ಮೀನುಗಾರ ತನ್ನ ಜೀವದ ಹಂಗು ತೊರೆದು ಮೀನುಗಾರಿಕೆ ಮಾಡಲು ಕಡಲಿಗಿಳಿಯುತ್ತಾನೆ. ಮೀನು ಸಿಕ್ಕರೆ ಆ ದಿನದ ತುತ್ತಿನ ಚೀಲ ತುಂಬುತ್ತದೆ; ಸಿಗದಿದ್ದರೆ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆಯೇ ಗತಿ. ಒಮ್ಮೊಮ್ಮೆ ಮೀನು ಸಿಕ್ಕರೂ, ಪ್ರಯೋಜನವಿಲ್ಲದ ಪರಿಸ್ಥಿತಿ ಉಂಟಾಗುತ್ತದೆ. ಅದಕ್ಕೆ ಪ್ರಮುಖ ಕಾರಣವೆಂದರೆ ಮೀನಿನ ದರ. ಮೀನಿನ ದರ ನಿರ್ಧಾರದಿಂದಲೇ ಮೀನುಗಾರರ ಬದುಕು ನಿರ್ಧಾರವಾಗುತ್ತದೆ. ಹೌದು, ಮೀನುಗಾರಿಕೆಯ ಲಾಭ ನಷ್ಟಗಳೆಲ್ಲವೂ ನಿರ್ಧಾರವಾಗುವುದು ಮೀನಿನ ದರ ನಿರ್ಧಾರದಿಂದ. ವಸ್ತುವಿನ ಪೂರೈಕೆ ಹೆಚ್ಚಾದಂತೆ ಬೇಡಿಕೆ ಕಡಿಮೆಯಾಗುತ್ತದೆ. ಬೇಡಿಕೆ ಕಡಿಮೆಯಾದಂತೆ ದರವೂ ಕಡಿಮೆಯಾಗುತ್ತದೆ. ಪೂರೈಕೆ ಕಡಿಮೆಯಾದಂತೆ ಬೇಡಿಕೆ ಹೆಚ್ಚಾಗುತ್ತದೆ; ಬೇಡಿಕೆ ಹೆಚ್ಚಾದಂತೆ ಬೆಲೆಯೂ ಹೆಚ್ಚಾಗುತ್ತದೆ. ಅರ್ಥಶಾಸ್ತ್ರದ ಈ ನಿಯಮ ಮೀನು ಮಾರುಕಟ್ಟೆಯಲ್ಲೂ ನೂರು ಪ್ರತಿಶತ ಅನ್ವಯವಾಗುತ್ತದೆ. ಮೀನು ಹೇರಳವಾಗಿ ಸಿಗುವ ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ಮೀನಿಗೆ ಕಡಿಮೆ ದರ ಇರುತ್ತದೆ. ಮಳೆಗಾಲದಲ್ಲಿ ಮೀನುಗಳು ಮೊಟ್ಟೆಯಿಡುವ ಕಾಲವಾದ್ದರಿಂದ ಮೀನುಗಾರಿಕೆಗೆ ನಿಷೇಧ ಇರುತ್ತದೆ. ಗಾಳಿ ಮತ್ತು ಮಳೆಯ ರಭಸಕ್ಕೆ ಸಮುದ್ರದಲ್ಲಿ ದೊಡ್ಡ ದೊಡ್ಡ ತೆರೆಗಳು ಬರುವ ಕಾರಣ, ಸಮುದ್ರಕ್ಕೆ ಹೋಗಿ ಮೀನುಗಾರಿಕೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಜೂನ್, ಜುಲೈ ತಿಂಗಳಲ್ಲಿ ಮೀನಿಗೆ ಚಿನ್ನದ ದರವಿರುತ್ತದೆ. ನಮ್ಮ ಸಮುದ್ರ ಪಡುದಿಕ್ಕಿನಲ್ಲಿದ್ದರೆ, ತಮಿಳುನಾಡು, ಆಂಧ್ರಪ್ರದೇಶದ ಕಡಲತೀರ ಮೂಡಣದಿಕ್ಕಿನಲ್ಲಿದೆ. ನಮ್ಮಲ್ಲಿ ಆಳೆತ್ತರದ ತೆರೆಗಳು ಬರುವ ಸಮಯದಲ್ಲಿ ಅಲ್ಲಿ ಸಮುದ್ರ ಶಾಂತವಾಗಿರುತ್ತದೆ. ಆದ್ದರಿಂದ ಮದ್ರಾಸಿನ ಮೀನು ಅಂತ ನಮ್ಮ ಕರಾವಳಿಯಲ್ಲಿ ಮೀನುಗಳ ಪೂರೈಕೆಯಾಗುತ್ತದೆ. ಅಲ್ಲಿ ಕಡಿಮೆ ದರಕ್ಕೆ ಸಿಗುವ ಮೀನು, ನಮ್ಮ ಕರಾವಳಿಯಲ್ಲಿ ಅತೀ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ.
ಮೀನು ಹಿಡಿಯುವ ಬಲೆಯ ಆಧಾರದಲ್ಲೂ ಮೀನಿನ ದರ ನಿರ್ಧಾರವಾಗುವುದೆಂದು ನಿಮಗೆ ಗೊತ್ತೇ? ಹೌದು ಸಮುದ್ರದಲ್ಲಿ ಮೀನುಗಾರಿಕೆಗೆಂದು ಹತ್ತಾರು ರೀತಿಯ ಬಲೆಯನ್ನು ಬಳಸುತ್ತಾರೆ. ಪಟ್ಟ ಬಲೆ, ಕಂತು ಬಲೆ ಮುಂತಾದ ಬಲೆಗಳ ಕಣ್ಣುಗಳಿಗೆ ಅರ್ಧ ದೇಹ ತೂರಿ, ಮೀನು ಸಿಕ್ಕಿ ಹಾಕಿಕೊಳ್ಳುತ್ತದೆ. ಈ ಮೀನನ್ನು ಬಿಡಿಸುವಾಗ ಪ್ರತಿಯೊಂದು ಮೀನಿನ ದೇಹವನ್ನು ಮುಟ್ಟಲೇಬೇಕು. ಹೀಗೆ ಮುಟ್ಟುವಾಗ ಮತ್ತು ಬಿಡಿಸುವಾಗ ಅದು ಸ್ವಲ್ಪವಾದರೂ ಗಿವುಚಿದಂತೆ ಅಥವಾ ಹಿಸುಕಿದಂತೆ ಆಗಬಹುದು. ಮತ್ತೊಂದು ಪರ್ಶಿನ್ ಬೋಟ್ ಮತ್ತು ಮಾಟು ಬಲೆಯ ಮೀನು. ಈ ಬೋಟುಗಳಲ್ಲಿ ಬಳಸುವ ಬಲೆಯು ಸಮುದ್ರದಲ್ಲಿ ಒಂದು ಚೀಲದಂತೆ ಇರುವುದರಿಂದ ಮೀನು ಬಲೆಗೆ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಚೀಲದಲ್ಲಿ ಎತ್ತಿ ದೋಣಿಯೊಳಗೆ ಹಾಕಿಕೊಂಡಂತೆ ಆಗುತ್ತದೆ. ಮೀನಿಗೆ ಯಾವುದೇ ರೀತಿಯ ಪೆಟ್ಟು ಬೀಳುವುದಿಲ್ಲ. ಈ ಕಾರಣದಿಂದ ಪಟ್ಟಬಲೆ ಮತ್ತು ಕಂತು ಬಲೆಯ ಮೀನಿಗಿಂತ, ಮಾಟುಬಲೆ ಮತ್ತು ಪರ್ಶಿನ್ ಬೋಟಿನ ಮೀನಿಗೆ ದರ ಹೆಚ್ಚು.
ಮೀನು ಹಿಡಿದ ಸಮಯವೂ ಮೀನಿನ ದರ ನಿರ್ಧಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೀನನ್ನು ಏಲಂ ಮಾಡುವ ಮೀನಿನ ಮಾರುಕಟ್ಟೆಯಲ್ಲಿ ಬೆಳಿಗ್ಗೆ ಏಳು ಗಂಟೆಯಿಂದ ಹನ್ನೊಂದು ಗಂಟೆಯವರೆಗೆ ಉತ್ತಮ ಬೇಡಿಕೆಯಿರುತ್ತದೆ. ಈ ನಾಲ್ಕು ಗಂಟೆಗಳ ಕಿರು ಅವಧಿಯಲ್ಲಿ, ಒಂದು ಸಾವಿರಕ್ಕೆ ಮಾರಾಟವಾಗುವ ಮೀನು ಅದರ ಎರಡು ಪಟ್ಟು ದರಕ್ಕೆ ಮಾರಾಟವಾಗಬಹುದು. ಹೊಟೇಲ್‌ಗಳಿಗೆ, ಮನೆಗಳಿಗೆ, ಊಟದ ಕಾರ್ಯಕ್ರಮಗಳಿಗೆ ಬೇಕಾದ ಮೀನುಗಳು ಮಧ್ಯಾಹ್ನ ಸೂರ್ಯ ನೆತ್ತಿಗೇರುವುದರೊಳಗಾಗಿ ಬೇಕಾಗುತ್ತದೆ. ಆದ್ದರಿಂದ ಈ ಸಮಯ ಕಳೆದ ನಂತರ, ಮೀನಿನ ದರ ಕಡಿಮೆಯಾಗುತ್ತಾ ಸಾಗುತ್ತದೆ. ಸಂಜೆಯ ಸಮಯದಲ್ಲೂ ಸಹ ತಕ್ಕಮಟ್ಟಿಗೆ ಬೆಲೆ ಸಿಗುತ್ತದೆ. ಸಂಜೆ ಕಳೆದು ಕತ್ತಲಾವರಿಸುವಾಗ ಮೀನು ಮಾರುಕಟ್ಟೆಗೆ ಬಂದರೆ ಏನೂ ಪ್ರಯೋಜನವಿಲ್ಲ. ಆಗ ಕೊಳ್ಳುವವರ ಸಂಖ್ಯೆ ಕಡಿಮೆಯಿರುವ ಕಾರಣ ಅರ್ಧ ದರಕ್ಕೆ ಕೊಳ್ಳುವವರೂ ಸಿಗದೆ ಹೀಗಬಹುದು. ಇಂತಹ ಸನ್ನಿವೇಶ ತಿಳಿದು ಕೊಂಡೇ ಮೀನುಗಾರ ರಾತ್ರಿ ಸಮಯದಲ್ಲಿ ಹಿಡಿದ ಮೀನಿಗೆ ಐಸ್ ಹಾಕಿಟ್ಟು, ಬೆಳಗಿನ ಮಾರುಕಟ್ಟೆಗೆ ಹಾಕುತ್ತಾನೆ. ಆದರೆ ಐಸ್ ಹಾಕಿದ ಮೀನಿಗೆ, ಐಸ್ ಹಾಕದ ಮೀನಿಗಿಂತ ಹೆಚ್ಚು ಹಣ ಯಾವತ್ತೂ ಸಿಗುವುದಿಲ್ಲ.
ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಬೋಟುಗಳು ಒಮ್ಮೆ ಸಮುದ್ರಕ್ಕಿಳಿದರೆ ಮತ್ತೆ ಬರುವುದು ಹದಿಮೂರು ದಿನಗಳ ನಂತರ. ಅಷ್ಟು ದಿನಗಳ ಕಾಲ ಸಿಕ್ಕ ಮೀನನ್ನು ಸಂರಕ್ಷಿಸಿ ಇಡಬೇಕಾಗುತ್ತದೆ. ಐಸ್ ಕಡಿಮೆಯಾಗಿಯೋ, ಸಂಗ್ರಹಿಸಿಡುವಲ್ಲಿ ವ್ಯತ್ಯಾಸವಾಗಿಯೋ, ಡಿಸೇಲ್, ಸೀಮೆ ಎಣ್ಣೆಯು ಅದರ ಮೇಲೆ ಚೆಲ್ಲಿ ಮೀನು ಹಾಳಾದರೆ, ವಾಸನೆ ಬರುತ್ತಿದ್ದರೆ ಅಂತಹ ಮೀನು ಮಾರುಕಟ್ಟೆಯಲ್ಲಿ ತಿರಸ್ಕೃತಗೊಳ್ಳುತ್ತದೆ. ಅದನ್ನು ಹಿಡಿಯಲು ವ್ಯಯಿಸಿದ ಸಮಯ, ಶಕ್ತಿ ಎರಡೂ ವ್ಯರ್ಥವಾಗಿ ಹೋಗುತ್ತದೆ. ಆದ್ದರಿಂದ ಮೀನು ಹಿಡಿಯುವಾಗ ಎಷ್ಟು ಶ್ರದ್ಧೆ ಮತ್ತು ಬುದ್ಧಿವಂತಿಕೆಯಿಂದ ಹಿಡಿಯುತ್ತಾರೋ ಅದರ ಎರಡು ಪಟ್ಟು ಹೆಚ್ಚು ಶ್ರದ್ಧೆ ಮತ್ತು ಬುದ್ಧಿವಂತಿಕೆ ಅದನ್ನು ಸಂರಕ್ಷಿಸುವಾಗ ಇರಬೇಕು.
ಇನ್ನು ಕೆಲವು ಮೀನುಗಳಿಗೆ ಮಾರುಕಟ್ಟೆಯಲ್ಲಿ ಕೊಳ್ಳುವವರ ಸಂಖ್ಯೆಯನ್ನು ಆಧರಿಸಿ ದರ ನಿರ್ಧಾರವಾಗುತ್ತದೆ. ಮಲ್ಪೆ, ಮಂಗಳೂರಿನಂತಹ ದೊಡ್ಡ ಮಾರುಕಟ್ಟೆಯಲ್ಲಿ ಕೊಳ್ಳುವವರ ಸಂಖ್ಯೆಯೂ ಹೆಚ್ಚು; ಬೇಡಿಕೆಯೂ ಹೆಚ್ಚು. ಗಂಗೊಳ್ಳಿ, ಹೊನ್ನಾವರ, ಭಟ್ಕಳ, ಕೊಡೇರಿ, ಮರವಂತೆಯಂತಹ ಬಂದರುಗಳಲ್ಲಿ ಸೇರುವ ಜನರು ಕಡಿಮೆಯಿರುವ ಕಾರಣ ಬೇಡಿಕೆಯೂ ಕಡಿಮೆ; ದರವೂ ಅಷ್ಟಕಷ್ಟೆ. ಈಗಂತೂ ಮೊಬೈಲ್ ಎಲ್ಲರಲ್ಲೂ ಇದೆ. ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರಗಳ ಯಾವುದೇ ಮಾರುಕಟ್ಟೆಯಿರಲಿ, ಅಲ್ಲಿಯ ದರವನ್ನು ಮೊಬೈಲ್‌ನಲ್ಲಿಯೇ ತಿಳಿದುಕೊಂಡು, ದರ ಹೆಚ್ಚಿರುವ ಮಾರುಕಟ್ಟೆಗೆ ರಾತ್ರಿ ಬೆಳಗಾಗುವುದರೊಳಗಾಗಿ ಲಾರಿಗಟ್ಟಲೆ ಮೀನು ಸಾಗಿಸುತ್ತಾರೆ. ಒಮ್ಮೊಮ್ಮೆ ದರ ಹೆಚ್ಚಿರುವ ಮಾರುಕಟ್ಟೆಗಳಿಗೆ ಹೀಗೆ ಅತಿಯಾಗಿ ಪೂರೈಕೆಯಾಗಿ, ಕಳಿಸಿಕೊಟ್ಟವರ ಲೆಕ್ಕಾಚಾರ ತಲೆಕೆಳಗಾಗಿ, ಒಳ್ಳೆಯ ದರ ಸಿಗದೇ ಹೋಗಬಹುದು.
ಕೆಲವು ಬಾರಿ ಮುಷ್ಕರ, ಬಂದ್‌ಗಳು ಮೀನಿನ ಧಾರಣೆಯಲ್ಲಿ ಬಲವಾದ ಪ್ರಭಾವ ಬೀರುತ್ತದೆ. ಮುಷ್ಕರ ಇರುವ ದಿನ, ಹಿಂದಿನ ದಿನದ ದರಕ್ಕಿಂತ ಪಾತಾಳಕ್ಕೆ ಇಳಿಯಬಹುದು. ಹಿಂದೊಮ್ಮೆ ಕರಾವಳಿಯಲ್ಲಿ ಐಸ್ ಪ್ಲಾಂಟ್‌ಗಳು ಮುಷ್ಕರ ಹೂಡಿದ ಸಮಯದಲ್ಲೇ, ಗಂಗೊಳ್ಳಿ, ಕಂಚುಗೋಡು, ಮಡಿ, ಉಪ್ಪುಂದ, ಮರವಂತೆಯ ದೋಣಿಗಳಿಗೆ ವಿಪರೀತ ಸಿಗಡಿ ಸಿಕ್ಕಿತ್ತು. ಕೆ.ಜಿ.ಗೆ ಐನೂರು ರೂಪಾಯಿ ಸಿಗಬೇಕಿದ್ದ ಆ ದಿನಗಳಲ್ಲಿ, ಐಸ್ ಅಭಾವದಿಂದ ಕೆ.ಜಿ.ಗೆ ಹತ್ತು ರೂಪಾಯಿಗಳಲ್ಲಿ ಬಿಕರಿಯಾಯಿತು. ಕೆಲವು ಮಂದಿ ಬುದ್ಧಿವಂತರು ಬೇರೆ ಬೇರೆ ಕಡೆ ಸಂಪರ್ಕಿಸಿ ಐಸ್ ತರಿಸಿ ತೊಂಬತ್ತೆಂಟು ಪ್ರತಿಶತ ಲಾಭ ಹೊಡೆದರು. ಒಂದೇ ದಿನದಲ್ಲಿ ಒಬ್ಬೊಬ್ಬರು ಲಕ್ಷಗಟ್ಟಲೆ ಲಾಭ ಹೊಡೆದರು. ಸಂದರ್ಭದ ಲಾಭ ಪಡೆಯುವುದೆಂದರೆ ಇದೇ ಅಲ್ಲವೆ..!!
ಹೀಗೆ ಬೇರೆ ಬೇರೆ ಕಾರಣಗಳಿಂದ ಮೀನಿನ ದರ ಹೆಚ್ಚು ಕಡಿಮೆಯಾಗುತ್ತಿರುತ್ತದೆ. ಅದಕ್ಕಿಂತಲೂ ಬೇಸರದ ಸಂಗತಿಯೆಂದರೆ ಮೀನು ಹಿಡಿಯುವವನಿಗಿಂತ, ಕೊಂಡು ಮಾರಾಟ ಮಾಡುವವನು ಹೆಚ್ಚು ಹಣ ಗಳಿಸುತ್ತಾರೆ. ಬೇರೆ ಬೇರೆ ಕಾರಣವೊಡ್ಡಿ, ಮೀನುಗಾರರ ಅಸಹಾಯಕ ಸ್ಥಿತಿಯನ್ನು ಬಳಕೆ ಮಾಡಿಕೊಂಡು ಮಧ್ಯವರ್ತಿಗಳು ದಿನೇ ದಿನೇ ಕುಬೇರರಾಗುತ್ತಿದ್ದಾರೆ. ಬಿಸಿಲು, ಗಾಳಿ, ಚಳಿ, ಮಳೆಯೆನ್ನದೆ ಹಗಲಿರುಳು ಸಮುದ್ರದ ಅಲೆಗಳ ನಡುವೆ ಸೆಣೆಸಾಡಿ ಮೀನು ತಂದ ವೀರರಿಗೆ ಯಾವತ್ತೂ ಅರೆಹೊಟ್ಟೆಯೇ ಗತಿ.
ನಾಗರಾಜ ಖಾರ್ವಿ ಕಂಚುಗೋಡು