸಲ್ಲಿಸಿದೆ. ಅವರ ಪ್ರಕಾರ ಕರಾವಳಿಯ 86 ಕಡಲತೀರಗಳಲ್ಲಿ ಮೀನುಗಾರರೇ ಇಲ್ಲ. ಮೀನುಗಾರಿಕೆ ಚಟುವಟಿಕೆಯೂ ಇಲ್ಲ.ಎಂತಹ ಕುಚೋದ್ಯದ ವರದಿ ನೋಡಿ.ಇದು ಮೀನುಗಾರಿಕೆಯನ್ನು ಬಲಿಕೊಟ್ಟು ಕರಾವಳಿಯಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ಬಿಸಿನೆಸ್ ಮಾಡುವ ದುಷ್ಟ ಹುನ್ನಾರ. ಇಂತಹ ವರದಿಗಳನ್ನು ಕಾಲಕಾಲಕ್ಕೆ ಸರ್ಕಾರಗಳು ತಮ್ಮ ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುವ ಪರಿಪಾಠ ನಡೆದುಕೊಂಡು ಬಂದಿದೆ.

ಇದು ಸಮಸ್ತ ಕರಾವಳಿಯ ಜನರಿಗೆ ಎಚ್ಚರಿಕೆಯ ಕರೆಗಂಟೆ. ಭೂಮಿಯಲ್ಲಿ ಮನುಷ್ಯರು ಮತ್ತು ಜೀವಜಂತುಗಳು ಕಾಣಿಸಿಕೊಳ್ಳುವ ಮೊದಲು ಸಾಗರಗಳಲ್ಲಿ ಮೀನುಗಳು ಕಾಣಿಸಿಕೊಂಡವು. ಮನುಷ್ಯ ಬೇಸಾಯ ಮಾಡುವುದಕ್ಕಿಂತ ಮೊದಲು ಕಲಿತ ವಿದ್ಯೆ ಅಂದರೆ ಮೀನುಗಾರಿಕೆ. ಮನುಷ್ಯನಿಗೆ ಅಗಾಧ ಮತ್ಸ್ಯಸಂಪತ್ತು, ತೈಲ ಮತ್ತು ಖನಿಜ ಸಂಪತ್ತುಗಳ ನಿಧಿಯನ್ನು ಕೊಡುವುದು ಕೂಡಾ ಸಮುದ್ರವೇ. ದೈವೀಶಕ್ತಿ ಪ್ರತಿರೂಪವಾದ ಕಡಲು ಮನುಷ್ಯನ ಬದುಕಿನ ಜೀವ ಸಂಜೀವಿನಿ. ಇಂದಿಗೂ ನಮಗೆ ಮಳೆ ನೀಡುವುದು ಸಮುದ್ರಗಳೇ ಎಂಬುದು ಉಲ್ಲೇಖನೀಯ ಸಂಗತಿ. ಸಕಲಜೀವರಾಶಿಗಳನ್ನು ಪೊರೆಯುವ ಸಾಗರಗಳ ಬಗ್ಗೆ ತಿಳಿದುಕೊಂಡಷ್ಟೂ ಕಡಿಮೆಯೇ ಆಗುತ್ತದೆ.ವಿಶ್ವ ಸಾಗರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಸಮಸ್ತ ಮೀನುಗಾರ ಬಂಧುಗಳಿಗೆ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಉಮಾಕಾಂತ ಖಾರ್ವಿ
ಕುಂದಾಪುರ

One thought on “ಇಂದು ವಿಶ್ವ ಸಾಗರ ದಿನಾಚರಣೆ : ಕಡಲು ಮಾಲಿನ್ಯರಹಿತವಾಗಿರಲಿ

  1. ಕರಾವಳಿಯಲ್ಲಿರುವ 93 ಕಡಲತೀರಗಳ ಪೈಕಿ ಏಳು ಕಡಲತೀರಗಳಲ್ಲಿ ಮಾತ್ರ ಮೀನುಗಾರಿಕಾ ಚಟುವಟಿಕೆ ನಡೆಸುತ್ತಾರೆ ಎಂದು ಕರ್ನಾಟಕದ ಪ್ರವಾಸೋದ್ಯಮ ಇಲಾಖೆಯು CRZ ಪ್ರಸ್ತಾಪನೆ ಸಲ್ಲಿಸಿದೆ. ಅವರ ಪ್ರಕಾರ ಕರಾವಳಿಯ 86 ಕಡಲತೀರಗಳಲ್ಲಿ ಮೀನುಗಾರರೇ ಇಲ್ಲ. ಮೀನುಗಾರಿಕೆ ಚಟುವಟಿಕೆಯೂ ಇಲ್ಲ –

    ಇದು ನಿಜವಾಗಿಯೂ ಸಾಗರದ ಮಕ್ಕಳಿಗೆ ಅಪಾಯಕಾರಿ ಮತ್ತು ವಿಷಾದನೀಯ ಪರಿಸ್ಥಿತಿಯಾಗಿದೆ. ನನ್ನ ಪ್ರಕಾರ ಪ್ರಾಥಮಿಕವಾಗಿ ಇದು ಎರಡು ಕಾರಣಗಳಿಂದ ಸಂಭವಿಸುತ್ತದೆ … ಸ್ಥಳೀಯ ನಾಯಕತ್ವವು ದುರ್ಬಲವಾದಾಗ ಅಥವಾ ಸ್ಥಳೀಯರಲ್ಲಿ ಏಕತೆ ಇಲ್ಲದಿದ್ದಾಗ. ಎಲ್ಲರು ಕೈಜೋಡಿಸಿ ಅವರ ಬೇಡಿಕೆಗಳನ್ನು ಮಂಡಿಸುವ ಸಮಯ ಬಂದಿದೆ… ಒಂದೋ ಸ್ಥಳೀಯರು ಅಂದರೆ ಮೀನುಗಾರರಿಗೆ ಸರ್ಕಾರದ “so-called” ಅಭಿವೃದ್ಧಿ ಪ್ರವಾಸೋದ್ಯಮದ ಯೋಜನೆಗಳಲ್ಲಿ ಸಮಂಜಸವಾದ ಅವಕಾಶಗಳು ಮತ್ತು ಅನುದಾನಗಳು ಸಿಗಬೇಕು. ಇಲ್ಲದಿದ್ದರೆ ಇಂತಹ ಎಲ್ಲ ವಿವೇಚನಾರಹಿತ ಹೆಸರಿಗೆ ಅಭಿವೃದ್ಧಿ ಎಂದು ಕರೆಯಲು ಪಡೆವ ಚಟುವಟಿಕೆಗಳನ್ನು ನಿಲ್ಲಿಸಿ. ಮೀನುಗಾರರು ಅವಲಂಬಿತವಾಗಿರುವ ಉದ್ಯೋಗದಲ್ಲಿ .. ಅಂದರೆ ಮೀನುಗಾರಿಕೆಯಲ್ಲಿ ಕೆಲಸ ಮುಂದುವರಿಸುವುದೇ ಲೇಸು.

Leave a Reply

Your email address will not be published. Required fields are marked *