ಕುಂದಾಪುರ, ಉಡುಪಿ ಮತ್ತು ಮಂಗಳೂರು ಪ್ರಾಂತ್ಯದ ಗುರುವಂದನ ಹೊಸ ಸಮಿತಿ ಸದಸ್ಯರು

ಶ್ರೀ ಶೃಂಗೇರಿ ಶಾರದಾಪೀಠದ ಕುಂದಾಪುರ, ಉಡುಪಿ ಮತ್ತು ಮಂಗಳೂರು ಪ್ರಾಂತ್ಯದ ಸಮಸ್ತ ಕೊಂಕಣಿ ಖಾರ್ವಿ ಸಮಾಜ ಬಾಂಧವರಿಗೆ ಶ್ರೀ ಗುರುಸ್ಮರಣೆಗಳು..

ಬಹಳ ಹಿಂದಿನಿಂದಲೂ ಶೃಂಗೇರಿ ಗುರುಪೀಠಕ್ಕೂ ನಮ್ಮ ಸಮಾಜಕ್ಕೆ ಅವಿನಾಭಾವ ಸಂಬಂಧವಿದ್ದು ನಮ್ಮ ಪೂರ್ವಜರು ಊರ ಪಟೇಲರು, ನಾಯಕರು ಶ್ರೀ ಪೀಠಕ್ಕೆ ಹೋಗಿ ಶೃಂಗೇರಿ ಶಾರದಮ್ಮನ ದರ್ಶನಮಾಡಿ ಗುರುಗಳಿಗೆ ಪಾದಪೂಜೆ,. ಭಿಕ್ಷಾವಂದನೆ ಹಾಗೂ ಗುರುಕಾಣಿಕೆ ಸಲ್ಲಿಸಿ ಗುರುಗಳ ಆಶೀರ್ವಾದವನ್ನು ಪಡೆದು ಬರುವುದು ವಾಡಿಕೆಯಾಗಿರುತ್ತದೆ. ಇತ್ತೀಚಿಗೆ ಅಂದರೆ ಸುಮಾರು 2೦೦೦ ಇಸವಿಯಿಂದ ಉತ್ತರ ಕನ್ನಡದ ನಮ್ಮ ಸಮುದಾಯದವರು ಗುರುದರ್ಶನ ಸಮಿತಿ ಉತ್ತರ ಕನ್ನಡ ಸಮಿತಿ ರಚನೆಮಾಡಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಗುರುಭವನದಲ್ಲಿ ಗುರುಗಳು ಚಾತುರ್ಮಾಸ್ಯ ವೃತಾಚರಣೆಯ ಶುಭ ಸಂದರ್ಭದಲ್ಲಿ ಮಠದ ಆಡಳತ ಕಛೇರಿಯಿಂದ ಸೂಚಿಸಿದ ದಿನದಂದು ಗುರುದರ್ಶನಮಾಡಿ ಗುರುಗಳಿಂದ ಅನುಗ್ರಹ ಭಾಷಣವನ್ನು ಆಲಿಸಿ ಅವರ ಆಶೀರ್ವಚನದಿಂದ ಪುನೀತರಾಗಿ ಪುಳಕಿತರಾಗುತ್ತಿದ್ದರು. ನಂತರ 2೦೦4 ಇಸವಿ ಯಲ್ಲಿ ನಡೆದ ಅಖಿಲ ಕರ್ನಾಟಕ ಕೊಂಕಣಿ ಖಾರ್ವಿ ಸಮಾಜದ “ಚಿಂತನ-ಮಂಥನ” ಸಭೆಯಲ್ಲಿ ಸಮಾಜದ ಗಣ್ಯಾತಿಗಣ್ಯರ ಹಿರಿಯವರ ಹಾಗೂ ಯುವ ಮುಂದಾಳುಗಳ ಸಮ್ಮುಖದಲ್ಲಿ ನಾವು ಕುಂದಾಪುರ ಉಡುಪಿ ಮಂಗಳೂರು ಭಾಗದ ಸಮುದಾಯದವರು ಸ್ವಾಮಿ ದರ್ಶನವನ್ನು ಸಾಮೂಹಿಕವಾಗಿ ಮಾಡಬೇಕು ಎನ್ನುವ ಉದ್ದೇಶದಿಂದ ಶ್ರೀಯುತ ಕುಂದಾಪುರ ನಾರಾಯಣ ಖಾರ್ವಿಯವರ ಮುಂದಾಳತ್ವದಲ್ಲಿ ಸಮಿತಿ ರಚನೆಯಾಯ್ತು ಮತ್ತು ಅದಕ್ಕೆ ಗುರುವಂದನ ಸಮಿತಿ ಉಡುಪಿ ಮತ್ತು ದಕ್ಷಿಣ ಕನ್ನಡ ಎನ್ನುವ ನಾಮಕರಣವಾಯ್ತು. ಹಾಗೆಯೇ ಜಿಲ್ಲೆಯ ಎಲ್ಲಾ ಹಿರಿಯರು, ಪಟೇಲರು, ನಾಯಕರು, ಸಂಘ-ಸಂಸ್ಥೆಗಳು, ದೇವಸ್ಥಾನದ ಕಮಿಟಿಯವರು, ಮೊಕ್ತೇಸರರು, ಹತ್ತು ಸಮಸ್ತರ ಮುಖಂಡರನ್ನು ಸಂಪರ್ಕಮಾಡಿ ಎಲ್ಲಾ ಭಾಗದಲ್ಲಿಯೂ ಸಭೆಮಾಡಿ ಸಂಘಟನೆಗೆ ಹೆಚ್ಚಿನ ಶಕ್ತಿ ಮತ್ತು ಪುಷ್ಠಿ ನೀಡುವಲ್ಲಿ ಹಿಂದಿನ ಕಮಿಟಿಯವರು ಯಶಸ್ವೀಯಾಗಿರುತ್ತಾರೆ.

ಕಳೆದ ನಾಲ್ಕುವರುಷದ ಹಿಂದೆ ನಮ್ಮ ನಿಕಟಪೂರ್ವ ಅಧ್ಯಕ್ಷರಾದ ಕುಂದಾಪುರ ನಾರಾಯಣ ಖಾರ್ವಿಯವರು ಕಮಿಟಿ ಬದಲಾವಣೆಯಾಗಬೇಕು ಒಂದೇ ಕಮಿಟಿಯವರು ಕಾರ್ಯವಹಿಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಮನಗೊಂಡು ಮಾತೃ ಸಂಸ್ಥೆಯಾದ ಕೆ.ಕೆ.ಎಮ್.ಎಸ್.ಗೆ ತಮ್ಮ ರಾಜನಾಮೆ ಪತ್ರವನ್ನು ಕೊಟ್ಟರು. ಮುಂದೆ ಕಮಿಟಿಯ ಕಾರ್ಯಚಟುವಟಿಕೆ ಇಲ್ಲದ್ದಿದ್ದರು ಚಾತುರ್ಮಾಸ್ಯದಲ್ಲಿ ಗುರುಗಳ ದರ್ಶನ ಮಾಡಿಕೊಂಡು ಬರುವುದು ನಿರಂತರವಾಗಿತ್ತು. ಇತ್ತೀಚಿನ ದಿನಗಳಲ್ಲಿ ಗುರುದರ್ಶನಮಾಡುವಲ್ಲಿ ಜನರ ಒತ್ತಡದಿಂದ ಅನಾನುಕೂಲವಾಗುತ್ತಿರುವುದು, ನೂಕುನುಗ್ಗಲಿನಿಂದ ಶಿಸ್ತುಪಾಲಿಸುವಲ್ಲಿ ತೊಡಕಾಗಿರುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಬೇಸರದ ಸಂಗತಿ. ಧರ್ಮನಿಷ್ಠೆ ಹಾಗೂ ಗುರುಗಳ ಆಶೀರ್ವಾದ, ಮಾರ್ಗದರ್ಶನವನ್ನು ಜೀವನದಲ್ಲಿ ಪಾಲಿಸಿಕೊಂಡು ಒಂದು ಸುಸಂಸ್ಕೃತ ಸಮಾಜವನ್ನು ನಿರ್ಮಾಣ ಮಾಡಲೋಸುಗ ಹುಟ್ಟಿಕೊಂಡ ಈ ಗುರುವಂದನ ಸಮಿತಿ ಗುರುಗಳ ದರ್ಶನಕ್ಕೆ ಮುಂದೆ ಎಲ್ಲಿಯೂ ಚ್ಯುತಿಬರಬಾರದು ಎನ್ನುವ ಉದ್ದೇಶದಿಂದ ಸಮಾಜದ ಚಿಂತಕರು ಚಿಂತನೆ ಮಾಡಿರುವುದನ್ನು ಅರಿತು, ಈ ನಮ್ಮ ಗುರುವಂದನ ಸಮಿತಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಪನರೂರ್ಜಿತಗೊಳಿಸುವುದೆಂದು ಹಿರಿಯರು ಸೇರಿರುವ ಸಭೆಯಲ್ಲಿ ಒಪ್ಪಿದ ಪ್ರಕಾರ ದಿನಾಂಕ: 5 ಜುಲೈ 2೦22 ಮಂಗಳವಾರ ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ಅಮ್ಮನ ಸಾನಿಧ್ಯದಲ್ಲಿ ಸಭೆಯನ್ನು ಆಯೋಜಿಸಿತು. ಎಲ್ಲಾ ಭಾಗದಲ್ಲಿಯೂ ಸಕಾರಾತ್ಮಕವಾದ ಅಭಿಪ್ರಾಯ ಮತ್ತು ಮನ್ನಣೆ ಸಿಕ್ಕಿತು, ಗುರುವಂದನೆಗೆ ನಮಗೆ ದಿನಾಂಕ ನಿಗದಿಯಾದ ಮಾಹಿತಿ ನಮಗೆ ಸ್ವಲ್ಪ ತಡವಾಗಿ ಸಿಕ್ಕಿರುವುದರಿಂದ ಎಲ್ಲಾ ಮುಖಂಡರನ್ನು ಸಂಪರ್ಕಿಸಲು ಕಷ್ಟಸಾಧ್ಯವಾಗಿರುವುದರಿಂದ ಕ್ಷಮೆಯನ್ನು ಯಾಚಿಸುತ್ತೇವೆ.

ಶ್ರೀ ಬೆಂಗ್ರೆ ಮಾಧವ ಖಾರ್ವಿ, ಅಧ್ಯಕ್ಷರು

ನಮ್ಮ ಪ್ರಾಮಾಣಿಕ ಪ್ರಯತ್ನಮಾಡಿ ಸೋಸಿಯಲ್ ಮೀಡಿಯ ಮತ್ತು ಮೊಬೈಲ್ ಬಳಸಿ ಸಾಧ್ಯವಾದಷ್ಟು ಜನರಿಗೆ ಸಭೆ ಮಾಡುವ ವಿಚಾರ ತಲುಪಿಸಲು ನಾವು ಯಶಸ್ವೀಯಾಗಿದ್ದೇವೆ. ಶ್ರೀ ತಾಯಿಯ ಪ್ರೇರಣೆ ಗುರುಗಳ ಆಶೀರ್ವಾದದಿಂದ ನಿರೀಕ್ಷೆಗೂ ಮೀರಿ ಸಮಾಜ ಬಾಂಧವರು ಸಭೆಗೆ ಹಾಜರಾತಿಯಾಗಬೇಕಿತ್ತು ಆದರೆ ಮಂಗಳವಾರ ಸುರಿದ ಜಡಿ ಮಳೆಯ ಕಾರಣದಿಂದ ಸಭೆಯಲ್ಲಿ ಸಂಖ್ಯೆ ಕೇವಲ 2೦ರ ಹಾಜರಾತಿಹೊಂದಿತು. ಸಭೆಯನ್ನು ನಿಕಟಪೂರ್ವ ಕಾರ್ಯದರ್ಶಿ ಶ್ರೀ ಸುರೇಶ್ ಖಾರ್ವಿ ಕೋಡಿ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ಶ್ರೀ ಮಹಾಕಾಳಿ ದೇವಸ್ಥಾನ ಕುಂದಾಪುರ ಇದರ ಅಧ್ಯಕ್ಷರಾದ ಶ್ರೀ ಜಯಾನಂದ ಖಾರ್ವಿಯವರು ಸಮಸ್ತ ಕೋಕಣಿ ಖಾರ್ವಿ ಸಮಾಜ ಕುಂದಾಪುರ ಮದ್ದುಗುಡ್ಡೆ ಪ್ರತಿನಿಧಿಯಾಗಿ ವೇದಿಕೆಯಲ್ಲಿ ಆಸೀನರಾದರು ಮತ್ತು ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜ ಇದರ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಕೆ. ಬಿ. ಖಾರ್ವಿಯವರು ನಮ್ಮ ಗೌರವವನ್ನು ಸ್ವೀಕಾರಮಾಡಿ ವೇದಿಕೆಯಲ್ಲಿ ಆಸೀನರಾದರು. ಸಮಸ್ತ ಕೊಂಕಣಿ ಖಾರ್ವಿ ಸಮಾಜ ಉಡುಪಿ ದ.ಕ ಜಿಲ್ಲೆಯ ಪಟೇಲರ ಪ್ರತಿನಿಧಿಯಾಗಿ ಗಣಪತಿ ಪಟೇಲರ ಉಪಸ್ಥಿತಿ ಸಭೆಗೆ ಪಾರಂಪರಿಕ ಸ್ಪರ್ಶವನ್ನು ನೀಡಿತು. ಶ್ರೀಯುತ ಕುಂದಾಪುರ ನಾರಾಯಣ ಖಾರ್ವಿಯವರು ಪ್ರಾಸ್ತಾವಿಕ ಮಾತನ್ನು ಆಡಿ ಸಮಿತಿಗೆ ಅವರ ಪ್ರಾಮಾಣಿಕ ಸೇವೆಯನ್ನು ವಿವರಿಸಿ ಮುಂದೆ ಉಸ್ತುವಾರಿ ಯುವ ಪೀಳಿಗೆಗೆ ನೀಡಬೇಕು. ಯುವ ಜನಾಂಗ ಆಧ್ಯಾತ್ಮ ವಿಚಾರದಲ್ಲಿ ಮುಂದೆ ಬಂದು ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕು, ಅವರಿಗೂ ಈ ಅವಕಾಶ ಅವರಿಗೆ ಲಭಿಸಬೇಕು ಎಂದು ಮನಗೊಂಡರು. ಹತ್ತು ಸಮಸ್ತರು ಸೇರಿದಲ್ಲಿ ದೇವರಿದ್ದಾನೆ ನಂಬಿಕೆ ನಮ್ಮದು ಅದೇ ರೀತಿ ಗುರುವಂದನ ಸಮಿತಿಯ ಅಧ್ಯಕ್ಷ ಗಾದಿ ಸಮಾಜದ ಹಿತ ಚಿಂತಕ, ಯುವಕರಂತೆ ಸದಾ ಲವಲವಿಕೆಯಲ್ಲಿದ್ದು ಸಮಾಜದ ಹೆಚ್ಚಿನ ಕಾರ್ಯಕ್ರಮಗಳಿಗೆ ಸಂಚಾರ ಮಾಡುವ, ಮಾರ್ಗದರ್ಶನ ಮಾಡುವ, ಎಲ್ಲರಿಗೂ ಗೌರವವನ್ನು ಕೊಟ್ಟು ಇಂದಿನ ತನಕ ಗೌರವವನ್ನು ಸದಾ ಉಳಿಸಿಕೊಂಡಿರುವ ಇತ್ತಿಚೆಗೆ ಕರ್ನಾಟಕ ಕೊಂಕಣಿ ಅಕಾಡೆಮಿಯ ಲೋಕ್‌ವೇದ್ ರಾಜ್ಯ ಪ್ರಶಸ್ತಿಗೆ ಭಾಜನರಾದ ಶ್ರೀ ಬೆಂಗ್ರೆ ಮಾಧವ ಖಾರ್ವಿಯನ್ನು ಸಭೆಯಲ್ಲಿ ಸೂಚಿಸಿ ಅನುಮೋದಿಸಲಾಯಿತು. ಅವರ ಅಧ್ಯಕ್ಷತೆಯಲ್ಲಿ ಶ್ರೀ ನಾಗಪ್ಪಯ್ಯ ಪಟೇಲ್ ಮತ್ತು ಮಂಗಳೂರು ಶ್ರೀ ಭೋಜ ಖಾರ್ವಿ ಉಪಾಧ್ಯಕ್ಷರಾಗಿ ಆಯ್ಕೆಯಾದರು, ಶ್ರೀ ಸುರೇಶ್ ಖಾರ್ವಿ ಕೋಡಿ ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ ಶ್ರೀ ರಾಮಚಂದ್ರ ಖಾರ್ವಿ ಕೋಡಿ ಕನ್ಯಾಣ, ಉಪಕಾರ್ಯದರ್ಶಿಯಾಗಿ ಶ್ರೀ ಅರುಣ್ ಖಾರ್ವಿ ಕುಂದಾಪುರ, ಆಯ್ಕೆಗೊಂಡರು. ಸದಸ್ಯರಾಗಿ ಶ್ರೀ ದಿನಕರ ಖಾರ್ವಿ ಕುಂದಾಪುರ, ಶ್ರೀ ಮೋಹನ ಖಾರ್ವಿ ಕಂಚುಗೋಡು, ಶ್ರೀ ಬಸವ ಪಟೇಲ್ ಬಸ್ರೂರು, ಶ್ರೀ ನಾರಾಯಣ ಖಾರ್ವಿ ಕುಂದಾಪುರ ಕೋಡಿ, ಶ್ರೀ ಮಾಧವ ಖಾರ್ವಿ ಮಲ್ಪೆ ಪಡುಕರೆ, ಶ್ರೀ ರಾಮದಾಸ ಪಟೇಲ್ ಸಾಸ್ತಾನ ಕೋಡಿ, ಅನಿಲ್ ಖಾರ್ವಿ ಮಂಗಳೂರು ಬೆಂಗ್ರೆ ,ಪ್ರಕಾಶ್ ಪಟೇಲ್ ಕೋಡಿ ಬೆಂಗ್ರೆ ಇವರು ಸದಸ್ಯರಾಗಿ ಆಯ್ಕೆಗೊಂಡರು. ಸಭೆಯಲ್ಲಿ ಶ್ರೀ ಮಹಾಕಾಳಿ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷರಾದ ಆರ್. ಪ್ರಕಾಶ್ ಖಾರ್ವಿ ಮತ್ತು ೬ ಪಟೇಲರ ಪೈಕಿ 5ಜನ ಪಟೇಲರ ಉಪಸ್ಥಿತಿ ಮತ್ತು ಕೋಡಿ ಕನ್ಯಾಣ ಕೊಂಕಣಿ ಖಾರ್ವಿ ಸಮಾಜದ ದೇವಸ್ಥಾನದ ಸಮಿತಿಯ ಸದಸ್ಯರು ಮತ್ತು ಮಂಗಳೂರು ಬೆಂಗ್ರೆಯ ಖಾರ್ವಿ ಮಹಾಸಭಾದ ಸದಸ್ಯರ ಉಪಸ್ಥಿತಿಯಲ್ಲಿ ಒಳ್ಳೆಯ ವಿಚಾರಗಳು ಮತ್ತು ಶಿಸ್ತುಪಾಲನೆ ಮಾಡುವಲ್ಲಿ ಯಾವ ರೀತಿ ರೂಪುರೇಷೆಯನ್ನು ನಾವು ಯೋಜನೆ ಮಾಡಬೇಕೆನ್ನುವ ವಿಚಾರವನ್ನು ಚರ್ಚಿಸಲಾಯುತ್ತು.

ಶ್ರೀ ಸುರೇಶ್ ಖಾರ್ವಿ ಕೋಡಿ, ಕಾರ್ಯದರ್ಶಿ

ಶ್ರೀ ರಾಮಚಂದ್ರ ಖಾರ್ವಿ, ಕೋಡಿ ಕನ್ಯಾಣ, ಖಜಾಂಚಿ

ಸಭೆಯ ಕೊನೆಯಲ್ಲಿ ಗುರುಗಳ ಆಶೀರ್ವಾದವೋ ದೇವರ ಪ್ರೇರಣೆಯೋ ಅನ್ನುವ ರೀತಿಯಲ್ಲಿ ಶ್ರೀ ಶೃಂಗೇರಿ ಶಾರದಾ ಪೀಠದ ಕುಂದಾಪುರ ಪ್ರಾಂತ್ಯಾಧಿಕಾರಿ ವೆ|| ಮೂ|| ಬ್ರಹ್ಮಶ್ರೀ ಬಿ. ಲೋಕೇಶ ಅಡಿಗರ ಆಗಮನ ಸಭೆಗೆ ಮೆರುಗು ನೀಡಿತು ಮತ್ತು ಸಭೆಯಲ್ಲಿದ್ದವರಿಗೆ ಆಧ್ಯಾತ್ಮ ಮಿಂಚು ಸಂಚಲನವಾದಂತೆ ಭಾಸವಾಯ್ತು , ಶ್ರೀಯುತರು ನೀಡಿದ ಸಲಹೆ ಮಾರ್ಗದರ್ಶನ ಈ ಕೆಳಗಿನಂತೆ ಇತ್ತು.

1. ಗುರುವಂದನಾ ಕಾರ್ಯಕ್ರಮಕ್ಕೆ ಭಾಗಿಯಾಗುವ ಪುರುಷರು ಬಿಳಿ ಪಂಚೆ, ಬಿಳಿ ಅಂಗಿ , ಬಿಳಿ ಶಾಲು ಹಾಗೂ ಮಹಿಳೆಯರು ಸಮವಸ್ತ್ರದ ಸೀರೆಯನ್ನು ತೊಟ್ಟರೆ ಸೂಕ್ತ, ವಿಶೇಷವಾಗಿ ತರುಣಿಯರು (ಕುಂಕುಮ ಬಳೆ, ಹೂ) ಧರಿಸಿ ಚೂಡಿದಾರ ತೊಡಬೇಕೆಂದು ಸ್ವಾಮೀಜಿಯವರ ಆದೇಶವಿದೆ ಎಂದು ಸೂಚಿಸಿದರು.

2. ಆಯಾ ಊರಿನಿಂದ ಬರುವಾಗ ವಾಹನಗಳಿಗೆ ಪ್ರತ್ಯೇಕವಾಗಿ ಊರಿನ ಹೆಸರನ್ನು ನಮೂದಿಸಿದ ಗುರುದರ್ಶನದ ಬ್ಯಾನರನ್ನು ಅಳವಡಿಸಬೇಕು ಭಗವದ್ವಜವನ್ನು ಅಲಂಕರಿಸಬೇಕು.

3. ಈ ಸಾರಿ ಗುರುವಂದನೆ ದಿನಾಂಕ 16 ಜುಲೈ 2022 ಶನಿವಾರ ಮುಂದಿನ ಬಾರಿ ಸಾಧ್ಯವಾದರೆ ಆದಿತ್ಯವಾರ ಕೊಡುವ ಬಗ್ಗೆ ಪ್ರಯತ್ನಿಸುವುದಾಗಿ ಹೇಳಿದರು. ಹಾಗೂ ಹೆಚ್ಚಿನ ಸೂಕ್ತ ಸಲಹೆ ಮಾರ್ಗದರ್ಶನ ಹಾಗೂ ಆಧ್ಯಾತ್ಮಿಕ ವಿಚಾರವನ್ನು ತಿಳಿಸಿದರು ಮತ್ತು ನಮ್ಮಲ್ಲಿ ಹಂಚಿಕೊಂಡರು. ಶಿಸ್ತುಪಾಲಿಸುವಲ್ಲಿ ಮೊದಲನೇ ಹೆಚ್ಚೆಯೇ ಇದು ನಮ್ಮ ಉಡುಗೆ ತೊಡುಗೆ. ಅದರ ಜೊತೆಯಲ್ಲಿ ಶೃದ್ಧೆ ಮತ್ತು ಭಕ್ತಿಯನ್ನು ಹೊತ್ತು ನಾವು 16ನೇ ತಾರೀಕಿನಂದು ಶೃಂಗ ಗಿರಿಯಲ್ಲಿ ಭೇಟಿಯಾಗೋಣವೇ…!? ನಿಮ್ಮ ಸಂಪೂರ್ಣ ಸಹಕಾರ ಸಲಹೆಯನ್ನು ನಾವು ಅಪೆಕ್ಷೆ ಪಡುತ್ತೇವೆ. ಗುರುದರ್ಶನ ಮಾಡಿ ಅನ್ನ ಪ್ರಸಾದ ಸ್ವೀಕಾರಮಾಡಿದ ಮೇಲೆ 15 ನಿಮಿಷಗಳ ಕಾಲ ಕುಳಿತು ಆತ್ಮಾವಲೋಕನ ಮಾಡಲು ನಿಮ್ಮ ಸಹಕಾರವನ್ನು ಕೋರುತ್ತೇವೆ.


ಭವದೀಯ..,

One thought on “ಕುಂದಾಪುರ, ಉಡುಪಿ ಮತ್ತು ಮಂಗಳೂರು ಪ್ರಾಂತ್ಯದ ಗುರುವಂದನ ಹೊಸ ಸಮಿತಿ ಸದಸ್ಯರು

  1. ಗುರುವಂದನಾ ಕಮಿಟಿಯವರಿಗೆ ನನ್ನದೊಂದು ಪ್ರಶ್ನೆ…ಉ.ಕ ಮತ್ತು ಉಡುಪಿ ಕೊಂಕಣಿ ಸಮುದಾಯವನ್ನು ಎರಡು ಭಾಗ ಮಾಡಿ ಪ್ರತ್ಯೇಕ ಗುರುವಂದನಾ ಪೂಜೆಯ ದಿನಾಂಕ ನಿಗದಿಪಡಿಸಿದ್ದೀರಿ, ಕೋವಿಡ್ ನಿಯಮ ಕಾರಣಕ್ಕಾಗಿಯೇ ? ಅಥವಾ ಇನ್ನುಮುಂದೆ ಪ್ರತಿವರ್ಷ ಇದೆ ರೀತಿ ಎರಡು ಭಾಗವಾಗಿ ಪ್ರತ್ಯೇಕ ಗುಂಪು ಮಾಡಿ ಮುಂದುವರಿಸಿಕೊಂಡು ಹೋಗ್ತೀರಾ?….
    ನಮ್ಮ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯೂ ಎದುರುಬದುರಾಗಿ ನಮ್ಮವರು ಯಾರು ಎಂದು ಗುರುತಿಸಲ್ಪಡುವ ಪುಣ್ಯಕ್ಷೇತ್ರದಲ್ಲಿ ಒಗ್ಗೂಡುವ ಅವಿಸ್ಮರಣೀಯ ದಿನ. ಪರಿಚಿತರಾಗಿ ಸ್ನೇಹ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವ ಹಾಗೂ ಪುಣ್ಯಕ್ಷೇತ್ರದಲ್ಲಿ ನಾವೆಲ್ಲರೂ ಒಂದೇ ಸ್ಥಳದಲ್ಲಿ ಒಗ್ಗೂಡುವ ಸುವರ್ಣ ಅವಿಸ್ಮರಣೀಯ ದಿನ. ಈ ಒಗ್ಗೂಡಿಕೆಯಿಂದ ನಮ್ಮ ಒಗ್ಗಟ್ಟು ಗಟ್ಟಿಯಾಗುತ್ತದೆ ಏಕತೆ ಬಾಂಧವ್ಯ ವೃದ್ಧಿ ಆಗುತ್ತದೆ ಎಂಬ ನನ್ನ ಆಲೋಚನೆ ದಯವಿಟ್ಟು ಜನಜಗ್ಗುಳಿ ಅಂತ ಕಾರಣ ಬಿಟ್ಟು ನಮ್ಮ ಸಮುದಾಯದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಾದಪೂಜೆಗೆ ವ್ಯವಸ್ಥೆ ಮಾಡಿ🙏

Leave a Reply

Your email address will not be published. Required fields are marked *