ಮಂಗಳೂರು ಎಂದ ಕೂಡಲೇ ನಮಗೆ ವಿಶಾಲವಾದ ಕಡಲು, ಬಗೆಬಗೆಯ ಮೀನು, ವಿಶಿಷ್ಟವಾದ ಕಂಬಳ, ಗಂಡುಕಲೆ ಯಕ್ಷಗಾನ, ಕೋಲ, ಹುಲಿಕುಣಿತದಂತಹ ವಿಶೇಷತೆಗಳು ನೆನಪಿಗೆ ಬರುತ್ತವೆ. ಆದರೆ ಈಗೀಗ ಮಂಗಳೂರು ಎಂದಾಗ ಮುಳುಗುವ ಹಡಗುಗಳ, ದೋಣಿಗಳ ಚಿತ್ರಣಗಳು ಕಣ್ಣ ಮುಂದೆ ಬರುತ್ತವೆ. ರಸ್ತೆಯಲ್ಲಿ ಒಂದು ವಾಹನ ಚಲಿಸುವಾಗ ಕೆಟ್ಟು ನಿಂತರೆ ಅದನ್ನು ಯಾವುದೇ ಸಮಯದಲ್ಲಿ ವಿಲೇವಾರಿ ಮಾಡಬಹುದು. ತಿಂಗಳು ಕಳೆದು ವಿಲೇವಾರಿ ಮಾಡೋಣವೆಂದು ಬಿಟ್ಟರೂ ಅಷ್ಟೊಂದು ಸಮಸ್ಯೆಯಾಗದು. ಆದರೆ ಸಮುದ್ರದಲ್ಲಿ ಕೆಟ್ಟು ನಿಂತ ನೌಕೆಯನ್ನು ನಿರ್ಲಕ್ಷಿಸಲಾಗದು. ಕೆಟ್ಟು ನಿಂತದ್ದು, ಮುಳುಗಲಾರಂಭಿಸಿದಾಗ ತತ್‌ಕ್ಷಣವೇ ಕಾರ್ಯಪ್ರವೃತ್ತರಾಗಬೇಕು. ಒಮ್ಮೆ ಸಂಪೂರ್ಣ ಮುಳುಗಿ ತಳ ಸೇರಿದರೆ ಅದರಿಂದಾಗುವ ಅಪಾಯವನ್ನು ಊಹಿಸಲೂ ಸಾಧ್ಯವಿಲ್ಲ. ಮಂಗಳೂರು ಇತ್ತೀಚಿಗೆ ಮುಳುಗುವ ಹಡಗುಗಳಿಂದಾಗಿ ಕುಖ್ಯಾತಿ ಪಡೆಯುತ್ತಿದೆ. ಈ ವಾರ ಮಂಗಳೂರಿನ ಉಳ್ಳಾಲ ಸಮೀಪದ ಬಟ್ಟಪ್ಪಾಡಿ ಕಡಲ ತೀರದಲ್ಲಿ ಸಿರಿಯಾ ದೇಶದ ಪ್ರಿನ್ಸೆಸ್ ಮಿರಲ್ ವ್ಯಾಪಾರಿ ಹಡಗು ಮುಳುಗಡೆಯಾಯಿತು. ಅದು ಚೀನಾದಿಂದ ಲೆಬನಾನ್‌ಗೆ 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸುತ್ತಿತ್ತು. ಹಡಗು ಮುಳುಗಲು ಎರಡು ದಿನಗಳಷ್ಟು ಸಮಯ ತೆಗೆದುಕೊಂಡ ಕಾರಣ, ಅದರಲ್ಲಿದ್ದ 15ಮಂದಿ ಸಿಬ್ಬಂದಿಗಳನ್ನು ಇಂಡಿಯನ್ ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿತ್ತು. ಆದರೆ ಈಗ ಸೃಷ್ಟಿಯಾಗಿರುವ ದೊಡ್ಡ ಸಮಸ್ಯೆಯೆಂದರೆ ತೈಲ ಸೋರಿಕೆ. ಈ ಹಡಗಿನಲ್ಲಿ 220 ಮೆಟ್ರಿಕ್ ಟನ್‌ನಷ್ಟು ತೈಲ ಇರುವ ಕಾರಣ, ಒಂದು ವೇಳೆ ಸೋರಿಕೆ ಪ್ರಾರಂಭವಾದರೆ ಏನು ಮಾಡುವುದೆಂದು ಜಿಲ್ಲಾಡಳಿತಕ್ಕೆ ತೋಚದಾಗಿದೆ. ಇಂದು ಜಲಮಾಲಿನ್ಯಕ್ಕೆ ಅತಿ ದೊಡ್ಡ ಕಂಟಕವನ್ನು ಉಂಟುಮಾಡುತ್ತಿರುವ ಮಾಲಿನ್ಯವೆಂದರೆ ತೈಲ ಸೋರಿಕೆ. ಚಲಿಸುವ ಹಡಗುಗಳಿಂದ ಸಣ್ಣ ಪ್ರಮಾಣದಲ್ಲಿ ಹೊರ ಚೆಲ್ಲುವ ತೈಲದಿಂದ ಸಣ್ಣ ಪ್ರಮಾಣದಲ್ಲಿ ಜಲಮಾಲಿನ್ಯವಾದರೆ, ಸಾವಿರ ಸಾವಿರ ಕಿ.ಮೀ. ದೂರ ಸಾಗಲು ಬೇಕಾಗುವಷ್ಟು ಇಂಧನ ಸಂಗ್ರಹಿಸಿಟ್ಟುಕೊಳ್ಳುವ ಹಡಗುಗಳು ಮುಳುಗಿದಾಗ ಇನ್ನೊಂದು ರೀತಿಯ ಸಮಸ್ಯೆ ತಲೆದೋರುತ್ತದೆ. ತೈಲವನ್ನೇ ಸಾಗಿಸುವ ಹಡಗು ಮುಳುಗಿದರೆ ಮುಗಿದೇ ಹೋಯಿತು. ಮನುಷ್ಯನ ಜೀವನ ಸುಗಮವಾಗಲೆಂದು ನೆಳದಾಳದಿಂದ ಹೊರತೆಗೆಯುವ ಕಚ್ಚಾ ತೈಲವೇ ಇಂದು ಭೂಮಿಯ ಮೇಲೆ ಮನುಷ್ಯನ ಬದುಕಿಗೆ ಸವಾಲೊಡ್ಡುತ್ತಿರುವುದು ವಿಪರ್ಯಾಸ.
ಭಾರತಕ್ಕೆ ಬರುವ ಆವಶ್ಯಕತೆಯೇ ಇಲ್ಲದ ಹಡಗೊಂದು ಮಂಗಳೂರಿನ ಕಡಲ ತೀರಕ್ಕೆ ಬಂದು ಮುಳುಗಿದ್ದು, ನಮ್ಮ ಕರಾವಳಿಗರ ದೌರ್ಭಾಗ್ಯವೆಂದೇ ಹೇಳಬಹುದು. ಬಿರುಸುಗೊಂಡಿರುವ ಕಡಲಿನ ಅಬ್ಬರದ ಅಲೆಗಳ ಸೆಳೆತಕ್ಕೆ ಮಂಗಳೂರು ಕಡಲ ತೀರಕ್ಕೆ ಬಂದಿರಬಹುದೆಂದು ಊಹಿಸಬಹುದಷ್ಟೆ. ಸಾಮಾನ್ಯವಾಗಿ ಕರಾವಳಿಯ ಮೀನುಗಾರರು ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಹಲವಾರು ವರ್ಷಗಳಿಂದ ಕೈರಂಪಣಿ ಎಳೆಯುತ್ತಾ ಬಂದಿರುತ್ತಾರೆ. ತೆರೆಗಳ ಅಬ್ಬರ ಕಡಿಮೆಯಿರುವ, ಬಂಡೆಗಳು ಇಲ್ಲದ ಜಾಗ ಕೈರಂಪಣಿ ಬಲೆ ಎಳೆಯಲು ಸೂಕ್ತ ಸ್ಥಳ. ಕೈರಂಪಣಿಯಂತಹ ಸಾಂಪ್ರದಾಯಿಕ ಮೀನುಗಾರಿಕೆಯಿಂದ ಎಷ್ಟೋ ಸಂಸಾರಗಳು ಬೆಳಕು ಕಾಣುತ್ತವೆ. ಇಂತಹ ಕೆಲವು ವಿಶೇಷ ಸ್ಥಳಗಳಲ್ಲಿ ಹಡಗು ಬಂದು ಶಾಶ್ವತವಾಗಿ ನೆಲೆಯೂರಿದರೆ ಆ ಕಸುಬು ಮಾಡುವವರು ಹೊಟ್ಟೆಯ ಮೇಲೆ ತಣ್ಣೀರ ಪಟ್ಟಿ ಹಾಕಿಕೊಳ್ಳಬೇಕಷ್ಟೆ. ಮುಳುಗಿದ ನಂತರ ಹಡಗುಗಳನ್ನು ನೀರಿನಿಂದ ಹೊರ ತೆಗೆಯುತ್ತಾರೆಂಬ ಭರವಸೆಯಿಲ್ಲ. ದಿನಕಳೆದಂತೆ ಹಡಗಿನ ಭಾರಕ್ಕೆ ಮಣ್ಣಿನಲ್ಲಿ ಹೂತು ಹೋಗತೊಡಗುತ್ತದೆ. ವರ್ಷಗಟ್ಟಲೆ ಬಿದ್ದ ಜಾಗದಲ್ಲೇ ಇದ್ದರೆ ಅದರ ಅವಶೇಷ ಹೊರತೆಗೆಯುವುದು ಹರಸಾಹಸವೇ. ಮಂಗಳೂರಿನ ತಣ್ಣೀರುಬಾವಿ ಎರಡನೆಯ ಬೀಚ್‌ನಲ್ಲಿ 29 ವರ್ಷಗಳ ಹಿಂದೆ ಮುಳುಗಿರುವ ಸಿಂಗಾಪುರ ಮೂಲದ ಓಷಿಯನ್ ಬ್ಲೆಸಿಂಗ್ ಎಂಬ ಹಡಗಿಗೆ ಇದುವರೆಗೆ ಮುಕ್ತಿ ನೀಡಲು ಆಗದಿರುವುದು ನಮ್ಮ ವ್ಯವಸ್ಥೆಯ ದೊಡ್ಡ ವೈಫಲ್ಯ. ಮಂಗಳೂರಿನ ಕಡಲ ಈಜು ತಂಡದ ಸದಸ್ಯರಾದ ನಾವು, ಇದೇ ನೌಕೆಯ ಸಮೀಪ ಈಜಲು ತೆರಳುತ್ತೇವೆ. ಸರಿಯಾಗಿ ಗೋಚರಿಸದ ಅದರ ಚೂಪಾದ ಮತ್ತು ತುಕ್ಕು ಹಿಡಿದ ಸರಳುಗಳು ದೇಹಕ್ಕೆ ತಾಗಿದರೆ ಎಷ್ಟು ಸಮಸ್ಯೆಯಾಗಬಹುದೆಂದು ಊಹಿಸಿ. ಆ ಸ್ಥಳದ ಪರಿಚಯಯಿಲ್ಲದವರು ಅದರ ಸಮೀಪ ಹೋಗುವುದು ಅಪಾಯಕಾರಿ. ಮೂರ್ನಾಲ್ಕು ತಿಂಗಳುಗಳ ಹಿಂದೆ ಈ ಹಡಗನ್ನು ನೀರಿನಿಂದ ಹೊರತೆಗೆಯಬೇಕೆಂದು ಎರಡು ನೌಕೆಗಳು ತಿಂಗಳುಗಟ್ಟಲೆ ಪ್ರಯತ್ನಿಸಿದವು. ಅವುಗಳಿಂದ ಒಂದಿಷ್ಟು ಥರ್ಮಕೋಲುಗಳು ಸಮುದ್ರದಂಡೆಗೆ ಬಂದು ಕಸದ ರಾಶಿಯಾಯಿತೇ ವಿನಃ ಹಡಗಿನ ಅವಶೇಷ ತೆಗೆಯಲು ಸಾಧ್ಯವಾಗಲೇ ಇಲ್ಲ. ಕಳೆದ ಮೂರು ದಶಕಗಳಿಂದ ಮೀನುಗಾರರು ಈ ಹಡಗಿನ ಅವಶೇಷದಿಂದ ಎಷ್ಟು ಸಮಸ್ಯೆ ಎದುರಿಸಿರಬಹುದು, ಅಲ್ಲವೇ?
ಯಾವುದೇ ಹಡಗು ಮುಳುಗಿದ ಒಂದು ತಿಂಗಳವರೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ತೈಲ ಸೋರಿಕೆಯ ಕುರಿತು ಬೊಬ್ಬೆ ಕೇಳಿಸುತ್ತದೆ. ಆ ಬಳಿಕ ಆ ಕೂಗು ಮೆಲ್ಲನೆ ಕಡಿಮೆಯಾಗಿ ಅದರ ನೆನಪು ಮಾಸಿ ಹೋಗುತ್ತದೆ. ಸಂಜೆ ಸೂರ್ಯಾಸ್ತ ನೋಡಲು ಬರುವ ಪ್ರವಾಸಿಗರಿಗೆ ಫೋಟೋ ತೆಗೆಸಿಕೊಳ್ಳುವ ಆಕರ್ಷಣೀಯ ತಾಣವಾಗುತ್ತದೆ.
ಮಂಗಳೂರಿನಲ್ಲಿ ವರ್ಷಕ್ಕೆ ಒಂದೆರಡು ಹಡಗುಗಳು ಮುಳುಗುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಯಾವ ಹಡಗೂ ಸಹ ತೆಗೆಯಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಇಂತಹ ಹಡಗುಗಳ ಒಂದೊಂದೇ ಅವಶೇಷಗಳು ತೀರದತ್ತ ಬಂದು ಬೀಳುತ್ತವೆ. ತುಕ್ಕು ಹಿಡಿದ ಇದರ ಬಿಡಿಭಾಗಗಳು ಯಾವತ್ತೂ ಅಪಾಯಕಾರಿ. ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಹಡಗು ಮುಳುಗಿದರೆ ಅದರ ಗೋಜಿಗೆ ಯಾರೂ ಹೋಗುವುದಿಲ್ಲ. ತೈಲ ಸೋರಿಕೆಯನ್ನು ತಪ್ಪಿಸಿದರೆ ಅರ್ಧ ಗೆದ್ದಂತೆ. ಆದರೆ ದಡದಲ್ಲಿ ಮುಳುಗುವ ಹಡಗುಗಳಿಂದ ಹತ್ತಾರು ಸಮಸ್ಯೆಗಳಿವೆ. ಉಳ್ಳಾಲದಿಂದ ಪಡುಬಿದ್ರೆಯವರೆಗೆ ಹಡಗುಗಳ ಕಳೇಬರಗಳು ಮುಕ್ತಿಗಾಗಿ ಕಾಯುತ್ತಿವೆ. ಹಡಗಿನ ಮಾಲಕತ್ವ ಹೊಂದಿದವರಿಗೆ ಅದು ದೊಡ್ಡ ಖರ್ಚಿನ ಹೊರೆಯೆಂದು ಮೆಲ್ಲಮೆಲ್ಲನೆ ಜಾರಿಕೊಳ್ಳುತ್ತಾರೆ. ಲಾಭ ಇರುವವರೆಗೆ ಹಡಗಿನ ಉಪಯೋಗ ಪಡೆದು, ಮುಳುಗಿದಾಗ ಅದನ್ನು ಹೊರತೆಗೆಯಲು ಹಿಂದೇಟು ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸ್ಥಳೀಯರ ಪ್ರಶ್ನೆ. ಇಂತಹ ಹಡಗುಗಳಿಗೆ ಬಲೆ ಸಿಲುಕಿ ನಷ್ಟ ಅನುಭವಿಸಿದವರು ಈ ಪ್ರಶ್ನೆ ಕೇಳುವುದರಲ್ಲಿ ಅರ್ಥವಿದೆ. ಮುಳುಗಿದ ಆರಂಭದಲ್ಲಿ ಇಂತಹ ಹಡಗುಗಳ ಹತ್ತಿರ ದೋಣಿ ಕೊಂಡೊಯ್ಯಲು ಹೆದರುವ ಮೀನುಗಾರರು ಕ್ರಮೇಣ ಅಂತಹ ಜಾಗದ ಅಪಾಯದ ಕುರಿತು ಪೂರ್ಣವಾಗಿ ಅರಿಯುತ್ತಾರೆ.
ಮುಳುಗುವ ಹಡಗುಗಳ ಸಂಖ್ಯೆ ಹೀಗೆ ಹೆಚ್ಚುತ್ತಾ ಹೋಗಿ, ಅದನ್ನು ಹೊರತೆಗೆಯುತ್ತೇವೆಂದು ಕೇವಲ ಭರವಸೆ ನೀಡುತ್ತಾ ಹೋದರೆ ಮುಂದೊಂದು ದಿನ ಮಂಗಳೂರಿನ ಕರಾವಳಿ ಮುಳುಗಿದ ಹಡಗುಗಳ ಅಪಾಯಕಾರಿ ತಾಣವಾಗಬಹುದು. ಕಳೆದ ವರ್ಷ ಎರಡು ಟಗ್ ಮುಳುಗಿದ್ದು ಇತಿಹಾಸ; ಈ ಮಳೆಗಾಲದ ಆರಂಭದಲ್ಲೇ ಒಂದು ಹಡಗು ಮುಳುಗಿದ್ದು ಎಚ್ಚರಿಕೆಯ ಗಂಟೆ. ಹಡಗೊಂದು ಮುಳುಗಿದ ಕೂಡಲೇ ತೆರವಿಗೆ ಪ್ರಯತ್ನ ಪಟ್ಟರೆ ಮಾತ್ರ ಹೊರ ತೆಗೆಯಲು ಸಾಧ್ಯ. ಸಾವಿರ ಕಾರಣ ಹೇಳಿ ಅಲ್ಲೇ ಬಿಟ್ಟರೆ ಮುಂದೆಂದೂ ಹೊರತೆಗೆಯಲಾಗದೆ ಸಮಸ್ಯೆಯ ಕೂಪವಾಗುತ್ತದೆ. ದಿನ ಕಳೆದಂತೆ ಮುಳುಗಿದ ಹಡಗು ಸಮುದ್ರದ ಕೆಸರಿನಲ್ಲಿ ಹೂತು ಹೋಗಲಾರಂಭಿಸುತ್ತವೆ. ನೆಲದೊಳಗೆ ಹೂತು ಹೋದ ನಂತರ ಜಪ್ಪಯ್ಯ ಎಂದರೂ ಹೊರ ಬರಲಾರದು. ಸಮುದ್ರವೆಂದರೆ ತ್ಯಾಜ್ಯವನ್ನು ಸಂಗ್ರಹಿಸುವ ಕೇಂದ್ರವಲ್ಲ. ಎಷ್ಟೋ ದೇಶದ ಜನರು, ತಮ್ಮ ದೇಶದಲ್ಲಿ ಸಮುದ್ರ ಇಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ನಮ್ಮ ದೇಶದ ಮೂರು ಕಡೆಗಳಲ್ಲಿ ಸಮುದ್ರದ ನೀರಿದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಕಾಪಿಟ್ಟುಕೊಳ್ಳುವುದು ನಮ್ಮ ಗುರುತರವಾದ ಜವಾಬ್ದಾರಿ ಎಂಬುವುದನ್ನು ಇನ್ನಾದರೂ ಅರಿಯಬೇಕು.
ನಾಗರಾಜ ಖಾರ್ವಿ ಕಂಚುಗೋಡು
ಪರಿಸರ ಮತ್ತು ಜನರಿಗೆ ತುಂಬಾ ಕಳವಳಕಾರಿ ವಿಷಯದ ಬಗ್ಗೆ ಚೆನ್ನಾಗಿ ಬರೆದ ಒಳ್ಳೆ ಲೇಖನ. ಹಡಗಿನ ಮಾಲೀಕರು ವಿಮಾ ಹಣವನ್ನು ಪಡೆಯಲು ಉದ್ದೇಶಪೂರ್ವಕವಾಗಿ ಮಂಗಳೂರಿನ ಕರಾವಳಿಗೆ ತಂದು ಅದನ್ನು ಹಳೆಯ ಹಡಗುಗಳ ಅನಧಿಕೃತ ಜಲ ಸಮಾಧಿ ವಲಯವನ್ನಾಗಿ ಮಾಡಿದ್ದಾರೆ. ಬಹುಶಃ ಅಲ್ಲಿನ ದುರ್ಬಲ ವ್ಯವಸ್ಥೆ ಮತ್ತು ಭ್ರಷ್ಟ ಅಧಿಕಾರಿಗಳು ಅವರಿಗೆ ಹಾಗೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.